ವಿಶೇಷ ಲೇಖನ : ಕೆ.ಶಶಿಕಾಂತ, ಲಿಂಗಸುಗೂರ
ಪ್ರೊ.ಚಂದ್ರಶೇಖರ ವಸ್ತ್ರದ ಅವರು ವಿಶೇಷ ಪ್ರತಿಭಾಸಂಪನ್ನತೆಯ ಅಪರೂಪದ ವಿದ್ವಾಂಸರೆಂದೇ ನಾಡಿನಾದ್ಯಂತ ಪ್ರಸಿದ್ಧರಾಗಿದ್ದಾರೆ.ಕಾವ್ಯ,ನಾಟಕ,ಚಿತ್ರಕಥೆ,ಜೀವನ ಚರಿತ್ರೆಯಂಥ ಸೃಜನಶೀಲ ಕೃತಿಗಳೊಂದಿಗೆ ಜಾನಪದ ಮತ್ತು ವಚನ ಸಾಹಿತ್ಯಗಳಲ್ಲಿನ ಬದುಕು ಮತ್ತು ಸಿದ್ಧಾಂತಗಳನ್ನು ನಿಖರವಾಗಿ ಅರ್ಥೈಸಬಲ್ಲ ವಿಶಿಷ್ಟ ದೃಷ್ಟಿಕೋನದ ಬರಹಗಾರರಾಗಿದ್ದಾರೆ.
ಗದುಗಿನ ಲಿಂ.ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ಪ್ರಭಾವಲಯದಲ್ಲಿ ಬೆಳೆದ ಇವರ ಜೀವನ ಪೂಜ್ಯರ ಬದುಕಿನಷ್ಟೇ ರೋಚಕವಾದುದ್ದು.
ಇವರ ಹುಟ್ಟೂರು ಸಿಂದಗಿ.ಗದುಗಿನ ಪೂಜ್ಯರ ಹುಟ್ಟೂರು ಕೂಡ ಸಿಂದಗಿ.ಅಲ್ಲಿನ ಹಿರೇಮಠದ ಉತ್ತರಾಧಿಕಾರಿ ಶ್ರೀ ಸಿದ್ಧರಾಮ ದೇವರು.ವಿಪರೀತ ಬಡತನದ ಮಠ.ಹಿರಿಯ ಪೂಜ್ಯರಾದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರು ತಮ್ಮ ಮಠದ ಸಂಪ್ರದಾಯದಂತೆ ಪುತ್ರವರ್ಗಕ್ಕೆ ಸೇರಿದ ತಮ್ಮನಾದ ಮರಯ್ಯನವರ ಮಗನಾದ ಸಿದ್ಧರಾಮರನ್ನು ಉತ್ತರಾಧಿಕಾರಿಯನ್ನಾಗಿ ನೇಮಿಸಿ,ವಿದ್ಯಾಭ್ಯಾಸಕ್ಕೆಂದು ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಸೇರಿಸಿದ್ದರು.ಒಂದು ಮಠದ ಅಧಿಪತಿಯಾಗಿದ್ದರೂ ಕೂಡ,ಭಕ್ತರ ಮನೆಗೆ ಪೂಜೆಗೆ ಹೋದಾಗ ಅವರು ಕೊಡುವ ಕಾಣಿಕೆ ಬಹಳವೆಂದರೆ ಎಂಟಾಣೆ.ಹೀಗೆ ಬಂದ ಕಾಣಿಕೆಯನ್ನು ಸಂಗ್ರಹಿಸಿ ಅದು ಹತ್ತು ರೂಪಾಯಿಗಳಷ್ಟು ಕೂಡಿದಾಗ ಅದನ್ನು ಹುಬ್ಬಳ್ಳಿಯಲ್ಲಿ ಇರುವ ಸಿದ್ಧರಾಮ ದೇವರಿಗೆ ಖರ್ಚಿಗೆಂದು ಕಳಿಸುತ್ತಿದ್ದರು.ಆಗ ಅವರು ಅದನ್ನು ತೆಗೆದುಕೊಂಡು ನೇರವಾಗಿ ಸಾಹಿತ್ಯ ಭಾಂಡಾರ ಅಂಗಡಿಗೆ ಹೋಗಿ ಹೊಸದಾಗಿ ಬಂದಿರುವ ಪುಸ್ತಕಗಳನ್ನು ಕೊಂಡು ದಿನಕ್ಕೆ ಮೂರು ನಾಲ್ಕರಂತೆ ಓದಿ, ಮಠದಲ್ಲಿ ತಮ್ಮೊಂದಿಗಿರುತ್ತಿದ್ದ ಸಾಧಕರೆಲ್ಲರನ್ನೂ ಕೂಡಿಸಿಕೊಂಡು ಆ ಕೃತಿಗಳ ಸಾರವನ್ನು ಅವರಿಗೆ ಹೇಳುತ್ತಿದ್ದರು.ಇವರ ಓದಿನ ಆಸಕ್ತಿಯನ್ನು ತಿಳಿದಿದ್ದ ಸಾಹಿತ್ಯ ಭಾಂಡಾರದವರು ಹೊಸ ಪುಸ್ತಕಗಳು ಬಂದಾಗ ಕೂಡಲೇ ಇವರಿಗೆ ಮಾಹಿತಿ ಕೊಡುತ್ತಿದ್ದರು.ಇಂಥ ಓದುಗರಾದ ಶ್ರೀ ಸಿದ್ಧರಾಮ ದೇವರು ರಜಾದಿನಗಳಲ್ಲಿ ಸಿಂದಗಿಗೆ ಬಂದಾಗ ಆಗಿನ್ನೂ ಏಳೆಂಟು ವರ್ಷಗಳ ಬಾಲಕರಾಗಿದ್ದ ಚಂದ್ರಶೇಖರ ವಸ್ತ್ರದ ಅವರು ಜೊತೆಯಾಗುತ್ತಿದ್ದರು. ವಸ್ತ್ರದ ಅವರ ತಂದೆ ಶ್ರೀ ಸಿದ್ಧಲಿಂಗಯ್ಯ ನವರು ಪ್ರೌಢಾಶಾಲಾ ಮುಖ್ಯ ಗುರುಗಳು.ಇವರು ಹೊರಗಡೆಯಿಂದ ಮನೆಗೆ ಬರುವಾಗ ಮಕ್ಕಳಿಗಾಗಿ ಚಂದಮಾಮ, ಬಾಲಮಿತ್ರ, ಕೃಷ್ಣನ ಕತೆಗಳಂಥ ಪುಸ್ತಕಗಳನ್ನೇ ತರುತ್ತಿದ್ದರು.ಹೀಗಾಗಿ ಇವರಿಗೂ ಓದಿನ ಆಸಕ್ತಿ ಗಟ್ಟಿಯಾಗಿ ಬೆಳೆಯಿತು.ಸಿದ್ಧರಾಮ ದೇವರು ಸಿಂದಗಿಯಲ್ಲಿ ದಿನಾಲೂ ಸಂಜೆ ವಾಯುವಿಹಾರಕ್ಕೆ ಇವರನ್ನು ಕರೆದುಕೊಂಡು ಹೋಗಿ, ಅಲ್ಲಿ ತಾವು ಓದಿದ ಪುಸ್ತಕಗಳ ಸಾರವನ್ನು ವಿವರಿಸುತ್ತಿದ್ದರು.ಇವರೂ ಕೂಡ ತಾವು ಓದಿದ ಕತೆಗಳ ಕುರಿತಾಗಿ ಅವರಿಗೆ ಹೇಳುತ್ತಿದ್ದರು.ಇಂಥ ಸಾಹಿತ್ಯಾಸಕ್ತಿಯೇ ಇವರಿಬ್ಬರ ಬಾಂಧವ್ಯ ಗಟ್ಟಿಯಾಗಿ ಬೆಸೆಯಲು ಕಾರಣವಾಯಿತು.ಇದು ಮುಂದೆ ಬೆಳೆದು ಚಂದ್ರಶೇಖರ ಅವರು ಹೈಸ್ಕೂಲ ವಿದ್ಯಾಭ್ಯಾಸ ಮುಗಿದಾಗ ಸಿದ್ಧರಾಮ ದೇವರ ಸಾಂಗತ್ಯದಲ್ಲೇ ಇರುವ ಹಂಬಲ ಕಾರಣವಾಗಿ ಹುಬ್ಬಳ್ಳಿಯಲ್ಲಿ ಪದವಿ ಪೂರ್ವ ಅಭ್ಯಾಸ ಆರಂಭ ಮಾಡಿದರು.ಆಗ ಸಿದ್ಧರಾಮ ದೇವರು ತಮ್ಮ ಆತ್ಮೀಯ ಗೆಳೆಯರಾದ ಈಗಿನ ನಿಡಸೋಸಿ,ಆನಂದಪುರಂ ಹಾಗೂ ಶಿರಹಟ್ಟಿ ಜಗದ್ಗುರುಗಳವರೊಂದಿಗೆ ಇವರು ವಾಸಿಸುತ್ತಿದ್ದ ಕೋಣೆಗೆ ಬಂದು ಸಾಹಿತ್ಯದ ವಿಚಾರಗಳ ಜೊತೆಗೆ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ಮುಂದೆ ಸಿದ್ಧರಾಮ ದೇವರು ಗದುಗಿನ ಜಗದ್ಗುರು ತೋಂಟದಾರ್ಯ ಮಠದ ಉತ್ತರಾಧಿಕಾರಿಯಾಗಿ ಬಂದ ಮೇಲೆ ಇವರೂ ಸಹ ಒಬ್ಬರೇ ಅಲ್ಲಿರಲಾಗದೇ ಬಿ.ಎ. ಪದವಿ ಅಭ್ಯಾಸಕ್ಕಾಗಿ ಗದುಗಿಗೆ ಬಂದು ಜಗದ್ಗುರುಗಳವರೊಂದಿಗೆ ಒಂದು ವರ್ಷ ಅವರ ಮಠದಲ್ಲೇ ವಾಸವಾಗಿ ರಾತ್ರಿಯಿಡೀ ಮಠದೊಳಗಿನ ನೀರಿನ ಬಾವಿಯ ಪಕ್ಕದ ಕಟ್ಟೆಯ ಮೇಲೆ ಕುಳಿತು ಸಾಹಿತ್ಯ ಸಂವಾದ ಮಾಡುತ್ತಿದ್ದರು.ಹೀಗೆ ವಸ್ತ್ರದ ಸರ್ ಅವರು ಜಗದ್ಗುರುಗಳವರ ಕೈಯ ಕೂಸಾಗಿ,ಅವರ ಮಾನಸ ಪುತ್ರರಾಗಿ ಅವರ ಪ್ರೀತಿ ಅಂತಃಕರಣಗಳನ್ನುಂಡೇ ಬದುಕತೊಡಗಿದರು.ಆದರೆ ಜೀವನ ಚಲನಶೀಲವಾದುದು, ಹಾಗಾಗಿ ಬದಲಾವಣೆಯ ಸಹಜತೆಯಿಂದಾಗಿ ಉನ್ನತ ಶಿಕ್ಷಣ ಮತ್ತು ಉದ್ಯೋಗ ನಿಮಿತ್ತವಾಗಿ ಧಾರವಾಡ, ವಿಜಯಪುರ, ದಕ್ಷಿಣ ಕನ್ನಡ ಹಟ್ಟಿ ಚಿನ್ನದ ಗಣಿಯೇ ಮೊದಲಾದೆಡೆಗಳಲ್ಲಿ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ,ಮಧ್ಯದಲ್ಲಿ ಐದಾರು ವರ್ಷ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಮತ್ತೇ ಮರಳಿ ಉಪನ್ಯಾಸಕ ವೃತ್ತಿಗೆ ಬಂದು ಬೇರೆ ಭಾಗದಲ್ಲಿ ಬದುಕಲು ಮನಸಾಗದೇ ಪೂಜ್ಯರ ಸನ್ನಿಧಾನವನ್ನೇ ಬಯಸಿ ಗದುಗಿನಲ್ಲೇ ನೆಲೆಯಾಗಿ ಗದಗ ಮತ್ತು ಸುತ್ತಲಿನ ಊರುಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರೂ ಖಾಯಂ ಆಗಿ ಗದಗ ನಿವಾಸಿಗಳೇ ಆಗಿದ್ದಾರೆ.
ಗದುಗಿನ ಶ್ರೀಮಠ ವಸ್ತ್ರದ ಸರ್ ಅವರ ಸಾಹಿತ್ಯ ಸೇವೆಯ ಪುಣ್ಯ ಭೂಮಿ.ಪೂಜ್ಯರ ಮಹತ್ವಾಕಾಂಕ್ಷೆಯ ಲಿಂಗಾಯತ ಅಧ್ಯಯನ ಸಂಸ್ಥೆಯ ಹೊಣೆಗಾರಿಕೆ ಇವರಿಗೊದಗಿದ ಸುಕೃತ ಫಲ.ಈ ನಾಡಿನ ಅಪರೂಪದ ವಿದ್ವಾಂಸರಾದ ಡಾ.ಎಂ.ಎಂ.ಕಲಬುರಗಿಯವರು ಈ ಅಧ್ಯಯನ ಸಂಸ್ಥೆಯ ಮಾರ್ಗದರ್ಶಕರೂ ಹೌದು,ಮುಖ್ಯಸ್ಥರೂ ಹೌದು.ಆದರೂ ಅದರ ಹೊಣೆಗಾರಿಕೆ ಚಂದ್ರಶೇಖರ ವಸ್ತ್ರದ ಸರ್ ಅವರದು.ಪೂಜ್ಯರ ನೇತೃತ್ವ,ಶಿವನಗೌಡರ ಸಹಾಯ,ಡಾ.ಕಲಬುರಗಿಯವರ ಮಾರ್ಗದರ್ಶನದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆಯ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿದ ವಸ್ತ್ರದ ಸರ್ ಅವರು, ‘ಈ ಪ್ರಕಟಣಾ ಸಂಸ್ಥೆಯಲ್ಲಿ ಪೂಜ್ಯರು ಸೇರಿ ನಾಲ್ಕುಜನ ದುಡಿದರೂ ಯಾರು ಯಾರೆಂಬ ಭಾವನೆ ನಮಗ್ಯಾರಿಗೂ ಇರಲಿಲ್ಲ’ ಎಂಬ ಮಾತನ್ನು ಮನದುಂಬಿ ಹೇಳುತ್ತಾರೆ.ಪೂಜ್ಯರ ಪಟ್ಟಾಧಿಕಾರದ ರಜತ ಮಹೋತ್ಸವದ ಅಂಗವಾಗಿ ಪ್ರಕಟಗೊಂಡ ಇಪ್ಪತ್ತೈದು ಪುಸ್ತಕಗಳ ಸಂಪಾದನೆಯ ಹೊಣೆಗಾರಿಕೆ ಇವರ ಜೀವನದ ಬಹುಮುಖ್ಯವಾದ ಘಟ್ಟ; ಅಷ್ಟೇ ಅಲ್ಲ ಆ ಸಂದರ್ಭದಲ್ಲಿ ಕನ್ನಡದಲ್ಲಿ ಏಕಕಾಲಕ್ಕೆ ಇಷ್ಟೊಂದು ಕೃತಿಗಳು ಪ್ರಕಟಗೊಂಡ ಮೊದಲ ದಾಖಲೆಯೂ ಹೌದು.ಈ ಸಂಸ್ಥೆ ಇಲ್ಲಿಯವರೆಗೆ ಆರುನೂರಕ್ಕೂ ಹೆಚ್ಚು ಅತ್ಯಮೂಲ್ಯವಾದ ಕೃತಿಗಳನ್ನು ಪ್ರಕಟಿಸಿದೆ.ಅದರ ಹಿಂದೆ ವಸ್ತ್ರದ ಸರ್ ಅವರ ಭಕ್ತಿಪೂರ್ವಕವಾದ ಸೇವೆ ತುಂಬಿನಿಂತಿದೆ.
ವಸ್ತ್ರದ ಸರ್ ಅವರ ಸಾಹಿತ್ಯಾಭಿರುಚಿಗೆ ಮುಖ್ಯ ಪ್ರೇರಣೆಯಾದಂತೆ, ಸ್ವಂತ ಸಾಹಿತ್ಯ ರಚನೆಗೂ ಮುಖ್ಯ ಪ್ರೇರಣೆ ಪೂಜ್ಯರೇ ಆಗಿದ್ದಾರೆ.ಪೂಜ್ಯರು ಮಠಕ್ಕೆ ಬಂದ ಹೊಸತರಲ್ಲಿ ಇಂಥ ಮೂರು ಜನರನ್ನು ಕಟ್ಟಿಕೊಂಡು ಅವರಲ್ಲಿ ಬರೆವಣಿಗೆಗೆ ಶಕ್ತಿಯನ್ನು ತುಂಬಿದರು.ಬ್ಯಾರಿಸ್ಟರ್ ಎಂ.ಎಸ್.ಸರದಾರ ಅವರ ಕುರಿತಾದ ಜೀವನ ಚರಿತ್ರೆಯನ್ನು ಬರೆಸುವ ಮೂಲಕ ಇವರ ಕೃತಿ ರಚನಾ ಮಣಿಹಕ್ಕೆ ನಾಂದಿ ಹಾಡಿದರು.ಜೀವನ ಚರಿತ್ರೆ ರಚನೆಯಿಂದ ಆರಂಭವಾದ ಇವರ ಸಾಹಿತ್ಯ ಬರೆವಣಿಗೆ ವೈವಿಧ್ಯತೆಯೊಂದಿಗೆ ವೈಶಾಲ್ಯತೆಯನ್ನೂ ಪಡೆದುಕೊಂಡಿತು.ಕುಲಕ್ಕೆ ತಿಲಕ ಮಾದಾರ ಚೆನ್ನಯ್ಯ,ಕನ್ನಡ ಜಗದ್ಗುರು,ಹೆಚ್.ಎನ್.ಹೂಗಾರದಂಥ ಜೀವನ ಚರಿತ್ರೆ ಕೃತಿಗಳು ಒಂದು ಉತ್ತಮ ಜೀವನ ಚರಿತ್ರೆಯ ಬರವಣಿಗೆಗೆ ಅತ್ಯುತ್ತಮ ಮಾದರಿಗಳು. ಇವರು ಬರೆದ ಶರಣ ನುಲಿಯ ಚಂದಯ್ಯ ನಾಟಕ ಬಹಳ ಅಪರೂಪದ್ದು.ಇದು ಗದುಗಿನ ಶ್ರೀ ಮಠದಲ್ಲೇ ಪ್ರದರ್ಶನಗೊಂಡಿದ್ದು, ಚೆನ್ನಬಸವಣ್ಣನ ಪಾತ್ರದಲ್ಲಿ ಸ್ವತಃ ಪೂಜ್ಯ ಜಗದ್ಗುರುಗಳವರು ಅಭಿನಯಿಸಿದರು.ನಾಡಿನಾದ್ಯಂತ ಅನೇಕ ಪ್ರದರ್ಶನಗಳನ್ನು ಕಂಡು ಬಹಳ ಪ್ರಸಿದ್ಧವೂ ಆಯಿತು.ಇದರ ಜೊತೆಗೆ ಶರಣರ ನಾಟಕಗಳು ಸಹ ಇವರ ಅಮೂಲ್ಯ ಕೊಡುಗೆ ಯಾಗಿದೆ.ಇವರು ಬರೆದ ಬಸವೇಶ್ವರ ಕೃತಿ ಇಂಗ್ಲೀಷ್ ಹಾಗೂ ಮರಾಠಿ ಭಾಷೆಗಳಿಗೆ ಅನುವಾದಗೊಂಡಿದೆ.ಜೊತೆಗೆ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವೂ ಆಗಿದೆ.ಕನ್ನಡ ಜಗದ್ಗುರು ಮೊದಲಾದ ಕೃತಿಗಳಿಗೆ ಡಿ.ಎಸ್.ಕರ್ಕಿ, ಪಂಚಾಕ್ಷರಿ ಗವಾಯಿ, ಸಾಹಿತ್ಯ ಪರಿಷತ್ತು ಪ್ರಶಸ್ತಿಗಳು ಸಂದಿವೆ.ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನದಿಂದ ತಾಯಿಯ ಕುರಿತಾಗಿಯೇ ಕನ್ನಡ ಕಾವ್ಯದಲ್ಲಿ ತಾಯಿ, ಕಥೆಗಳಲ್ಲಿ ತಾಯಿ, ನಾಟಕಗಳಲ್ಲಿ ತಾಯಿ,ಕಾದಂಬರಿಗಳಲ್ಲಿ ತಾಯಿ ಕೃತಿಗಳು ಇವರ ಸಂಪಾದಕತ್ವದಲ್ಲಿ ಪ್ರಕಟಗೊಂಡಿದ್ದು,ಈಗ ಜಾನಪದ ಸಾಹಿತ್ಯದಲ್ಲಿ ತಾಯಿ ಕೃತಿ ಪ್ರಕಟಣೆಗೆ ಸಿದ್ಧಗೊಂಡಿದೆ.ಆಕಾಶವಾಣಿ ಚಿಂತನೆಗಳ ಸಂಕಲನ ಬೆಳಗು,ಶರಣ ಸಾಹಿತ್ಯ,ವಚನ ಸಾಹಿತ್ಯದಂಥ ಮಹತ್ವದ ಕೃತಿಗಳೊಂದಿಗೆ ನೀಲಾಂಬಿಕೆ,ನಾದಲೀಲೆ ಮೊದಲಾದ ಅನೇಕ ಕಿರು ವಿಮರ್ಶಾ ಕೃತಿಗಳು,ಸುಮಾರು ಮೂವತ್ತು ಸಂಪಾದಿತ ಕೃತಿಗಳು ಹೀಗೆ ಸುಮಾರು ಅರವತ್ತು ಕೃತಿಗಳು ಇವರ ಲೇಖನಿಯಿಂದ ರೂಪುಗೊಂಡಿವೆ.ಅಕ್ಕಮಹಾದೇವಿ ಕುರಿತಾದ ಮುಕ್ತಕಗಳು,ಒಂದು ಕವನ ಸಂಕಲನ,ಒಂದು ಕಥಾ ಸಂಕಲನ,ಸಿಂದಗಿಯ ಪಟ್ಟಾಧ್ಯಕ್ಷರು ಕೃತಿಗಳು ಅಚ್ಚಿನಲ್ಲಿವೆ. ಇದರೊಂದಿಗೆ ಅನೇಕ ಕೃತಿಗಳ ವಿಮರ್ಶಕರಾಗಿ,ಅನೇಕ ಪ್ರಶಸ್ತಿಗಳಿಗಾಗಿ ಆಯ್ಕೆಗಾರರಾಗಿ ಸಾಹಿತ್ಯ ಸೇವೆಗೈದಿದ್ದಾರೆ.ಇದೆಲ್ಲದಕ್ಕೂ ಮುಖ್ಯವಾಗಿ ಬೇಕಾದದ್ದು ಅಧ್ಯಯನ ಬಲ.ಅದಕ್ಕಾಗಿ ಸಾಹಿತ್ಯ,ಶಾಸ್ತ್ರ,ಸಿದ್ಧಾಂತ,ಧರ್ಮವೇ ಮೊದಲಾದ ಕ್ಷೇತ್ರಗಳಿಗೆ ಸೇರಿದ ಎಂಟು ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಓದಿಗಾಗಿ ಖರೀದಿಸಿದ್ದಾರೆ.ವಿಮರ್ಶೆ, ಪ್ರಶಸ್ತಿಯ ಆಯ್ಕೆ, ಮತ್ತು ಪ್ರೀತಿಯ ಓದಿಗಾಗಿ ಎಂದು ಬಂದ ಸುಮಾರು ಹನ್ನೆರಡು ಸಾವಿರ ಪುಸ್ತಕಗಳು ಇವರಲ್ಲಿವೆ.ಇವುಗಳಲ್ಲಿ ಐದು ಸಾವಿರದಷ್ಟು ಪುಸ್ತಕಗಳನ್ನು ಶ್ರೀಮಠ ಹಾಗೂ ಇತರೆ ಕಾಲೇಜುಗಳ ಗ್ರಂಥಾಲಯಗಳಿಗಾಗಿ ದೇಣಿಗೆ ನೀಡಿದ್ದಾರೆ.ಈಗ ಇನ್ನುಳಿದ ಹದಿನೈದು ಸಾವಿರ ಪುಸ್ತಕಗಳು ಸಾರ್ವಜನಿಕರಿಗೆ ಬಳಕೆಯಾಗಲೆಂದು ಸ್ವತಃ ಗ್ರಂಥಾಲಯವನ್ನು ಸ್ಥಾಪಿಸಿದ್ದಾರೆ.ಈ ಗ್ರಂಥಾಲಯದ್ದೇ ಒಂದು ರೋಚಕ ಕಥೆಯಾಗುತ್ತದೆ.
ಪ್ರೊ.ವಸ್ತ್ರದ ಸರ್ ಅವರು ೨೦೧೭ ರ ಮೇ ೩೧ ರಂದು ನಿವೃತ್ತರಾದರು.ವಿದ್ಯಾರ್ಥಿ ದೆಸೆಯಿಂದ ವೃತ್ತಿಯ ಅವಧಿಯವರೆಗೆ ಅಧ್ಯಯನ ಮತ್ತು ಅಧ್ಯಾಪನಗಳಿಗೆ ಮೀಸಲಾಗಿದ್ದ ಬದುಕು ನಿವೃತ್ತಿಯ ನಂತರ ಅದರಿಂದಾದ ಅನುಭವಕ್ಕೆ ಇನ್ನಷ್ಟು ಸತ್ವ ಮತ್ತು ಶಕ್ತಿ ತುಂಬಲೆಂದು ದೇಶ ಸುತ್ತುವ ನಿರ್ಧಾರ ಮಾಡಿ,ಮೊದಲ ಹಂತದಲ್ಲಿ ಭಾರತ ದೇಶವನ್ನು ಸುತ್ತಿ ,ಎರಡನೇ ಸುತ್ತಿನಲ್ಲಿ ಯುರೋಪ್ ಪ್ರವಾಸ ಕೈಗೊಂಡು ಅಲ್ಲಿನ ವಿಶೇಷತೆಗಳನ್ನೆಲ್ಲ ಅಲ್ಲಿಂದಲೇ ಆ ಕೂಡಲೇ ನಮ್ಮಂಥವರೊಂದಿಗೆ ಹಂಚಿಕೊಳ್ಳುತ್ತಿದ್ದರು.ಪ್ರವಾಸದಿಂದ ಮರಳಿದ ಮೇಲೆ ಪೂಜ್ಯರ ಆದೇಶದಂತೆ ಶ್ರೀ ಮಠದ ಶಿವಾನುಭವದಲ್ಲಿ ಆ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾಗ ,ಇಂಗ್ಲೆಂಡ್ ದೇಶದಲ್ಲಿ ಕಂಡ ಗ್ರಂಥಾಲಯವೊಂದರ ವಿಶೇಷತೆಯ ಬಗ್ಗೆ ತಿಳಿಸುತ್ತಾ ಪೂಜ್ಯರು ಶ್ರೀಮಠದಲ್ಲಿ ಅಂಥದ್ದೊಂದು ಗ್ರಂಥಾಲಯವನ್ನು ಮಾಡಬೇಕೆಂದು ವಿನಂತಿಸಿಕೊಂಡರು.ಪೂಜ್ಯರು ಅದಕ್ಕೆ ಅಲ್ಲಿಯೇ ಸಮ್ಮತಿಸಿದರು.ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ; ನಮ್ಮೆಲ್ಲರ ಆಶಾಕಿರಣವಾಗಿದ್ದ ಜಗದ್ಗುರುಗಳವರು ಆಕಸ್ಮಿಕವಾಗಿ ಲಿಂಗೈಕ್ಯರಾದರು.ಹೀಗಾಗಿ ಬಹುತೇಕ ಕನಸುಗಳ ಸಾಕಾರಕ್ಕೆ ಬಹುದೊಡ್ಡ ಆಘಾತವಾಯಿತು.ಪೂಜ್ಯರ ಅಗಲಿಕೆಯಿಂದ ಅಕ್ಷರಶಃ ಆಘಾತಕ್ಕೊಳಗಾಗಿದ್ದ ನಮ್ಮ ವಸ್ತ್ರದ ಸರ್ ಅವರಿಗೆ ನಿರಾಶೆಯೂ ಆಗಿತ್ತು.ಅಷ್ಟೇ ಅಲ್ಲ ಪೂಜ್ಯರು ಲಿಂಗೈಕ್ಯರಾದ ಬಹುದಿನಗಳವರೆಗೆ ಇವರು ಮನಸ್ಸು ತಾಳದೇ ಶ್ರೀ ಮಠಕ್ಕೆ ಹೋಗುವದನ್ನೂ ಬಿಟ್ಟರು.ಆದರೇನು ಪೂಜ್ಯರು ಆಗಾಗ ಹೇಳುತ್ತಿದ್ದ “ಭಗವಾನ್ ಕೆ ಮಂದಿರ ಮೇ ದೇರ್ ಹೈ,ಮಗರ್ ಅಂಧೇರಾ ನಹಿ”ಎಂಬ ಮಾತು ಸತ್ಯವಾಗುವ ಕಾಲ ಕೂಡಿ ಬಂತು.ಜಗವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೋನಾದಿಂದಾಗಿ ಜಗದ ಜನರೆಲ್ಲ ಗೃಹಬಂಧಿಗಳಾದರು.ಇದು ಕೆಲವರ ಮನದ ಮೇಲೆ ಪರಿಣಾಮ ಬೀರಿತು.ಇದರಂತೆ ನಮ್ಮ ವಸ್ತ್ರದ ಸರ್ ಅವರು ಸಹ ಸುಮ್ಮನೆ ಕೂಡಲಾಗದೇ ಖಿನ್ನತೆಗೊಳಗಾದರು.ಆಗ ಏನಾದರೂ ಮಾಡಬೇಕೆಂಬ ವಿಚಾರ ಮೊಳಕೆ ಯೊಡೆದಾಗ ಮಠದಲ್ಲಿ ಗ್ರಂಥಾಲಯ ಸ್ಥಾಪಿಸಬೇಕೆಂಬ ಪೂಜ್ಯರ ಆ ಯೋಜನೆಯನ್ನು ಸಾಕಾರಗೊಳಿಸುವ ಆಲೋಚನೆ ಚಿಗುರೊಡೆಯಿತು.ಹಾತಲಗೇರಿ ನಾಕಾ ಹತ್ತಿರದ ಆನಂದಾಶ್ರಮ ರಸ್ತೆಯಲ್ಲಿರುವ ತಮ್ಮ ಸ್ವಂತ ಮನೆ ‘ಬೆಳಗು’ವಿನ ೧೬/೪೦ ಅಳತೆಯ ಖಾಲಿ ನಿವೇಶನದಲ್ಲಿ ಒಂಭತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಂಥಾಲಯಕ್ಕಾಗಿ ಕಟ್ಟಡ ನಿರ್ಮಾಣ ಆರಂಭವಾಯಿತು.ಅದರ ಜೊತೆಗೆ ಬಟ್ಟೆ ಮತ್ತು ಪೆಟ್ಟಿಗೆಗಳಲ್ಲಿ ಬಂಧಿಯಾಗಿದ್ದ ಪುಸ್ತಕಗಳೆಲ್ಲವನ್ನು ಹೊರತೆಗೆದು ಕಾವ್ಯ,ಕತೆ,ನಾಟಕ,ಕಾದಂಬರಿ,ವಚನ,ದಾಸ ಸಾಹಿತ್ಯ, ಸಂಶೋಧನೆ, ವಿಮರ್ಶೆ,ಶಾಸ್ತ್ರ….ಹೀಗೆ ಸಾಹಿತ್ಯದ ವಿವಿಧ ಪ್ರಕಾರಕ್ಕೆ ಸೇರಿದ ಕೃತಿಗಳನ್ನು ವಿಂಗಡಿಸಿ, ಗ್ರಂಥಾಲಯದಲ್ಲಿ ಅವುಗಳನ್ನು ಕೂಡಿಸುವ ಕಪಾಟುಗಳನ್ನು ಸಿದ್ಧಗೊಳಿಸಿಕೊಳ್ಳುವಷ್ಟರಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿತು.ಕೃತಿಗಳೆಲ್ಲವನ್ನು ಅದರಲ್ಲಿ ಓರಣವಾಗಿ ಜೋಡಿಸಲಾಯಿತು.ಆದರೆ ಇದು ಯಾಕಾಗಿ ಎಂಬುದನ್ನು ಸ್ಪಷ್ಟಗೊಳಿಸಲು ಅದಕ್ಕೆ ಅರಿವಿನ ಗುರುವಾದ ಪೂಜ್ಯರ ಪುಸ್ತಕ ಪ್ರೀತಿ ಮತ್ತು ಸಾಕಾರಗೊಳ್ಳಬೇಕಾದ ಅವರ ಕನಸಿನ ಪ್ರತೀಕವೂ ಆದ ಈ ಗ್ರಂಥಾಲಯಕ್ಕೆ” ಶ್ರೀ ಸಿದ್ಧಲಿಂಗ ಅರಿವಿನ ಮನೆ” ಎಂದು ಹೆಸರಿಟ್ಟು, ಅದನ್ನು ಪೂಜ್ಯರ ದ್ವಿತೀಯ ಸ್ಮರಣೋತ್ಸವದ ದಿನವಾದ ದಿನಾಂಕ:೨೦-೧೦-೨೦೨೦ ರಂದು ಅವರ ಪ್ರೀತಿಯ ಇಬ್ಬರು ಶಿಷ್ಯರು, ಅವರಲ್ಲೊಬ್ಬರು ಅವರ ಜಗದ್ಗುರು ಪೀಠದ ಉತ್ತರಾಧಿಕಾರಿಗಳು,ಇನ್ನೊಬ್ಬರು ಅವರ ಶಿರೋಳ ಶಾಖಾ ಮಠದ ಶ್ರೀಗಳವರ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳಿಸಿದರು.
ಪ್ರೊ.ವಸ್ತ್ರದ ಸರ್ ಅವರ ಈ ಕಾರ್ಯದ ಹಿಂದೆ ನಾವು ಮುಖ್ಯವಾಗಿ ಎರಡು ವಿಚಾರಗಳನ್ನು ಗಮನಿಸಬೇಕು.
೧.ಇವರು ಬಾಲ್ಯದಿಂದಲೂ ಪೂಜ್ಯರ ಪ್ರಭಾವ ವಲಯದಲ್ಲಿ ಬೆಳೆದು, ಅರಿವನ್ನು ಗಳಿಸುವುದರೊಂದಿಗೆ ಅದನ್ನು ಲೋಕಕ್ಕೆ ಬೆಳಕಿನಂತೆ ಹಂಚಬೇಕೆಂಬ ಹಂಬಲ.
೨.ಶುದ್ಧ ವಿರಾಗಿ,ಸನ್ಯಾಸಿಯಾದ ಗುರುವಿನ ನೆರಳಲ್ಲಿ ಬಾಲ್ಯದಿಂದಲೂ ಬೆಳೆದ ಇವರಲ್ಲಿ ತಾವೊಬ್ಬ ಪ್ರಾಪಂಚಿಕರಾದರೂ ಕೂಡ ಲೌಕಿಕವನ್ನು ಸನ್ಯಾಸದ ನೆಲೆಯಲ್ಲೇ ಅನುಸರಿಸುವ ಸ್ವಭಾವವನ್ನು ನಾವಿಲ್ಲಿ ಸ್ಪಷ್ಟವಾಗಿ ಕಾಣುತ್ತೇವೆ.ಸಾಮಾನ್ಯವಾಗಿ ಪ್ರಾಪಂಚಿಕರೆಲ್ಲರೂ ತಾವು ಉಳಿಸಿಕೊಂಡ ಅಥವ ಸಂಪಾದಿಸಿದ ಧನವನ್ನು ಇನ್ನಷ್ಟು ಬೆಳೆಸಿಕೊಳ್ಳಬೇಕೆಂಬ ಹಂಬಲದಿಂದ ಆಸ್ತಿಯ ರೂಪದಲ್ಲೋ, ಬ್ಯಾಂಕ್ ಠೇವಣಿಯ ರೂಪದಲ್ಲೋ ಹೂಡಿಕೆ ಮಾಡುವುದನ್ನು ನಾವು ಬಹುತೇಕವಾಗಿ ಎಲ್ಲರಲ್ಲೂ ಕಾಣುತ್ತೇವೆ.ಆದರೆ ವಸ್ತ್ರದ ಸರ್ ಅವರು ಗುರುಗಳ ಪ್ರಭಾವ ಕಾರಣವಾಗಿಯೇ ಯಾವದೇ ಆರ್ಥಿಕ ಲಾಭವಿಲ್ಲದೇ ಸಮಾಜದ ಉಪಯೋಗಕ್ಕಾಗಿ ಹೂಡಿಕೆಮಾಡಿರುವುದು ಇಲ್ಲಿ ಬಹಳ ಮುಖ್ಯ ಮತ್ತು ಅಗಾಧವೆನಿಸುತ್ತದೆ.ಒಂದು ಸರ್ಕಾರ,ಮಠಗಳಂಥ ಸಾರ್ವಜನಿಕ ಸಂಸ್ಥೆಗಳು ಮಾಡುವ ಕಾರ್ಯವನ್ನು ಸಂಸಾರದ ಭಾರವುಳ್ಳ,ಯಾವುದೇ ತೆರನಾದ ಬೇರೆ ಮೂಲಗಳ ಆದಾಯವಿಲ್ಲದ ಒಬ್ಬ ನಿವೃತ್ತ ಉಪನ್ಯಾಸಕ ಮಾಡಿರುವುದು ನಿಜಕ್ಕೂ ಒಂದು ಬೆರಗೇ ಸರಿ.
ವಸ್ತ್ರದ ಸರ್ ಅವರು,ನಮಗೀಗಾಗಲೇ ಗೊತ್ತಿರುವಂತೆ ಯಾವ ವಿಶ್ವವಿದ್ಯಾಲಯ ಪ್ರಾಧ್ಯಕರಿಗೂ ಕಡಿಮೆ ಇಲ್ಲದವರು.ವಿದ್ವತ್ತು, ಸಾಮರ್ಥ್ಯ, ವರ್ಚಸ್ಸು ಎಲ್ಲವನ್ನೂ ಗಳಿಸಿಕೊಂಡಿರುವುದರ ಜೊತೆಗೆ ಡಾ.ಕಲಬುರಗಿಯವರಂಥ ವಿದ್ವಾಂಸರ ಒಡನಾಟ ಉಳ್ಳವರು.ಜಗದ್ಗುರುಗಳ ಬಲವುಳ್ಳವರು. ಆದಾಗ್ಯೂ ಅವರು ಇದೆಲ್ಲವನ್ನು ತಮ್ಮ ಸ್ವಾರ್ಥಕ್ಕೆ ಅಂದರೆ ಉನ್ನತ ಹುದ್ದೆ,ಸ್ಥಾನಮಾನಗಳಿಗಾಗಿ ಬಳಸಿಕೊಳ್ಳಲಿಲ್ಲ; ಅದಕ್ಕಾಗಿ ಅಪೇಕ್ಷಿಸಲೂ ಇಲ್ಲ.ಇದು ಇವರ ಸನ್ಯಾಸತನಕ್ಕೆ ಬಹುದೊಡ್ಡ ಸಾಕ್ಷಿ.ತಮಗೆ ಬದುಕಿನಲ್ಲಿ ಅಂತಃಕರಣದ ತಾಯಿಯಾಗಿ,ಕುಟುಂಬದ ಹಿತೈಷಿಯಾಗಿ,ಅರಿವಿನ ಗುರುವಾಗಿ ಬದುಕಿನ ಪರಿಪೂರ್ಣತೆ ಮತ್ತು ಸಾರ್ಥಕತೆಗೆ ಕಾರಣರಾದ ಪೂಜ್ಯ ಲಿಂ.ಜಗದ್ಗುರುಗಳವರ ಗ್ರಂಥಾಲಯದ ಆಶಯವನ್ನು ಸಾಕಾರಗೊಳಿಸುವ ಕಾರಣವಾಗಿಯೇ ಸ್ವಂತ ಖರ್ಚಿನಲ್ಲಿ ಈ ಗ್ರಂಥಾಲಯ ನಿರ್ಮಿಸಿದ್ದಾರೆ.ಸಾರ್ವಜನಿಕರು ಪ್ರತಿದಿನ ಬೆಳಿಗ್ಗೆ ೮ ರಿಂದ ೧೨ ರವರೆಗೆ, ಸಂಜೆ ೪ರಿಂದ ರಾತ್ರಿ ೮ ರವರೆಗೆ ಇಲ್ಲಿಗೆ ಬಂದು ಅಧ್ಯಯನ ಮಾಡಬಹುದಾಗಿದೆ.ಇದರ ನಿರ್ವಹಣೆಗೆ ಯಾವ ಉದ್ಯೋಗಿಯೂ ಇಲ್ಲ,ಓದುಗರೇ ಇಲ್ಲಿ ಸ್ವತಂತ್ರರು ಎಂಬುದು ಕೂಡ ಇನ್ನೊಂದು ವಿಶೇಷ.
ಇಂಥ ವಿಶೇಷವಾದ,ಜಗದ ಸುಖಮಯ ಬದುಕಿಗಾಗಿ ಯಾವದೇ ಪ್ರತಿಫಲಾಪೇಕ್ಷೆ ಮತ್ತು ಭೇದಗಳಿಲ್ಲದೆ ಸೂರ್ಯ ಬೆಳಕನ್ನು,ಗುರು ಅರಿವನ್ನು ಹಂಚುವಂತೆ ನಮ್ಮ ವಸ್ತ್ರದ ಗುರುಗಳವರು ಲಿಂ.ಪೂಜ್ಯ ಜಗದ್ಗುರುಗಳರ ಪ್ರತಿನಿಧಿಯಾಗಿ ಇಂಥ ಕಾರ್ಯವನ್ನು ನಿರ್ವಹಿಸಿದ್ದಾರೆ.ಗುರುವಿನ ಋಣ ಮತ್ತು ಸಮಾಜದ ಋಣವನ್ನು ತೀರಿಸುವ ಮಾರ್ಗವನ್ನು ಹಿಡಿದು ಅವರು ಕೈಗೊಂಡಿರುವ ಈ ಕಾರ್ಯದಿಂದಾಗಿ ಈಗ ಸಮಾಜವೂ ಅವರ ಋಣವನ್ನು ತೀರಿಸುವ ದಿಸೆಯಲ್ಲಿ ಈ ಗ್ರಂಥಾಲಯವನ್ನು ಶುದ್ಧಾಂತಕರಣದಿಂದ ,ಕಾಳಜಿಯಿಂದ ಸದ್ಬಳಕೆ ಮಾಡಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ.ಈ ದಿಸೆಯಲ್ಲಿ ನಾವೆಲ್ಲರು ಪ್ರೊ.ಚಂದ್ರಶೇಖರ ವಸ್ತ್ರದ ಸರ್ ಅವರನ್ನು ಅಭಿನಂದಿಸುತ್ತ,ಅವರ ಕಳಕಳಿಯ ಈ ಗ್ರಂಥಾಲಯವನ್ನು ಯಾವುದೇ ತೊಂದರೆಯಾಗದಂತೆ ಸದ್ಬಳಕೆ ಮಾಡಿಕೊಳ್ಳುತ್ತೇವೆಂಬ ಮಾತನ್ನು ಬದ್ಧತೆ ಪೂರ್ವಕವಾಗಿ ಅವರಿಗೆ ತೋರಿಸಿಕೊಡಬೇಕಾಗಿದೆ.ಜೊತೆಗೆ ಗುರು ಸಿದ್ಧಲಿಂಗರ ಕರುಣೆಯಿಂದ ಇಂಥವರ ಸಂತತಿ ಈ ಸಮಾಜಕ್ಕೆ ಎಲ್ಲೆಡೆಯೂ ಉಂಟಾಗಲಿ ಎಂದೂ ಆಶಿಸಬೇಕಾಗಿದೆ.
ಗುರು ಹಚ್ಚಿದ ದೀಪ….ಒಳ್ಳೆಯ ಶೀರ್ಷಿಕೆ ಸರ್..ಚೆನ್ನಾಗಿ..ವಿಸ್ತ್ರತ ವಾಗಿ…ವಸ್ತ್ರದವರ ಬದುಕು ಹಾಗೂ ಕಾರ್ಯಚಟುವಟಿಕೆಗಳನ್ನು ಪರಿಚಯಿಸುವ ಯತ್ನ ಡಾ.ಶಶಿಕಾಂತವರು ಮಾಡಿದ್ದಾರೆ..ಲೇಖನ ಸೊಗಸಾಗಿ ಮೂಡಿ ಬಂದಿದೆ ಸರ್…ಇಂತಹ ಮೌಲ್ಯಯುತ ಬರಹ ಪ್ರಕಟಿಸಿದ ತಮಗೆ ಅಭಿನಂದನೆಗಳು