ಇಲಕಲ್ಲ ಅಕ್ಕನ ಬಳಗ ರಾಜ್ಯಕ್ಕೆ‌ ಮಾದರಿ

ಇಲಕಲ್ಲ ಅಕ್ಕನ ಬಳಗ ರಾಜ್ಯಕ್ಕೆ‌ ಮಾದರಿ

e-ಸುದ್ದಿ, ಇಲಕಲ್ಲ

ಮಾಡುವಂತಿರಬೇಕು ಮಾಡದಂತಿರಬೇಕು
ಮಾಡುವಾ ಮಾಟದೊಳಗೆ ತಾನಿಲ್ಲದಂತಿರಬೇಕು
ಕೂಡಲ ಸಂಗಮ ದೇವರ ನೆನೆಯುತ್ತ ನೆನೆಯುತ್ತ ನೆನೆಯದಂತಿರಬೇಕು. ಈ ಮಾತು ಅಕ್ಷರಶಃ ಇಲಕಲ್ಲನ ಅಕ್ಕ ನ ಬಳಗಕ್ಕೆ ಸಲ್ಲುತ್ತದೆ

ಬಸವತತ್ವವನ್ನೆ  ಉಸಿರಾಗಿಸಿಕೊಂಡು ವಚನದ ಓಲೆಗಳನ್ನು ಬೆನ್ನಿಗೆ ಕಟ್ಟಿಕೊಂಡು ನಾಡ ಸುತ್ತಿದ ವಿಜಯಮಹಾಂತ ಶಿವಯೋಗಿಗಳು ನಡೆದಾಡಿದ ನೆಲದ ಮಣ್ಣಿನಲ್ಲಿ ಬಸವನನ್ನೇ ಉಸಿರಾಗಿಸಿಕೊಂಡು ಬಸವತತ್ವದ ದಂಡನಾಯಕರು, ಮಾತೃಹೃದಯಿಗಳಾದ ಪರಮ ಪೂಜ್ಯ ಡಾ. ಮಹಾಂತ ಅಪ್ಪಗಳ ಪಾವನ ಸಾನಿಧ್ಯದಲ್ಲಿ, ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ ಆಶ್ರಯದ ಅಕ್ಕನ ಬಳಗ ಪರಮ ಪೂಜ್ಯ ಡಾ. ಮಹಾಂತ ಅಪ್ಪ ಅವರು ಚಿತ್ತರಗಿ ಪೀಠದ ೧೯ ನೇ ಗುರುಗಳಾಗಿ ೧೯೭೦ ನೇ ಇಸವಿಯಲ್ಲಿ ಬಂದಾಗ ಆಗಲೇ ಶ್ರೀ ಮಠದ ಅಕ್ಕನ ಬಳಗ ಪ್ರಾರಂಭವಾಗಿ ೧೪ ವರುಷಗಳಾಗಿತ್ತು. ಅಂದರೆ ಅಂದಾಜು ೧೯೫೬ ರಲ್ಲಿ ಹಿರಿಯ ಶರಣೆ ತಾಯಂದಿರಾದ ಮಲಕಾಜಮ್ಮ ಪಟ್ಟಣಶೆಟ್ಟಿ, ಕಳಕಮ್ಮ ದೋಟಿಹಾಳ, ಚೆನ್ನಬಸಮ್ಮ ಕವಿಶೆಟ್ಟಿ,, ಕಮಲಮ್ಮ ಹರಿಹರ, ಚೆನ್ನಮ್ಮ ಪಟ್ಟಣಶೆಟ್ಟಿ, ಪಾರ್ವತಮ್ಮ ಹರಿಹರ, ಶಿವಗಂಗಮ್ಮ ಕಲ್ಮಠ, ಶಿವಮ್ಮ ಅಂಗಡಿ, ವಿಜಯಲಕ್ಷ್ಮೀ ಶಿವಬಲ್ ಮುಂತಾದ ತಾಯಂದಿರು ಶ್ರೀಮಠದಲ್ಲಿ ಪ್ರತಿ ಸೋಮವಾರ ಶಿವಾನುಭವ ಮಾಡುತ್ತಾ ಅಕ್ಕನ ಬಳಗದ ಕಾರ್ಯಚಟುವಟಿಕೆ ಬೆಳವಡಿಸಿಕೊಂಡು ಬಂದಿದ್ದಾರೆ. ಇಂದು  ಅಕ್ಕನ ಬಳಗ ಹೆಮ್ಮರವಾಗಿ ಬೆಳೆದಿದೆ.ನೂರಾರು ತಾಯಂದಿರು ಅನುಭಾವಿಗಳಾಗಿದ್ದಾರೆ.

 

ಇದೀಗ ೬೫ ವಸಂತಗಳನ್ನು ಕಳೆದ ಸುಸಂದರ್ಭದಲ್ಲಿ ಇಲಕಲ್ಲನ ಅಕ್ಕನ ಬಳಗವಿದೆ. ಕಲ್ಯಾಣದಪ್ಪಗಳ ಹಾಗೂ ವಿಜಯಮಹಾಂತ ಶಿವಯೋಗಿಗಳ ಪರಮ ಪೂಜ್ಯ ಡಾ ಮಹಾಂತ ಅಪ್ಪಗಳವರ ಹಾಗೂ ಪರಮ ಪೂಜ್ಯ ಗುರು ಮಹಾಂತ ಶ್ರೀಗಳ ಆಶೀರ್ವಾದ ಮಾರ್ಗದರ್ಶನ ದಿಂದ ಅಕ್ಕನ ಬಳಗ ಅರಿವಿನ ಅರವತ್ತು -ಅಮೃತ ಮಹೋತ್ಸವ ಆಚರಿಸಿಕೊಂಡಿದೆ.

ರಾಜ್ಯಾದ್ಯಂತ ಅಕ್ಕನ ಬಳಗಗಳನ್ನು ಒಟ್ಟುಗೂಡಿಸಿ ಹೊಸ ಅಕ್ಕನ ಬಳಗ ಸ್ಥಾಪಿಸಿ ರಾಜ್ಯ ಮಟ್ಟದ ಸಮಾವೇಶ ಮಾಡಿ ಮಹಿಳಾ ಜಾಗೃತಿ ಮೂಡಿಸಿದೆ. ೬೦ ಜನ ವಿಧವಾ ತಾಯಂದಿರಿಗೆ, ೬೦ ಜನ ಪ್ರತಿಭಾನ್ವಿತ ವಿಧ್ಯಾರ್ಥಿನಿಯರಿಗೆ, ೬೦ ಜನ ವಿವಿಧ ರಂಗಗಳ ಮಹಿಳಾ ಸಾಧಕಿಯರಿಗೆ ಗೌರವಿಸಿ, ಬಸವಾದಿ ಶರಣರ ತತ್ವಗಳನ್ನು ಪ್ರಸಾರಪಡಿಸುವಲ್ಲಿ ಮಹತ್ವದ ಪಾತ್ರವಹಿಸಿ ಆದರ್ಶ ಮತ್ತು ಅನುಕರಣೀಯವಾಗಿದೆ.

ಈಗೀನ ಸಧ್ಯದ ಅಕ್ಕನ ಬಳಗದ ಅಧ್ಯಕ್ಷರಾಗಿರುವ ಅತ್ಯಂತ ಕ್ರಿಯಾಶೀಲ ಶರಣೆ ಗಿರಿಜಾ.ಚಂದ್ರಶೇಖರ.ಶಿವಬಲ, ಕಾರ್ಯದರ್ಶಿ ಸವಿತಾ ಎಮ್ ಮಾಟೂರ. ಖಜಾಂಚಿ ಶರಣೆ ಭಾರತಿ ಎಮ್ ಶೆಟ್ಟರ್ ತಂಡ ಅತ್ಯಂತ ಯಶಸ್ವಿಯಾಗಿ ‌ಮುನ್ನಡಸಿಕೊಂಡು ಹೋಗುತ್ತಿದ್ದಾರೆ.

ಮಾಜಿ ಅಧ್ಯಕ್ಷರಾದ ಶರಣೆ ಡಾ. ಅರುಣಾ ಕೆ ಅಕ್ಕಿ.ಅಕ್ಕಮ್ಮ. ಪಟ್ಟಣಶೆಟ್ಟಿ. ಶಕುಂತಲಾ ಚೋಬಾರಿ, ಹಂಪಕ್ಕ ಮರಟದ, ವಿಜಯಲಕ್ಷ್ಮೀ ಹರಿಹರ. ಮಹಾಂತಮ್ಮ ನಾಲವಾಡದ ಅವರೆಲ್ಲರ ಅನುಭವದ ಸಲಹೆಗಳಿಂದ ಹಾಗೂ ಶರಣೆ ಅನಸಮ್ಮಕ್ಕ, ಅನುಪಮಾ, ವಿಶಾಲಾಕ್ಷಿ, ದಾನಮ್ಮಕ್ಕ, ಸವಿತಕ್ಕ, ಸುನೀತಾ, ರಾಜೇಶ್ವರಿ ಅಕ್ಕ, ಮಹಾಂತಮ್ಮ,ಲಲಿತಕ್ಕ, ವೀರಮ್ಮ, ವಿನೋದಾ  ಇನ್ನೂ ಅನೇಕರು ಎಲ್ಲ ಅಕ್ಕ ತಂಗಿಯರು ಹಾಗೂ ತಾಯಂದಿರು ಅವರಿವರೆನ್ನದೇ ಹೆಸರಿಗಾಗಿ ಅಲ್ಲ, ಬಸವಾದಿ ಶರಣರ ಮಹಾಂತರ ಸೇವೆಯೆಂದು ಎಲೆಮರೆಯ ಕಾಯಿಯಂತೆ ತಮ್ಮನ್ನು ತಾವು ಅಕ್ಕನ ಬಳಗದ ಸೇವೆಗೆ ಸದಾ ಸಿದ್ಧರಾಗಿದ್ದಾರೆ.


ಸಧ್ಯದ ಅಕ್ಕನ ಬಳಗದ ಕಾರ್ಯಕ್ರಮಗಳು
೧) ಪ್ರತಿ ಶುಕ್ರವಾರ ಅಕ್ಕನ ಬಳಗದ ಸರ್ವ ಸದಸ್ಯರಿಂದ ಅಕ್ಕನ ಅನುಭಾವ ಮಂಟಪದಲ್ಲಿ ಯೋಗಾಂಗ ತ್ರಿವಿಧ ವಚನ ಪಠಣ, ವಚನ ಗಾಯನ ವಿಶ್ಲೇಷಣೆ ಮಾಡುವದು.

೨)ಪ್ರತಿ ಹುಣ್ಣಿಮೆಯಂದು ಶರಣರ ಸ್ಮರಣೆ ಆ ತಿಂಗಳ ಶರಣರ ಕುರಿತು ಪರಿಚಯ ಮತ್ತು ವಚನ ನಿವೇದನೆ ನಮ್ಮಲ್ಲಿಯೇ ಒಬ್ಬರು ಸದಸ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮ ನೆರವೇರಿಸುವದು.

೩)ಪ್ರತಿ ಅಮವಾಸ್ಯೆ ಪೂಜ್ಯ ಗುರು ಮಹಾಂತ ಶ್ರೀಗಳ ಸಾನಿಧ್ಯದಲ್ಲಿ ಶ್ರೀ ಮಠದಲ್ಲಿ ಇಷ್ಟ ಲಿಂಗಧಾರಣೆ ಕಾರ್ಯಕ್ರಮ ಜರುಗುವದು.

೪)ಪ್ರತಿ ಬುಧವಾರ ಮತ್ತು ಗುರುವಾರ ಅಕ್ಕನ ಅನುಭಾವ ಮಂಟಪದಲ್ಲಿ ವಚನ ಸಂಗೀತ ಹೇಳಿಕೊಡಲಾಗುವದು.

೫)ತಿಂಗಳಿಗೊಮ್ಮೆ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ನಡೆಸಿಕೊಡುತ್ತೇವೆ.

೬) ಅಗಸ್ಟ ೧ ರಂದು “ವ್ಯಸನ ಮುಕ್ತ” ದಿನಾಚರಣೆ ದಿನ “ಮಹಾಂತ ಜೋಳಿಗೆ”ಹಿಡಿದು ದುಶ್ಚಟ ಬೇಡುವ ಕಾರ್ಯಕ್ರಮವನ್ನು ನಗರದ ವಿವಿಧ ಬಡಾವಣೆಗಳಲ್ಲಿ ಮಾಡುತ್ತೇವೆ.

೭)ಪೂಜ್ಯ ಡಾ. ಮಹಾಂತಪ್ಪಗಳ ಜೀವನ ಸಂದೇಶ ಕುರಿತು “ಮಹಾಂತಪ್ಪನ ಕ್ರಾಂತಿಯ ಕಿರಣಗಳು” ಎನ್ನುವ ಕಿರು ರೂಪಕ ಮಾಡಿ ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಪೂಜ್ಯ ಡಾ. ಮಹಾಂತಪ್ಪಗಳ ಬಸವತತ್ವದ ನೆರಳಲ್ಲಿ ಇರುವ ನಾವು ಹೀಗೆ ಹತ್ತು ಹಲವು ಬಗೆಯ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಸಂಘಟನೆಗಳಲ್ಲಿ ತೊಡಗಿ ತಾಯಂದಿರು ಮನೆಯಿಂದ ಹೊರಗೆ ಬಂದು ಕ್ರೀಯಾಶೀಲರಾಗಿ ಸಂಸ್ಕಾರ ಪಡೆದು ಶರಣ ಶರಣೆಯರ ವಚನಗಳ ತತ್ವ ಆದರ್ಶಗಳನ್ನು ಬದುಕಿನಲ್ಲಿ ಮೈಗೂಡಿಸಿಕೊಂಡು ಸಮಾಜದ ಸೇವೆಯಲ್ಲಿ ಬಸವತತ್ವದ ದಾರಿಯಲ್ಲಿ ಮುಂದೆ ಸಾಗಬೇಕು ಎನ್ನುವದೇ ಚಿತ್ತರಗಿ ಶ್ರೀ ವಿಜಯ ಮಹಾಂತೇಶ ಸಂಸ್ಥಾನ ಮಠ ಇಳಕಲ್ ಅಕ್ಕನ ಬಳಗದ ಮಹದಾಸೆಯಾಗಿದೆ.

ಇಲಕಲ್ಲನ ಅಕ್ಕನ ಬಳಗ ಬಹಳಷ್ಟು ಕ್ರೀಯಾಶಿಲವಾಗಿದೆ. ರಾಜ್ಯದಲ್ಲಿರುವ ಅಕ್ಕ ನ ಬಳಗಗಳೆಲ್ಲ ಇಲಕಲ್ಲ ಅಕ್ಕನ ಬಳಗದಂತೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕ ವಾಗಿ, ಶೈಕ್ಷಣಿಕವಾಗಿ, ವಿಶೇಷವಾಗಿ ಆಧ್ಯಾತ್ಮಿಕ ವಾಗಿ ಗಟ್ಟಿಗೊಳ್ಳಲಿ ಎಂಬ ಸದಾಶಯ  e-ಸುದ್ದಿ ತಂಡದ್ದಾಗಿದೆ.

Don`t copy text!