ಕನಸು ಅರಳುವ ಆಸೆ
ಪುಸ್ತಕ ವಿಮರ್ಶೆ
ಶ್ರೀಯುತ ಮಂಡಲಗಿರಿ ಪ್ರಸನ್ನರವರ ಚೊಚ್ಚಿಲು ಕವನ ಸಂಕಲನ ಕನಸು ಅರಳುವ ಆಸೆ ಪ್ರಕಟವಾಗಿ ಹಲವು ವರ್ಷಗಳೇ ಆದರೂ ಇತ್ತೀಚೆಗೆ ಅದೃಷ್ಟವಶಾತ್ ನನಗೆ ಓದಲು ದಕ್ಕಿತು .
ಡಾ. ಸರಜೂ ಕಾಟ್ಕರ್ ಅವರು ಮುನ್ನುಡಿಯಲಿ ಬರೆದಂತೆ ಪ್ರಸನ್ನ ಅವರು ಸಾಹಿತ್ಯದ ವಿದ್ಯಾರ್ಥಿ ಆಗಿರದೆ ವೃತ್ತಿಯಿಂದ ಒಬ್ಬ ಇಂಜಿನೀಯರ್ ಆಗಿದ್ದರೂ ಅವರ ಸಾಹಿತ್ಯದ ಪ್ರೀತಿ, ಅವರ ಕಾವ್ಯದ ಕಸುವು ಅವರನ್ನು ಒಬ್ಬ promising ಕವಿ ಕನ್ನಡದಲ್ಲಿ ಹುಟ್ಟಿದ್ದಾನೆ ಅಂತ ಈ ಕವನ ಸಂಕಲನ ಸಾಬೀತು ಪಡಿಸುತ್ತದೆ ಎನ್ನುವ ಮಾತು ಓದಿನ ನಂತರ ನನಗೆ ಸತ್ಯವೆನಿಸಿತು.
ನಲವತ್ತು ಕವನಗಳನ್ನು ಒಳಗೊಂಡ ಈ ಕವನ ಸಂಕಲನ ಕಲಬುರ್ಗಿ ಯ ಸೌರಭ ಸಾಹಿತ್ಯ ಪ್ರಕಾಶನದಲ್ಲಿ ಒಡಮೂಡಿದೆ. ಎಲ್ಲ ಕವನಗಳೂ ಶ್ರೇಷ್ಠ ಎಂದು ನಾನು ಹೇಳುವದಿಲ್ಲ, ಕಂಡು ಅನುಭವಿಸಿದ ವಸ್ತುಗಳೇ ಕಾವ್ಯಕ್ಕೆ ವಿಷಯವಾಗಿವೆ., ಆರಂಭದಲ್ಲಿ ಬರೆದ ಕೆಲವು ಕವನಗಳನ್ನೂ ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ ಅವನ್ನು ಕೈಬಿಡಲಾಗದೆ ಸೇರಿಸಿದ್ದೇನೆ ಎಂದು ಹೇಳುವ ಪ್ರಸನ್ನ ಅವರ ಮಾತುಗಳು ಅವರ ಹಮ್ಮುಬಿಮ್ಮುಗಳಿಲ್ಲದ ಪ್ರಾಂಜಲ ಮನಸಿಗೆ ಕನ್ನಡಿ ಹಿಡಿದಂತಿವೆ.
ಕನಸು, ಪ್ರೀತಿ,ನೋವು,ಪೊಳ್ಳು ಸಂಬಂಧಗಳು, ಸಾಮಾಜಿಕ ತಲ್ಲಣಗಳೆಲ್ಲವೂ ಅತ್ಯಂತ ಸಹಜವಾಗಿ ಕವನಗಳಲ್ಲಿ ಮೂಡಿ ಬಂದಿವೆ. ನಮ್ಮದೇ ಬದುಕಿನ ವಿವಿಧ ಮಗ್ಗುಲುಗಳನ್ನು ತಿರುವಿ ಹಾಕುವ ಕವನಗಳು ಒಳಬಾಗಿಲನ್ನು ತಟ್ಟಿಬಿಡುವವು.
“ಇಬ್ಬರಿಗೂ ಮುಂದಿನ ಜನ್ಮವೇನಾದರೂ ಇದ್ದರೆ
ಅವಳು ಗಂಡಾಗಿ ನಾನು ಹೆಣ್ಣಾಗಿ
ಗಂಡಿಗೂ ನೋವಿರುತ್ತದೆ
ಎನ್ನುವುದನ್ನು
ತೋರಿಸಬೇಕೆಂದುಕೊಂಡಿದ್ದೇನೆ”
ಎನ್ನುವ ಸಾಲುಗಳು ಪ್ರೀತಿಸಿ ಕೈಕೊಟ್ಟು ಹೋದ ಹುಡುಗಿಗಾಗಿ ಘಾಸಿಗೊಂಡ ಮನವು ಹೃದಯಕ್ಕೆ ಗಂಡು,ಹೆಣ್ಣುಗಳೆಂಬ ಬೇಧವಿಲ್ಲ ಎನ್ನುತ್ತಾ ಮುಂದಿನ ಜನುಮವೇನಾದರೂ ಇದ್ದರೆ ಅದಲು ಬದಲಾಗಿ ಗಂಡಿಗೂ ನೋವಾಗುವದೆಂಬುದನ್ನು ತೋರಿಸುವೆ ಎಂಬ ಮಾತು ಪ್ರೀತಿಯ ಮಿಡಿತದ ಆಳವನ್ನು ಬಿಚ್ಚಿಡುವುದು.
“ಗಡಿ-ಭಾಷೆ-ಜಾತಿ
ಗಾಂಧಿ ಸಮಾಧಿಯ
ಮೇಲರಳಿರುವ ಹೂಗಳು”
ಗಡಿ, ಭಾಷೆ,ಜಾತಿಯ ಗೋಡೆಗಳು ಸಮೃದ್ಧ,ಸಮಗ್ರ ಭಾರತದ ಕನಸು ಕಂಡ ಮಹಾತ್ಮ ಗಾಂಧೀಜಿಯವರ ಅಂತ್ಯದಲ್ಲೇ ಹೆಮ್ಮರವಾಗಿ ಬೆಳೆದ ಸೂಕ್ಷ್ಮ ತೆಯಯನ್ನು ಈ ಸಾಲುಗಳು ಧ್ವನಿಸುವವು.
ಸತ್ಯ,ಅಹಿಂಸೆಗಳು
ಅತ್ತ ಸಾಯದೆ
ಇತ್ತ ಬದುಕದೆ
ನರಳುತ್ತಿವೆ
ಆದರೂ
ಗಾಂಧಿ ಸಮಾಧಿಯೊಳಗೆ
ಇನ್ನೂ ಕನಸುಗಳು
ಚಿಗುರೊಡೆಯಲು ತವಕಿಸುತ್ತಿವೆ
ಭ್ರಷ್ಟ ರಾಜಕೀಯ ವ್ಯವಸ್ಥೆಯ ಕಬಂಧ ಬಾಹುಗಳಲಿ ನರಳುತಿರುವ ಮೌಲ್ಯಗಳು ಬಿಡಲೂ ಆಗದೆ, ಹಿಡಿಯಲೂ ಆಗದೆ ತುಡಿಯುತಿವೆ. ಗಾಂಧಿ ಸಮಾಧಿ ಆದರೂ ಇವು ಸಮಾಧಿಯಾಗದೆ ಕನಸಗಳು ಮತ್ತೆ ಚಿಗುರೊಡೆಯಲು ತವಕಿಸುತಿವೆ ಎಂದು ಕವಿಮನವು ಭರವಸೆಯ ಬೀಜಗಳನ್ನು ಬಿತ್ತುವವು.
“ಅಪ್ಪನ ಕಾಲದ ಗೋಡೆ ಗಡಿಯಾರ
ಮನೆಯ ಗೋಡೆಯಲ್ಲೀಗ ಸುಮ್ಮನೆ ನಿಂತಿದೆ
ಯಾವುದೇ ಕ್ರಿಯೆ ಇಲ್ಲದೆ
ಕೊರಳಿಗೆ ಬಿದ್ದ ಉರುಲಿನಂತೆ …
ಅದನ್ನು ಗೋಡೆಯಿಂದ ಬೇರ್ಪಡಿಸಿ
ಹಳೆಯ ಬಟ್ಟೆಯೊಂದರಲ್ಲಿ
ಸುತ್ತಿ ಅಟ್ಟಕ್ಕೆಸೆದೆ……
ಎನ್ನುವ ಸಾಲುಗಳು ಬದುಕಿನ ಮುಸ್ಸಂಜೆಯಲ್ಲಿ ಆ ನಿಂತ ಗೋಡೆಗಡಿಯಾರದಂತೆ ಎಂಬ ಮುದಿ ಜೀವಗಳ ಬದುಕನ್ನು ಸಮೀಕರಿಸುತ್ತಾ,ಹಳೆ ಹಾಗೂ ಹೊಸ ಗಡಿಯಾರಗಳ ಉಪಮೆಗಳೊಂದಿಗೆ ಹಳೆ ಹಾಗೂ ಹೊಸ ಪೀಳಿಗೆಗಳ ಮಧ್ಯದ ಅಂತರವನ್ನು ಹೃದಯ ಕಲುಕುವಂತೆ ಬಿಂಬಿಸುವಲ್ಲಿ ಕವನ ಸಾರ್ಥಕ ತೆಯನ್ನು ಪಡೆವುದು
ಅಪ್ಪನ ಹೆಣ ಸುಟ್ಟಮಾರನೆಯ ದಿನ
ಅಸ್ತಿ ನದಿ ಸೇರಿತು
ರಕ್ತದ ಋಣ ಹಾದಿ ತಪ್ಪಿತು
ಅತ್ಯಾಸೆ, ಸ್ವಾರ್ಥದ ದಾರಗಳಲ್ಲಿ ಬಂಧಿತವಾದ ಪೊಳ್ಳು ಸಂಬಂಧಗಳನ್ನು ಕವನ ಪ್ರತಿಧ್ವನಿಸುವದು.
ಮರಣದ ನಂತರ ಹಣ, ಆಸ್ತಿ ಗಾಗಿ ಹೊಡೆದಾಡುವ ಮಾನವನ ಎಣೆಯಿಲ್ಲದ ವ್ಯಾಮೋಹಕ್ಕೆ ಕನ್ನಡಿ ಹಿಡಿವ ಸಾಲುಗಳು ಒಳಗನ್ನಡಿಯತ್ತ ಬೆರಳುತೋರುವವು.
“ವಿಶ್ವಕ್ಕೆ ಬೆಳಗಬೇಕಿದ್ದ ಜ್ಯೋತಿ ಈಗ ಬಂಧನದಲ್ಲಿ ….
ಜಗದ ಅದ್ಭುತ ಬೆಳಕಿಗೂ ರಾಜಕೀಯದ ಸೋಂಕು
ಹಾಡುಹಗಲೇ ಮೌಲ್ಯಗಳ ಹರಾಜು
ನಡುಬೀದಿಯಲ್ಲೇ
ಜ್ಯೋತಿಗೆ ಆದರ್ಶ ವಾಗಬೇಕಿದ್ದ
ತತ್ವಗಳ ಭೀಕರ ಕೊಲೆ”..
ಜಾತಿ, ಧರ್ಮ,ವರ್ಗ,ವರ್ಣ ಗಳೆಂಬ ಎಲ್ಲ ಅಸಮಾನತೆಗಳನ್ನ ತೊರೆದ ವಿಶ್ವದ ಜ್ಯೋತಿ ಬಸವ ಇಂದು ಮತ್ತೆ ಒಂದು ಧರ್ಮಕ್ಕೆ , ಒಂದು ಜಾತಿಗೆ ಸೀಮಿತವಾಗಿ ನಲುಗುವ ಚಿತ್ರಣ ಬೆಳಕು ಕೂಡ ಬಂಧನದಲ್ಲಿದೆ ಎಂಬ ರೂಪಕದೊಂದಿಗೆ ಸಮರ್ಥವಾಗಿ ವಿಷಯ ನಿರೂಪಿಸುತ್ತ, ಓದುಗರ ಹೃದಯವನ್ನು ಕಲಕಿಬಿಡುವುದು.
ನನ್ನೊಳಗಿನ
ಕವಿಗೆ ಹೇಳಿದೆ
ನೀನು ಕೋಟಿ ಜನರ ದನಿಯಾಗಬಹುದು
ಹಸಿದವರ ಅನ್ನ
ಬೆತ್ತಲಿರುವವರ
ಬಟ್ಟೆಯಾಗಲಾರೆ
ನೀನು ಕವಿಯಾಗಿ
ಬೆಳಕಿಗೆ ಬರುತ್ತಿ
ನಿನಗೆ ವಸ್ತುವಾದವರು
ಕತ್ತಲಲ್ಲೇ ಉಳಿಯುತ್ತಾರೆ
ಎನ್ನುವ ಸಾಲುಗಳು ಸಮಾಜದ ವಿಷಮತೆಯನ್ನ ಕವಿ ಅನಾವರಣಗೊಳಿಸುತ್ತಾರೆ. ಕಾಯಕ ಜೀವಿಗಳು ಹಾಗೂ ಅದರ ಉಪಭೋಗಿಗಳ ಮಧ್ಯದ (ಅ)ವ್ಯವಸ್ಥೆಯನ್ನ ಮುಖಾಮುಖಿಯಾಗಿಸುತ್ತಾ ಕವಿ ಹಾಗೂ ಕಾವ್ಯ ಒಂದೇ ನಾಣ್ಯದ ಎರಡು ಮುಖಗಳು ಆದರೂ ಅವುಗಳ ಮಧ್ಯದ ವೈರುಧ್ಯತೆಯನ್ನು ವ್ಯಕ್ತಗೊಳಿಸುತ್ತ ಮಹತ್ತರವಾದ ವಿಷಯ ಪ್ರತಿಪಾದಿಸುವ ಕವನ ಆಲೋಚನೆಗೆ ಹಚ್ಚದೆ ಇರಲಾರದು.
“ಸಣಕಲು ದೇಹದ
ಕಾವ್ಯಲೋಕದ ಮಾಂತ್ರಿಕ
ದಬದಬನೇ ಸುರಿವ ಮಳೆಯಲ್ಲ
ಜಿಟಿಜಿಟಿ ಹತ್ತಿ
ಇಡೀ ರಾತ್ರಿ
ಭೂಮಿಗಿಳಿವ ಸೆಲೆ”
ಎಂದು ಕವಿ ಬೇಂದ್ರೆಯವರ ಕಾವ್ಯ …ಅದು ಜೋರಾಗಿ ಬಂದ ಮಳೆ ಎಲ್ಲೂ ನಿಲ್ಲದೆ ವ್ಯರ್ಥವಾಗಿ ಹರಿದುಹೋಗುವದು, ಸಣ್ಣಗೆ ಬೀಳುವ ಜಿಟಿಜಿಟಿ ಮಳೆ ಭೂಮಿಯನ್ನ ಹಸಿ ಯಾಗಿಸಿ ಹೊಸ ಬೆಳೆಗೆ ಕಾರಣವಾಗುವ ರೂಪಕನ್ನು ಬಳಸಿ ಹೇಳುತ್ತ ಕಾವ್ಯಲೋಕದ ಮಾಂತ್ರಿಕನ ಅಪ್ರತಿಮ ಕಾವ್ಯದ ಸ್ವರೂಪವನ್ನು ದಿಗ್ದರ್ಶಿಸುತ್ತಾ ಅತ್ಯಂತ ಗೌರವಪೂರ್ವಕವಾಗಿ ಅವರನ್ನು ಸ್ಮರಿಸುವರು.
“ಕಟ್ಟುವದಾದರೆ ಮಂದಿರ,ಮಸೀದಿ,ಚರ್ಚು
ಅದರಲ್ಲಿ ಮಾನವತೆಯ ಹಾಡು ಹಾಡೋಣ
ಬಿತ್ತೋಣ ಸಮಭಾವ,ಸಮಾನತೆಯ ಬೀಜ
ಅಲ್ಲಿ ಶಾಂತಿ ಸೌಹಾರ್ದತೆ ಯ ಬೀಜ ಪಠಿಸೋಣ”
ಎಂತಹ ಉದಾತ್ತ ವಾದ ವಿಚಾರಗಳು,ಧರ್ಮದ ಗೋಡೆಗಳು ಭಿನ್ನವಾದರೂ ಮಾನವತೆ ಒಂದೇ ಅಲ್ಲವೇ ಎಂಬ ಸಂದೇಶ ಸಾರುತ್ತ ನಮ್ಮ ಒಡಲ ಪ್ರೀತಿ ಅರಿಯದ ನಾವು ,ಹೇಗೆ ಅರಿತೇವು ಜಗದ ನೋವ ಎಂಬ ಸಾಲುಗಳು ಎಷ್ಟು ಕಾಲ ಒಟ್ಟಿಗಿದ್ದು,ಎಷ್ಟು ಬೆರೆತರೇನು ಬಲ್ಲೆವೇನು ನಾವು ನಮ್ಮ ಅಂತರಾಳ ಎಂಬ ಸಾಲುಗಳಂತೆ ಅರಿವಿನ ಅಗಾಧ ವಿಸ್ತಾರಕ್ಕೆ ಕವನ ಮುನ್ನುಡಿಯಾಗುವದು.
ಹೀಗೆ ಕನಸುಗಳು ಅರಳುವ ಆಸೆ, ಒಮ್ಮೆ ಅಸಮಾನತೆಗಾಗಿ ಮಿಡಿದರೆ, ಮತ್ತೊಮ್ಮೆ ಸಮಾನತೆಯ ಬೀಜ ಬಿತ್ತಿ ಬೆಳೆದು ಹೃದಯ ವೈಶಾಲ್ಯತೆಗೆ ಸಾಕ್ಷಿಯಾಗುವದು. ಒಮ್ಮೆ ಪ್ರೀತಿಗಾಗಿ ಮಿಡಿದರೆ,ಮಗುದೊಮ್ಮೆಪ್ರೀತಿಯ ನೆಲೆಯನ್ನು ವ್ಯಾಪಕಗೊಳಿಸಿ ಸುಂದರ, ಸಾರ್ಥಕ ಬದುಕಿಗೆ ಮುನ್ನುಡಿಯಾಗುವದು. ಒಟ್ಟಾರೆ ಕವನ ಸಂಕಲನ ಓದುಗರನ್ನ ಮನ ಹಿಗ್ಗಿಸಿ ಸಾರ್ಥಕತೆಯನ್ನು ಪಡೆವದು.
–ಸುನಿತಾ ಮೂರಶಿಳ್ಳಿ, ಧಾರವಾಡ
ಮೇಡಂ ನಮಸ್ತೆ, ಬಹಳ ಅರ್ಥಪೂರ್ಣವಾಗಿ ಸಂಕಲನವನ್ನು ದರ್ಶಿಸಿದ್ದೀರಿ… ತಾವು ಗುರುತಿಸಿದ ಜೀವಾಂಶವುಳ್ಳ ಕವಿತೆಗಳ ಸಾಲುಗಳು ಬಹು ದಿನಗಳ ಹಿಂದೆ ಹುಟ್ಟಿದ್ದರೂ ಪ್ರಸ್ತುತತೆಯಲ್ಲಿ ಸತ್ಯ ಎನಿಸುವಂತಿವೆ. ಕವಿ, ಲೇಖಕರ ಇಂತಹ ಕವಿತೆಗಳೇ ಯಾವತ್ತಿಗೂ ಓದುಗನಲ್ಲಿ ಮೌಲ್ಯಯುತ ಕನಸುಗಳನ್ನು ಬಿತ್ತುವಲ್ಲಿ ಯಶಸ್ವಿಯಾಗುತ್ತವೆ…
ಉತ್ತಮ ವಿಮರ್ಶಾ ಲೇಖನ ರಿ….