ಅರಿವು ತೋರುವ ಗುರು
ಸಂಸ್ಕೃತದಲ್ಲಿ ಗು ಎಂದರೆ ಅಂಧಕಾರ, ರು ಎಂದರೆ ಬೆಳಕು.ಅಂಧಕಾರದಿಂದ ಬೆಳಕಿನೆಡೆಗೆ ನಡೆಸುವವನು ಗುರು.ಯೋಗ,ತಂತ್ರ,ವೇದಾಂತ ಮತ್ತು ಭಕ್ತಿಯಲ್ಲಿ ಗುರು ತನ್ನದೇ ಆದಂತಹ ವಿಶಿಷ್ಟ ಸ್ಥಾನ ಪಡೆದಿದ್ದಾರೆ.
ವರ್ತಮಾನದ ಸತ್ಯ ಅಸತ್ಯಗಳ ತಿಳಿಸಿ.ಭವಿಷ್ಯವು ಪ್ರಜ್ವಲಿಸುವಂತೆ ಮಾಡುವ ಸ್ಫೂರ್ತಿ ಶಕ್ತಿಸ್ವರೂಪ ಗುರುವಿನ ಮನಸ್ಸು,ಬುದ್ಧಿ ಮತ್ತು ಚಿಂತನೆ ಏಕತೆರನಾಗಿರುತ್ತದೆ.ಸ್ಥೂಲ ದೇಹ ಬೇರೆಯಾದರೂ ಆಂತರಿಕ ಗುರುಮುಖ ಒಂದೇ ಆಗಿರುತ್ತದೆ
.ತ್ರಿಮೂರ್ತಿ ಸ್ವರೂಪರಾದ ಗುರು ಅಂತಃಕರಣದ ಆಗರ.ಅದಕೆ ಹರ ಮುನಿದರೆ ಗುರು ಕಾಯುವನೆನ್ನುವ ಸತ್ಯ ನುಡಿ.ಮಾತೆ ಮಮತೆಯ ಸ್ವರೂಪರಾದ ಗುರುಗಳು ಮುನಿಯದೆ, ಮನ್ನಿಸುವ ವಿಶಾಲ ಹೃದಯ ಹೊಂದಿದ ಕಾರುಣ್ಯ ಸಿಂಧುವಾಗಿರುತ್ತಾರೆ.
ಬುದುಕಿಗೆ ಗುರುವಿನ ಅನುಗ್ರಹವು ಅತಿ ಮುಖ್ಯ.ನಿನ್ಯಾರೆಂದು ನಿನಗೆ ನಿನ್ನನ್ನು ತಿಳಿಸಿ,ನಿನ್ನೊಳಿರುವ ಚೈತನ್ಯವ ಎಚ್ಚರಿಸುವವನು.
ದೇಹದ ಕೊಳೆಯ ತಾಯಿಯು ತೊಳೆವಂತೆ,ಅಜ್ಞಾನದ ಮಲೀನವ ತೊಳೆದು ಬಾಳು ಬೆಳಗುವವನು.ಅಕ್ಷರಗಳ ಅಮೃತವನುಣಿಸಿ ಬಾಳಿಗೆ ಶಕ್ತಿ ನೀಡುವವನು.ಬದುಕಿನುದ್ದಕ್ಕೂ ಜ್ಞಾನವೆಂಬ ಸುಮತಿಯ ನೀಡಿ,ನಮ್ಮ ಏಳಿಗೆ ಕಂಡು ಕರುಬದೆ,ಹೆತ್ತ ತಾಯಿಯಂತೆ ಮನಸಾರೆ ಹರಸಿ ಹಾರೈಸುವವನು ಗುರು ಮಾತ್ರ.ಶಿಷ್ಯನ ಸಾಮರ್ಥ್ಯ ಅರಿತು ಜ್ಞಾನ ದಯಪಾಲಿಸಿ,ಅರಿವಿನ ಜ್ಯೋತಿ ಬೆಳಗಿಸುವವನು.ಬರೀ ವ್ಯಕ್ತಿಯಲ್ಲ,ಶಕ್ತಿ ಕೇಂದ್ರವು,ಜ್ಞಾನದ ಪ್ರಭೆ,ಅರಿವಿನ ಪ್ರಜ್ಞೆಯೇ ಗುರು.ಎಲ್ಲ ಕಲಿಕೆಗೆ ಮೂಲವಾಗಿ,ಕಾಡು ಕಲ್ಲನ್ನು ಶಿಲ್ಪವಾಗಿಸುವ ಚತುರ ಶಿಲ್ಪಿಯಂತೆ.ಕತ್ತಲಲ್ಲಿ ಕಣ್ಣಿದ್ದೂ ಕಾಣದು ಅದಕೆ ಬೆಳಕಿನಾ ದೀಪವು ಬೇಕು.
ಮಾನವ ಜನುಮಕ್ಕೆ ಬಂದ ಮಾತ್ರವಲ್ಲಾ ಬದುಕಿನಾ ನಿಜ ಅರ್ಥವರಿತು ಬಾಳಲು ಅರಿವಿನಾ ಪ್ರಭೆ ಗುರುವಿನಾ ದಾರಿದೀವಿಗೆ ಬೇಕು ನಮಗೆ.
–ಮಂಜುಶ್ರೀ ಬಸವರಾಜ ಹಾವಣ್ಣವರ