“ಅಕ್ಕಸಾಲಿಗ: ಶರಣ ಹಾವಿನಹಾಳ ಕಲ್ಲಯ್ಯ”

ವಚನ ಸಾಹಿತ್ಯದಲ್ಲಿ ಆಯಗಾರರು ಲೇಖನ ಮಾಲಿಕೆ-೨

“ಅಕ್ಕಸಾಲಿಗ: ಶರಣ ಹಾವಿನಹಾಳ ಕಲ್ಲಯ್ಯ”

ಪರಮ ಪದವಿಯ | ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ ||
ಪರಮ ಪದವಿಯ | ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ ||
ಎನಗೆ ನಿಮ್ಮ ತೊತ್ತು | ಸೇವೆಯೆ ಸಾಕು ||
ಮಹಾಲಿಂಗ | ಕಲ್ಲೇಶ್ವರಾ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1749 / ವಚನ ಸಂಖ್ಯೆ-1161)

History of world is story of Gold. “ಚಿನ್ನದ ಕಥೆಯೇ ಪ್ರಪಂಚದ ಇತಿಹಾಸ” ಎನ್ನುವುದು ಅತ್ಯಂತ ಸುಪ್ರಸಿದ್ಧ ಸಾಲುಗಳು. ಸಿಂಧು ನದಿ ಕಣಿವೆಯ ನಾಗರೀಕತೆ ಅಥವಾ ಅಮೇಝಾನ್‌ ನದಿ ಕಣಿವೆಯ ನಾಗರೀಕತೆ ಅಥವಾ ನೈಲ್‌ ನದಿ ಕಣಿವೆಯ ನಾಗರೀಕತೆಯಿಂದ ಹಿಡಿದು ಇಂದಿನವರೆಗೆ ಮಾನವನಿಗೆ ಚಿನ್ನದ ಮೇಲಿನ ವ್ಯಾಮೋಹ ಅಪರಿಮಿತವಾದದ್ದು. ಚಿನ್ನದೊಂದಿಗೆ ತಮ್ಮ ಕಾಯಕವನ್ನು ತಳುಕು ಹಾಕಿಕೊಂಡು ಬದುಕು ಕಟ್ಟಿಕೊಂಡು ಬೆಳೆದು ಬಂದ ಆಯಗಾರರೇ “ಆಕ್ಕಸಾಲಿಗರು”. ಅರ್ಕಶಾಲಿ ಎನ್ನುವುದರ ರೂಪಾಂತರ ಶಬ್ದವೇ ಅಕ್ಕಸಾಲಿಗ. ಪ್ರಪಂಚದ ಅತ್ಯಂತ ಪ್ರಾಚೀನ ಪರಂಪರೆ, ಸಂಸ್ಕೃತಿ ಮತ್ತು ಸಂಪ್ರದಾಯ ಅಕ್ಕಸಾಲಿಗರದ್ದು. ಇವರನ್ನು ಸ್ವರ್ಣಕಾರ, ಸೋನಗಾರ, ಪತ್ತಾರ, ಚಿನಿವಾರ, ಏರಣಿಗ, ವಾಜ, ಗೋಲ್ಡ್‌ ಸ್ಮಿಥ್‌, ಸಿಲ್ವರ್‌ ಸ್ಮಿಥ್‌ ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ “ಅಕ್ಷಶಾಲೆ” ಎಂದು ಉಲ್ಲೇಖಿಸಿದ್ದಾನೆ.

17 ನೇ ಶತಮಾನದಿಂದ ವಿಕಸಿತವಾದ ಬ್ಯಾಂಕಿಂಗ್‌ ವ್ಯವಸ್ಥೆಗೆ ತಳಹದಿ ಅಥವಾ ಅಡಿಪಾಯ ಹಾಕಿ ಕೊಟ್ಟ ಮೂಲ ಪುರುಷರು ಅಕ್ಕಸಾಲಿಗರು. ಅಕ್ಕಸಾಲಿಗರು ಚಿನ್ನಾಭರಣಗಳನ್ನು ಸುರಕ್ಷಿತವಾಗಿರಿಸಲು ವ್ಯವಸ್ಥೆಯನ್ನು ಮಾಡಿಕೊಡಲಾರಂಭಿಸಿದರು. ಇದಕ್ಕಾಗಿ ರಸೀದಿಯನ್ನು ಕೊಡುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದರು. ನಂಬಿಕೆ ಮತ್ತು ವಿಶ್ವಾಸಾರ್ಹವಾದ ಈ ರಸೀದಿ ವ್ಯವಸ್ಥೆ ಕ್ರಮೇಣ ಬ್ಯಾಂಕಿಂಗ್‌ ಮಾದರಿಯಾಗಿ ಮೂಂಚೂಣಿಗೆ ಬಂತು. ಹಣದ ಅವಶ್ಯಕತೆ ಇರುವವರಿಗೆ ಮತ್ತು ವ್ಯಾಪಾರಿ ವರ್ಗಕ್ಕೆ ತಕ್ಷಣ ಹಣ ನೀಡುವ ವ್ಯವಸ್ಥೆಯಿಂದಾಗಿ ಅಕ್ಕಸಾಲಿಗರು ಹುಟ್ಟು ಹಾಕಿದ ಈ ರಸೀದಿ ವ್ಯವಸ್ಥೆ ತನ್ನ ಬಾಹುಗಳನ್ನು ವಿಸ್ತರಿಸಿ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ಆಚರಣೆಗೆ ತಂದಿತು. ಇದಿಷ್ಟು ಅಕ್ಕಸಾಲಿಗರ ಪೂರ್ವ ಇತಿಹಾಸ. ಮುಂದೆ 12 ನೇ ಶತಮಾನದಲ್ಲಿ ಅಕ್ಕಸಾಲಿಗ ಶರಣರ ಬಗ್ಗೆ ಒಂದಿಷ್ಟು ವಿಚಾರಗಳನ್ನು ಹಂಚಿಕೊಳ್ಳೋಣ.

ಜಿಡ್ಡುಗಟ್ಟಿದ್ದ ಶ್ರೇಣೀಕೃತ ಸಮಾಜಕ್ಕೆ ವೈಚಾರಿಕತೆಯ ಸ್ಪರ್ಷ ನೀಡಿ ಹೊಸ ಸಮ ಸಮಾಜವನ್ನು ನಿರ್ಮಿಸುವಲ್ಲಿ ಶ್ರಮವಹಿಸಿದ ಬಸವಾದಿ ಶರಣರ ಜೀವಿತದ 12 ನೇ ಶತಮಾನದ ಕಾಲಾವಧಿ ಕರ್ನಾಟಕದ ಇತಿಹಾಸದಲ್ಲಿ ವಿಶಿಷ್ಠವಾದ ಕಾಲಘಟ್ಟ.

ಸರ್ವ ಸಮಾನತೆಯ ಹರಿಕಾರರಾದ ಬಸವೇಶ್ವರರು ಇಂಥ ಶ್ರೇಣೀಕೃತ ಸಮಾಜದ ಸಂಕೋಲೆಗಳನ್ನು ಕಿತ್ತೊಗೆದು ಎಲ್ಲರನ್ನು ಅಪ್ಪಿಕೊಂಡು ಒಪ್ಪಿಕೊಂಡು ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತಿದವರು. ಸಮಾನತೆಯ ಬೀಜ ಬಿತ್ತಿ, ಶೋಷಣೆ ಮತ್ತು ಮೂಢನಂಬಿಕೆಗಳ ವಿರುದ್ಧ ಕ್ರಾಂತಿಯನ್ನು ಮಾಡಿದವರು ಬಸವೇಶ್ವರರು. ಆಚಾರಕ್ಕೆ ಮತ್ತು ವಿಚಾರಕ್ಕೆ ಬಸವೇಶ್ವರರು ಪ್ರಾಮುಖ್ಯತೆಯನ್ನು ನೀಡಿದರು. ಮನುಷ್ಯನ ಯೋಗ್ಯತೆಯನ್ನು ಅಳೆಯುವುದು ಅವರ ಜನ್ಮ ಅಥವಾ ಜಾತಿಯಿಂದಲ್ಲ. ಅವನ ಆಚಾರ ವಿಚಾರಗಳಿಂದ, ಗುಣ ಧರ್ಮಗಳಿಂದ ಎಂದು ಹೇಳಿದ್ದಲ್ಲದೇ ನುಡಿದಂತೆ ನಡೆದವರು ಬಸವೇಶ್ವರರು.

ಆವ ಕುಲವಾದಡೇನು? | ಶಿವಲಿಂಗವಿದ್ದವನೆ ಕುಲಜನು ||
ಕುಲವನರಸುವರೆ ಶರಣರಲ್ಲಿ | ಜಾತಿ ಸಂಕರನಾದ ಬಳಿಕ? ||
ಶಿವಧರ್ಮ ಕುಲೇ ಜಾತಃ | ಪುನರ್ಜನ್ಮ ವಿವರ್ಜಿತಃ ||
ಉಮಾ ಮಾತಾ ಪಿತ ರುದ್ರಃ | ಐಶ್ವರ್ಯಂ ಕುಲಮೇವಚ ಎಂದುದಾಗಿ ||
ಒಕ್ಕುದ ಕೊಂಬೆನವರಲ್ಲಿ | ಕೂಸ ಕೊಡುವೆ ||
ಕೂಡಲಸಂಗಮದೇವಾ | ನಂಬುವೆ ನಿಮ್ಮ ಶರಣನು ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-66 / ವಚನ ಸಂಖ್ಯೆ-718)

ಕುಲವನರಸುವರೆ ಶರಣರಲ್ಲಿ ಜಾತಿ ಸಂಕರನಾದ ಬಳಿಕ? ಎಂದ ಬಸವೇಶ್ವರರು ಕಾಯಕ ಯೋಗಿಗಳನ್ನು ಒಟ್ಟುಗೂಡಿಸಿ ಅವರ ಕಾಯಕವನ್ನು ದೈವತ್ವಕ್ಕೆ ಹೋಲಿಸುತ್ತಾರೆ. ಎಲ್ಲ ಕುಶಲಕರ್ಮಿಗಳನ್ನು “ಆಯಗಾರರು” ಎಂಬ ವಿಶಿಷ್ಠ ಹೆಸರನ್ನು ಬಳಸಿದ ಬಸವೇಶ್ವರರು ಭಕ್ತಿ ಚಳುವಳಿಯ ಮೂಲಕ ತಂದ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಕ್ರಾಂತಿ ಇಡೀ ವಿಶ್ವದಲ್ಲಿಯೇ ಅತ್ಯದ್ಭುತ. ಎಲ್ಲರನ್ನೂ ಜಗತ್ತಿನ ಮೊದಲನೇ ಆಧ್ಯಾತ್ಮಿಕ ಪಾರ್ಲಿಮೆಂಟ್‌ ಎಂದು ಕರೆಯಿಸಿಕೊಂಡ ಅನುಭವ ಮಂಟಪಕ್ಕೆ ಕರೆ ತಂದರು.

ಅಕ್ಕಸಾಲಿಗ ಆಯಗಾರರರಲ್ಲಿ ಇಬ್ಬರು ಪ್ರಮುಖ ವಚನಕಾರರ ಉಲ್ಲೇಖ ಬರುತ್ತದೆ. ಒಬ್ಬರು ಶರಣ ಕಿನ್ನರಿ ಬ್ರಹ್ಮಯ್ಯನವರು ಮತ್ತು ಇನ್ನೊಬ್ಬರು ಶರಣ ಹಾವಿನಹಾಳ ಕಲ್ಲಯ್ಯನವರು. ಬಸವಣ್ಣನವರ ಸಮಕಾಲೀನರಾದ ಈ ಇಬ್ಬರೂ ಶರಣರು ಅನುಭವ ಮಂಟಪದ 770 ಅಮರಗಣಂಗಳಲ್ಲಿ ಇದ್ದಂಥವರು. ಬಸವ ಪುರಾಣ, ಹರಹರನ ರಗಳೆ ಮತ್ತು ಶೂನ್ಯ ಸಂಪಾದನೆ ಮುಂತಾದ ಗ್ರಂಥಗಳಲ್ಲಿ ಈ ಇಬ್ಬರನ್ನೂ ಪವಾಡ ಪುಣ್ಯ ಪುರುಷರಂತೆ ಚಿತ್ರಿಸಿದ್ದಾರೆ. ಸತ್ಯನಿಷ್ಠ ಕಾಯಕ, ನಿಷ್ಕಾಮ ದಾಸೋಹ ಮತ್ತು ಇಷ್ಟಲಿಂಗ ಪೂಜೆಯನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ನುಡಿದಂತೆ ನಡೆದ ಶರಣರಿಗೆ ಪವಾಡ ಪುರುಷರ ಪಟ್ಟ ಕಟ್ಟುವುದು ಎಷ್ಟು ಸರಿ ಎನ್ನುವುದು ಜಿಜ್ಞಾಸೆ ಮತ್ತು ಚರ್ಚೆಯ ವಿಷಯ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಾವಿನಹಾಳ ಗ್ರಾಮದ ಅಕ್ಕಸಾಲಿಗ ಶಿವನಯ್ಯ (ಶಿವನೋಜ, ಶಿವಯ್ಯ) ಮತ್ತು ಸೋಮವ್ವೆಯರ ಮಗ ಶರಣ ಕಲ್ಲಯ್ಯನವರು. ಈ ಹಾವಿನಹಾಳ ಗ್ರಾಮದಲ್ಲಿ ಕಲ್ಲೇಶ್ವರನ ದೇವಸ್ಥಾನವಿದೆ. ಈ ಗ್ರಾಮದ ಮೂಲಕ ಹಾವು ಹರಿದಾಡುವಂತೆ ಭಾಸವಾಗುವ ದೊಡ್ಡ ಹಳ್ಳ ಹಾಯ್ದು ಹೋಗಿದೆ. ಆಧ್ಯಾತ್ಮದತ್ತ ಒಲವಿದ್ದ ಶರಣ ಹಾವಿನಹಾಳ ಕಲ್ಲಯ್ಯನವರು ಊರಿನಲ್ಲಿದ್ದ ಕಲ್ಲೇಶ್ವರ ದೇವಸ್ಥಾನದಲ್ಲಿ ಏಕಾಂತವಾಗಿ ಧ್ಯಾನದಲ್ಲಿ ನಿರತರಾಗಿರುತ್ತಿದ್ದುದು ತಂದೆ-ತಾಯಿಯರಿಗೆ ಕಷ್ಟಕರವಾಗಿತ್ತು. ಅವರ ಒಂದು ವಚನದಲ್ಲಿ ಕಲ್ಲೇಶ್ವರನನ್ನು ಪ್ರಾರ್ಥಿಸಿದ್ದಾರೆ.

ಕಂಗಳು ತುಂಬಿ ನಿಮ್ಮುವ | ನೋಡುತ್ತ ನೋಡುತ್ತಲಯ್ಯಾ
ಕಿವಿಗಳು ತುಂಬಿ ನಿಮ್ಮುವ | ಕೇಳುತ್ತ [ಕೇಳುತ್ತ] ಲಯ್ಯಾ
ಮನತುಂಬಿ ನಿಮ್ಮುವ | ನೆನೆವುತ್ತ ನೆನೆವುತ್ತಲಯ್ಯಾ 
ಮಹಾಲಿಂಗ ಕಲ್ಲೇಶ್ವರ | ದೇವರಲ್ಲಿ ಸುಖಿಯಾಗಿರ್ದೆನಯ್ಯ
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1745 / ವಚನ ಸಂಖ್ಯೆ-1132)

ಆಧ್ಯಾತ್ಮಿಕ ಚಿಂತನೆಗಳಿಂದ ಏಕಾಂತದಲ್ಲಿರುತ್ತಿದ್ದ ಕಲ್ಲಯ್ಯನವರಿಗೆ ಸಾಂಸಾರಿಕ ಜೀವನದಲ್ಲಿ ವೈರಾಗ್ಯ ಮೂಡಿತ್ತೆಂದು ಕಾಣುತ್ತದೆ. ಇವರಿಗೆ ಮದುವೆ ಮಾಡಿದರೆ ಅನುಕೂಲ ಎಂದು ತಂದೆ ತಾಯಿಗಳು ಆಪೇಕ್ಷೆ ಪಡುತ್ತಾರೆ. ಆದರೆ ಕಲ್ಲಯ್ಯನವರು ಮದುವೆಯನ್ನು ನಿರಾಕರಿಸುತ್ತಾರೆ. ಗುರುಗಳ ಅವಶ್ಯಕತೆಯನ್ನು ಅರಿತ ಕಲ್ಲಯ್ಯನವರು ಸೊನ್ನಲಿಗೆಗೆ ಪ್ರಯಾಣ ಬೆಳೆಸುತ್ತಾರೆ. ಶ್ರದ್ಧಾ ಭಕ್ತಿಯಿಂದ ಸೊನ್ನಲಿಗೆಯ ಶ್ರೀ ಸಿದ್ಧರಾಮೇಶ್ವರ ದೇವಸ್ಥಾನದಲ್ಲಿ ಶರಣ ಸಿದ್ಧರಾಮೇಶ್ವರರ ಸನ್ನಿಧಾನದಲ್ಲಿ ಶಿವಚಿಂತನೆ, ಜ್ಞಾನ ಶಿವಾನುಭವ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದರು. ಹೀಗಿರಲು ಆ ಶಿವಾನುಭವ ಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶರಣೆ ಚನ್ನವ್ವಳೊಂದಿಗೆ ವಿವಾಹವಾಗುತ್ತದೆ. ದಿನಗಳುರುತ್ತಿದ್ದಂತೆ ಕಲ್ಲಯ್ಯ ಮತ್ತು ಚನ್ನವ್ವ ದಂಪತಿಗಳಿಗೆ ಹೆಣ್ಣು ಮಗು ಆಗುತ್ತದೆ. ಈ ಮಗುವಿಗೆ ಕಲ್ಲವ್ವೆ ಅಂತ ನಾಮಕರಣ ಮಾಡುತ್ತಾರೆ.

ಈ ಗ್ರಾಮದೇವರ ಮತ್ತು ತನ್ನ ಮನದೈವ ಕಲ್ಲೇಶ್ವರನ ಹೆಸರನ್ನೇ “ಮಹಾಲಿಂಗ ಕಲ್ಲೇಶ್ವರ” ಎಂದು ವಚನಾಂಕಿತವನ್ನು ಇಟ್ಟುಕೊಂಡು ಶರಣ ಕಲ್ಲಯ್ಯನವರು 102 ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳಲ್ಲಿ ಅಷ್ಟಾವರಣ, ಪಂಚಾಚಾರ, ಅಂತರಂಗದ ಅನುಭಾವಗಳು ನಿರೂಪಿತವಾಗಿವೆ. ಕಲ್ಯಾಣಕ್ಕೆ ಬಂದು ಶರಣ ಚಳುವಳಿಯಲ್ಲಿ ಭಾಗವಹಿಸಿದರೆಂದು ಉಲ್ಲೇಖಿಸಲಾಗಿದೆ. ಆದರೆ ಬಸವೇಶ್ವರರ ದರ್ಶನ ಆಗಿತ್ತೋ ಇಲ್ಲವೋ ಅನುಮಾನ. ಅವರ ಸಾಕಷ್ಟು ವಚನಗಳಲ್ಲಿ ಬಸವೇಶ್ವರರ ಗುಣಗಾನ ಮಾಡಿದ್ದನ್ನು ನಾವು ಕಾಣಬಹುದು.

ಬಯಲ ಬೊಮ್ಮವ | ನುಡಿವ ||
ಆ ನುಡಿಯ ಬಯಲ ಭ್ರಮೆಯಲ್ಲಿ | ಬಿದ್ದ ಜಡರುಗಳು ||
ಬಲ್ಲರೆ | ಶಿವನಡಿಗಳ? ||
ಗುರುಲಿಂದ ಜಂಗಮದ | ಪಾದೋದಕ ಪ್ರಸಾದವೆಂಬ ||
ಪರಮಾಮೃತವ | ಸವಿದು ||
ಪರವಶನಾದ | ಪರಮ ಮುಗ್ಧಂಗಲ್ಲದೆ ||
ಪರವು | ಸಾಧ್ಯವಾಗದು ||
ಮಹಾಲಿಂಗ ಕಲ್ಲೇಶ್ವರನ | ಶರಣ ||
ಪೂರ್ವಾಚಾರಿ || ಬಸವಣ್ಣಂಗಲ್ಲದೆ ||
(ಸಮಗ್ರ ವಚನ ಸಂಪುಟ: ಒಂದು-2016 / ಪುಟ ಸಂಖ್ಯೆ-1750 / ವಚನ ಸಂಖ್ಯೆ-1166)

ಹಾವಿನಹಾಳ ಕಲ್ಲಯ್ಯನವರು ತಮ್ಮ ಜೀವನದ ಬಹುಪಾಲು ಕಾಲವನ್ನು ಸೊನ್ನಲಿಗೆ (ಸೊಲ್ಲಾಪುರ) ಯಲ್ಲಿ ಕಳೆಯುತ್ತಾರೆ. ಸೊನ್ನಲಿಗೆಯಲ್ಲಿಯೇ ಲಿಂಗೈಕ್ಯರಾಗುತ್ತಾರೆ. ಶ್ರೀ ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿ ಇರುವ ಮಹಾಲಿಂಗ ಕಲ್ಲೇಶ್ವರ ದೇವಾಲಯ ಇವರ ನಿಜ ಸಮಾಧಿ ಎಂದು ಗುರುತಿಸಲಾಗಿದೆ.

ವಚನಗಳು ಸಾಹಿತ್ಯದ ದೃಷ್ಟಿಯಿಂದಲೂ ಮೌಲಿಕವಾಗಿವೆ. ವಚನಗಳು ವಿಭಿನ್ನ ನೆಲೆಯ ಅಧ್ಯಯನಕ್ಕೆ ಆಹ್ವಾನಿಸುತ್ತವೆ. ಶತ ಶತಮಾನಗಳಿಂದ ಅವರವರು ತಮಗೆ ಬೇಕಾದ ನೆಲೆಯ ಅಧ್ಯಯನಕ್ಕೆ ಅವನ್ನು ಒಳಪಡಿಸುತ್ತಾ ಬಂದಿದ್ದಾರೆ. ಆದರೆ ವಚನದ ಆಶಯಕ್ಕೆ ಧಕ್ಕೆ ಬಾರದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಅದು ವ್ಯಾಪಕ ಅಧ್ಯಯನದಿಂದ ಮಾತ್ರ ಸಾಧ್ಯ ಎಂದು ಹೇಳತಾ ಈ ಲೇಖನಕ್ಕೆ ಅಲ್ಪ ವಿರಾಮ ಹೇಳುತ್ತೇನೆ. ಯಾಕಂದರ ಇಂತ ಚಿಂತನೆಗಳಿಗೆ, ವಿಮರ್ಷೆಗಳಿಗೆ ಪೂರ್ಣ ವಿರಾಮ ಎಂದೂ ಇರೋದಿಲ್ಲ ಮತ್ತು ಇವು ನಿತ್ಯ ನೂತನ ನಿರಂತರ.

ಶರಣು ಶರಣಾರ್ಥಿಗಳು.

-ವಿಜಯಕುಮಾರ ಕಮ್ಮಾರ
ತುಮಕೂರು – 572 104

ಮೋಬೈಲ್‌ ನಂ : 97413 57132 / 97418 89684
ಈ-ಮೇಲ್‌ : vijikammar@gmail.com

Don`t copy text!