e-ಸುದ್ದಿ, ಮಸ್ಕಿ
ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದಿನಬಳಕೆ ಹಾಗೂ ರಸಗೊಬ್ಬರ ಬೆಲೆಗಳನ್ನು ಏರಿಕೆ ಮಾಡುವ ಮೂಲಕ ಬಡಜನರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಸಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದರು.
ಪಟ್ಟಣದ ಬಸವೇಶ್ವರ ನಗರದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ರಾಜ್ಯದಲ್ಲಿ ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಾವೂ ಮಾಡಿದ ಜನಪರ ಆಡಳಿತವೇ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಗೆಲುವಿಗೆ ಸಹಕಾರಿಯಾಗಲಿದೆ. ಉತ್ತರ ಕರ್ನಾಟಕ ಭಾಗಕ್ಕೆ ಬಿಜೆಪಿ ಕೊಡುಗೆ ಏನು ಎಂಬುದನ್ನು ನಾಯಕರು ಸ್ಪಷ್ಟ ಪಡಿಸಿ ನಂತರ ಮತರಾರರ ಬಳಿ ಬನ್ನಿ ಎಂದು ಸವಾಲು ಹಾಕಿದರು.
ಈಗಾಗಲೇ ಬಿಜೆಪಿಯವರ ಆಡಳಿತದಿಂದ ದೇಶದ ಜನರು ಬೇಸತ್ತಿದ್ದಾರೆ. ಉಪಚುನಾವಣೆಯಲ್ಲಿ ಜನರು ಹಣ ಕೊಟ್ಟರೆ ಯಾರು ಮತ ಹಾಕುವುದಿಲ್ಲ. ಈ ಕ್ಷೇತ್ರದ ಮತದಾರರು ತುಂಬಾ ಬುದ್ದಿವಂತರಿದ್ದಾರೆ. ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಬಿಜೆಪಿ ನಾಯಕರಿಗೆ ತಕ್ಕ ಸಂದೇಶ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮಸ್ಕಿ ಕ್ಷೇತ್ರದಲ್ಲಿ ಕಳೆದ ಮೂರು ದಿನಗಳಿಂದ ಪ್ರಚಾರ ಮಾಡುತ್ತಿದ್ದೇನೆ. ಆದರೆ ಕ್ಷೇತ್ರದ ಜನರ ಒಲವೂ ಎಲ್ಲಿಯೂ ಬಿಜೆಪಿ ಪರ ಇಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಅಲೆ ಇದೆ. ಕಾಂಗ್ರೆಸ್ ಅಭ್ಯರ್ಥಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕ ಅಮರೇಗೌಡ ಬಯ್ಯಾಪೂರು ಮಾತನಾಡಿ ಮಸ್ಕಿ ಕ್ಷೇತ್ರದಲ್ಲಿ ಯಾರು ಏನೇ ಮಾಡಿದರು ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ. ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಹಾಗೂ ಕ್ಷೇತ್ರದ ಜನರ ಒಲವು ಇದೆ. ಆದ್ದರಿಂದ ಕ್ಷೇತ್ರದ ಜನರು ಈ ಚುನಾವಣೆಯಲ್ಲಿ ರಾಜ್ಯಕ್ಕೆ ಹೊಸ ಸಂದೇಶವನ್ನು ನೀಡಲಿದ್ದಾರೆ ಎಂದರು.
ಸಯ್ಯದ್ ಹುಸೇನ್, ಶ್ರೀನಿವಾಸ, ದಯಾನಂದ, ಅಮ್ಜದ್ ಸೇಠ್ ಸೇರಿದಂತೆ ಇತರ ಮುಖಂಡರು ಇದ್ದರು.