ನನ್ನ ಪ್ರೀತಿಸ್ತೀಯಾ ?
ಎಮ್.ಎ. ಪ್ರಥಮ ವರ್ಗವನ್ನು ಪ್ರವೇಶಿಸಿದ ರಶ್ಮಿ ಸಂಕೋಚ ಮತ್ತು ಸಂಧಿಸ್ಧತೆಯಿಂದ ಆಚೆ ಈಚೆ ನೋಡುತ್ತ ಕುಳಿತುಕೊಳ್ಳಲು ಜಾಗ ಹುಡುಕಿದಳು. ಖಾಲಿ ಇದ್ದ ಡೆಸ್ಕ ನೋಡಿ ಅಲ್ಲಿ ಕುಳಿತು ದೀರ್ಘವಾಗಿ ಉಸಿರೆಳೆದುಕೊಂಡಳು. ಬಹಳ ದಿನಗಳಿಂದ ಮನದಲ್ಲಿ ಮೂಡಿದ ಆಸೆ ಇವತ್ತು ಕೈಗೂಡಿತ್ತು. ತಂದೆ-ತಾಯಿಗಳ ಆಸೆೆಯಂತೆ ವಿಜ್ಞಾನವನ್ನು ಆಯ್ಕೆ ಮಾಡಿ ಸಾಫ್ಟವೇರ ಇಂಜಿನೀಯರ ಗುಂಪು ಸೇರದೇ ಕನ್ನಡದಲ್ಲಿ ಎಂ ಎ ಮಾಡಿ ಪ್ರಾಧ್ಯಾಪಕಿಯಾಗಿ ಸಾಹಿತ್ಯ ಕೃಷಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ ಮಗಳು ತಾಯಿಗೆ ಹುಚ್ಚಿಯಂತೆ ಕಂಡಿದ್ದಳು. ಚಿಕ್ಕಂದಿನಿಂದ ಲೇಖನ, ಕವನ, ಬರೆಯುವ ಹವ್ಯಾಸ ಹೊಂದಿದ ರಶ್ಮಿ ತನ್ನ ನಿರ್ಧಾರವನ್ನು ನೇರವಾಗಿ ತಿಳಿಸಿ ಕಲಾ ವಿಭಾಗದಲ್ಲಿ ಪಿಯುಸಿ ಗಾಗಿ ಪ್ರವೇಶ ಪಡೆಯುವಾಗ ಮನೆಯಲ್ಲಿ ದೊಡ್ಡ ರಾದ್ಧಾಂತವೇ ನಡೆದುಹೋಗಿತ್ತು. ಕೊನೆಗೂ ಕನ್ನಡದಲ್ಲಿ ಪದವಿಯನ್ನು ಮುಗಿಸಿ ಈಗ ಸ್ನಾತಕೋತ್ತರ ಪದವಿಗಾಗಿ ಪ್ರವೇಶ ಪಡೆದು ಹೆಮ್ಮೆಯಿಂದ ಬೀಗುತ್ತ ರಶ್ಮಿ ಎಂ.ಎ. ಪ್ರಥಮ ವರ್ಗ ಕೋಣೆಯಲ್ಲಿ ಬರಬೇಕಾದ ಪ್ರಾಧ್ಯಾಪಕರಿಗಾಗಿ ಕಾಯುತ್ತಿದ್ದಳು.
ಯಾರೋ ಬಿಳಿ ಕೂದಲಿನ ಹಿರಿಯ ವ್ಯಕ್ತಿ ನಿರೀಕ್ಷೆಯಲ್ಲಿದ್ದ ರಶ್ಮಿಗೆ ಬಾಗಿಲಿನಿಂದ ಒಳಬಂದು ವೇದಿಕೆಯನ್ನೇರಿದ ಯುವಕನನ್ನು ನೋಡಿ ಆಶ್ಚರ್ಯವಾಯಿತು. ಗುಂಗುರು ಕೂದಲಿನ ಚಿಗುರು ಮೀಸೆಯ ಬಿಳಿ ಶರ್ಟ, ಕರಿಯ ಪ್ಯಾಂಟನಲ್ಲಿ ಮುಂಗುರುಳನ್ನು ಸವರಿಕೊಳ್ಳುತ್ತ ಇವರನ್ನುದ್ದೇಶಿಸಿ “ಶುಭ ಮುಂಜಾನೆ” ಎಂದಾಗ ಅವರೇ ಕನ್ನಡದ ಪ್ರಾಧ್ಯಾಪಕರೆಂದು ತಿಳಿದು ರಶ್ಮಿಯ ಮನದಲ್ಲಿ ಸಣ್ಣಗೆ ಪುಳಕ ಉಂಟಾಯಿತು. ಅವರ ವಂದನೆಗೆ ಪ್ರತಿ ವಂದನೆಗಳನ್ನು ಸಲ್ಲಿಸಿ ನಿರೀಕ್ಷೆಯಂತೆ ಅವರನ್ನು ನೋಡುತ್ತಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ,
“ಮಿತ್ರರೇ ಪಾಠ ಪ್ರಾರಂಭ ಮಾಡುವ ಮೊದಲು ಪರಸ್ಪರ ಪರಿಚಯ ಮಾಡಿಕೊಳ್ಳುವುದು ನಮ್ಮ ವಾಡಿಕೆ. ಮೊದಲು ನನ್ನ ಪರಿಚಯ ಮಾಡಿಕೊಳ್ಳುತ್ತೇನೆ. ನಂತರ ನೀವೆಲ್ಲರೂ ಒಬ್ಬೋಬ್ಬರಾಗಿ ಎದ್ದು ನಿಂತು ನಿಮ್ಮ ಪರಿಚಯ ಮಾಡಿಕೊಳ್ಳಬಹುದು.
ನಾನು ವೇಣುಗೋಪಾಲ ಎಂ ಎ ಮತ್ತು ಪಿ ಎಚ್ಢಿ ಎರಡನ್ನು ಮೈಸೂರಿನ ವಿಶ್ವವಿದ್ಯಾಲಯದಿಂದ ಪಡೆದೆ. ಕಳೆದ ಎರಡು ವರ್ಷಗಳಿಂದ ಈ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಈಗ ನಿಮ್ಮ ಪರಿಚಯ. ಕೊನೆಯ ಬೆಂಚಿನಿಂದ ಪ್ರಾರಂಭವಾಗಲಿ ಮಿಸ್ ನೀವು ಪ್ರಾರಂಭಮಾಡಿ” ಎಂದು ತನ್ನ ಕಡೆ ತೋರಿನ ಬೆರಳನ್ನು ನೋಡಿ ಉದ್ದೇಶಪೂರಿತ ಎನಿಸಿದರು ಎದ್ದು ನಿಂತು ತನ್ನ ಹೆಸರು ಪರಿಚಯ ಹೇಳುವಾಗ ಸಣ್ಣಗೆ ಬೆವರು ಬಿಟ್ಟಿತ್ತು. ಯಾಕೋ ಆ ಇಡೀ ದಿನ ಆ ಮುಖ ಮತ್ತು ಭಾವ ಕಾಡಿತ್ತು!!.
ಈ ರೀತಿ ಪ್ರಾರಂಭಗೊಂಡ ಪರಿಚಯ ಒಡನಾಟದಲ್ಲಿ ಬದಲಾಗಲು ಬಹಳ ಸಮಯ ಬೇಕಾಗಲಿಲ್ಲ. ನಂತರದ ಕೆಲವು ವಿಚಾರ ಸಂಕೀರ್ಣಗಳಲಿ ಭಾಗವಹಿಸಿದಾಗ ಬೇಕಾದ ವಿವರಗಳಿಗಾಗಿ ಪದೇ ಪದೇ ಭೆಟ್ಟಿಯಾಗುವ, ಗಂಟೆಗಟ್ಟಲೇ ಚರ್ಚಿಸುವ ಅವಕಾಶಗಳು ಪುನರಾವರ್ತನೆಗೊಂಡು ಮೊದಲಿನ ಸಂಕೋಚ ಕಡಿಮೆಯಾಗಿ ಸಲುಗೆಗೆ ಎಡೆಮಾಡಿಕೊಟ್ಟಿತ್ತು. ಬೇರೆ ಎಲ್ಲ ವಿದ್ಯಾರ್ಥಿಗಳ ಜೊತೆಗೆ ಇದ್ದರೂ ಆ ಮೊದಲ ನೋಟದ ಪುಳಕ ಕಡಿಮೆಯಾಗಿರಲಿಲ್ಲ!. ಪ್ರತಿ ಸಾರಿ ಅವರ ಕೊಠಡಿ ಪ್ರವೇಶಿಸುವಾಗ ಒಂದು ಕ್ಷಣ ಹೃದಯದ ಬಡಿತ ತಪ್ಪುತ್ತಿತ್ತು. ಹೃದಯದ ಭಾವ ಕಣ್ಣಂಚಿನಲ್ಲಿ ತುಳುಕುತ್ತಿತ್ತು. ಆದರೆ ಆತ ಮಾತ್ರ ಸ್ಥಿತಪ್ರಜ್ಞ! ಮಾತಿನಲ್ಲಾಗಲೀ ಭಾವದಲ್ಲಾಗಲೀ ಯಾವುದೇ ಬದಲಾವಣೆ ಇಲ್ಲ. ಎಲ್ಲರೊಂದಿಗೆ ಹಸನ್ಮುಖಿಯಾಗಿ ಸಹಕರಿಸುತ್ತಿದ್ದದರು. ಸಲಹೆಗಳನ್ನು ನೀಡುತ್ತಾ ಪ್ರೋತ್ಸಾಹಿಸುತ್ತಿದ್ದರು. ಅವರ ಚಂದದ ಮುಖಾರವಿಂದಕ್ಕೆ ಮರುಳಾದ ಮನ ಅವರ ಪ್ರಚಂಡ ಜ್ಞಾನವನ್ನು, ವಿಷಯ ಪ್ರಬದ್ಧತೆಯನ್ನು ತಿಳಿದು ಆರಾಧಿಸತೊಡಗಿತ್ತು. ಅಲ್ಲದೇ ಅವರು ತನ್ನ ಪ್ರತಿಭೆಯನ್ನು ಗುರುತಿಸಿ ಗೌರವಿಸಿದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಪದೇ ಪದೇ ಏನಾದರೂ ನೆಪ ಮಾಡಿ ಅವರನ್ನು ನೋಡಲು ಮನ ಹಾತೊರೆಯುತ್ತಿತ್ತು. ಮೊದಲ ನೋಟದ ಪ್ರೀತಿ ಎಂದರೆ ಇದೇನಾ? ಎಂದು ಮನಸ್ಸು ಪ್ರಶ್ನಿಸಿಕೊಂಡಿತ್ತು. ಆದರೆ ಉತ್ತರ ಅನಿಶ್ಚಿತವಾಗಿತ್ತು.
ವಿಶ್ವವಿದ್ಯಾಲಯದ ಯುವಜನೋತ್ಸವದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ವೇಣುಗೋಪಾಲರ ನಾಯಕತ್ವದಲ್ಲಿ ತಯಾರಿ ನಡೆದಿತ್ತು. ಅವರು ವರ್ಗದಲ್ಲಿ ಈ ಪ್ರಸ್ತಾಪವಿಟ್ಟು ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳ ಹೇಸರು ಕೇಳಿದಾಗ ಕಣ್ಣಲ್ಲಿ ಇಣುಕಿದ ಆಹ್ವಾನಕ್ಕೆ ಉತ್ತೇಜಿತಳಾಗಿ ಒಪ್ಪಿಗೆ ನೀಡಿದ್ದಾಗಿತ್ತು. ದಿನವೂ ಒಂದು ಗಂಟೆ ಅಭ್ಯಾಸ. ನಾಟಕಕ್ಕಿಂತ ಅವರ ಒಡನಾಟ ಅಪ್ಯಾಯಮಾನವಾಗಿತ್ತು. ಯಾವಾಗಲಾದರೂ ಮನೆಯಿಂದ ತಂದ ತಿಂಡಿ ನೀಡಿ “ಸರ್ ನಾನು ಮಾಡಿದ್ದು” ಎಂದು ಹೇಳಿದಾಗ ತಿಂದು ಕಣ್ಣಲ್ಲಿ ಕಣ್ಣಿಟ್ಟು “ಪರವಾಗಿಲ್ಲ ಬಹುಮುಖ ಪ್ರತಿಭೆಯ ಹುಡುಗಿ ನೀವು” ಎಂದಾಗ ಆಸೆಗೆ ಗರಿ ಮೂಡುತ್ತಿತ್ತು.
ಆ ದಿನ ರಶ್ಮೀ ಜೀವನದಲ್ಲಿ ಮರೆಯಲಾಗದ ದಿನ. ಭಾವನೆಗಳು ಹರಳುಗಟ್ಟಿ ನಿಖರತೆಯನ್ನು ಪಡೆದ ಘಳಿಗೆ. ನಾಟಕದ ಅಭ್ಯಾಸ ಮುಗಿಸಿ ಹೊರಬಂದಾಗ ಎನೋ ನೆಪ ಹೂಡಿ ಹೊರಬಂದ ವೇಣುವಿನ ಕಡೆ ಕುಡಿ ನೋಟ ಬೀರುತ್ತಾ ವಂದಿಸಿ ಆಕ್ಟೀವಾ ಸ್ಟಾರ್ಟ ಮಾಡಿದಾಗ ಅದು ತಣ್ಣಗೆ ಎನೂ ಶಬ್ಧ ಮಾಡದೆ ನಿಂತಿತು. ಗಾಬರಿಯಾಗಿ ಇಳಿದು ಕಿಕ್ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ಅಲ್ಲಿಯೇ ಇದ್ದ ವೇಣು ಹತ್ತಿರ ಬಂದು ತಾವು ಕಿಕ್ ಹೊಡೆದು ಚಾಲನೆಗೊಳಿಸಲು ಪ್ರಯತ್ನಿಸಿದರೂ ತೆಪ್ಪಗೆ ನಿಂತಿತ್ತು.
ಆಗಲೇ ಕತ್ತಲಾಗಿದ್ದನ್ನು ಗಮನಿಸಿದ ವೇಣು “ಪರವಾಗಿಲ್ಲ ನಿಮ್ಮ ಆಕ್ಟೀವಾ ಇಲ್ಲಿಯೇ ಇರಲಿ ನಾನು ವಾಚಮನ್‌ಗೆ ಹೇಳುತ್ತೇನೆ. ಬೇಕಿದ್ದರೆ ನಾÀನು ನಿಮ್ಮನ್ನು ಮನೆಗೆ ಬಿಡುತ್ತೇನೆ” ಎಂದಾಗ ಬಾಯಿ ಬೇಡ ಎನ್ನುತ್ತಿತ್ತು ಆದರೆ ಹೃದಯ ಹೂವಾಗಿತ್ತು. ಅವರು ವಾಚಮನ್ ಜೋತೆ ಮಾತನಾಡಿ ಮತ್ತೆ ಕರೆದಾಗ ತಕ್ಷಣ ಬೈಕ್ ಏರಿದ್ದ ರಶ್ಮಿಗೆ ಸ್ವರ್ಗ ಮೂರೇ ಗೇಣು. ಅವರ ಹಿಂದೆ ಕುಳಿತ ರಶ್ಮಿಗೆ ಹಾಗೆಯೇ ಅವರನ್ನು ಬಳಸಿ ಬೆನ್ನಿಗೊರಗುವ ಬಯಕೆ ಹೆಡೆಯೆತ್ತಿ ನಿಂತಿತ್ತು. ಸ್ವಲ್ಪ ಹೊತ್ತಿಗೆ ಮನದ ತುಮುಲ ತಹಬದಿಗೆ ಬಂದು ಬರಿದಾದ ಮನದಲ್ಲಿ ಅವರ ಮೂರ್ತಿ ಪ್ರತಿಷ್ಠಾಪಿತವಾಗಿತ್ತು. ಮನದಲ್ಲಿ ಮೂಡುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಬಿಟ್ಟಿತ್ತು. ಇದಾವುದರ ಅರಿವು ಇಲ್ಲದ ವೇಣು ನೇರವಾಗಿ ಬೈಕ್ ರಶ್ಮಿಯ ಮನೆ ಮುಂದೆ ನಿಲ್ಲಿಸಿದಾಗ ಇಹಲೋಕಕ್ಕೆ ಬಂದ ರಶ್ಮಿ ನಾಚಿಕೆಯಿಂದ ತಲೆ ತಗ್ಗಿಸಿ ಶುಭರಾತ್ರಿ ಹೇಳಿ ಮನೆಯೊಳಗೆ ಓಡಿದ್ದಳು. ಯಾವಾಗಲೂ ವಾಚಾಳಿಯಾಗಿದ್ದ ಆಕೆ ಹಾಗೆ ನಾಚಿ ಓಡಿದ್ದು ನೋಡಿ ಆಶ್ಚರ್ಯದಿಂದ ಹುಬ್ಬೇರಿಸಿದ ವೇಣು ಸುಮ್ಮನೆ ಬೈಕ್ ಮುಂದೆ ಓಡಿಸಿದ್ದರು.
ರಶ್ಮಿಯೆನೋ ತನ್ನ ಭಾವನೆಗಳನ್ನು ಅರಿತು ಒಪ್ಪಿಕೊಂಡಿದ್ದಳು. ಆದರೆ ವೇಣು? ಅವರ ಮನಸ್ಸನ್ನು ಅರಿಯುವುದು ಹೇಗೆ? ಅವರಿಗೆ ನನ್ನ ಭಾವನೆಗಳ ಅರಿವಿದೆಯೇ? ಇದ್ದರೂ ಎನೂ ಗೊತ್ತಿಲ್ಲದವರ ಹಾಗೆ ನಟಿಸುತ್ತಿದ್ದಾರೆಯೇ? ಹೇಗೆ ತಿಳಿಯುವುದು? ಅರ್ಥವಾಗದೇ ಯೋಚಿಸಿ ನಿದ್ದೆಗೆಟ್ಟಳು. ಎಲ್ಲೆಡೆ ಹೊಸ ವರ್ಷದ ಸಂಭ್ರಮ. ನೋಡುತ್ತ ಮನಸ್ಸನ್ನು ಗಟ್ಟಿಗೊಳಿಸಿ ಒಂದು ಶುಭಾಶಯದೊಂದಿಗೆ ಎರಡು ವಾಕ್ಯ ಸೇರಿಸಿದ್ದಳು. “ನನ್ನ ಹೃದಯ ಕದ್ದ ಕಳ್ಳ ಕೃಷ್ನ, ನಿಮ್ಮ ಮೋಡಿಗೆ ಸಿಲುಕಿ ಜಗತ್ತನ್ನೇ ಮರೆತಿದ್ದೇನೆ. ನಿಮ್ಮ ರಾಧೆಯಾಗಲು ಅವಕಾಶ ಕೊಡಿ” ಕವರ ಅಂಟಿಸಿ ಅಡ್ರೆಸ್ ಬರೆದು ನಡುಗುವ ಕೈಗಳಿಂದ ಅಂಚೆಗೆ ಹಾಕಿದ್ದಾಯಿತು. ಮೂರನೆ ದಿನ ವರ್ಗಕೋಣೆಯಲ್ಲಾಗಲೀ, ನಾಟಕ ಅಭ್ಯಾಸದಲ್ಲಾಗಲೀ ವೇಣುವನ್ನು ಸೂಕ್ಷö್ಮವಾಗಿ ಗಮನಿಸಿದರೂ ಯಾವುದೇ ಬದಲಾವಣೆ ಕಾಣದೇ ಕಂಗೆಟ್ಟಿದ್ದಳು. ಹಾಗೆ ಮತ್ತೆರಡು ದಿನ ಕಳೆದಾಗ ಹೃದಯ ಕುಂದಿ ಹೋಯಿತು. ಅವರಿಗೆ ನಾನೇ ಬರೆದದ್ದು ಅಂತ ಹೇಗೆ ಗೊತ್ತಾಗುತ್ತದೆ. ನನ್ನಂತೆ ಅವರನ್ನು ಆರಾಧಿಸುವವರು ಎಷ್ಟೋ ಹುಡುಗಿಯರು. ಯಾರೋ ಅಂದುಕೊಂಡು ಪತ್ರ ಹರಿದು ಹಾಕಿರಬಹುದು ಎನಿಸಿತ್ತು.
ಮಾರನೆ ದಿನ ಅಭ್ಯಾಸ ಮುಗಿಸಿ ಹೊರಬರುವಾಗ ತನ್ನ ಕಡೆಗೆ ತಿರುಗಿ “ರಶ್ಮಿ ಒಂದು ನಿಮಿಷ ಬಂದು ಹೋಗಿ” ಎಂದು ಕೊಠಡಿಯ ಕಡೆಗೆ ಹೊರಟ ವೇಣುವನ್ನು ಹಿಂಬಾಲಿಸಿದ ರಶ್ಮಿಯ ಹೃದಯ ಬಾಯಿಗೆ ಬಂದಿತ್ತು. ಕುರ್ಚಿಯ ಮೇಲೆ ಕುಳಿತ ಅವರು ಮುಂದಿನ ಕುರ್ಚಿ ತೋರಿಸಿ ಕುಳಿತುಕೊಳ್ಳಲು ಸನ್ನೆ ಮಾಡಿದರು. ಡ್ರಾರ‍್ನಿಂದ ತೆಗೆದು “ಈ ಗ್ರೀ್ರಟಿಂಗ ನಿಮ್ಮದಾ?” ಎಂದು ಕೇಳಿದಾಗ ಗಾಬರಿಯಾಗಿ “ಇಲ್ಲ ಸರ್” ಎಂದು ತೊದಲಿದಳು. “ಯಾರೋ ಈ ಗ್ರೀ್ರಟಿಂಗನ್ನು ಕಳಿಸಿದ್ದಾರೆ. ಹೆಸರು ಬರೆದಿಲ್ಲ ನಿಮ್ಮದೇ ಇರಬಹುದು ಎಂದುಕೊಂಡೆ ಅಂದಾಗ ಧೈರ್ಯ ತಂದುಕೊಂಡು “ಇಲ್ಲವಲ್ಲ ಸರ್ ಏನಿದೆ ಈ ಗ್ರೀ್ರಟಿಂಗನಲ್ಲಿ?” ಎಂದು ಬಂಡತನ ತೋರಿದ್ದಳು. “ಏನಿಲ್ಲ ಬಿಡಿ ನೀವು ಹೋಗಿ” ಎಂದಾಗ ಪೆಚ್ಚಾಗಿ ಎದ್ದು ನಿಂತು ಬಾಗಿಲ ಕಡೆ ಬಂದು ಯಾವುದೋ ಸ್ಫೂರ್ತಿಯಿಂದ ತಿರುಗಿ ನಿಂತು “ಸರ್ ಅಕಸ್ಮಾತ್ ನನ್ನದೇ ಗ್ರಿಟಿಂಗ್ಆಗಿದ್ದರೆ?” ಎಂದಾಗ ನೇರವಾಗಿ ನೋಡಿದ ವೇಣು ಸಣ್ಣದಾಗಿ ನಕ್ಕು “ನಾನು ಅಷ್ಟು ಅದೃಷ್ಟವಂತನೇ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಿದ್ದೆ” ಎಂದರು. ಆದರೆ ಕಣ್ಣಂಚಿನಲ್ಲಿ ಎಲ್ಲೋ ನೋವಿನ ಛಾಯೆ ಮೂಡಿ ಮಾಯವಾಯಿತು. ಉತ್ಸಾಹದಲ್ಲಿ ಅದನ್ನು ಗಮನಿಸದ ರಶ್ಮಿ ಅವರ ಕಣ್ಣುಗಳನ್ನು ಎದುರಿಸಲಾಗದೇ ನಾಚಿ ಹೊರಗೆ ಓಡಿಬಿಟ್ಟಳು. ಅಲ್ಲಿಂದ ಶುರುವಾಗಿತ್ತು ಒಂದು ಪ್ರೇಮ ಕಥೆ.
ಕಾಲೇಜು ನಂತರದ ಭೇಟಿಗಳು ಹೆಚ್ಚಾಗುತ್ತ ಅದು ಸಾಲದು ಎನಿಸಿದಾಗ ಸ್ಪೇಶಲ ಕ್ಲಾಸ ನೆಪ ಹೇಳಿ ರಜೆ ದಿನಗಳಲ್ಲಿ ಸುತ್ತಾಡುವದು ಶುರು ಆಗಿತ್ತು. ನೋಟ್ಸ ಕೇಳುವ ನೆಪಮಾಡಿಕೊಂಡು ಮನೆಗೆ ಬಂದಾಗ ಗಮನಿಸಿದ ವೇಣುವಿನ ತಾಯಿ ಮುಗಳು ನಗೆಯೊಂದಿಗೆ ಸಮ್ಮತಿಯ ಸೂಚನೆ ನೀಡಿದಾಗ ರಶ್ಮಿಯ ಹೃದಯ ರೆಕ್ಕೆ ಬಿಚ್ಚಿ ಹಾರಾಡಿತ್ತು.
ರಶ್ಮಿಯ ವರ್ತನೆಯಲ್ಲಾದ ಬದಲಾವಣೆಯನ್ನು ಗುರುತಿಸಿದ ತಾಯಿ ಸಹಜವಾಗಿ ಕೇಳಿದಾಗ ಮುಚ್ಚಿಡಲು ಯಾವ ಕಾರಣವೂ ಕಾಣದ್ದರಿಂದ ರಶ್ಮಿ ತನ್ನ ಮನಸ್ಸನ್ನು ತಾಯಿಯ ಮುಂದೆ ಬಿಚ್ಚಿಟ್ಟಿದ್ದಳು. ಎಲ್ಲ ಸಿನಿಮೀಯವಾದಂತೆ ಇಲ್ಲಿಯೂ ಅವಳ ತಂದೆ-ತಾಯಿ ವೇಣುವನ್ನು ಭೇಟಿಮಾಡುವ ಆಸೆಯನ್ನು ವ್ಯಕ್ತಪಡಿಸಿ ಒಂದು ಭಾನುವಾರ ಆತನನ್ನು ಮನೆಗೆ ಆಹ್ವಾನಿಸಿದಾಗ ಸಂಕೋಚವಿಲ್ಲದೇ ಮನೆಗೆ ಬಂದ ವೇಣು ತನ್ನ ಮಾಂತ್ರಿಕ ಶಕ್ತಿಯಲ್ಲಿ ಅವರನ್ನೆಲ್ಲ ಬಂಧಿಸಿದ್ದ.
ರಶ್ಮಿಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬ ಹಾಗೆ ತೋರತೊಡಗಿತು. ಆದರೂ ಯಾಕೋ ವೇಣುವಿನ ಕಣ್ಣಲ್ಲಿ ಆಗಾಗ ಕಾಣುತ್ತಿದ್ದ ವಿಶಾದದ ಛಾಯೆ ಅವಳಲ್ಲಿ ಗೊಂದಲವನ್ನುAಟು ಮಾಡುತ್ತಿತ್ತು.
ಆವತ್ತು ರವಿವಾರ ತಾಯಿ ಮಾಡಿದ ಗಜ್ಜರಿ ಹಲ್ವಾ ಹಾಕಿಕೊಂಡು ಆಕ್ಟೀವಾ ಏರಿ ವೇಣು ಮನೆಯತ್ತ ಹೊರಟ ರÀಶ್ಮಿಯ ಮನ ಹಾರಾಡುತ್ತಿತ್ತು. ಮನೆ ತಲುಪಿದಾಂಗ ಒಬ್ಬನೇ ಇದ್ದ ವೇಣುವನ್ನು ನೋಡಿ “ಅಮ್ಮ ಎಲಿ?”್ಲ ಎಂದು ಕೇಳಿದ್ದಳು. ಅವರು ಊರಿಗೆ ಹೋಗಿದ್ದು ಗೊತ್ತಾಗಿ ಹೃದಯ ಹೊಡೆದುಕೊಳ್ಳಲು ಪ್ರಾರಂಭಿಸಿತ್ತು. ಇಷ್ಟು ದಿನಗಳಾದರೂ ವೇಣುವನ್ನು ಯಾವತ್ತೂ ಒಬ್ಬಂಟಿಯಾಗಿ ಭೆಟ್ಟಿಯಾಗುವ ಅವಕಾಶ ಸಿಕ್ಕಿರಲಿಲ್ಲ. ಏನೋ ಪುಳಕ, ಏನೋ ಆತಂಕ, ಆದರೆ ಅವನತ್ತ ನೋಡಿದರೆ ವಿಶಾದದ ಛಾಯೆ ಇನ್ನೂ ಗಾಢವಾದಂತೆ ಎನಿಸಿತು. “ಯಾಕೆ ಮೈಯಲ್ಲಿ ಹುಷಾರಿಲ್ಲವಾ”? ಕೇಳಿದ್ದಳು.
ವೇಣು ಸಾವಕಾಶವಾಗಿ ಎದ್ದು ಬಂದು ಅವಳ ಕೈ ಹಿಡಿದು “ರಶ್ಮಿ ನಿನ್ನ ಜೊತೆ ಮಾತನಾಡಬೇಕು ಕುಳಿತುಕೋ” ಎಂದು ಚೇರ ಮೇಲೆ ಕುಳ್ಳರಿಸಿ ಎದುರುಗಡೆ ಇನ್ನೊಂದು ಚೇರ್ ಎಳೆದುಕೊಂಡು ಕುಳಿತುಕೊಂಡರು.
“ರಶ್ಮಿ ನೀನು ನನ್ನನ್ನು ತುಂಬ ಪ್ರೀತಿಸ್ತಿಯಾ ಅಂತ ನನಗೆ ಗೊತ್ತು. ಹಾಗೆ ನಿನ್ನಂಥ ಹುಡುಗಿ ನನ್ನ ಜೀವನದಲ್ಲಿ ಬಂದಿದ್ದು ನನ್ನ ಅದೃಷ್ಟ. ಆದರೆ ನಮ್ಮ ಕನಸುಗಳು ನನಸಾಗುತ್ತವೆ ಎಂಬ ಭರವಸೆ ನನಗಿಲ್ಲ” ಎಂದಾಗ ರಶ್ಮಿಯ ಹೃದಯದ ಬಡಿತ ತಪ್ಪಿತ್ತು. ಏನೂ ಹೇಳದೆ ಅವರನ್ನೇ ನಿಟ್ಟಿಸುತ್ತ ಕುಳಿತು ಬಿಟ್ಟಳು. “ರಶ್ಮಿ ಬಹುಶಃ ನಿನಗೆ ಗೊತ್ತಿಲ್ಲ. ನಾನು ವಿವಾಹ ವಿಚ್ಛೇದಿತ. ಮದುವೆಯಾಗಿ ಒಂದು ವಾರದಲ್ಲಿಯೇ ನನ್ನ ಪತ್ನಿ ನನ್ನಿಂದ ಬೇರೆಯಾದಳು. ನಿನ್ನ ಆಸೆÉಗಳಿಗೆ ರೆಕ್ಕೆ ಮೂಡುವ ಮೊದಲು ನನ್ನ ವಿಚ್ಛೇದನಕ್ಕೆ ಕಾರಣ ತಿಳಿದುಕೊಳ್ಳುವುದು ಅವಶ್ಯಕ. ಏಕೆಂದರೆ ಮತ್ತೊಮ್ಮೆ ಹೊಡೆತ ತಡೆದುಕೊಳ್ಳುವ ಶಕ್ತಿ ನನಗಿಲ್ಲ” ಎನ್ನುತ್ತಾ ಮಾತಿಗೆ ಪ್ರಾರಂಭಿಸಿ
“ನಾನೊಂದು ವಿಚಿತ್ರವಾದ ಮನಸಿಕ ಸ್ಥಿತಿಯಿಂದ ಬಳಲುತ್ತಿದ್ದೇನೆ. ಅದು ಫ್ಯಾಟಿಸಿಜಂ, ಆಂದರೆ ಚಿಕ್ಕಂದಿನಲ್ಲಿ ಯಾವುದೋ ಕಾರಣದಿಂದ ಮನಸ್ಸಿನಲ್ಲಿ ಮೂಡಿದ ಮುದ್ರೆಗಳಿಂದಾಗಿ ಕೆಲವು ವಸ್ತುಗಳ ಮೇಲೆ ಆಕರ್ಷಣೆ ಬೆಳೆದಿರುತ್ತದೆ. ಹಾಗೆ ನನಗೆ ಆಕರ್ಷಣೆ ಬೆಳೆದಿದ್ದು ಮೂಗುಬೊಟ್ಟು. ನನಗೂ ಮೊದಲು ಇದು ಅರ್ಥ ಆಗಿರಲಿಲ್ಲ. ನಂತರ ಮನೋವೈಜ್ಞಾನಿಗಳನ್ನು ಕೇಳಿದಾಗ ಫ್ಯಾಟಿಸಿಜಂ ಬಗ್ಗೆ ವಿವರಿಸಿದರು. ಚಿಕ್ಕಂದಿನಿಂದಲೂ ಮೂಗುಬೊಟ್ಟು ಹಾಕಿಕೊಳ್ಳಲು ಆಸೆ ಪಡುತ್ತಿದ್ದೆ. ಯಾಕೆ ಎಂದು ಅರ್ಥವಾಗಿರಲಿಲ್ಲ. ಜನರಿಗೆ ಹೆದರಿ ಗೌಪ್ಯವಾಗಿ ಹಾಕಿಕೊಳ್ಳುತ್ತಿದ್ದೆ. ಅಮ್ಮನಿಗೆ ಗೊತ್ತಾದಾಗ ದೊಡ್ಡ ರಂಪವನ್ನು ಮಾಡಿದ್ದಳು.
ಆದರೆ ಅದು ನನ್ನ ಮಾನಸಿಕ ಸ್ಥಿತಿ, ಅದನ್ನು ದೂರ ಮಾಡಿದರೆ ಮನಸ್ಸಿಗೆ ಆಘಾತವಾಗಿ ಏನಾದರೂ ತೊಂದರೆಯಾಗಬಹುದು ಎಂದು ಡಾಕ್ಟರ್ ಹೇಳಿದಾಗ ಸುಮ್ಮನಾದಳು. ಮದುವೆಯಾದ ಮೇಲೆ ಸಮಸ್ಯೆ ಹೆಚ್ಚಾಯಿತು. ನನ್ನ ಹೆಂಡತಿ ಅದನ್ನು ಮಾನಸಿಕ ಸ್ಥಿತಿ ಎಂದು ಅರ್ಥ ಮಾಡಿಕೊಳ್ಳದೇ ಷಂಡನೆಂದು ಜರಿದು ಮನೆ ತೊರೆದಳು. ಈಗ ಹೇಳು ನಾನು ಮೂಗುಬೊಟ್ಟು ಹಾಕಿಕೊಂಡು ನಿನ್ನ ಮುಂದೆ ಬಂದರೆ ನೀನು ನನ್ನನ್ನು ಹೀಗೆ ಪ್ರೀತಿಸಬಲ್ಲೆಯಾ? ಅಥವಾ ಅಸಹ್ಯ ಪಟ್ಟುಕೊಳ್ಳುವೆಯಾ?
ರಶ್ಮಿ ಕಣ್ಣು ಪಿಳುಕಿಸದೇ ಅವನನ್ನೇ ನೋಡುತ್ತಿದ್ದಳು. ಮಿದುಳು ಸ್ಥಬ್ಧವಾಗಿತ್ತು. ಹತ್ತಿರದಲ್ಲಿ ಕುಳಿತ ವೇಣುವಿನ ಮೂಗಿನ ರಂದ್ರ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಆಶ್ಚರ್ಯ! ಅದನ್ನು ಯಾವತ್ತೂ ಗಮನಿಸಿರಲಿಲ್ಲ. ಬಹುಶಃ ಅವನ ಮಾತಿನ ಮೋಡಿ ಅಷ್ಟು ತೀಕ್ಷ÷್ಣವಾಗಿರುತ್ತಿತ್ತು!
ವೇಣು ಮೆಲ್ಲಗೆ ಡ್ರಾವರ ಎಳೆದು ಅದರಿಂದ ಒಂದು ಚಿಕ್ಕ ಬಾಕ್ಸನಲ್ಲಿದ್ದ ಮೂಗುಬೊಟ್ಟನ್ನು ತೆಗೆದು ಆ ಮೂಗಿನ ರಂದ್ರದಲ್ಲಿ ಹಾಕಿ ಹಾಗೆ ರಶ್ಮಿಯ ಮುಖವನ್ನು ಕೈಯ್ಯಲ್ಲಿ ಹಿಡಿದು ಕೇಳಿದ “ಈಗ ಹೇಳು ನೀನು ನನ್ನ ಪ್ರೀತಿಸ್ತೀಯಾ ?”
ಆ ಧ್ವನಿ ಬೇರೆ ಎಲ್ಲವನ್ನು ಮರೆಯಿಸಿತ್ತು. ಆತನ ವಿಚ್ಛೇದನ ಮೂಗುಬೊಟ್ಟು ಎಲ್ಲ ಮನದಿಂದ ಮರೆಯಾಗಿತ್ತು. ಹೃದಯ ಸುಮ್ಮನೇ ಹಾಡಿತ್ತು. ಹಾಗೆ ಆತನ ಎದೆಗೆ ಒರಗಿ ಪಿಸುಗುಟ್ಟಿದ್ದಳು. “ಹೌದು ತುಂಬ ಪ್ರೀತಿಸ್ತೀನಿ” ಪ್ರೀತಿಯ ಗೀತೆ ಇಬ್ಬರನ್ನೂ ಆವರಿಸಿತ್ತು. ಆ ಪ್ರೀತಿಯ ಹೊಳೆಯಲ್ಲಿ ಎಲ್ಲ ಪ್ರಶ್ನೆಗಳು, ಆತಂಕಗಳು ಕೊಚ್ಚಿಕೊಂಡು ಹೋಗಿದ್ದವು.
-ಪ್ರೊ.ರಾಜನಂದ ಗಾರ್ಘಿ, ಬೆಳಗಾವಿ