ಮಸ್ಕಿಯ ಸೋಮನಾಥ ನಗರ ನಿವಾಸಿಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯ
e- ಸುದ್ದಿ ಮಸ್ಕಿ
ಪಟ್ಟಣದ ಸೋಮನಾಥ ನಗರದಲ್ಲಿ ವಾಸಿಸುವ ಸುಮಾರು ೪೦೦ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ಪುರಸಭೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಹನುಮಂತಪ್ಪ ವೆಂಕಟಾಪೂರು ಮಾತನಾಡಿ ಸೋಮನಾಥ ನಗರದಲ್ಲಿ ಕಳೆದ ೩೦ ವರ್ಷಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮುಸ್ಲಿಂ ಸೇರಿದಂತೆ ಎಲ್ಲಾ ವರ್ಗದ ನಿರ್ಗತಿಕ ೪೦೦ಕ್ಕೂ ಅದಿಕ ಬಡ ಕುಟುಂಬಗಳ ಜನರು ಟಿಬಿಪಿ ಸರ್ಕಾರಿ ಸರ್ವೆ.ನಂ. ೨೨೩, ೨೨೪ರಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಅಲ್ಲದೆ ಇಲ್ಲಿ ಎಲ್ಲಾ ರೀತಿಯ ಸರ್ಕಾರಿ ಸವಲತ್ತುಗಳನ್ನು ನೀಡುತ್ತಿದ್ದಾರೆ. ಆದರೆ ಹಕ್ಕು ಪತ್ರ ನೀಡುತ್ತಿಲ್ಲ. ಕೂಡಲೇ ಪುರಸಭೆ ಅಧಿಕಾರಿಗಳು ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿದರು.
ಭರವಸೆ ಹುಸಿ: ಕಳೆದ ಹಲವು ಚುನಾವಣೆ ಸಂದರ್ಭಗಳಲ್ಲಿ ರಾಜಕೀಯ ನಾಯಕರು ತಮ್ಮ ಮತಗಳಿಗಾಗಿ ಹಕ್ಕು ಪತ್ರ ನೀಡುತ್ತೇವೆ ಎಂದು ಹೇಳಿ ಮತಗಳನ್ನು ಹಾಕಿಸಿಕೊಂಡು ಈವರೆಗೂ ಹಕ್ಕು ಪತ್ರಗಳನ್ನು ನೀಡದೇ ಸತತವಾಗಿ ಇಲ್ಲಿನ ಜನರಿಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಆರೋಪಿಸಿದರು. ಸರ್ಕಾರ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಲು ಸಹ ಅವಕಾಶ ನೀಡಿಲ್ಲ. ಇದು ಜನರನ್ನು ಬೀದಿಗೆ ತಳ್ಳುವ ಹುನ್ನಾರವಾಗಿದೆ ಎಂದರು. ಆದ್ದರಿಂದ ಅಧಿಕಾರಿಗಳು ಕೂಡಲೇ ಸಂಭಂಧ ಪಟ್ಟ ಇಲಾಖೆ ಅದಿಕಾರಿಗಳೊಂದಿಗೆ ಮಾತನಾಡಿ ಸೋಮನಾಥ ನಗರ ನಿವಾಸಿಗಳ ಸಹಾಯಕ್ಕೆ ಬಂದು ಹಕ್ಕು ಪತ್ರ ವಿತರಣೆ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಈಸಂದರ್ಭದಲ್ಲಿ ಎಂಆರ್‌ಎಚ್‌ಎಸ್ ಗೌರವಾಧ್ಯಕ್ಷ ಮಲ್ಲಯ್ಯ ಬಳ್ಳಾ, ಸುರೇಶ ಅಂತರಗಂಗಿ, ಮೌನೇಶ ಪತ್ತಾರ್, ಶೇಖರಪ್ಪ ಅಮಿನಗೌಡ ಸೇರಿದಂತೆ ಸೋಮನಾಥ ಬಡಾವಣೆ ನಿವಾಸಿಗಳು ಇದ್ದರು.