ಮನಶಾಸ್ತ್ರದ ಗಣಿತ ಸರಳವಲ್ಲ
೧. ಇಂದು ನಿಮ್ಮ ಅದೃಷ್ಟದ ದಿನ ಎಂದುಕೊಳ್ಳೋಣ. ಏಕೆಂದರೆ ನೀವು ಒಂದು ಲಕ್ಷ ರೂಪಾಯಿಯ ಲಾಟರಿ ಗೆದ್ದಿರುವಿರಿ. ಅದು ನಿಮಗೆ ಕೊಡುವ ಸಂತೋಷವೆಷ್ಟು? ಅದು ಉಳಿಯುವುದೆಷ್ಟು ದಿನ? ಒಂದು ವೇಳೆ ಇಂದು ನಿಮ್ಮ ದುರದೃಷ್ಟದ ದಿನವಾಗಿ, ನೀವು ಕಷ್ಟ ಪಟ್ಟು ಕೂಡಿಟ್ಟ ಒಂದು ಲಕ್ಷ ರೂಪಾಯಿ ಕಳೆದುಕೊಂಡರೆ, ಅದು ನಿಮಗೆ ತರುವ ದುಃಖವೆಷ್ಟು? ಅದು ಮರೆತು ಹೋಗಲು ಬೇಕಾದ ಸಮಯವೆಷ್ಟು? ಒಂದು ಲಕ್ಷ ರೂಪಾಯಿ ಗೆದ್ದಾಗ ಆಗುವ ಸಂತೋಷ ಹೆಚ್ಚೊ? ಅಥವಾ ಅಷ್ಟೇ ದುಡ್ಡು ಕಳೆದುಕೊಂಡಾಗ ಆಗುವ ದುಃಖ ಹೆಚ್ಚೊ?
೨. ನೀವು ಶಾಲಾ ಪರೀಕ್ಷೆಯಲ್ಲಿ ರಾಂಕ್ ಬಂದಿದ್ದರೆ, ಆ ಖುಷಿ, ಹೆಮ್ಮೆ ೧೫ ದಿನಗಳಲ್ಲಿ ಮರೆತು ಹೋಗಬಹುದು. ಆದರೆ ಒಂದು ವೇಳೆ ನೀವು ಫೇಲ್ ಆದರೆ ಒಂದು ವರ್ಷವಿಡೀ ಅವಮಾನ ನುಂಗಬೇಕಾಗಬಹುದು.
೩. ನೀವು ದುಡಿದ ಮೊದಲ ಲಕ್ಷ ರೂಪಾಯಿಗಳು ತರುವ ಸಂತೋಷ, ಎರಡನೆಯ ಲಕ್ಷ ರೂಪಾಯಿ ತರುವುದಿಲ್ಲ ಅಷ್ಟೇ ಸಂತೋಷ ತರಲು ನೀವು ಅದಕ್ಕಿಂತ ಹೆಚ್ಚಿಗೆ ಗಳಿಸಬೇಕಾಗುತ್ತದೆ. ಇದನ್ನು ಅರ್ಥಶಾಸ್ತ್ರದಲ್ಲಿ ” law of diminishing marginal utility ” ಎನ್ನುತ್ತಾರೆ.
೪. ನೀವು ನಿಮ್ಮ ಪತ್ನಿಗೆ ಒಂದು ಕೆಟ್ಟ ಮಾತು ಹೇಳಿದರೆ, ಅದನ್ನು ಸರಿದೂಗಿಸಲು ಸುಮಾರು ಹದಿನಾರು ಒಳ್ಳೆಯ ಮಾತುಗಳನ್ನು ಆಡಬೇಕಾಗುತ್ತದೆ. ಇದು ಒಂದು ಸಮೀಕ್ಷೆಯಿಂದ ತಿಳಿದು ಬಂದ ವಿಷಯ.
ಇನ್ನೂ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಅವು ಒಟ್ಟಾರೆಯಾಗಿ ತಿಳಿಸುವ ವಿಷಯವೆಂದರೆ, ಮನಶಾಸ್ತ್ರದ ಗಣಿತ ಸರಳವಲ್ಲ. ಅಲ್ಲಿ ಸಂತೋಷ ಮತ್ತು ದುಃಖ ಸರಿ ಸಮನಾಗಿ ಹಂಚಿಕೆಯಾಗುವುದಿಲ್ಲ. ಸಂತೋಷ ಎನ್ನುವುದು ಯಾವಾಗಲೋ ಒಮ್ಮೆ ಬಂದು ಹೋಗುವ ಅತಿಥಿಯಾದರೆ, ದುಃಖ ಎನ್ನುವುದು ನಮ್ಮ ಬೆನ್ನಿನ ಹಿಂದಿನ ನೆರಳು. ಬೆಳಕು ದೂರವಾದಂತೆಲ್ಲ ನೆರಳು ನಮಗಿಂತ ಉದ್ದ ಬೆಳೆದು ನಿಲ್ಲುತ್ತದೆ. ಈ ವಿಷಯಗಳನ್ನು ಬುದ್ಧ, ಮಹಾವೀರ, ಸಾಕ್ರಟೀಸ್, ಅರಿಸ್ಟಾಟಲ್ ಇವರೆಲ್ಲ ಚೆನ್ನಾಗಿ ಅರಿತಿದ್ದರು.
ಮಹಾವೀರ ‘ಬದುಕು, ಬದುಕಲು ಬಿಡು’ ಎಂದು ಹೇಳಿದರೆ, ಬುದ್ಧ ಮಾತ್ರ ಬುಡಕ್ಕೆ ಕೈ ಹಾಕಿ ಹೇಳಿದ ‘ಆಸೆಯೇ ದುಃಖಕ್ಕೆ ಮೂಲ’ ಎಂದು. ಆಸೆಗಳನ್ನು ಕಡಿಮೆ ಮಾಡಿಕೊಂಡು ನೋಡಿ. ಭಯಗಳು ಕೂಡ ತಾನಾಗೇ ಕಡಿಮೆಯಾಗುತ್ತವೆ. ಚಿಂತೆಯ ಭಾರ ತಗ್ಗಿ, ನೀವು ಹಗುರಾಗುತ್ತೀರಿ. ನಮ್ಮ ಭಾವನೆಗಳ ತೀವ್ರತೆ ಕಡಿಮೆಯಾದಾಗ, ಎದುರಿಗೆ ಇರುವವರನ್ನು ವಸ್ತು ನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ದೂರದಿಂದ ನಿಂತು ನೋಡಲು ಸಾಧ್ಯವಾಗುತ್ತದೆ. ಬೇರೆಯವರನ್ನು ಅಳೆದು, ತೂಗುವುದನ್ನು ನಿಲ್ಲಿಸಿದ ನಂತರ ನಮ್ಮ ಮನಸ್ಸಿನ ವಟಗುಟ್ಟುವಿಕೆ ಕೂಡ ನಿಂತು ಹೋಗುತ್ತದೆ.
ಗಣಿತ ಸರಳವಲ್ಲದಿರಬಹುದು. ಆದರೆ ಬದುಕಿನ ಸತ್ಯಗಳು ಮಾತ್ರ ತೀರಾ ಸರಳ. ಬುದ್ಧ ಹನ್ನೆರಡು ವರುಷ ಅಲೆದು ಅರಿತುಕೊಂಡಿದ್ದನ್ನು, ನಾವು ಎಲ್ಲೂ ಹೋಗದೆ ಬರೀ ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು ಅರಿತುಕೊಳ್ಳಬಹುದು. ಬುದ್ಧ ಮುಗ್ಧನಾಗಿ ಬೆಳೆದಿದ್ದ. ಅದಕ್ಕೆ ಅವನಿಗೆ ದೇಶಾಂತರ ಹೋಗುವ ಅಗತ್ಯವಿತ್ತು. ಆದರೆ ನಾವು ಮುಗ್ಧರಲ್ಲ. ಕೂಡುವ, ಕಳೆಯುವ ಲೆಕ್ಕದಲ್ಲಿ ಚಾಣಾಕ್ಷರು. ಕೂಡಿದಾಗ ಆಗುವ ಸಂತೋಷಕ್ಕಿಂತ, ಕಳೆದಾಗ ಆಗುವ ದುಃಖ ಹೆಚ್ಚು ಎಂದು ಅರಿತುಕೊಳ್ಳುವುದಕ್ಕೆ ನಮಗೆ ನಮ್ಮ ಮನೆಯ ಮುಂದಿನ ಗಿಡದ ನೆರಳೇ ಸಾಕು. ಸಂತೋಷ ಎನ್ನುವ ಅತಿಥಿಯನ್ನು, ದುಃಖ ಎನ್ನುವ ಬೆಂಬಿಡದ ಭೂತವನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮದಾದಾಗ ಮನಶಾಸ್ತ್ರದ ಗಣಿತ ನಮ್ಮನ್ನು ಬಾಧಿಸುವುದಿಲ್ಲ.
–ಆನಂದ ಮರಳದ ಬೆಂಗಳೂರು