ಮೂಕನಾಗಬೇಕು ಮತ್ತು ಕಾರ್ಪೊರೇಟ್ ಲೆಕ್ಕಾಚಾರಗಳು
ಮೂಕನಾಗಬೇಕು/ ಜಗದೊಳು ಜ್ವಾಕ್ಯಾಗಿರಬೇಕು//
ಇದು ನಮ್ಮ ಕಡಕೋಳ ಮಡಿವಾಳಪ್ಪನವರ ತತ್ವಪದ.
ಈ ಜಗದೊಳು ಜೋಪಾನವಾಗಿರಬೇಕೆಂದರೆ ಮೂಕನಾಗಿರಬೇಕು. ಮಡಿವಾಳಪ್ಪ ಹೇಳುವ ಈ ಮೌನ, ಅಸಹಿಷ್ಣುತೆಯ ವಿರುದ್ದದ ಮಹಾಪ್ರತಿಭಟನೆ ಮತ್ತು ಅಂತರಂಗ ಶುದ್ಧಿಯ ರೂಪಕದಂತಿದೆ. ಇದು ಈ ತತ್ವಪದದ ಆಶಯ. ಈ ಪದ ಕಳೆದ ಒಂದು ವಾರದಿಂದ ಲಕ್ಷ ಲಕ್ಷ ಕೇಳುಗರ ಕಿವಿ, ಮನಸು, ಹೃದಯ ಕಲಕುತ್ತಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಡಿನ ಪ್ರಸಾರ ಆರಂಭವಾದ ಕೇವಲ ಎರಡೇ ಎರಡು ತಾಸುಗಳಲ್ಲಿ ಹತ್ತು ಲಕ್ಷಕ್ಕೂ ಮಿಕ್ಕಿದ ಪ್ರೇಕ್ಷಕ ಶ್ರೋತೃಗಳ ಪ್ರೀತಿಗೆದ್ದು ಮುನ್ನಡೆ ಸಾಧಿಸುತ್ತಲೇ ನಡೆದಿದೆ.
ವಿವಿಧ ಸೋಸಿಯಲ್ ಮೀಡಿಯಾಗಳಲ್ಲಿ ”ಮೂಕನಾಗಬೇಕು” ಹಾಡಿನದೇ ಉಕ್ಕಿ ಹರಿವ ಉಮೇದಿನ ಅವಾಜ್. ಬಹುಪಾಲು ಜಾಲತಾಣಗಳ ವೀಕ್ಷಕರ ಬಾಯಲ್ಲಿ ‘ಮೂಕನಾಗಬೇಕು’ ತತ್ವಪದ ತಿಳಿನೀರಿನಂತೆ ಜುಳುಜುಳು ಹರಿಯುತ್ತಾ ಎಲ್ಲರನ್ನೂ ಮೂಕನಾಗಿಸಿದೆ.
ಇಂತಹ ಅಪೂರ್ವ ಹಾಡುಹೊಳೆಯ ಅಭೂತಪೂರ್ವ ಸಡಗರದ ಕಾರ್ಯಕ್ರಮ ಜರುಗುವುದು ಯಾವುದೋ ಕಾಂಜೀಪೀಂಜಿ ವೇದಿಕೆಯ ಮೂಲೆಯಲ್ಲಲ್ಲ. ಸಾಕ್ಷಾತ್ ಇಂದ್ರನ ಅರಮನೆಯನ್ನೇ ಹೋಲುವಂತಹ ಅಪೂರ್ವ ಜಾಗದಲ್ಲಿ. ಝಗಮಗಿಸುವ ಕಲರ್ಸ್ ಕನ್ನಡದ ಕಿರುತೆರೆಯ ಎದೆತುಂಬಿ ಹಾಡುವೆನು ಚಿತ್ತಾರದ ವೇದಿಕೆಯಲ್ಲಿ.
ಟೀವಿ ಪರದೆ ತುಂಬೆಲ್ಲ ಸಂಭ್ರಮೋಲ್ಲಾಸ. ಅದನ್ನು ಮನೆಗಳಲ್ಲೇ ಕುಂತು ನೋಡುವವರಿಗೂ ನಯನ ಮನೋಹರ ಕಡಲಲ್ಲಿ ತೇಲಾಡಿದ ಸಡಗರ. ಅಷ್ಟೇಯಾಕೆ ಅಂಗೈಯೊಳಗಿನ ಮೊಬೈಲ್ ತುಂಬೆಲ್ಲ ಇದೇಹಾಡಿನ ಸಂಭ್ರಮದ ಸುಗ್ಗಿ. ಮೂಕನಾಗಬೇಕು ಹಾಡಿನ ಅಂದ ಚಂದವನ್ನೆಲ್ಲ ಕಲರ್ಸ್ ಕನ್ನಡದಲ್ಲಿ ಕಂಡು ಕೇಳಿದವರಿಂದ ಕಲರ್ಫುಲ್ ತಾರೀಫಿನ ಪ್ರತಿಕ್ರಿಯೆಗಳು. ಹಾಗೆ ಕೇಳ ಕೇಳುತ್ತಲೇ ಒಂದು ತಟಕು ತಡಮಾಡದೇ ತಮಗೆ ಆಪ್ತರಾದ ಹತ್ತಾರು ಮಂದಿಗೆ ಅದನ್ನು ಫಾರ್ವರ್ಡ್ ಮಾಡಿ ಬಿಡುತ್ತಾರೆ. ಅದೊಂದು ಬಗೆಯ ಸಂಗೀತಲೋಕದ ಸಾಂಸ್ಕೃತಿಕ ಅಭಿಯಾನದಂತೆ ಓತಪ್ರೋತವಾಗಿ ಓಡುತ್ತಲೇ ಇದೆ.
ಅಷ್ಟಕ್ಕೂ ಗಝಲ್ ಶೈಲಿಯ ಅಪರೂಪದ ಈ ತತ್ವಪದ ಹಾಡಿದ್ದು ಯಾರು ಗೊತ್ತೆ.? ನಮ್ಮ ಕಲ್ಯಾಣ ಕರ್ನಾಟಕದ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿ ಲಿಂಗದಹಳ್ಳಿಯ ಕಡು ಬಡಕುಟುಂಬದ ಅಪ್ಪಟ ಜವಾರಿ ಹುಡುಗ. ಹೆಸರು ಸೂರ್ಯಕಾಂತ. ಸಾಯಿಬಣ್ಣ ಶರಣಮ್ಮ ಸೂರ್ಯಕಾಂತನ ಅಪ್ಪ ಅಮ್ಮ.
ಸೂರ್ಯಕಾಂತ, ಹುಟ್ಟಿನಿಂದಲೇ ಅವನೊಬ್ಬ ಉಗ್ಗ. ಪವಾಡ ಸದೃಶದಂತೆ ಅವನು ಭಾವ ಪರವಶನಾಗಿ ಹಾಡತೊಡಗಿದರೆ ಅವನೊಳಗಿನ ಉಗ್ಗು ಮಟಾಮಾಯ. ಹಾಡು ಮುಗಿಯುವ ಮಟ ಉಗ್ಗಿನ ಸದ್ದಿರುವುದಿಲ್ಲ. ಹಾಡುವಾಗ ಅಕ್ಷರಶಃ ಸೂರ್ಯಕಾಂತನೊಳಗಿರುವ ಸಂಗೀತಗಾರನ ಸಾಕ್ಷಾತ್ಕಾರ. ಹೂವು ಅರಳಿದಂತೆ ಸರಳವಾಗಿ ಹಾಡುವ ಗಾಯಕ ಸೂರ್ಯಕಾಂತನ ಕಂಠಸಿರಿಯ ಹಾಡು ಮುಗಿದೊಡನೆ ಮತ್ತೆ ನಮಗೆ ಉಗ್ಗು ಮಾತಿನ ಸೂರ್ಯಕಾಂತನ ದರ್ಶನ.
ಸೂರ್ಯಕಾಂತನ ಉಗ್ಗಿನಲಿ ನೆಲದ ಮುಗ್ದತೆಯೇ ಮಡುಗಟ್ಟಿದೆ. ಮಾತು ಹಾಡಾಗಿದೆ. ಅದು ನಿಸರ್ಗ ಸುಬಗ ಸರಳ, ಸಜ್ಜನಿಕೆಯೇ ಮೈದುಂಬಿ ನಿಂತಂತೆ. ಅಲ್ಲೆಲ್ಲೂ ಎಳ್ಳರ್ಧ ಕಾಳಿನಷ್ಟೂ ತೋರಿಕೆಯ ಸೊಲ್ಲಿಲ್ಲ. ಅದಕ್ಕಾಗಿಯೇ ಸಿದ್ಧಗೊಂಡು ಬರುವ ಯಾವುದೇ ತರಬೇತಿಯ ಒಳಹೇತುಗಳಿಲ್ಲ. ಮುಗ್ದತೆಯೇ ಮೈವೆತ್ತ ಸೂರ್ಯಕಾಂತನಲ್ಲಿ ಎದ್ದು ಕಾಣುವುದು ಸಹಜಾತೀ ಸಹಜ ಸೂಕ್ಷ್ಮತೆ. ಅದು ಸೂರ್ಯನಷ್ಟೇ ಪಾರದರ್ಶಕ. ಹೌದು ಕಾರ್ಪೊರೇಟ್ ಕಲ್ಚರ್ ಲೋಕಕ್ಕೆ ಬೇಕಿರುವುದು ಅಭಿಜಾತ ಪ್ರತಿಭೆ ಮತ್ತು ನೆಲಮೂಲದ ಮುಗ್ದತೆ. ಎರಡೂ ಒಬ್ಬರಲ್ಲೇ ದೊರಕುವುದು ಅಪರೂಪ. ಅಂತಹ ಮಹಾನ್ವೇಷಣೆಯೇ ಬಹುಪಾಲು ರಿಯಾಲಿಟಿ ಶೋಗಳ ಜೀವಶಕ್ತಿ. ಹಾಗಂತ ಕೇವಲ ಟಿಆರ್ಪಿ ಏರಿಕೆಯ ಹುನ್ನಾರವಲ್ಲ ಸುಸಂದೇಹದ ಲೆಕ್ಕಾಚಾರ.
ಸೂರ್ಯಕಾಂತನ ಹಾಡಿನ ಮೋಡಿಗೆ ರಾಜೇಶ್ ಕೃಷ್ಣನ್, ರಘು ದೀಕ್ಷಿತ್, ಹರಿಕೃಷ್ಣ ಈ ಮೂವರು ತೀರ್ಪುಗಾರರ ಮೆಚ್ಚುಗೆ ಫಿದಾ ಆದಂತೆ ಏಕಕಾಲಕ್ಕೆ ಉಕ್ಕಿಬಂದುದು ದೃಗ್ಗೋಚರಗೊಂಡಿತು. ಹಾಡಿಗೆ ಮುನ್ನ ರಾಜೇಶ್ ಕೃಷ್ಣನ್ ಕೇಳುವ ಪರಿಚಯದ ಎಲ್ಲ ಪ್ರಶ್ನೆಗಳಿಗೂ ಸೂರ್ಯಕಾಂತನ ಉಗ್ಗು ದನಿಯ ಉತ್ತರ. ಸೂರ್ಯಕಾಂತನೆಂಬ ತರುಣ ಗಾಯಕ ಕೀರ್ವಾಣಿ ಮಿಶ್ರರಾಗದಲ್ಲಿ ‘ಮೂಕನಾಗಬೇಕು’ ಹಾಡುತ್ತಲೇ ಒಂದೆರಡು ನಿಮಿಷಗಳೊಳಗೆ ನೂರಕ್ಕೆ ನೂರು ಅಂಕಗಳು ಓಡೋಡಿ ಬಂದವು. ತೀರ್ಪುಗಾರರ ತೀರ್ಪಿಗೆ ಮುನ್ನವೇ ಲಕ್ಷಾಂತರ ಪ್ರೇಕ್ಷಕ ಶ್ರೋತೃಗಳ ಭರಪೂರ ಪ್ರೀತಿಯ ಎಲ್ಲ ಸವಾಲು ಗೆದ್ದಿದ್ದ. ಅದು ಅಂಧಕಾರ ಲೋಕದಸೂರ್ಯ, ಗದುಗಿನ ಪುಟ್ಟರಾಜ ಗವಾಯಿಗಳ ಗರಡಿಮನೆಯ ಹುಡುಗ ಸೂರ್ಯಕಾಂತನ ಸಾಧನೆ
.
ರವೀಂದ್ರ ಹಂದಿಗನೂರ ವೀರೇಶ್ವರ ಪುಣ್ಯಾಶ್ರಮದ ಒಡನಾಡಿ. ಲಾಹೋರಿನ ಗುಲಾಮ ಅಲಿಯ ಗಝಲುಗಳ ಪ್ರಖರ ಪ್ರಭಾವಕ್ಕೊಳಗಾಗಿ ಕನ್ನಡದ ವಚನ, ತತ್ವಪದಗಳನ್ನು ಗಝಲ್ ಚ್ಯಾಲಿನಲ್ಲಿ ಹಾಡುವುದನ್ನು ಸ್ವಯಂ ರೂಢಿಸಿಕೊಂಡು ಕನ್ನಡದ ಗಝಲ್ ಕಾಕಾ ಎಂದು ಖ್ಯಾತರಾದವರು. ಕಡಕೋಳ ಮಡಿವಾಳಪ್ಪನವರ ತತ್ವಪದಗಳನ್ನು ಮೊಟ್ಟಮೊದಲು ಗಝಲ್ ಶೈಲಿಗೆ ಆವಿಷ್ಕಾರಗೊಳಿಸಿದ ಏಕಲವ್ಯ. ಮೂಕನಾಗಬೇಕು ಹಾಡಿನ ರಾಗಸಂಯೋಜನೆಯೂ ಆತನದೇ.
ಸೂರ್ಯಕಾಂತ ಹಾಡುವುದನ್ನು ಕೇಳುತ್ತಿದ್ದರೆ ಅವನ ಸಿರಿಕಂಠದಲ್ಲಿ ಥೇಟ್ ರವೀಂದ್ರ ಕಾಕಾ ಅವತರಿಸಿದಂತಿತ್ತು. ನೆನಪಿರಲಿ; ಹಂದಿಗನೂರು ರವೀಂದ್ರ ಕೂಡ ಮಾತಾಡುವಾಗ ಉಗ್ಗುತ್ತಿದ್ದ. ಸೂರ್ಯಕಾಂತನ ಮೂಕನಾಗಬೇಕು ಕೇಳಲು ಕಾಕಾ ಇರಬೇಕಿತ್ತು. ಕೆಲವು ವರ್ಷಗಳ ಹಿಂದೆ “ಎದೆತುಂಬಿ ಹಾಡುವೆನು” ಕಾರ್ಯಕ್ರಮದ ತೀರ್ಪುಗಾರನಾಗಿ ರವೀಂದ್ರ ಹಂದಿಗನೂರ, ಎಸ್. ಪಿ. ಬಿ. ಪಕ್ಕದಲ್ಲಿ ಕುಂತಿದ್ದ ನೆನಪು ನನ್ನನ್ನು ಕಾಡುತ್ತಿದೆ. ಆ ಇಬ್ಬರೂ ಮಹಾನ್ ಗಾಯಕರು ಈಗಿಲ್ಲ. ಆದರೆ ಅವರ ಸುಕೋಮಲ ಗಾಯನ ನಿಧಿಗೆ ಸಾವಿಲ್ಲ.
ವೀರೇಶ್ವರ ಪುಣ್ಯಾಶ್ರಮದ ಪರಿಸರ, ತನಗೆ ಸಂಗೀತ ಕಲಿಸಿದ ಪಂಚಾಕ್ಷರಿ ಅಣ್ಣಿಗೇರಿ ಗುರುಗಳನ್ನು ಅಂದು ಹದುಳ ಮನದಿಂದ ನೆನೆದುದು ಸೂರ್ಯಕಾಂತನ ವಿನಯತನಕ್ಕೆ ಸಾಕ್ಷಿ.
ಇಂತಹ ನೂರಾರು ತತ್ವಪದಗಳನ್ನು ಕಲಬುರ್ಗಿ ಕಡೆಯ ಹತ್ತಾರು ಹಳ್ಳಿಗಳ ಭಜನೆ, ಪುರಾಣ, ಪ್ರವಚನ ಸಮಾರಂಭಗಳಲ್ಲಿ ಸೂರ್ಯಕಾಂತ ನೂರಾರು ಬಾರಿ ಹಾಡಿದ್ದಾನೆ. ಅದನ್ನು ಕೇಳಿದವರಿಗೆ ಆಗ ಅಗಾಧವಾಗಿ ಹೃನ್ಮನ ತಲುಪಲಿಲ್ಲವೇಕೆ.? ಈಗೇಕೆ ಅದಕ್ಕೆ ಅತ್ಯಪರೂಪದ ಮಾನ್ಯತೆ ಎಂಬುದು ಅನೇಕರನ್ನು ಕಾಡುವ ಪ್ರಶ್ನೆ. ಅಲ್ಲೇ ಇರೋದು ನೋಡಿ ಕಾರ್ಪೊರೇಟ್ ಕಲ್ಚರ್ ಎಂಬ ಮಾಯಾವಿಲೋಕದ ಕನಸುಗಳ ಮಾರಾಟಜಾಲ. ಮತ್ತೊಂದು ಮಹತ್ವದ ಸಂಗತಿಯೆಂದರೆ ಒಂದು ಹಾಡಿನ ಸಂಪೂರ್ಣ ಯಶಸ್ವಿಗೆ ಅದರ ಸಾಹಿತ್ಯದ ಪಾರಮ್ಯ ಪ್ರಮುಖ. ಪುಣ್ಯಕ್ಕೆ ಅವತ್ತು ಸೂರ್ಯಕಾಂತ, ಕಡಕೋಳ ಮಡಿವಾಳಪ್ಪನ ಹೆಸರು ಹೇಳಿದ. ಅದು ಮಡಿವಾಳಪ್ಪನವರಿಗೆ ಸಲ್ಲಲೇ ಬೇಕಾದ ಗೌರವ. ಅನೇಕ ಬಾರಿ ಹಾಡುಗಾರಿಕೆಯ ಭರದಲ್ಲಿ ರಚಯಿತೃ ನೇಪಥ್ಯಕ್ಕೆ ಸರಿಯುವ ಸಂದರ್ಭಗಳು ಅಧಿಕ.
ಕಾರ್ಪೊರೇಟ್ ಲೋಕದ ಲೆಕ್ಕಾಚಾರಗಳು ಏನೇಇರಲಿ, ಅದ್ಯಾವ ಒಳಹುನ್ನಾರಗಳ ಅರಿವಿರದ ಲಕ್ಷ, ಕೋಟಿ ಜನರ ಕಣ್ಮನಗಳನ್ನು ಮೂಕನಾಗಿಸಿದ್ದು ಸೂರ್ಯಕಾಂತನ ಮಧುರಕಂಠದ ಮೂಕನಾಗಬೇಕು. ಕಡಕೋಳ ಮಡಿವಾಳಪ್ಪನ ಪದದ ಹಾಡಿನ ಹೃದಯಸ್ಪರ್ಶಿ ಗುಣವೈಖರಿ. ಅಂತೆಯೇ ನಿರೂಪಕಿ ಮೀರಾಳ ಮಾತುಗಳು ಆನಂದ ಭಾಷ್ಪಗಳಲ್ಲಿ ಮುಳುಗಿ ಹೋದವು. ಸೂರ್ಯಕಾಂತ ಗೆಲ್ಲುವ ಮುನ್ನವೇ ಗೆದ್ದುಬಿಟ್ಟನೆಂದು ರಾಜೇಶ್ ಕೃಷ್ಣನ್, ಅಮೋಘ, ಅಪ್ರತಿಮ, ಅದ್ವಿತೀಯ ಎಂಬರ್ಥದ ಇಂಗ್ಲಿಷಿನಲ್ಲಿ ರಘುದೀಕ್ಷಿತ್, ಮನುಷ್ಯರು ಮತ್ತು ಮನುಷ್ಯರಲ್ಲದವರ ಹೃದಯ ಕಲಕುವ ಶಕ್ತಿ ಸೂರ್ಯಕಾಂತನದೆಂದು ಹರಿಕೃಷ್ಣ ಹಾಡಿ ಹೊಗಳಿದರು.
ಮಾರನೇ ಎಪಿಸೋಡಿಗೆ ಸೂರ್ಯಕಾಂತನ ತಾಯಿಯ ಆಗಮನ. ಹರಿದ ಕುಪ್ಪಸ, ಸದಾ ಮುಗಿದ ಕೈಗಳ ಮುಗ್ದತೆಯ ಮಹಾತಾಯಿ ಶರಣಮ್ಮ. ಅಬ್ಬಾ! ಶರಣಮ್ಮನ ಅಸ್ಮಿತೆಯೇ ಅಂಥದು. ನಿರ್ಭಾವುಕ ಕಾಡು ಕಟುಕರಲ್ಲೂ ಸಂಪ್ರೀತಿಯ ಅನುಭೂತಿ ಉಕ್ಕಿಸುವಂಥದು. ಅಂತಹ ಸನ್ನಿವೇಶಗಳನು ಸೃಷ್ಟಿಸುವಲ್ಲಿ ಕಾರ್ಪೊರೇಟ್ ವ್ಯವಸ್ಥೆಗಳು ಬಹಳೇ ಶ್ಯಾಣೇತನ ಹೊಂದಿರ್ತವೆ. ಬೇರುಮೂಲದ ಮುಗ್ದತೆ ಬಳಸಿಕೊಂಡು ಮನೋರಂಜನೆಯ ಮಹೋಲ್ ಕ್ರಿಯೇಟ್ ಮಾಡುವಲ್ಲಿ ರಣನಿಪುಣರು. ಅದರಲ್ಲೂ ರಿಯಾಲಿಟಿ ಶೋಗಳ ತಯಾರಕರಿಗೆ ಈ ಎಲ್ಲ ಟ್ರಿಕ್ಸ್ ಹೊಸದೇನಲ್ಲ.
ಎರಡು ವರ್ಷಗಳ ಹಿಂದೆ ಕೊಲ್ಕತ್ತಾ ರೈಲು ನಿಲ್ದಾಣದ ರಾನು ಮಂಡಲ್ ಎಂಬ ಮಧುರ ಕಂಠದ ಭಿಕ್ಷುಕಿ ಬೆಳಕು ಹರಿದು ಹೊತ್ತು ಮುಳುಗುವಷ್ಟರಲ್ಲಿ ಬಾಲಿವುಡ್ ಜಗತ್ತಿನ ದಿಢೀರ್ ಗಾಯಕಿಯಾಗಿ ಬಿಟ್ಟಳು. ಅಷ್ಟೇ ಬೇಗ ನಾಪತ್ತೆಯಾಗಿಯೂ ಬಿಟ್ಟಳು. ನಮ್ಮ ಕನ್ನಡದ ಸಂದರ್ಭದ ರಿಯಾಲಿಟಿ ಶೋಗಳಲ್ಲಿ ಅಂತಹ ಕೆಲವು ಪ್ರತಿಭಾವಂತರು ಬಂದು ಹೋದರು. ಇದೆಲ್ಲದರ ಹಿಂದೆ ಬಹುದೊಡ್ಡ ಪ್ರಮಾಣದ ಕಾರ್ಪೊರೇಟ್ ಜಗತ್ತಿನ ಲೆಕ್ಕಾಚಾರಗಳಿರುವುದು ಸಾಮಾನ್ಯರ ಕಣ್ಣಿಗೆ ಕಾಣಿಸುವುದಿಲ್ಲ.
ಹಾಡುಗಾರನಲ್ಲದ ಸೋಲಿಗರ ಹಾಡಿಯ ಕಾಡಿನ ಹುಡುಗ ರಾಜೇಶ್ ರಿಯಾಲಿಟಿ ಮಾಧ್ಯಮದ ಮೋಹಕ್ಕೆ ಬಲಿಯಾದ. ಕಳೆದ ವರ್ಷ ಕಡಕೋಳ ಮಡಿವಾಳಪ್ಪನವರ ”ಯಾಕಚಿಂತಿ ಮಾಡ್ತಿದಿ ಎಲೆ ಮನವೇ” ಹಾಡಿದ ಬೆಳಗಾವಿಯ ಲೈನ್‌ಮ್ಯಾನ್ ಕಿರಣ್ ಸರಕಾರಿ ನೌಕರಿಯಲ್ಲಿದ್ದನಂತ ಬಚಾವ್ ಆದ. ಬಂಜಾರ ಸಂಸ್ಕೃತಿಯ ಕುರಿಗಾಹಿ ಯುವಗಾಯಕ ಹನುಮಂತನನ್ನು ಮತ್ತು ನೆಲೋಗಿಯ ಸುನೀಲನನ್ನು ವಿದ್ಯುನ್ಮಾನ ಮಾಧ್ಯಮವೊಂದು ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದೆ. ಅದೊಂದು ಕುರುಡು ಕಾಂಚಾಣದ ಕುಣಿತ.
ಕಲಾವಿದರನ್ನು ಹಾಡಿನಿಂದ ಡ್ಯಾನ್ಸ್ ಲೋಕಕ್ಕೆ ಸಿಫ್ಟ್ ಮಾಡಿ ಗೊಂಬೆಯಂತೆ ಕುಣಿಸುತ್ತಾ ಮಾಧ್ಯಮವೊಂದು ತನ್ನ ಟಿಆರ್ಪಿ ಬಡಾಯಿಸಿಕೊಳ್ಳುತ್ತದೆ. ಮತ್ತೆ ಬಹುತೇಕ ಇಂತಹ ರಿಯಾಲಿಟಿ ಪ್ರದರ್ಶನಗಳಲ್ಲಿ ಗೆದ್ದುಬಂದವರು ಕೆಲವೇ ಕಾಲ ಮಿಂಚಿ ಮಾಯವಾಗಿ ಬಹುಪಾಲು ನಿರುದ್ಯೋಗ ಪರ್ವದಲ್ಲೇ ನಲುಗುತ್ತಾರೆಂದು ಕೇಳಿದ್ದೇನೆ. ಅಷ್ಟಕ್ಕೂ ಆಮೇಲೆ ಏನಾಗುತ್ತದೆಂಬುದು ಯಾರಿಗೂ ಗೊತ್ತಾಗುವುದೇ ಇಲ್ಲ. ಇದೇ ಮಾಧ್ಯಮಗಳು, ಅವುಗಳ ಆಸ್ತಿಗಳಂತಿರುವ ಸೆಲೆಬ್ರಿಟಿಗಳು ಈ ಪ್ರತಿಭೆಗಳು ಹೀಗೇಕೆ ನೇಪಥ್ಯಕ್ಕೆ ಸರಿದು ಹೋಗುತ್ತವೆಂಬುದರ ಕುರಿತು ತುಟಿ ಎರಡು ಮಾಡದೇ ಹೊಲಿದು ಕೊಂಡಿರುತ್ತವೆ. ಮಾಧ್ಯಮಗಳ ನಿಲುವುಗಳೇನೇ ಇರಲಿ ಪ್ರಸ್ತುತ ನಮ್ಮ ಸೂರ್ಯಕಾಂತನಿಗೆ ಒಳಿತಾಗಲೆಂದು ಹೃದಯತುಂಬಿ ಹಾರೈಸುವೆ. ಯಾವುದೇ ಸಂಗೀತ ಶಾಲೆಯಲ್ಲಿ ಕಲಿಯದ ಶೆಟ್ಟಪ್ಪ ಮಾದರ ಅವನಂತಹ ಹಳ್ಳಿಯ ಭಜನೆ ಹಾಡುವ ಕಲಾವಿದ ರಿಯಾಲಿಟಿ ಶೋಗಳ ಟಿಆರ್ಪಿ ಹೆಚ್ಚುವಲ್ಲಿ ಬಳಕೆಯಾಗುತ್ತಾರೆ. ಆದರೆ ಶೆಟ್ಟೆಪ್ಪನಂಥವರ ಬದುಕು ಕಟ್ಟುವವರು ಯಾರು.?
ಸೋನು ನಿಗಮ್, ಶಾನ್, ಅರ್ಮಾನ್ ಮಲ್ಲಿಕ್, ಕುನಾಲ್ ಗಾಂಜಾವಾಲಾ ಮೊದಲಾದ ಬಾಲಿವುಡ್ ಜಗತ್ತಿನ ಸೆಲೆಬ್ರಿಟಿಗಳು ಕನ್ನಡದ ಸ್ಯಾಂಡಲ್ ವುಡ್ ಸಂಗೀತಲೋಕ ಆಳುತ್ತಿದ್ದಾರೆ. ಸೂರ್ಯಕಾಂತನಂತಹ ಅನೇಕ ಪ್ರತಿಭಾಶಾಲಿ ಗಾಯಕರು ಬಂದರೂ ಸ್ಯಾಂಡಲ್ ವುಡ್ ಜಗತ್ತು ಇವರಿಗೇಕೆ ಅವಕಾಶ ನೀಡುತ್ತಿಲ್ಲ.? ಕಿರುತೆರೆಗಳಲ್ಲಿ ಈ ಪ್ರತಿಭೆಗಳನ್ನು ಗುರುತಿಸಿ ಹಾಡಿ ಹೊಗಳುವ ಸೆಲೆಬ್ರಿಟಿಗಳು ಇವರನ್ನು ಸ್ಯಾಂಡಲ್ ವುಡ್ ಲೋಕಕ್ಕೆ ಕರೆತರುತ್ತಿಲ್ಲವೇಕೆ.? ಕನ್ನಡದ ನಿರ್ಮಾಪಕ, ನಿರ್ದೇಶಕರಿಗೆ ಲೋಕಸಂವೇದನೆಯ ನೆಲದ ಹಾಡುಗಾರರ ಕುರಿತು ಅಸಡ್ಡೆತನವೇ.? ಅನ್ಯಭಾಷೆಯ ಆಮದು ಗಾಯಕರಿಗೇಕೆ ಎಲ್ಲಿಲ್ಲದ ಮನ್ನಣೆ.?
+ಮಲ್ಲಿಕಾರ್ಜುನ ಕಡಕೋಳ
9341010712