ವಚನ ಸಾಹಿತ್ಯದಲ್ಲಿ ಮನೋವಿಜ್ಞಾನ

 

 

 

 

 

 

ವಚನ ಸಾಹಿತ್ಯದಲ್ಲಿ ಮನೋವಿಜ್ಞಾನ

ವಚನ ಸಾಹಿತ್ಯ ಎಂಬ ಪದ ಇಂದು ಎಲ್ಲರನ್ನು ತನ್ನತ್ತ ಸೆಳೆಯುವ ಆಯಸ್ಕಾಂತವಾಗಿದೆ. ವಚನ ಸಾಹಿತ್ಯವು ಶುದ್ಧ ಕನ್ನಡ ಬಳಕೆ, ಜನಸಾಮಾನ್ಯರು ಬಳಸು ಪದಗಳ ಜೋಡಣೆ, ಆಧ್ಯಾತ್ಮದ ಅರಿವಿನ ಜೊತೆಗೆ ಬೆರಗನ್ನು ಮೂಡಿಸುವ ಅನುಭಾವ ಸಂಪತ್ತು ಎಂದರೆ ತಪ್ಪಾಗಲಾರದು.

ವಚನಗಳ ಅಧ್ಯಯನದಿಂದ ನಾನು ಕಂಡುಕೊಂಡದ್ದು ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು. ಮುಖ್ಯವಾಗಿ ನನಗೆ ಅರಿವಾಗಿದ್ದು ಸಾತ್ವಿಕ ಆಚಾರ, ಸಾತ್ವಿಕ ವಿಚಾರ ಮತ್ತು ಸಾತ್ವಿಕ ಆಹಾರದ ಪರಿಕಲ್ಪನೆ. ಇದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮತೆಯ ಜೊತೆಗೆ ಬಾಹ್ಯ ಜಂಜಡವನ್ನು ತೊರೆದು ಅಂತರಂಗದ ಆಧ್ಯಾತ್ಮದ ಅಂಗಳದಲ್ಲಿ ಸದಾ ಒಲಾಡಬಹುದು.

ಇಂತಹ ವಚನ ಸಾಹಿತ್ಯವು ನಮ್ಮ ದೈಹಿಕ, ಮಾನಸಿಕ. ಆಧ್ಯಾತ್ಮಿಕ ಆರೋಗ್ಯವನ್ನು ಸ್ವಾಸ್ಥ್ಯವಾಗಿ ಮತ್ತು ಪ್ರಫುಲ್ಲವಾಗಿಡಲು “ಅಧರಕ್ಕೆ ಕಹಿ ಉದರಕ್ಕೆ ಸಿಹಿ” ಎಂಬಂತೆ ಚಿಕಿತ್ಸಕ ರೀತಿಯ ದಿವ್ಯ ಔಷಧದ ಪರಮ ಪ್ರಸಾದವಾಗಿದೆ.

ಲೋಕದಾ ಚೇಷ್ಠೆಗೆ ರವಿ ಬೀಜವಾದಂತೆ
ಕರ್ಣಂಗಳಾ ಚೇಷ್ಟೆಗೆ ಮನವೇ ಬೀಜ
ಎನಗುಳ್ಳದೊಂದು ಮನ,
ಆ ಮನ ನಿಮ್ಮಲ್ಲಿ ಒಡವೆರೆದ ಬಳಿಕ,
ಎನಗೆ ಬೇರೆ ಭವವುಂಟೆ ಚನ್ನಮಲ್ಲಿಕಾರ್ಜುನ ||

ವೀರ ವಿರಾಗಿಣಿ ಜ್ಞಾನಪ್ರಭೆ ಶರಣೆ ಅಕ್ಕಮಹಾದೇವಿಯ ಈ ವಚನದಂತೆ ಕರಣೇಂದ್ರಿಯಗಳ ಎಲ್ಲ ಚಟುವಟಿಕೆಗಳಿಗೆ ಮನವೇ ಮೂಲ ಕಾರಣ. ಆ ಮನವನ್ನು ಏಕತೆಯಲ್ಲಿ ನಿಲ್ಲಿಸಿದವರು ಮಹಾದೇವನಷ್ಟೆ ಶಕ್ತಿ ಮತ್ತು ಖ್ಯಾತಿ ಪಡೆದವರಾಗಿದ್ದಾರೆ. “ಮನವು ನಿಂದಡೆ ಸುಳಿದು ಸೂಸುವ ಗಾಳಿ ನಿಲುವುದು” ಭ್ರೂಮಧ್ಯದಲ್ಲಿ ಮನದ ಜೊತೆಗೆ ಉಸಿರು ಬೆರೆತರೆ ಪರವಸ್ತುವ ಕೂಡಬಹುದು ಎಂಬಂತೆ ಸಾಧಕನಿಗೆ ಮನವ ನಿಲ್ಲಿಸುವುದೇ ಮಹಾನ್ ಸಾಧನೆ.

ಮನ ಕರಣೇಂದ್ರೀಯಗಳಲ್ಲಿ ಒಂದು. ಕರಣೇಂದ್ರೀಯಗಳಿಗೆ “ಆತ್ಮನ ಉಪಕರಣ” ಎಂಬ ಅರ್ಥವಿದೆ. ಆತ್ಮನು “ಚಿನ್ಮಯ ವಸ್ತು” ವಾದ್ದರಿಂದ ಅದು ಯಾವುದೆ ರೀತಿಯಲ್ಲಿ ಕ್ರಿಯಿಸಲಾರದು. ಆದರೆ ಅದಕ್ಕೆ ಕರಣಗಳ ಸಂಗವಾದರೆ ಆತ್ಮವು ಅವುಗಳ ಮೂಲಕ ಕ್ರಿಯಿಸಬಲ್ಲದು.

ಅಂದರೆ ಆತ್ಮವು ಬುದ್ಧಿಯಿಲ್ಲದೆ ಚಿಂತಿಸಲಾರದು, ಅಹಂ ಇಲ್ಲದೆ ನಾನು ಎಂಬ ಪ್ರಜ್ಞೆ ಅದಕ್ಕೆ ಬರಲಾರದು. ಮನಸ್ಸು ಇಲ್ಲದೆ ಕೇಂದ್ರೀಕರಿಸಲಾಗದು, ಚಿತ್ತವಿಲ್ಲದೆ ಆಸೆ ಆಕಾಂಕ್ಷೆಗಳನ್ನು ಪಡೆಯಲಾರದು. ಆದ್ದರಿಂದ ಇವುಗಳನ್ನು “ಅಂತಃಕರಣ ಚತುಷ್ಟಯಃ” ಎಂದು ಕರೆಯುತ್ತೆವೆ. ಅಂದರೆ

1) ಮನ
2) ಬುದ್ಧಿ
3) ಚಿತ್ತ
4) ಅಹಂಕಾರ

ಇವು ಅಂತರಂಗದ ನಾಲ್ಕು ಕರಣೇಂದ್ರೀಯಗಳು. ಉಳಿದವುಗಳೆಲ್ಲ ಬಾಹ್ಯ ಇಂದ್ರಿಯಗಳು. ಪಂಚೇಂದ್ರಿಯಗಳು, ಕರ್ಮೇಂದ್ರೀಯಗಳು ಇತ್ಯಾದಿ.

ಈ ಕರಣೇಂದ್ರೀಯಗಳು ನಮ್ಮನ್ನು ವಿಕಾಸದ ಕಡೆಗೆ ಕೊಂಡೊಯ್ಯುವ ಸನ್ಮಾರ್ಗಗಳಾಗಬೇಕು. ವಿನಾಶದತ್ತ ಒಯ್ಯುವ ದುರ್ಮಾರ್ಗಗಳಾಗಬಾರದು. ಅದಕ್ಕಾಗಿ ಅವುಗಳಿಗೆ ಬಸವ ತತ್ವಾಚರಣೆಯ ಜೊತೆಗೆ ಉತ್ತಮ ಸಂಸ್ಕಾರದ ಅವಶ್ಯಕತೆ ಇದೆ.

ಮನ :

ನಮ್ಮ ಎಲ್ಲ ಸಂಕಲ್ಪ ವಿಕಲ್ಪಗಳು ಹುಟ್ಟುವದು ನಮ್ಮ ಮನದಲ್ಲಿಯೆ. ನಮ್ಮ ಸುತ್ತ ಮುತ್ತಲ ಪರಿಸರ ಮತ್ತು ನಮ್ಮ ಸಂಸ್ಕಾರಕ್ಕೆ ತಕ್ಕಂತೆ ನಮ್ಮ ಸಂಕಲ್ಪಗಳು ರೂಪಗೊಳ್ಳುತ್ತವೆ. ಶಕ್ತಿಶಾಲಿ ಸಂಕಲ್ಪಗಳಿಂದ ನಮಗೂ ಮತ್ತು ಸಮಾಜಕ್ಕೂ ಒಳ್ಳೆಯದು. ಅಂದರೆ ಭಾವಕ್ಕೆ ತಕ್ಕಂತೆ ಭಾಗ್ಯ ಎನ್ನುವಂತೆ. ಆದರೆ ಆಧ್ಯಾತ್ಮದಲ್ಲಿ ಮನವನ್ನು ನಿರ್ವಿಕಲ್ಪ ಸ್ಥಿತಿಯಲ್ಲಿ ನಿಲ್ಲಿಸುವುದೇ ಸಾಧನೆ. ಯಾವುದೆ ಯೋಚನೆಗಳಿಲ್ಲದೇ ಶಾಂತ ಮನಸ್ಕನಾಗಿರಬೇಕು. ಮನದ ನಿಶಬ್ದದ ಅನುಭವ ನಮಗಾಗಬೇಕು. ಲಿಂಗ ಪೂಜೆಯ ವೇಳೆಯಲ್ಲಿ ಮನವು ನಿಸ್ಸಂಕಲ್ಪ ಸ್ಥಿತಿ ತಲುಪುವುದೆ ಲಿಂಗಾಂಗ ಸಾಮರಸ್ಯ. ಮೌನ ಬಂಗಾರ ಎನ್ನುತ್ತೇವೆ. ಅಂದರೆ ಮನಸ್ಸನ್ನು ಮೌನವಾಗಿಸುವುದು. ಅಂದಾಗ ಮಾತ್ರ ಅಲ್ಲಿ ಪರಮಾತ್ಮನ ವಾಸ ಸಾಧ್ಯ.

ಮನಸ್ಸು :

ಅಂದರೆ ಪ್ರಜ್ಞೆ, ಗ್ರಹಿಕೆ, ಯೋಚನೆ, ವಿವೇಚನೆ, ನೆನಪು, ಒಟ್ಟಾರೆಯಾಗಿ ಗ್ರಹಣ ಶಕ್ತಿಗಳ ಸಮೂಹವೇ ಮನಸ್ಸು. ಇದನ್ನು ಸಾಮಾನ್ಯವಾಗಿ ಒಂದು ಜೀವಿಯ ಯೋಚನೆಗಳು ಮತ್ತು ಪ್ರಜ್ಞೆಯ ಸಾಮರ್ಥ್ಯ ಎಂದು ವ್ಯಾಖ್ಯಾನಿಸಬಹುದು.

ಲೋಕದೊಂದಿಗೆ ವ್ಯವಹರಿಸಲು ಬಳಸುವ ಮನಸ್ಸೆಂಬ ಈ ಉಪಕರಣವು ನಿರಂತರವಾಗಿ ಬದಲಾವಣೆ ಹೊಂದುವ ಮತ್ತು ಹೊಯ್ದಾಡುವ ಸ್ವಭಾವವುಳ್ಳದ್ದು. ಮನವು ತನ್ನ ಚಾಂಚಲ್ಯವನ್ನು ಕಳೆದುಕೊಂಡು ಸ್ಥಿರವಾದಾಗ ಅದು ಆತ್ಮವನ್ನು ಪ್ರತಿಬಿಂಬಿಸಬಲ್ಲದು.

“ರಾಮಕೃಷ್ಣ ಪರಮಹಂಸರು” ಹೇಳುವಂತೆ ಯಾವುದು “ಶುದ್ಧ ಮನಸ್ಸು”, ಅದು “ಶುದ್ಧ ಬುದ್ಧಿ”ಯೂ ಹೌದು, “ಶುದ್ಧ ಆತ್ಮ”ವು ಹೌದು.

ಮನುಷ್ಯನ ವ್ಯಕ್ತಿತ್ವ ನಿರ್ಮಾಣವಾಗುವುದು ಕೂಡ ಮನಸ್ಸಿನ ಮೂಲಕ. ಪ್ರತಿಯೊಬ್ಬ ಮನುಷ್ಯನ ವ್ಯಕ್ತಿತ್ವದ ಗುಣಲಕ್ಷಣಗಳು ಅವನ ಆಲೋಚನೆ, ಭಾವನೆ, ವರ್ತನೆಗಳ ಮೇಲೆ ನಿರ್ಧಾರವಾಗುತ್ತವೆ.

ಡಿ.ವಿ.ಜಿ ಯವರು ತಮ್ಮ ಮಂಕುತಮ್ಮನ ಕಗ್ಗದಲ್ಲಿ

“ತರಚು ಗಾಯವ ಕೆರೆದು ಹುಣ್ಣಾಗಿಪುದು ಕಪಿ
ಕೊರತೆಯೊಂದನು ನೀನು ನೆನೆನೆನೆದು ಕೊರಗಿ
ಧರೆಯೆಲ್ಲವ ಶಪಿಸಿ, ಮನದಿ ನರಕವ ನಿಲಿಸಿ,
ನರಳುವದು ಬದುಕೇನೊ ಮಂಕುತಿಮ್ಮ ||

ಜೀವನದಲ್ಲಾದ ಒಂದು ನೋವನ್ನು ನೆನೆಯುತ್ತ ಇರುವ ಸಂತೋಷವನ್ನು ಹಾಳುಮಾಡಿಕೊಂಡು, ಜೀವನವನ್ನೆ ನರಕಮಾಡಿಕೊಳ್ಳುತ್ತೆವೆ. ಅಂದರೆ ಮನವು ಸಕಾರಾತ್ಮಕ ಚಿಂತನೆಗಳಿಂದ ಸಧೃಢವಾಗಿಲ್ಲದಿದ್ದರೆ ಇಂತಹ ಪರಿಸ್ಥಿತಿಗೆ ಒಳಗಾಗುತ್ತೆವೆ.

ಪ್ರತಿ ಮನುಷ್ಯನ ಮನಸ್ಥಿತಿಯನ್ನು ಮೂರು ಆಯಾಮಗಳಲ್ಲಿ ಗುರುತಿಸಬಹುದು.
1) ತಂದೆಯ ಭಾವ
2) ಸಮಸ್ಥಿತಿ ಭಾವ
3) ಶಿಶು ಭಾವ

ತಂದೆಯ ಭಾವ: ಇದು ಹೆಚ್ಚಾಗಿ ಅನುಕರಣೆಯಿಂದ ಬರುತ್ತದೆ. ಇದು ನಿನ್ನಿಂದ ಆಗದು, ಇದನ್ನು ನೀನು ಮಾಡಲೇಬೇಕು ಎಂಬ ಭಾವಗಳು ತಂದೆಯ ಭಾವಗಳು.

ಸಮಸ್ಥಿತಿ ಭಾವ: ಇದು ಹೊರಗಿನಿಂದ ಕಲಿತದ್ದು. ಮನಸ್ಸು ಸದಾ ತರ್ಕ ಸಾಧ್ಯತೆಗಳನ್ನು ಎದುರಿಗಿರುವವರ ಮನಸ್ಸನ್ನು ಅರಿತು ಮಾತನಾಡುವದಾಗಿದೆ.

ಶಿಶುಭಾವ : ಇದು ಅತ್ಯಂತ ತೀವ್ರವಾದ ಚಿಂತನೆಗಳು, ಭಾವ, ಅಳು, ನಗು, ಸಂತಸ, ಕಾಡುವ ಕೀಳು ಭಾವ ಇವೆಲ್ಲ ಶಿಶುಭಾವದ ಪ್ರತೀಕ.

ಶರಣರು ಮನದ ಚಾಂಚಲ್ಯತೆಯನ್ನು ಅನೇಕ ವಚನಗಳಲ್ಲಿ ವ್ಯಕ್ತಪಡಿಸಿದ್ದಾರೆ. ಮನವನ್ನು ನಿಗ್ರಹಿಸುವ ಪರಿಯನ್ನು ಅಷ್ಟೆ ಮಾರ್ಮಿಕವಾಗಿ ವಿವರಿಸಿದ್ದಾರೆ. ವಚನಾನುಭವದ ಮೂಲಕ ಮನೋನಿಗ್ರಹದ ಜೊತೆಗೆ ಸಧೃಢ ಮನೋಭಾವದಿಂದ ಮತ್ತು ಸಮಷ್ಠಿಭಾವದಿಂದ ಸಮಾಜಕ್ಕಕೆ ಪೂರವಾಗಿ ವರ್ತಿಸಬಹುದು.

ಲೇಸ ಕಂಡು ಮನ ಬಯಸಿ ಬಯಸಿ
ಆಸೆ ಮಾಡಿದೊಡಿಲ್ಲ ಕಂಡಯ್ಯಾ,
ತಾಳೆಮರಕ್ಕೆ ಕೈಯ ನೀಡಿ
ಮೇಲೆ ನೋಡಿ ಗೋಣು ನೊಂದುದಯ್ಯಾ,
ಕೂಡಲಸಂಗಮದೇವಾ ಕೇಳಯ್ಯಾ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯಾ ||

ಮನವು ಯಾವಾಗಲೂ ಒಳಿತನ್ನೇ ಬಯಸುತ್ತದೆ. ನಮ್ಮ ಪರಿಶ್ರಮವಿಲ್ಲದೆ ಜೊತೆಗೆ ಪರಮಾತ್ಮನ ಒಲುಮೆ ಇಲ್ಲದೇ ಯಾವುದೂ ಸುಲಭವಾಗಿ ಸಿಗಲಾರದು. “ಬಾರದು ಬಪ್ಪದು, ಬಪ್ಪದು ತಪ್ಪದು” ಎಂಬಂತೆ ಪರಮಾತ್ಮನ ಅನುಗ್ರಹವಿಲ್ಲದೆ ನಾವು ಬಯಸಿದ್ದೆಲ್ಲ ಪಡೆಯಲು ಸಾಧ್ಯವಿಲ್ಲ.

ಕೊಂಬೆಯ ಮೇಲಣ ಮರ್ಕಟನಂತೆ, ಲಂಘಿಸುವುದೆನ್ನ ಮನವು.
ನಿಂದಲ್ಲಿ ನಿಲ್ಲಲೀಯದೆನ್ನ ಮನವು.
ಹೊಂದಿದಲ್ಲಿ ಹೊಂದಲೀಯದೆನ್ನ ಮನವು.
ಕೂಡಲಸಂಗಮ ದೇವಾ,
ನಿಮ್ಮ ಚರಣಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ ||

ಮನದ ಚಂಚಲತೆಯನ್ನು ಶರಣರು ಮಂಗನ ಪ್ರವೃತ್ತಿಗೆ ಹೊಲಿಸಿ, ಅಂತಹ ಕಪಿಚೆಷ್ಟೆಯ ಮನವನ್ನು ನಿಮ್ಮ ಪಾದದಡಿಯಲ್ಲಿ ನಿಲ್ಲಿಸುವದು ನಿಮ್ಮ ಧರ್ಮ ಎಂದು ಬೇಡಿಕೊಂಡಿದ್ದಾರೆ. ಸಾಧಕನು ಸತತ ಪರಿಶ್ರಮದಿಂದ ಮನವನ್ನು ನಿಗ್ರಹಿಸುವನು.

ಚಿತ್ತ ಶುದ್ಧವಿಲ್ಲದವರಲ್ಲಿ ಮನ ಸಂಚಲ ನಿಲ್ಲದು.
ಮನ ಸಂಚಲ ನಿಲ್ಲದವರಲ್ಲಿ ಶಿವಧ್ಯಾನ ಕರಿಗೊಳ್ಳದು.
ಶಿವಧ್ಯಾನ ಕರಿಗೊಳವನಪ್ಪುವ ಮಾತು ಶೆಟೆ,
ಗುಹೇಶ್ವರಲಿಂಗವನರಿಯದ ಭ್ರಾಂತಿಯೋಗಿಗಳ
ಮನ ಬೇತಾಳನಂತೆ ಕಾಡುವದು ||

ಚಿತ್ತ ಶುದ್ಧವಾಗದೇ ಮನದ ಚಂಚಲತೆ ನಿಲ್ಲದು. ಇಲ್ಲಿ ಅಲ್ಲಮಪ್ರಭುಗಳು ನಡೆ ನುಡಿ ಶುದ್ಧತೆಯ ಕುರಿತು ಹೇಳಿದ್ದಾರೆ. ನಡೆ ನುಡಿ ಶುದ್ಧಗೊಳ್ಳಲು ಶಿವಧ್ಯಾನ ಅಚ್ಚೊತ್ತಿ ನಿಲ್ಲಲು, ಭ್ರಾಂತಿಯನ್ನು ತೊರೆದು ಚಿತ್ತಶುದ್ಧದಿ ಬದುಕಬೇಕು ಎಂಬುದನ್ನು ತಿಳಿಸಿದ್ದಾರೆ.

ಚಿತ್ತ, ಮನ ಶುದ್ಧವಿಲ್ಲದವರಲ್ಲಿ
ಮನವೇ ಸರ್ಪ ತನುವೇ ಹೇಳಿಗೆ.
ಹಾವಿನೊಡತನ ಹುದುವಾಳಿಗೆ
ಇನ್ನಾವಾಗ ಕೊಂದಿಹುದೆಂದರಿಯೆ,
ಇನ್ನಾವಾಗ ತಿಂದಹುದೆಂದರಿಯೆ,
ನಿಚ್ಚಕ್ಕೆ ನಿಮ್ಮ ಪೂಜಿಸ ಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವಾ ||

ಚಿತ್ತ ಮನ ಶುದ್ಧವಿಲ್ಲದವರ ತನುವನ್ನು ಸರ್ಪನನ್ನು ಬುಟ್ಟಿಯಲ್ಲಿ ಹಿಡಿದಿಟ್ಟ ಹಾಗೆ. ಸರ್ಪ ಹೊರಗೆ ಬಂದೊಡನೆ ತನ್ನ ವಿಷವನ್ನು ಯಾವಾಗ ಕಕ್ಕುವೆನೋ ಎಂಬಂತೆ ಈ ಶುದ್ಧವಿಲ್ಲದ ಚಿತ್ತ. ನಮ್ಮ ಚಿತ್ತವನ್ನು ಶುದ್ಧವಾಗಿಟ್ಟುಕೊಂಡಾಗ ಮಾತ್ರ ಕೂಡಲಸಂಗಮದೇವರು ಗರುಡನ ಹಾಗೆ ನಮ್ಮನ್ನು ಸರ್ಪವೆನ್ನುವ ಅಶುದ್ಧ ಚಿತ್ತ ಚಂಚಲದಿಂದ ಕಾಪಾಡುತ್ತಾನೆ.

ಒಂದು ಮೊಲಕ್ಕೆ ನಾಯನೊಂಬತ್ತು ಬಿಟ್ಟಂತೆ,
ಎನ್ನ ಬಿಡು ತನ್ನ ಬಿಡು ಎಂಬುದು ಕಾಯವಿಕಾರ.
ಎನ್ನ ಬಿಡು ತನ್ನ ಬಿಡು ಎಂಬುದು ಮನೋವಿಕಾರ
ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ,
ಮನ ನಿಮ್ಮ ನೆನೆವುದೆ ಕೂಡಲಸಂಗಮ ದೇವಾ ||

ನವರಂಧ್ರಗಳನ್ನು ತಳೆದು ಹುಟ್ಟಿದ ಮಾನವನ ಜನ್ಮ ಅಷ್ಟಮದ, ಕರಣ ಚತುಷ್ಟಯಗಳಿಂದ ಚಂಚಲವಾಗಬಸುದು. ಕಾಯವಿಕಾರ ಮನೋವಿಕಾರಗಳ ಕೊಳೆಯನ್ನು ಕಳೆಯದೆ ಕರಣೇಂದ್ರಿಯಗಳು ಶುದ್ಧವಾಗಲಾರವು ಎಂದು ಬಸವಣ್ಣನವರು ತಿಳಿಸಿದ್ದಾರೆ.

ಅಕ್ಕಮಹಾದೇವಿ ಹೇಳುವಂತೆ “ಒಳಹೊರಗೊಂದಾಗಿ ನಿಂದವರ ಎನಗೊಮ್ಮೆ ತೋರಾ” ಮತ್ತು ಅಣ್ಣ ಬಸವಣ್ಣನವರು ಹೇಳುವಂತೆ “ಇದೇ ಅಂತರಂಗ ಶುದ್ಧಿ ಇದೇ ಬಹಿರಂಗ ಶುದ್ಧಿ ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ” ಎಂಬಂತೆ ಅಂತರಂಗ ಬಹಿರಂಗ ಶುದ್ಧಿಯಾದಾಗಲೇ ಲಿಂಗಾಂಸಾಮರಸ್ಯ ಸಾಧ್ಯ. ಅಂದಾಗ ಮಾತ್ರ ಇಹ ಪರಗಳನ್ನು ಜಯಿಸಲು ಸಾಧ್ಯ.

ಒಟ್ಟಾರೆ ಮನದ ಚಂಚಲತೆ ನಿಲ್ಲಿಸಲು, ಮನವನ್ನು ಸಧೃಢಗೊಳಿಸಲು, ಪರಮಾತ್ಮನನ್ನು ಬಿಡದೆ ನಂಬುವದು, ಸತತ ಧ್ಯಾನಗೈಯುತ್ತ, ಸಕಾರಾತ್ಮಕ ಚಿಂತನೆಗಳಿಂದ, ಸತ್ಯಶುದ್ಧ ಕಾಯಕದಲ್ಲಿ ನಿರತರಾದಾಗ ಮನವನ್ನು ಶುದ್ಧಗೊಳಿಸಿ ಪರಮಾತ್ಮನಲ್ಲಿ ಏಕವಾಗಬಹುದು.

ಸವಿತಾ ಮಾಟೂರ.
ಇಳಕಲ್ಲ.

Don`t copy text!