ವಚನ ಸಾಹಿತ್ಯದಲ್ಲಿ ಆಯಗಾರರು ಲೇಖನ ಮಾಲಿಕೆ “ಬಡಿಗೇರರು: ಶರಣ ಬಾಚಿ ಕಾಯಕದ ಬಸವಪ್ಪ”

ವಚನ ಸಾಹಿತ್ಯದಲ್ಲಿ ಆಯಗಾರರು ಲೇಖನ ಮಾಲಿಕೆ
“ಬಡಿಗೇರರು: ಶರಣ ಬಾಚಿ ಕಾಯಕದ ಬಸವಪ್ಪ”

ಆಸೆಯರತ ಬಾಚಿಯಲ್ಲಿ | ಭವಪಾಶವಿಲ್ಲದ ಜಂಗಮಕೆ ತೆತ್ತ ||
ರೋಷವಿಲ್ಲದ ಉಳಿಯಲ್ಲಿ | ನಿಜವಾಸವ ನೋಡಿ ಹುಗಿಲುದೆಗೆವುತ್ತ ||
ಭಾಷೆಗೆ ಊಣಯವಿಲ್ಲದ | ಸದ್ಭಕ್ತರ ಆಶಯಕ್ಕೆ ||
ನಿಜವಾಸವ | ಮಾಡುವ ಕಾಯಕ ||
ಈ ಗುಣ ಬಾಚಿಯ | ಬಸವಣ್ಣನ ನೇಮ ||
ಇದು ಸಂಗನಬಸವಣ್ಣ | ಕೊಟ್ಟ ಕಾಯಕದಂಗ ||
ಬಸವಣ್ಣಪ್ರಿಯ ವಿಶ್ವಕರ್ಮಟಕ್ಕೆ | ಕಾಳಿಕಾವಿಮಲ ರಾಜೇಶ್ವರಲಿಂಗವನರಿವುದಕ್ಕೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1378 / ವಚನ ಸಂಖ್ಯೆ-204)

American Humorist & Writer “Mark Twain” says:
“India is the cradle of the human race, the birthplace of human speech, the mother of history, the grandmother of legend, and the great grandmother of tradition. Our most valuable and most artistic materials in the history of man are treasured up in India only!”


ಅಮೇರಿಕಾದ ಪ್ರಖ್ಯಾತ ಲೇಖಕ “ಮಾರ್ಕ್‌ ಟ್ವೇನ್‌ ಹೇಳತಾನೆ:
ಭಾರತವು ಮಾನವನ ನಾಗರೀಕತೆಯ ತೊಟ್ಟಿಲು, ಭಾಷೆಯ ಜನ್ಮಸ್ಥಳ, ಇತಿಹಾಸಕ್ಕೆ ಜನ್ಮ ನೀಡಿದ ತಾಯಿ, ದಂತಕಥೆಗಳ ಅಜ್ಜಿ, ಪರಂಪರೆ ಮತ್ತು ಸಂಸ್ಕೃತಿಯ ಮುತ್ತಜ್ಜಿ. ಪ್ರಪಂಚದ ಎಲ್ಲ ಮೌಲ್ಯಗಳನ್ನು ಹಾಗೂ ಕಲಾತ್ಮಕ ವಸ್ತುಗಳನ್ನೂ ತನ್ನಲ್ಲಿ ಅಡಗಿಸಿಕೊಂಡು ಜಗತ್ತಿಗೆ ಬೆಳಕನ್ನು ನೀತ್ತಿರುವ ದೇಶ ಅಂದರೆ ಭಾರತ ಒಂದೇ.

ಭಾರತದ ಜಾನಪದ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಸಂಸ್ಕೃತಿಗಳ ಸಮ್ಮಿಳಿತ ಮತ್ತು ಸುವ್ಯವಸ್ಥಿತ ಗ್ರಾಮೀಣ ಪರಿಸರ ಅತ್ಯಂತ ಉನ್ನತ ಮಟ್ಟದ್ದಿತ್ತು ಎನ್ನುವುದನ್ನು ಮಾರ್ಕ್‌ ಟ್ವೇನ್‌ ಉಲ್ಲೇಖಿಸಿದ್ದಾನೆ.

ನಮ್ಮದು ಕೃಷಿ ಆಧಾರಿತ ದೇಶ. ದೇಶದ ಶೇಕಡ 60 ರಿಂದ 65 ರಷ್ಟು ಪ್ರಜೆಗಳು ಕೃಷಿ ಅಥವಾ ಕೃಷಿ ಆಧಾರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. Our culture is Agriculture “ನಮ್ಮದು ಕೃಷಿ ಧರ್ಮ” Agriculture is Mother of all cultures, ಎನ್ನುವದು ಭಾರತದ ಪರಿಕಲ್ಪನೆ. ಎಲ್ಲ ಕಾಯಕಗಳಿಗೂ ಮತ್ತು ಸಂಸ್ಕೃತಿಗಳಿಗೂ ತಾಯಿಯ ಸ್ಥಾನದಲ್ಲಿರುವುದೇ ವ್ಯವಸಾಯ. ಹಾಗೆಯೇ ವ್ಯವಸಾಯಕ್ಕೆ ಬೇಕಾಗುವಂಥ ಪರಿಕರಗಳನ್ನು ತಯಾರಿಸಲು ಕಾಯಕ ಯೋಗಿಗಳನ್ನು ಬಸವೇಶ್ವರರು ಆಯಗಾರರು ಎಂದು ಕರೆದರು. ಆಯ ಎಂದರೆ ವ್ಯವಸಾಯ ದೃಷ್ಟಿಯಲ್ಲಿ ಆದಾಯ ಅಥವಾ ಭೂಮಿಯಿಂದ ಬರುವ ಲಾಭ. ಕಾರ ಅಥವಾ ಗಾರ ಪ್ರತ್ಯಯವನ್ನು ಸೇರಿಸಿ ಆಯಗಾರ ಎನ್ನುವ ಶಬ್ದ ಉತ್ಪತ್ತಿಯಾಗಿದೆ. ಅಂದರೆ ರೈತರ ಆದಾಯಕ್ಕೆ ಕೈ ಜೋಡಿಸುವವರು ಆಯಗಾರರು. ಒಟ್ಟು 99 ಕ್ಕೂ ಹಚ್ಚು ಆಯಗಾರರನ್ನು ಒಟ್ಟುಗೂಡಿಸಿ ಕೃಷಿ ಪ್ರಧಾನವಾದ ಸಧೃಢ ಆರ್ಥಿಕ ಸಮಾಜವನ್ನು ಕಟ್ಟಿ ಬೆಳೆಸಿದಂಥ ದೃಷ್ಟಾಂತ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆಯಗಾರರ ಪರಿಕಲ್ಪನೆಯನ್ನು ನಮ್ಮ ಜಾನಪದರು ಎಷ್ಟು ಸೊಗಾಗಿ ಹೇಳಿದ್ದಾರೆಂದರೆ ಗ್ರಾಮೀಣ ಆರ್ಥಿಕ ಮಾದರಿಯನ್ನೇ ನೀಡುತ್ತದೆ.

ಸುಣಗಾರ ಮನೀಯಿಂದ | ಸುಣ್ಣ ತಂದು ಮನೀ ಸಾರಿಸಿ ||
ರೈತರ ಮನೀಯಿಂದ | ಜೋಳಾ ತಂದ ||
ವಡ್ಡರ ಮಾಡಿದ | ಬೀಸುಕಲ್ಲಿನ್ಯಾಗ ಜೋಳಾ ಬೀಸಿ ||
ಬಡಿಗೇರ ಮಾಡಿದ | ಕೊಮ್ಮಣಿಗ್ಯಾಗ ರೊಟ್ಟಿ ಬಡದ ||
ಕಂಬಾರ ಮಾಡಿದ | ತೆವಿ ಮ್ಯಾಗ ರೊಟ್ಟಿ ಸುಟ್ಟು ||
ಮ್ಯಾದರ ಮಾಡಿದ | ಬುಟ್ಯಾಗ ರೊಟ್ಟಿ ಹಾಕತೇವರೀ ||
ಕುಂಬಾರ ಮಾಡಿದ | ಗಡಿಗ್ಯಾಗ ಅಡಿಗಿ ಮಾಡತೇವರೀ ||
ಕಿರಸ್ಯಾರ ಮುಂದ ಡೊಗ್ಗಿ | ನಾವು ತೆಲಿ ಬೋಳಸಿಕೊಂಡ ||
ಸಿಂಪಿಗ್ಯಾರ ಹೊಲದ | ಅಂಗಿ ತೊಟಗೊಂಡ ದೇವರಿಗೆ ಹೋಗಿ ||
ಹೂಗಾರ ಮನೀಯಿಂದ | ಹೂವ ತಂದು ದೇವರಿಗೆ ಏರಸತೇವರಿ ||
ಕೊರವರ ಮಾಡಿದ | ನೆಲವಿನ ಮ್ಯಾಲ ಹಾಲಿನ ಗಡಿಗಿ ಇಟ್ಟು ||
ಹೆಪ್ಪ ಹಾಕಿ ಮಾರನೇ ದಿನಾ | ಬೆಣ್ಣಿ ಕಡದ ತುಪ್ಪಾ ತೆಗೆದ ||
ಆ ತುಪ್ಪಾ ಕಾಸಿ ದೇವರಿಗೆ | ಎಣ್ಣಿ ಬತ್ತಿ ಹಚ್ಚತೇವರಿ ||


ಆಯಗಾರರ ವೃತ್ತಿ ಕೌಶಲ್ಯಗಳು (Professional Skills) ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುವಂಥ ನಿಸರ್ಗದತ್ತ ಕ್ರಿಯೆ. ಎಲ್ಲ ಆಯಗಾರರೂ ಒಬ್ಬರಿಗೊಬ್ಬರು ಅವಲಂಬಿತವಾಗಿರುವದರಿಂದ ಪರಸ್ಪರ ಗೌರವ ಭಾವನೆಯಿಂದ ಕಾಣುತ್ತಿದ್ದುದನ್ನು ಗಮನಿಸಬಹುದು. ಬಸವೇಶ್ವರರು ಈ ಆಯಗಾರರನ್ನು ಒಟ್ಟುಗೂಡಿಸಿ ಅವರ ಕಾಯಕಕ್ಕೆ ದೈವತ್ವದ ಪಲ್ಪನೆಯನ್ನು ನೀಡಿ ಸಮ ಸಮಾಜವನ್ನು ನಿರ್ಮಿಸಿದರು.

ಆಯಗಾರರ ಪರಿಕಲ್ಪನೆ ಭಾರತೀಯರ ಜನಜೀವನದ ಸಾಮಾಜಿಕ ಸಮಾನತೆಯ ಅದ್ಭುತ ಮಾದರಿ. ಹಳ್ಳಿಯಲ್ಲಿ ವಾಸಿಸುವಂಥ ದಿನನಿತ್ಯದ ಜೀವನಕ್ಕೆ ಬೇಕಾದ ಎಲ್ಲ ಪರಿಕರಗಳನ್ನು ಅಲ್ಲಿಯೇ ತಯಾರು ಮಾಡಿ ಅಲ್ಲಿಯೇ ಹಂಚುವ ಪ್ರಕ್ರಿಯೆ. ಪ್ರತೀ ಹಳ್ಳಿಯೇ ಒಂದು ಸ್ವತಂತ್ರವಾದ ವ್ಯಾಪಾರ ಘಟಕ (Independent Tariff Unit) ಗಳು. ಎಲ್ಲ ವ್ಯವಹಾರಗಳೂ ಹಳ್ಳಿಯಲ್ಲಿಯೇ ಹುಟ್ಟಿ ಹಳ್ಳಿಯಲ್ಲಿಯೇ ಕೊನೆಗೊಳ್ಳುತ್ತಿದ್ದವು. ಉತ್ಪಾದನೆ ಮತ್ತು ವಿತರಣೆ ಎಲ್ಲವೂ ಒಂದಕ್ಕೊಂದು ಭಾವನಾತ್ಮಕವಾಗಿ ಹೆಣೆದುಕೊಂಡಿದ್ದವು. ಇದನ್ನೇ ಆರ್ಥಶಾಸ್ತ್ರದಲ್ಲಿ “ಪ್ರಾಚೀನ ಆರ್ಥಿಕ ಮಾದರಿ” (Primitive Model of Economics) ಎಂದು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅರ್ಥಶಾಸ್ತ್ರಜ್ಞರು “ಏಷಿಯಾ ಖಂಡದ ಉತ್ಪಾದನಾ ಮಾದರಿ” (Asiatic Method of Production) ಎಂತಲೂ ವ್ಯಾಖ್ಯಾನಿಸುತ್ತಾರೆ.

ಇಂಥ ಆಯಗಾರರಲ್ಲಿ ಬಡಿಗೇರರೂ ಒಬ್ಬರು. ಇವರನ್ನು ಬಡಗಿ, ಬಡಿಗ, ಬಡಿಗಾರ, ಬಡಿಗೇರ, ಮರಗೆಲಸಗಾರ ಮುಂತಾದ ಹೆಸರಿನಿಂದ ಕರೆಯುತ್ತಾರೆ. ಬಡಗಿ ಎನ್ನುವ ಶಬ್ದ ಪ್ರಯೋಗವನ್ನು ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಹೊಸೂರು ಗ್ರಾಮದಲ್ಲಿ ಸಿಕ್ಕಿರುವ ಕ್ರಿ. ಶ. 1186 ರ ಶಿಲಾ ಶಾಸನದಲ್ಲಿ ಉಲ್ಲೇಖವಾಗಿದೆ.

ಮೇಲೆ ತಿಳಿಸಿದಂತೆ “ಬಡಗಿ” ಎನ್ನುವ ಬಡಿಗೇರರ ಬಗ್ಗೆ ಸ್ಪಷ್ಟ ಉಲ್ಲೇಖ 12 ನೇ ಶತಮಾನದ ಈ ಶಾಸನದಲ್ಲಿ ಬಂದಿದೆ.

“ಬಡಗಿ ಕಲೋಜ ಮೋರಕೇಶ್ವರ ದೇವರ ತೋಟ ಕೆಯಿ ಮನೆಯ”

ಹೀಗೆ ಬಡಿಗೇರರು ಸಮಾಜದ ಪ್ರಮುಖ ಆಯಗಾರರಾಗಿದ್ದಾರೆ. ವ್ಯವಸಾಯದ ಸಲಕರಣೆಗಳಾದ ಕುಡಗೋಲು, ರೆಂಟೆ-ಕುಂಟೆ, ಚಕ್ಕಡಿ, ರೊಟ್ಟಿ ಮಾಡುವ ಕೋಣಮ್ಮಿಗೆ, ಮಕ್ಕಳನ್ನು ಮಲಗಿಸಲು ತೊಟ್ಟಲು ಇತ್ಯಾದಿಗಳನ್ನು ತಯಾರಿಸುತ್ತಿದ್ದರು. ಇದರ ಜೊತೆಗೆ ಮನೆ ಕಟ್ಟಲು ಬೇಕಾಗುವ ಮರದ ಸಾಮಾನುಗಳನ್ನೂ ಸಹ ಮಾಡುತ್ತಾರೆ.

ಬಸವಣ್ಣನವರ ಸಮಕಾಲೀನರಾದ ಬಾಚಿ ಕಾಯಕದ ಬಸವಪ್ಪನವರು ಈಗಿನ ಬೀದರ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದವರು. ಬಾಚಿ ಎಂದರೆ ಮರವನ್ನು ಕೆತ್ತಲು ಬಳಸುವ ಸಾಧನ. ಬಡಿಗೇರರನ್ನು ಬಾಚಿ ಕಾಯಕದವರು ಎಂದು ಇದೇ ಕಾರಣಕ್ಕೆ ಕರೆಯುತ್ತಾರೆ. ಹಾಗಾಗಿ ಬಸವಪ್ಪನವರನ್ನು ಬಾಚಿ ಕಾಯಕದ ಬಸವಪ್ಪ ಎಂದು ಶರಣ ಸಂಕುಲದಲ್ಲಿ ಗುರುತಿಸಿದ್ದಾರೆ. “ಬಸವಪ್ರಿಯ ವಿಶ್ವಕರ್ಮಟಕ್ಕೆ ಕಾಳಿಕಾ ವಿಮಲ ರಾಜೇಶ್ವರಲಿಂಗ” ಎನ್ನುವ ವಚನಾಂಕಿತದಿಂದ ಬರೆದ 30 ವಚನಗಳು ಲಭ್ಯವಾಗಿವೆ. ವೃತ್ತಿ ಪರಿಭಾಷೆಯನ್ನು ಬಳಸಿಕೊಂಡು ಬರೆದ ಬೆಡಗಿನ ವಚನಗಳು ಗಾತ್ರದಲ್ಲಿ ದೀರ್ಘವಾಗಿವೆ ಮತ್ತು ತತ್ವ ಪ್ರಧಾನವಾಗಿವೆ.

ಶರಣೆ ಕಾಳವ್ವೆಯವರು ಬಾಚಿ ಕಾಯಕದ ಬಸವಪ್ಪನವರ ಪುಣ್ಯಸ್ತ್ರೀ. ಇವರು “ಕರ್ಮಹರ ಕಾಳೇಶ್ವರಾ” ಎನ್ನುವ ವಚನಾಂಕಿತದಿಂದ ಬರೆದ ಎರಡು ವಚನಗಳು ದೊರೆತಿವೆ. ಸಿಕ್ಕಿರುವ ಈ ಎರಡೂ ವಚನಗಳಲ್ಲಿ ಕಾಯಕ ನಿಷ್ಠೆ, ವೃತ ನೇಮ ಮತ್ತು ತತ್ವಾದರ್ಶಗಳ ಬಗ್ಗೆ ಹೇಳಿದ್ದಾರೆ.

ಕಾಯಕ ತಪ್ಪಿದಡೆ | ಸೈರಿಸಬಾರದು ||
ವೃತತಪ್ಪಲೆಂತೂ | ಸೈರಿಸಬಾರದು||
ಕರ್ಮಹರ | ಕಾಳೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1088)

ಕೈತಪ್ಪಿ ಕೆತ್ತಲು | ಕಾಲಿಗೆ ಮೂಲ ||
ಮಾತು ತಪ್ಪಿ ನುಡಿಯಲು | ಬಾಯಿಗೆ ಮೂಲ ||
ವೃತಹೀನನ ನೆರೆಯಲು | ನರಕಕ್ಕೆ ಮೂಲ ||
ಕರ್ಮಹರ | ಕಾಳೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-899 / ವಚನ ಸಂಖ್ಯೆ-1089)

ಕಾಯಕವನ್ನು ಸತ್ಯ ನಿಷ್ಠೆಯಿಂದ ಮಾಡಬೇಕು. ತಪ್ಪಿದಲ್ಲಿ ಬಾಚಿ ಬಂದು ಕಾಲನ್ನು ಘಾಸಿಗೊಳಿಸುವಂತೆ ಆಗುತ್ತದೆ ಎಂದು ಕಾಯಕದ ಪರಿಭಾಷೆಯಲ್ಲಿ ನಿರೂಪಿಸಿದ್ದಾರೆ ಶರಣೆ ಕಾಳವ್ವೆಯವರು. ಪ್ರಜ್ಞೆಯಿನ್ನಿಟ್ಟುಕೊಂಡು ಮಾತನ್ನಾಡಬೇಕೆಂಬುದು ಈ ವಚನಗಳ ಆಶಯ. ನಮ್ಮ ನಡೆ ನುಡಿಗಳು ಶುದ್ಧವಾಗಿರಬೇಕೆಂಬುದನ್ನು ಇವರ ವಚನಗಳಲ್ಲಿ ಕಾಣಬಹುದು.

ಬಾಚಿ ಕಾಯಕದ ಬಸವಪ್ಪ ಮತ್ತು ಅವರ ಪುಣ್ಯಸ್ತ್ರೀ ಕಾಳವ್ವೆ, ಈ ಶರಣ ದಂಪತಿಗಳು ಹುಟ್ಟೂರಾದ ರಾಜೇಶ್ವರದಲ್ಲಿಯೇ ಐಕ್ಯರಾಗಿದ್ದಾರೆ.

ಶರಣರು ಲಿಂಗಾಯತರ ಜೀವೋನ್ಮುಖ ತತ್ವಗಳಾದ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಗುರು-ಲಿಂಗ-ಜಂಗಮ ಸೇವೆಗಳನ್ನು ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದವರು. ಇಂಥ ಮಾನವೀಯ ಮೌಲ್ಯಗಳನ್ನು ಅವರು ಕೋಣೆಗಳ ನಡುವೆ ಕುಳಿತುಕೊಂಡು ಕಲಿತದ್ದಲ್ಲ. ಬೆಳ್ಳಿ ಬಂಗಾರದ ಕೀರೀಟವನ್ನಿಟ್ಟುಕೊಂಡು ಅಡ್ಡ ಪಲ್ಲಕ್ಕಿಯಲ್ಲಿ ಮೆರವಣಿಗೆ ಹೋಗಿ ಜಪಿಸಿದ ಮಂತ್ರದಿಂದಲ್ಲ. ಕಾಯಕ ಯೋಗಿಗಳಾಗಿ ದಾಸೋಹಿಗಳಾಗಿ ಗಳಿಸಿದ ಅನುಭಾವ. ಇಂಥ ಕಾಯವನ್ನೇ ಉಸಿರಾಗಿಸಿಕೊಂಡು ಜೀವಿಸಿದ ಬಾಚಿ ಕಾಯಕದ ಬಸವಪ್ಪ ಮತ್ತು ಅವರ ಪುಣ್ಯಸ್ತ್ರೀ ಕಾಳವ್ವೆಯವರು ನಮಗೆಲ್ಲರಿಗೂ ಆದರ್ಶವಾಗಬೇಕು.

ಶರಣು ಶರಣಾರ್ಥಿಗಳು.

ಸಂಗ್ರಹ ಮತ್ತು ಲೇಖನ :

ವಿಜಯಕುಮಾರ ಕಮ್ಮಾರ ತುಮಕೂರು – 572 104

ಮೋಬೈಲ್‌ ನಂ : 97413 57132 / 97418 89684
ಈ-ಮೇಲ್‌ : vijikammar@gmail.com

Don`t copy text!