ರಂಗೋಲಿಯಲ್ಲಿ ಅರಳುವ ಕಾರ್ಟುನ್ ಚಿತ್ರಗಳು

ರಂಗೋಲಿಯಲ್ಲಿ ಅರಳುವ ಕಾರ್ಟುನ್ ಚಿತ್ರಗಳು

ಪ್ರತಿ ಮನುಷ್ಯನಲ್ಲಿ ಏನಾದರೊಂದು ಕಲೆ, ಪ್ರತಿಭೆ ಇದ್ದೆ ಇರುತ್ತದೆ .ಕೆಲವರು ಅದನ್ನು ತಾವಾಗಿಯೇ ಗುರುತಿಸಿಕೊಂಡು ಆ ಕಲೆಯನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಅದನ್ನು ಹವ್ಯಾಸವಾಗಿಸಿಕೊಂಡು ಸಮಯ ಸಿಕ್ಕಾಗ, ಬಿಡುವು ಮಾಡಿಕೊಂಡು ಆ ಕಲೆ ಸೃಜನಶೀಲತೆಯೊಂದಿಗೆ ನಂಟನ್ನು ಬೆಳೆಸಿಕೊಂಡು ತಮ್ಮ ಸಮಯವನ್ನು ಸದ್ವಿನಿಯೋಗ ಮಾಡಿಕೊಳ್ಳುವುದರ ಮೂಲಕ ದಿನದಿಂದ ದಿನಕ್ಕೆ ಆ ಕಲೆಯನ್ನು ಅಭಿವೃದ್ಧಿ ಮಾಡಿಕೊಂಡು ಆ ನಿಟ್ಟಿನಲ್ಲಿ ಇತರರಿಗೂ ಮಾದರಿಯಾಗಿರುತ್ತಾರೆ.

ಕಲೆ ಎಂಬುದು ಆ ದೇವರು ನೀಡಿದ ಒಂದು ಅದ್ಭುತ ವರ. ಯಾವುದೇ ಕಲೆ ಅಷ್ಟು ಸುಲಭದಲ್ಲಿ ಒಲಿಯುವುದಿಲ್ಲ.ಅದಕ್ಕಾಗಿ ತಾಳ್ಮೆ,ಪರಿಶ್ರಮ, ಕಲಿಯಬೇಕೆಂಬ ಆಸಕ್ತಿ ಹುಮ್ಮಸ್ಸು ಮತ್ತು ಪ್ರೋತ್ಸಾಹವೂ ಅಷ್ಟೇ ಮುಖ್ಯ. ಹಾಗೆಯೇ ಆ ಕಲೆ ಬೆಳಕು ಕಾಣಬೇಕೆಂದರೆ ಅವಕಾಶಗಳು ಮತ್ತು ಆ ಕಲೆಯನ್ನು ಪ್ರಸ್ತುತ ಪಡಿಸಲು ವೇದಿಕೆಯು ಮುಖ್ಯವಾಗಿರುತ್ತದೆ.ಪ್ರಸ್ತುತ ಇಂದಿನ ದಿನಗಳಲ್ಲಿ ಪ್ರತಿಯೊಂದು ಕಲೆಗೆ ,ಸಾಹಿತ್ಯ, ಸಂಗೀತ,ಬರವಣಿಗೆ ರಂಗೋಲಿ ಮತ್ತೆಲ್ಲ ಹವ್ಯಾಸಗಳಿಗೆ ತಮ್ಮದೇ ಆದ ಸ್ಥಾನಮಾನ ಇದ್ದೇ ಇದೆ.ಪುರಾತನ ಕಾಲದ ಕಲೆಗಳಿಗೆ ಈಗಿನ ನವ ಆಧುನಿಕ ಯುಗದ ಜನ ಆ ಕಲೆಯತ್ತ ಮುಖಮಾಡಿ ಅವುಗಳನ್ನು ತಮ್ಮದೇ ಆದ ಹೊಸ ಹೊಸ ರೀತಿಯಲ್ಲಿ ಪ್ರಸ್ತುತ ಪಡಿಸುತ್ತ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯರಾಗಿದ್ದಾರೆ.
ಮೊದಲಿನಂತೆ ಈಗಿನ ಕಲೆಗಳು ಬರೀ ಒಂದೇ ಪ್ರದೇಶ,ಒಂದೇ ರಾಜ್ಯಕ್ಕೆ ಸೀಮಿತವಾಗದೆ ಎಲ್ಲ ಕಡೆಗೂ ಪಸರಿಸುತ್ತ ರಾಜ್ಯ,ರಾಷ್ಟ್ರ,ಮತ್ತು ಅಂತರ್ ರಾಷ್ಟ್ರ ಮಟ್ಟದಲ್ಲಿ ಬೆಳಕು ಕಾಣುತ್ತಿರುವುದಕ್ಕೆ ಈ ಅಂತರ್ಜಾಲ ಬಹು ಮುಖ್ಯ ಕಾರಣ ಅನ್ನಬಹುದು. ಹಲವಾರು ಜನರು ಆ ಕಲೆಗಳನ್ನು ತಮ್ಮ ಹವ್ಯಾಸ, ವೃತ್ತಿಯನ್ನಾಗಿಸಿಕೊಂಡು ಬದುಕು ಕಟ್ಟಿಕೊಳ್ಳುವುದರ ಜೊತೆಗೆ ನಮ್ಮ ಪರಂಪರೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ತಮ್ಮ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ.ಇದು ತುಂಬಾ ಸಂತಸದ ವಿಷಯ.

ಆದರೆ ನಮ್ಮ ನಡುವೆ ಅದೇಷ್ಟೋ ಪ್ರತಿಭಾವಂತರು ನಮಗೇ ಗೊತ್ತಿಲ್ಲದಂತೆ ಎಲೆಮರೆ ಕಾಯಿಯಂತೆ ಇದ್ದು ಬಿಡುತ್ತಾರೆ.ಅಂತಹ ಒಬ್ಬ ಪ್ರತಿಭಾವಂತ ಕಲೆಗಾರ್ತಿಯನ್ನು ತಮ್ಮೆಲ್ಲರಿಗೂ ಪರಿಚಯ ಮಾಡಿಕೊಡಲು ತುಂಬಾ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ಇವರ ಹೆಸರು ಮಯೂರಿ ವೀರೇಂದ್ರ ಅಂತ ಮೂಲತಃ ಇವರು ಬೆಳಗಾವಿ ಜಿಲ್ಲೆ ರಾಮದುರ್ಗದವರು.ಚಿಕ್ಕಂದಿ ನಿಂದಲೇ ಚಿತ್ರ ಕಲೆಯಲ್ಲಿ ಬಹಳಷ್ಟು ಆಸಕ್ತಿಯಿದ್ದ ಇವರು ತಮ್ಮ ಶಾಲಾ ಕಾಲೇಜುಗಳ ದಿನದಿಂದ ಚಿತ್ರ ಕಲೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬಂದವರು.ಓದಿನ ಜೊತೆ,ಜೊತೆಗೆ ಈ ಹವ್ಯಾಸ ಬೆಳೆಸಿಕೊಂಡು ಬಂದ ಮಯೂರಿ ಅವರು ಬಿ.ಕಾಂ. ಪದವೀಧರೆ.

ತಂದೆ ಬಸವರಾಜ ತಾಯಿ ಶಕುಂತಲಾ ಅವರ ಪ್ರೀತಿಯ ಸುಪುತ್ರಿಯಾದ ಮಯೂರಿ ಕೂಡುಕುಟುಂಬದ ಒಲವಿನ ಮಮತೆಯಲ್ಲಿ ಬೆಳೆದ ಮುದ್ದಿನ ಮಗಳು.


ಶ್ರೀಯುತ ವೀರೇಂದ್ರ ಅವರ ಜೊತೆ ಸಪ್ತಪದಿ ತುಳಿದು ಅವರ ಬಾಳ ಸಂಗಾತಿಯಾಗಿ ಮದುವೆಯ ನಂತರ ದೂರದ ಮಹಾರಾಷ್ಟ್ರ ರಾಜ್ಯದ ಪುಣೆಗೆ ಬಂದು ನೆಲೆಸುತ್ತಾರೆ.ಬಿಡುವಿನ ಸಮಯದಲ್ಲಿ ತಮ್ಮ ನೆಚ್ಚಿನ ಹವ್ಯಾಸವಾದ ಚಿತ್ರ ಕಲೆ ಬಿಡಿಸುವುದರ ಜೊತೆಗೆ ಸೀರೆಗಳಿಗೆ ಕುಚ್ಚು ಹಾಕುವುದು,ವಿಧ ವಿಧ ಕ್ರ್ಯಾಪ್ಟ್ ವರ್ಕ್, ಜ್ಯುವೆಲ್ಲರಿ ಮೇಕಿಂಗ್, ವಾಲ್ ಪೇಂಟಿಂಗ್, ಕ್ಯಾ0ಡಲ್ ಮೇಕಿಂಗ್, ಪ್ಲಾವರ್ ಮೇಕಿಂಗ್ ಮಣ್ಣಿನ ಮಡಿಕೆಗಳ ಮೇಲೆ ಚಿತ್ರ ಬಿಡಿಸುವುದು,ಕಸೂತಿ,ಹಾಗೆಯೇ ನಿರುಪಯುಕ್ತ ಎಂದು ಬಿಸಾಡುವ ಅನೇಕ ವಸ್ತುಗಳು ಮಯೂರಿ ಅವರ ಸೃಜನಶೀಲತೆಯ ಕರದಲ್ಲಿ ಉಪಯುಕ್ತಕರ ಮತ್ತು ಮನೆ,ಮನಸ್ಸನ್ನು ಮುದ ಗೊಳಿಸುವ ವಸ್ತುಗಳಾಗಿ ನೋಡುಗರನ್ನು ಆಕರ್ಷಿಸುತ್ತವೆ. ಹೀಗೆ ಇನ್ನೂ ಅನೇಕ ಹವ್ಯಾಸಗಳ ಜೊತೆಗೆ ರಂಗೋಲಿ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು ಬಂದಿರುವ ಮಯೂರಿ
ವಿಶೇಷವಾಗಿ ಚಿಕ್ಕ ಮಕ್ಕಳಿಗೆ ತುಂಬಾ ಇಷ್ಟವಾಗುವ ಕಾರ್ಟುನ್ ಕ್ಯಾರೆಕ್ಟರ್ ಗಳನ್ನು ಉದಾಹರಣೆಗೆ ಬಾಲ ಗಣಪ,ಛೋಟಾ ಭೀಮ್ ,ಡೋರೆಮಾನ್,ಪುಟ್ಟ,ಪುಟ್ಟ ಬಣ್ಣದ ಮೀನು,ಸೈಕಲ್,ಸ್ಕೂಟರ್ ಹೀಗೆ ಇನ್ನೂ ಅನೇಕ ರೀತಿಯ ಚಿತ್ರಗಳನ್ನು ಬಣ್ಣದ ರಂಗೋಲಿಯಲ್ಲಿ ಬಿಡಿಸುವ ಇವರು ಆ ರಂಗೋಲಿಯನ್ನು ಮುಗಿಸಲು ಸುಮಾರು ಮೂರರಿಂದ ನಾಲ್ಕು ಗಂಟೆ ಸಮಯ ತಗುಲುತ್ತದೆ ಎಂದು ಹೇಳುತ್ತಾರೆ.

ಅವರ ತಾಳ್ಮೆ,ಸಹನೆ ಮತ್ತು ಅವರು ತುಂಬಾ ಪ್ರೀತಿಯಿಂದ ಇಷ್ಟ ಪಟ್ಟು ಬಿಡಿಸುವ ಆ ರಂಗೋಲಿ ಕಲೆಗೆ ಮತ್ತು ಅವರಿಗೂ ಮನದಾಳದ ನಮನಗಳು.ವಿಶೇಷವಾಗಿ ಗಣಪತಿ ಹಬ್ಬ ನವರಾತ್ರಿ ಸಂದರ್ಭದಲ್ಲಿ ದಿನವೂ ಒಂದೊಂದು ತರಹ ಇವರು ಬಿಡಿಸುವ ಬಣ್ಣದ ರಂಗೋಲಿ ನೋಡುವುದೇ ಒಂದು ಸೋಜಿಗ!. ಅತ್ಯಂತ ತಾಳ್ಮೆ, ಸಹನೆ,ಸೃಜನಶೀಲತೆ ಏಕಾಗ್ರತೆ ಬೇಡುವ ಈ ರಂಗೋಲಿ ಕಲೆ ಇವರಿಗೆ ಒಲಿದಿದ್ದು ಅವರ ಆಸಕ್ತಿ ಮತ್ತು ಕಲೆಯ ಮೇಲಿರುವ ಅವರ ಅಭಿಮಾನಕ್ಕೆ ಸಾಕ್ಷಿಯಾಗಿದೆ.ಅವರು ಬಿಡಿಸಿದ ರಂಗೋಲಿ ತಕ್ಷಣಕ್ಕೆ ನೋಡಿದರೆ ಥೇಟ್ ಪೇಂಟಿಂಗ ತರಹ ಕಾಣುವ ಆ ರಂಗೋಲಿ ಚಿತ್ರಗಳು ತುಂಬಾ ಸುಂದರವಾಗಿ, ಮನಮೋಹಕವಾಗಿ ಕಣ್ಮಸೆಳೆಯುತ್ತವೆ.ಒಂದಿಷ್ಟು ಕೂಡ ಆಚೆ ಈಚೆ ಹೋಗದಂತೆ ಚಿತ್ರ ಬಿಡಿಸಿಕೊಂಡು,ಅದಕ್ಕೆ ಸರಿಯಾಗಿ ಹೊಂದುವ ಬಣ್ಣಗಳನ್ನು ಯಾವುದೇ ಸಲಕರಣೆಗಳನ್ನು ಉಪಯೋಗಿಸದೆ ಬರೀ ಕೈಯಿಂದಲೇ ಆ ಚಿತ್ರಕ್ಕೆ ಜೀವ ತುಂಬುವ ಅವರ ಕಾಯಕಕ್ಕೆ ಶರಣು. ಇಲ್ಲಿ ಬಹುಮುಖ್ಯ ವಿಷಯವನ್ನು ಗಮನಿಸುವುದಾದರೆ ಮಯೂರಿ ಅವರು ಈ ಎಲ್ಲ ಕಲೆಯನ್ನು ಕಲಿಯಲು ಯಾವುದೇ ರೀತಿಯ ವಿಶೇಷ ತರಬೇತಿಯನ್ನು ಪಡೆದಿಲ್ಲ.ಆಗಾಗ ಯೂಟ್ಯೂಬ್ ಚಾನಲ್ ನೋಡಿ ತಮ್ಮಷ್ಟಕ್ಕೆ ತಾವೇ ಈ ಕಲೆಗಳನ್ನು ಅಭಿವೃದ್ಧಿ ಪಡಿಸಿಕೊಂಡು ಬಂದಿದ್ದಾರೆ.
ಪತಿ ವೀರೇಂದ್ರ ಮತ್ತು ಮಗ ಸೋಹಂನೊಂದಿಗೆ ಸುಖಸಂಸಾರ ನಡೆಸುತ್ತಿರುವ ಮಯೂರಿ ಅವರ ಕಲೆಯನ್ನು ಕಂಡು ಅವರ ಪತಿ ಇತ್ತೀಚೆಗೆ ಅವರನ್ನು ಚಿತ್ರಕಲೆ ತರಬೇತಿ ತೆಗೆದುಕೊಳ್ಳಲು ಒತ್ತಾಯಿಸಿ ಅವರ ಕಲೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಮಯೂರಿ ಅವರ ಈ ಎಲ್ಲ ಕಲೆಗಳು,ಸೃಜನಶೀಲತೆ ಬೆಳಕಿಗೆ ಬಂದು ಮತ್ತಷ್ಟು ಬೆಳೆಯಲಿ ಆ ಭಗವಂತ ಮತ್ತು ಗುರು ಹಿರಿಯರು ಅವರನ್ನು ಆಶೀರ್ವದಿಸಲಿ ಅಂತ ಹಾರೈಸುತ್ತೇನೆ.ಇಂತ ಒಬ್ಬ ಒಳ್ಳೆಯ ಪ್ರತಿಭಾವಂತೆ,ಕಲೆಗಾರ್ತಿ ನನ್ನ ಬಾಲ್ಯದ ಗೆಳತಿ ಅಂತ ಹೇಳಿಕೊಳ್ಳುವುದಕ್ಕೆ ತುಂಬಾ,ಖುಷಿ ಮತ್ತು ಅಷ್ಟೇ ಹೆಮ್ಮೆ ಕೂಡ ಎನಿಸುತ್ತದೆ.ಮುಂದೆಯೂ ಇದೇ ರೀತಿ ನಿನ್ನ ಈ ಅಪರೂಪದ ಹವ್ಯಾಸಗಳನ್ನು ಮುಂದುವರೆಸಿಕೊಂಡು ಹೋಗು ಆದಷ್ಟು ಬೇಗ ನಿನ್ನ ಕಲೆ ಜಗತ್ ಪ್ರಸಿದ್ಧವಾಗಲಿ,ಅನೇಕ ಪ್ರಶಸ್ತಿ ಪುರಸ್ಕಾರಗಳು ನಿನ್ನನ್ನು ಅರಸಿಕೊಂಡು ಬರಲಿ ಎಂದು ಅಭಿನಂದಿಸುತ್ತೇನೆ. ಶುಭವಾಗಲಿ.

ಸರೋಜಾ ಶ್ರೀಕಾಂತ ಅಮಾತಿ,ಕಲ್ಯಾಣ್ ಮುಂಬೈ

Don`t copy text!