ಇಹದಲ್ಲಿ ಕಾಬಸುಖ ಪರದಲ್ಲಿ ಮುಟ್ಟುವ ಭೇದ
ಇಹದಲ್ಲಿ ಕಾಬ ಸುಖ,
ಪರದಲ್ಲಿ ಮುಟ್ಟುವ ಭೇದ.
ಉಭಯದ ಗುಣ ಏಕವಾದಲ್ಲಿ,
ಮನಸಂದಿತ್ತು ಮಾರೇಶ್ವರಾ.
ಮನಸಂದ ಮಾರಿತಂದೆ
ಸಮಗ್ರ ವಚನ ಸಂಪುಟ: 8 ವಚನದ ಸಂಖ್ಯೆ: 909
ಜಗತ್ತಿನಲ್ಲಿ ಆಧ್ಯಾತ್ಮದ ಚಿಂತನೆಗಳು ಪ್ರಾರಂಭವಾದಾಗಿನಿಂದಲೂ ಈ ಇಹ-ಪರ ಎಂಬುದರ ಬಗೆಗೆ ಒಂದು ಜಿಜ್ಞಾಸೆ ಹುಟ್ಟಿದೆ. ಅದರಲ್ಲಡಗಿರುವ ನಿಗೂಢತೆ ತಿಳಿವ ಕುತೂಹಲ , ಅದರ ಅನ್ವೇಷಣೆ ಎಲ್ಲವುಗಳ ಪ್ರಾರಂಭವಾಗಿದೆ. ಇಹದ ಬದುಕನ್ನು ಗೌಣವಾಗಿಸಿ ಪರದ ಸಾಧನೆಯಲ್ಲಿ ತೊಡಗುವ ಭ್ರಮಾಧೀನ ಕಲ್ಪನೆಗಳು ಆಳವಾಗಿ ಬೇರೂರಿದ್ದು , ಇವು ಬಸವಕಾಲದಲ್ಲು ಇದ್ದವು ಇಂದೂ ಇವೆ.
ಎಲ್ಲ ಧರ್ಮಗಳು ವ್ರತ, ನೇಮ ,ಸತ್ಯ, ಮಿಥ್ಯ, ಮೋಕ್ಷ ಎಂಬ ಗೊಂದಲಗಳಲ್ಲಿ ಸಿಲುಕಿರುವಾಗ ” ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ” ಎಂಬ ಬಸವ ನುಡಿಗಳು ನೇರವಾಗಿ ಇಹದ ಬದುಕಿಗೆ ಪ್ರಾಮುಖ್ಯತೆಯನ್ನು ಕೊಟ್ಟು , ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ ಎಂದು ಒಳ ಹೊರಗಿನ ಬದುಕಿಗೆ, ಇಹ-ಪರದ ಬದುಕಿಗೆ ಮಧ್ಯ ಸೇತುವೆಯನ್ನು ಬೆಸೆದರು. ಲಿಂಗದ ಬಾಯಿ ಜಂಗಮ ಆದ್ದರಿಂದ ಪರದಲ್ಲಿ ಸಲ್ಲಬೇಕೆಂದರೆ ಇಹದ ಸೇವೆಗೆ ಸಜ್ಜಾಗು ಎಂದರು. ಇಹ-ಪರ ಎಂಬ ಲೋಕಭಿನ್ನತೆಗಳನ್ನು ಅಳಿದು ತನ್ನ ಸುತ್ತಿದ ಪ್ರಪಂಚವೆ ಇಹ ತನ್ನನ್ನು ದಾಟಿದ ಸಕಲ ಪ್ರಪಂಚವೂ ಪರ ಎಂದು ಇಲ್ಲದ ಲೋಕಗಳ ಅಲ್ಲಗಳೆದು ವಾಸ್ತವ ಬದುಕಿಗೆ ಬೆಳಕು ತೋರಿದರು.
ಮಾಡುವಂತಿರಬೇಕು ಮಾಡದಂತಿರಬೇಕು ,ಮಾಡುವ ಮಾಟದೊಳಗೆ ತಾನಿಲ್ಲದಂತಿರಬೇಕು ಎಂಬಲ್ಲಿ ಇಹದಲ್ಲಿ ಮಾಡುವ ಎಲ್ಲ ಕಾರ್ಯಗಳನ್ನು ನಿಸ್ವಾರ್ಥ ವಾಗಿ, ನಿರಪೇಕ್ಷವಾಗಿ ಮಾಡುವ ಸೇವೆ , ಆ ತಾನಿಲ್ಲದಿರುವಿಕೆಯೆ ಪರದಲ್ಲಿ ಮುಟ್ಟುವ ಭೇದ.
ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೆ ಮರ್ತ್ಯ ಲೋಕ , ಆಚಾರವೇ ಸ್ವರ್ಗ, ಅನಾಚಾರವೇ ನರಕ, ಅಯ್ಯಾ ಎಂದಡೆ ಸ್ವರ್ಗ,ಎಲವೋ ಎಂದಡೆ ನರಕ ಎಂಬ ವಚನಗಳು ಇಹ-ಪರ, ದೇವಲೋಕ ಮರ್ತ್ಯ ಲೋಕ , ಎಂದು ಭಿನ್ನವಾಗಿಸುವ ಎರಡು ಲೋಕಗಳು ತನ್ನಲ್ಲೇ ಅಡಗಿವೆ ಎಂಬುದರತ್ತ ಬೆರಳು ಮಾಡುವವು.
” ಇಹದಲ್ಲಿ ಸುಖಿಯಲ್ಲದೆ ಪರದಲ್ಲಿ ಪರಿಣಾಮಿಯಲ್ಲದೆ ಉಭಯ ನಿಶ್ಚಯವಾದಲ್ಲಿ ಮನಸಂದಿತ್ತು ಮಾರೇಶ್ವರಾ” ಎನ್ನುವ ಮನಸಂದ ಮಾರಿತಂದೆಯವರು ಇಹದಲ್ಲಿ ಪಡುವ ಆನಂದ ಪರದಲ್ಲಿ ಪರಿಣಾಮಿಸುವದು ಎಂಬುದು “ತಳಕೆ ನೀರೆರೆದಡೆ ಮೇಲೆ ಪಲ್ಲವಿಸಿತ್ತು ನೋಡಾ” “ಲಿಂಗದ ಬಾಯಿ ಜಂಗಮ” ಎಂಬ ಬಸವ ನುಡಿಗಳಂತೆ ಒಳಹೊರಗಿನ ಬದುಕಿನ , ಲಿಂಗ ಜಂಗಮದ, ವ್ಯಷ್ಠಿ ಸಮಷ್ಠಿಗಳ ಮಧ್ಯ ಸೇತುವೆಯನ್ನು ಬೆಸೆದು ಇಹದ ಸಾರ್ಥಕ ಬದುಕು ಪರದಲ್ಲಿ ಆಗುವ ಪರಿಣಾಮ ಇವೆರಡೂ ಒಂದೇ. ಇದುವೇ ಇಹದಲ್ಲಿ ಕಾಬ ಸುಖ ಪರದಲ್ಲಿ ಮುಟ್ಟುವ ಭೇದ ಎರಡರ ಸಮನ್ವಯ ಏಕೋ ಭಾವವೆ ಲಿಂಗದ ನೆಲೆ.
–ಸುನಿತಾ ಮೂರಶಿಳ್ಳಿ,
ಧಾರವಾಡ.