ನಾ ಓದಿದ ಪುಸ್ತಕ- ಪುಸ್ತಕ ಪರಿಚಯ
” ಬದುಕಿನ ಬಣ್ಣಗಳು “
(ಕವನ ಸಂಕಲನ)
ಕೃತಿಕಾರರು: ವೆಂಕಟೇಶ ಚಾಗಿ
” ಚಾಗಿಯವರ ಮಾಗಿದ ಕವಿತೆಗಳ ಸುತ್ತ ಒಂದು ಅವಲೋಕನ ”
” ಬದುಕಿನ ಬಣ್ಣಗಳತ್ತ ಕಣ್ಣಾಯಿಸಿದ ಕವಿತೆಗಳು ”
ಹೌದು, ಬದುಕು ಮತ್ತು ಬಣ್ಣ ವಿಭಿನ್ನ ದೃಷ್ಟಿಕೋನದ ಹಲವು ಆಯಾಮದ, ಬದುಕಿನ ಉದ್ದಕ್ಕೂ ವಿವಿಧ ಅಂತರಂಗದ ಬಣ್ಣವನ್ನು ತೋರುವ ಮನುಜನ ರಂಗು ರಂಗಿನ ಸ್ವಭಾವಗಳನ್ನು ಭಾವಪರವಶವಾಗಿ ಬಿತ್ತರಿಸಿದಂತಹ ಕವಿತೆಗಳ ಸಂಕಲನ
” ಬದುಕಿನ ಬಣ್ಣಗಳು “.
ಈ ಕೃತಿಗೆ ಶ್ರೀ ಡಾ ಶಶಿಕಾಂತ ಕಾಡ್ಲೂರರ ಅರ್ಥಪೂರ್ಣ ಮುನ್ನುಡಿಯ ಬೆಳಗಿದೆ.
ಶ್ರೀ ಗುಂಡುರಾವ್ ದೇಸಾಯಿಯವರ ಅಚ್ಚುಕಟ್ಟಾದ ಮಹತ್ವದ ಬೆನ್ನುಡಿಯ ಭಾವ ಮೊಳಗಿದೆ. ಇನ್ನೇನು ಬೇಕು ….? ಕವಿತೆಗಳ ಅಂತರಂಗಕ್ಕೆ ಈ ಎರಡು ಮುದ್ರೆ ಬಿದ್ದರೆ ಅಲ್ಲಿಗೆ ಆ ಕೃತಿ ಸುಭದ್ರವಾದಂತೆ. ಅಂತೆಯೇ ಚಾಗಿಯವರ ಕವಿತೆಗಳು ಬದುಕಿಗೆ ಭದ್ರತೆಯನ್ನು ಕಲಿಸುತ್ತವೆ. ಈ ಕವಿತೆಗಳು ಕೇವಲ ಸುಂದರವಾಗಿಲ್ಲ, ಸೊಗಸಾಗಿಯೂ ಇಲ್ಲ. ಆದರೆ ಸಂದರ್ಭೋಚಿತವಾಗಿಯೂ, ವರ್ತಮಾನದ ಮನುಷ್ಯನ ಬಣ್ಣದ ಬದುಕಿಗೆ ಕನ್ನಡಿಯಾಗಿಯೂ, ಸಂಪದ್ಭರಿತ ಪದಗಳೊಂದಿಗೆ ರಂಜನೀಯವಾಗಿವೆ.
ಮೇಲ್ನೋಟಕ್ಕೆ, ಓದುಬೇಕಲ್ವಾ ? ಎಂದು ಪುಸ್ತಕ ಹಿಡಿದವರಿಗೆ ಕೇವಲ ವಾಕ್ಯಗಳಾಗಿ ಓದಿಸಿಕೊಂಡು ಹೋಗುತ್ತದೆ. ಆದರೆ, ಅರಿಯಬೇಕು, ಕಾವ್ಯವನ್ನು ಸವಿಯಬೇಕು ಎಂದು ಕುಳಿತರೆ… ಬದುಕಿನ ಬಣ್ಣಗಳನ್ನು ರಂಗಾಗಿಯೇ ತರೆದಿಡುತ್ತಾರೆ ಕವಿ, ಶಿಕ್ಷಕ ಮಿತ್ರರಾದ
ಶ್ರೀ ವೆಂಕಟೇಶ ಚಾಗಿಯವರು.
ಕವಿ ವೆಂಕಟೇಶ ಚಾಗಿಯವರು, ಶಿಕ್ಷಕರಾಗಿ ಪ್ರವೃತ್ತಿಯಿಂದ ನಿರಂತರ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅನೇಕ ಪತ್ರಿಕೆಗಳಲ್ಲಿ ಅವರ ಕಥೆ, ಕವನ, ಲೇಖನಗಳು ವಾರಕ್ಕೊಂದಾದರೂ ನಮ್ಮ ಓದಿಗೆ ಸಿಗುತ್ತಲೇ ಇರುತ್ತವೆ. ಹಾಗೆ ಪ್ರಕಟಗೊಂಡ ಮತ್ತು ಪ್ರಕೊಟಗೊಳಿಸದೆ ತಮ್ಮ ದಾಖಲೆಯಲ್ಲಿರುವ ಕವಿತೆಗಳನ್ನು ಒಟ್ಟುಗೂಡಿಸಿ ” ಬದುಕಿನ ಬಣ್ಣಗಳು ” ಉತ್ತಮ ಶೀರ್ಷಿಕೇಯೊಂದಿಗೆ ಕವನ ಸಂಕಲನವನ್ನು ಓದುಗರಿಗೆ ನೀಡಿದ್ದಾರೆ. ಒಂದು ಕೃತಿ ಲೋಕಾರ್ಪಣೆಗೊಂಡಿದೆ ಎಂದರೆ ಅದರ ಕರ್ತೃವಿಗೆ ತೃಪ್ತಿಯಾಗುವೂದಿಲ್ಲ. ಯಾವಾಗ ಆ ಹೊತ್ತಿಗೆ ಓದುಗನೆದೆಯಲ್ಲಿ ನಿಲ್ಲುತ್ತದೆ, ಅದರಲ್ಲಿನ ಭಾವಪೂರ್ಣ ಅಕ್ಷರಗಳಿಗೆ ಯಾವಾಗ ಓದುಗ ಮಾತಾಗುತ್ತಾನೆ ಆಗ, ಆ ಕ್ಷಣವೇ ಸಂಕಲನದ ಕರ್ತೃಗೆ ಪರಮತೃಪ್ತಿಯಾಗುತ್ತದೆ. ಆ ನಿಟ್ಟಿನಲ್ಲಿ ಚಾಗಿಯವರಿಗೆ ಅವರ ಕವಿತೆ ಬಗೆಗೆ ಅಭಿಮಾನ ತಂದರೆ ನನ್ನ ಓದು ಮತ್ತು ಅನಿಸಿಕೆಯ ಈ ಬರಹ ಸಾರ್ಥಕ ಎನಿಸುತ್ತದೆ. ಹಾಗೆಯೇ ಓದುಗ ಕೇವಲ ಹೊಗಳಿಕೆಯನ್ನು ಪ್ರಸಾರ ಮಾಡಿದರೆ ಸಾಲದು, ಬರಹಗಾರ ಉತ್ತಮಪಡಿಸಿಕೊಳ್ಳಬೇಕಾದ ಅಂಶಗಳಿದ್ದರೆ ನಿಸ್ಸಂಕೋಚವಾಗಿ ಅಭಿವ್ಯಕ್ತಪಡಿಸಬೇಕು, ಅಂತೆಯೇ ಕೃತಿ ಕರ್ತೃವೂ ಅದನ್ನು ಧನಾತ್ಮಕವಾಗಿ ಸ್ವೀಕರಿಸುವ ಮನಸನ್ನು ಬೆಳೆಸಿಕೊಳ್ಳಬೇಕು. ಈ ಎರಡೂ ಆಯಾಮಗಳಲ್ಲಿ ನಾನು ಕೃತಿಯ ಕುರಿತಾಗಿ ನೇರ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ. ಹಾಗೆ, ” ಬದಕಿನ ಬಣ್ಣಗಳು ” ಕೃತಿಯಲ್ಲಿನ ಬಹಳಷ್ಟು ಕವಿತೆಗಳು ಕಾವ್ಯಾತ್ಮಕವಾಗಿದ್ದು ನಮ್ಮ ಬದುಕಿಗೆ ಸಾಮ್ಯವಾಗಿವೆ. ನಿತ್ಯದ ಅನುಭವಗಳ ಸುತ್ತ ನಮ್ಮನ್ನು ಸುತ್ತಿಸುತ್ತವೆ. ಹೇಗೆ ? ಎಂಬುದಕ್ಕೆ ಒಂದಷ್ಟು ಕವಿತೆಗಳಲ್ಲಿನ ಭಾವವನ್ನು ಅನುಭಾವಿಸಿದರೆ ಅರ್ಥವಾಗುತ್ತದೆ. ಬದುಕಿನುದ್ದಕ್ಕೂ ಆದ ಅನುಭವಗಳನ್ನು ಸವಿದು ನಮಗೆ ಸವಿಯಲು ಹೊರ ಬಂದ ಸೂಕ್ಷ್ಮ ಅನುಭವದ ಕವಿತೆಗಳಲ್ಲಿ ಕೆಲವೋಂದಷ್ಟನ್ನು ತಮ್ಮ ಮುಂದೆ ನನ್ನ ವಿವೇಚನೆಗೆ ದಕ್ಕಿದಷ್ಟನ್ನು ಅಕ್ಷರರೂಪದಲ್ಲಿ ಬಿತ್ತರಿಸುತ್ತಿದ್ದೇನೆ. ಒಪ್ಪು ತಪ್ಪುಗಳಿಗೆ ಮಾರ್ಗದರ್ಶಿಸುವಿರಿ ಎಂಬ ಭರವಸೆಯೊಂದಿಗೆ.
* ಕವಿ ಚಾಗಿಯವರು, ತಮ್ಮ ಮೊದಲ ಕವಿತೆಯಲ್ಲೇ ಮಾನವನ ನಿಜ ಬಣ್ಣವನ್ನು ತೋರಿಸಿ ಬಿಡುತ್ತಾರೆ. ಸುಳ್ಳು ಎಂಬುದೇ ಹಾಗೆ, ಸತ್ಯದ ಮೇಲೆ ಪಠಾರನೆ ಹೊಡೆದು ಮೇಲ್ದರ್ಜೆಯಲ್ಲಿ ನಿಂತು ಗೆದ್ದುಬಿಡುತ್ತದೆ. ಆಶ್ವಾಸನೆಯೆಂಬ ಬೇಡದ ಸುಳ್ಳುಗಳಿಂದ ಮೊದಲ್ಗೊಂಡು ಆಪತ್ತಿನಿಂದ ಹೊರಬರುವುದಕ್ಕಾಗಿ ಅನಿವಾರ್ಯಗಿ ಬೇಕಾದ ಸುಳ್ಳುಗಳವರೆಗೆ ನಾವು ಸುಳ್ಳಿನ ರಸ್ತೆಯಲ್ಲೇ ಪ್ರಯಾಣಿಸುತ್ತೇವೆ…. ಎಲ್ಲರೂ ಅವರವರ ಸ್ಥಾನಮಾನಕ್ಕೆ ತಕ್ಕಂತೆ ಸುಳ್ಳು ಹೇಳುತ್ತಾರೆ ಎಂದು ತೋರಿಸಿಕೊಡುತ್ತಾರೆ … ಅದಕ್ಕೆ ಕವಿಗಳು…
” ಬಡವರ ಬಡತನದ ಸುಳ್ಳು….,
ಸಿರಿವಂತರ ಸಿರಿವಂತಿಕೆಯ ಸುಳ್ಳು….,
ಅವರು ನಂಬಿದ ಸುಳ್ಳು ಅವರಿಗೆ ಇಷ್ಟ…
ಇವರು ನಂಬಿದ ಸುಳ್ಳು ಇವರಿಗೆ ಇಷ್ಟ…. “
ಎಂದು, ಸುಳ್ಳು ಜಗದ ತುಂಬಾ ಹರಡಿ ಸತ್ಯವನ್ನು ಮರೆಮಾಚಿದೆ ಎಂಬ ಖೇದವನ್ನು ಉತ್ತಮವಾಗಿ
” ಸತ್ಯ-ಸುಳ್ಳು ” ಕವಿತೆಯಲ್ಲಿ ಕಟ್ಟಿಕೊಡುತ್ತಾರೆ.
* ಮನುಷ್ಯ ತಾನು ಕಂಡ ಅನುಭವಾಗಳನ್ನು ಭಾವಪೂರ್ಣವಾಗಿ ಅಭಿವ್ಯಕ್ತಿಸುವುದನ್ನು ತಾವೆಲ್ಲ ಕೇಳಿರುತ್ತೀರಿ, ಓದಿರುತ್ತೀರಿ. ಆದರೆ ಮನುಷ್ಯನಾಡಿಸಿದಂತೆ ಆಡುವ ಅವನ
” ಕೈಗೊಂಬೆ “ಯಾಗಿ ಅವನ ಅಣತಿಯಂತೆ ವರ್ತಿಸುವ ಭಾವನೆಗಳೇ ಇಲ್ಲದ ನಿರ್ಜೀವಿ ತನ್ನಿಂದಾದ ಅನಾಹುತಗಳನ್ನು ಹೇಳಲ್ಹೊರಟರೆ ಹೇಗೆ? ಅಂತಹುದೇ ಅನುಭವದ ಕವಿತೆಯನ್ನು ಚಾಗಿಯವರು ಅತ್ಯಂತ ಸೂಕ್ಷ್ಮವಾಗಿ ಬರೆದು, ಕಾವ್ಯಕ್ಕೂ ಕಾವ್ಯ ವಸ್ತು(ಕತ್ತಿ)ವಿಗೂ ಜೀವ ತುಂಬಿದ್ದಾರೆ.
” ಕತ್ತಿಗೂ ಗೊತ್ತು
ಕತ್ತು ಕತ್ತರಿಸುವುದು
ತನ್ನ ಕೆಲಸವೆಂದು;
ತನ್ನ ಹಿಡಿದ ಕೈಗಳ
ಕೈಗೊಂಬೆ ತಾನೆಂದು….
ಪಾಪ ಪುಣ್ಯಗಳ ಲೆಕ್ಕ
ಗೊತ್ತಿಲ್ಲದಷ್ಟು ಅನಕ್ಷರಸ್ಥ,
ಆಡಿಸುವಾತನಿಗೆ
ತಾನೆಂದೂ ದತ್ತು
ನೆತ್ತರ ಮರೆತರೆ
ಜಗವೇ ತನ್ನ ಮರೆತಂತೆ
ಸುಮ್ಮನಿರೆ ಕತ್ತಿಗೂ ಕೊನೆ
ತುಕ್ಕೂ ಹಿಡಿಯಮತ್ತೆ, ಮಣ್ಣಲಿ ಮಣ್ಣಾಗುತ…|| “
ಎಂದು ಕತ್ತಿಯ ಸ್ವಗತವನ್ನು ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.
* ಮನುಷ್ಯನ ದುರಾಸೆಗೋ, ಸೋಮಾರಿತನಕ್ಕೋ, ಅಥವಾ ಪ್ರಕೃತಿ ಆಡುವ ಜೂಜಾಟಕ್ಕೋ ಇಂದು ಬೆಳೆಯುವ ಭೂಮಿಯೆಲ್ಲ ಪ್ಲಾಟಾಗುತ್ತಿವೆ. ಮನುಷ್ಯ ಅದರಲ್ಲೇ ತನ್ನ ಸಾಧನೆಯನ್ನು ಕಂಡುಕೊಳ್ಳುತ್ತಿರುವನೇನೋ ಎಂಬಂತೆ ಊರು ತನ್ನ
” ಗಡಿ ” ಮೀರಿ ಬೆಳೆಯುತ್ತಿದೆ. ಅನ್ನ ನೀಡುವ ಫಲವತ್ತಾದ ನೆಲದಲ್ಲಿ ಈಗ ದೊಡ್ಡ ದೊಡ್ಡ ಮನೆಗಳಾಗಿವೆ ಎಂಬುದನ್ನು ಕವಿಗಳು ಮಾರ್ಮಿಕವಾಗಿ ಹೇಳುತ್ತಾ; ಹಣದ ಹಿಂದೆ ಬೇನ್ಹತ್ತಿದಾಗ ಮುಂದೊಂದು ದಿನ ಆಗಬಹುದಾದ ಸರ್ವನಾಶದ ವಾಸನೆ ಈಗ ಬರುತ್ತಿದೆ ಎಂದು ಈ ರೀತಿಯಾಗಿ ಹೇಳುತ್ತಾರೆ.
” ದೊಡ್ಡ ಮನೆಗಳಲ್ಲಿ
ಸಣ್ಣ ಸಣ್ಣ ಮನಸುಗಳು
ಅನಾಥ ಭಾವನೆಯು ಬೆಳೆಯುತಿವೆ
ಬೇರೇನು ಬೆಳೆಯದೆ
ಅದಾವುದೋ ದೊಡ್ಡ ಮನೆಗಳಲ್ಲಿ
ಹೆಣಗಳು ಸತ್ತು ಬಿದ್ದಿವೆ
ವಯಸ್ಸು ಮೀರಿ,
ಸಾವಿರಾರು ಕೆಂಪು ನೋಟುಗಳು
ಗಹಗಹಿಸಿ ನಗುತ್ತಿರುವವು
ಅಳುವವರಿಲ್ಲದೆ
ದೊಡ್ಡ ಮನೆಯ ತಿಜೋರಿಯಲ್ಲಿ ” .
* ಇಂತಹ ಮಾನವನ ದುರಾಸೆಯನ್ನೇ ತೋರಿಸುವ ಮತ್ತೊಂದು ಕವಿತೆ ” ಕಟ್ಟಲಾಗಿದೆ ಮನೆ “, ಕೆರೆ ಹಳ್ಳ ಕೊಳ್ಳಗಳನ್ನು ಒತ್ತುವರಿ ಮಾಡಿ, ಗಿಡ ಮರಗಳಿಗೆಲ್ಲ ಕೊಡಲಿ ರುಚಿ ತೋರಿಸಿ, ಕಾಡು ಪ್ರಾಣಿಗಳ ನೆಲೆಯನ್ನು ಕಿತ್ತಿಕೊಂಡು, ನೋಡುವೆನೆಂದರೂ ಹಿಡಿ ಮಣ್ಣು ಕಾಣಿಸದಂತೆ ಮನೆ ಕಟ್ಟಿ, ಕಾಂಕ್ರೀಟ್ ಹಾಸಿ… ಒಂದೇ, ಎರಡೇ ಮಾನವನ ದುರಾಸೆಗೆ ಬಲಿಯಾದದ್ದು! ಎಂಬುದನ್ನು ಮಾರ್ಮಿಕವಾಗಿ ಕವಿಗಳು ಬಲು ಖೇದದಿಂದಲೇ ವ್ಯಕ್ತಪಡಿಸುತ್ತಾರೆ. ಮತ್ತೊಂದು ಕವಿತೆಯಲ್ಲೂ ಇಂತಹುದೇ ಭಾವವನ್ನು ಹೊರಹಾಕುತ್ತ; ಮಾನವನ ಮೌಢ್ಯತೆ, ಮಾನವೀಯ ಮೌಲ್ಯ ಮರೆತು, ಅಹಂಕಾರದಿ ಸಾಗುವ ಪರಿಯನ್ನು, ಅವನ ಮುಟ್ಠಾಳತನವನ್ನು ” ಕೊಂಡುಬಿಡಿ ಸೈಟು ” ಕವನದಲ್ಲಿ ತೋರಿಸಿಕೊಡುತ್ತಾರೆ. ಈ ಕೃತಿಯ ಮೌಲ್ಯವನ್ನು ಹೆಚ್ಚಿಸುವಲ್ಲಿ ಈ ಕವಿತೆಯದೂ ಒಂದು ಪಾಲಿದೆ ಎಂದರೆ ತಪ್ಪಾಗುವುದಿಲ್ಲ.
” ಒಂದೇ ಮನೆಯಲ್ಲಿ
ತಂದೆ ತಾಯಿ ಜೊತೆಗೆ
ಅಣ್ಣ ತಮ್ಮ
ಎತ್ತು ನಾಯಿಗಳ ಕೂಡಿ,
ಯಾಕೆ ಪರದಾಡುವಿರಿ
ಅವಿಭಕ್ತ ಕುಟುಂಬದಲ್ಲಿ..? “
ಎಂದು ಕಪಾಳಕ್ಕೇ ಹೊಡದಂತೆ ಬರೆಯುತ್ತಾರೆ. ಬೆಳೆಯುವ ಭೂಮಿಯನ್ನೆಲ್ಲ ಸೈಟು ಮಾಡಿ ಮಾರುವವರಿಗೆ ಈ ಕವಿತೆ ಓದಿಸಲೇ ಬೇಕೆನ್ನುವಂತಿದೆ.
“ಒಂದೇ ಸಾಕೆ?
ನೂರಾರು ಸೈಟುಗಳಲಿ
ಮನೆಕಟ್ಟಿ
ಬದುಕಿ ಕೊನೆಗೆ ಒಂಟಿಯಾಗಿ..! “
ನೋಡಿ, ಎಷ್ಟೆಲ್ಲ ಆಸ್ತಿ ಮಾಡಿದರೂ ನತದೃಷ್ಟ ಮಾನವ ಕೊನೆಗೆ ಒಂಟಿಯಾಗೇ ಬದುಕಬೇಕಾಗುತ್ತದೆ ಎಂಬ ಸತ್ಯದ ದರ್ಶನವನ್ನು ” ಕೊಂಡುಬಿಡಿ ಸೈಟು ” ಕವಿತೆಯಲ್ಲಿ ಮಾಡಿಸುತ್ತಾರೆ.
* ‘ಬರ’ ಎಂಬ ಪದವೇ ನಡುಕವನ್ನು ಹುಟ್ಟಿಸುವಂತಹದ್ದು. ಬರಗಾಲ ಬಂದಿತೆಂದರೆ ಸಸ್ಯಹಾರಿ ಪ್ರಾಣಿಗಳಾದಿಯಾಗಿ ರೈತರಾದಿಯಾಗಿ ಎಲ್ಲ ವರ್ಗದವರೂ ಎದುರಿಸುವ ಸಮಸ್ಯೆ ಭೀಕರವೆಂಬುದು ನಿಜ. ನಮ್ಮ ಕವಿಮಿತ್ರರು ಈ ‘ಬರ’ ವನ್ನೇ ವಸ್ತುವಾಗಿಸಿಕೊಂಡು ಬರದ ಬಹುರೂಪಗಳನ್ನು ಬಿಚ್ತಿಡುತ್ತಾರೆ. ಸರಳವಾಗಿಯೇ ” ನೀನೇಕೆ ಬಂದೆ ” ಕವಿತೆಯ ಮೂಲಕ, ಓದಗನಿಗೆ ಬರದ ಛಾಯೆಯನ್ನು ತಟ್ಟಿಸುತ್ತಾರೆ.
” ಹಸಿದ ಕಂಗಳಲಿ
ಅಕ್ಷರಗಳ ಬರ!
ಧರೆಯೊಡಲಲಿ
ಅವಿತಿರುವ ಜೀವಕ್ಕೆ
ಜೀವಜಲದ ಬರ!
ಕುಬ್ಜ ಮನಸುಗಳ
ಸುತ್ತ ಸುತ್ತಿರುವ
ಸ್ವಾರ್ಥ ಪ್ರೇತದ ನಡುವೆ
ಪ್ರೀತಿ ವಾತ್ಸಲ್ಯದ ಬರ!
ಹೀಗೆ,
ಜ್ಞಾನಕ್ಕೆ-ಸುಜ್ಞಾನ,
ಬದುಕಿಗೆ-ಸಮಯ,
ಬೇಡಿಕೆಗೆ-ಸಂತೃಪ್ತಿ,
ಜೀವನದ ಚಿಗುರಿನಲಿ
ಅವಳ ಇರುವಿಕೆಯ ಬರ! ಹೀಗೆ ವಿಭಿನ್ನ ಆಲೋಚನೆಗಳಿಂದ ಬರ ನೀ ಬರಬಾರದಿತ್ತು … ಎಂದು ಕವಿಗಳು ಬರದ ನೋವನ್ನು ಮತ್ತು ಬದುಕಿನಲ್ಲಿ ಬರಬಾರದ ಬರಗಳನ್ನು ವ್ಯಕ್ತಪಡಿಸಿದ್ದು ಓದುಗನಿಗೆ ಮುಟ್ಟುತ್ತದೆ.
* ಕಾವ್ಯಕನ್ನಿಕೆ ಮನದಲ್ಲಿ ಕವಿತಾಗಲೇ ನಾ ಕವಿ ಆದದ್ದು. ಕವಿತೆಗಳು ಚಿಗುರಿ ಕಾವ್ಯದ ಹಸಿರು ಪಸರಿಸಿದ್ದು ಎಂದು ಕವಿ, ” ಕವಿ’ತೆ ” ಯಲ್ಲಿ ವಿಶೇಷವಾಗಿಯೇ ಸೋನೆ ಮಳೆಗೆ ಹೋಲಿಸಿ ಹದವಾಗಿ, “ನಾ ಕವಿಯಲ್ಲ, ಕವಿತದ್ದು ಅವಳು” ಎಂದು ಒಪ್ಪಿಸುತ್ತಾರೆ.
* ಸಮಾಜದಲ್ಲಿ ಪೈಶಾಚಿಕ ಕೃತ್ಯಗಳು ನಿರಂತರ ಸಾಗುತ್ತಿರುವುದು ಅಸಹನೀಯ ಸ್ಥಿತಿಯಾಗಿದೆ. ಅದರಲ್ಲೂ ಹದಿಹರೆಯದ ವಯಸ್ಸಿನವರ ಮೇಲೆ ಜರಗುವ ಅತ್ಯಾಚಾರ ಪ್ರಕರಣಗಳಂತೂ ಮೈ ಮನಗಳಿಗೆ ಮುಳ್ಳು ಚುಚ್ಚಿದಂತಾಗುತ್ತವೆ. ಕವಿ ಮನಸು ಕೂಡ ಇಂತಹದ್ದಕ್ಕೆ ಮರಗುತ್ತದೆಂಬುದಕ್ಕೆ ” ಶೂನ್ಯ ” ಕವಿತೆ ಸಾಕ್ಷಿಯಾಗುತ್ತದೆ.
” ಅನಾಗರಿಕತೆಯ ಕಾಮದಾಹಕೆ
ಕೊನೆಯಲ್ಲಿ ಉಳಿಯುವುದು ಬರಿ ಶೂನ್ಯ ”
ಎಂದು ಪುಟ್ಟ ಕಣ್ಣು, ಪಾದಗಳ ಭವಿಷ್ಯದ ಕನಸನ್ನು ಸುಕ್ಕುಗಟ್ಟಿಸಿದ ಕೃತ್ಯದ ಕುರಿತಾಗಿ ಕವಿ ಮರಗುತ್ತಾರೆ. ಜೊತೆಗೆ ಓದಗನೆದೆಯಲ್ಲಿ ತಲ್ಲಣ ಹುಟ್ಟಿಸುತ್ತಾರೆ.
* ಮಕ್ಕಳೊಂದಿಗೆ ಮಕ್ಕಳಾಗುವ ಅವರಲ್ಲೇ ಲೀನವಾಗುವ ತಂದೆಯ ಖುಷಿಯನ್ನು ಹೊರಗೆಡುವ ಕವಿತೆ ” ಮಗುವಾಗುವೆ ” ಸೊಗಸಾಗಿದೆ.
* ಭರವಸೆಯೆಂಬುದು ಪ್ರತಿಯೊಂದು ಜೀವಿಗೂ ಬೇಕು. ಕಾನನದಲ್ಲಿ, ಬೆಟ್ಟದಲ್ಲಿ ಹುಟ್ಟುವ ಸಸ್ಯ ಮತ್ತು ಪ್ರಾಣಿ ಜೀವಿಗಳಿಗೆಲ್ಲಿರುತ್ತದೆ ತಾವು ಬದುಕುಳಿಯುವ ಭರವಸೆ? ಯಾವ ಧೈರ್ಯದಿಂದ ಬದುಕನ್ನು ಕಟ್ಟಿಕೊಳ್ಳುತ್ತವೆ? ಎಂಬದಕ್ಕೆ ಕವಿಗಳು ” ಹೂ ಅರಳಿ ” ಕವಿತೆಯಲ್ಲಿ ಹೀಗೆ ಉತ್ತರಕೊಡುತ್ತಾರೆ.
” ಯಾರಿಲ್ಲ ಎನಗಿಲ್ಲ
ಎನ್ನುತಲಿ ಮಡಿದಿದ್ದರೆ
ತಲೆಯೆತ್ತಿ ಜಗವನ್ನು
ನೋಡಿ ನಗುವಾಸೆ
ಅಂದೆ ಕೊನೆಯಾಗುತ್ತಿತ್ತು….”
ಆದರೆ ಅಂತಹ ಋಣಾತ್ಮಕ ಚಿಂತನೆಯಿಲ್ಲದೆ ಕಲ್ಲು ಬಂಡೆಗಳಲ್ಲಿರುವ ತುಸು ಮಣ್ಣಲ್ಲೇ ಚಿಗುರಿ ಅರಳಿದ ಹೂವಿಗೆ, ನಂತರದಲ್ಲಿ ದುಂಬಿ ಜೊತೆಯಾದದ್ದನ್ನು ಕವಿಗಳು ಭಾವಪೂರ್ಣವಾಗಿ ಮನಕ್ಕೆ ಮುಟ್ಟಿಸುತ್ತಾರೆ.
* ” ಅವ್ವನ ಸೀರಿ ” ಕವಿತೆಯಲ್ಲಿ ಮಗುವಿನ ಬೆಳವಣಿಗೆಯ ಕುರಿತಾಗಿ, ಆ ಸೀರಿಯ ಬಹುಮುಖ ಬಳಕೆಯ ಕುರಿತಾಗಿ ಉತ್ತಮ ಪದಗಳೊಂದಿಗೆ ಅಭಿವ್ಯಕ್ತಿಸುತ್ತಾರೆ. ಅಂತೆಯೇ ” ನನ್ನವ್ವ ” ಕವಿತೆಯಲ್ಲಿ, ವರ ಬೇಡಿ ಪಡೆದದ್ದು ನನ್ನ, ನನ್ನವ್ವ, ಆದರೆ ಆ ದೇವ್ರು ನನಗೆ ಕೊಟ್ಟ ವರ ” ನನ್ನವ್ವ” ಎಂದು, ತಾಯಿ ಅವಳ ಮಮತೆ, ತ್ಯಾಗವನ್ನು ಎಷ್ಟು ವರ್ಣಿಸಿದರೂ ಸಾಲದು, ಎಂಬುದನ್ನು ಅವಿಸ್ಮರಣೀಯ ಎಂಬಂತೆ ಚಿತ್ರಿಸಿದ್ದಾರೆ.
* ” ಮನದ ಇಂಗಿತ ” ವನ್ನು ಎಷ್ಟು ವ್ಯಕ್ತಪಡಿಸಲು ಸಾಧ್ಯವೋ, ಅಷ್ಟೂ ಭಾವಗಳಿಗೆ ಇಂಬು ಕೊಟ್ಟು, ಅನೇಕ ರೂಪ ಉಪಮೆಗಳೊಂದಿಗೆ ಸಂವೃದ್ಧವಾಗಿ
ಮೂಡಿಬಂದ ಕವಿತೆ ಕವಿಯ ” ಮನದ ಇಂಗಿತ “. ಓದುಗನ ಇಂಗಿತವೂ ಹೌದು ಎಂದನಿಸದೇ ಇರಲಾರದು.
* ಭಾರತೀಯ ಪ್ರಕೃತಿಯಲ್ಲಿ ವಿಶೇಷವಾದ ಮಾಸವೆಂದರೆ ಅದು ಶ್ರಾವಣ ಮಾಸ. ವಾತಾವರಣದಲ್ಲಿನ ಬದಲಾವಣೆ, ಸಾಂಸ್ಕೃತಿಕ ಹಬ್ಬಗಳ ಪ್ರಾರಂಭ, ಪ್ರತೀ ಮನೆಗಳೂ ಸಂಭ್ರಮದ ತಾಣಗಳಾಗುತ್ತವೆ. ವಿಶೇಷವಾಗಿ ಅಣ್ಣ ತಂಗಿಯರ ಬಾಂಧವ್ಯದ ಬೆಸುಗೆಗೂ ಈ ಮಾಸ ಕಾರಣ ಎಂಬುದು ಮರೆಯುವಂತಿಲ್ಲ. ಅಂತಹ ಶ್ರಾವಣದ ಕುರಿತಾಗಿ ಕವಿಗಳು…. ಹೀಗೆ ಹೇಳುತ್ತಾರೆ..
” ಮಣ್ಣ ಗರ್ಭದಲಿ
ಅವಿತಿರ್ಪ ಜಿವಕ್ಕೆ
ಜೀವ ತುಂಬುತಲಿ
ಮರಳಿ ಬಂದಿಹುದು ಶ್ರಾವಣ
ಹಕ್ಕಿ ಹಾಡಿಗೆ ಮಧುರ ಧ್ವನಿಯ ತುಂಬುತಲಿ
ಹಸಿದ ಒಡಲಿಗೆ ಅನ್ನದೋಕುಳಿ
ಬಾನು ಕಡಲಿಗೆ ಮತ್ತೆ ಸವಕಳಿ
ಹಸಿರು ಚೆಲ್ಲಿದೆ ಶ್ರಾವಣ
ಜಗದ ಸಂಭ್ರಮಕೆ ಕಾರಣ “
ಎಂದು ರಂಜನೀಯವಾಗಿ ಬರೆದದ್ದು ಓದುಗನಿಗೆ ಆನಂದ ಉಂಟುಮಾಡುತ್ತದೆ.
” ಅತ್ಯಂತ ಅರ್ಥಪೂರ್ಣ ಮತ್ತು ಜೀವನವದ ಆಳಕ್ಕಿಳಿದು ಅದರ ಸಿಹಿ ಕಹಿಯನ್ನ ಅನ್ವೇಷಿಸಿ ಬರೆದ ಕವಿತೆ ” ಜೀವನ ಮಂಥನ “.
” ಮೂರ್ತ ಅಮೂರ್ತಗಳ ಪರಿಮಿತಿಯೊಳಗೆ
ಯೋಚನಾ ಲಹರಿಯ ಸಂತಾನ
ಅರಳುವ ಹೂವಿನ ತಾಳ್ಮೆ ಶಿಖರಕೆ
ಬದುಕಿನ ಸ್ಪಷ್ಟತೆಯ ಬಹುಮಾನ “
ಮನುಷ್ಯನು ನಿಜವಾಗಲೂ ಯೋಚನಾಶೀಲನಾಗಿರುತ್ತಾನೆ. ಅವನ ಆಲೋಚನೆಗಳ ಲಹರಿಯಿಂದಲೇ ಮೌಲ್ಯಗಳ ಸಂತಾನವಾಗುತ್ತದೆ. ಸದಾಲೋಚನೆಯಿದ್ದರೆ ಮತ್ತು ಗುರಿಯೆಡೆಗೆ ಸಾಗಲು ತಾಳ್ಮೆ ಇದ್ದರೆ ಬದುಕು ಸ್ಪಷ್ಟತೆಯೆಂಬ ಬಹುಮಾನ ಖಂಡಿತ ಸಿಗುತ್ತದೆ ಎಂದು ಅದ್ಭುತವಾಗಿ ಹೇಳುತ್ತಾರೆ.
ಜೀವನ ಕಷ್ಟಗಳೆಂಬ ಸಾಗರದಲ್ಲಿ ಮಂಥನವಾದರೆ ಮಾತ್ರ ಸುಖದ ಅಮೃತ ದೊರೆಯುತ್ತದೆ ಎನ್ನುವುದು ಸತ್ಯ ಅಲ್ವಾ.
* ಮಳೆಯೇ ಧರೆಯ ಜೀವಾಳ, ಅಷ್ಟೇ ಅಲ್ಲ. ಧರೆಯ ಸರ್ವ ಅಣುಗಳಿಗೂ ಬಾನಿಂದ ಜಾರುವ ಹನಿಗಳೇ ಉಸಿರನ್ನು ನೀಡುತ್ತವೆ. ಅದನ್ನು ಸೂಚಿಸುವ ಕವಿತೆ
” ಮತ್ತೆ ಮರಳಿತು ” ಸುಂದರವಾಗಿದೆ. ನಮ್ಮ ಭಾವನೆಗಳಿಗೆ ಸಂತೋಷ ತರುತ್ತದೆ.
* ” ದಿಟನಾರು ?” ಒಂದು ಮಾಗಿದ ಮನಸಿನ ಕವಿತೆ, ಮಾಗಿದ ಜ್ಞಾನದ ಕವಿತೆ. ಕವಿಯ ಕಾವ್ಯದ ಮೇಲಿನ ತನ್ಮಯತೆಯನ್ನು ತೋರಿಸುವ ಕವಿತೆ. ದಿಟನಾರು? ಈ ಭುವಿಯೊಳಗೆ ಎಂಬುದೇ ಬದುಕೆಂಬ ಮಾನವನ ಬದುಕು ಬರೀ ಲೊಳಲೊಟ್ಟೆಯೆಂಬುದನ್ನು ತೊರಿಸುತ್ತದೆ.
” ಜನನ ಮರಣದ ನಡುವಿನ ಆ ಆಲಿಂಗನದ
ಸಂತೋಷ ದುಗುಡಗಳ ಹೊಸ ಅನುಭವ ||
ಬಂಧಗಳ ಬಿಂದುಗಳು ಬೆಂದು ನೊಂದರೂ
ಹುಸಿ ಸಂತೋಷಕೆ ಈಗ ಮನದ ವಂದನಾ || “
* ಜೀವನ್ಮರಣದ ನಡುವೆ ಮಾನವ ಅನುಭವಿಸುವ ಸುಖದುಃಖಗಳು ಸತ್ಯ, ಆದರೆ ಅವನಲ್ಲಿ ಸ್ವಾರ್ಥ ಇರುವುದೂ ದಿಟವೆಂದು ಹೇಳುತ್ತಾರೆ. ಬಂಧಗಳ ಬಂಧನವನ್ನು ತೊರಿದು ಪಡುವ ಸಂತೋಷವೆಂಬುದು ಹುಸಿ ಎಂದು ಹೇಳುತ್ತ… ಮುಂದೆ ಕೊನೆಯಲ್ಲಿ
” ಪೊಳ್ಳೆಲ್ಲ ಅಲ್ಲ ಎಲ್ಲ ಹೊನ್ನು ಈ ಜಗದೊಳು
ಬಸಟು ನಾಟಕವ ಮನವೆ ಚಿಗರಲೀ ಬೀಳು || “
ಬದುಕು ಕೇವಲ ನಾಟಕವಲ್ಲ, ಬಂಗಾರದಷ್ಟೇ ಬೆಳೆಯುಳ್ಳದ್ದು, ಪ್ರಧಾನವಾದದ್ದು ಅದಕ್ಕೆ ಬದುಕನ್ನು ಬೀಳಾಗಿಸದೆ ಚಿಗುರಿಬಿಡು ಎಂಬ ಸಂದೇಶವನ್ನು ಅತ್ಯಂತ ಸತ್ವಯುತವಾಗಿ ತಿಳಿಸುತ್ತಾರೆ. ಈ ಕವಿತೆಯನ್ನು ಒಂದೇ ಓದಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗುವುದಿಲ್ಲ. ತನ್ಮಯವಾಗಿ ಅದರ ಭಾವದಲ್ಲಿ ಮುಳುಗಿದಾಗಲೇ ಕಾವ್ಯದ ಗುಟ್ಟು ಮತಿಗೆ ಮನಕ್ಕೆ ತಟ್ಟುತ್ತದೆ.
* ” ಚೌಕದೊಳಗಿನ ಬದುಕು ” ವಾವ್… ಎಂತಹ ಕಾವ್ಯವಸ್ತು ಇದೆ. ಎಲ್ಲರ ಬದುಕಿಗೂ ಒಂದು ಸೌಜನ್ಯದ ಚೌಕಟ್ಟು ಬೇಕೇ ಬೇಕು. ಅದನ್ನು ಮೀರಿದರೆ ಬದುಕು ದುಸ್ತರವೂ ಹೌದು. ದಾರಿ ತಪ್ಪುವುದಂತೂ ನಿಜವೇ! ಒಬ್ಬ ತರಕಾರಿ ವ್ಯಾಪರಿಯೊಂದಿಗೆ ಹೋಲಿಸಿ ಹುಟ್ಟಿದ ಕವಿತೆ ನಮ್ಮ ಕಣ್ಣನ್ನು ತೆರೆಸುತ್ತದೆ ಎಂಬುದನ್ನು ನಾನು ಕವಿತೆಯ ಅಂತ್ಯಕ್ಕೆ ಕಂಡುಕೊಂಡ ಸತ್ಯ. ಅದಕ್ಕೆ ಪೂರಕವಾಗಿ ಈ ಸಾಲುಗಳು ನಿಲ್ಲುತ್ತವೆ…
” ಎನ್ನ ಜೀವನವ ಕೇಳುವವರು ನೀವಲ್ಲ
ಸಿಕ್ಕಷ್ಟು ಚೌಕಾಸಿ ಕಡಿಮೆ ಕೊಳ್ಳಲು ನೀವೆಲ್ಲ ||
ಸುತ್ತ ಚೀಲಗಳಲ್ಲಿ ಉಳಿದಿಹುದು ಸ್ವಲ್ಪ
ಕೈಯೊಡ್ಡಿ ಬೇಡಲ್ಲ ಬದುಕ ಬದುಕಿಸಿ ಸ್ವಲ್ಪ ||
ದಿನಗಳು ಉಳಿದಿಲ್ಲ ನನಗೂ ತರಕಾರಿಗಳಿಗೂ
ದೇವರಿಗಲ್ಲದ ಚೌಕಾಸಿ ಬಂತೆ ನಿಮಗೂ || “
ಅಲ್ವಾ, ಬದುಕೆಂಬ ತರಕಾರಿ ಚೀಲ ಯಾವಾಗ ಖಾಲಿ ಮಾಡುತ್ತಾನೋ ಆ ದೇವರೇ ಬಲ್ಲ. ಉಳಿದ ಬದುಕನ್ನು ಯಾರಿಗೂ ಕೈಯೊಡ್ಡಿ ಬೇಡದೆ ಸಾರ್ಥಕವಾಗಿ ಬದುಕಿಸಬೇಕು. ಲೌಕಿಕವಾಗಿ ಹೋಲಿಸಿದರೆ ನಾವು ಹೊಟ್ಟೆಗಾಗಿ ಮಾಡುವ ಚೌಕಾಸಿ ಮತ್ತೊಬ್ಬರ ಕಾದ ಹೊಟ್ಟೆಯನ್ನು ತಂಪು ಮಾಡುವುದಿಲ್ಲ ಎಂಬ ಅರಿವು ನಮಗೆ ಮೂಡಬೇಕು. ಏಕೆಂದರೆ ದೇವರು ನಮಗಾಗಿ ದಿನಗಳಲ್ಲಿ ಚೌಕಾಸಿ ಮಾಡುವುದಿಲ್ಲ ಎಂಬ ಸಂದೇಶವನ್ನು ಸೊಗಸಾಗಿಯೇ ಕವಿಗಳು ತಿಳಿಸುತ್ತಾರೆ. ಬಹಳ ಮನ ಮುಟ್ಟುವ ಮತ್ತು ಕಾಡುವ ಕವಿತೆ ಇದಾಗಿದೆ.
* ಮೊಬೈಲ್ ಎಂಬುದು ಮಾನವೀಯ ಅಸ್ತಿತ್ವಕ್ಕೆ ಮಾಯಾ ಪರದೆಯನ್ನು ಹಾಕಿದೆ. ಅದರಲ್ಲಿ ಮುಳುಗಿದ ನಾವು ನಮ್ಮನ್ನು, ನಮ್ಮತನವನ್ನು ಮತ್ತು ನಮ್ಮವರನ್ನೇ ಮರೆತಿದ್ದೇವೆ. ಕಾಣದವರ ಸ್ನೇಹಕ್ಕೆ ಹಾತೊರೆಯುವ ನಾವು ಪಕ್ಕದಲ್ಲಿರುವವರನ್ನು ಮರೆತು ಬಿಟ್ಟಿದ್ದೇವೆ. ಹೌದು, ಇದರಿಂದ ಹಿಡಿದ ಹುಚ್ಚನ್ನು ಮನಕ್ಕೆ ಮೆಚ್ಚಾಗುವಂತೆ ಕವಿ ಅಚ್ಚಾಗಿಸಿದ್ದಾರೆ.
* “ಎಲ್ಲ ಬಣ್ಣಗಳ ಬಣ್ಣ ಮಾಸುವುದು
ಸೇರಿದಾಗಲೇ ಮಣ್ಣ
ಬಣ್ಣವಿರಲಿ ಬದುಕಿರಲಿ ಬದುಕಿನಲಿ
ಬಣ್ಣ ಬಣ್ಣವ ಮರೆಸದೇ ಮಣಿಸದೇ ಮುಗಿಸದೇ
ಮರೆಯದಂತಿರಲಿ ಬದುಕಿನ ಬಣ್ಣಗಳು..
ಈಗಲೂ ಆಗಲೂ ಯಾವಾಗಲೂ..!! “
” ಬದುಕಿನ ಬಣ್ಣಗಳು ” ಮನುಷ್ಯನ ಪ್ರತಿಯೊಂದು ನಡೆಯೂ ಒಂದೊಂದು ಬಣ್ಣದಂತೆ. ಅವನ ವ್ಯಕ್ತಿತ್ವವೇ ಅವನ ಬಣ್ಣ. ಒಬ್ಬರದು ಮುಖವಾಡದ ಬಣ್ಣ, ಮತ್ತೊಬ್ಬರದು ಓಲೈಕೆಯ ಬಣ್ಣ, ನಿಜವಾದ ಬಣ್ಣ ಒಬ್ಬರದು, ಬೇಗನೇ ಮಾಸುವ ಬಣ್ಣ ಮತ್ತೊಬ್ಬರದು, ಬಡವನದು ಬೇರೆ ಬಣ್ಣ, ಸಿರಿವಂತನದು ಬೇರೆ ಬಣ್ಣ.. ಹೀಗೆ ಜಗದಲ್ಲಿ ವಸ್ತುಗಳ ಬಣ್ಣಗಳಿಗಿಂತ ಮಾನವನ ಬಣ್ಣವೇ ವಿಭಿನ್ನವಾದದ್ದು. ದೇವರು ಕೊಟ್ಟ ಬಣ್ಣ ದೇಹಕ್ಕಾದರೆ, ಮಾನಸಿಕವಾಗಿ ಮನುಷ್ಯನು ವರ್ತಮಾನಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ತನ್ನ ಬಣ್ಣವನ್ನು ಬದಲಿಸುತ್ತಾ ಹೋಗುತ್ತಾನೆ. ಎಲ್ಲಿಯವರೆಗೆ? ಅದಕ್ಕೆ ಕವಿಗಳು…
ಮಣ್ಣ ಸೇರುವವರೆಗೆ ಎಂದು ಹೇಳಿ… ಅಷ್ಟಕ್ಕೇ ಬಿಡದೆ,
” ನಿಮ್ಮವು ಉತ್ತಮ ಬಣ್ಣಗಳಾಗಿರಲಿ,
ಅವು ಮರೆಯದಂತಿರಲಿ.. ಎಂದೆಂದಿಗೂ.. “
ಎಂದು ಆಶಯ ವ್ಯಕ್ತಪಡಿಸುತ್ತಾರೆ.
* ಒಂದು ಪುಸ್ತಕ ಮುದ್ರಣವಾಗುವುದಕ್ಕೆ ಒಬ್ಬಬ್ಬಾ ಎಂದರೆ ಎರಡು ಮೂರು ದಿನ ಸಾಕು. ಆದರೆ, ಆ ಪುಸ್ತಕದಲ್ಲಿ ಮುದ್ರಿತವಾಗುವ ವಿಷಯಾಂಶಗಳು ಸಿದ್ಧಗೊಳ್ಳಲು ವರುಷಗಳ ಶ್ರಮ ಇರುತ್ತದೆ ಎಂಬುದು ಸತ್ಯ. ಕೂತರೂ, ನಿಂತರೂ ಲೇಖಕ ಪುಸ್ತಕವನ್ನೇ ಧ್ಯಾನಿಸುತ್ತಾನೆ. ಅದು ಓದುಗನ ಕೈ ಸೇರಿ ಅವನನ್ನು ಪರಿವರ್ತಿಸಿದರೆ ಅಥವಾ ಓದುಗನ ಜ್ಞಾನಕ್ಕೆ ಸಹಕಾರಿಯಾದರೆ ಅಥವಾ ಮನೋರಂಜನೆಯನ್ನಾದರೂ ನೀಡಿದರೆ ಮಾತ್ರ ಲೇಖಕನ ಶ್ರಮ ಸಾರ್ಥಕತೆಯನ್ನು ಪಡೆದುಕೊಳ್ಳುತ್ತದೆ. ಆದರೆ ಆ ಪುಸ್ತಕವನ್ನು ನಾವು ಒಮ್ಮೊಮ್ಮೆ ಕೊಲೆಗೈಯುತ್ತೇವೆ. ಅದನ್ನು ಕಣ್ಣಾರೆ ಕಂಡ ಕವಿಗಳಲ್ಲಿ,
” ಒಂದು ಪುಸ್ತಕದ ಕೊಲೆ ” ಕವಿತೆ ಹುಟ್ಟುತ್ತದೆ. ಅದರಲ್ಲಿ, ಕೆಲವು ಪುಸ್ತಕಗಳು ಗೆದ್ದಲು ಹುಳಗಳಿಗಾದರೆ, ಮತ್ತಷ್ಟು ಪುಸ್ತಕದ ಪುಟಗಳು ಮಕ್ಕಳ ಆಟಿಕೆಗಾಗುತ್ತವೆ. ಓದಿಸಿಕೊಳ್ಳಲು ಕಾದು ಕಾದು ಕೊನೆಗೆ ಅಂತಿಮ ಸಂಸ್ಕಾರಕ್ಕೆ ಸಾಗುವ ಪುಸ್ತಕವನ್ನು ಕಂಡ ನೋಟು, “ನಿನ್ನ ಬೆಲೆ ಇಷ್ಟೇ” ಎಂದು ಕೂಗಿ ಹೇಳುತ್ತದೆ ಎಂಬ ಭಾವ ಹೊರಹಾಕಿದ ಕವಿಗಳು; ಪುಸ್ತಕದ ಮಹತ್ವ, ಅದರ ಹುಟ್ಟಿಗೆ ಕಾರಣರಾದವರ ಪ್ರಯತ್ನವನ್ನು ನೆನೆಯುತ್ತಾರೆ.
ನಿಜ ಪುಸ್ತಕ ತನ್ನ ಸತ್ವವನ್ನು ಕಳೆದುಕೊಳ್ಳುವ ಮುಂಚೆ, ಸಾರ್ಥಕತೆಯನ್ನು ಬಯಸುತ್ತದೆ. ಆ ಸಾರ್ಥಕತೆಯ ಫಲ ಮಾತ್ರ ಓದುಗನನದ್ದಾಗಿರುತ್ತದೆ.
* ಬಡತನದಲ್ಲಿನ ಹೆಣ್ಣಿನ ನಿರಪೇಕ್ಷೆಯ ಬದುಕನ್ನು ಸಾರುವ ” ಆಕೆ “ ಕವಿತೆಯ ಸಾಲುಗಳು ಮನಮುಟ್ಟುತ್ತವೆ.
* “ನೀ ನಿರೆ ಈ ಬದುಕಿಗೆ*
“ನಾ ಮುಂಗುರುಳಾಗುವೆ” ಪ್ರೇಮದ ಕವಿತೆಗಳಾಗಿದ್ದು ಓದುಗನನ್ನು ಓಲೈಸುತ್ತವೆ.
* ಸ್ಪೂರ್ತಿ ತುಂಬುವ ಕವಿತೆ ” ಜಯದ ಝೇಂಕಾರ ”
ಮಾನವೀಯ ತುಡಿತಗಳನ್ನು ಸಾರುವ ಕವಿತೆಯಷ್ಟೇ ಅಲ್ಲದೆ ಮಾನವ ಸಾಗುತ್ತಿರುವ ಅಮಾನ್ಯವಾದ ಮಾರ್ಗದ ಕುರಿತಾಗಿಯೂ ಎಚ್ಚರಿಸುವ ಕವಿಗೆ ಜೀವಪರ ಕಾಳಜಿ ಇದೆ ಎನಿಸುತ್ತದೆ.
” ಬಡವನಾಗಿದ್ದೇನೆ, ಪಯಣ, ಹೊಸ ಚೇತನ, ಪ್ರಾರ್ಥನೆ, ಇವನ್ಯಾರ ಹಮ್ಮೀರ, ಅಮೇಜಾನ್, ಬಿಸಿಲ್-ಬಿಸಿ, ಕನಸು, ನೀ ಎಲ್ಲಿಗೆ ಹೊಂಟಿ..??
ನವಚೇತನ, ಕತ್ತಲು, ಭ್ರಾಂತಿ, ನಗುವಿನೊಂದಿಗೆ ಮಾತುಕಥೆ, ಯಜಮಾನ, ನಿಸರ್ಗದಳಲು, ಆ ಕಾಲ, ಬಾಡಿಗೆ ಸೈಕಲ್, ಮನವಿ, ಮರುಭೂಮಿ, ನಗುಚೆಲ್ಲಿದ ಮನಸು…..
ಮುಂತಾದ ಎಲ್ಲ ಕವಿತೆಗಳೂ ವಿಭಿನ್ನವಾದ ಕಾವ್ಯವಸ್ತುಗಳನ್ನು ಹೊಂದಿವೆ, ಮತ್ತು ಬಹುತೇಕ ಎಲ್ಲ ಕವಿತೆಗಳನ್ನು ಪ್ರಬುದ್ಧವಾಗಿ ಉತ್ತಮ ಶೈಲಿಯಲ್ಲಿ ಕಟ್ಟುವಲ್ಲಿ ಕವಿ ಚಾಗಿಯವರು ಗೆದ್ದಿದ್ದಾರಾದರೂ, ಯಜಮಾನ, ನಿಸರ್ಗದಳಲು, ಆ ಕಾಲ, ಬಾಡಿಗೆ ಸೈಕಲ್, ಮನವಿ… ಮುಂತಾದ ಕವಿತೆಗಳು ಮತ್ತಷ್ಟು ಕಾವ್ಯಾತ್ಮಕವಾಗಿ ಮೂಡಿ ಬರಬಹುದಿತ್ತು. ಕಾವ್ಯಕ್ಕೆ ಆಯ್ಕೆ ಮಾಡಿಕೊಂಡ ವಿಷಯವಸ್ತು ಉತ್ತಮವಾಗಿ, ನಿಶೇಷವಾಗಿದೆಯಾದರೂ ಗದ್ಯವನ್ನೋದಿದಂತಹ ಅನುಭವ ಈ ಕೆಲ ಕವಿತೆಗಳಲ್ಲಿ ನನಗಾಗಿದ್ದು ಸತ್ಯ.
ಈ ಭಾವ ಎಲ್ಲ ಓದುಗರಲ್ಲಿ ಮೂಡಬೇಕೆಂಬುದೇನಿಲ್ಲ. ಅವರವರ ಓದಿಗೆ ಅದು ನಿರ್ಧಾರವಾಗುತ್ತದೆ.
ಒಟ್ಟಿನಲ್ಲಿ ಸಂಕಲನದ ಸಂಪೂರ್ಣ ಅವಲೋಕನದ ಬಳಿಕ ನನಗನಿಸಿದ್ದು, ಕಾವ್ಯ ಕಟ್ಟುವ ಕಲೆ ಚಾಗಿಯವರಿಗೆ ಪೂರ್ತಿಯಾಗಿ ಕರಗತವಾಗಿದ್ದು ಅದೇ ಹಾದಿಯಲ್ಲಿ ಮತ್ತಷ್ಟು ಮಾಗಿದ ಕವನಗಳು ಮತ್ತು ಪದಗಳನ್ನು ಸಂಕುಚಿತಗೊಳಿಸಿ ಗದ್ಯ ಇಣುಕದಂತಹ ಕಾವ್ಯಗಳು ಚಾಗಿಯವರಿಂದ ಅಚ್ಚಾದರೆ ಓದುಗನಿಗೆ ಮೆಚ್ಚಾಗುತ್ತವೆ ಮತ್ತಷ್ಟು ಹತ್ತಿರವಾಗುತ್ತವೆ.
ಈ ವಿಷಯದಲ್ಲಿ ಕವಿ ಮಿತ್ರ ಚಾಗಿಯವರಿಂದ ಮತ್ತಷ್ಟು ಗಟ್ಟಿಯಾದ ಮಾಗಿದ ಕವಿತೆಗಳು ಹೊರಹೊಮ್ಮಲಿ. ಮತ್ತೊಂದು ಮಗದೊಂದು ಕವಿತಾ ಸಂಕಲನಗಳು ನಮ್ಮ ಓದಿಗೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ.