“ಕಲಿಸದೆ ಎಣಿಸುವ ಸಂಬಳ ನನ್ನದಲ್ಲ”

ಕಲಿಸದೆ ಎಣಿಸುವ ಸಂಬಳ ನನ್ನದಲ್ಲ”

ಶಾಲಾ ಚಿತ್ರಣವನ್ನೆ ಬದಲಾವಣೆ ಮಾಡಿದ ನಾಗಭೂಷಣ.

ವಿಶೇಷ ಲೇಖನ
ವರದಿಗಾರರು:ಉಮೇಶ ಗೌರಿ(ಯರಡಾಲ)
ಮೊಬೈಲ್ ಸಂಖ್ಯೆ: 8867505678

“ಕಲಿಸದೆ ಎಣಿಸುವ ಸಂಬಳ ನನ್ನದಲ್ಲ” ಎಂದು ಶಾಲಾ ಚಿತ್ರಣವನ್ನೆ ಬದಲಾವಣೆ ಮಾಡಿದ ನಾಗಭೂಷಣ.

“ಹರ ಮುನಿದರೆ ಗುರು ಕಾಯುವನು” ಎನ್ನುವ ಅನುಭವವಾಣಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಂಬಲಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾದ ಸಿ ಎನ್ ನಾಗಭೂಷಣ ನಿದರ್ಶನ.

ಹೌದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಅಂಬಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
1937ರಲ್ಲಿ ಸ್ಥಾಪನೆಯಾಗಿದ್ದು ಸಾಕಷ್ಟು ಹಳೆಯ ಕಟ್ಟಡ ಇದಾಗಿದೆ. ಈ ಶಾಲೆಯನ್ನು ಯಾರ ಸಹಾಯವನ್ನು ನಿರೀಕ್ಷಿಸದೇ ಶಾಲೆಯ ಬದಲಾವಣೆಗೆ
ಅದೆ ಶಾಲೆಯ ಸಹಶಿಕ್ಷಕ ಸಿ ಎನ್ ನಾಗಭೂಷಣ ಮುಂದಾಗಿ ಸ್ವತಃ ಒಂದು ಬೋಧನಾ ಕೊಠಡಿಯನ್ನು ದತ್ತು ತೆಗೆದುಕೊಂಡು ಸುಮಾರು ಮೂರು ಲಕ್ಷ ರೂಪಾಯಿಗಳನ್ನು ವೈಯಕ್ತಿಕವಾಗಿ ಮೀಸಲಿಟ್ಟು ಸುಸಜ್ಜಿತ ಡೆಸ್ಕ್ ಗಳು, ಟಿವಿ, ಕಂಪ್ಯೂಟರ್, ವೈಟ್ ಬೋರ್ಡ್, ಟೈಲ್ಸ್, ಟೇಬಲ್, ಚೇರ್ ಹಾಗೇ ಸೃಜನಶೀಲ ಪ್ರತಿಭೆ ಇರುವ ನಾಗಭೂಷಣ್ ರವರೆ ಬೋಧನಾ ಸಾಮಗ್ರಿಗಳನ್ನು ಸಿದ್ಧಪಡಿಸಿದ್ದಾರೆ.

ಇಷ್ಟಕ್ಕೆ ತೃಪ್ತರಾಗದ ಇವರು ಇಡೀ ಶಾಲೆಯನ್ನೇ ಅಭಿವೃದ್ದಿ ಪಡಿಸಲು ಹೆಜ್ಜೆ ಇಟ್ಟಾಗ ಕಲಾವಿದರಾದ ಅಂಬಲಗೆರೆಯ ವೀರೇಂದ್ರ , ಕಂದಿಕೆರೆಯ ಶಿವಕುಮಾರ್ , ಊರಿನ ಯುವಕರು, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರುಗಳು, ಎಸ್. ಡಿ.ಎಂ.ಸಿ. ಯವರು, ಮತ್ತು ಅದೇ ಶಾಲೆಯ ವಿದ್ಯಾರ್ಥಿಗಳು ಸೇರಿ ಸುಮಾರು ತೊಂಬತ್ತು ಸಾವಿರದಿಂದ ಒಂದು ಲಕ್ಷದವರೆಗೆ ಹಣಕಾಸಿನ ನೆರವು ನೀಡಲು ಸ್ವತಃ ಮುಂದೆ ಬಂದರು. ಮತ್ತೆ ಎರಡು ಲಕ್ಷಗಳಷ್ಟು ಹಣವನ್ನು ವೈಯಕ್ತಿಕವಾಗಿ ಸಿ ಎನ್ ನಾಗಭೂಷಣ ವಿನಿಯೋಗಿಸಿ ಇಡೀ ಶಾಲೆಯಲ್ಲಿ ಕಲಿಕೆಗೆ ಸುಂದರ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ.
ಇವರ ಒಂದು ಕರೆಗೆ ತಂಡೋಪ ತಂಡವಾಗಿ ಬಂದ ಯುವಕರು ಶ್ರಮದಾನಕ್ಕೆ ನಿಂತಿದ್ದಾರೆ. ಅಕ್ಕ ಪಕ್ಕದ ಊರಿನ ಯುವಕರು ಕೂಡಾ ತಾವೇ ಕರೆ ಮಾಡಿ ಶ್ರಮಾದಾನದ ಕಾರ್ಯದಲ್ಲಿ ಭಾಗಿಯಾಗಿರುವುದು ವಿಶೇಷ.
ಕೊರೋನಾ ಪರಿಣಾಮದಿಂದ ಪಟ್ಟಣ ತೊರೆದು ಹಳ್ಳಿ ಸೇರಿದ ಯುವ ಮನಸ್ಸುಗಳು ನಾಗಭೂಷಣ್ ಅವರ ಸಹೃದಯಕ್ಕೆ ಮಿಡಿದು ದೇಶ ಕಟ್ಟುವಂತಹ ಮಹತ್ಕಾರ್ಯಕ್ಕೆ ಮುಂದಾದರು.
ಇದರ ಪರಿಣಾಮವೇ ಅಂಬಲಗೆರೆಯ ಪ್ರಗತಿಯ ಹೆಗ್ಗುರುತುಗಳು.

ಇನ್ನು ಶಿಕ್ಷಕರಾದ ನಾಗಭೂಷಣ ಸಿ ಎನ್ ಅವರ ಬಗ್ಗೆ ಹೇಳುವುದಾದರೆ ಇವರದು ಬಹುಮುಖ ಪ್ರತಿಭೆ ಕವಿ, ಸಾಹಿತಿ, ಶಿಕ್ಷಕ, ರಾಜ್ಯ ಸಂಪನ್ಮೂಲ ವ್ಯಕ್ತಿ, ರಾಜ್ಯ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಕ್ರೀಡಾಪಟು. ಇದೆಲ್ಲಕ್ಕಿಂತ ಹೆಚ್ಚಿನದಾಗಿ ಮಕ್ಕಳ ಪ್ರೇಮಿ, ಶಿಕ್ಷಣ ಆರಾಧಕ. ಇವರು 29 ಎಪ್ರಿಲ್1983 ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಶಿವನಗರ ಎಂಬ ಗ್ರಾಮದಲ್ಲಿ ಜನಿಸಿದ್ದಾರೆ.ಓದಿದ್ದು ಸರ್ಕಾರಿ ಶಾಲೆಯಲ್ಲಿ. ಹಿರಿಯೂರಿನಲ್ಲಿ ಕಾಲೇಜು ಶಿಕ್ಷಣವನ್ನು ಮತ್ತು ಬೆಂಗಳೂರಿನಲ್ಲಿ ಟಿ ಸಿ ಹೆಚ್ (ಡಿ.ಎಡ್) ಮುಗಿಸಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಪ್ರಾರಂಭಿಸಿ ಹಾಗೇ ಪದವಿ, ಎಂ ಎ ಕೂಡಾ ಮುಗಿಸಿದ್ದಾರೆ.

“ಕಲಿಸದೆ ಎಣಿಸುವ ಸಂಬಳ ನನ್ನದಲ್ಲ” ಎನ್ನುವ ಧ್ಯೆಯವಾಕ್ಯವನ್ನು ಅಂತರ್ಗತ ಮಾಡಿಕೊಂಡಿರುವ ಇವರು ತನ್ನ ಸಂಬಳದ ಬಹುತೇಕ ಪಾಲನ್ನು ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಮೀಸಲಿಟ್ಟಿದ್ದಾರೆ.
ಇವರು ಬರುವುದನ್ನೇ ಕಾಯುತ್ತ ಕುಳಿತುಕೊಳ್ಳುವ, ಕೆಲವೊಮ್ಮೆ ಅವರ ದಾರಿ ಅನುಸರಿಸಿ ನಡೆದು ಅವರ ಬರುವಿಕೆಯನ್ನು ಎದುರು ನೋಡುವ ಮಕ್ಕಳು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಬೀಳ್ಕೊಟ್ಟು ತಮ್ಮ ಮನೆಗಳಿಗೆ ತೆರಳುವ ಮಕ್ಕಳೇ ಇವರಿಗೆ ಸ್ಫೂರ್ತಿ.
ಮಕ್ಕಳನ್ನು ಸದಾ ಚಟುವಟಿಕೆಗಳಲ್ಲಿ ತೊಡಗಿಸುವ ಇವರ ಬೋಧನಾ ಪರಿ ಶ್ಲಾಘನೀಯ. ಶಾಲಾ ಮಕ್ಕಳ ಜೀವನದಲ್ಲಿ ಅವರ ಪ್ರಾಥಮಿಕ ಶಾಲಾ ದಿನಗಳು ಮರೆಯಲಾರದ ದಿನಗಳಾಗಬೇಕು ಎನ್ನುವ ಮಹದಾಸೆಯನ್ನು ಹೊಂದಿರುವ ಶಿಕ್ಷಕರ ಕಾಳಜಿ ಆದರ್ಶಪ್ರಾಯವಾದುದು. ಇಷ್ಟೆಲ್ಲಾ ಕೆಲಸಗಳನ್ನು ಮಾಡಿದರೂ ಸಹ ಇದು ಅಳಿಲು ಸೇವೆ ಅಷ್ಟೇ ಇನ್ನೂ
ಸಾಕಷ್ಟು ಕೆಲಸಗಳು ಬಾಕಿ ಇವೆ. ಎನ್ನುವ ಸಿ ಎನ್ ನಾಗಭೂಷಣ ಅವರ ಸೌಜನ್ಯ, ಹೃದಯ ವೈಶಾಲ್ಯತೆ ಅವರ್ಣನೀಯ.
ಸಮುದಾಯ ಮತ್ತು ಶಿಕ್ಷಕರು ಒಂದುಗೂಡಿದರೆ ಅಳಿವಿನ ಅಂಚಿನಲ್ಲಿದ್ದ ಸರಕಾರಿ ಶಾಲೆಗಳು ಉತ್ತಮ ಸ್ಥಿತಿ ತಲುಪಬಹುದು ಎಂಬುದಕ್ಕೆ ಹಿರಿಯೂರು ತಾಲೂಕಿನ ಅಂಬಲಗೆರೆ ಶಾಲೆಯೇ ಸಾಕ್ಷಿ.
ಈ ಶಾಲಾ ಅಭಿವೃದ್ದಿಯ ಕಾರ್ಯಕ್ಕೆ ಶಿಕ್ಷಣ ಇಲಾಖೆಯವರು, ಜನಪ್ರತಿನಿಧಿಗಳು,ಶಿಕ್ಷಣ ಪ್ರೇಮಿಗಳು, ಸುತ್ತಮುತ್ತಲಿನ ಗ್ರಾಮಸ್ಥರು ಶಿಕ್ಷಕರಿಗೆ ,ಕಲಾವಿದರಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದು ಅವರ ಸಾಧನೆಗೆ ಕೈಗನ್ನಡಿ.

 

*ನಾವು ಒಂದು ದೇವಸ್ಥಾನ ಅಥವಾ ಆಶ್ರಮಕ್ಕೆ ಭೇಟಿ ನೀಡಿದರೆ ಯಾರು ಹೇಳದೇ ಇದ್ದರೂ ಸ್ವಚ್ಚತೆ ಮತ್ತು ನಿಶ್ಯಬ್ಧತೆ ಕಾಪಾಡುತ್ತೇವೆ. ಕಾರಣ ಅಲ್ಲಿಯ ವಾತಾವರಣ. ಹಾಗೇ ಶಾಲಾ ವಾತಾವರಣ ಮಕ್ಕಳ ಕಲಿಕೆಗೆ ಪ್ರೇರೇಪಣೆ ನೀಡುವ ಹಾಗಿರಬೇಕು ಎನ್ನುವ ಅಭಿಲಾಷೆಯಿಂದ ಈ ಕಾರ್ಯ ಮಾಡಿರುವೆ.

ಸಿ ಎನ್ ನಾಗಭೂಷಣ
ಸಹ ಶಿಕ್ಷಕ ಸ.ಹಿ.ಪ್ರಾ.ಶಾಲೆ.ಅಂಬಲಗೆರೆ

*ಸದಾ ಮಕ್ಕಳ ಕಲಿಕೆಗೆ ಹಂಬಲಿಸುವ ಸಿ.ಎನ್. ನಾಗಭೂಷಣ ಅವರ ಮನಸ್ಸು. ಹಾಗೂ ಕರ್ತವ್ಯ ಬದ್ಧತೆಗೆ ನನ್ನದೊಂದು ದೊಡ್ಡ ಸಲಾಂ. ಈ ಸಾಧನೆ ನಿಮ್ಮೆಲ್ಲರ ಸಹಕಾರದಿಂದ ಎಂದು ಹೇಳುವ ಇವರ ಸರಳ ವ್ಯಕ್ತಿತ್ವ ಅನುಕರಿಸುವಂತಹದ್ದು…ನಿಮ್ಮನ್ನು ಶಿಕ್ಷಕರಾಗಿ ಪಡೆದ ನಮ್ಮ ಶಾಲೆ, ಮಕ್ಕಳು, ಗ್ರಾಮದವರು ಧನ್ಯರು.

ಪಿ.ರಾಜೇಶ್ವರಿ
ಮುಖ್ಯ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ.ಅಂಬಲಗೆರೆ.

*ಈ ಶಾಲೆಯ ಚಿತ್ರಣವನ್ನೆ ಬದಲಾವಣೆ ಮಾಡಿ ಆಧುನಿಕರಿಸಿದ ಸಿ ಎನ್ ನಾಗಭೂಷಣ ಕಾರ್ಯ ಶ್ಲಾಘನೀಯ ಹಾಗೂ ನಮಗೆ ಹೆಮ್ಮೆಯ ವಿಷಯ. ಸಹಕರಿಸಿದ ಎಲ್ಲರೂ ಶಿಕ್ಷಣ ಇಲಾಖೆ ವತಿಯಿಂದ
ಈ ಮೂಲಕ ಧನ್ಯವಾದಗಳನ್ನು ಹೇಳಬಸುತ್ತೇನೆ

ಎಸ್ ನಾಗಭೂಷಣ
ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಿರಿಯೂರು.
ಚಿತ್ರದುರ್ಗ ಜಿಲ್ಲೆ.

Don`t copy text!