ನುಡಿ ಬರಹ : ಗವಿಸಿದ್ದಪ್ಪ ಕೊಪ್ಪಳ
ಮಸ್ಕಿ : ಬಿಳಗಿಯ ಶಿವಾನಂದ ನಿಂಗನೂರಅವರು ಉತ್ತರ ಕರ್ನಾಟಕದ ಖಡಕ್, ಜಬರ್ದಸ್ತ ವ್ಯಕ್ತಿತ್ವ ನಿಂಗನೂರ ಅವರದು.
ದೇಶಿಯ ಉಡುಗೆ, ತೊಡುಗೆ, ಅಡುಗೆ ಪ್ರಿಯರಾದ ನಿಂಗನೂರ ಎಲ್ಲೇ ಹೋಗಲಿ ತಮ್ಮ ಜೊತೆಗೆ ಐವತ್ತು ರೊಟ್ಟಿಗಳ ಬುತ್ತಿ ಗಂಟು ಸಹಜವಾಗಿ ಅವರ ಜೊತೆಗೇ ಇರುತ್ತದೆ.ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಊರ ಮುಂದಿರುವ ಕೃಷ್ಣೆಯ ಒಡಲಲ್ಲಿ ಈಜು ಮತ್ತು ಸ್ನಾನದೊಂದಿಗೆ ದಿನಚರಿ ಪ್ರಾರಂಭ. ಕೃಷ್ಣೆಯೇ ಅವರ ಜೀವನ ಸ್ಫೂರ್ತಿ.ಅರವತ್ತು ವಸಂತಗಳನ್ನು ದಾಟಿ ಮುನ್ನಡೆದಿರುವ ನಿಂಗನೂರ ಯುವಕರು ನಾಚುವಂತೆ ಕಳೆದ ವರ್ಷ ಕೃಷ್ಣೆ ಪ್ರವಾಹದಿಂದ ಉಕ್ಕಿ ಹರಿಯುತ್ತಿದ್ದಾಗ ಆ ಪ್ರವಾಹವನ್ನು ಎದುರಿಸಿ ಈ ದಂಡೆಯಿಂದ ಆ ದಂಡೆಗೆ ಈಜಿ ಬಂದ ಸಾಹಸಿ.ಸ್ವ
ಸ್ವತಃ ಹೊಲದಲ್ಲಿ ದುಡಿಮೆ. ಇವರ ನಿತ್ಯ ಕಾಯಕ.ಭೂಮಿ ತಾಯಿಯ ಮೇಲೆ ಅಪಾರವಾದ ನಿಷ್ಠೆ. ಹೀಗಾಗಿ ಆ ಭೂಮಿ ತಾಯಿ ನಿಂಗನೂರ ಅವರನ್ನು ಕೈಬಿಟ್ಟಿಲ್ಲ.ಜವಾರಿ ಭಾಷೆಯಲ್ಲಿ ಹೇಳಬೇಕೆಂದರೆ ನಿಂಗನೂರರವರು ‘ಅಪ್ಪಟ ದೇಶೀಯ ( ತಳಿ )ವ್ಯಕ್ತಿ’. ಯಾರಿಗೂ ಅಂಜದ ಅಳುಕದ ವ್ಯಕ್ತಿತ್ವ. ತನಗೆ ಅನಿಸಿದ್ದನ್ನು ನೇರವಾಗಿ, ನಿಷ್ಠುರವಾಗಿ ಹೇಳಬಲ್ಲ ತಾಕತ್ತನ್ನು ಬೆಳೆಸಿಕೊಂಡಿದ್ದಾರೆ.
ಶಿವಾನಂದ ನಿಂಗನೂರ ಮಾತನಾಡುತ್ತಾರೆಂದರೆ ಆ ಪ್ರದೇಶವೆಲ್ಲ ಸ್ತಬ್ಧವಾಗಿ ಅವರ ಮಾತುಗಳನ್ನು ಆಲಿಸುತ್ತದೆ. ಕೆಲಸಕ್ಕೆ ಬಾರದ ಮಾತುಗಳನ್ನು ಆಡುವುದು ಅವರಿಗೆ ರೂಢಿಯಿಲ್ಲ.ನಿಂಗನೂರ ಆಡುವ ಮಾತುಗಳು ತೀಕ್ಷಣ ಏನಿಸಿದರೂ ಅವು ಹೂ ಬಾಣಗಳಂತೆ ನೆರೆದವರನ್ನು ತಾಕುತ್ತವೆ.
ಬಿಳಿ ಧೋತರ, ಬಿಳಿ ಜುಬ್ಬಾ, ತಲೆಯ ಮೇಲೊಂದು ದೊಡ್ಡ ರುಮಾಲು, ಹುರಿಗೊಳಿಸಿದ ಮೀಸೆಯಿಂದಾಗಿ ಲಕ್ಷ ಜನರಲ್ಲೂ ಶಿವಾನಂದ ನಿಂಗನೂರ ಎದ್ದು ಕಾಣುತ್ತಾರೆ.
ಬಿಳಗಿ ತಾಲೂಕಿನಲ್ಲಿ ಅವರೊಂದು ರಾಜಕೀಯ ಶಕ್ತಿಯೂ ಹೌದು. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳ ನೇತಾರರು ಇವರನ್ನು ಓಲೈಸಲು ತಾ ಮುಂದು ನಾ ಮುಂದು ಎನ್ನುತ್ತಿರುತ್ತಾರೆ.
ಶಿವಾನಂದ ನಿಂಗನೂರ “ಬೆಳೆಯುತ್ತಿರುವ ಯುವಕರಿಗೆ ಸ್ಫೂರ್ತಿ, ಸಮಕಾಲೀನರಿಗೆ ಅಚ್ಚರಿ, ವೃದ್ಧರಿಗೆ ಅದ್ಭುತ”. ಇಂತಹ ಅದ್ಭುತ ವ್ಯಕ್ತಿ ನಮ್ಮವರೆಂಬ ಹೆಮ್ಮೆ ನನ್ನದು. ಇನ್ನು ಅನೇಕ ದಶಕಗಳ ನಮಗೆಲ್ಲಾ ಸ್ಫೂರ್ತಿಯ ಚಿಲುಮೆಯಾಗಿರಲಿ. ಮಹಾತ್ಮ ಬಸವೇಶ್ವರ ಇವರಿಗೆ ಆಯುಷ್ಯ, ಆರೋಗ್ಯ, ಸಂಪತ್ತನ್ನು ಕರುಣಿಸಲಿ.