ಕಂಚಿಕೇರಿ ಶಿವಣ್ಣನವರು
ರಂಗಭೂಮಿಯ ಕುಂಚದಿಂದ ಮೂಡಿಬಂದ ಅನುಪಮ ರಂಗಕಲಾವಿದ
ಕಂಚಿಕೇರಿ ಶಿವಣ್ಣನವರ ಬಣ್ಣದ ಬದುಕಿನ ರಂಗ ಪಯಣವನ್ನು ಬರೆಯುವದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲಿ ವೈಭವಯುತ ದಿನಗಳಿವೆ ಹಾಗೆಯೇ ಕಷ್ಟಕರ ದಿನಗಳನ್ನೂ ನಾವು ಕಾಣಬಹುದು. ವೈಭವದ ದಿನಗಳನ್ನು ಓದಿದಾಗ ಆಗುವ ಆನಂದ ಮತ್ತು ಕಷ್ಟಕರ ದಿನಗಳನ್ನು ಬರೆಯುವಾಗ ಗದ್ಗದಿತನಾಗಿ ನನಗೇ ಗೊತ್ತಿಲ್ಲದ ಹಾಗೆ ಕಣ್ಣುಗಳಲ್ಲಿ ನೀರು ಬಂದಿದ್ದು ಆ ಕೂಡಲ ಸಂಗಮನಾಥನೆ ಬಲ್ಲ. ಎಂಥಾ ಏರಿಳಿತಗಳನ್ನು ಕಂಡರೂ, ಎಂಥ ವಿಷಮ ಪರಿಸ್ಥಿತಿ ಇದ್ದರೂ ರಂಗಭೂಮಿಯ ಮೇಲಿನ ಪ್ರೀತಿ ಅಕ್ಕರೆಯನ್ನು ಉಸುರಿರುವವರೆಗೂ ಉಳಿಸಿಕೊಂಡು ಬಂದ ಕಂಚಿಕೇರಿ ಶಿವಣ್ಣನವರು ನಮಗೆ ರಂಗಭೂಮಿಯ ಶಿವನ ಪ್ರಕಾಶದಂತೆ ಗೋಚರಿಸುತ್ತಾರೆ. ಇಂಥ ಮಹನೀಯರ ಪರಿಚಯವನ್ನು ಈ ಲೇಖನದ ಮೂಲಕ ಮಾಡುವ ಸಣ್ಣ ಪ್ರಯತ್ನ ನನ್ನದು. ಓದುಗರು ಹರಸಿ ಮೆಚ್ಚಿಕೊಂಡರೆ ಅದೇ ಮಹಾಭಾಗ್ಯ.
2004 ರಲ್ಲಿ ನಾನು ವಾರಣಾಸಿಗೆ ಹೋಗುವ “ಸಂಘಮಿತ್ರ ಎಕ್ಷಪ್ರೆಸ್” ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದೆ. ಸಹ ಪ್ರಯಾಣಿಕರಾದ ನೋಯ್ಡಾದ ನ್ಯೂಜ್ ನೇಶನ್ ಟೀವೀ ಛಾನಲ್ಲನಲ್ಲಿ ಕ್ರೀಡಾ ಸಂಪಾದಕರಾದ ಶ್ರೀ ಪದಂಪತಿ ಶರ್ಮಾ ಅವರ ಜೊತೆಗೆ ಮಾತಾಡತಾ ಮಾತಾಡತಾ ನಾನು ಧಾರವಾಡದವನು ಅಂತ ಹೇಳಿದ ತಕ್ಷಣ ಅವರ ಮುಖದಲ್ಲಿ ಮೂಡಿದ ಮಂದಹಾಸವನ್ನು ಇಂದಿಗೂ ಮರೆತಿಲ್ಲ. ಅವರು ಹೇಳಿದ ಒಂದು ಮಾತು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಯ ಗುಡತಾ ಇದೆ.
ಬೇಟಾ, ಮೈನೆ ಸುನಾ ಹೈ, ಧಾರವಾಡಮೆ ಏಕ ಪತ್ಥರ ಊಪರ ಫೇಕಾ ಗಯಾತೊ ವೋ ಏಕ ಗವಯ್ಯಾ ನಹೀ ತೋ ಏಕ ಅನುಪಮ್ ಸಾಹಿತ್ಯಕಾರ ಕೆ ಘರ ಕೆ ಊಪರ ಜಾಕೆ ಗಿರೇಗಾ.
ಧಾರವಾಡದಲ್ಲಿ ನಿಂತುಕೊಂಡು ಒಂದು ಕಲ್ಲನ್ನು ಮೇಲೆ ಎಸೆದರೆ ಅದು ಒಬ್ಬ ಗಾಯಕ ಇಲ್ಲವೇ ಅನುಪಮ ಸಾಹಿತ್ಯಕಾರನ ಮನೆಯ ಮೇಲೆ ಹೋಗಿ ಬೀಳುತ್ತದೆ.
ಧಾರವಾಡದ ಮಣ್ಣಿನ ಗುಣವೇ ಅಂತಹದ್ದು. ಹಾಗೆಯೇ ದಾವಣಗೆರೆಯಲ್ಲಿ ಸಣ್ಣದೊಂದು ಕಲ್ಲು ಎಸೆದರೆ ಅದು ರಂಗಭೂಮಿಗೆ ಸಂಬಂಧಿಸಿದವರು ಇರುವ ಮನೆಯ ಮೇಲೆ ಬೀಳುತ್ತದೆ ಅಂತ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿರುವ ಹೆಗ್ಗುರುತು. ಕರ್ನಾಟಕದ ರಂಗಭೂಮಿಯ ಇತಿಹಾಸದಲ್ಲಿ ನಾಟಕ ಕಂಪನಿಗಳ ತವರೂರು ದಾವಣಗೆರೆಗೆ ತನ್ನದೇ ಆದ ಭವ್ಯ ಮತ್ತು ವೈಭವಯುತವಾದ ರಂಗಭೂಮಿಯ ಇತಿಹಾಸವಿದೆ.
ಕರ್ನಾಟಕದ ನಟ್ಟ ನಡುವಿನ ಜಿಲೆಯೇ ದಾವಣಗೆರೆ ಜಿಲ್ಲೆ. ಉತ್ತರಕ್ಕೆ ಹಾವೇರಿ ಮತ್ತು ಬಳ್ಳಾರಿ, ದಕ್ಷಿಣ-ಪೂರ್ವಕ್ಕೆ ಚಿಕ್ಕಮಗಳೂರು ಮತ್ತು ಚಿತ್ರದುರ್ಗ, ಪಶ್ಚಿಮಕ್ಕೆ ಶಿವಮೊಗ್ಗೆ ಹೀಗೆ ನಾಲ್ಕೂ ಕಡೆಯಿಂದ ದಾವಣಗೆರೆ ಜಿಲ್ಲೆ ಸುತ್ತುವರೆದಿದೆ. ಬಹಳ ವೈಭವದ ರಂಗಭೂಮಿಯ ಇತಿಹಾಸವಿರುವ ದಾವಣಗೆರೆಯಲ್ಲಿ ಗ್ರಾಮೀಣ ರಂಗಭೂಮಿಯ ಅಸ್ತಿತ್ವದ ಜೊತೆ ಜೊತೆಗೆ ವೃತ್ತಿ ರಂಗಭೂಮಿಯೂ ಸಹ ತನ್ನ ಅಸ್ತಿತ್ವವನ್ನು ಕಂಡುಕೊಂಡಿತ್ತು.
ವೃತ್ತಿರಂಗಭೂಮಿಯ ಮೊದಲ ಸಾಮಾಜಿಕ ನಾಟಕಗಳನ್ನು ಬರೆದವರು ಶ್ರೀ ಕೋಲ ಶಾಂತಪ್ಪನವರು ದಾವಣಗೆರೆಯವರು ಎನ್ನುವದನ್ನು ನಾಟಕಕಾರರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಅವರು ಬರೆದ ನಾಟಕಗಳು (ಬಿ ಏ, ಸ್ತ್ರೀ, ಎಲ್ ಎಲ್ ಬಿ, ಭಾಪುರೇ ಕರ್ಣ, ಮಿಠಾಯಿ ಬುಟ್ಟಿ ಮುಂತಾದವುಗಳು) ಕನ್ನಡ ನಾಟಕದಲ್ಲಿ ರಚನೆಯಾದ ಮೊದಲ ಸಾಮಾಜಿಕ ನಾಟಕಗಳು.
1922 ರಲ್ಲಿ ಕರ್ನಾಟಕ ನಾಟಕಾಲಂಕಾರ ಎಂದೇ ಬಿರುದಾಂಕಿತರಾದ ಗರುಡ ಸದಾಶಿವರಾಯರ ಶ್ರೀ ದತ್ತಾತ್ರೇಯ ಸಂಗೀತ ನಾಟಕ ಮಂಡಳಿ (ಗದಗ) ದಾವಣಗೆರೆಯಲ್ಲಿ ಕ್ಯಾಂಪ್ ಮಾಡಿದ ಮೊಟ್ಟ ಮೊದಲ ವೃತ್ತಿ ನಾಟಕ ಮಂಡಳಿ. ದಾವಣಗೆರೆ ಎಂದರೆ ಕಲಾ ಪೋಷಕ ಮತ್ತು ಕಲಾಭಿಮಾನಿಗಳ ಊರು ಎಂದೇ ಪ್ರಸಿದ್ಧವಾಗಿತ್ತು. ನಾಟಕಗಳಿಗೆ ಪ್ರಶಸ್ತವಾದ ಭೂಮಿಯನ್ನು ಹದ ಮಾಡಿಕೊಟ್ಟ ದಾವಣಗೆರೆಯಲ್ಲಿ ಹಲವಾರು ವೃತ್ತಿ ನಿರತ ನಾಟಕ ಕಂಪನಿಗಳು ಇದ್ದವು. ಧನಲಕ್ಷ್ಮಿ ಥಿಯೇಟರ್, ಶ್ರೀವಾಸ ಡ್ರಾಮಾ ಕಂಪನಿ, ಸಾವಳಗಿ ನಾಟಕ ಕಂಪನಿ, ಚಿಂದೋಡಿಯವರ ಕೆ ಬಿ ಅರ್ ಡ್ರಾಮಾ ಕಂಪನಿ ಮುಂತಾದವುಗಳು ಬೀಡು ಬಿಟ್ಟದ್ದವು.
ಇಂಥ ಅಪೂರ್ವ ಮತ್ತು ಅನುಪಮ ರಂಗಭೂಮಿಯ ಇತಿಹಾಸವಿರುವ ದಾವಣಗೆರೆಯಲ್ಲಿ ಮತ್ತೊಂದು ನಾಟಕ ಮಂಡಳಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಅದುವೇ “ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿ”. ಈ ನಾಟಕ ಮಂಡಳಿಯಿಂದ ಪ್ರಸ್ತುತ ಪಡಿಸಿದ ನಾಟಕಗಳಾದ “ಹೇಮರೆಡ್ಡಿ ಮಲ್ಲಮ್ಮ” “ಭೌಮಾಸುರ” ನಾಟಕಗಳು ಅಂದಿನ ದಿನಮಾನದ ವೈಭವಯುತ ಸುಪ್ರಸಿದ್ಧ ನಾಟಕಗಳು. ಅಂದಿನ ಕಾಲಕ್ಕೆ ಸುಮಾರು 60,000 ರೂಪಾಯಿಗಳನ್ನು ಖರ್ಚು ಮಾಡಿ ಸಿದ್ಧಪಡಿಸಿದ ವೈಭವಯುತ ವೇದಿಕೆಯಲ್ಲಿ ಭೌಮಾಸುರ ನಾಟಕವನ್ನು ಪ್ರಸ್ತುತ ಮಾಡಿದ ನಾಟಕ ಮಂಡಳಿ ಇದು. ಈ ನಾಟಕ ಮಂಡಳಿಯನ್ನು ಸ್ಥಾಪಿಸಿದವರು ಶ್ರೀ ಕಂಚಿಕೇರಿ ಕೊಟ್ಟೂರ ಬಸಪ್ಪನವರು. ಇಂಥ ರಂಗಭೂಮಿಯ ಕುಂಚದಿಂದ ಮೂಡಿಬಂದ, ಈ ವಂಶದ ಕುಡಿಯೇ ನಮ್ಮ ಇಂದಿನ ರಂಗಭೂಮಿ ಪಯಣಿಗ ಅದ್ಭುತ, ಅನುಪಮ ಕಲಾವಿದ ಶ್ರೀ ಕಂಚಿಕೇರಿ ಶಿವಣ್ಣನವರು.
ರಂಗಭೂಮಿಯಲ್ಲಿ ಬಾಲ್ಯದಿಂದಲೇ ತೊಡಗಿಸಿಕೊಂಡು “ಬಾಲ ಸರಸ್ವತಿ” ಎಂದು ಕರೆಯಿಸಿಕೊಳ್ಳುತ್ತಿದ್ದ ಶ್ರೀ ಕೊಟ್ಟೂರು ಬಸಪ್ಪನವರಿಂದ ಹಡಗಲಿಯಲ್ಲಿ 1918 ರಲ್ಲಿ ಪ್ರಾರಂಭವಾದ ನಾಟಕ ಮಂಡಳಿ “ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿ”. ಆದರೆ ಕಾರಣಾಂತರಗಳಿಂದ ಈ ಕಂಪನಿ ಮುಚ್ಚಿ ಹೋಗುತ್ತದೆ. ಮುಂದೆ ದಿನಾಂಕ 13.11.1921 ರಂದು ದಾವಣಗೆರೆಯಲ್ಲಿ ಪುನರಾರಂಭವಾಗುತ್ತದೆ. ಶ್ರೀ ಬಕ್ಕೇಶ್ವರ ಸ್ವಾಮಿ ಮಠದ ಹಿಂಭಾಗದಲ್ಲಿನ ಬಸವಲಿಂಗಪ್ಪನವರ ಗೋದಾಮಿನಲ್ಲಿ “ತ್ರಿಕೋಟಿಲಿಂಗ ಪ್ರತಿಷ್ಠಾಪನೆ” ಎನ್ನುವ ನಾಟಕದ ಮೂಲಕ ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿ ತನ್ನ ರಂಗ ಪಯಣವನ್ನು ಮತ್ತೆ ಪ್ರಾರಂಭ ಮಾಡುತ್ತದೆ. ಶ್ರೀ ಕೊಟ್ಟೂರು ಬಸಪ್ಪನವರ ಬಾಳ ಸಂಗಾತಿ ಶ್ರೀಮತಿ ಲಕ್ಷ್ಮಮ್ಮನವರು. ಆಂಧ್ರಮೂಲದ ಲಕ್ಷ್ಮಮ್ಮನವರು ಕರ್ನಾಟಕಿ ಸಂಗೀತದಲ್ಲಿ ಅಪಾರವಾದ ಜ್ಞಾನವುಳ್ಳವರಾಗಿದ್ದರು ಮತ್ತು ರಂಗಭೂಮಿಯ ಪ್ರಖ್ಯಾತ ನಟಿಯೂ ಆಗಿದ್ದರು. ಧರ್ಮಪತ್ನಿ ಶ್ರೀಮತಿ ಲಕ್ಷ್ಮಮ್ಮನವರ ಜೊತೆಗೂಡಿ ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿಯನ್ನು ಉತ್ತುಂಗ ಶಿಖರಕ್ಕೇರಿಸಿದವರು ಶ್ರೀ ಕೊಟ್ಟೂರು ಬಸಪ್ಪನವರು.
ಶ್ರೀ ಕೊಟ್ಟೂರು ಬಸಪ್ಪನವರ ನಂತರ ಅವರ ಪುತ್ರರಾದಂಥ ಶ್ರೀ ಬಸವಣ್ಣೆಪ್ಪನವರು ಕಂಪನಿಯನ್ನು ಮುನ್ನಡೆಸುತ್ತಾರೆ. ಅದ್ಭುತ ಹಾರ್ಮೋನಿಯಮ್ ವಾದಕರಾದ ಶ್ರೀ ಬಸವಣ್ಣೆಪ್ಪನವರು ಭಾವನಾಜೀವಿ ಮತ್ತು ಕಂಪನಿ ನಡೆಸುವುದಕ್ಕೆ ಬೇಕಾದ ವ್ಯವಹಾರಿಕ ಚಾಕ ಚಕ್ಯತೆ ಮತ್ತು ತಂತ್ರಗಾರಿಕೆ ಕಡಿಮೆ ಇತ್ತು. ಅದಕ್ಕಾಗಿ ಅವರ ಮಗನಾದ ಶ್ರೀ ಶಿವಣ್ಣನವರಿಗೆ ಕಂಪನಿಯ ಜವಾಬ್ದಾರಿಯನ್ನು ಹಸ್ತಾಂತರಿಸುತ್ತಾರೆ. ಅಲ್ಲಿಂದ ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿಯ ರಂಗ ಪಯಣ ಮತ್ತೊಂದು ದಿಕ್ಕನ್ನು ಪಡೆದುಕೊಳ್ಳುತ್ತದೆ. ಮುಂದೆ ಅಖಂಡ 30 ವರ್ಷಗಳ ಕಾಲ ಕಂಪನಿಯನ್ನು ನಡೆಸಿದ ಧೀರರು ಶ್ರೀ ಕಂಚಿಕೇರಿ ಶಿವಣ್ಣನವರು.
ಇಂಥ ಅದ್ಭುತ ರಂಗಭೂಮಿ ಕಲಾವಿದರ ಮನೆತನದಲ್ಲಿ 04.07.1936 ರಂದು ಜನಿಸಿದ ಶ್ರೀ ಕಂಚಿಕೇರಿ ಶಿವಣ್ಣನವರ ತಂದೆ ಶ್ರೀ ಕೆ. ಬಿ. ಬಸವಣ್ಣೆಪ್ಪ ಮತ್ತು ತಾಯಿ ಶ್ರೀಮತಿ ಗೌರಮ್ಮ. ಅಜ್ಜ ಶ್ರೀ ಕೊಟ್ಟೂರು ಬಸಪ್ಪನವರ ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿಯ ಸುವರ್ಣ ಕಾಲದಲ್ಲಿ ಜನಿಸಿದ ಶ್ರೀ ಶಿವಣ್ಣನವರು ಅಕ್ಷರಶಃ ಬಂಗಾರದ ಚಮಚೆಯನ್ನು ಬಾಯಲ್ಲಿ ಇಟ್ಟುಕೊಂಡೇ ಜನಿಸಿದವರು. ಅಂದರೆ ಅಂಥ ವೈಭವಯುತವಾದ ದಿನಗಳಲ್ಲಿ ಶಿವಣ್ಣನವರ ಜನನವಾಗಿರುತ್ತದೆ.
ದಾವಣಗೆರೆಯ ಬಸವೇಶ್ವರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಂದೆ 1955 ರಲ್ಲಿ ಮ್ಯಾಟ್ರಿಕ್ ಪಾಸಾಗಿ ಡಿ.ಏ.ಆರ್ ಕಾಲೇಜಿಗೆ ಸೇರತಾರೆ ಶ್ರೀ ಶಿವಣ್ಣನವರು. ಕ್ರೀಡಾಸಕ್ತರಾಗಿದ್ದ ಶಿವಣ್ಣನವರಿಗೆ ಬಾಸ್ಕೇಟ್ ಬಾಲ್ ಆಟದಲ್ಲಿ ಆಸಕ್ತಿ ಇತ್ತು. ರಂಗಭೂಮಿಯ ಸೆಳೆತ ಇವರನ್ನು ರಂಗಭೂಮಿಯನ್ನು ಸೇರಲು ಪ್ರೇರಣೆ ನೀಡಿದು. 1940 ರಲ್ಲಿ ಭೌಮಾಸುರ ನಾಟಕದಲ್ಲಿ ಬಾಲನಟರಾಗಿ ರಂಗ ಪ್ರವೇಶ ಮಾಡಿದರು. ಅವರ ಅಜ್ಜಿ ಶ್ರೀಮತಿ ಲಕ್ಷ್ಮಮ್ಮನವರು ಸ್ವತಃ ಶಿವಣ್ಣನವರಿಗೆ ಬಣ್ಣ ಹಚ್ಚಿ ಆಶೀರ್ವಾದ ಮಾಡಿದ್ದರು. ಮುಂದೆ ತಂದೆಯವರಾದ ಬಸವಣ್ಣಪ್ಪನವರು ಶಿವಣ್ಣನವರಿಗೆ ಕಂಪನಿಯ ಜವಾಬ್ದಾರಿಯನ್ನು ಹೊರಿಸಿದರು.
1950 ರಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಗ್ಯಾಸ್ ಲೈಟ್ ಸಿಡಿದು ಇಡೀ ನಾಟಕದ ಪರಿಕರಗಳೆಲ್ಲಾ ಸುಟ್ಟು ಭಸ್ಮವಾದವು. ಇಂಥದ್ದೊಂದು ಅಪಘಾತ ಸಂಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶಿವಣ್ಣನವರು ಬಸ್ ಏಜೆಂಟರಾಗಿ ಕೆಲಸಕ್ಕೆ ಸೇರಿಕೊಳ್ಳುವಂತಾಯಿತು. ರಂಗಭೂಮಿಯಿಂದ ಹೊರಗುಳಿದಿದ್ದ ಶಿವಣ್ಣನವರು ನೀರಿನಿಂದ ಹೊರಗೆ ಬಿದ್ದಿದ್ದ ಮೀನಿನಂತೆ ಚಡಪಡಿಸಿದ್ದರೆಂದು ಕಾಣುತ್ತದೆ. ಮುಂದೆ 1960 ರಲ್ಲಿ ದಾವಣಗೆರೆಯಲ್ಲಿ ಸಾವಳಗಿ ರಂಗಮಂದಿರದಲ್ಲಿ ನಾಟಕ ಕಂಪನಿಯನ್ನು ಪ್ರಾರಂಭ ಮಾಡತಾರೆ.
1963-64 ರ ವರ್ಷ ಶಿವಣ್ಣನವರ ಬಾಳಿನಲ್ಲಿ ಪ್ರೀತಿಯ ತಂಗಾಳಿ ಬೀಸಿದ ವರ್ಷ. 1963 ರಲ್ಲಿ ಸಿಂಧನೂರಿನ ಮೃಡದೇವ ಗವಾಯಿಗಳ ಶ್ರೀ ಅಮರೇಶ್ವರ ನಾಟಕ ಸಂಘ ಮೊಕ್ಕಾಮ್ ಮಾಡಿತ್ತು. ಆಗಿನ ಕಾಲಘಟ್ಟದ ಪ್ರಖ್ಯಾತ ರಂಗಭೂಮಿ ಕಲಾವಿದರು ಈ ನಾಟಕ ಕಂಪನಿಯಲ್ಲಿ ಕೆಲಸ ಮಾಡತಿರತಾರೆ. ಈ ಕಂಪನಿ ನಾಟಕಗಳಲ್ಲಿ ಹೀರೋ ಆಗಿದ್ದ ಶಿವಣ್ಣನವರದ್ದು ಕಲಾರಂಗದಲ್ಲಿ ಉತ್ತುಂಗದ ಕಾಲಘಟ್ಟ. ಇದೇ ಕಂಪನಿಯಲ್ಲಿ ಖ್ಯಾತ ಕಲಾವಿದರಾಗಿದ್ದ ಎಲಿವಾಳ ಸಿದ್ಧಯ್ಯ ಮತ್ತು ಅವರ ಧರ್ಮಪತ್ನಿ ಚಂದ್ರಮ್ಮ ಸಹಿತ ತೊಡಗಿಸಿಕೊಂಡಿರುತ್ತಾರೆ. ಅತ್ಯಂತ ಸ್ಫುರದ್ರೂಪಿಯಾದ ಅವರ ಮಗಳು ಕಮಲಮ್ಮನವರು ನಾಯಕಿಯ ಪಾತ್ರಗಳನ್ನು ಮಾಡುತ್ತಿರುತ್ತಾರೆ. ಇವರಿಬ್ಬರ ನಡುವೆ ಪ್ರೇಮಾಂಕುರವಾಗುತ್ತದೆ. ಇಡೀ ಕಂಪನಿಯಲ್ಲಿ ಗುಸು ಗುಸು ಸುದ್ದಿಯಾಗುತ್ತದೆ. ಇದನ್ನರಿತ ಎಲಿವಾಳ ಸಿದ್ದಪ್ಪ ದಂಪತಿಗಳು ಅವರ ಮದುವೆಗೆ ಒಪ್ಪುತ್ತಾರೆ. ದಿನಾಂಕ 24.01.1964 ರಲ್ಲಿ ಮಂಗಳೂರಿನ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಶಿವಣ್ಣ ಮತ್ತು ಕಮಲಮ್ಮನವರ ವಿವಾಹ ನೆರವೇರುತ್ತದೆ. ಅವರ ಪ್ರೀತಿಯ ಬಳ್ಳಿಗೆ ಅರಳಿದ ನಾಲ್ಕು ಹೂವುಗಳು ನಟರಾಜ, ಕೊಟ್ರೇಶ, ಮಲ್ಲಕಾರ್ಜುನ ಎನ್ನುವ ಮೂವರು ಗಂಡು ಮಕ್ಕಳು ಮತ್ತು ಮಂಗಳಾ ಎನ್ನುವ ಒಬ್ಬ ಹೆಣ್ಣುಮಗಳು.
ಅಜ್ಜ ಶ್ರೀ ಕೊಟ್ಟೂರು ಬಸಪ್ಪನವರಿಗೆ ಕೊಟ್ಟ ಮಾತಿನಂತೆ ಹೊಸ ನಾಟಕ ಕಂಪನಿಯನ್ನು ಶುರು ಮಾಡುವುದಕ್ಕೆ ಶ್ರೀ ಶಿವಣ್ಣನವರು ಮುಂದಾಗತಾರೆ. ಶ್ರೀ ಹೆಚ್ ಎನ್ ಹೂಗಾರ ಅವರ ನಾಟಕ “ಮಕ್ಕಳ ಮದುವೆ” ಎನ್ನುವ ಸಾಮಾಜಿಕ ನಾಟಕವನ್ನು ಆಡಲು ಸಿದ್ಧತೆ ಮಾಡಿಕೊಳ್ಳುತ್ತಾರೆ. ಅವರು ಕೂಡಿಟ್ಟಿದ್ದ 6,000 ರೂಪಾಯಿಗಳು ಮತ್ತು 3,000 ರೂಪಾಯಿಗಳನ್ನು ಸಾಲ ಮಾಡಿ ಒಟ್ಟು 9000 ರೂಪಾಯಿಗಳನ್ನು ಹೊಂದಿಸಿಕೊಂಡು ನಾಟಕಕ್ಕೆ ಬೇಕಾದ ಪರಿಕರ ಮತ್ತು ರಂಗಸಜ್ಜಿಕೆಗಳನ್ನು ಜೋಡಿಸಿಕೊಳ್ಳುತ್ತಾರೆ. ಆ ಕಾಲಘಟ್ಟದ ಹೆಸರಾಂತ ಘಟಾನುಘಟಿ ನಟ ನಟಿಯರಾದ ಆರ್ ಟಿ ರಮಾ, ಅನುಸೂಯಾ, ಸಿದ್ಧಲಿಂಗಪ್ಪ, ಬಸವಲಿಂಗ ಶಾಸ್ತ್ರಿ, ಲಕ್ಷ್ಮೀದೇವಿ ಮುಂತಾದವರ ದಂಡೇ ಈ ನಾಟಕದಲ್ಲಿ ಪಾತ್ರವಹಿಸುತ್ತಾರೆ. ಸಂಗೀತ ಕಲಾವಿದರಾದ ಮೆಡ್ಲೇರಿ ರಾಮಣ್ಣ, ಹಸನ್ ಸಾಬ್, ಪ್ರಹ್ಲಾದ ಅವರನ್ನು ಕರೆಸುತ್ತಾರೆ. ಹೀಗೆ ಬಹಳವಾಗಿ ಪ್ರೀತಿಸುತ್ತಿದ್ದ ರಂಗಭೂಮಿಯ ಸಾರಥ್ಯವಹಿಸಿ ನಾಟಕ ಕಂಪನಿಯನ್ನು ಸ್ಥಾಪಿಸುತ್ತಾರೆ. ಈ ನಾಟಕ ಮಂಡಳಿ ಶ್ರೀ ಶಿವಣ್ಣನವರು ಬಯಸಿದ ಹಾಗೆ ಟೇಕ್ ಆಫ್ ಆಗಲಿಲ್ಲ. ಇದಕ್ಕೆ ಕಾರಣ, ಅದೇ ವೇಳೆಗೆ ಮಂಗಳೂರಿನ ಶ್ರೀ ಸರ್ವಮಂಗಳ ನಾಟಕ ಸಂಘ “ಟಿಪ್ಪೂಸುಲ್ತಾನ್” ಎನ್ನುವ ನಾಟಕದ ಅದ್ದೂರಿ ಪ್ರದರ್ಶನವನ್ನು ಪ್ರಾರಂಭಿಸಿದ್ದು. ಕಲೆಕ್ಶನ್ ಇಲ್ಲದೆ ಸೊರಗಿದ ಶ್ರೀ ಶಿವಣ್ಣನವರ ನಾಟಕ ಕಂಪನಿ ಚಿಗುರಿನಲ್ಲೆ ಮೊಟಕಿದಂತಾಯಿತು.
ಕಡುಕಷ್ಟದ ದಿನಗಳನ್ನು ಕಳೆದ ಶ್ರೀ ಶಿವಣ್ಣನವರು ಮತ್ತೆ ದಾವಣಗೆರೆಯಲ್ಲಿ ಭಾರತ ಬಸ್ನಲ್ಲಿ ಏಜೆಂಟ್ ಆಗಿ ಕೆಲಸಕ್ಕೆ ಸೇರಿಕೊಂಡರಾದರೂ ಭಾರತ ಬಸ್ ಬಂದ್ ಆದಾಗ ಶಿವಣ್ಣನವರು ಮತ್ತೆ ಆರ್ಥಿಕವಾಗಿ ಅತಂತ್ರರಾದರು. ಹೀಗಾಗಿ ಕೆಲವು ದಿನಗಳ ಕಾಲ ಏಣಗಿ ಬಾಳಪ್ಪನವರ ಕಂಪನಿಯಲ್ಲಿ ಪೋಸ್ಟರ್ ಬರೆಯುವ ಕೆಲಸವನ್ನು ಮಾಡತಾರೆ. ಹಲವಾರು ಊರುಗಳನ್ನು ಸುತ್ತಿ ಆರ್ಥಿಕವಾಗಿ ತೀರ ಸಂಕಷ್ಟಕ್ಕೆ ಸಿಲುಕಿದ ಶ್ರೀ ಶಿವಣ್ಣನವರು ಇನ್ನು ನಾಟಕದ ಸಹವಾಸವೇ ಬೇಡವೆಂದು ಪುನಃ ದಾವಣಗೆರೆಗೆ ಬರುತ್ತಾರೆ.
ಎಷ್ಟೇ ಆದರೂ ಮೈಯಲ್ಲಿ ನಾಟಕದ ರಕ್ತ ಹರಿಯುತ್ತಿದ್ದರೆ ಸುಮ್ಮನಿರಲಾದೀತೆ? 1963 ರಲ್ಲಿ ಸಿಂಧನೂರಿನ ಮೃಡದೇವ ಗವಾಯಿಗಳ ಶ್ರೀ ಅಮರೇಶ್ವರ ನಾಟಕ ಸಂಘದಲ್ಲಿ ನೂರು ರೂಪಾಯಿ ಪಗಾರದ ಮೇರೆಗೆ ನಟರಾಗಿ ಬಣ್ಣ ಹಚ್ಚುತ್ತಾರೆ. ನಾಯಕ ನಟರಾಗಿ ಜನಪ್ರಿಯರಾಗಿ ಹೆಸರು ಮಾಡುತ್ತಾರೆ. ಮೃಡದೇವ ಗವಾಯಿಗಳ ಶ್ರೀ ಅಮರೇಶ್ವರ ನಾಟಕ ಸಂಘ ಮಂಗಳೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ನಂಜನಗೂಡಿಗೆ ಕ್ಯಾಂಪ್ ಮಾಡಿತು. ಮಂಗಳೂರಿನಲ್ಲಿ ಕ್ಯಾಂಪ್ ಮಾಡಿದ್ದ ಸಂಧರ್ಭದಲ್ಲಿ ಶ್ರೀನಿವಾಸ ಬಾಳಿಗಾರವರ ಹತ್ತಿರ ಮೃಡದೇವ ಗವಾಯಿಗಳು ಸಾಲ ಮಾಡಿರುತ್ತಾರೆ. ಸಾಲ ತೀರಿಸದಿದ್ದಕ್ಕೆ ನಂಜನಗೂಡಿಗೆ ಬಂದ ಶ್ರೀನಿವಾಸ ಬಾಳಿಗಾರವರು ನಾಟಕದ ಪರಿಕರಗಳೆಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ. ಮತ್ತೆ ನಿರುದ್ಯೋಗಿಯಾದ ಶ್ರೀ ಶಿವಣ್ಣನವರು ದಾವಣಗೆರೆಗೆ ವಾಪಸಾಗುತ್ತಾರೆ.
ಎಷ್ಟು ರಂಗಭೂಮಿಯ ಹುಚ್ಚು ಶ್ರೀ ಶಿವಣ್ಣನವರಿಗೆ ಎಂದರೆ ದಾವಣಗೆರೆಯಿಂದ ಹದಡಿಗೆ ಹೋಗಿ ಶ್ರೀ ಶಂಕರಾಚಾರ್ಯರ ಜೊತೆಗೂಡಿ ಮತ್ತೆ ನಾಟಕ ಕಂಪನಿ ಶುರು ಮಾಡತಾರೆ. ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿಯ ಸುಪ್ರಸಿದ್ಧ “ಹೇಮರೆಡ್ಡಿ ಮಲ್ಲಮ್ಮ” ನಾಟಕವನ್ನು ಮಡದಿ ಶ್ರೀಮತಿ ಕಮಲಮ್ಮನವರೊಂದಿಗೆ ಶುರು ಮಾಡುತ್ತಾರೆ. ಹಲವಾರು ಕಡೆ ಈ ನಾಟಕ ಪ್ರದರ್ಶನಗೊಂಡು ಆರ್ಥಿಕವಾಗಿ ಸ್ವಲ್ಪ ಚೇತರಿಸಿಕೊಳ್ಳುತ್ತಾರೆ. ರಾಣಿಬೆನ್ನೂರಿನಲ್ಲಿದ್ದಾಗ ಶ್ರೀ ಬಿ ಓಬಳೇಶ ಅವರ ಶ್ರೀ ಓಂಕಾರೇಶ್ವರ ನಾಟಕಕಂಪನಿಯ ಜೊತೆ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಶ್ರೀ ಶಿವಣ್ಣನವರ ರಂಗ ಪಯಣ ಮತ್ತೊಂದು ದಿಕ್ಕಿನಲ್ಲಿ ಸಾಗುತ್ತದೆ.
ಹಾಸ್ಯ ಚಕ್ರವರ್ತಿ ಎಂದು ಹೆಸರು ಮಾಡಿದ್ದ ಶ್ರೀ ಬಿ ಓಬಳೇಶ ಅವರೊಂದಿಗೆ ಸೇರಿ ಕಲಬುರ್ಗಿಯಲ್ಲಿ ಕ್ಯಾಂಪ್ ಮಾಡಿದ್ದು ಶ್ರೀ ಶಿವಣ್ಣನವರ ಬಾಳಿನಲ್ಲಿ ಹರುಷದ ಹೊಳೆಯನ್ನೇ ಹರಿಸಿತು ಎಂದು ಹೇಳಬಹುದು. ತಂದೆಯಿಲ್ಲದ ಮಗನೊಬ್ಬನ ಕಥೆ ಹೇಳುವ ನಾಟಕ “ಮುಂಡೆಮಗ” ಅದ್ದೂರಿಯಾಗಿ ಪ್ರದರ್ಶನಗೊಂಡು ಜಯಭೇರಿ ಬಾರಿಸಿತ್ತು. ಶ್ರೀ ಶಿವಣ್ಣ ಮತ್ತು ಶ್ರೀ ಓಬಳೇಶ ಅವರ ಜೋಡಿ ಇಡೀ ರಂಗಭೂಮಿಯಲ್ಲಿ ಹೆಸರು ಮಾಡಿತು. “ಶರಣ ಬಸವೇಶ್ವರ ಮಹಾತ್ಮೆ” ನಾಟಕವನ್ನು ಪ್ರದರ್ಶಿಸುವುದರ ಮೂಲಕ ಕನ್ನಡ ನಾಡಿನಲ್ಲಿ ಈ ನಾಟಕ ಕಂಪನಿ ಬಹುದೊಡ್ಡ ಹೆಸರನ್ನು ಮಾಡಿತು.
“ಶರಣ ಬಸವೇಶ್ವರ ಮಹಾತ್ಮೆ” ನಾಟಕ ಶತಕ ಪ್ರದರ್ಶನಗಳನ್ನು ಕಂಡಿತು. ಇದರ 101 ನೇ ಪ್ರದರ್ಶನಕ್ಕೆ ಶ್ರೀ ನಿಜಲಿಂಗಪ್ಪನವರು, ಆಂದಿನ ಮುಖ್ಯಮಂತ್ರಿಗಳಾಗಿದ್ದಂಥ ಶ್ರೀ ವೀರೇಂದ್ರ ಪಾಟೀಲರು ಮತ್ತು ಶ್ರೀ ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾಗಿದ್ದ ಶ್ರೀ ದೊಡ್ಡಪ್ಪ ಅಪ್ಪಗಳವರು ಆಗಮಿಸಿದ್ದು ಐತಿಹಾಸಿಕ ದಾಖಲೆ ಎನ್ನಬಹುದು. ಶ್ರೀ ಶರಣ ಬಸವೇಶ್ವರ ಸಂಸ್ಥಾನದಿಂದ ಶ್ರೀ ಓಬಳೇಶ ಮತ್ತು ಶ್ರೀ ಶಿವಣ್ಣನವರಿಗೆ ಬಂಗಾರದ ಪದಕಗಳನ್ನು ನೀಡಿ ಗೌರವಿಸುತ್ತಾರೆ. ಆಗಿನ ಕಾಲಘಟ್ಟದಲ್ಲಿ ಕರ್ನಾಟಕ ರಂಗಭೂಮಿಯ ಇತಿಹಾಸದಲ್ಲಿ 250 ಕ್ಕೂ ಹೆಚ್ಚು ಪ್ರದರ್ಶನ ಕಂಡ ಏಕೈಕ ನಾಟಕ ಎಂದು ಪ್ರಸಿದ್ಧಿಯಾಯಿತು. ವರ್ಷಗಟ್ಟಲೇ ಕಲಬುರ್ಗಿಯಲ್ಲಿ ಮೊಕ್ಕಾಮ್ ಮಾಡಿದ ಶ್ರೀ ಓಂಕಾರೇಶ್ವರ ನಾಟಕ ಸಂಘದಿಂದ ಹೋಳಿ ಹುಣ್ಣಿಮೆ, ಗಾಂಧಿ ಟೋಪಿ, ಕಲಿತ ಕತ್ತೆ, ಜಗಜ್ಯೋತಿ ಬಸವೇಶ್ವರ ಮುಂತಾದ ನಾಟಕಗಳು ಯಶಸ್ವಿ ಪ್ರದರ್ಶನ ಕಂಡವು.
ಐದಾರು ವರ್ಷ ವೃತ್ತಿರಂಗಭೂಮಿಯಲ್ಲಿ ಜಯಭೇರಿ ಬಾರಿಸಿದ ಶ್ರೀ ಓಬಳೇಶ ಮತ್ತು ಶ್ರೀ ಶಿವಣ್ಣನವರ ಜೋಡಿ 1969 ರಲ್ಲಿ ಶ್ರೀ ಶಿವಣ್ಣನವರು ಪುನಃ ಸ್ವಂತ ಕಂಪನಿಯನ್ನು ಆರಂಭಿಸುವುದರೊಂದಿಗೆ ಬೇರೆಯಾಗುತ್ತದೆ. ಇಬ್ಬರು ಹಸುಗೂಸುಗಳನ್ನು ಕಂಕಳಲ್ಲಿ ಕಟ್ಟಿಕೊಂಡು ಶ್ರೀ ಶಿವಣ್ಣ ಮತ್ತು ಶ್ರೀಮತಿ ಕಮಲಮ್ಮ ದಂಪತಿಗಳು ಶಿವಮೊಗ್ಗ, ಭದ್ರಾವತಿ, ಕುಮಟಾ, ಗೋಕಾಕ, ಶಿರ್ಶಿ, ತಿಪಟೂರು, ತುಮಕೂರು, ಹಾಸನ, ರಾಯಚೂರುಗಳಲ್ಲಿ ಕ್ಯಾಂಪ್ ಮಾಡುವುದರ ಮೂಲಕ ರಂಗಭೂಮಿಯ ಸೇವೆಯನ್ನು ಮಾಡುತ್ತಾರೆ. ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಶ್ರೀ ಶಿವಣ್ಣನವರು ದಾವಣಗೆರೆಗೆ ವಾಪಸ ಬರುತ್ತಾರೆ.
ನಾಟಕದ ಗೀಳಿದ್ದದ್ದರಿಂದ ಮತ್ತೇ ರಂಗಭೂಮಿ ಸೇರಿದ ಶ್ರೀ ಶಿವಣ್ಣನವರು ಹಾವೇರಿಯಲ್ಲಿ ಕ್ಯಾಂಪ್ ಮಾಡಿದ್ದ ಸುಳ್ಳದ ಮಲ್ಲಪ್ಪ ದೇಸಾಯಿಯವರವರ ಕಂಪನಿಯನ್ನು ಸೇರಿಕೊಳ್ಳುತ್ತಾರೆ. ಅವರ ಧರ್ಮಪತ್ನಿ ಶ್ರೀಮತಿ ಕಮಲಮ್ಮನವರು ಗರ್ಭಿಣಿಯಾಗಿದ್ದರಿಂದ ದಾವಣಗೆರೆಗೆ ಹೋಗುತ್ತಾರೆ. ಇಳಕಲ್ಲ, ಗುಡೂರು, ಹುನಗುಂದ, ನರಗುಂದ ಮುಂತಾದ ಕಡೆಗಳಲ್ಲಿ ನಾಟಕಗಳು ಭರ್ಜರಿಯಾಗಿ ಯಶಸ್ವಿಯಾಗುವುದರ ಮೂಲಕ ಆರ್ಥಿಕವಾಗಿ ಸ್ವಲ್ಪ ಸುಧಾರಣೆಯೂ ಆಗುತ್ತದೆ.
ನಿರುದ್ಯೋಗದಿಂದ ಮತ್ತು ಆರ್ಥಿಕ ಸಂಕಷ್ಟದಿಂದ ಬೇಸತ್ತಿದ್ದ ಶ್ರೀ ಶಿವಣ್ಣನವರು ಹೊಳಲ್ಕೆರೆಗೆ ಹೋಗಿ ರಂಸಜ್ಜಿಕೆಗಳನ್ನು ತಂದು ಭರಮಸಾಗರದಲ್ಲಿ ಕ್ಯಾಂಪ್ ಮಾಡುತ್ತಾರೆ. ಮುದುಕನ ಮದುವೆ, ಹೇಮರೆಡ್ಡಿ ಮಲ್ಲಮ್ಮನ ನಾಟಕಗಳನ್ನು ಆಡಿಸುತ್ತಾರೆ. ಕಲ್ಲೇದೇವರಪುರದಲ್ಲಿ ನಾಟಕವನ್ನಾಡಿದರೂ ಕಲೆಕ್ಶನ್ ಇಲ್ಲದೇ ನಾಟಕ ಕಂಪನಿಯನ್ನು ಮುಚ್ಚಿದರು. ನಂತರ ದಾವಣಗೆರೆಗೆ ಆಗಮಿಸಿದ ಶ್ರೀ ಶಿವಣ್ಣನವರು ಅವರ ಕಂಪನಿಯ ನಾಟಕಗಳನ್ನು ಪ್ರದರ್ಶಿಸುತ್ತಾರೆ. ನಂತರ ತಮ್ಮಂದಿರು ಬಿಟ್ಟು ಹೋದಾಗ ಮತ್ತೊಮ್ಮೆ ವನವಾಸದ ದಿನಗಳು ಶ್ರೀ ಶಿವಣ್ಣನವರ ಬಾಳಿನಲ್ಲಿ ಪ್ರವೇಶವಾಗುತ್ತದೆ.
ಆರ್ಥಿಕ ಸಂಕಷ್ಟಗಳು ಎದುರಾದಾಗಲೆಲ್ಲಾ ಅವರ ಪರಮ ಮಿತ್ರ ಬಾತಿ ಜಯಣ್ಣನವರು ಸಹಾಯ ಮಾಡುತ್ತಾರೆ. ದಾವಣಗೆರೆಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ನಾಟಕಗಳನ್ನು ಆಡುತ್ತಾ ದಿನಗಳು ಉರುಳುತ್ತಿರುತ್ತವೆ. ರಾಣಿಬೆನ್ನೂರಿನ ಮೆಡ್ಲೇರಿಯಲ್ಲಿ ನಾಟಕವಾಡುವಾಗ ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಇದೇ ಕಾಲಕ್ಕೆ ಅವರ ಮಗ ನಟರಾಜ “ರೇಣುಕಾ ಮಹಾತ್ಮೆ” ಯ ಮೂಲಕ ರಂಗಪ್ರವೇಶ ಮಾಡುತ್ತಾರೆ. ಮುಂದೆ ರಂಗಭೂಮಿಯಲ್ಲಿ ನಟರಾಜ ಉತ್ತಮ ನಟರಾಗಿ ಹೆಸರನ್ನು ಮಾಡಿ ಇಂದಿಗೂ ರಂಗಭೂಮಿಯ ಸೇವೆಯನ್ನು ಮಾಡುತ್ತಿದ್ದಾರೆ.
ಸರಿ ಸುಮಾರು 40 ವರ್ಷಗಳ ಒಡನಾಟವಿದ್ದ ಆಪ್ತಮಿತ್ರ ಶ್ರೀ ಓಬಳೇಶ ಅವರ ಕಾಲವಾದ ಸುದ್ದಿಯಿಂದ ಶ್ರೀ ಶಿವಣ್ಣನವರು ಕುಗ್ಗಿ ಹೋಗುತ್ತಾರೆ. ಕೆಲವೇ ದಿನಗಳ ಹಿಂದೆ ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಶ್ರೀ ಓಬಳೇಶವರನ್ನು ಭೆಟ್ಟಿಯಾಗಿದ್ದಾಗ ಆರ್ಥಿಕ ಸಂಕಷ್ಟದಲ್ಲಿ ನೆರವು ನೀಡಲಾಗಲಿಲ್ಲ ಎಂಬ ಕೊರಗು ಶ್ರೀ ಶಿವಣ್ಣನವರನ್ನು ಬಹು ದಿನಗಳವರೆಗೆ ಕಾಡುತ್ತದೆ.
ಹಿರಿಯೂರು ತಾಲೂಕಿನ ಕಣಜನಹಳ್ಳಿಯಲ್ಲಿ ರೇಣುಕಾ ಮಹಾತ್ಮೆ ನಾಟಕದಲ್ಲಿ ಶ್ರೀ ಶಿವಣ್ಣನವರ ಧರ್ಮಪತ್ನಿ ಶ್ರೀಮತಿ ಕಮಲಮ್ಮನವರು ಪಾರ್ವತಿದೇವಿಯ ಪಾತ್ರ ಮಾಡುತ್ತಾರೆ. ಮುಂದೆ ಅನಾರೋಗ್ಯದಿಂದ ಅದೇ ಅವರ ಕೊನೆಯ ನಾಟಕವಾಗುತ್ತದೆಂದು ಶ್ರೀ ಶಿವಣ್ಣನವರು ಭಾವಿಸಿರಲಿಲ್ಲ. ಎಂಥ ಆರ್ಥಿಕ ಸಂಕಷ್ಟ ಅಂದರೆ ಪತ್ನಿಯ ಗುಳಿಗೆಗಳಿಗೂ ಹಣ ಇರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ದಾವಣಗೆರೆಯ ಕ್ಷಯರೋಗ ಆಸ್ಪತ್ರೆಗೆ ಸೇರಿಸುತ್ತಾರೆ. ಆದರೆ ಚಿಕಿತ್ಸೆ ಫಲಿಸದೇ 24.07.1988 ರಂದು ಕೊನೆಯುಸಿರು ಎಳೆಯುತ್ತಾರೆ. ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೇ ಪರದಾಡುವ ಪರಿಸ್ಥಿತಿ ಇತ್ತು ಎಂದರೆ ನಮಗೆ ಹೇಳಲೂ ಸಹ ಕಷ್ಟವಾಗುತ್ತದೆ.
ಒಂದು ಕಡೆ ಆಪ್ತಮಿತ್ರ ಶ್ರೀ ಓಬಳೇಶರವರ ನಿಧನ ಇನ್ನೊಂದು ಕಡೆ ಜೀವದ ಗೆಳತಿ ಮತ್ತು ಧರ್ಮಪತ್ನಿ ಶ್ರೀಮತಿ ಕಮಲಮ್ಮನವರ ನಿಧನದಿಂದ ಶ್ರೀ ಶಿವಣ್ಣನವರು ಹಣ್ಣಾಗಿ ಹೋಗತಾರೆ. ಆದರೂ ಕರ್ನಾಟಕಕ್ಕೆ ಹೊಂದಿಕೊಂಡಂತೆ ಇರುವ ಆಂಧ್ರದ ಕೆಲವು ಹಳ್ಳಿಗಳಲ್ಲಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಮುಂದೆ ಮರಿಕುಂಟೆಯ ಸುತ್ತಮುತ್ತ ನಾಟಕಗಳನ್ನು ಪ್ರದರ್ಶಿಸಿ ಹಣ ಸಂಪಾದನೆ ಮಾಡುತ್ತಾರೆ.
ಇದ್ದುದರಲ್ಲಿಯೇ ಮಗಳ ಮದುವೆಯನ್ನು ಸಾಂಗವಾಗಿ ನೆರವೇರಿಸುತ್ತಾರೆ. ಆದರೆ ದುರ್ದೈವವೆಂದರೆ ನಾಟಕದವರು ಅಂತ ಮಗಳ ಮನೆಯವರು ಅವರನ್ನು ಶ್ರೀ ಶಿವಣ್ಣನವರಿಗೆ ಮಗಳ ಮುಖವನ್ನೂ ತೋರಿಸಲಿಲ್ಲ.
ಕರ್ನಾಟಕ ನಾಟಕ ಅಕಾಡೆಮಿಯಿಂದ ಶ್ರೀ ಶಿವಣ್ಣನವರಿಗೆ ನವೆಂಬರ 1994 ರಂದು ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ದಿನಾಂಕ 26.07.1995 ರಂದು ಶ್ರೀ ಜಯಲಕ್ಷ್ಮಿ ಪ್ರಾಸಾದಿತ ಸಂಗೀತ ನಾಟಕ ಮಂಡಳಿಯ 75 ನೇ ವರ್ಷದ ವಜ್ರಮಹೋತ್ಸವವನ್ನು ದಾವಣಗೆರೆಯಲ್ಲಿ ಮಾಡಲಾಯಿತು. ಆಗಿನ ರಾಜ್ಯ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯರಾಗಿದ್ದ ಶ್ರೀಮತಿ ಬಿ ಟಿ ಲಲಿತಾ ನಾಯಕ ಅವರು ಆಗಮಿಸಿದ್ದರು. ಶ್ರೀ ಏಣಗಿ ಬಾಳಪ್ಪನವರು, ಬಸವಲಿಂಗಶಾಸ್ತ್ರಿಗಳು, ಶ್ರೀ ಪಿ ಬಿ ಧುತ್ತರಗಿಯವರು ಮುಂತಾದವರು ಆಗಮಿಸಿದ್ದರು. ಇದೇ ವಜ್ರಮಹೋತ್ಸವ ಸಂದರ್ಭದಲ್ಲಿ “ರಂಗ ಕಂಕಣ” ವೆಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗಿದೆ. 2015 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂದರ್ಭದಲ್ಲಿ ಶ್ರೀ ಶಿವಣ್ಣನವರಿಗೆ ಸನ್ಮಾನ ನೀಡಿ ಗೌರವಿಸಲಾಯಿತು.
ರಂಗಭೂಮಿಯಲ್ಲಿ ಹಲವಾರು ಏರಿಳಿತಗಳ ನಡುವೆಯೂ ಬಣ್ಣ ಹಚ್ಚಿ ನಟಿಸಿದ ಮಹಾನ್ ಹಾಗೂ ಅದ್ಭುತ ರಂಗಕರ್ಮಿ ಶ್ರೀ ಶಿವಣ್ಣನವರು. ಅಜ್ಜ ಕಟ್ಟಿದ ನಾಟಕ ಕಂಪನಿಯ ಶತಮಾನೋತ್ಸವದ ಕನಸು ನನಸಾಗದೇ ಶ್ರೀ ಶಿವಣ್ಣನವರು 08.03.2017 ಬುಧವಾರ ಬೆಳಿಗ್ಗೆ ತಮ್ಮ 82 ನೇ ವಯಸ್ಸಿನಲ್ಲಿ ರಂಗಭೂಮಿಯಿಂದ ದೂರ ಸರಿದರು.
ಸರಿ ಸುಮಾರು 70 ವರ್ಷ ರಂಗಭೂಮಿಯಲ್ಲಿ ತಮ್ಮ ಉಸಿರಿರುವವರೆಗೂ ದುಡಿದ ಶ್ರೀ ಕಂಚಿಕೇರಿ ಶಿವಣ್ಣನವರ ಜ್ಞಾಪಕಾರ್ಥವಾಗಿ ಸ್ಮಾರಕವನ್ನು ನಿರ್ಮಿಸುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸುವಂತಾಗಬೇಕೆಂದು ಮನವಿ ಮಾಡುತ್ತಾ ಈ ಲೇಖನಕ್ಕೆ ವಿರಾಮ ಹೇಳುತ್ತೇನೆ.
ಲೇಖನ: ವಿಜಯಕುಮಾರ ಕಮ್ಮಾರ
ತುಮಕೂರು
ಮೋಬೈಲ್ ನಂ : 9741 357 132
ಈ-ಮೇಲ್ : vijikammar@gmail.com