- ಡಾ.ಸರ್ವಮಂಗಳಾ ಸಕ್ರಿ ರಾಯಚೂರು
12 ನೆ ಶತಮಾನವು ವಚನ ಸಾಹಿತ್ಯ ರಚನೆಯಲ್ಲಿ ಒಂದು ಪ್ರಗತಿ ಪರವಾದ ಘಟ್ಟ. ಸಾಮಾಜಿಕ ಸುಧಾರಣೆಯ ಸಂದರ್ಭದಲ್ಲಿ ರಚನೆಯಾದ ಶರಣ ಸಾಹಿತ್ಯ ಸ್ತ್ರೀ ಸಂವೇದನೆಯ ನೆಲೆಯಲ್ಲಿ ಪ್ರಕಟವಾದವು.ಅಂದು ಎಲ್ಲಾ ವರ್ಗದ ಸ್ತ್ರೀಯರು ಸಾಹಿತ್ಯ ಮತ್ತು ಬರವಣಿಗೆ ಯಲ್ಲಿ ತಮ್ಮನ್ನು ತೊಡಗಿಸಿ ಕೊಂಡದ್ದು ಪ್ರಮುಖವಾದ ಘಟ್ಟ. ಸ್ತ್ರೀ ಪುರುಷ ಎಂಬ ಭೇದವನನ್ನು ಅಳಸಿ ಹಾಕಲು ಪ್ರಯತ್ನಿಸಲಾಯುತು.ಸ್ತ್ರೀಯರಿಗೆ ಆತ್ಮ ವಿಶ್ವಾಸ ಸಮಾನತೆಯನ್ನು ಅಭಿವ್ಯಕ್ತಿಯ ಅವಕಾಶವನ್ನು ಒದಗಿಸಿದ್ದು ಇದೇ ಕಾಲದಲ್ಲಿ. “ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ” ಎಂಬ ಸ್ಪಷ್ಟತೆ ಹೆಣ್ಣನ್ನು ಕಂಡ ಬಗೆಯನ್ನು ಜೇಡರ ದಾಸಿಮಯ್ಯ ಭಾವನಾತ್ಮವಾಗಿ ಸಮರ್ಥಿಸಿದ್ದಾನೆ. ತೋರಿಸಿದ್ದಾನೆ. ಸರಿ ಸಮವಾದ ಆದ್ಯಾತ್ಮಿಕ ಸ್ವಾತಂತ್ರ್ಯವನ್ನು ಪಡೆದ ಸ್ತ್ರೀಯರು ವಚನಕಾರರ ಜೊತೆಗೆ ತಾತ್ವಿಕ ಚರ್ಚೆ ವೈಚಾರಿಕ ವಿನಿಮಯಗಳಲ್ಲಿ ಭಾಗವಹಿಸಿದ್ದಲ್ಲದೆ ವಚನಗಳನ್ನುರಚಿಸಿದರು.
ಸ್ತ್ರೀ ವಚನಕಾರರಲ್ಲಿ ಅಕ್ಕಮಹದೇವಿ ಮೊದಲು ನೆನಪಾದರೂ ಮುಕ್ತಾಯಕ್ಕ, ಗಂಗಾಂಬಿಕೆ, ಅಕ್ಕನಾಗಮ್ಮ, ಮೋಳಿಗೆ ಮಹಾದೇವಮ್ಮ ಮುಂತಾದವರು ಮತ್ತು ಕೆಳವರ್ಗದಿಂದ ಬಂದ ಕದಿರೆ ಕಾಳವ್ವೆ, ಸಂಕವ್ವೆ, ಗುಡ್ಡಮ್ಮೆ, ರೇಕಮ್ಮೆ, ರೆಮ್ಮವ್ವೆ, ಮಸಣಮ್ಮ, ಕಾಮಮ್ಮರಾಯಮ್ಮ ಹೀಗೆ ಹಲವಾರು ವಚನಕಾರರು ಸಾಹಿತ್ಯದಲ್ಲಿ ಸಂವೇದಿಸಿದ್ದು ಮಹತ್ವದ ಘಟನೆಯಾಗಿದೆ.
ಮನುಷ್ಯ ಜನ್ಮವನ್ನೆ ಕರ್ಮ ಸಿದ್ದಾಂತದಲ್ಲಿ ವ್ಯಾಖ್ಯಾನಿಸಿದ ಸಮಾಜದಲ್ಲಿ ಹೆಣ್ಣನ್ನು ಹೊಲೆತನ ಸೂತಕ ಸಂಕೋಲೆಗಳಲ್ಲಿ ಬಂದಿಸಿದ್ದರು. ಶರಣರು ಸೂತಕಗಳನ್ನು ಖಂಡಿಸಿ ಅವರ ಸ್ವತಂತ್ರ ವಿಚಾರ ಧಾರೆಗೆ ಅವಕಾಶ ಮಾಡಿ ಕೊಟ್ಟರು. “ಹೊಲೆ ಗಂಡನಿಗಲ್ಲದೆ ಪಿಂಡನೆಲೆಗೆ ಆಶ್ರಯವಿಲ್ಲವೆಂದು” ಬಸವಣ್ಣನವರೆ ಹೇಳಿದ್ದಾರೆ. ದೇಹಕ್ಕೆ ಅಂಟಿದ ಯಾವುದೇ ನೈಸರ್ಗಿಕ ಸೂತಕಗಳು ಸೂತಕಗಳಲ್ಲ ವೆಂದು ಸ್ಪಷ್ಟ ಪಡಿಸಿದರು.
“ಸತಿ ಪತಿ ಗಳೊಂದಾದ ಭಕ್ತಿ ಹಿತವಪ್ಪವುದೆ ಶಿವಂಗೆ” ಎಂಬ ಹೇಳಿಕೆಯಲ್ಲಿ ಸಾಂಸಾರಿಕ ಬದುಕಿನ ಮಹತ್ವದ ಹೆಗ್ಗಳಿಕೆಯನ್ನು ಕಾಣಬಹುದು. ಸ್ತ್ರೀಯನ್ನು ಸಮಾನತೆಯ ನೆಲೆಯಲ್ಲಿ ಕಂಡ ಬಸವಣ್ಣ ಸಾಮಾಜಿಕ ಆರ್ಥಿಕ ಧಾರ್ಮಿಕ ಸ್ವಾತಂತ್ರ್ಯ ವನ್ನು ನೀಡಿ ಸಮಾನತೆಯ ಗೌರವ ನೀಡಿದ್ದನ್ನು ಗಮನಿಸಬೇಕು.
ಆದ್ಯಾತ್ಮದ ಬದುಕಿಗೆ ಕಾಯಕವೆನ್ನುವುದು ಮೂಲಭೂತವಾದ ಅರ್ಹತೆಯಾಗಿತ್ತು. “ಶರಣ ಸತಿ ಲಿಂಗ ಪತಿ” ಎನ್ನುವ ಮಾತನ್ನು ಶರಣ ಶರಣೆಯರು ಅಕ್ಷರಶಃ ಪಾಲಿಸಿದರು. ಕಲ್ಲು ದೇವರಿಗೆ ಅಡ್ಡ ಬೀಳುವ ಭಕ್ತರನ್ನು ಕುರಿತು ಅಕ್ಕಮಹಾದೇವಿ ಹೇಳುತ್ತಾಳೆ. “ಒಳಗಣ ಗಂಡನಯ್ಯ ಹೊರಗಣ ಮಿಂಡನಯ್ಯ ಎರಡನ್ನೂ ನಡೆಸಲು ಬಾರದಯ್ಯ ಚೆನ್ನಮಲ್ಲಿಕಾರ್ಜುನಯ್ಯ ಬಿಲ್ವ ಬೆಳವಲಕಾಯಿ ಒಂದಾಗಿ ಹಿಡಿಯಲು ಬಾರದು” ಬಿಲ್ವಕ್ಕೆ ಇರುವ ಪೂಜ್ಯತೆ ಬೆಳವಲಕ್ಕಿಲ್ಲ. ಇಂಥ ಮುಕ್ತತೆಯನ್ನು ಅಕ್ಕನ ವಚನಗಳಲ್ಲಿ ಮಾತ್ರ ಕಾಣಲು ಸಾದ್ಯವಾಗುತ್ತದೆ.
“ಹೆಣ್ಣು ಹೆಣ್ಣಲ್ಲ ಹೆಣ್ಣು ರಕ್ಕಸಿಯಲ್ಲ ಹೆಣ್ಣು ಸ್ವತಃ ಕಪಿಲಸಿದ್ದ ಮಲ್ಲಿಕಾರ್ಜುನ” ಶರಣ ಸಿದ್ದರಾಮನವರ ವಚನದಲ್ಲಿ ಹೆಣ್ಣಲ್ಲಿ ಅಡಗಿರುವ ಸುಪ್ತ ಪ್ರತಿಭೆ ಸಾಧನೆಗಳ ಎತ್ತರವನ್ನು ತಿಳಿದ ಶರಣರು ಹೆಣ್ಣಿಗೆ ದೈವತ್ವದ ಸ್ಥಾನವನ್ನು ಕೊಟ್ಟರು. ಆದರೆ ಸ್ತ್ರೀ ಪುರುಷರು ತಮ್ಮ ಆಧ್ಯಾತ್ಮ ಸಾಧನೆಯಲ್ಲಿ ಪರಸ್ಪರ ತೊಡಕು ಎಂದು ಆರೋಪಿಸುತ್ತಾ ಬಂದದ್ದು ಗಮನಾರ್ಹ. ಹೆಣ್ಣಿನ ಮುಂದೆ ಗಂಡು ಮಾಯೆ ಗಂಡಿನ ಮುಂದೆ ಹೆಣ್ಣು ಮಾಯೆ. ಎಂದಿನಿದಲೋ ಭಾವಿಸಿದ ಪ್ರತ್ಯಾರೋಪದ ನಂಬಿಕೆ ಇದು.
ಬಸವಣ್ಣನ ಈ ವಚನದಲ್ಲಿ ಹೇಳುವಂತೆ :
ಜನಿತಕ್ಕೆ ತಾಯಿಯಾಗಿ | ಹೆತ್ತಳು ಮಾಯೆ ||
ಮೋಹಕ್ಕೆ ಮಗಳಾಗಿ | ಹುಟ್ಟಿದಳು ಮಾಯೆ ||
ಕೂಟಕ್ಕೆ ಸ್ತ್ರೀಯಾಗಿ | ಕೂಡಿದಳು ಮಾಯೆ ||
ಈ ಪರಿಯಲ್ಲಿ | ಕಾಣಿಸಿತು ಮಾಯೆ ||
ಈ ಮಾಯೆ | ಕಳೆವಡೆ ಎನ್ನವಳಲ್ಲ ||
ನೀವೇ ಬಲ್ಲಿರಿ | ಕೂಡಲ ಸಂಗಮ ದೇವ ||
ಶರಣರಿಗೆ ಮಾಯೆ ಬದುಕಿಗೆ ಬೇಡವಾದ ಆವರಣ. ಅವರ ಪ್ರಕಾರ ಹೆಣ್ಣು ಹೊನ್ನು ಮಣ್ಣು ಬೆನ್ನಿಗೆ ಅಂಟಿದ ಮಾಯೆಗಳು.ಸಾಧಕರಿಗೆ ಸಾಧನಯಲ್ಲಿ ನಿರತನಾದಾಗ ಮನದಲ್ಲಿ ತಳಮಳ ಏಕಾಗ್ರತೆಯ ಕೊರತೆ ಇವೆಲ್ಲಾ ಮಾಯೆಯನ್ನು ಬಿಂಬಿಸುವ ಮನೋವ್ಯಾಕುಲತೆಯ ಅಂಶಗಳು. ವಚನಕಾರರ ಪ್ರಕಾರ ಪರಶಿವನ ಶಕ್ತಿಯೇ ಮಾಯೆ ಸಂಸಾರವೇ ಮಾಯೆ ಗುರು ಕರುಣಿಸಿ ಬಿಟ್ಟಿತ್ತು ಮಾಯೆ.
ಲೌಕಿಕ ಬದುಕಿನಲ್ಲಿ ಸ್ರ್ರೀಯನ್ನು ಸನಾತನದ ಚಾರಿತ್ರಿಕ ಶಕ್ತಿ ಎಂದು ಹೇಳಲಾಗಿದೆ. ಮಗುವಿಗೆ ಜನ್ಮ ಕೊಡುವ ಶಕ್ತಿ ಮಹಿಳೆಗಿದೆ ಎಂದರೆ ಖಂಡಿತವಾಗಿ ಅವಳು ಅನಂತವಾದ ಶಕ್ತಿಯುಳ್ಳಂತವಳು. ಶಿಶು ಜನ್ಮ ತಳೆಯುವ ಮುನ್ನಿನ ಸ್ಥಿತಿಗಿಂತ ತಾಯಿಯ ಆಸರೆಯಲ್ಲಿ ಬೆಳೆದು ಅದು ಮುಂದೆ ತನ್ನ ವ್ಯಕ್ತಿತ್ವವನ್ನು ತಾಯಿಯಿಂದಲೇ ಪಡೆಯುತ್ತದೆ. ಅಕ್ಕ ಮಹಾದೇವಿ ಹೇಳುವಂತೆ “ನೀನಿಕ್ಕಿದ ಮಾಯೆ ಕೊಲ್ಲುತಿರ್ಪುದೊ” ಎಂದು ಚೆನ್ನ ಮಲ್ಲಿಕಾರ್ಜುನನ್ನೇ ಪ್ರಶ್ನೆ ಮಾಡುತ್ತಾಳೆ. ಆಕೆಯ ಪ್ರಕಾರ ಮಾಯೆಯು ಪರಮಾತ್ಮನ ವಶದಲ್ಲಿದೆ. ಅದು ಸತ್ವ ರಜ ತಮೋಗುಣಗಳಿಂದ ಆವೃತವಾಗಿದೆ.
ಮೋಹ ಅನಂತವಾದ ಶಕ್ತಿ ಮಾಯೆಯ ಇನ್ನೊಂದು ಮುಖ ಮೋಹ. ಮಗಳು ಸೂಕ್ಷಾವಸ್ಥೆಯಲ್ಲಿ ಮಾಯೆಯಾಗಿ ಪ್ರಕಟಗೊಂಡಾಗ ಪ್ರಕೃತಿಯ ಭೌತಿಕ ಸಂಬಂದಗಳು ಮಿಥ್ಯೆಯಾಗಿ ಕಾಡುತ್ತವೆ. ಕಾರಣ ಶರೀರದಲ್ಲಿ ಮಗಳ ವ್ಯಾಮೋಹಕ್ಕೆ ಹೆತ್ತ ಒಡಲಿನ ಪ್ರೀತಿಯದು. ಶರಣರಿಗೆ ಮಾಯೆ ಭ್ರಮೆಯಾದರೆ ಲೌಕಿಕರಿಗೆ ಸತ್ವ ಪೂರ್ಣವಾದ ಅನುಬಂಧ. ಅಕ್ಕನು ಮಗಳಾಗಿ ಹೇಳುತ್ತಾಳೆ. “ನಿಮ್ಮ ಮುಡಿಗೆ ಹೂವ ತರುವೆನಲ್ಲದೆ ಹುಲ್ಲ ತಾರೆನು” ಎನ್ನುವ ಹೇಳಿಕೆಯನ್ನು ಗಮನಿಸಬೇಕು. ತಾಯಿ ಮತ್ತು ಮಗಳು ಆತ್ಮೀಯ ಗೆಳತಿಯರು. ಮಗಳು ತಾಯಿಯನ್ನು ಸ್ವರ್ಗಕ್ಕಿಂತಲೂ ಮಿಗಿಲೆಂದು ಆರಾಧಿಸುತ್ತಾಳೆ. ಹೀಗಾಗಿ ಪರಂಪರೆಯಿಂದ ಬಂದ ರೂಢಿಗತ ನಂಬಿಕೆ ಸ್ತ್ರೀ ಪ್ರಜ್ಞೆಯನ್ನು ಪ್ರಶ್ನಿಸುತ್ತದೆ. ಇದಕ್ಕೆಲ್ಲಾ ತಾಯ್ತನದ ಸುತ್ತ ಹೆಣೆಯಲಾದ ಭಾವುಕ ಸಂಬಂದಗಳೂ ಕಾರಣ. ತಾಯ್ತನಕ್ಕೆ ಬೇಕಾಗುವ ಜೀವ ಪ್ರೀತಿ ಜೀವನ ಶ್ರದ್ದೆ ಅಂತಃಕರಣಗಳು ಸ್ತ್ರೀ ಮನಸ್ಸಿನೊಂದಿಗೆ ಬಂದು ಬಿಡುತ್ತವೆ.
ಹರಿಹರ ಬ್ರಹ್ಮಾದಿಗಳು ಮಾಯೆಯನ್ನು ಗೆಲ್ಲಲಾರದೆ ಆದಿ ಶಕ್ತಿಯ ಪಾದಕಮಲಗಳಿಗೆ ಶರಣಾಗಿದ್ದರು. ರಾಗ ದ್ವೇಷ ಮೋಹಗಳಿಂದ ತನ್ನ ವಿವೇಕ ಕಳೆದುಕೊಂಡು ಅಸಮರ್ಥನಾದಾಗ “ಕೂಟಕ್ಕೆ ಸ್ಥ್ರೀಯಾಗಿ ಕೂಡಿದಳು ಮಾಯೆ” ಎನ್ನುವ ಮುಕ್ತತೆ ವಂಶಾಭಿವೃದ್ಧಿಗೆ ಕಾರಣ ವಾಗುತ್ತದೆ. ಹೊಸ ಜೀವಕ್ಕೆ ಜನ್ಮ ಕೊಡುವ ಶಕ್ತಿ ಸ್ತ್ರೀಗೆ ಇದ್ದದ್ದು. ಸಂತಾನೋತ್ಪಾದನೆಯಲ್ಲಿ ಸ್ತ್ರೀ ಶಕ್ತಿಯು ಗೌರವಕ್ಕೆ ವಿಫುಲವಾದ ಕಾರಣಗಳಿದ್ದವು. ಹೀಗಾಗಿ ಕೌಟುಂಬಿಕ ಚೌಕಟ್ಟಿನೊಳಗೆ ಪತ್ನಿಯಾಗಿ ತಾಯ್ತನದ ವ್ಯವಸ್ಸ್ಥೆಯಲ್ಲಿ ಮುಕ್ತತೆಯನ್ನು ಪಡೆದುಕೊಂಡಿತು.
ಶರಣರಿಗೆ ಸಂಸಾರದ ವ್ಯಾಮೋಹ ಮತ್ತು ಸ್ತ್ರೀ ಸೌಂದರ್ಯದ ಬಗ್ಗೆ ಭಯ ಆವರಿಸಿತ್ತು. ಶರಣರ ಪ್ರಕಾರ ಪ್ರಕೃತಿ ತತ್ವವೇ ಮಾಯೆ. ಯಾರು ಶಿವನೇ ತಮ್ಮ ಆತ್ಮವೆಂದು ಅರಿತುಕೊಳ್ಳುವರೊ ಲೌಕಿಕ ಮಿತಿಮಾಯೆಯ ಆವರಣವನ್ನು ದಾಟುತ್ತಾರೆ. ಸಂಸಾರದ ಭ್ರಮೆಯ ಸಂಬಂದಗಳನ್ನು ನಿರಾಕರಿಸುತ್ತಾರೆ.
ಮಾಯೆ ಸತ್ವಗುಣವುಳ್ಳ ವಿಶೇಷ ಶಕ್ತಿ ಯುಳ್ಲದ್ದು ತನ್ನ ಸ್ವರೂಪ ಜ್ಞಾನ ವಿಲ್ಲದ ಅವಿದ್ಯೆಯಾಗಿದೆ. ಅವ್ಯಕ್ತ ಭ್ರಾಂತಿ ಯಾಗಿದೆ.ಅಲ್ಲಮ ಪ್ರಭು ಹೇಳುವಂತೆ ಸರ್ವವೂ ಗುಹೇಶ್ವರನ ಮಾಯೆ. ಅದು ಎಲ್ಲರನ್ನೂ ಒಳಗೊಂಡಿದೆ. ಹೆಣ್ಣು ಹೊನ್ನು ಮಣ್ಣು ಇವಾವೂ ಮಾಯೆಯಲ್ಲ. ಮನದ ಮುಂದಣ ಆಶೆಯೇ ಮಾಯೆ ಎಂದು ಹೇಳುವನು. ಆದರೆ ಲೌಕಿಕರಿಗೆ ಸ್ತ್ರೀ ಅವಿನಾಶಿ ಸಂಜೀವಿನಿಯಾಗಿದ್ದಾಳೆ. ಹೀಗಾಗಿ ಸ್ತ್ರೀ ತಾಯಿಯಾಗಿ ಪತ್ನಿಯಾಗಿ ಮಗಳಾಗಿ ಸಹೋದರಿಯಾಗಿ ಗೆಳತಿಯಾಗಿ ಎಲ್ಲಾ ಪಾತ್ರ ನಿಭಾಯಿಸುವ ಕುಟುಂಬದ ಶಕ್ತಿ ಅಧಾರ ಸ್ಥಂಬ ಮಹಿಳೆಯಾಗಿದ್ದಾಳೆ. ಹೀಗಾಗಿ ಮಹಿಳೆಗೆ ಕುಟುಂಬ ಮತ್ತು ಸಂಸಾರದ ಜವಾಬ್ದಾರಿ ಆಯ್ಕೆಯ ಅನುಸಂಧಾನ.
ಚೆನ್ನಬಸವಣ್ಣನ ಪ್ರಕಾರ ಮಾಯೆ ಸಂಸಾರದ ಸತ್ಯಕ್ಕೆ ಮೀರಿದ್ದು. “ಲಿಂಗವಿದ್ದ ಶರೀರಿಯು ಮನ ಚಿತ್ತ ಬುದ್ದಿ ಅಹಂಕಾರದ ಮಹಾ ಪಾಶನದಲ್ಲಿ ಅವನೆಂದಿಗೂ ಮಾಯೆಯನ್ನು ಮುಟ್ಟಲಾಗದೆಂದು ಹೇಳುವನು”. ಶರಣರಿಗೆ ಸಂಸಾರದ ವ್ಯಾಮೋಹವು ಆಧ್ಯಾತ್ಮ ಸಾಧನೆಗೆ ಅಡಚಣೆ ಅತೃಪ್ತಿಯಾಗಿತ್ತು. ಈ ನೆಲೆಯಲ್ಲಿ ವಿರಕ್ತರಿಗೆ ಅನುರಕ್ತಿಯ ಸ್ಪರ್ಶ ವ್ಯಾಮೋಹ ಇರಕೂಡದು. ಈ ಎಲ್ಲಾ ಕಾರಣಗಳು ವೈಯಕ್ತಿಕ ಜೀವನದ ನಿಗೂಢ ಕಾರಣಗಳಾಗುತ್ತವೆ ಎಂಬುದನ್ನು ಗಮನಿಸಬೇಕು.
ಆದರೆ ಭೌತಿಕವಾಗಿ ಸ್ತ್ರೀ ಶಕ್ತಿಯ ಸಂಗಮ ಎನ್ನುವ ವಾದವಿದೆ. ತಾಯಿಯೆ ಮೊದಲ ಗುರು. ಈ ಗೌರವ ಮಹಿಳೆಯರ ಸಾಮರ್ಥ್ಯವನ್ನು ಬಿಂಬಿಸುತ್ತದೆ. ಪುರುಷರಿಗಿಂತಲೂ ಸ್ತ್ರೀ ದೈಹಿಕ ಮತ್ತು ಮಾನಸಿಕವಾಗಿ ಸಧೃಡಳಾದ್ದರಿಂದ “ಭೂಮಿ ತೂಕದ ಹೆಣ್ಣು” ಎಂಬ ವಾಕ್ಯ ಮಹಿಳೆಯ ಆತ್ಮ ವಿಶ್ವಾಸ ಮತ್ತು ನಿಷ್ಠೆ ಅವಳ ಸಹನೆಯನ್ನು ಬಿಂಬಿಸುತ್ತದೆ.
ಈ ಎಲ್ಲಾ ಹೇಳಿಕೆಗೆ ಸಮರ್ಥವಾದ ಉತ್ತರವನ್ನು ಶರಣರು ಅನುಭಾವದ ಉತ್ತರ ನೀಡಿ ಧರ್ಮನಿಷ್ಠತೆಯನ್ನು ಪ್ರತಿಪಾದಿಸಿದರು. ಆತ್ಮದ ನೆಲೆಯಲ್ಲಿ ಸ್ತ್ರೀ ಪುರುಷರು ಸಮಾನರೆಂದು ಸ್ಪಷ್ಟಪಡಿಸಿದರು. ಈ ಜಗವೆಲ್ಲಾ ಸ್ತ್ರೀ ಶಿವನೊಬ್ಬನೇ ಪುರುಷ. ಈ ಎರಡರ ಐಕ್ಯ ಸ್ಥಿತಿಯೇ ಬಯಲು ಅಥವ ಶೂನ್ಯ. ಈ ತಾತ್ವಿಕ ನಂಬಿಕೆ ಶರಣ ಧರ್ಮಕ್ಕೆ ಸ್ಪಷ್ಟ ಉತ್ತರ ಲಭ್ಯವಾದದ್ದನ್ನು ಗಮನಿಸಬೇಕು.
ಬಸವಣ್ಣನವರಿಗೆ ತಮ್ಮ ಆತ್ಮಾವಲೋಕನದಲ್ಲಿ ಸ್ತ್ರೀ ಮಾಯೆಯ ಬಗ್ಗೆ ವಿಶಾದವಿಲ್ಲ. ಪರಶಿವನ ಸೃಷ್ಟಿ ಸ್ಥಿತಿ ಲಯದ ರೂಪಾತ್ಮಕವಾದ ಲೀಲೆ ಎನ್ನುತ್ತಾನೆ. ಹೀಗಾಗಿ ಸ್ತ್ರೀಯರ ಬಗ್ಗೆ ಇರುವ ಕಲ್ಪನೆಗಳು ಸಾಮಾಜಿಕ ನಿಲುವು ಗಳಾಗಿ ಪರಿವರ್ತನೆಯಾದದ್ದನ್ನು ಗಮನಿಸಬೇಕು. ಆದ್ಯಾತ್ಮ ವೂ ಒಂದು ಸಂಸಾರ. ಈ ಪಯಣದಲ್ಲಿ ಮಾಯೆ ಒಂದು ಮೌಲ್ಯ ಪ್ರಜ್ಞೆ ಎಂದು ಸಮರ್ಥಿಸುತ್ತಾನೆ. ಸಾಂಪ್ರದಾಯಿಕ ಧರ್ಮ ಸಿದ್ದಾಂತವನ್ನು ಪ್ರತಿಸ್ಪಂದಿಸಲು ಅವಕಾಶ ಮಾಡಿ ಕೊಡುತ್ತಾನೆ.