ಇರಲಾರರು ಅಕ್ಕ ನಿನ್ನಂತೆ.

ಇರಲಾರರು ಅಕ್ಕ ನಿನ್ನಂತೆ.

ಶರಣಮಥನದಲಿ ಹೊಳೆದ
ಅನರ್ಘ್ಯ ರತ್ನ ದ ತುಣುಕೆ!ಉಡುತಡಿಯ ಮಡಿಲಿಂದ
ಕಲ್ಯಾಣದ ಕಡಲಿಗೈತಂದ
ಆಧ್ಯಾತ್ಮದ ಬೆಳಕೆ ನಿನಗಿದೋ ಶರಣು!

ಇರಲಾರರು ಅಕ್ಕ ನಿನ್ನಂತೆ
ಅಂಗ ಮೋಹವ ತೊರೆದು
ಲಿಂಗ ಸ್ನೇಹದಿ ಬೆರೆದು
ಆತ್ಮಸಂಗ ಬಯಸಿದವರು
ಕಾಣದ ಗಂಡನಿಗಾಗಿ
ಹಾತೊರೆದು ಹಂಬಲಿಸಿ
ಮಿಡುಕಾಡಿ ಹುಡುಕಿದವರು!

ಇರಲಾರರು ಅಕ್ಕ ನಿನ್ನಂತೆ
ಹಸಿವು ತೃಷೆಭಾದೆಗಳ
ಮೆಟ್ಟಿ ನಿಂತವರು
ಕಷ್ಟಗಳ ಕೈಬೀಸಿ ಕರೆದವರು
ಸರ್ವಬಂಧನವ ತ್ಯಜಿಸಿ
ಸರ್ವಸ್ವವನು ದೇವನಿಗರ್ಪಿಸಿ
ಭಕ್ತಿಯಿಂದಲೇ ಎಲ್ಲಗೆದ್ದವರು!

ಇರಲಾರರು ಅಕ್ಕ ನಿನ್ನಂತೆ
ಉರಿಯನಡೆ ನಡೆದವರು
ಒರೆಗಳಿಗೆ ತನುಮನವನರ್ಪಿಸಿದವರು
ಸ್ತ್ರೀ ಕುಲಕ್ಕೆ ಆತ್ಮಸ್ಥೈರ್ಯ ತುಂಬಿ
ಭಾವಬಯಲ ಅಪ್ಪಿದವರು ಒಪ್ಪಿದವರು!

ಇರಲಾರರು ಅಕ್ಕ ನಿನ್ನಂತೆ
ಒಳಗು ಹೊರಗುಗಳಿಗೆ
ವಜ್ರಲೇಪವ ಬೆಸೆದವರು!
ಆದರೆ,
ಇರುವರು ಅಕ್ಕ ಲಕ್ಷ ಲಕ್ಷ ಜನ
ನಿನ್ನ ಹೆಸರು ಬಳಸಿಕೊಂಡು
ತಂತಮ್ಮ ಜಾತಿಗೆ ಕಟ್ಟಿಕೊಂಡು
ಡಾಂಭಿಕತೆಯ ಕೆಸರಲ್ಲಿ ಮುಳುಗಿದವರು.!

ಇಂದುಮತಿ ಅಂಗಡಿ ಇಳಕಲ್ಲ

Don`t copy text!