ಯಡಿಯೂರಪ್ಪ ಮನುವಾದಿಗಳ ವಿರುದ್ಧ ಹೊರಾಡಲಿ-ಸತೀಶ ಜಾರಕಿಹೊಳಿ

ಯಡಿಯೂರಪ್ಪ ಮನುವಾದಿಗಳ ವಿರುದ್ಧ ಹೊರಾಡಲಿ-ಸತೀಶ ಜಾರಕಿಹೊಳಿ

e-ಸುದ್ದಿ  ಗೋಕಾಕ

ಮನುವಾದಿಗಳು 12ನೇ ಶತಮಾನದಲ್ಲಿ ಬಸವಣ್ಣನವರನ್ನು ಅಧಿಕಾರದಿಂದ ಕೆಳಗಿಳಿಸಿದಂತೆ ಇಂದು ಷಡ್ಯಂತ್ರ ಮಾಡಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಯಡಿಯೂರಪ್ಪನವರ ರಾಜೀನಾಮೆ ಬಗ್ಗೆ ನಗರದ ಹಿಲ್ ಗಾರ್ಡನ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನನಗೆ 12ನೇ ಶತಮಾನ ನೆನಪಾಗುತ್ತಿದೆ. 1000 ವರ್ಷಗಳ ಹಿಂದೆ ಬಸವಣ್ಣನವರು ಮಂತ್ರಿಗಳಾಗಿದ್ದರು. ಅಂದು ಕೂಡ ಮನುವಾದಿಗಳು ಅವರನ್ನು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದರು. ಇಂದು ಕೂಡ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಿ ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ 2 ತಿಂಗಳಿಂದ ಈ ಬಗ್ಗೆ ಚರ್ಚೆಯಾಗುತ್ತಿತ್ತು. ಇಂದು ಯಡಿಯೂರಪ್ಪ ಅಧಿಕಾರದಿಂದ ಇಳಿದಿದ್ದಾರೆ. ಆದರೆ, ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ರೀತಿ ಸರಿಯಲ್ಲ. ಅವರಿಗೆ ಪಕ್ಷ ಹಾಗೂ ಹೈಕಮಾಂಡ್ ಒತ್ತಡ ಹೇರಿದ್ದಾರೆ. ಒತ್ತಡದಿಂದಲೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.

ಯಡಿಯೂರಪ್ಪ ಒಬ್ಬ ಜನನಾಯಕ. ಅವರು ಭಾವುಕರಾಗಿ ಭಾಷಣ ಮಾಡಿದ್ದಾರೆ. ಅದನ್ನು ನೋಡಿದರೆ ಅವರ ಮೇಲೆ ಒತ್ತಡ ಹೇರಿರುವುದು ಗೊತ್ತಾಗುತ್ತಿದೆ. ಯಾವುದೇ ರಾಜಕೀಯ ಪಕ್ಷದಲ್ಲಿ ಹಿರಿಯ ನಾಯಕರನ್ನು ಗೌರವಯುತವಾಗಿ ಹೊರಹೋಗಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.
ಬಸವಣ್ಣನವರ ರೀತಿಯಲ್ಲಿ ಯಡಿಯೂರಪ್ಪನವರು ಕೂಡ ಮನುವಾದಿಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಸತೀಶ ಅಭಿಪ್ರಾಯ ವ್ಯಕ್ತಪಡಿಸಿದರು.

Don`t copy text!