ಕಥೆ
ಪ್ರತೀಕಾರ
ನರಸಿಂಹ ಸೈಕಲ್ ಓಡಿಸುತ್ತಿದ್ದರೂ ಅವನ ಮನಸ್ಸು ಮಾತ್ರ ಗೌರಿಯನ್ನೇ ಪದೇ ಪದೇ ನೆನೆಯುತ್ತಿತ್ತು. ಪಾಪ, ಎಲ್ಲಿದ್ದಾಳೋ, ಹೇಗಿದ್ದಾಳೋ ಎಂದು ಅವನು ಆಲೋಚಿಸುತ್ತಿದ್ದ ಹಾಗೆಯೇ ಅವನ ಸೈಕಲ್ ಹಳ್ಳ ದಿಣ್ಣೆಗಳಿಂದ ಕೂಡಿದ ಆ ರಸ್ತೆಯಲ್ಲಿ ಕುಣಿದು ಕುಪ್ಪಳಿಸುತ್ತಿತ್ತು. ಆ ದಿನ ಅಮಾವಾಸ್ಯೆ, ಬಾನಿನಲ್ಲಿ ಚಂದಿರನಿರಲಿಲ್ಲ. ಹಳ್ಳಿ ಗಾಡಿನ ರಸ್ತೆಯಾದ್ದರಿಂದ ಬೀದೀ ದೀಪಗಳನ್ನು ಕೇಳಲೇ ಬೇಕಿರಲಿಲ್ಲ. “ನಾನು ಈಗ ಹೊರಡಲೇಬಾರದಾಗಿತ್ತು. ಈ ರಾತ್ರಿ ಅಲ್ಲಿಯೇ ಮಲಗಿದ್ದು ಬೆಳಗ್ಗೆ ಹೊರಡಬಹುದಿತ್ತು” ಎಂಬ ಮನಸ್ಸಿನ ಮಾತುಗಳು ನಾಲಿಗೆಯ ತುದಿಯಿಂದ ಹೊರ ಹೊರಟು, ತನ್ನ ಕಿವಿಗೇ ಕೇಳಿಸುವಷ್ಷು ಜೋರಾಗಿತ್ತು.
ಅಂದು ಬೆಳಗ್ಗೆ ಊರಾಚೆಯ ಗುಡ್ಡದ ಬಯಲಿನಲ್ಲಿ ಎಂದಿನಂತೆ ಮೇಯಲು ಹೋದ ಗೌರಿ, ಸಂಜೆ ಹಿಂಡಿನ ಜೊತೆ ಬಾರದಿದ್ದಾಗ ನರಸಿಂಹನಿಗೆ ಬಹಳ ಆತಂಕವಾಗಿತ್ತು. ದನಗಳನ್ನು ಅಟ್ಟಿಕೊಂಡು ಹೋದ ಅವನ ಹದಿನಾಲ್ಕು ವರ್ಷದ ಹಿರೀ ಮಗ ಗಂಗೆ ಮತ್ತು ಅದರ ಕರುವಿನೊಂದಿಗೆ ಮಾತ್ರ
ಹಿಂದುರುಗಿದ್ದ. ಮನೆಯ ಮುಂದಿನ ಜಗುಲಿಯ ಮೇಲೆ ಕುಳಿತು ಕಾಳೇ ಗೌಡನ ಜೊತೆ ಹರಟೆ ಹೊಡೆಯುತ್ತಿದ್ದ ನರಸಿಂಹ, ‘ಗೌರಿ ಎಲ್ಲಲಾ?’ಎಂದು ಮಗನನ್ನು ಪ್ರಶ್ನಿಸಿದಾಗ ಅವನು ನಿಂತಲ್ಲೇ ನಡುಗಿಹೋದ. ” ಬೇಜವಾಬ್ದಾರಿ ನನ್ನ ಮಗನ್ನ ತಂದು, ಬಾಯಿ ಬಿಡಲೇ” ಎನ್ನುತ್ತಾ ಮಗನ ಬಳಿ ಸಾರಿ, ಬೆನ್ನಿನ ಮೇಲೆ ನಾಲ್ಕು ಗುದ್ದು ಗುದ್ದುವಷ್ಟರಲ್ಲಿ ಒಳಗಿಂದ ಬಂದ ನಿಂಗಿ ಮಗನನ್ನು ಬಿಡಿಸಿಕೊಂಡಳು. ನೀನು ಮಧ್ಯಕ್ಕೆ ಬರಬೇಡ……ಆವೇಶದಲ್ಲಿ ಕೂಗಾಡತೊಡಗಿದ ನರಸಿಂಹ. ” ಈಗ ಆದದ್ದು ಆಗಿ ಹೋತು, ಮೊದಲು ಹಸ ಹುಡುಕುವ, ಇನ್ನಾ ನಮ್ಮಪ್ಪ ಮನೀಕೊಳಕ್ಕೆ ಸಾನೆ ಒತ್ತು ಉಳಿದಿಲ್ಲ” ಎಂದ ಕಾಳೇಗೌಡನ ಮಾತಿಗೆ ತನ್ನ ಕರ್ತವ್ಯದ ನೆನಪಾಗಿ, ಮಗನನ್ನೂ ಜೊತೆಯಲ್ಲಿ ಕರೆದುಕೊಂಡು ಹಸುವನ್ನು ಹುಡುಕಲು ಹೊರಟ. ಕಾಳೇಗೌಡನೂ ಅವರನ್ನು ಕೂಡಿಕೊಂಡ. ಇತ್ತೀಚೆಗೆ ಆ ಊರಿನ ಸುತ್ತಮುತ್ತ ಕಿರುಬನ ಹಾವಳಿ ಜೋರಾಗಿದ್ದುದ್ದರಿಂದ ಅವನ ಎದೆ ಕೆಡುಕನ್ನು ಶಂಕಿಸಿ ಸಣ್ಣದಾಗಿ ನಡುಗಿತು. ಗೌರೀ…….. ಬ್ಬ…..ಬ್ಬ ……..ಗೌರೀ ಎನ್ನುತ್ತಾ, ಮಗನೊಂದಿಗೆ ಊರ ಪ್ರದೇಶದ ಸುತ್ತ ಮುತ್ತ ಅವರೆಲ್ಲರೂ ಎರಡು ಮೂರು ಗಂಟೆ ಹುಡುಕಾಡಿದರೂ ಏನೂ ಪ್ರಯೋಜನವಾಗಲಿಲ್ಲ.
ಜೋತ ಮುಖ ಹೊತ್ತು ಮನೆ ತಲುಪಿದಾಗ, ಬಾಗಿಲಿನಲ್ಲೇ ಇವರಿಗಾಗಿ ಕಾಯುತ್ತಿದ್ದ ನಿಂಗಿ,
“ಏನು ಮಾಡಾದು, ನಮ್ಮ ಅದೃಷ್ಟ ನೇರ್ಪಾಗಿಲ್ಲ.. ಬಂಗಾರದಂತ ಅಸ, ಅನ್ಯಾಯವಾಗಿ ಹೋತಲ್ಲಾ….. ಎಂದು ಕಣ್ಣೀರು ಒರೆಸಿಕೊಂಡಳು.
ಈ ಸರೀ ಹೊತ್ತಾಗೆ ಮತ್ತೆ ಎಲ್ಲಿ ಅಂತ ಹುಡುಕಾಡಾಣ? ಒತ್ತಾರೆ ಬಿರ್ರನೆದ್ದು ಇನ್ನೊಂದಪ. ಹುಡುಕಿದರಾತು, ಮುದ್ದೆ ಉಣ್ಣುವಂತೆ, ಗಂಗಳ ಹಾಕಿವ್ನಿ ……..ಬಾ ” ಎಂದಾಗ ಮನಸ್ಸಿಲ್ಲದ ಮನಸ್ಸಿನಿಂದ ತಟ್ಟೆಯ ಮುಂದೆ ಕುಳಿತ. ಒಂದು ತುತ್ತು ಮುರಿದು ಬಾಯಿಗಿಟ್ಟನೂ ಇಲ್ಲವೋ, ಪಕ್ಕದ ಊರಿನ ತಿಪ್ಪಾ ಜೋಯಿಸರ ನೆನಪಾಯಿತು. “ಈಗ ಬಂದೆ ಇರಮ್ಮಿ” ಎನ್ನುತ ತಟ್ಟೆ ಬಿಟ್ಟು ಎದ್ದೇ ಬಿಟ್ಟ ನರಸಿಂಹಯ್ಯ. “ಅಸ್ಸೀ, ಊಟ ಅರ್ಧದಾಗೆ ಬಿಟ್ಡು ಎಲ್ಲೊರ್ಟೇ , ಉಂಡಕೊಂಡು ಹೋಗಯ್ಯೋ” ಎಂಬ ಹೆಂಡತಿಯ ಮಾತು ಕಿವಿಗೆ ತಲುಪುವ ಮೊದಲೇ ನರಸಿಂಹಯ್ಯ ಹೊಸ್ತಿಲು ದಾಟಿ ಆಗಿತ್ತು.
ಸೈಕಲ್ ಹತ್ತಿ ಒಂದೇ ಉಸಿರಿಗೆ ತುಳಿಯುತ್ತಾ, ತನ್ನ ಮನೆಯಿಂದ ಮೂರು ಕಿ. ಮೀ ದೂರದಲ್ಲಿದ್ದ ತಿಪ್ಪಾ ಜೋಯಿಸರ ಮನೆ ತಲುಪಿ ,ಅವರ ಮನೆಯ ಮುಂಬಾಗಿಲ ಬಳಿ ನಿಂತು, ” ಸಾಮೆ, ಸಾಮೇರಾ……” ಎಂದಾಗ, ಜೋಯಿಸರ ಹದಿನಾರು ವರ್ಷದ ಮಗ ವೆಂಕಟೇಶ ಹೊರ ಬಂದು, ಪ್ರಶ್ಙಾರ್ಥಕವಾಗಿ ನೋಡಿದ.. “ಸಾಮೇರಿಲ್ಲವಾ ಬುದ್ದೀ…….” ನರಸಿಂಹ ಹಲ್ಲು ಕಿರಿದ. ಈಗ ತಾನೇ ಊಟಕ್ಕೆ ಕುಳಿತಿದ್ದಾರೆ. ಸ್ವಲ್ಪ ಕಾಯಬೇಕಾಗುತ್ತದೆ ಎನ್ನುತ್ತಾ, ಹುಡುಗ ಒಳನಡೆದ. ಬಾಗಿಲ ಬಳಿ ಜಗುಲಿಯ ಮೇಲೆ ಕುಳಿತು ಕಾಯುತ್ತಿದ್ದ ನರಸಿಂಹನಿಗೆ ತನ್ನ ಬಳಿಯಿದ್ದ ಎಲೆಯಡಿಕೆ ಮೆಲ್ಲಲೂ ಸಹ ಮನಸ್ಸಾಗದೆ ಒಂದೊಂದು ನಿಮಿಷವೂ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ‘ಡೇವ್’ …ಎಂಬ ತೇಗೊಂದು ಜೋಯಿಸರಿಗಿಂತ ಮುಂಚಿತವಾಗಿ ಜಗುಲಿ ತಲುಪಿ, ಕುಳಿತಿದ್ದ ನರಸಿಂಹ ಎದ್ದು ನಿಂತು, ಭಕ್ತಿಯಿಂದ ಕೈ ಮುಗಿದ. ” ಇಷ್ಟೊತ್ತಿನಲ್ಲಿ ಏನು ಬಂದೆಯೋ ನರಸಿಂಹ? ತಮ್ಮ ಹೊರಲಾರದ ಹೊಟ್ಟೆಯನ್ನು ಬಲಗೈಯಲ್ಲಿ ಸವರಿಕೊಳ್ಕುತ್ತಾ ಜಗುಲಿಯ ಮೇಲೆ ಕುಳಿತು ಕೇಳಿದರು. “ಸಾಮೇ… ಮತ್ತೆ ನಮ್ಮ ಕೆಂದಸ ಐತಲ್ಲಾ…., ಅದೇ ಹೋದ ದಪ ಗಿಣ್ಣಾಲು ತಂದು ಕೊಟ್ಟಿದ್ದನಲ್ಲಾ ಸಾಮೇರಾ…. ಆ ಅಸ ಒತ್ತಾರೆ ಮೇಯಾಕೆ ಹೋದದ್ದು ಇಲ್ಲೀ ಗಂಟ ಬಂದಿಲ್ಲಾ……. ನಾನೂ ನನ್ನ ಮಗನೂ ಎಲ್ಲಾ ಕಡೆ ಹುಡುಕಿದ್ವಿ………. ಪತ್ತೇನೇ ಇಲ್ಲ ಅಂತೀನಿ..,… ಹೂತ ದನಿಯಲ್ಲಿ ಹೇಳಿದ. ಹೆಂಡತಿ ತಂದಿಟ್ಟ ತಾಂಬೂಲದ ತಟ್ಟೆಯಲ್ಲಿನ ಎಲೆಯೊಂದರ
ತೊಟ್ಟು ಮುರಿದು ಸುಣ್ಣ ಸವರುತ್ತಿದ್ದ ಅವರು, “ಸರಿಯಾಗಿ ಹುಡುಕಿದ್ಯೇನೋ……ಯಾರದಾದರೂ ಹೊಲದಲ್ಲಿ ಮೇಯಕ್ಕೆ ಹೋಗಿ ದಡ್ಡಿಗೆ ಕಟ್ಟಿರಬಹುದೇನೋ” ಎಂದು ಹೇಳಿ, “ಎಲೆ ಹಾಕ್ಕೋತ್ತಿಯಾ” ಎನ್ನುತ್ತಾ, ಒಂದೆರಡು ಎಲೆ ಮತ್ತು ನಾಲ್ಕೈದು ಗೋಟಡಿಕೆಗಳನ್ನು ಅವನಿಗೂ ನೀಡಿದರು. “ಅಯ್ಯೋ ಅಂಗೇನಾಗಿಲ್ಲ ಅಂತೀನೀ… ನಾನು ದಡ್ಡೀ ತಾವೂ ಹೋಗಿ ಬಂದೀವ್ನಿ….ನನ್ನ ದೊಡ್ಡ ಮಗ ಇನ್ನೂ ಹುಡುಕತಾನೇ ಅವ್ನೆ… ಎಲ್ಲೂ ಸುಳಿವಿಲ್ಲ. ನನಗೇನೋ ನಿಮ್ಮನ್ನ ಒಂದಪ ಕಂಡು, ಪ್ರಶ್ನೆ ಕೇಳಿ ಹೋಗುಮಾ ಅಂತ ಅನ್ನಿಸ್ತು, ಇತ್ತ ಕಡೀಕೆ ಓಡಿ ಬಂದೆ…… ” ಎಂದನು. ‘ತಡೀ ಬಂದೆ’ ಎನ್ನುತ್ತಾ ಒಳಗೆ ಹೋದ ಜೋಯಿಸರು, ಪಂಚಾಂಗದೊಂದಿಗೆ ಹೊರಬಂದರು. ಜಗುಲಿಯ ಮೇಲೆ ಪದ್ಮಾಸನದಲ್ಲಿ ಕುಳಿತು, ಕೂಡಿ, ಕಳೆದು, ಗುಣಿಸಿ, ಭಾಗಿಸಿ, ಆಕಾಶದ ಕಡೆ ಮುಖ ಮಾಡಿ ಕೆಲ ಸಮಯದ ನಂತರ, “ನೀನೇನೂ ಯೋಚನೆ ಮಾಡ್ಬೇಡ.. .ಹಸು ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲೇ ಇದೆ. ಜೀವಕ್ಕೇನೂ ಅಪಾಯ ಇಲ್ಲ. ನಾಳೆ ಸಂಜೆಯೊಳಗೆ ಅದಾಗದೇ ಮನೆಗೆ ಬರುತ್ತೆ ಚಿಂತೆಬೇಡ” ಎಂದು ಅಭಯ ನೀಡಿದರು. ನೀರಿನಲ್ಲಿ ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಸರೆ ಎಂಬಂತೆ ಅವರ ಮಾತಿನಿಂದ ಸಂತೋಷಗೊಂಡ ನರಸಿಂಹ..
“ಸರಿ ಸಾಮೇರ, ನೀವೇಳಿದ ಮ್ಯಾಕೆ ನನಗೆ ನೆಮ್ಮದಿ ಆತು” ಎಂದು ತನ್ನ ಜೇಬಿನಿಂದ ಇಪ್ಪತ್ತು ರೂಪಾಯಿಗಳ ನೋಟೊಂದು ಮತ್ತು ಒಂದು ರೂಪಾಯಿ ನಾಣ್ಯವನ್ನು ತೆಗೆದು, ಅವರ ಮುಂದಿದ್ದ ಹರಿವಾಣದಲ್ಲಿ ಇಟ್ಟು, “ಒಪ್ಪಿಸ್ಕೋಬೇಕು, ನಾನಿನ್ನು ಬತ್ತೀನಿ ….” ಎನ್ನುತ್ತಾ ಸೈಕಲ್ ಕಡೆಗೆ ಹೊರಟೇ ಬಿಟ್ಟ. ” ಅರೆ ನಿಂತು ಕೊಳ್ಳೋ, ಇಷ್ಟು ಹೊತ್ನಲ್ಲಿ ಎಲ್ಲಿಗೆ ಹೋಗುತ್ತೀಯ……. ಕಿರುಬ ಬೇರೆ ತಿರುಗುತ್ತಾ ಇದೆ ಅಂತ ಹೇಳ್ತಾರೆ, ಇಲ್ಲೆ ಜಗುಲಿ ಮೇಲೆ ಮಲಗಿದ್ದು, ಬೆಳಗ್ಗೆ ಹೋಗೂವಂತೆ…” ಎಂದ ಜೋಯಿಸರ ಮಾತಿಗೆ, ” ಇಲ್ಲ ಸಾಮೈ, ನನ್ನ ಹೆಂಡ್ರಿಗೂ ಸರಿಯಾಗಿ ಹೇಳದೆ ಬಂದಿವ್ನಿ, ಅವ್ಳು ಗಾಬರಿಯಾಗ್ತಾಳೆ…..” ಎನ್ನುತ್ತಾ ಸೈಕಲ್ ಏರಿದ.
ತನ್ನ ಊರ ಸಮೀಪದ ನೀಲಗಿರಿ ತೋಪಿನ ಬಳಿಗೆ ಬರುತ್ತಲೂ, ಅಲ್ಲಿ ಹಿಂದೆ ನಡೆದಿದ್ದ ಒಂದೆರಡು ಘಟನೆಗಳು ನರಸಿಂಹನಿಗೆ ನೆನಪಾಗಿ ಹೆದರಿಕೆಯಾಯಿತು. ಅಲ್ಲೆಲ್ಲಾ
ಗಾಳಿ ತಿರುಗ್ತಾ ಇರುತ್ತೆ ಅನ್ನೋ ಸಂಗತಿ ಅವನಿಗೆ ತಿಳಿಯದ್ದಲ್ಲ. ಊರಿನಲ್ಲಿ ಕೆಲ ತಿಂಗಳ ಹಿಂದೆ ಸತ್ತಿದ್ದ ಸಾವಿತ್ರಿಯ ಬಗ್ಗೆ ಜನ ಮಾತಾಡಿಕೊಳ್ಳುತ್ತಿರುವುದು ಆಗಾಗ ಇವನ ಕಿವಿಗೂ ಬಿದ್ದಿದ್ದು, ಈಗ ಅದು ನೆನಪಾಗಿ ತೊಡೆ ಸಣ್ಣದಾಗಿ ನಡುಗತೊಡಗಿತು ಜೋಯಿಸರ ಮಾತು ಕೇಳಿ, ಅಲ್ಲಿಂದಲೇ ಮನೆಗೊಂದು ಫೋನು ಹಾಕಿ, ಅವರ ಮನೆಯ ಜಗುಲಿಯ ಮೇಲೇ ಮಲಗಿದ್ದರೆ ಆಗ್ತಿತ್ತು. ಈಗೇನ್ ಮಾಡಾಕಾಯ್ತದೆ…… ಬೀರಪ್ಪನೇ ಕಾಪಾಡಬೇಕು ಎನ್ನುತ್ತಾ ಸೈಕಲ್ ವೇಗವನ್ನು ಹೆಚ್ಚಿಸಿದ. ಐದತ್ತು ನಿಮಿಷಗಳ ತರುವಾಯ ಅವನಿಗೆ ಏನೋ ಅನುಮಾನ ಬಂದು ಸುತ್ತಲೂ ನೋಡಿದ. ಏನಾಶ್ಚರ್ಯ! ಹತ್ತು ನಿಮಿಷಗಳ ಮೊದಲು ತಾನು ಎಲ್ಲಿದ್ದನೋ ಈಗಲೂ ಅಲ್ಲಿಯೇ ಇದ್ದಾನೆ. ಆ ನೀಲಗಿರಿ ತೋಪಿನಲ್ಲಿ. ನರಸಿಂಹ ಅರ್ಧ ರಾತ್ರಿಯಲ್ಲೂ ಬೆವರಲಾರಂಭಿಸಿದ. ನಡುಗುತ್ತಿದ್ದ ಕಾಲುಗಳನ್ನು ಹತೋಟಿಗೆ ತಂದುಕೊಂಡು, ತನ್ನ ದೇಹದಲ್ಲಿರುವ ಎಲ್ಲಾ ಶಕ್ತಿಯನ್ನೂ ಒಟ್ಟುಗೂಡಿಸಿ, ಜೋರಾಗಿ ತುಳಿಯುತ್ತಾ ಇದ್ದರೂ ಸೈಕಲ್ ಒಂದಿಂಚೂ ಮುುಂದೆ ಸರಿಯಲಿಲ್ಲ. ಪಂಚರ್ ಗಿಂಚರ್ ಆಗಿದೆಯೇನೋ ಎಂಬ ಸಂಶಯ ಮೂಡಿ, ಹಣೆಯಲ್ಲಿ ಸಾಲುಗಟ್ಟಿದ್ದ ಬೆವರೊರೆಸಿಕೊಂಡು ಸೈಕಲ್ಲಿಂದ ಕೆಳಗಿಳಿದು ಸ್ಟ್ಯಾಂಡ್ ಹಾಕಿದ. ಮುಂದಿನ ಚಕ್ರವನ್ನು ಒತ್ತಿ, ಗಾಳಿ ಇದೆಯೆಂದು ಖಚಿತ ಪಡಿಸಿಕೊಂಡ ನರಸಿಂಹ, ಹಿಂದಿನ ಚಕ್ರದ ಪಕ್ಕದಲ್ಲಿ ಕುಳಿತು ಪರೀಕ್ಷಿಸತೊಡಗಿದ. ಆಗ ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿ, ತನಗೆ ತೀರಾ ಸನಿಹದಲ್ಲೇ ಗೆಜ್ಜೆಯ ನಿನಾದ ಕೇಳಿಬರತೊಡಗಿತು. ಮೊದಲೇ ಬೆವೆತು ಒದ್ದೆಯಾಗಿದ್ದ ನರಸಿಂಹನ ಮೈ ಮಂಜಿನಂತೆ ಕೊರಡಾಯಿತು.
“ಅಯ್ಯಯ್ಯೋ ಕೆಟ್ಟನಲ್ಲಪ್ಪೋ!” ಎನ್ನುತ್ತಾ, ಸೈಕಲ್ ಹತ್ತಿ ಒಂದೇ ಉಸಿರಿಗೆ ವೇಗವಾಗಿ ಓಡಿಸತೊಡಗಿದನು. ಈಗ ಸೈಕಲ್ ಮುಂದಕ್ಕೇನೋ ಹೋಗುತ್ತಿತ್ತು. ಆದರೆ ಅದು ಯಾವ ದಿಕ್ಕಿನಲ್ಲಿ ಹೋಗುತ್ತಿದೆಯೆಂಬುದೇ ತಿಳಿಯುತ್ತಿರಲಿಲ್ಲ. ಸ್ವಲ್ಪ ದೂರ ಹೋಗುತ್ತಿದ್ದಂತೆ ಸೈಕಲ್ ಮುಂದಕ್ಕೆ ಚಲಿಸದೆ ನಿಂತು ಹೋಯಿತು. ನರಸಿಂಹ ತನ್ನೆಲ್ಲಾ ಶಕ್ತಿಯನ್ನು ಪ್ರಯೋಗಿಸಿ ತುಳಿದರೂ ಅದು ಒಂದಿಂಚೂ ಕದಲದಾಗಿ, ‘ದಬ್’ ಎಂದು ಅದರಿಂದ ಕೆಳಗುರುಳಿ ಬಿದ್ದನು. ಎದ್ದು, ಮೈ ಕೈಗೆ ಅಂಟಿಕೊಂಡಿದ್ದ ಮಣ್ಣನ್ಬು ಕೊಡವಿಕೊಂಡು ಸುತ್ತಲೂ ನೋಡಿದಾಗ, ಅವನು ತಮ್ಮ ಊರ ಕೆರೆಯ ಸಮೀಪದ ಸ್ಮಶಾಣದಲ್ಲಿದ್ದನು. ನಡುಗುತ್ತಿದ್ದ ಕಾಲುಗಳನ್ನು ಸ್ಥಿಮಿತಕ್ಕೆ ತಂದುಕೊಳ್ಳಲು ಯತ್ನಿಸುತ್ತಿದ್ದಂತೆ, ಅವನಿಂದ ಅನತಿ ದೂರದಲ್ಲಿರುವ ಒಂದು ಸಮಾಧಿಯ ಮೇಲೆ ಬೆಳ್ಳಗಿನ ಆಕಾರವೊಂದು ಕುಳಿತಿರುವುದು ಕಣ್ಣಿಗೆ ಬಿತ್ತು.
“ಟಾರ್ಚಾದರೂ ತರದೇ ಬಂದ್ನಲ್ಲಾ” ಎಂದು ಕೊಳ್ಳುತ್ತಾ, ಆ ಆಕಾರವನ್ನು ಹಾಗೆಯೇ ಗಮನಿಸಲು ಪ್ರಾರಂಭಿಸಿದನು. ಆ ಆಕಾರ ಇವನಿಗೆ ಬೆನ್ನು ಮಾಡಿ ಕುಳಿತ್ತಿತ್ತು. ಇವನು ನೋಡನೋಡುತ್ತಿದ್ದಂತೆಯೇ ಅದು ಜೋರಾಗಿ ಬಿದ್ದು ಬಿದ್ದು ನಗಲು ಪ್ರಾರಂಭಿಸಿ, ಇದ್ದಕ್ಕಿದ್ದಂತೆ
ಬಿಕ್ಕಿಬಿಕ್ಕಿ ಅಳತೊಡಗಿತು. ಅದರ ಅಳು ಇಡೀ ಸ್ಮಶಾನದ ತುಂಬ ಪ್ರತಿಧ್ವನಿಸಿತು. ನಂತರ ಒಂದು ಕ್ಷಣ ಮೌನವಾವರಿಸಿಕೊಂಡಿತು. ಆ ನೀರವ ರಾತ್ರಿಯಲ್ಲಿ ಅವನಿಗೆ ತನ್ನ ಉಸಿರಾಟದ ಸದ್ದೂ ಕೂಡ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅಲ್ಲಿಂದ ಹೇಗಾದರೂ ಓಡಿ ಹೋಗಬೇಕೆಂದು ಆಲೋಚಿಸಿ, ಮುಂದಕ್ಕೆ ಅಡಿಯಿಡುತ್ತಿದ್ದಂತೆಯೇ ಅವನ ದೇಹ ಗಾಳಿಯಲ್ಲಿ ತೇಲಲಾರಂಭಿಸಿತು. ನರಸಿಂಹ ಆಧಾರ ರಹಿತವಾಗಿ ಮೇಲಮೇಲಕ್ಕೆ ಏರ ತೊಡಗಿದನು. ನಾನಿನ್ನು ಸತ್ತೇ ಹೋಗುತ್ತೇನೆಂದು ತಿಳಿದು, ಬೀರಪ್ಪ, ………ಬೀರಪ್ಪ…….. ಎಂದು ಜೋರಾಗಿ ಜಪಿಸತೊಡಗಿದ. ಅವನ ದೇಹ ಮೇಲೆ ಮೇಲೆ ಏರುತ್ತಿದ್ದಂತೆಯೇ ಆ ಬಿಳಿ ಆಕಾರವೂ ಅವನ ಎತ್ತರಕ್ಕೇ ಏರುತ್ತಿತ್ತು. ಆದರೆ ಅದರ ಬೆನ್ನು ಅವನಿಗೆ ಕಾಣುತ್ತಿತ್ತೇ ಹೊರತು, ಮುಖ ಮಾತ್ರ ಕಾಣುತ್ತಿರಲ್ಲಿಲ್ಲ. ಒಮ್ಮಿಂದೊಮ್ಮೆಗೆ ‘ಥಟ್’ ಎಂದು ಒಂದು ಮುಖ ಅವನ ಕಣ್ಣ ಮುಂದೆ ಮಿಂಚಿ ಮಾಯವಾಯಿತು. ಕಿಟಾರನೆ ಕಿರುಚಿಕೊಂಡ ನರಸಿಂಹ. ಆ….ಆ…. ಮುಖ……. ಆ ಮುಖವನ್ನು ಎಲ್ಲೋ ಕಂಡ ಮಸುಕು ಮಸುಕಾದ ನೆನಪು. ತಲೆಯ ಒಳಗೆಲ್ಲಾ ಜಾಲಾಡಿಸಿ ಕೆದಕಿದಾಗ ಅದು ನಾಲ್ಕೈದು ತಿಂಗಳ ಹಿಂದೆ ಸತ್ತಿದ್ದ ಸಾವಿತ್ರಿಯ ಮುಖವೆಂದು ನೆನಪಾಯಿತು.
ಸಾವಿತ್ರಿ ಅವರ ಊರಿನವಳೇ. ಆ ಊರಿನವರ ಹೊಲಗದ್ದೆಗಳಲ್ಲಿ ಕೂಲಿನಾಲಿ ಮಾಡಿಕೊಂಡು ಜೀವಿಸುತ್ತಿದ್ದಳು. ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಇವಳನ್ನು ಊರ ಜನ ಅಕ್ಕರೆಯಿಂದ ಕಾಣುತ್ತಿದ್ದರು. ಕೂಲಿ ಇಲ್ಲದ ದಿನಗಳಲ್ಲಿ ಅವರಿವರ ಮನೆಯಲ್ಲಿ ರಾಗಿ, ಅಕ್ಕಿ ಮಾಡಿ ಕೊಡುವುದು, ಹುಣಸೆ ಹಣ್ಣು ಜಜ್ಜುವುದು ಮುಂತಾದ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಡುತ್ತಿದ್ದಳು. ಕೆಲವೊಮ್ಮೆ ಕಸ ಮುಸುರೆಯನ್ನೂ ಮಾಡುತ್ತಿದ್ದಳು. ಮದುವೆ ವಯಸ್ಸು ಬಂದಿದ್ದರೂ ಅವಳ ಬಗ್ಗೆ ಮುತುವರ್ಜಿ ವಹಿಸಿ, ಅವಳಿಗೆ ಮದುವೆ ಮಾಡುವವರು ಯಾರೂ ಇರದಿದ್ದರಿಂದ ಹಾಗೆಯೇ ಉಳಿದುಹೋಗಿದ್ದಳು. ವಯಸ್ಸಿಗೆ ತಕ್ಕಂತೆ ದೇಹದಲ್ಲೇರ್ಪಟ್ಟಿದ್ದ ಉಬ್ಬುತಗ್ಗುಗಳು ನೋಡುವವರಲ್ಲಿ ಆಸೆ ಜಿನುಗಿಸಿದರೂ, ಸಾವಿತ್ರಿಯ ಉರಿಗಣ್ಣ ನೋಟಕ್ಕಂಜಿ ತೆಪ್ಪಗಾಗುತ್ತಿದ್ದರು.
ನಾಲ್ಕು ತಿಂಗಳ ಹಿಂದೆ ನರಸಿಂಹನ ಹೆಂಡತಿಯ ತವರೂರಿನಲ್ಲಿ ಜಾತ್ರೆ. ಪ್ರತಿ ವರ್ಷವೂ ಕುಟುಂಬ ಸಮೇತನಾಗಿ ಜಾತ್ರೆಗೆ ಹೋಗುವ ವಾಡಿಕೆಯಿತ್ತು. ಆದರೆ ಈ ವರ್ಷ ತನ್ನ ಹೊಲದ ಪಕ್ಕದಲ್ಲೇ ಹೆದ್ದಾರಿ ಹಾದು ಹೋಗುವುದಕ್ಕೆ ಸರ್ಕಾರದವರು ಜಾಗವನ್ನು ಗುರುತು ಹಾಕಿಕೊಂಡು ಹೋಗಿದ್ದು, ಆ ಕೆಲಸ ಆದಷ್ಟು ಬೇಗ ಆರಂಭವಾಗುವ ಸೂಚನೆಗಳು ಇದ್ದಿದ್ದರಿಂದ, ತಾನು ಮಾತ್ರ ಊರಿನಲ್ಲೇ ಉಳಿದುಕೊಂಡು ಎಲ್ಲರನ್ನೂ ಜಾತ್ರೆಗೆ ಕಳುಹಿಸಿದ ಕೊಟ್ಟಿದ್ದ. ಆ ದಿನ ಸಂಜೆ ತನ್ನ ಮನೆಯ ಜಗುಲಿಯ ಮೇಲೆ ಕುಳಿತು, ಪೊರಕೆ ಕಡ್ಡಿಯಿಂದ ಹಲ್ಲನ್ನು ಚುಚ್ಚುತ್ತಿದ್ದ ನರಸಿಂಹನ ಕಣ್ಣಿಗೆ, ಪಕ್ಕದ ಮನೆಯ ಮುಂಭಾಗದಲ್ಲಿ ಕುಳಿತು, ಮಸಿ ಪ್ರಾತ್ರೆಗಳಿಗೆ ಬೂದಿ ಹಾಕಿ ತಿಕ್ಕುವುದರಲ್ಲಿ ಮಗ್ನಳಾಗಿದ್ದ ಸಾವಿತ್ರಿ ಬಿದ್ದಳು. ತದೇಕಚಿತ್ತವಾಗಿ ಕೆಲಸ ಮಾಡುತ್ತಿದ್ದ ಅವಳ ಸೆರಗು ಅಸ್ತವ್ಯಸ್ತವಾಗಿತ್ತು. ನರಸಿಂಹನ ಕಣ್ಣುಗಳು ಅವಳ ಎದೆಯ ಮೇಲಿಂದ ಚಲಿಸದಾದವು. ಮನಸ್ಸು ಅವಳ ಸೌಂದರ್ಯವನ್ನು ಹೀರಲು ನಿಶ್ಚಯಿಸಿ, ಸಂಚೊಂದನ್ನು ಹೂಡತೊಡಗಿತು.
ಆ ರಾತ್ರಿ ಹತ್ತು ಗಂಟೆಯ ಸುಮಾರಿಗೆ ತನ್ನ ಮನೆಯಿಂದ ಹೊರಟ ನರಸಿಂಹ ನೇರವಾಗಿ ಸಾವಿತ್ರಿ ಮನೆಯನ್ನು ತಲುಪಿ, ಬಾಗಿಲು ಬಡಿದ. “ಯಾರೂ….?.’, ನಾನು ನರಸಿಂಹಪ್ಪ ಕಣಮ್ಮೋ….. ವಸಿ ಕದ ತೆಗಿ’ ಅಂದಾಗ, ಸಾವಿತ್ರಿ ಬಾಗಿಲು ತೆರೆದಳು. ‘ಏನ್ ಬುದ್ದೀ ……’ಎಂದಾಗ, “ಏನಿಲ್ಲಮ್ಮೀ, ನಮ್ಮನೆಯವರೆಲ್ಲಾ ಊರಿಗೆ ಹೋಗವ್ರೆ, ನಾಳೀಕೆ ಕೊಟ್ಟಿಗೆ ಗುಡಿಸುವವರು ಯಾರೂ ಇಲ್ಲ. ನೀನು ಒತ್ತಾರೆಕೆ ಬಂದು ಕೊಟ್ಟಿಗೆ ಕಿಲೀನ್ ಮಾಡಬೇಕಿತ್ತು. ಅದನ್ನೇ ಹೇಳಿ ಹೋಗುಮಾ ಅಂತ ಬಂದೆ” ಎಂದು ಹಲ್ಲು ಕಿರಿದ.
“ಸರಿ ಬುದ್ದೀ, ಬರ್ತೀವ್ನಿ” ಎಂದಂದು, ಸಾವಿತ್ರಿ ತನ್ನ ಮನೆಯ ಒಳಗೆ ಹೋಗಿ ಬಾಗಿಲು ಹಾಕಿಕೊಳ್ಳುವ ಮೊದಲೇ, ನರಸಿಂಹನ ಬಲಿಷ್ಠ ಕೈಗಳು ಬಾಗಿಲನ್ನು ಹಿಂದಕ್ಕೆ ತಳ್ಳಿದವು. ಆ ರಭಸಕ್ಕೆ ಹಿಂದಕ್ಕೆ ವಾಲಿದ ಅವಳು ಸಾವರಿಸಿಕೊಂಡು ಸರಿಯಾಗಿ ನಿಲ್ಲುವ ಮೊದಲೇ ನರಸಿಂಹ ಅವಳ ಮನೆಯ ಒಳ ಸೇರಿ ಬಾಗಿಲಿಗೆ ಚಿಲಕ ಜಡಿದನು.
ಸಾವಿತ್ರಿಗೆ ಎಲ್ಲವೂ ಅರ್ಥವಾಗಿ ಹೋಯಿತು. ಅವನಿಂದ ಪಾರಾಗಲು ಜೋರಾಗಿ ಕಿರುಚಿಕೊಳ್ಳಲು ಬಾಯಿ ತೆರೆಯುವ ಮೊದಲೇ ಅವನು ಮುನ್ನುಗ್ಗಿ, ತನ್ನ ಹೆಗಲ ಮೇಲಿದ್ದ ಚೌಕವನ್ನು ಅವಳ ಬಾಯಿಗೆ ತುರುಕಿ, ಅವಳನ್ನು ಕೆಡವಿಕೊಂಡನು. ಸ್ವಲ್ಪ ಕಾಲ ಕೊಸರಾಡುತ್ತಿದ್ದ ಸಾವಿತ್ರಿಯ ದೇಹ ಸುಮ್ಮನಾಯಿತು. ತನ್ನಾಸೆ ತೀರಿಸಿಕೊಂಡು ಮೇಲೆದ್ದ ನರಸಿಂಹನಿಗೆ ಅವಳ ಪ್ರತಿಭಟನೆ ನಿಂತು ಹೋಗಿದ್ದು ಅರಿವಿಗೆ ಬಂದೇ ಇರಲಿಲ್ಲ. ಆದರೆ ಈಗ ಏನೋ ಅನಮಾನ ಬಂದು, ಅವಳ ಮೂಗಿನ ಬಳಿ ಬೆರಳಿಟ್ಟು ಪರೀಕ್ಷಿಸಿದ. ಅವನ ಅನುಮಾನ ನಿಜವಾಗಿತ್ತು. ಬಾಯಿಗೆ ಬಟ್ಟೆ ತುರುಕಿ ಮೇಲೆ ಅದುಮಿಕೊಂಡಿದ್ದರ ಪರಿಣಾಮವಾಗಿ ಸಾವಿತ್ರಿ ಉಸಿರುಗಟ್ಟಿ ಸತ್ತು ಹೋಗಿದ್ದಳು.ನರಸಿಂಹನಿಗೆ ಒಂದು ಗಳಿಗೆ ಏನೂ ತೋಚದಾಯಿತು. ತಲೆ ಮೇಲೆ ಕೈ ಹೊತ್ತು ಅಲ್ಲೇ ಕುಸಿದು ಕುಳಿತ. ಕೆಲ ಸಮಯದ ಬಳಿಕ ಉಪಾಯವೊಂದು ತೋಚಿ, ಅವಳದೇ ಒಂದು ಹಳೆಯ ಸೀರೆಯನ್ನು ತಂದು, ಸಾವಿತ್ರಿಯ ಹೆಣದ ಕೊರಳಿಗೆ ಬಿಗಿದು, ನಡುಮನೆಯ ದೂಲಕ್ಕೆ ನೇಣುಗಟ್ಟಿ, ಅರ್ಧ ರಾತ್ರಿಯ ವೇಳೆಗೆ ಮನೆ ಸೇರಿಕೊಂಡ.
ಸಾವಿತ್ರಿಯದು ಆತ್ಮಹತ್ಯೆ ಎಂಬ ವರದಿ ಬರಲು ಪೋಲೀಸರಿಗೆ, ವೈದ್ಯರಿಗೆ ಹಣವನ್ನು ನೀರಿನಂತೆ ಖರ್ಚು ಮಾಡಿದ. ದಿಕ್ಕಿಲ್ಲದ ಅವಳ ಪರ ನಿಲ್ಲುವವರಾದರೂ ಯಾರು? ಎಲ್ಲಾ ಕಳೆದು ನರಸಿಂಹ ನಿಟ್ಟುಸಿರು ಬಿಟ್ಟಿದ್ದ. ಆ ಘಟನೆಯನ್ನು ಮರೆತೂ ಬಿಟ್ಟಿದ್ದ. ಆದರೆ ಈಗ ಅವಳ ಮುಖ ಕಣ್ಣೆದುರು ತೇಲಿ ಬಂದಾಗ ಕಂಗಲಾದನು. ಅಷ್ಟರಲ್ಲಿ ಮತ್ತೊಮ್ಮೆ ಸಾವಿತ್ರಿಯ ಮುಖ ತನ್ನೆದುರು ತೇಲಿ, ಕಿಲಕಿಲನೆ ನಕ್ಕಿತು. ನೋಡು……ನಾ….ನಾನು…..ಬೇಕಂತ……ಮಾ..ಮಾ,… ಮಾಡಿದ್ದಲ್ಲ…….. …..ನಿನ್ನ….. ನ್ನು …………..ಎಂದು ತೊದಲುತ್ತಾ ಹೇಳುತ್ತಿದ್ದಂತೆಯೇ, ಯಾರೋ ತನ್ನನ್ನು ಕೆಳಗೆ ಜೋರಾಗಿ ಬಿಸುಟಂತಾಯಿತು. ಅವನ ದೇಹ ಭೂಮಿಯನ್ನು ತಲುಪುವ ಮೊದಲೇ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಮಾರನೇ ದಿನ ಹಸು ಹುಡುಕುತ್ತಾ ಈ ಕಡೆಗೆ ಬಂದ ನರಸಿಂಹನ ಹಿರೀ ಮಗ, ರಕ್ತದ ಮಡುವಿನಲ್ಲಿ ಬೋರಲಾಗಿ ಬಿದ್ದಿದ್ದ ತಂದೆಯ ಶವವನ್ನು ಕಂಡು, ಭಯದಿಂದ ಕಿಟಾರನೆ ಕಿರುಚಿಕೊಂಡು ಊರ ಕಡೆಗೆ ಓಡತೊಡಗಿದನು.
–ಅರುಣರಾವ್ ಬೆಂಗಳೂರು
9901075235
.