ಆರೋಗ್ಯ ಸಹಾಯಕರ ಆರ್ತನಾದಗಳು ಸರಕಾರಕ್ಕೆ ಕೇಳಿಸುತ್ತಿಲ್ಲವೇ?
ಕಳೆದೆರಡು ವಾರಗಳಿಂದ ಧಾರವಾಡ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಹಲ್ಲೆ, ಆತ್ಮಹತ್ಯೆಗಳದ್ದೇ ಸರಣಿ ಸುದ್ದಿ. ಪರಿಣಾಮ ಧಾರವಾಡ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಬಹುತೇಕ ಆರೋಗ್ಯ ಸಹಾಯಕರಲ್ಲಿ ಅಸಹಾಯಕತೆಯ ಕರಿನೆರಳು ಕವಿದಿದೆ. ಅದರಲ್ಲೂ ಮಹಿಳಾ ಆರೋಗ್ಯ ಸಹಾಯಕಿಯರಂತೂ ಅಪ್ರಸ್ತುತ ಆತಂಕ, ದುಗುಡದ ಮಡುವಲ್ಲಿ ಮುಳುಗಿದ್ದಾರೆ.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಮಲಾ ರಾವ್ ಮತ್ತು ನೂಲ್ವಿ ಪ್ರಾ. ಆ. ಕೇಂದ್ರದ ಮಹಿಬೂಬ್ ಇಮಾಮ್ ಸೂಡಿ ಎಂಬ ಆರೋಗ್ಯ ಸಹಾಯಕರು ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದದ್ದೇ ಸಧ್ಯದ ಸಣ್ಣ ಸಮಾಧಾನ. ಶ್ರೀಸೂಡಿಯವರ ಆರೋಗ್ಯ ಸ್ಥಿತಿ ಇನ್ನೂ ಜೀವನ್ಮರಣದ ತೂಗುಯ್ಯಾಲೆಯ ಗಂಭೀರ ಗತಿಯಲ್ಲಿದೆ. ಅವರು ಹುಬ್ಬಳ್ಳಿಯ ಕೆ. ಎಮ್. ಸಿ. ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
(ಕಮಲರಾವ್)
ನೆನಪಿರಲಿ : ಈ ಇಬ್ಬರೂ ಸರಕಾರಿ ನೌಕರರು ವರ್ತಮಾನದ ಅಲ್ಲಿನ ಕೊವಿಡ್ ಕಾರ್ಯಕ್ರಮದ ಪ್ರಮುಖರು. ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಸರಕಾರಿ ಆರೋಗ್ಯ ಸಂಸ್ಥೆಗಳಲ್ಲೇ, ಅದೂ ಹಾಡಹಗಲೇ ಆತ್ಮಹತ್ಯೆ ಯತ್ನದ ಈ ಅವಗಢಗಳು ಗತಿಸಿರುವುದು. ಇಬ್ಬರೂ ಅಜಮಾಸು ಐವತ್ತು ವರ್ಷ ಮೇಲ್ಪಟ್ಟ ವಯಸಿನ ಹಿರಿಯರು. ಅನುಭವಿಗಳಾದ ಅವರಿಗೆ ತಾವು ದುಡಿಯುವ ವ್ಯವಸ್ಥೆಯಲ್ಲಿರುವ ಉಸಿರುಗಟ್ಟಿಸುವ ವಾತಾವರಣವೇ ಇದಕ್ಕೆಲ್ಲ ಕಾರಣ ಎಂಬುದನ್ನು ಆ ಇಬ್ಬರೂ ಹಿರೀಕರು ಬರೆದಿಟ್ಟ ಮರಣ ಪತ್ರಗಳು ಸಾಕ್ಷೀಕರಿಸುತ್ತವೆ.
ಪ್ರಧಾನಿ ಮೋದಿ ಜನ್ಮದಿನದಂದು (೧೭.೦೯.೨೦೨೧) ಬಾಣಂತಿ ಕಟ್ಟೆ ಪ್ರಾ. ಆ. ಕೇಂದ್ರ ವ್ಯಾಪ್ತಿಯ ಹಳೇ ಹುಬ್ಬಳ್ಳಿ ಶಹರದಲ್ಲಿ ಕೊವಿಡ್ ವ್ಯಾಕ್ಸಿನ್ ಮಹಾಮೇಳ. ಸದರಿ ಮಹಾಮೇಳದಲ್ಲಿ ಕರ್ತವ್ಯನಿರತಳಾಗಿದ್ದ ನಂದಿನಿ ಚುಂಚ ಎಂಬ ಆರೋಗ್ಯ ಸಹಾಯಕಿ ಮೇಲೆ ಹಾಡಹಗಲೇ ಅಮಾನುಷ ಹಲ್ಲೆ ಜರುಗಿದೆ. ನಂದಿನಿ ಅವರ ಮೇಲ್ದುಟಿ ಸೀಳಿ ಹರಿದು ಹೋಗುವಂತೆ ಹಲ್ಲೆ ಮಾಡಿದ್ದಾರೆ. ವ್ಯಾಕ್ಸಿನ್ ಪಡೆದ ಮಾಹಿತಿ ತಮ್ಮ ಮೊಬೈಲಿಗೆ ಬಂದಿಲ್ಲವೆಂಬ ಕ್ಷುಲ್ಲಕ ಸಂಗತಿ ಹಲ್ಲೆಕೋರರ ಹಲ್ಲೆಗೆ ಕಾರಣ.
ಸ್ಥಳೀಯ ಹಾಗೂ ರಾಜ್ಯಮಟ್ಟದ ವಿದ್ಯುನ್ಮಾನ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಮೂರೂ ದಾರುಣ ಘಟನೆಗಳ ಸುದ್ದಿಯಾಯಿತು. ವಿಧಾನಸೌಧದಲ್ಲೂ ಮಾರ್ದನಿಸಿತು. ಮೇಲ್ಮನೆಯಲ್ಲಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಅವರು ಸರಕಾರಿ ಕರ್ತವ್ಯನಿರತ ನಂದಿನಿ ಚುಂಚ ಅವರ ಮೇಲೆ ಜರುಗಿದ ಕ್ರೂರಹಲ್ಲೆ ಖಂಡಿಸಿ, ನಂದಿನಿಗೆ ನ್ಯಾಯ ಒದಗಿಸುವ ಕುರಿತು ವಿವರವಾಗಿ ಮೇಲ್ಮನೆಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ. ಮೇಲ್ಮನೆಗೆ ಕೇಳಿಸಿದ್ದು ಸರಕಾರಕ್ಕೆ ಕೇಳಿಸುತ್ತಿಲ್ಲವೇ.?
ರಾಷ್ಟ್ರೀಯ ಆರೋಗ್ಯ ಅಭಿಯಾನವು ನಂದಿನಿ ಚುಂಚ ಎಂಬ ತರಬೇತಿ ಹೊಂದಿದ ಮಹಿಳಾ ಆರೋಗ್ಯ ಸಹಾಯಕಿಯನ್ನು ಸರಕಾರಿ ಕೆಲಸಕ್ಕೆ ನೇಮಿಸಿಕೊಂಡಿದೆ. ತಿಂಗಳಿಗೆ ಕೇವಲ ಹತ್ತುಸಾವಿರದ ಐನೂರು ರುಪಾಯಿಗಳ ಗುತ್ತಿಗೆ ಆಧಾರದ ಕೂಲಿ ಕೊಡುತ್ತದೆ. ಈ ಮಹಿಳೆ ತಾನು ತುಂಬು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿಯೂ ಕೊವಿಡ್ ಸೇನಾನಿಯಾಗಿ ಕೆಲಸ ಮಾಡಿದ್ದಾಳೆ. ಈಗ ಏಳೆಂಟು ತಿಂಗಳ ಕಂದಮ್ಮನನ್ನು ಕಟ್ಟಿಕೊಂಡು ಕೊವಿಡ್ ಲಸಿಕಾ ಯಜ್ಞದಲ್ಲಿ ಪಾಲ್ಗೊಂಡಿದ್ದಾಳೆ. ಮೋದಿ ಹುಟ್ಟುಹಬ್ಬದಂದು ಲಸಿಕಾ ಮಹಾಮೇಳದ ಸರಕಾರಿ ಕೆಲಸದಲ್ಲಿ ಸಕ್ರಿಯವಾಗಿದ್ದಾಗಲೇ ಸಾರ್ವಜನಿಕರೆದುರು ಕ್ರೂರ ಹಲ್ಲೆಗೀಡಾಗಿದ್ದಾಳೆ. ಸರ್ಕಾರದ ಕರ್ತವ್ಯದಲ್ಲಿರುವ ಮಹಿಳೆಯರ ರಕ್ಷಣೆ ಸರಕಾರದ ಆದ್ಯಕರ್ತವ್ಯ. ಕೇವಲ ಖಾಯಂ ಸರಕಾರಿ ನೌಕರರ ಹಿತ ಕಾಪಾಡುವುದು ಮಾತ್ರ ಸರಕಾರದ ಜವಾಬ್ದಾರಿಯಲ್ಲ.
ಸರಕಾರದ ಕೆಲಸಕ್ಕೆ ನಿಯೋಜಿತರಾದ ನಂದಿನಿ ಚುಂಚ ಅವರಿಗೆ ಸರಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಹಲ್ಲೆಕೋರರಿಗೆ ತಕ್ಕ ಶಿಕ್ಷೆಯಾಗಬೇಕು. ಇಲ್ಲದೇ ಹೋದಲ್ಲಿ ಇನ್ನುಮುಂದೆ ಸರಕಾರ ನಿಯೋಜಿಸುವ ಕೆಲಸಕ್ಕೆ ಯಾರೂ ಬರುವುದಿಲ್ಲ.
(ನಂದಿನಿ ಚುಂಚ)
ಸರಕಾರಿ ನೌಕರರ ಸಂಘಟನೆಗಳು ಅವಳು ಖಾಯಂ ನೌಕರಳಲ್ಲ, ಪ್ರೊಬೇಷನರಿ ಪಿರಿಯಡ್ ಘೋಷಣೆಯಾಗಿಲ್ಲ ಎಂಬ ತಾರ್ಕಿಕ, ತಾಂತ್ರಿಕ ಮತ್ತು ಅಮಾನವೀಯ ಆಲೋಚನೆಗಳಿಗೆ ಧಿಕ್ಕಾರ ಹೇಳಿ ಸರಕಾರದ ಸೇವೆಗೆ ಬಂದವಳೆಂಬ ಶುದ್ಧಾಂತಃಕರಣದಿಂದ ನಂದಿನಿ ನೆರವಿಗೆ ನಿಲ್ಲಬೇಕು.
ಅಂದಾಗ ಮಾತ್ರ ಸರಕಾರದ ಕೆಲಸಕ್ಕೆ ಮುಂದೆ ಬರುವವರಿಗೂ, ಈಗ ಬಂದಿರುವವರಿಗೂ ಆತ್ಮವಿಶ್ವಾಸ ಮೂಡುತ್ತದೆ. ಇಲ್ಲದೇ ಹೋದಲ್ಲಿ ಎಲ್ಲಾ ನೌಕರರಿಗೆ ಆತ್ಮಹತ್ಯೆ ಹಾದಿಗಳೇ ಹೆಚ್ಚು ಹತ್ತಿರವೆಂಬ ಸೂಕ್ಷ್ಮ ಸಂವೇದನೆಗೆ ರಹದಾರಿ ಆದೀತು.
ಇದೆಲ್ಲ ಬೆಳವಣಿಗೆ ರಾಜ್ಯಾದ್ಯಂತ ಕಾರ್ಯನಿರತ ಸಮಸ್ತ ಆರೋಗ್ಯ ಸಹಾಯಕರ ಮನಸ್ಥಿತಿಯ ಮೇಲೆ ನಿಸ್ಸಂದೇಹವಾಗಿ ದುಷ್ಪರಿಣಾಮ ಬೀರಿದೆ. ಅವರ ಮನೋಸ್ಥೈರ್ಯ ಘಾಸಿಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ, ಹಳ್ಳಿಗಳಲ್ಲಿ ಒಂಟಿಯಾಗಿ ಮಹಿಳಾ ಆರೋಗ್ಯ ಸಹಾಯಕರು ಕೆಲಸ ಮಾಡುವುದು ಹೇಗೆಂಬ ಭೀತಿ, ಅನುಮಾನ, ದುಮ್ಮಾನಗಳ ತಲ್ಲಣದ ಬಿರುಗಾಳಿ.
ಧಾರವಾಡ ಜಿಲ್ಲಾ ಆರೋಗ್ಯಾಧಿಕಾರಿಯ ಹೊಣೆಗೇಡಿತನವೇ ಇಂತಹ ಅನಾಹುತಗಳಿಗೆ ಕಾರಣ. ಆತ್ಮಹತ್ಯೆಗೆ ಯತ್ನಿಸಿದ ಈ ಇಬ್ಬರೂ ಏಕಾಏಕಿ ಇಂತಹ ಕಠಿಣ ನಿರ್ಧಾರಕ್ಕೆ ಬಂದವರಲ್ಲ. ಅವರಿಬ್ಬರೂ ಇಲಾಖೆ ತಮಗೆ ನಿಗಧಿ ಪಡಿಸಿದ ಹೊಣೆ ನಿರ್ವಹಣೆಯಲ್ಲಿ ಕಿಂಚಿತ್ತೂ ಕೊರತೆ ಆಗದಂತೆ ಕರ್ತವ್ಯ ಪಾಲಿಸಿದ್ದಾರೆ. ಅಷ್ಟಕ್ಕೂ ಇದುವರೆಗೆ ಇಲಾಖೆ ಮತ್ತು ಸಾರ್ವಜನಿಕರಿಂದ ಅವರುಗಳ ಮೇಲೆ ಯಾವುದೇ ಸಣ್ಣ ದೂರುಗಳಿಲ್ಲ.
(ಮಹಿಬೂಬ ಇಮಾಮಸಾಬ ಸೂಡಿ )
ಆದ್ಯತೆಯ ವಿಷಯವೆಂದರೆ; ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಆತ್ಮಹತ್ಯೆಗೆ ಯತ್ನಿಸಿದ ಸಂತ್ರಸ್ತರಿಗೆ ನೀಡಿದ ಕಿರುಕುಳ ಕುರಿತು ಸಂತ್ರಸ್ತರು ಈ ಮೊದಲೇ ಧಾರವಾಡ DHO ಗಮನಕ್ಕೆ ಲಿಖಿತ ದೂರು ಸಲ್ಲಿಸಿ ಪರಿಹಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಆದರೆ DHO ಮಹಾಶಯ ಅದನ್ನು ಗಂಭೀರವಾಗಿ ಪರಿಗಣಿಸದಿರುವುದೇ ಅಕ್ಷರಶಃ ಅಕ್ಷಮ್ಯ ಅಪರಾಧ.
ಇದೆಲ್ಲವನ್ನೂ ಸಂತ್ರಸ್ತರಿಬ್ಬರೂ ತಮ್ಮ ಡೆಥ್ ನೋಟಲ್ಲಿ ವಿವರವಾಗಿ ಬರೆದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಒಂದು ಗಂಭೀರ ಸಂಗತಿ ಏನೆಂದರೆ ಆ ಇಬ್ಬರೂ ತಮ್ಮ ಸಾವಿನ ನಂತರ ತಮ್ಮ ಕುಟುಂಬದ ಅವಲಂಬಿತರ ಹೊಣೆ ಕುರಿತು ಹೇಳಿಕೊಂಡಿದ್ದಾರೆ. ತಮಗಾದ ಸಂಕಟ, ಕಿರುಕುಳಗಳು ತಮ್ಮ ತರುವಾಯ ತಮ್ಮವೃಂದದ ಇತರೆ ಯಾರಿಗೂ ಆಗದಿರಲೆಂದು ಅಲವತ್ತುಗೊಂಡಿದ್ದಾರೆ.
ಮತ್ತೊಂದು ಕಠೋರ ಸತ್ಯ ಏನೆಂದರೆ ಯಾವುದೇ ಕಾರಣಕ್ಕು ತಮ್ಮನ್ನು ಬದುಕಿಸ ಬಾರದೆಂದು ವಿನಂತಿ ಮಾಡಿದ್ದಾರೆ. ಅಂದರೆ ಅವರು ದುಡಿಯುತ್ತಿದ್ದ ವ್ಯವಸ್ಥೆಯ ಅಧಿಕಾರಿ ವರ್ಗ ಅದೆಷ್ಟು ಘೋರವಾಗಿ ನಡೆಸಿಕೊಂಡಿದೆಯೆಂಬುದು ಇದರಿಂದ ಸಾಬೀತುಗೊಳ್ಳುತ್ತದೆ.
ಈಗ್ಗೆ ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಸರಕಾರ, ಮಹಿಳಾ ಮತ್ತು ಪುರುಷ ಆರೋಗ್ಯ ಸಹಾಯಕರ ಪದನಾಮಗಳನ್ನು ಬದಲಿಸಿ ಆದೇಶ ಹೊರಡಿಸಿತು. ಬೇರೆ ಬೇರೆ ಪದನಾಮಗಳ ಮೂಲಕ ಇಬ್ಬರಲ್ಲೂ ಒಡಕು ಹುಟ್ಟಿಸಿತು. ನಯಾಪೈಸೆಯಷ್ಟೂ ಅಧಿಕಾರ ನೀಡದೆ, ಆರೋಗ್ಯ ಸಹಾಯಕರಿಗೆ ಹೆಸರಿನಲ್ಲಷ್ಟೇ ‘ಅಧಿಕಾರಿ’ಗಳೆಂದು ಮರು ನಾಮಕರಣ ಮಾಡಿತು.
ಅಪ್ಪಟ ಜನಾರೋಗ್ಯ ಸೇವಾವಲಯದ ಆರೋಗ್ಯ ಇಲಾಖೆಯಲ್ಲಿ ‘ಡಿ’ ದರ್ಜೆಯ ನೌಕರರನ್ನು ಹೊರತು ಪಡಿಸಿದರೆ ಎಲ್ಲರಿಗೂ ಸರಕಾರ ಅಧಿಕಾರಿಗಳೆಂಬ ಪಟ್ಟಕಟ್ಟಿ ಕೂಡಿಸಿದೆ. ಹಾಗೆ ಹೆಸರಿಸುವ ಸರಕಾರಕ್ಕೆ ಅದರಿಂದ ಯಾವುದೇ ಹೊರೆಯಿಲ್ಲ ಎಂಬ ಹುಚ್ಚು ಅಮಲು. ಆದರೆ ಅದರಿಂದ ಜನಾರೋಗ್ಯ ಸೇವೆಗಳಿಗೆ ಪೆಟ್ಟು ಬೀಳುತ್ತದೆಂಬ ಕನಿಷ್ಠ ಅರಿವು ಸರಕಾರಕ್ಕೆ ಬೇಡವೇ.?
ಒಣ ಅಧಿಕಾರ ಒಣಗಿ ಹೋಯಿತು. PHCO ಎಂಬ ಮಹಿಳಾ ಮತ್ತು HIO ಎಂಬ ನೂತನ ಪುರುಷ ಪದನಾಮಗಳು ಲಿಂಗ ತಾರತಮ್ಯ ಧಿಕ್ಕರಿಸಿ ಎರಡೂ ವೃಂದಗಳು ಒಂದಾಗಿ ತಮ್ಮ ಸ್ವತಂತ್ರ ಅಸ್ತಿತ್ವದೊಂದಿಗೆ ಇದೀಗ ಹೋರಾಟದ ಕಣಕ್ಕಿಳಿದಿವೆ. ಪುರುಷರ ಸಂಘದ ರಾಜ್ಯಾಧ್ಯಕ್ಷ ವಿಜಯಪುರದ ಬಾಬಾಸಾಹೇಬ ವಿಜಯದರ, ಮಹಿಳಾ ಸಂಘದ ರಾಜ್ಯಾಧ್ಯಕ್ಷೆ ಧಾರವಾಡದ ಚಂದ್ರಿಕಾ ದಮ್ಮಳ್ಳಿ ಇಬ್ಬರೂ ಮುಖಂಡರು ಐಕ್ಯ ಹೋರಾಟದ ರಣಕಹಳೆ ಊದಿದ್ದಾರೆ. ಇಬ್ಬರೂ ಒಗ್ಗಟ್ಟಾಗಿ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ್ದಾರೆ. ಜಂಟಿ ಹೋರಾಟದ ಝಂಡಾ ಹಾರಿಸುವುದಾಗಿ ಹೇಳಿರುವುದು ಹಳೆಯ ಪದನಾಮದ ಆರೋಗ್ಯ ಸಹಾಯಕ ವೃಂದಕ್ಕೆ ಒಳಿತಾಗಲಿ.
ಇದೇ ಸಂದರ್ಭದಲ್ಲಿ ಹೇಳಲೇಬೇಕಾದ ಮತ್ತೊಂದು ಮಹತ್ವದ ಸಂಗತಿಯೊಂದಿದೆ. ಅದೇನೆಂದರೆ ಆರೋಗ್ಯ ಸಹಾಯಕರನ್ನು ನೇಪಥ್ಯಕ್ಕೆ ತಳ್ಳಿ MLHP ಗಳ ಕೈಗೆ ಆರೋಗ್ಯ ಉಪಕೇಂದ್ರ ಹಾಗೂ PHC ಗಳನ್ನು ನೀಡುವ ಖಾಸಗೀಕರಣವೆಂಬ ಮಾಯಾವಿ ಹುನ್ನಾರದ ಒಳಹೇತು. ಆ ಕುರಿತು ಮಹಿಳೆ ಮತ್ತು ಪುರುಷ ಸಂಘಟನೆಗಳು ಕಟ್ಟೆಚ್ಚರಗೊಳ್ಳಬೇಕಿದೆ. ಇಲ್ಲದೇ ಹೋದಲ್ಲಿ ಅವರ ಅಸ್ತಿತ್ವಕ್ಕೆ ಅಳಿಗಾಲ.
ಧಾರವಾಡ ಜಿಲ್ಲೆಯ ಅನಾಹುತಗಳು ಜರುಗಿ ಹತ್ತು ದಿವಸ ಕಳೆಯುತ್ತಾ ಬಂದರೂ ಆರೋಪಿತ ಅಧಿಕಾರಿಗಳ ಮೇಲೆ ಸರಕಾರದ ಕಡೆಯಿಂದ ಯಾವ ಕ್ರಮಗಳೂ ಜರುಗಿಲ್ಲ. ಆದರೆ ಆರೋಗ್ಯ ಮಂತ್ರಿ ಕಾರ್ಯಾಲಯದಿಂದ ಇದೆಲ್ಲ ಘಟನೆಗಳು ಮಾಧ್ಯಮಗಳ ಮೂಲಕ ಸನ್ಮಾನ್ಯ ಸಚಿವರ ಗಮನಕ್ಕೆ ಬಂದಿವೆ. ಮುಂದುವರೆದು ಜಿಲ್ಲಾಧಿಕಾರಿಗಳ ಅನುಪಾಲನಾ ವರದಿಗೆ ಕಾಯಲಾಗುವುದೆಂಬ ಆರೋಗ್ಯ ಮಂತ್ರಿಗಳ ಕಚೇರಿ ಸಿಬ್ಬಂದಿಯ ಮಾಹಿತಿ ಪತ್ರಗಳು ಮಾತ್ರ ಅಟಕಾಯಿಸುತ್ತವೆ.
–ಮಲ್ಲಿಕಾರ್ಜುನ ಕಡಕೋಳ
9341010712