ಬಸವೇಶ್ವರ ಅಧ್ಯಯನ ಪೀಠ ಸಬಲವಾಗಲಿ….

ಬಸವೇಶ್ವರ ಅಧ್ಯಯನ ಪೀಠ ಸಬಲವಾಗಲಿ….

1970 ರ ದಶಕದ ಆದಿಭಾಗದಲ್ಲಿ ನಮ್ಮ ನಾಡಿನ ಲಿಂಗಾಯತ ವಿರಕ್ತ ಪರಂಪರೆಯ ಮೇರು ಪೂಜ್ಯರಲ್ಲೊಬ್ಬರಾಗಿದ್ದ ಮುರುಗೋಡ ದುರದುಂಡೀಶ್ವರ ಮಠದ ಪರಮ ಪೂಜ್ಯ ಶ್ರೀ ಮ.ನಿ.ಪ್ರ.ಮಹಾಂತ ಶಿವಯೋಗಿಗಳವರಿಗೆ ಭಕ್ತರೆಲ್ಲ ಸೇರಿ ಶತಮಾನೋತ್ಸವ ಸಮಾರಂಭವನ್ನೇರ್ಪಡಿಸಿ ಪೂಜ್ಯರಿಗೆ ಭಕ್ತಿಯ ಸನ್ಮಾನದೊಂದಿಗೆ ಹಮ್ಮಣಿಯಾಗಿ ಕಾಣಿಕೆಯನ್ನು ಸಮರ್ಪಿಸಿದ್ದರು. ಇದನ್ನು ಸ್ವೀಕರಿಸಿದ ಪೂಜ್ಯರು ಅದು ಸದ್ವಿನಿಯೋಗವಾಗಬೇಕೆಂದು ಸಂಕಲ್ಪಿಸಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಬಸವಾದಿ ಶರಣಶರಣೆಯರ ಹಾಗೂ ಅವರ ಕುರಿತಾದ ಸಾಹಿತ್ಯದ ಅಧ್ಯಯನ,ಪ್ರಸಾರ ಹಾಗೂ ಪ್ರಚಾರಕ್ಕಾಗಿ ಬಸವೇಶ್ವರ ಅಧ್ಯಯನ ಪೀಠ ಎಂಬ ವಿಶೇಷ ಅಧ್ಯಯನ ವಿಭಾಗ ಆರಂಭಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿ ಆ ಹಮ್ಮಿಣಿಯ ಹಣವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದರು.

ಆಗಿನ ಕುಲಪತಿಗಳು ಕೂಡಲೇ ಬಸವೇಶ್ವರ ಅಧ್ಯಯನ ಪೀಠವನ್ನು ಆರಂಭಿಸಿ ಅದರ ನಿರ್ದೇಶಕರನ್ನಾಗಿ ಡಾ. ಎಂ.ಎಂ.ಕಲಬುರ್ಗಿಯವರನ್ನು ನೇಮಿಸಿದರು.ಅಗಾಧ ವಿದ್ವತ್ತು ಹಾಗೂ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದ ಶರಣ ಸಾಹಿತ್ಯ ಸಂಶೋಧಕರಾದ ಡಾ. ಕಲಬುರ್ಗಿಯವರು ಅನೇಕ ಮಹತ್ವದ ಹಾಗೂ ಪ್ರಾಚೀನವಾದ ತಾಳೆಗರಿಯ ಕಟ್ಟುಗಳನ್ನು ಸಂಗ್ರಹಸಿ ಹಸ್ತಪ್ರತಿ ಗ್ರಂಥಾಲಯವನ್ನು ರೂಪಿಸಿದ್ದರು.

ಅಗಾಧವಾದ ಶರಣ ಸಾಹಿತ್ಯದ ಅಪ್ರಕಟಿತ ಸಾಹಿತ್ಯದ ಸಂಪಾದನೆಯ ಜೊತೆಗೆ ಶರಣ ಸಾಹಿತ್ಯ ಹಾಗೂ ಜಾಗತಿಕ ಅನುಭಾವ ಸಾಹಿತ್ಯದ ಅಂತರ್ಶಿಸ್ತೀಯ ತೌಲನಿಕ ಕೃತಿಗಳ ಪ್ರಕಟಣೆಯ ಮೂಲಕ ವಿಶ್ವ ವಿದ್ಯಾಲಯವು ತಮಗೆ ವಹಿಸಿದ ಈ ಗುರುತರವಾದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಿಸಿ ಅದಕ್ಕೊಂದು ಭದ್ರವಾದ ಬುನಾದಿಯನ್ನು ಹಾಕಿದರು.ಮುಂದೆ ಕಾರಣಾಂತರಗಳಿಂದಾಗಿ ಬಸವೇಶ್ವರ ಅಧ್ಯಯನ ಪೀಠದಿದ ನಿರ್ಗಮಿಸಿದರು.

ಅವರ ನಿರ್ಗಮನದ ನಂತರ ನಿಷ್ಕ್ರಿಯವಾಗಿದ್ದ ಈ ಪೀಠಕ್ಕೆ ಜೀವಕಳೆಯನ್ನು ತುಂಬಿದವರು ಡಾ.ಎಂ.ಎಂ.ಕಲಬುರ್ಗಿಯವರ ಶಿಷ್ಯರೂ ಹಾಗೂ ವಚನ ಸಾಹಿತ್ಯದ ಮೇರು ವಿದ್ವಾಂಸರೂ ಆದ
ಡಾ.ವೀರಣ್ಣ ರಾಜೂರ ಗುರುಗಳವರು . ಇವರು ಇದರ ಕರ್ಣಧಾರತ್ವವನ್ನು ವಹಿಸಿಕೊಂಡ ಮೇಲೆ ಆ ಪೀಠಕ್ಕಾಗಿ ಸುಮಾರು 2 ಎಕರೆದಷ್ಟು ಜಮೀನು ಪಡೆದು ಅದಕ್ಕಾಗಿ ಸುಂದರವಾದ ಕಟ್ಟಡ ನಿರ್ಮಿಸಿ ಮೊದಲಿನಂತೆ ಅಮೂಲ್ಯ ಗ್ರಂಥಗಳ ಪ್ರಕಟಣೆ,ರಾಷ್ಟ್ರೀಯ ವಿಚಾರ ಸಂಕಿರಣಗಳಂಥ ಚಟುವಟಿಕೆಗಳ ಮಹತ್ವದ ಕೇಂದ್ರವಾಗಿಸಿದರು.ಡಾ.ಎಂ.ಎಂ.ಕಲಬುರ್ಗಿಯವರು ಆಡಳಿತಾತ್ಮಕ ಕಾರಣಗಳಿಂದಾಗಿ ಅಂದು ಹೇಗೆ ನಿರ್ಗಮಿಸಿದರೋ ಹಾಗೆಯೇ ಡಾ.ವೀರಣ್ಣ ರಾಜೂರ ಅವರೂ ಕೂಡ ನಿರ್ಗಮಿಸಬೇಕಾಯಿತು.

ಈ ಪೀಠವು ಇವರೀರ್ವರ ನಿರ್ಗಮನದ ನಂತರ ಮೊದಲಿನಷ್ಟು ಕ್ರಿಯಾಶೀಲವಾಗಿರದೇ ತೀರಾ ಬಡವಾದಂತಾಯಿತು. ಮುಂದೆ ಧಾರವಾಡದ ಸಮಾರಂಭವೊಂದರಲ್ಲಿ ಗದುಗಿನ ಲಿಂ.ಜಗದ್ಗುರು ಶ್ರೀ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ತಮ್ಮ ಹರಿತವಾದ ಮಾತುಗಳ ಮೂಲಕ ವಿಶ್ವವಿದ್ಯಾಲಯನ್ನು ಎಚ್ಚರಿಸಿದರು.ಈ ಘಟನೆಯ ನಂತರ ಕುಲಪತಿಗಳು ಬಸವೇಶ್ವರ ಅಧ್ಯಯನ ಪೀಠದ ಸಲಹಾ ಸಮಿತಿಯ ಸಭೆಯನ್ನು ಕರೆದು ಪೀಠದ ನಿರ್ದೇಶಕರ ಸ್ಥಾನಕ್ಕಾಗಿ ಬೆಂಗಳೂರು ಬಸವೇಶ್ವರ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾಗಿದ್ದ ಪ್ರೊ.ಸಿ.ಎಂ.ಕುಂದಗೋಳ ಅವರನ್ನು ನಿರ್ದೇಶಕರನ್ನಾಗಿ ನೇಮಿಸಿದರು. ನಮ್ಮ ನಾಡಿನ ಪ್ರತಿಷ್ಠಿತ ವಿಶ್ವವಿದ್ಯಾಲಯವು ತಮಗೆ ವಹಿಸಿದ ಈ ಗುರುತರವಾದ ಹೊಣೆಗಾರಿಕೆಯನ್ನು ಪ್ರೀತಿ ಮತ್ತು ಅಭಿಮಾನಪೂರ್ವಕವಾಗಿ ವಹಿಸಿಕೊಂಡ ಶರಣ ಸಾಹಿತ್ಯದ ವಿದ್ವಾಂಸರೂ, ದಕ್ಷ ಆಡಳಿತಗಾರರೂ ಆದ ಪ್ರೊ.ಸಿ.ಎಂ.ಕುಂದಗೋಳರವರು ಈ ಪೀಠದ ಪರಿಸ್ಥಿತಿಯನ್ನು ಸುಧಾರಿಸುತ್ತ,ಅದರಲ್ಲೂ ಮುಖ್ಯವಾಗಿ ಆರ್ಥಿಕ ಮುಗ್ಗಟ್ಟಿನ ಸ್ಥಿತಿಯನ್ನೂ ಮನಗಂಡು ಸಮಾಜದ ದಾನಿಗಳಿಂದ ದೇಣಿಗೆ ಪಡೆದು ಪೀಠದ ಆಶಯದಂತೆ ಅದರ ಚಟುವಟಿಕೆಗಳನ್ನು ಅದರಲ್ಲೂ ಈಗಿನ ಕೊರೋನಾ ಪೀಡಿತ ಸಂದರ್ಭದಲ್ಲೂ ಸಂಪೂರ್ಣ ಸಮರ್ಪಣಾ ಭಾವದಿಂದ ಮುಂದುವರೆಸಿಕೊಂಡು ಹೊರಟಿರುವುದು ನಿಜಕ್ಕೂ ನಮ್ಮೆಲ್ಲರಿಗೂ ಅಭಿಮಾನದ ಸಂಗತಿಯಾಗಿದೆ.

ಅದಕ್ಕಾಗಿ ನಾವುಗಳೆಲ್ಲ ನಮ್ಮ ಹೆಮ್ಮೆಯ ವಿಶ್ವವಿದ್ಯಾಲಯಕ್ಕೂ ಮತ್ತು ಬಸವೇಶ್ವರ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ.ಸಿ.ಎಂ.ಕುಂದಗೋಳ ಗುರುಗಳವರಿಗೂ ಗೌರವಪೂರ್ವಕವಾಗಿ ಅಭಿನಂದಿಸುತ್ತೇವೆ. ಪರಮ ಪೂಜ್ಯ ಮುರುಗೋಡದ ಶತಾಯುಷಿ ಲಿಂಗೈಕ್ಯ ಪೂಜ್ಯರ ಆಶಯ ಸಂಪೂರ್ಣವಾಗಿ ಸಾಕಾರಗೊಳ್ಳಲು ಈ ಪೀಠವು ಇನ್ನಷ್ಟು ವ್ಯಾಪಕವಾಗಿ ತನ್ನ ಚಟುವಟಿಕೆಯನ್ನು ವಿಸ್ತರಿಸಿಕೊಳ್ಳಬೇಕಾದ ಅವಶ್ಯಕತೆ ಇದೆ.ಅದಕ್ಕಾಗಿ ಈ ಕೆಳಗಿನ ಅಂಶಗಳನ್ನು ನಮ್ಮ ವಿಶ್ವವಿದ್ಯಾಲಯವು ಸಮಸ್ತ ಲಿಂಗಾಯತ ಸಮುದಾಯದ ಆಶಯವೆಂದು ತಿಳಿದು ಜಾರಿಗೆ ತರಬೇಕೆಂದು ವಿನಂತಿಸುತ್ತೇವೆ.
1.ಈಗ ವಿಶ್ವವಿದ್ಯಾಲಯದ ಡಾ. ಆರ್. ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠದ ಅಡಿಯಲ್ಲಿರುವ ಬಸವ ಡಿಪ್ಲೋಮಾ ಕೋರ್ಸನ್ನು ಬಸವೇಶ್ವರ ಅಧ್ಯಯನ ಪೀಠಕ್ಕೆ ಸೇರಿಸುವದು.
2.ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಎಂ.ಫಿಲ್,ಪಿಹೆಚ್.ಡಿ ಪದವಿಗಳಿಗಾಗಿನ ಹಾಗೂ ಪ್ರಾಧ್ಯಾಪಕರು ಯುಜಿಸಿ ಯೋಜನೆಯಡಿಯಲ್ಲಿ ಕೈಗೊಳ್ಳುವ ಶರಣರು ಹಾಗೂ ಶರಣ ಸಾಹಿತ್ಯ ಸಂಬಂಧದ ಸಂಶೋಧನಾ ಅಧ್ಯಯನ ಮತ್ತು ಅವುಗಳ ಪ್ರಕಟಣೆಗಳು ಇದೇ ಬಸವೇಶ್ವರ ಅಧ್ಯಯನ ಪೀಠದಿಂದಲೇ ನಡೆಯುವಂತಾಗಬೇಕು.
3.ಇಂಥ ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆಗಾಗಿ ವಿಶ್ವವಿದ್ಯಾಲಯವು ಇದಕ್ಕೆ ಪ್ರತ್ಯೇಕವಾದ ಪ್ರಾಧ್ಯಾಪಕ ಹಾಗೂ ಕಚೇರಿ ಸಿಬ್ಬಂದಿಯನ್ನು ನೇಮಿಸಬೇಕು.
4.ಬಸವೇಶ್ವರ ಅಧ್ಯಯನ ಪೀಠದಲ್ಲಿ ಮುರುಗೋಡದ ಲಿಂಗೈಕ್ಯ ಪೂಜ್ಯರು ಹಿಂದೆ ನೀಡಿದ್ದ ತಮ್ಮ ಹಮ್ಮಣಿಯ ಮೊತ್ತ ಆ ಕಾಲಕ್ಕೆ ತುಂಬಾ ದೊಡ್ಡದೇ.ಆದರೆ ಈ ಕಾಲಕ್ಕೆ ಅದರಿಂದ ಬರುವ ಬಡ್ಡಿಯ ಮೊತ್ತ ಬಹಳ ಸಣ್ಣದು.ಕಾರಣ ಈ ಅಲ್ಪ ಮೊತ್ತದಿಂದ ಈಗಿನ ಸಂದರ್ಬದಲ್ಲಿ ಪೀಠದ ಚಟುವಟಿಕೆಗಳನ್ನು ವಿಸ್ತರಿಸುವ ಕಾರ್ಯ ಕಠಿಣವಾದುದು.ಕಾರಣ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು ಪೀಠದ ನಿರ್ದೇಶಕರಿಗೆ ನಮ್ಮ ಸಮಾಜದ ದಾನಿಗಳು, ಮಠಾಧಿಪತಿಗಳು ಹಾಗೂ ಜನಪ್ರತಿನಿಧಿಗಳಿಂದ ಪೀಠದ ಅಭಿವೃದ್ಧಿ ಹಾಗೂ ಚಟುವಟಿಕೆಗಳಿಗಾಗಿ ವಿಶೇಷ ದೇಣಿಗೆಯನ್ನು ಪಡೆಯುವ ಅನುಮತಿಯನ್ನು ನೀಡಬೇಕು. ಹಾಗೂ ಮಾನ್ಯ ಕುಲಪತಿಗಳು ಸರಕಾರದಿಂದ ವಿಶೇಷ ಆರ್ಥಿಕ ನೆರವನ್ನು ದೊರಕಿಸುವಲ್ಲಿ ಸಹಾಯವನ್ನು ಮಾಡಬೇಕೆಂದು ವಿನಂತಿಸುತ್ತೇವೆ.
ಈ ಮೂಲಕ ಬಸವೇಶ್ವರ ಅಧ್ಯಯನ ಪೀಠದ ಚಟುವಟಿಕೆಗೆ ಬಲವನ್ನು ತುಂಬುವುದರೊಂದಿಗೆ ಇಂಥ ಪೀಠವನ್ನು ಸ್ಥಾಪಿಸಿದ ನಮ್ಮ ವಿಶ್ವವಿದ್ಯಾಲಯದ ಘನತೆಗೂ ಮತ್ತಷ್ಟು ಮೆರಗನ್ನು ತುಂಬಬೇಕಾಗಿದೆ.

ಪ್ರೊ.ಶಶಿಧರ ತೋಡಕರ
ಡಾ.ಕೆ. ಶಶಿಕಾಂತ
ಶ್ರೀ ವೀರೇಶ ಸೌದ್ರಿ
ಶ್ರೀಮತಿ ಸುನಿತಾ ಮೂರುಶಿಳ್ಳಿ

2 thoughts on “ಬಸವೇಶ್ವರ ಅಧ್ಯಯನ ಪೀಠ ಸಬಲವಾಗಲಿ….

  1. ಯಾರು ಮಾಡಬೇಕು ಸರ್. 

    ಬಸವತತ್ವ ಪ್ರಸಾರ ಬೆರಳೆಣಿಕೆಯಷ್ಟು ಜನ ಇದ್ದೇವೆ. ಉಳಿದಂಥವರು ಬೆಂಕಿ ಹತ್ತಿದ ಮನೆಯ ಗಳ ಹಿರಿಯುವಂತೆ ಕೇವಲ ಮಠಾಧೀಶರನ್ನು ಬೈಯುತ್ತ whatsapp group ಗಳಲ್ಲಿ ರೊಕ್ಕಾ collection ಗೆ ಇಳಿದಿದ್ದಾರೆ.

    ಏನ ಮಾಡಬೇಕು ನೀವೇ ಹೇಳಿ.

    ಬಸವತತ್ವವನ್ನು ಇಡೀ ಜೀವನ ತುಂಬ ಭೋಧಿಸಿ ಸಂತೃಪ್ತ ವಿಶ್ರಾಂತ ಜೀವನ ನಡೆಸುತ್ತಿರುವವರು ಈ ಕಡೆ ತಿರುಗಿಯೂ ನೋಡತಾ ಇಲ್ಲ. 

    ಒಂದು ನೂರು ಸರತಿ ಈ ಪೀಠಕ್ಕೆ ಭೇಟಿ ಕೊಟ್ಟಿದ್ದೇನೆ. ಏನೂ ಪ್ರಯೋಜನವಿಲ್ಲದಂಥಾ ಪರಿಸ್ಥಿತಿ ಇದೆ. 

    ನಾನು ಒರಟಾಗಿ ಬರೆಯುತ್ತೇನೆ. ತಪ್ಪಾಗಿ ಭಾವಿಸಬೇಡಿ.

    sssss

Comments are closed.

Don`t copy text!