e-ಸುದ್ದಿ, ಮಸ್ಕಿ
ಉಪಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು ನಾಯಕರ ಲಕ್ಷಣವಲ್ಲ. ಚುನಾವಣೆಯಲ್ಲಿ ಮತದಾರರ ಮನಸ್ಸು ಗೆದ್ದು ಮತ ಪಡೆದು ಗೆಲ್ಲಬೇಕೆ ಹೊರೆತು ಕ್ಷುಲ್ಲಕ ಕಾರಣಗಳನ್ನು ಮಾಡಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ ಹೇಳಿದರು.
ಪಟ್ಟಣದ ಹಳೇ ಬಸ್ ನಿಲ್ದಾಣದ ಹತ್ತಿರ ಇರುವ ಡಾ.ಬಾಬ ಸಾಹೇಬ ಅಂಬೇಡ್ಕರ್ ಮೂರ್ತಿಗೆ ಶುಕ್ರವಾರ ಮಾಲಾರ್ಪಣೆ ಮಾಡಿ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಬಿಜೆಪಿಯ ಮುಖಂಡರು ಅಮಾಯಕರನ್ನು ತಪ್ಪು ದಾರಿಗೆ ತಂದು ಕಾಂಗ್ರೆಸ್ ಮುಖಂಡರ ಮೇಲೆ ದೂರು ದಾಖಲಿಸುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಎಂದು ಯದ್ದಲದಿನ್ನಿ ಟೀಕಿಸಿದರು.
ಸಂವಿಧಾನ ಶಿಲ್ಪಿ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರನ್ನು ಇಡಿ ಪ್ರಪಂಚ ಗೌರವಿಸುತ್ತದೆ. ಭಾರತದ ಸಂವಿಧಾನವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ. ವಿಶೇಷವಾಗಿ ಕಾಂಗ್ರೆಸ್ ಪಕ್ಷ ಡಾ.ಬಾಬ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಿಡಿಸಿಕೊಂಡ ಪಕ್ಷವಾಗಿದ್ದು ಈ ಪಕ್ಷದ ಕಾರ್ಯಕರ್ತರಾದ ನಾವು ಅವು ಅವರಿಗೆ ಕನಸಿಲ್ಲು ಅಪಮಾನ ಮಾಡುವುದಿಲ್ಲ ಎಂದರು.
ಪೊಲೀಸರು ಕೈಗೊಂಬೆ ಆರೋಪಃ ಪೊಲೀಸ್ ಅಧಿಕಾರಿಗಳು ಆಡಳಿತ ರೂಡ ಪಕ್ಷದ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ. ಮಾಜಿ ಶಾಸಕರ ಮಾತು ಕೇಳಿಕೊಂಡು ಠಾಣೆಯಲ್ಲಿ ದೂರು ದಾಖಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ಕುರಿತು ಠಾಣೆಗೆ ದೂರು ನೀಡಿದರೆ ಸಾಮಾನ್ಯ ಕೇಸ್ ದಾಖಲಿಸುತ್ತಿಲ್ಲ. ಹೀಗಾಗಿ ಪೊಲೀಸರು ಮಾಜಿ ಶಾಸಕರ ಕೈಗೊಂಬೆಗಳಂತೆ ವರ್ತಿಸುತ್ತಿದ್ದಾರೆ ಎಂದು ಮಲ್ಲಿಕಾರ್ಜುನ ಪಾಟೀಲ ಪೊಲೀಸರ ನಡೆಯನ್ನು ಖಂಡಿಸಿದರು.
ಈಗಾಗಲೇ ನಾಗರಬೆಂಚಿ, ಹೊಕ್ರಾಣಿ, ತಿಮ್ಮಾಪೂರು ಗ್ರಾಮಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿವೆ ಎಂದು ಮಲ್ಲಿಕಾರ್ಜುನ ಯದ್ದಲದಿನ್ನಿ ಹೇಳಿದರು.
ಜಿ.ಪಂ.ಮಾಜಿ ಸದಸ್ಯ ಪಾಮಯ್ಯ ಮುರಾರಿ ಮಾತನಾಡಿ ಅಂಬೇಡ್ಕರ್ ಅವರ ಅಭಿಮಾನಿಗಳು ತಪ್ಪು ಹಾದಿ ತುಳಿಯಲು ಪ್ರೇರಿಸಪಿಸುವ ಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಬಿಜೆಪಿಯವರಿಗೆ ಅಂಬೇಡ್ಕರ್ ಮತ್ತು ಅವರ ಸಂವಿಧಾನದ ಮೇಲೆ ನಂಬಿಕೆ ಇಲ್ಲದವರು. ದಲಿತ ಬಂಧುಗಳು ಬಿಜೆಪಿಯ ಹುನ್ನಾರಿಗೆ ಬಲಯಾಗಬಾರದು ಎಂದರು.
ಜಿ.ಪಂ.ಮಾಜಿ ಸದಸ್ಯ ಎಚ್.ಬಿ.ಮುರಾರಿ, ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪೂರು, ರಾಘವೇಂದ್ರ ನಾಯಕ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.