ಬಯಲಲ್ಲಿ ಬಯಲಾದ ಶ್ರೀ ಚಂದ್ರಶೇಖರಪ್ಪ ಬಸಪ್ಪ ಬಡ್ನಿ

ಬಯಲಲ್ಲಿ ಬಯಲಾದ ಶ್ರೀ ಚಂದ್ರಶೇಖರಪ್ಪ ಬಸಪ್ಪ ಬಡ್ನಿ

(ನುಡಿನಮನ)

e-ಸುದ್ದಿ, ಮುಳಗುಂದ

ಸನ್ಮಾನ್ಯ ಲಿಂಗೈಕ್ಯ ಶ್ರೀ ಚಂದ್ರಶೇಖರಪ್ಪ ಬಸಪ್ಪ.ಬಡ್ನಿ ಇವರು ಅವಿರತ ಹಾಗೂ ಅವಿಸ್ಮರಣೀಯ ಸೇವೆಯನ್ನು ಕೇವಲ ಮುಳುಗುಂದ ಪಟ್ಟಣಕ್ಕೆ ಮಾತ್ರವಲ್ಲದೆ ಇಡೀ ಗದಗ ಜಿಲ್ಲೆಯಲ್ಲಿ ಗುರುತಿಸಿಕೊಳ್ಳುವ ಧೀಮಂತ ವ್ಯಕ್ತಿತ್ವವನ್ನು ಹೊಂದಿದವರಾಗಿದ್ದರು.

ಇಡೀ ಗದಗ್ ಜಿಲ್ಲೆಯಲ್ಲಿ ಮಾದರಿ ಪಟ್ಟಣ ಪಂಚಾಯತಿಯ ರೂವಾರಿಗಳಾಗಿದ್ದು ಅರ್ಬನ್ ಬ್ಯಾಂಕ್, ದೊಡ್ಡ ಪತ್ತಿನ ಸಹಕಾರಿ ಬ್ಯಾಂಕ್, ಶೈಕ್ಷಣಿಕ, ಸಾಮಾಜಿಕ ಆರ್ಥಿಕ, ಧಾರ್ಮಿಕ-ಆಧ್ಯಾತ್ಮಿಕ, ಔದ್ಯೋಗಿಕ, ಕೃಷಿಕ, ಹಾಲು ಉತ್ಪಾದಕರ ಸೊಸೈಟಿ ಎಣ್ಣೆಕಾಳು ಸೊಸೈಟಿ ಜಾತ್ರಾ ಮಹೋತ್ಸವ ಕಮಿಟಿ, ಗದಗ ಎ. ಪಿ. ಎಂ. ಸಿ. ಇನ್ನು ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ನಭೋ ನ: ಭವಿಷ್ಯತಿ ಎನ್ನುವಂತೆ ಅವಿಸ್ಮರಣೀಯ, ಸ್ತುತ್ಯಾರ್ಹ ಕಾರ್ಯವನ್ನು ಮಾಡಿ ಇನ್ನೂ ನೂರಾರು ವರ್ಷಗಳ ಕಾಲ ಜನಮಾನಸಗಳಲ್ಲಿ ಜೀವಂತವಾಗಿ ಉಳಿಯುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.
ನಿಜ ಶರಣರಿಗೆ ಮರಣವೆಂಬುದೇಯಿಲ್ಲ. ಶರಣರಿಗೆ ಮರಣವೇ ಮಹಾನವಮಿ ಆಗಿರುತ್ತದೆ.ಶ್ರೀಯುತ ಸಿ.ಬಿ.ಬಡ್ನಿಯವರ ಷಷ್ಠಬ್ದಿ ಕಾರ್ಯಕ್ರಮಕ್ಕೆ ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ಆಗಮಿಸಿದ್ದು ಶ್ರೀಯುತರ, ವ್ಯಕ್ತಿತ್ವವನ್ನು ಎತ್ತಿ ತೋರಿಸುತ್ತದೆ.
ಇಂದು ಲಿಂಗೈಕ್ಯ ಸಿ.ಬಿ.ಬಡ್ನಿಯವರು ತಾವು ಬಂದ ಕಾರ್ಯವನ್ನು ಅಚ್ಚುಕಟ್ಟಾಗಿ ಅವಿಸ್ಮರಣೀಯವಾಗಿ ಮುಗಿಸಿ ಇಹಲೋಕ ಯಾತ್ರೆಯನ್ನು ಮುಗಿಸಿಿ .  ಬಯಲಿನಲ್ಲಿ ಬಯಲಾಗಿದ್ದಾರೆ.

ನಿರುಪಮ ನಿರಾಳನು ನೋಡಾ ಲಿಂಗೈಕ್ಯನು. ನಿಸ್ಸೀಮ ನಿರ್ಜಡನು ನೋಡಾ ಲಿಂಗೈಕ್ಯನು.ನಿ:ಕಳಂಕ ನಿಶ್ಯಬ್ದನು ನೋಡಾ ಲಿಂಗೈಕ್ಯನು.ನಿರಾವರಣ ನಿರಂಜನನು ನೋಡಾ ಅಖಂಡೇಶ್ವರಾ ನಿಮ್ಮ ನಿಜ ಲಿಂಗೈಕ್ಯನು

ನಿಜವನರಿದ ನಿಶ್ಚಿಂತನೇ, ಮರಣವ ಗೆಲಿದ ಮಹಂತನೆ, ಘನವ ಕಂಡೆ ಮಹಿಮನೆ, ಪರವನೊಳಕೊಂಡ ಪರಣಾಮಿಯೆ, ಬಯಲಲೊದಗಿದ ಭರಿತನೆ, ಗುಹೇಶ್ವರಲಿಂಗ ನಿರಾಳವನೊಳಕೊಂಡ ಸಹಜನೆ

ಎನ್ನುವ ಶರಣರ ವಚನದಂತೆ ಬಾಳಿ ಬದುಕಿ ಮುಂದೆಯೂ ಬದುಕಿ ಉಳಿಯುವ ಕಾಯಕವನ್ನು ಮಾಡಿ ಹೋಗಿದ್ದಾರೆ.

ಮುಳಗುಂದದ ಪಾಲಿಗೆ ಸೂರ್ಯ ಚಂದ್ರರಂತೆ ಕಂಗೊಳಿಸಿದ್ದ ಜಿನೈಕ್ಯ ಶ್ರೀ ಆರ್ ಎನ್ ದೇಶಪಾಂಡೆಯವರು ಮಹಾದಾನಿಗಳಾಗಿ ಲಿಂಗಕ್ಕೆ ಶ್ರೀ ಸಿ.ಬಿ.ಬಡ್ನಿಯವರು ಅಭಿವೃದ್ಧಿಯ ಹರಿಕಾರರಾಗಿ ಕೇವಲ ಒಂದು ತಿಂಗಳಲ್ಲಿ ಬಯಲಲ್ಲಿ ಬಯಲಾದದ್ದು ಮುಳುಗುಂದ ಪಾಲಿಗೆ ದುರಂತವೆಂದೇ ಹೇಳಬಹುದು.

ಬಯಲು ಬಯಲನೆ ಬಿತ್ತಿ, ಬಯಲು ಬಯಲನೆ ಬೆಳೆದು, ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲು ಭಾವನೆ; ಬಯಲು ಬಯಲಾಗಿ ಬಯಲಾಯಿತ್ತಯ್ಯ. ನಿಮ್ಮ ಪೂಜಿಸಿದವರು ಮುನ್ನವೇ ಬಯಲಾದರು ನಾನು ನಿಮ್ಮ ನಂಬಿ ಬಯಲಾದೆ ಗುಹೇಶ್ವರ

ಒಂದು ಊರು ಒಂದು ಸಮಾಜ ಹಲವಾರು ಸಂಘ ಸಂಘಟನೆಗಳು ಸಂಸ್ಥೆಗಳು ಮಾಡಬೇಕಾದ ಕಾರ್ಯವನ್ನು ಒಬ್ಬರೇ ಮಾಡಿ ಆದರ್ಶ ಪುರುಷರಾಗಿ ನಮ್ಮೆಲ್ಲರ ಅಂತರಾತ್ಮದಲ್ಲಿ ನೆಲೆಯೂರಿದ ಲಿಂಗೈಕ್ಯ ಶ್ರೀ ಸಿ.ಬಿ.ಬಡ್ನಿಯವರ ಲಿಂಗ ಶರೀರಕ್ಕೆ ಶತಕೋಟಿ ಶರಣು ಶರಣಾರ್ಥಿಗಳು.

-ರವೀಂದ್ರ ಆರ್ ಪಟ್ಟಣ

Don`t copy text!