ಪ್ರಸಾದವಾದಿಗಳು ಕಲ್ಯಾಣ ಶರಣರು
ವೈಚಾರಿಕತೆ, ದಾರ್ಶನಿಕ, ಆಧ್ಯಾತ್ಮಿಕ ಜಗತ್ತಿನಲ್ಲಿ ಅತ್ಯಂತ ವಿಭಿನ್ನವಾಗಿ ನಿಲ್ಲುವ ಶರಣರು ತ್ಯಂತ ಪ್ರಾಯೋಗಿಕವಾಗಿu ತಮ್ಮ ತಮ್ಮ ನಿಲುವುಗಳನ್ನು ಪ್ರತಿಪಾದಿಸಿದ್ದಾರೆ.
ಪ್ರಸಾದ ಇದು ಶರಣರು ಕಂಡು ಕೊಂಡಂತಹ ಸುಂದರ ಪ್ರಸನ್ನ ಭಾವ . ನಿರಾಕಾರ ನಿರ್ಗುಣ ನಿರ್ವಿಕಲ್ಪ ತತ್ವಗಳನ್ನೆ ಮುಂದಿಟ್ಟು ಕೊಂಡು.
ಅಂದಿನ ಮೃತಪ್ರಾಯವಾದ ಸಾಮಾಜಿಕ ಆರ್ಥಿಕ ಬೌದ್ಧಿಕ ಧಾರ್ಮಿಕ ಕ್ಷೇತ್ರಗಳ ಪುನರಜೀವನಗೊಳಿಸಿದ ಹೆಗ್ಗಳಿಕೆ ಶರಣರಿಗೆ ಸಲ್ಲಲೇಬೇಕು.
ಎಲ್ಲಾ ಜಾತಿ ಮತ ಪಂಥಗಳು ಬೇರೆ ಬೇರೆ ಕಪಿ ಮುಷ್ಠಿಯಲ್ಲಿ ಸಿಕ್ಕು ನಲುಗಿ ಒಬ್ಬರಿಗೊಬ್ಬರು ಸಂದೇಹ ಆತಂಕದಲ್ಲಿ ಬದುಕುವ ಪ್ರಸಂಗಗಳಲ್ಲಿ ಶರಣರು ಮುಕ್ತ ಅವಕಾಶ ಕಲ್ಪಿಸಿಕೊಟ್ಟರು.
ಜಗತ್ತಿನ ಪ್ರತಿಯೊಬ್ಬ ವೈಚಾರಿಕರು ಬದುಕು ಮತ್ತು ಜೀವನಗಳ ಉಪಭೋಗಕ್ಕಾಗಿ ಬೇಕಾಗುವ ವಸ್ತು ಪದಾರ್ಥಗಳ ಕ್ರೋಡೀಕರಣ ಹಂಚಿಕೆ ಅದರ ಮೇಲಿನ ಹಕ್ಕು ಸ್ವಾಮ್ಯತೆ ಬಗ್ಗೆ ಚರ್ಚಿಸಿದ್ದಾರೆ.
ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಶರಣರು ಪದಾರ್ಥಗಳಲ್ಲಿ ಪ್ರಸಾದ ಭಾವವನ್ನು ಕಂಡು ಕೊಂಡರು.
ಪ್ರಸಾದ ಒಂದು ಅನುಭವ ಪ್ರಸನ್ನತೆಯ ಭಾವವುr ,ಭತ್ತ ಇದು ಪ್ರಸಾದಕ್ಕೆ ಬೇಕಾದ ಮೂಲ ಅಕ್ಕಿಯ ರಕ್ಷಾ ರೂಪವು.
ಪ್ರಸಾದ ಎರಡು ಕ್ರಿಯೆಗಳಿಂದ ಉತ್ಪತ್ತಿಗೊಳ್ಳುವ ಸಿದ್ಧ ವಸ್ತು.
ಮಡಿಕೆಯ ಮಾಡುವರೆ ಮಣ್ಣೇ ಮೊದಲು
ತೊಡಿಗೆಯ ಮಾಡುವರೆ ಹೊನ್ನೆ ಮೊದಲು.
ಶಿವ ಪಥವ ಅರಿವೊಡೆ ಗುರು ಪಾಠವೇ ಮೊದಲು.
ಕೂಡಲ ಸಂಗಮ ದೇವನ ಅರಿವೊಡೆ
ಶರಣರ ಸಂಗವೇ ಮೊದಲು ಮೊದಲು. ಬಸವಣ್ಣ.
ಮಣ್ಣು ಪದಾರ್ಥ , ಹೊನ್ನು ಪದಾರ್ಥ ಆದರೆ ಮಡಿಕೆ ಮತ್ತು ತೊಡಿಗೆ ಇವುಗಳಿಂದ ನಿರ್ಮಿತಗೊಳ್ಳುವ ಹಾಗೆ.
ಶಿವ ಪಥವ ಅರಿವೊಡೆ ಗುರು ಪಥವೆ ಮೊದಲು. ಇಲ್ಲಿ ಗುರು ಪಥವೆಂದಡೆ ಜ್ಞಾನ .ಕೂಡಲ ಸಂಗಮ ದೇವರ ಅರಿವೊಡೆ ಶರಣರ ಸಂಗವೇ ಮೊದಲು ಎನ್ನುತ್ತಾನೆ ಬಸವಣ್ಣನು. ಅಂದರೆ ದೈವತ್ವದ ಜ್ಞಾನ ಮಾರ್ಗದ ಸೂತ್ರವನ್ನು ನಮ್ಮ ಶರಣರು ಕಂಡು ಕೊಂಡಿದ್ದಾರೆ.
ದೈವತ್ವದಲ್ಲಿ ಮೇಲು ಕೀಳು ಕಾಣುವ ಶ್ರೇಣೀಕೃತ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ಶರಣರು ಎಲ್ಲದಕ್ಕೂ ನ್ಯಾಯ ಕೊಡಿಸಲು ಸಮರ್ಥರಾದರು.
ಮೇಲ್ವರ್ಗದ ಜನರ ನಿಯಂತ್ರಣದಲ್ಲಿರುವ ದೇಗುಲಗಳಿಗೆ ಗರ್ಭಗುಡಿಯ ಹೊರಗೆ ನಿಂತು ದಲಿತರು ಪೂಜೆ ಸಲ್ಲಿಸುತ್ತಾರೆ ಮತ್ತು ಕಾಣಿಕೆ ನೈವೇದ್ಯ – ದಕ್ಷಿಣೆ ಸಲ್ಲಿಸುತ್ತಾರೆ. ಈ ನೈವೇದ್ಯ – ದಕ್ಷಿಣೆಗಳನ್ನು, ಕೆಳವರ್ಗದ ಜನರ ಮನೆಯಿಂದ ಬರುವ ಹಾಲು-ಧಾನ್ಯ-ಹಣ್ಣು-ಹಸುಗಳನ್ನು ಸ್ವೀಕರಿಸುವಾಗ ಕಾಣಸಿಗದ ಮಡಿವಂತಿಕೆ ಉಳಿದ ವಿಷಯಗಳಲ್ಲಿ ಏಕೆ ಇದೆ ಎಂಬುದು ಇನ್ನು ಅರ್ಥವಾಗುತ್ತಿಲ್ಲ.ಪುರೋಹಿತರು ಕೊಡುವ ಕಲ್ಲು ಸಕ್ಕರೆ ಕೊಬ್ಬರಿ ಮುಂತಾದವುಗಳನ್ನೆ ಪವಿತ್ರ ಪ್ರಸಾದವೆಂದು ತಿಳಿದು ತಮ್ಮ ಧನ್ಯತೆಯನ್ನು
ಆದರೆ ಪ್ರತಿ ವಸ್ತು ಪದಾರ್ಥಗಳಿಗೆ ಮಾನ್ಯತೆ ನೀಡಿ ಅವುಗಳನ್ನು ಪ್ರಸಾದಮಯ ಮಾಡಿದರು ಕಲ್ಯಾಣದ ಶರಣರು.
ಶರಣರ ಪ್ರಸಾದದ ಕಲ್ಪನೆ ತುಂಬಾ ಮಹತ್ತರವಾದದ್ದು. ಅವು ಶುದ್ಧ ಪ್ರಸಾದ ಸಿದ್ದ ಪ್ರಸಾದ ಮತ್ತು ಪ್ರಸಿದ್ಧ ಪ್ರಸಾದವು.
ಗುರು ಕಾರುಣ್ಯವೇ ಶುದ್ಧ ಪ್ರಸಾದವು. ಲಿಂಗ ಕಾರುಣ್ಯ ಸಿದ್ಧ ಪ್ರಸಾದವು. ಜಂಗಮ ಕಾರುಣ್ಯವೇ ಪ್ರಸಿದ್ಧ ಪ್ರಸಾದವು.
ಅರಿವಿನ ಚಿತ್ತ ಶುದ್ಧತೆಯಿಂದ ನಿರ್ಮಿತಗೊಳ್ಳುವುದು ಶುದ್ಧ ಪ್ರಸಾದವು, ಆಚಾರದಲ್ಲಿ ತನುವು ಶುದ್ಧಗೊಳಿಸಿ ಅರ್ಪಿತಗೊಳ್ಳುವುದು ಲಿಂಗಪ್ರಸಾದವು. ಇನ್ನು ಅನುಭಾವದ ವಿಸ್ತಾರತೆಯಲ್ಲಿ ಅದನ್ನು ಸಮಷ್ಠಿಗೆ ಜಂಗಮಕ್ಕೆ ಅರ್ಪಿಸಿ ಸಾರ್ವತ್ರಿಕಗೊಳಿಸುವುದು ಪ್ರಸಿದ್ಧ ಪ್ರಸಾದವು.
ಪ್ರಸಾದದಲ್ಲಿ ಅರ್ಪಣಾ ಭಾವ ಮತ್ತು ನಿವೃತ್ತಿಯ ಭಾವವು ಕಾಣಬೇಕು.
ಭತ್ತವು ಒಳಗಿನ ಅಕ್ಕಿಕಾಳನ್ನು ಸಮಾಜಕ್ಕೆ ಅರ್ಪಿಸುವ ಸಲುವಾಗಿ ಭದ್ರ ಕವಚವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಒಳಗಿನ ಅಕ್ಕಿಯ ಕಾಳನ್ನು ಅರ್ಪಿಸುತ್ತದೆ.ಹಾಗೆ
ಭಕ್ತನಾದವನು ತನ್ನ ನಿಷ್ಠೆಯನ್ನು ಮರೆಮಾಚಿ ಸಮಾಜಕ್ಕೆ ತಾನಿರದ ನಿರ್ಭಾವವನ್ನು ಪ್ರದರ್ಶಿಸಿದಲ್ಲಿ ಅದುವೇ ಪ್ರಸಾದ ಭಾವ ನಿವೃತ್ತಿ .
ದೀಕ್ಷಾ ಗುರು ಧಾರ್ಮಿಕ ಸಲಕರಣೆ ಜ್ಞಾನ ಅರಿವಿನ ಪ್ರಸಾದವನ್ನು ನೀಡುತ್ತಾನೆ,ಆಯಾಮಗಳನ್ನು ತೋರಿಸಿದರೆ.,ಶಿಕ್ಷಾ ಗುರುವು ಕರಣ ಪ್ರಸಾದವನು ನೀಡುತ್ತಾನೆ. ಅಂದರೆ ಕರಣಕ್ಕೆ ಕಿವಿಗಳಿಗೆ ಸಲಹೆ ಸೂಚನೆ ಮಾರ್ಗ ದರ್ಶನ ಅದುವೆ ಕರಣ ಪ್ರಸಾದವು.ಆದರೆ ಅದನ್ನು ಅತ್ಯಂತ ವಿಭಿನ್ನ ವಿರೂಪಗೊಳಿಸುವ ಪ್ರಯತ್ನವನ್ನು ಶೈವ ಪೌರೋಹಿತ್ಯಷಾಹಿಗಳು ಮಾಡಿದ್ದಾರೆ.
ಪ್ರಸಾದಿ ವಿನಮ್ರನಾಗಿರಬೇಕು ಪ್ರತಿ ಹಂತದಲ್ಲೂ ತನ್ನ ವಿನಯತೆಯಿಂದ ಕಾಯ ವಾಚಾ ಮನಸ್ಸು ಕರಣಂಗಳು ಪಂಚೇಂದ್ರಿಯಗಳು ಶುದ್ಧವಾಗಿಟ್ಟು ಕೊಳ್ಳುವುದೇ ಪ್ರಸಾದ ಭಾವವು. ಪಂಚ ಮಹಾಭೂತಗಳಿಂದ ,ಉತ್ಪತ್ತಿಯಾದ ಯಾವುದೇ ವಸ್ತು ವಿಷಯಗಳು ಪಂಚೇದ್ರಿ ಮೂಲಕ ಗ್ರಹಿಸಿ ಪ್ರಸನ್ನ ಭಾವವನ್ನು ಹೊಂದುವ ಸರಳ ಕ್ರಿಯೆ.
ಇಂತಹ ಪ್ರಸಾದದ ಎರಡು ಮಗ್ಗುಲು ಮತ್ತು ಅದರ ಹಿಂದಿನ ಉದ್ದೇಶವನ್ನು ಆಹಾರ ಮತ್ತು ಅದರ ಆರೋಗ್ಯದ ಪರಿಣಾಮಗಳನ್ನು ಪ್ರಸಕ್ತ ಲೇಖನದಲ್ಲಿ ಸ್ಥೂಲವಾಗಿ ಚರ್ಚಿಸಲಾಗಿದೆ.
ಹನ್ನೆರಡನೆಯ ಶತಮಾನವು ಭಾರತದ ಸುವರ್ಣಯುಗವು ಮತ್ತು ಜೀವನದ ಪ್ರಯೋಗಶೀಲ ಯುಗವೆಂದು ಹೇಳಬಹುದು.ಬಸವಣ್ಣನವರ ನಾಯಕತ್ವದಲ್ಲಿ ಲಕ್ಷಾಂತರ ಶರಣರು ತಮ್ಮ ಆಧ್ಯಾತ್ಮಿಕ ಸಾಮಾಜಿಕ ಧಾರ್ಮಿಕ ನೈತಿಕ ವೈಚಾರಿಕ ಜೀವನವನ್ನು ರೂಪಿಸಿಕೊಂಡು ಜಗತ್ತಿಗೆ ಮಾದರಿಯಾದರು.
ಧರ್ಮವು ಬದುಕಿನ ಸರಳ ಮಾರ್ಗ . ಅದು ನೈತಿಕ ನೆಲಗಟ್ಟಿನ ಮೇಲೆ ನಿಂತು ಬದುಕು ನಡೆಸುವ ಮಾರ್ಗ ಸೂಚಿಯಾಗಿರುವುದು.
ಆದರೆ ಧರ್ಮದ ಹೆಸರಿನಲ್ಲಿ ಸುಲಿಗೆ ,ಶೋಷಣೆ ,ಆಶೆಬುರುಕುತನ ಹೆಚ್ಚಾಗಿ ಜನರನ್ನು ಕೊಳ್ಳೆ ಹೊಡೆಯುವ ಕುತಂತ್ರಕ್ಕೆ ಕಾಲಕಾಲಕ್ಕೆ ಜಗ್ಗತ್ತಿನ ಪ್ರವಾದಿಗಳು
ತಕ್ಕ ಉತ್ತರ ನೀಡಿದ್ದಾರೆ.
ಪ್ರಸಾದ ಆಹಾರವಲ್ಲ ಪ್ರಸಾದ ವಸ್ತುವಲ್ಲ . ಪ್ರಸಾದ- ಊಟ, ಕೂಳು ಸಕ್ಕರಿ, ಕಲ್ಲು ಸಕ್ಕರಿ ,ತುಳುಸಿ ಎಲೆ ,ಖೊಬ್ಬರಿ, ಚುರುಮುರಿ ಅಲ್ಲ.
ಪ್ರಸಾದ ಈ ಪದವೇ ಕೇಳಲು ಅನಂದ
ಪ್ರಸನ್ನತೆಯೆ ಪ್ರಸಾದ .ಶುದ್ಧ ಚಿತ್ತವಾಗಿ ಇರುವಾಗ ಗೋಚರಿಸುವ ವಿಚಾರವೇ ಪ್ರಸಾದ .ಅದೊಂದು ಅದ್ಭುತ ಅನುಭವ .
ಅನಂದದ ತುಟ್ಟ ತುದಿ ತಲುಪುವುದೆ ಪ್ರಸಾದ .
ಲಿಂಗಾಂಗ ಸಾಮರಸ್ಯದ ಸ್ಥಿತಿ ಹಾಗೂ ಈ ಸ್ಥಿತಿ ಮಟ್ಟವನ್ನು ಪಡೆದ ಜಂಗಮ ಸದ್ಬಕ್ತನ ಅನಂದಾನುಭವವೇ ಪ್ರಸಾದ .
ಇಲ್ಲಿ ಆತ್ಮ ಮತ್ತು ಪರಮಾತ್ಮನನ್ನು ಸಮರಸಗೊಳಿಸೀ ಆ ಅನಂದ ಪ್ರಸಾದವನ್ನು ಅನುಭವಿಸುವ ಅನುಭಾವದ ಅರಿವಿನ ಅಡುಗೆ .
ಪರಮ ಜ್ಞಾನ ವೈಚಾರಿಕ ಪ್ರಜ್ಞೆ ಅರಿವಿನ ಹೊಳಹು ಪ್ರಸಾದ
ಪ್ರಸಾದವೇ ಜಂಗಮ -ಜಂಗಮ ಮುಖಿಯಾಗಿ ವ್ಯಕ್ತಿಯ ವಿಚಾರವೆಂಬ ಪ್ರಸಾದ ಜನರಿಗೆ ಉಪಯುಕ್ತವಾದ ಮಾರ್ಗ ಸೂಚಿ
ಪ್ರಸನ್ನತೆಯ ಭಾವವೇ ಪ್ರಸಾದ .
ಶರಣರು ಪದಾರ್ಥಗಳಿಗೆ ಪ್ರಾಸಾದದ ಪಾವಿತ್ರ್ಯತೆ ನೀಡಿದರು. ಕಾಯಕ ಸತ್ಯ ಶುದ್ಧವಾಗಿರಬೇಕು. ದಾಸೋಹ ನಿರ್ಭಾವದಿಂದ ಕೂಡಿರಬೇಕು.ಪ್ರಸಾದ ಶುದ್ಧ ಮನಸ್ಸಿನಿಂದ ಸಿದ್ಧಗೊಂಡು ಜಂಗಮಕ್ಕೆ ಸಲ್ಲಿಸಿದಾಗ ಅದು ಪ್ರಸಿದ್ಧಿ ಯಾಗುವುದು.
ಶರಣರು ತಿಪ್ಪೆಯ ತಪ್ಪಲವನ್ನಾದರೂ ತಂದು ನಿಶ್ಚಯಿಸಿ ಮಾಡಿಕೊಂಬುವುದು ಪ್ರಸಾದವೆನ್ನುತ್ತಾರೆ. ಪ್ರಸಾದದಲ್ಲಿ ಆಡಂಭರವಿಲ್ಲ ವೈಭವಿಕರಣವಿರುವದಿಲ್ಲ.
ಸಮರ್ಪಣಾಭಾವ ನಿಸ್ವಾರ್ಥ ಪ್ರೀತಿಯಿಂದ ಭಕ್ತಿಯಿಂದ ಸಿದ್ಧ ಪಡಿಸುವುದು ಶುದ್ಧ ಪ್ರಸಾದ . ಇಂತಹ ಪ್ರಸಾದ ಯಾವುದೇ ಅನ್ಯ ಮಾರ್ಗದಿಂದ ಗಳಿಸಿರಬಾರದು.
ಅಗತ್ಯಕ್ಕಿಂತ ಹೆಚ್ಚಿನ ಆದಾಯ ತರುವುದು ಶರಣ ತತ್ವಕ್ಕೆ ಅಪಮಾನ ಮತ್ತು ಅಪಚಾರ. ಇಂತಹ ಶುದ್ಧ ಮನಸ್ಸಿನಿಂದ ಮಾಡಿದ ಪ್ರಸಾದವು ಶುದ್ಧವಾಗುತ್ತದೆ.
ಸಮತಾಭಾವದಿಂದ ಜಂಗಮಕ್ಕೆ ಅರ್ಪಿಸುವಾಗ ಪ್ರಸಾದವು ತನ್ನ ಸಾರ್ಥಕತೆಯನ್ನು ಹೆಚ್ಚಿಸಿಕೊಂಡು ಪ್ರಸಿದ್ಧಿ ಗೊಳ್ಳುವುದು.
ಶರಣರು ಪ್ರಸಾದವನ್ನು ಬೇರೆ ಬೇರೆ ಅರ್ಥದಲ್ಲಿ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಅವರಿಗೆ ಶರಣರ ಬದುಕೆ ಒಂದು ಪ್ರಸಾದಮಯವಾಗಿತ್ತು .ಆದರ್ಶ ಮೌಲ್ಯ ತತ್ವ ನೀತಿಗಳನ್ನೆ ನಂಬಿ ಬದುಕಿ ತಮ್ಮ ಜೀವನ ಸಾರ್ಥಕತೆಯನ್ನು ಕಾಣುವಲ್ಲಿ ಯಶಸ್ಸು ಕಂಡರು.
ಗುರುವಿಗೆ ಗುರುವಾಗಿ
ಗುರು ಪ್ರಸಾದವ ಕೊಂಬುದು
ಲಿಂಗಕ್ಕೆ ಲಿಂಗವಾಗಿ ಲಿಂಗ ಪ್ರಸಾದವ ಕೊಂಬುದು
ಜಂಗಮಕ್ಕೆ ಜಂಗಮವಾಗಿ ಜಂಗಮ ಪ್ರಸಾದವ ಕೊಂಬುದು
ಪ್ರಸಾದಕ್ಕೆ ಪ್ರಸಾದವಾಗಿ ಪ್ರಸಾದವಾಗಿ ಪ್ರಸಾದವನೇ ಕೊಂಬುದು
ಈ ಚತುರ್ವದ ಸ್ಥಲಕ್ಕೆ ಚತುರ್ವೀಧವಾಗಬಲ್ಲಡೆ ಕೂಡಲ ಚೆನ್ನಸಂಗನಲ್ಲಿ ಲಿಂಗೈಕ್ಯವು
ತನ್ನ ಲಿಂಗಕ್ಕೆ ಬಾರದ ರುಚಿಯ
ಜಂಗಮಕ್ಕೆ ಸಲಿಸೀ ಕೈಯ ನೀಡಿ ಪ್ರಸಾದವನಿಕ್ಕೆಂಬೀರೀ
ಅದು ಪ್ರಸಾದವಲ್ಲ
ಸಿಂಗಿ ಕಾಳಕೂಟ ವಿಷವು ಕೇಳಿರಣ್ಣ
ಆ ಪ್ರಸಾದ ಪದವೆಂಬೀರೀ
ಆ ಪ್ರಸಾದ ಪದವೆಂಬೀರೀ
ಆ ಪ್ರಸಾದ ಕಿಲಿಪ್ಶವೆಂಬೆ ಕೂಡಲ ಚೆನ್ನ ಸಂಗಮದೇವಾ
ಬಹಳಷ್ಟು ಭಕ್ತರ ಎಂದು ಹೇಳಿಕೊಳ್ಳುವವರು ತಮಗೆ ಬೇಡವಾದ ಆಹಾರವನ್ನು ಪ್ರಸಾದವೆಂದು ಸಮಾಜದ ( ಜಂಗಮದ ) ಜನರಿಗೆ ನೀಡುತ್ತಾರೆ. ಮನೆಯಲ್ಲಿ ಹಳಸಿದ ಅಣ್ಣ ಕೊಳೆತ ಹಣ್ಣು ಜನರಿಗೆ ನೀಡುತ್ತಾರೆ. ಅದು ಪ್ರಸಾದವಾಗದು. ಅಂತಹ ಕೆಟ್ಟ ವಸ್ತು ಸಿಂಗಿ ಕಾಳವೆಂಬ ಹಾವಿನ ವಿಷವಿದ್ದಂತೆ .
ಅಂತಹ ಹೊಲಸು ಪದಾರ್ಥವನ್ನು ಜನರಿಗೆ ನೀಡಿದರೆ ನಿಮ್ಮ ಜೀವನದಲ್ಲಿ ಕಲ್ಮಶವಾಗುವದರಲ್ಲಿ ಕಿಲುಬುವದರಲ್ಲಿ ಎರಡು ಮಾತಿಲ್ಲ.
ಮಾಡುವ ಮಾಡಿಸಿಕೊಂಬಾ ಉಭಯ ಒಂದೇ
ಗುರು ಒಂದೇ
ಲಿಂಗ ಒಂದೇ
ಪ್ರಸಾದ ಒಂದೇ
ಒಂದಾದಲ್ಲಿ ಎರಡಾಗಿ ಮಾಡುವಾ ಭಕ್ತನು ನೀನೇ
ಕೂಡಲ ಸಂಗಮದೇವ.
ಶರಣರು ಉಭಯ ಭಾವ ಹಾಗೂ ಶ್ರೇಣಿಕೃತ ವ್ಯವಸ್ಥೆಯನ್ನು ಸ್ತರಗಳನ್ನು ಸಂಪೂರ್ಣ ಅಲ್ಲಗಳೆದಿದ್ದಾರೆ. ಗುರು ಲಿಂಗ ಪ್ರಸಾದ ಒಂದೇ ಎನ್ನುವ ಭಾವವು ಪ್ರಸಾದ .
ಎರಡನ್ನು ಮಾಡುವ ಭಾವಿಯಾಗುತ್ತಾನೆ.
ಪ್ರಸಾದ -ಅನುಭವಕ್ಕೆ ನಿಲುಕಿದ ಮೌಲ್ಯಗಳು. ವಿಚಾರ ಚಿಂತನ ಮಂಥನದಿಂದ ನಡೆದ ಉತ್ಪತ್ತಿ.
ಜಗತ್ತಿನ ಎಲ್ಲಾ ಸಮಾಜವಾದಿಗಳು ಪದಾರ್ಥವಾದಿಗಳು (Mateirialistic )ಆದರೆ ಬಸವಣ್ಣ ಮತ್ತು ಶರಣರು ಪ್ರಸಾದವಾದಿಗಳು .
ನಿನೋಲಿದರೆ ಕೊರಡು ಕೊನರುವುದು ನಿನೋಲಿದರೆ ಬರಡು ಹಯನವಹುದಯ್ಯಾ ಎಂದು ನಂಬಿದ ದಿಟ್ಟ ಮಾನವತಾವಾದಿಗಳು ಬಸವಾದಿ ಶರಣರು.
ಬಸವಾದಿ ಶರಣರ ವಚನಗಳಲ್ಲಿ ಆಹಾರ ಪದ್ಧತಿ
ಶರಣರು ಅತ್ಯಂತ ಕ್ಲಿಷ್ಟಮಯವಾದ ಸಾಮಾಜಿಕ ಧಾರ್ಮಿಕ ಅಧ್ಯಾತ್ಮಿಕ ಜೀವನವನ್ನು ಸರಳಗೊಳಿಸಿದರು . ಬಸವಾದಿ ಶರಣರು ಬದುಕಿನ ಎಲ್ಲಾ ಮಗ್ಗಲಿನ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಂಡರು . ದುಡಿಮೆ ಕಾಯಕ ಆಚರಣೆ ಅನುಷ್ಠಾನ ಮುಂತಾದ ಹೊಸ ಹೊಸ ಅನ್ವೇಷಣೆಗಳ ಜೊತೆಗೆ ಶರಣರು ಆಹಾರ ಪದ್ದತಿಗೆ ಆಧ್ಯತೆ ನೀಡಿದರು.
ಶರಣರಿಗೆ ಆಹಾರ ಪದಾರ್ಥವಾಗಿರಲಿಲ್ಲ ಅದು ಸತ್ಯ ಶುದ್ಧ ಕಾಯಕದಿಂದ ಬಂದ ಪ್ರಸಾದವಾಗಿತ್ತು. ಆಹಾರವನ್ನು ಪ್ರಸಾದವೆಂದರು, ಪದಾರ್ಥಕ್ಕೆ ಹೊಸ ಪಾವಿತ್ರ್ಯದ ಅರ್ಥ ಕಲ್ಪಿಸಿದರು ಶರಣರು. ಕಾರಣ ಹಂಗಿನ ಅರಮನೆಗಿಂತ ದುಡಿಮೆಯ ಗುಡಿಸಲು ಶ್ರೇಷ್ಠ ಎಂದು ನಂಬಿ ಬದುಕಿದರು ಶರಣರು.
ದಾನವನ್ನು ಶರಣರು ಎಂದೂ ಒಪ್ಪಲಿಲ್ಲ ಆದರೆ ದಾಸೋಹವನ್ನು ಬೆಳೆಸಿದರು.ದಾನವು ಒಬ್ಬ ವ್ಯಕ್ತಿಯ ಅಂಕಿತಕ್ಕೆ ದಾಕ್ಷಿಣ್ಯಕ್ಕೆ ಒಳಗಾಗುವದು.ದಾನದಲ್ಲಿ ಕೊಟ್ಟವನು ದೊಡ್ಡವನು ಮತ್ತು ತೆಗೆದುಕೊಂದವನು ಚಿಕ್ಕವ ಸಣ್ಣವನೆನಿಸಿಕೊಳ್ಳುತ್ತಾನೆ .ಇಂತಹ ಅಸಮಾನತೆಯನ್ನು ಹೋಗಲಾಡಿಸಲೆಂದೇ ಬಸವಣ್ಣ ದಾಸೋಹ ಪದ್ದತಿಯನ್ನು ಶರಣ ಸಂಕುಲಕ್ಕೆ ಪರಿಚಯಿಸಿದನು. ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯಾ ಎಂದು ಅತ್ಯಂತ ಕಳಕಳಿಯಿಂದ ಬಸವಣ್ಣ ಕೇಳಿಕೊಂಡಿದ್ದಾನೆ.
ಪಡಿ ಮತ್ತು ಪದಾರ್ಥವು ಪ್ರಸಾದವಾಗುವ ಪವಿತ್ರ ಕ್ರಿಯೆಯು ಕಾಯಕ ಮತ್ತು ದಾಸೋಹದ ಮೂಲಕ ನೆರವೇರುತ್ತದೆ . ಕಾಯಕ ( Collection of Wealth ) ದಾಸೋಹ (Distribution of Wealth ) ಕಾಯಕವು ವೃತ್ತಿ ಗೌರವ ಸಮಾನತೆ ಕಂಡುಕೊಂಡರೆ ದಾಸೋಹ ಸಾಮಾಜಿಕ ಸಾರ್ವತ್ರಿಕ ಸಮಾನತೆ
ಎತ್ತಿ ಹಿಡಿಯುತ್ತೆ. ಶರಣರು ದಾನವನ್ನು ಉಗ್ರವಾಗಿ ವಿರೋಧಿಸಿದರು ಆದರೆ ದಾಸೋಹವನ್ನು ಅಷ್ಟೆ ಸರಳವಾಗಿ ಒಪ್ಪಿದರು.ಕಾಯಕದಿಂದ ಬಂದ ಕಾರೆಯ ಸೊಪ್ಪದಾರೂ ಲಿಂಗಕ್ಕೆ ಅರ್ಪಿತ ಇದು ಶರಣರ ಗಟ್ಟಿ ಧ್ವನಿ.
ಪ್ರಸಾದ ಶರಣರಿಗೆ ಕೇವಲ ಆಹಾರವಾಗಲಿಲ್ಲ ಅದು ಬದುಕಿನ ಅವಶ್ಯಕತೆ ಜೊತೆಗೆ ಪ್ರಾಮಾಣಿಕ ಜೀವನದ ಸಂಕೇತವಾಗತೊಡಗಿತ್ತು .
ಬಸವಣ್ಣನವರು
ಕೊಲ್ಲೆನಯ್ಯಾ ಪ್ರಾಣಿಗಳ ಮೆಲ್ಲೆನಯ್ಯಾ ಬಾಯಿಚ್ಚೆಗೆ
ಒಲ್ಲೆನಯ್ಯ ಪರಸತಿಯರ ಸಂಗವ …
ಇಲ್ಲಿ ಮನುಷ್ಯ ತನ್ನ ಬದುಕಿಗಾಗಿ ಏನೆಲ್ಲಾ ಹರ ಸಾಹಸ ಮಾಡುತ್ತಾನೆ ಪ್ರಾಣಿಗಳ ಹತ್ಯೆ ಇನ್ನೊಬ್ಬರನ್ನು ಹಿ೦ಸಿಸುವದು ಬಾಯಿಚ್ಚೆಗೆ ಮಾ೦ಸ ತಿನ್ನುವದು .
ಪರಸತಿಯರ ಸಂಗವ ಮಾಡುವದು ಅಪರಾಧ ಎಂದು ಬಸವಣ್ಣ ಹೇಳಿಕೊಂಡಿದ್ದಾರೆ.
ಮುಂದುವರೆದ ಬಸವಣ್ಣ
ಕೊಲುವವನೆ ಮಾದಿಗ ಹೊಲಸು ತಿ೦ಬುವವನೆ ಹೊಲೆಯ
ಕುಲವೇನೋ ಆವಂದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲ ಸಂಗನ ಶರಣರೆ ಕುಲಜರು .ಪ್ರಾಣಿ ಹತ್ಯೆ ಮಾಡಿ ಮಾ೦ಸ ತಿನ್ನುವವ ಹೊಳೆ ಮಾದಿಗರು ಎಂದು ಟೀಕಿಸಿದ್ದಾರೆ.
ಒಡಲ ಕಳವಳಕ್ಕೆ ,ಬಾಯ ಸವಿಗೆ
ಬಯಸಿ ಉಂಡೆನಾದಡೆ ನಿಮ್ಮ ತೊತ್ತಿನ ಮಗನಲ್ಲ ,
ಬೇಡೆ ಬೇಡೆ ನಿಮ್ಮ ನ೦ಬಿದ ಸಧ್ಭಕ್ತರ
ಅವರೊಕ್ಕುದನು೦ಬೆನೆ೦ದ೦ತೆ ನಡೆವೆ
ಎನ್ನೊಡೆಯ ಕೂಡಲ ಸಂಗಮದೆವನೋಲ್ಲದವರ ಹಿಡಿದೆನಾದಡೆ
ನಿಮ್ಮ ಪಾದದ ಆಣೆ . ಬಸವಣ್ಣ -ವಚನ ಸ೦ .೭೮೫ ಪುಟ ೧೯೯
ಒಡಲ ಕಳವಳಕ್ಕೆ ಹಸಿವಾಗಿ ಮತ್ತು ಬಾಯ ಸವಿಗೆ ರುಚಿಗೆ ಆಸೆ ಪಟ್ಟು ಬಯಸಿ ಉಂಡರೆ ಅದು ಪ್ರಮಾದ ಕಾರಣ ಶರಣರ ತೊತ್ತಿನ ಮಗ ಅವರನ್ನು ಬೇಡೆ ಕಾಡೆನು, ಅವರೊಕ್ಕುದನು೦ಬೆನೆ೦ದ೦ತೆ ನಡೆವೆ ಕಾಯಕ ಮಾಡಿ ಶರಣರ ಆಜ್ಞೆಯಂತೆ ಆದಾಯವನ್ನು ಸಮಷ್ಟಿಗೆ ಬಳಸುವೆ ಇದು ಪ್ರಮಾಣವೆಂದು ತಿಳಿಸುತ್ತಾರೆ.
ಪ್ರಸಾದವು ಸತ್ಯ ಶುದ್ಧವಾಗಿರಬೇಕು ಕಾಯಕ ಮೂಲದಿಂದ ಬಂದಿರಬೇಕು ಮತ್ತು ಪ್ರಸಾದ ಸೇವೆನೆಯ ಸಮಯದಲ್ಲಿ ಚಿತ್ತ ಶಾಂತರಾಗಿ ಶ್ರದ್ಧೆಯಿಂದ ಸ್ವೀಕರಿಸಬೇಕು ಇದನ್ನೆ ಬಸವಣ್ಣನವರು ಹೀಗೆ ಹೇಳಿದ್ದಾರೆ .
ಮೌನದಲು೦ಬುವುದು ಆಚಾರವಲ್ಲ
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೆಕು
ಕರಣವ್ರತ್ತಿಗಳಡಗುವವು
ಕೂಡಲ ಸಂಗನ ನೆನೆವುತ್ತ ಉಂಡಡೆ ಬ ಸ ವ ಸ೦ -೧ ಸಂಖೆ – ೭೮೭
ಪ್ರಸಾದವು ಬಂದ ಮೇಲೆ ಮೌನದಲ್ಲಿ ಉಣ್ಣುವುದು ಆಚಾರವಲ್ಲ ಲಿಂಗಾರ್ಪಿತವ ಮಾಡಿದ ಬಳಿಕ ಶರಣರನ್ನು ಮತ್ತು ಅವರ ಕಾಯಕವನ್ನು ನೆನೆಯಬೇಕು
ಆಗ ಕರಣ ಇಂದ್ರಿಯ ನಿರ್ನಾಳ ಗ್ರಂಥಿಗಳ ಸರಿಯಾಗಿ ಕೆಲಸ ಮಾಡಬಲ್ಲವು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಇದೆ ರೀತಿ ಇನ್ನೋರ್ವ ವಚನಕಾರ್ತಿ ಅಕ್ಕಮ್ಮ ತನ್ನ ಒಂದು ವಚನದಲ್ಲಿ
ಬೆಳ್ಳೆ ಭಂಗಿ,ನುಗ್ಗಿ,ಉಳ್ಳೆ ಮೊದಲಾದವನೆಲ್ಲವ ಬಿಡಬೇಕು
ಬೆಳ್ಳೆಯಲ್ಲಿ ದೋಷ ಭಂಗಿ ನುಗ್ಗಿಯಲ್ಲಿ ಲಹರಿ, ಉಳ್ಳೆಯಲ್ಲಿ ದುರ್ಗುಣ
ವ್ರತ ಲಿಂಗಕ್ಕೆ ಸಲ್ಲವಾಗಿ ಈ ನಾಲ್ಕು ಬಂದ ಬಂದಲ್ಲಿ ದೋಷವುಂಟು
ಆಚಾರವೇ ಪ್ರಾನವಾದ ರಾಮೇಶ್ವರಲಿಂಗದಲ್ಲಿ
ವ್ರತಕ್ಕೆ ಅಹುದಲ್ಲ ಅಂಬುದನರಿಯಬೇಕು. ಅಕ್ಕಮ್ಮ -ಸ ವ ಸ೦ ೫ -೫೨೯ ಪುಟ ೧೬೫
ಈ ವಚನದಲ್ಲಿ ಬಳ್ಳೊಳ್ಳಿ ಅತಿಯಾದ ಕಾರಪುಡಿ ಭಂಗಿ ನುಗ್ಗೆಕಾಯಿ ಮತ್ತು ಈರುಳ್ಳಿ ಇಂತಹ ಪದಾರ್ಥವನ್ನು ತಿನ್ನುವದರಿಂದಾ ವ್ರತವಂತ ತನ್ನ ಮನೋ ನಿಗ್ರಹ ಕಡಿಮೆ ಮಾಡಿಕೊಂಡು ಇಂದ್ರಿಯ ಚಾಪಲ್ಯಕ್ಕೆ ಹಾತೊರೆಯುತ್ತಾನೆ. ಇದು ಆರೋಗ್ಯ ದ್ರಷ್ಟಿಯಿ೦ದಲೂ ಸರಿಯಾಗಿದೆ.
ಪ್ರಸಾದವು ಕಠಿಣ ಪರಿಶ್ರಮದಿಂದ ಕೂಡಿರಬೇಕು ಕೊಟ್ಟವನ ಹಮ್ಮು ಬಿಮ್ಮು ಅಂತಸ್ಥಿಕೆ ಹೊಗಳುವಿಕೆ ಇರಬಾರದು ಮತ್ತು ದಾಸೋಹದಲ್ಲಿ ವ್ಯವಹಾರ ಯಾಂತ್ರಿಕತೆ ಇರಬಾರದು .
ಇದನ್ನು ಆಯ್ದಕ್ಕಿ ಲಕ್ಕಮ್ಮಳು ಈ ರೀತಿ ಹೇಳಿದ್ದಾಳೆ.
ಮಾಡಿ ನೀಡಿ ಹೊದೆನೆ೦ಬಾಗ ಕೈಲಾಸವೇನು ಕೈಕೂಲಿಯೆ ?
ಮುಂದೊಂದ ಕಲ್ಪಿಸದೆ ಹಿಂದೊಂದ ಭಾವಿಸದೆ ಸಲೆ ಸಂದಿದ್ದಾಗವೆ
ಮಾರಯ್ಯ ಪ್ರಿಯ ಅಮರೇಶ್ವರ ಲಿಂಗವಿದ್ದ ಠಾವೆ ಕೈಲಾಸ – ಆಯ್ದಕ್ಕಿ ಲಕ್ಕಮ್ಮ -೭೩೬ ಸ೦ಪುಟ -೫
ಸಂದರ್ಭ ಸಮಯವಿದ್ದಾಗಲೆಲ್ಲ ಸಮಾಜಮುಖಿ ಕೆಲಸ ಮಾಡಿದರೆ ಅಂತ ಭಕ್ತನ ಅಂಗಳವೇ ಕೈಲಾಸ ಎಂದು ಲಕ್ಕಮ್ಮ ಹೇಳಿದ್ದಾಳೆ.
ಇದನ್ನು ಚೆನ್ನ ಬಸವಣ್ಣ ತಮ್ಮ ವಚನದಲ್ಲಿ ಹೀಗೆ ಹೇಳಿದ್ದಾರೆ.
ಗುರುವೆಂಬ ಗೂಳಿ ಮುಟ್ಟಲು ಶಿಷ್ಯನೆ೦ಬ ಮಣಿಕ ತೆನೆಯಾಯಿತ್ತು .
ಲಿಂಗವೆಂಬ ಕಿಳುಗರು ತನುವೆ ಕೆಚ್ಚಲು ಮನವೇ ಮೊಲೆವಾಲು.
ಅರಿದಲ್ಲಿ ಐಕ್ಯ ,ಮರೆದಲ್ಲಿ ಸಾಹಿತ್ಯ
ಇದು ಕಾರಣ ಕೂಡಲ ಸಂಗಯ್ಯನಲ್ಲಿ
ಅನಾಚಾರಿಗಲ್ಲದೆ ಪ್ರಸಾದವಿಲ್ಲ -ಚೆನ್ನಬಸವಣ್ಣ ಸ ವ ಸ೦ -೩ ಸಂಖೆ -೧೧೯೦
ಗುರುವೆಂಬ ಗೂಳಿ ಶಿಷ್ಯನೆ೦ಬ ಮಣಿಕಕ್ಕೆ ಕೂಡಿತ್ತು ,ಆಗ ಹುಟ್ಟಿದ ಕಿಳುಗರುವಿಗೆ ತನುವೆ ಕೆಚ್ಚಲು ಮನವೆ ಮೊಲೆ ಹಾಲು ಅರಿದಲ್ಲಿ ಐಕ್ಯ ,ಮರೆದಲ್ಲಿ ಸಾಹಿತ್ಯ ,ಬದುಕಿನ ಸರಳತೆಯನ್ನು ಶರಣರು ಪ್ರಾಂಜಲ ಮನಸ್ಸಿನಿಂದ ಚರ್ಚಿಸಿದ್ದಾರೆ .ಅರಿವಿಲ್ಲದವರಿಗೆ ದುಡಿಯದವರಿಗೆ ಅನಾಚಾರಿಗೆ ಪ್ರಸಾದವಿಲ್ಲ ಇದು ಚೆನ್ನಬಸವಣ್ಣನವರ ಕಟ್ಟಾಜ್ಞೆ . ಅನಾಚಾರಿಗಳು ಇಂತಹ ಪ್ರಸಾದ ಪವಿತ್ರ ಕಾರ್ಯಕ್ಕೆ ಪಾತ್ರರಲ್ಲ .
ಕೇವಲ ಆಹಾರ ಪದ್ದತಿಯಿಂದ ಜಾತಿ ನಿರ್ಣಯಿಸುವ ಹೇಯ ಕ್ರತ್ಯವನ್ನು ದೇಶದ ಮೊದಲನೆಯ ದಲಿತ ವಚನಕಾರ್ತೆ ಉರಿಲಿಂಗಿಪೆದ್ದಿಗಳ ಪುಣ್ಯ ಸ್ತ್ರೀ ಈ ರೀತಿ ಕಾಳವ್ವೆಖಂಡಿಸಿದ್ದಾಳೆ .
ಕುರಿ ಕೋಳಿ ಕಿರಿಮೀನು ತಿ೦ಬುವರಿಗೆಲ್ಲ ಕುಲಜ ಕುಲಜರೆಂದೆಬರು
ಶಿವಗೆ ಪಂಚಾಮ್ರತವ ಕರೆವ ಪಶುವ ತಿಂಬ ಮಾದಿಗ ಕೀಲು ಜಾತಿಯೆ೦ಬರು
ಅವರೆಂಟು ಕೀಳು ಜಾತಿಯಾದರು? ಜಾತಿಗಳು ನೀವೇಕೆ ಕೀಳಾಗಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು .
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣ ಶೋಭಿತವಾಯಿತು.
ಅದೇನ್ತದೆ ಸಿದ್ದಲಿಕೆಯಾಯಿತು ಸಗ್ಗಳೆಯಾಯಿತು
ಸಿದ್ದಲಿಕೆಯ ತುಪ್ಪವನ್ನು ಸಗ್ಗಲೆಯ ನೀರನ್ನು
ಶುದ್ಧವೆಂದು ಕುಡಿವ ಬುದ್ಧಿಗೇಡಿ ವಿಪ್ರರಿಗೆ ನಾಯಕ ನರಕ ತಪ್ಪದಯ್ಯಾ
ಉರಲಿಂಗ ಪೆದ್ದಿಗಳ ಅರಸು ಒಲ್ಲನವ್ವಾ -ಕಾಳವ್ವೆ ಸ ವ ಸ೦ ೫-ಸಂಖ್ಯೆ -೭೩೩ ಪುಟ ೨೨೫
ಅಂದಿನ ಕಾಲದ ಉಚ್ಚ ಕುಲದವರು ವಿಪ್ರರು ಕುರಿ ಕೋಳಿ ತಿನ್ನುತಿದ್ದರು ಆದರೆ ಆಕಳು ತಿನ್ನುವ ಮಾದಿಗರಿಗೆ ಕೀಳು ಎನ್ನುತಿದ್ದರು.ಆಕಳಿನ ಕ್ಷೀರ ಮತ್ತು ಸಗ್ಗಳೆಯ ನೀರನ್ನು ಕೂಡಿಸಿ ಕುಡಿಯುವವರು ಎಂತಹ ಉಚ್ಚ ಕುಲದವರು ಎಂದು ಪ್ರಶ್ನಿಸಿದ್ದಾಳೆ .
ಆಹಾರ ಅತ್ಯಂತ ಸರಳ ಹಾಗು ವಂಚನೆ ರಹಿತ ದುಡಿಮೆಯಿಂದಕೂದಿರಲು ದೈವವೇ ತನಗೂ ಇಟ್ಟು ಕೊಳ್ಳದೆ ಪ್ರಸಾದವನ್ನು ಭಕ್ತಂಗೆ ಕರುಣಿಸುವನು ಎಂದು ಚೆನ್ನ ಬಸವಣ್ಣ ಹೇಳಿದ್ದಾರೆ .
ಸವಿಕರದಿಂದ ಪರಿಕರದಿಂದ ರುಚಿಕರದಿಂದ ಪದಾರ್ಥಕರದಿಂದ
ತನು ಮನ ಧನ ವಂಚನೆಯಿಲ್ಲದೆ
ಶರಣ ಮಾಡುವಲ್ಲಿ ನೀಡುವಲ್ಲಿ
ಕೂಡಲ ಚೆನ್ನ ಸಂಗಯ್ಯ ನಿಮಗೆ
ಎಂದೂ ತನಗೆನ್ನದ ಕಾರಣ ಚೆನ್ನ ಬಸವಣ್ಣ ಸಂಪುಟ ೩-ಸಂಖ್ಯೆ ೨೭೬ ಪುಟ ೮೭
ಸತ್ಯ ಶುದ್ಧವಾದ ವಂಚನೆ ರಹಿತ ಆದಾಯವು ಶರಣರ ಕಾರ್ಯಗಳಲ್ಲಿ ನೀಡುವಲ್ಲಿ ಕೊಟ್ಟರೆ ಕೂಡಲ ಚೆನ್ನ ಸಂಗಯ್ಯನೂ ಸಹಿತ ಸಹಾಯ ಮಾಡುವನು .
ಅಂಬಲಿ ಅತ್ಯಂತ ಸರಳ ಮತ್ತು ಸುಚಿಕರ ಸ್ವಾರಸ್ಯಕರ ಸುಲಭ ಜೀರ್ಣವಾಗುವ ಯಕ್ರತಕ್ಕೆ ( LIVER ) ಹಿತವಾಗುವ ಪ್ರಸಾದವೆ ಅಂಬಲಿ ಸಾಧಕರಿಗೆ ಅಮೃತ .
ನಡೆ ಚೆನ್ನ ನುಡಿ ಚೆನ್ನ ಎಲ್ಲಿ ನೋಡಿದಡಲ್ಲಿ ಚೆನ್ನ
ಪ್ರಮಥರೊಳು ಚೆನ್ನ ಪುರಾತನರೊಳು ಚೆನ್ನ
ಸವಿದು ನೋಡಿ ಅಂಬಲಿ
ರುಚಿಯಾಯಿತ್ತೆಂದು
ಕೂಡಲ ಸಂಗಮದೆವಂಗೆ ಬೇಕೆಂದು
ಕೈದೆಗೆದ ನಮ್ಮ ಚೆನ್ನ — ಬಸವಣ್ಣ ಸ ವ ಸ೦ ೧-ಸಂಖ್ಯೆ ೭೯೫ ಪುಟ ೨೦೨
ಮಾದಾರ ಚೆನ್ನ ಬಸವಣ್ಣನವರ ಹಿರಿಯ ಸಮಕಾಲಿನ ಶರಣ ಅವನು ಸಿದ್ಧ ಪಡಿಸುವ ಅ೦ಬಲಿಯಲ್ಲಿ ಎಲ್ಲರಿಗೂ ಹಿತವಾಗುವ ಆದ್ಯತೆ ಪಡೆದಿತ್ತು .ಅಂಬಲಿ ರುಚಿಗೆ ಕೂಡ ಸಂಗಯ್ಯನೆ ತನಗೆ ಬೇಕೆಂದು ಬಿನ್ನವಿಸಿದಾಗ ಅಡ್ಡ ಗಟ್ಟಿದ ಕೈಯನ್ನು ಚೆನ್ನಯ್ಯನು ತೆಗೆದನು ಎಂದು ಬಸವಣ್ಣ ಹೇಳಿದ್ದಾರೆ .ಸತ್ಯ ಶುಧ್ಹ ನಡೆ ನುಡಿ ವ್ಯಕ್ತಿತ್ವ ಹೊಂದಿದ ಮಾದಾರ ಚೆನ್ನಯ್ಯನ ಅ೦ಬಲಿ ಎಲ್ಲರ ಪ್ರೀತಿಗೆ ಗೌರವಕ್ಕೆ ಪತ್ರವಾಗುತ್ತದೆ ಇಲ್ಲಿ ಜಾತಿ ನಿರ್ನಾಮಗೊಂಡು ಸಮಾನ ಮನಸ್ಸಿನ ಶುದ್ಧ ಪ್ರಸಾದವನ್ನು ಯಾರಾದರೂ ಸಮಷ್ಟಿಗೆ ಸಿದ್ಧಪದಿಸ್ದರೆ ಅದು ದೈವತ್ವಕ್ಕೆ ಪಾತ್ರವಾಗುವದೆ೦ದು ಬಸವಣ್ಣನವರ ವಾದ .
ಅಲ್ಲಮರು ಕಲ್ಯಾಣದ ಶರಣ ಸಂಕುಲದಲ್ಲಿ ಒಬ್ಬ ಹಿರಿಯ ಜ್ಞಾನವಂತ ಮೇಧಾವಿಗಳು ಆಹಾರದ ಬಗ್ಗೆ ಅವರು ನೋಡುವ ದ್ರಷ್ಟಿಕೊನವೆ ಬೇರೆ .ಅವರಿಗೆ ಆಹಾರವೊಂದು ಜೀವ ನಿರ್ವಹಣೆಗೆ ಬೇಕಾದ ಸಾಮಗ್ರಿ ಆದರೆ ಅದು ಲಿಂಗಾರ್ಪಿತವಾಗಿರಬೇಕು.
ಜೀವಕ್ಕೆ ಜೀವವೇ ಆಧಾರ
ಜೀವ ತಪ್ಪಿಸಿ ಜೀವಿಸಬಾರದು .
ಪೃಥ್ವಿ ಬೀಜಂ ತಥಾ ಮಾ೦ಸ೦ಜೇವೊ ಜೀವೆನ ಭಕ್ಷಯೇತ್ II
ಎಂದುದಾಗಿ ಅಹಿಂಸ ಪರಮೊಧರ್ಮವೆಂಬ ಶ್ರಾವಕರನು ಕಾಣೆ.
ಲಿಂಗಾರ್ಪಿತವಾದ್ದುದೆಲ್ಲ ಶುದ್ಧ :ಉಳಿದುದೆಲ್ಲ ಜೀವನ್ಮಯ ಕಾಣಾ.ಗುಹೇಶ್ವರ -ಅಲ್ಲಮಪ್ರಭು ಸ ವ ಸ೦ ೨ ವಚನ ಸಂಖ್ಯೆ ೧೨೧೦ ಪುಟ ೩೫೮
ಶರಣ ಸಂಕುಲಕ್ಕೆ ಬೇರೆ ಬೇರೆ ಪ್ರದೇಶದಿಂದ ಜನ ಬಂದರು ನಯನಾರರು ಅಂಡಾಳರು ಶೈವ ಪರ೦ಪರೆಯ ಕಾಳಮುಖಿಗಳು,ಕಾಪಲಿಕರು ನಾಥ ಪರ೦ಪರೆಯ ಯೋಗಿಗಳು ನಾಗಾಗಳು ಅನೇಕ ಪಂಥವರ ಆಹಾರ ಪದ್ದತಿಯು ಬೇರೆ ಬೇರೆಯಾಗಿತ್ತು .
ಅನುಭವ ಮಂಟಪಕ್ಕೆ ಅತ್ಯಂತ ಸತ್ಯ ಶುದ್ಧ ಶಾಖಾಹಾರಿ ಸಸ್ಯಾಹಾರಿ ಆಹಾರ ಕಡ್ಡಾಯವಾಗಿತ್ತು .ಆಗ ಶರಣರಿಗೆ ಇರುಸು ಮುರುಸು ಆಗಿರಬಹುದು ಇದನ್ನು ಗಂಭಿರವಾಗಿ ವೀಕ್ಷಿಸಿ ಅಲ್ಲಮರು ಜೀವಕ್ಕೆ ಜೀವವೇ ಆಧಾರ ,ಜೀವ ತಪ್ಪಿಸಿ ಜೀವಿಸಬಾರದು . ಬೀಜದಲ್ಲೂ ಸಸ್ಯದಲ್ಲೂ ಜೀವವಿದೆ .ಕಾರಣ
ಅಹಿಂಸ ಪರಮೊಧರ್ಮವೆಂಬ ಶ್ರಾವಕರನು ಜೈನರ ವಿಚಾರ ಗಟ್ಟಿಯಾಗಿ ನಿಲ್ಲದು ಎಂಬ ಶಂಖೆಯನ್ನು ವ್ಯಕ್ತಪಡಿಸಿ ,ಲಿಂಗಾರ್ಪಿತವಾದ್ದುದೆಲ್ಲ ಶುದ್ಧ :ಉಳಿದುದೆಲ್ಲ ಜೀವನ್ಮಯ ಕಾಣಾ.ಗುಹೇಶ್ವರ ಎಂದು ಸಮಜಾಯಿಸಿ ಆಹಾರ ಮತ್ತು ಪ್ರಸಾದದ ಘನತೆ ಹೆಚ್ಚಿಸಿದ್ದಾರೆ .
ಮುಂದಿನ ಒಂದು ವಚನದಲ್ಲಿ ಬಸವಣ್ಣನವರೂ ಸಹಿತ
ಎಡದ ಕೈಯಲ್ಲಿ ಕಟ್ಟಿ,ಬಲದ ಕೈಲ್ಲಿ ಮಾ೦ಸ
ಬಾಯಲ್ಲಿ ಸುರೆಯ ಗಡಿಗೆ ,ಕೊರಳಲ್ಲಿ ದೇವನಿರಲು
ಅವರ ಲಿಂಗನೆಂಬೆ ಸಂಗನೆಂಬೆ
ಕೂಡಲ ಸಂಗಮದೇವ ಅವರ ಮುಖಿಲಿಂಗಿಗಳೇ೦ಬೆನು ಬಸವಣ್ಣ -ಸಂಖ್ಯೆ ೭೨೦ ಪುಟ ೧೮೦
ಶರಣರು ಪರಿವರ್ತನೆಗೆ ಹಾತೊರೆದವರು ಬದುಕಿನ ಕ್ರಮವನ್ನೇ ಪ್ರಶ್ನಿಸಿ ಭಕ್ತರನ್ನು ದೂರ ಇಡದೆ ಅವರನ್ನು ಪ್ರಮುಖ ವಾಹಿನಿಗೆ ತಂದು ಅವರನ್ನು ಸತ್ಯವನತರನ್ನು ಶುದ್ದ ಸಿದ್ಧಕರನ್ನು ಮಾಡಿದ ಕೀರ್ತಿ ಶರಣರಿಗೆ ಬಸವಾದಿ ಶರಣರಿಗೆ ಸಲ್ಲಬೇಕು.ಬೇರೆ ಬೇರೆ ಆಹಾರ ಪದ್ದತಿಯ ಶರಣರು ಮುಂದೆ ಸಸ್ಯಾಹಾರಿಗಳಾದರು .
ಅಂತೆಯೇ ಕಬೂಲದಿಂದ ಬಂದ ಪೀರ ಮಹಮ್ಮದ ಮುಂದೆ ಕಲ್ಯಾಣದ ಮುಸುರೆ ಗುಂಡಿಯಲ್ಲಿದ್ದು 12 ವರ್ಷ ಕನ್ನಡ ಕಲಿತು ಶರಣರು ಉಂಡುಟ್ಟ ಪ್ರಸಾದವೂ ವ್ಯಯವಾಗದಂತೆ ನೋಡಿಕೊಂಡು ಅದರಲ್ಲಿನ ಅಲ್ಪ ಸ್ವಲ್ಪ ಆಹಾರವನ್ನೇ ಪ್ರಸಾದ ಮಾಡಿ ಇತರರಿಗೂ ಹಂಚಿ ಗುಪ್ತವಾಗಿ ಬದುಕಿದ್ದ ಈತ ಮರುಳ ಶಂಕರದೇವನಾಗಿ ಪ್ರಸಿದ್ಧಿ ಪಡೆದನು .ಪ್ರಸಾದ ಅಪವ್ಯಯವಾಗಬಾರದು ಸತ್ಯ ಶುದ್ಧವಾಗಿರಬೇಕು .
ಶರಣರು ಸಸ್ಯಾಹಾರಿಗಳಗಿದ್ದರು ಎಂದು ಆರ್ ಸಿ ಕಾರ್ (The Monograph of Lingayata religion –RC.CARR .1906 ) ಎಂಬ ಪುಸ್ತಕದಲ್ಲಿ ದಾಖಲಿಸಿದ್ದಾರೆ .
ಬಸುರಿಗೆ ಮಾಡಿದ ಸುಖ ದುಖಗಳು ಶಿಶುವಿಗೆ ಮೂಲವೆಂದು ಶರಣರು ಹೇಳಿದಂತೆ ಈ ಜೀವ ಕೋಶಕ್ಕೆ ಆಹಾರವನ್ನು ಪದಾರ್ಥವಾಗಿರಸದೆ ಪ್ರಸಾದವೆ೦ಬ ಪವಿತ್ರ ಫಲವನ್ನು ಕಂಡು ಕೊಂಡು ಶರಣರು ಮಾನವತೆಯ ಮಹಾಸಿದ್ಧಿಯನ್ನು ಸಾಧಿಸಿದರು.
ಶರಣರು ನೀಡಿದ ಉನ್ನತ ವಿಚಾರ ಆದರ್ಶಗಳು ತತ್ವ ಸಿದ್ಧಾಂತಗಳು ಸರ್ವಕಾಲಕ್ಕೂ ಪ್ರಸ್ತುತವಾಗಿವೆ. ಕಲ್ಯಾಣ ನಾಡಿನ ಶರಣರು ನಿತ್ಯ ಸತ್ಯ ಶೋಧಕರು. ತಾವು ಕಂಡ ತಾತ್ವಿಕ ನಿಲುವನ್ನು ಇನ್ನೊಬ್ಬರಿಗೂ ಉಣಬಡಿಸಿದವರು.
ಪ್ರಸಾದವಿದ್ದಲ್ಲಿ ಎಂಜಲುವಿಲ್ಲ, ಜಾತಿಯಿಲ್ಲ ,ಭೇದವಿಲ್ಲ . ಅದು ಸಮತೆ ಸಾಮರಸ್ಯ ಕಂಡುಕೊಳ್ಳುವ ಸೂತ್ರ . ಕಾಯಕ ದಾಸೋಹ ಪ್ರಸಾದ ಶರಣರು ಕಂಡ ಶ್ರೇಷ್ಠದರ್ಶನಗಳು .
ಡಾ ಶಶಿಕಾಂತ ರುದ್ರಪ್ಪ ಪಟ್ಟಣ