ಅವ್ವ ಹೇಳುತ್ತಿದ್ದ ಅಮಾಸಿಗೆ ಅರವತ್ತಾರರ ಏರು ಹರೆಯ 

ಅವ್ವ ಹೇಳುತ್ತಿದ್ದ ಅಮಾಸಿಗೆ ಅರವತ್ತಾರರ ಏರು ಹರೆಯ 

ಇನ್ನೇನು ನಸುಕು ಹರಿದು, ಹೊತ್ತು ಹೊಂಟರೆ ಮಾನೌಮಿ ಅಮಾಸಿ ಇತ್ತು. ಅದು ಆಯಿತವಾರ ಅಮಾಸಿ. ಅದೇ ಅಮಾಸಿ ದಿನ ನೀನು ಹುಟ್ಟಿದ್ದು., ಎಂದು ಅವ್ವ ಕರಾರುವಾಕ್ಕಾಗಿ ನಾನು ಹುಟ್ಟಿದ ಅಂದಿನ ಅಮವಾಸ್ಯೆಯ ವಾರ, ಗಳಿಗೆ, ತೇದಿಗಳನ್ನು ಹೇಳುತ್ತಿದ್ದಳು. ಹಾಗೆ ಹೇಳುವಾಗ ಅವಳ ಮುಖ, ಮೈ ಮನದ ತುಂಬೆಲ್ಲ ಹಚ್ಚಹಸಿರಿನ ಜವಾರಿಖುಷಿ ಅರಳಿ ಪರಿಮಳಿಸುತಿತ್ತು. ಅದು ಅವಳ ಸಟಪಟ ಖುಷಿಯಾಗಿರುತ್ತಿರಲಿಲ್ಲ. ಹಂಡೆ ಹಾಲು ಕುಡಿದಂತಹ ಖಂಡುಗ ಖಂಡುಗ ಖುಷಿ‌. ಚುಕ್ಕಿಯೊಳಗಣ ಕನಸುಗಳು ಕುಣಿದಾಡಿದ ವಿಸ್ಮಯದ ಖುಷಿ ಅದಾಗಿರುತ್ತಿತ್ತು.

ಅದು ಬಿಟ್ಟರೆ ಗಾಂವಟಿ ಸಾಲಿಯ ಕಡಕಲ್ಲ ರಾಮಚಂದ್ರಾಯ ಮಾಸ್ತರ, ದೌತಿ ಗುಳ್ಳಿಯಲ್ಲಿ ಅದ್ದಿ ಬರೆದಿಟ್ಟ ಟಾಕು ಲೆಕ್ಕಣಿಕೆ ರೆಕಾರ್ಡ್ಸ್. ಅವು ಆ ಕಾಲದ ನಮ್ಮೂರ ಗೂಗಲ್ ಜಗತ್ತಿನ ಇ – ಮೇಲ್ ದಾಖಲೆಗಳು. ಊರಲ್ಲಿ ಯಾರೇ ಹುಟ್ಟಲಿ, ಯಾರೇ ಸಾಯಲಿ ರಾಮಚಂದ್ರಾಯ ಮಾಸ್ತರ ಬರೆದಿಟ್ಟುಕೊಳ್ಳುತ್ತಿದ್ದ ವಾರ, ತಾರೀಖು, ನಕ್ಷತ್ರ, ರಾಶಿಗಳನ್ನು *ಸರ್ಕಾರಿ ಸರ್ಟಿಫಿಕೇಟ್* ತರಹ ನಮ್ಮೂರಲ್ಲಿ ಎಲ್ಲರೂ ಅವನ್ನೇ ಉಲ್ಲೇಖಿಸುತ್ತಿದ್ದರು. ಸರಕಾರಿ ಶಾಲೆಗೆ ಸೇರಿಸಲು ಅವು ಅಧಿಕೃತ ದಾಖಲೆಗಳಂತೆ ಬಳಕೆಯಾಗುತ್ತಿದ್ದವು. ಅನಕ್ಷರಸ್ಥರಾದ ನನ್ನ ಅಪ್ಪ ಅವ್ವ ಕೂಡಾ ರಾಮಚಂದ್ರಾಯ ಮಾಸ್ತರ ಕೊಟ್ಟ ದೌತಿಗುಳ್ಳಿ ಲೆಕ್ಕಣಿಕೆ ಸರ್ಟಿಫಿಕೇಟ್ ಗಳನ್ನೇ ಅವಲಂಬಿಸಿದ್ದರು.

ಮಲ್ಲಣ್ಣಾ, ನೀನು ಮೂರು ತಿಂಗಳ ಕೂಸಿದ್ದಿ. ಗವೀ ಭೀಮಾಶಂಕರ ಅವಧೂತರು *ಇಚ್ಛಾಮರಣ* ಹೊಂದುತ್ತಾರೆಂಬ *ಸದ್ಗತಿ ಸಂಗತಿ* ಸುತ್ತಮುತ್ತ ನಾಕಿಪ್ಪತ್ತು ಹಳ್ಳಿಗಳಿಗೂ ಸುದ್ದಿ ಆಗಿತ್ತು.

ನಿಮ್ಮಪ್ಪ- ನಾನು, ಇಬ್ಬರೂ ಸೇರಿ ಭೀಮಾಶಂಕರ ಅವಧೂತರ ದರ್ಶನ ಪಡೆಯಲು ನಿನ್ನನ್ನೂ ಎತ್ಕೊಂಡು ಸಾಧು ಮುತ್ಯಾನ ಗವಿಕಡೆ ಹೋದಿವಿ. ಗವಿ ಮುಂದಿನ ಪೌಳಿ ತುಂಬೆಲ್ಲಾ ಜನ ಅಂದ್ರೇ ಜನಾ…ಜಾತ್ರಿ. ಇಂಗ್ರೇಜಿ ನಾಡಿನ ಕಡೆಯ ದೂರದ ಬಿಜಾಪುರ, ಬಾಗಲಕೋಟಿ, ಸೊಲ್ಲಾಪುರ ಅಲ್ಲದೇ ಅಂಕಲಕೋಟಿ ಕಡೀಂದ್ಲೂ ಹಿಂಡು ಹಿಂಡಾಗಿ ಭಕ್ತರು ಬಂದಿದ್ರು. ನಮ್ಮ ಕಣ್ಮುಂದೆ ಭೀಮಾಶಂಕರರು ಸಡಗರದಿಂದ ಬದುಕಿದ್ದಾಗಲೇ ಸದ್ಗತಿ ಸಂಭ್ರಮದ ಸಮಾರಾಧನೆ ಅದಾಗಿತ್ತು.

ಸತ್ಪುರುಷ ಭೀಮಾಶಂಕರ ಸಂತರು ತಾವು ಜೀವಂತವಿದ್ದಾಗಲೇ ಗಚ್ಚಿನ ನೆಲಗವಿಯೊಳಗೆ ತಮ್ಮ ಸಮಾಧಿ ತಾವೇ ಕಟ್ಟಿಕೊಂಡರು. ಖುದ್ದು ಸಮಾಧಿ ಸ್ಥಿತಿಯಲ್ಲಿ ಕುಂತು ಕಾಯದ ಅಳತೆ ಮಾಡಿಕೊಂಡು ಸ್ವತಃ ಸಿದ್ದಪಡಿಸಿಕೊಂಡಿದ್ದ ಅವರದೇ *ಸಿದ್ದಸಮಾಧಿ* ಅದು. ಅದರ ಮುಂದೆ ಕುಂಚಿಗೆ ಹಾಸಿ ನಿನ್ನನ್ನು ಮಲಗಿಸಿದೆವು.

ನಾಲ್ಕು ನೀಲಾಂಜನಗಳ ತಣ್ಣಗಿನ ಬೆಳಕು ಗವಿಯೊಳಗಿನ ಮಂದಗತ್ತಲೆ ಕಳೆದಿತ್ತು. ಒಂದೇ ಒಂದು ಸಣ್ಣಕೂದಲು ಬಿದ್ರೂ ಅದರ ಸಪ್ಪಳ ಕೇಳಿಸಬೇಕು, ಅಷ್ಟು ನಿಶ್ಚಿಂತ ಶಾಂತ ವಾತಾವರಣ ಅಲ್ಲಿತ್ತು. ಗವಿಯ ಒಳಗೂ ಹೊರಗೂ ಶಪಥದ ಹಾಗೆ ಮಹಾಂತ ಮಡಿವಾಳರ ನಿರಂತರ ಜಪದ ಮಳೆ. ನೂರಾರು ಏಕತಾರಿಗಳ ನಾದ ನಿನಾದ. ಲಯಬದ್ಧ ಚಪ್ಪಳಿಗೆ ತಾಳಗಳ ಕರ್ಪೂರದಾರತಿ. (ಹೌದು ಈಗಲೂ ನಮ್ಮೂರ ಭೀಮಾಶಂಕರ ಗವಿಯೊಳಗ ಹೋಗಿ ಕುಂತರೆ ಧೇನಸ್ಥ ಬ್ರಹ್ಮಾಂಡದ ಪ್ರಶಾಂತತೆ ಮನಗಾಣಬಹುದು. ಅದೊಂದು ಅವರ್ಣನೀಯ ಮನೋಸ್ಥಿತಿ. ಶಾಂತ ಚಿತ್ತದಿಂದ ಕುಂತು ಅನುಭಾವಿಸುವ ಧ್ಯಾನ ಸಾಕ್ಷಾತ್ಕಾರವದು. ಕೆಲವು ವರ್ಷಗಳ ಕೆಳಗೆ ಸನ್ಮಿತ್ರ ರಹಮತ್ ತರೀಕೆರೆ ನಮ್ಮೂರಿಗೆ ಬಂದಾಗ, ಮಹಾರಾಜ ಭೀಮಾಶಂಕರ ಅವಧೂತರ ಆ ಗವಿಯೊಳಗ ಕರಕೊಂಡು ಹೋಗಿ ಕೂಡಿಸಿದ್ದೆ. ಆಸಾಮಿ ಅಲ್ಲೇ ತಳವೂರಿದ. ಬೇಗ ಎದ್ದೇಳಲಿಲ್ಲ. ತಾಸುಗಟ್ಟಲೇ ನಿವಾಂತ ಕುಂತಿದ್ದರು.)

ಧ್ಯಾನ ಮುಗಿಸಿ ಸಾವಕಾಶವಾಗಿ ಕಣ್ತೆರೆದ ಭೀಮಾಶಂಕರರ ಮಾರೀಮ್ಯಾಲ ದೈವತ್ವದ ಲಕ್ಷಣ ಲಕಲಕ ಅಂತ ಹೊಳೀತಿತ್ತು. ನಿನ್ನನ್ನು ಎತ್ತಿಕೊಂಡ ಅವರು, ಕ್ಷಣಹೊತ್ತು ತೊಡೆಮೇಲೆ ಮಲಗಿಸಿಕೊಂಡರು. ಥಳ ಥಳ ಹೊಳೆವ ನೀಲಾಂಜನಗಳ ಮರೆಯಲ್ಲಿ ನಿಂತಿದ್ದ ಕನ್ಯಾಶಿಷ್ಯೆ ಲಕ್ಷ್ಮೀಬಾಯಿಯನ್ನು ಕೈಸನ್ನೆ ಮಾಡಿ ಕರೆದು, ಅವಧೂತರು ಅದೇನೋ ಆಕೆ ಕಿವಿಯಲ್ಲಿ ಹೇಳಿದರು.

ಆಶ್ರಮದ ಅಂಗಳದಲ್ಲಿ ಒಡಾಡಿಕೊಂಡಿದ್ದ ಉಡುಗಿ ಮಡಿಗಳನ್ನುಟ್ಟ, ಮಗ್ಗಿ ಕುಪ್ಪಸ ತೊಟ್ಟ ಇನ್ನೊಬ್ಬ ಕನ್ಯಾಶಿಷ್ಯೆ ಕೆಂಪುವಸ್ತ್ರದಲ್ಲಿ ಅದೇನೋ ಮುಚ್ಚಿ ತಂದಳು. ಆಮೇಲೆ ಅವಧೂತರು ನಿನ್ನ ಕೊರಳಿಗೆ ಕೆಂಪುವಸ್ತ್ರದಲ್ಲಿದ್ದ ಏಕಮುಖಿ ರುದ್ರಾಕ್ಷಿ ಕಟ್ಟಿದರು. *ಗಂಭೀರಾಗಿ ಬಾಳು* ಕಂದಾ ಅಂತ ನನ್ನ ತಲೆ ಮೇಲೆ ಹಸ್ತ ಇಟ್ಟು ಹರಸಿದ್ದನ್ನು ಅವ್ವ ಆಗಾಗ ಹೇಳುತ್ತಿದ್ದಳು. ಅಂದು ಭೀಮಾಶಂಕರರು, ನಾನು ಹುಟ್ಟಿದ ಆದಿತ್ಯವಾರದ ದಿವಸ ಲೆಕ್ಕ ಹಾಕಿದಾಗ ಅದು ಕಾಕತಾಳೀಯ ಎಂಬಂತೆ ಅಕ್ಟೋಬರ್ ಎರಡು ಆಗಿತ್ತು. ಅದುವೇ ಕಡಕಲ್ಲ ರಾಮಚಂದ್ರಾಯ ಗಾಂವಟಿ ಸಾಲೀಮಾಸ್ತರ ಬರೆದಿಟ್ಟ ತಾರೀಖು.

ಅವ್ವಗೆ ಅದು ಗಾಂಧೀ ಜಯಂತಿ ಅನ್ನುವ ಕಲ್ಪನೆ ಕೂಡಾ ಇಲ್ಲ. ಅಷ್ಟಕ್ಕೂ ನಾನು ಹುಟ್ಟಿದ ದಿನಾಂಕವನ್ನು ಎಲ್ಲೂ ಉಲ್ಲೇಖಿಸದ ಅವ್ವ *ಆಯಿತವಾರ, ಮಾನೌಮಿ ಅಮಾಸಿ ದಿನ, ಹೊತ್ತ ಹೊಂಡೋ ಮುಂದ* ಎಂದು ಗಟ್ಟಿ ದನಿಯಲ್ಲಿ ಹೇಳುವುದನ್ನು ಮಾತ್ರ ಯಾವತ್ತೂ ಮರೆಯುತ್ತಿರಲಿಲ್ಲ.

ಸರಕಾರಿ ನೌಕರಿಗೆ ಸೇರಿ ಮದುವೆ, ಮಕ್ಕಳಾದ ಮೇಲೆಯೇ ನನಗೆ ಹುಟ್ಟು ಹಬ್ಬಗಳ ಅಷ್ಟಿಷ್ಟು ಪರಿಚಯವಾದುದು. ಅದೂ ನನ್ನ ಮಕ್ಕಳ ಹುಟ್ಟುಹಬ್ಬಗಳ ಆಚರಣೆಯಿಂದಾಗಿ. ಕೇಕ್ ಕಟ್ ಮಾಡಿ ಇಂಗ್ಲಿಷಿನಲ್ಲಿ ಹ್ಯಾಪಿ ಬರ್ತಡೇ ಅಂತ ರಾಗ ಎಳೆದು ಹೇಳುವುದು ಗೊತ್ತೇ ಇರಲಿಲ್ಲ. ನನ್ನವ್ವಗಂತೂ ಅವುಗಳ ನಾತವೇ ಬಡಿದಿರಲಿಲ್ಲ. ಪಿಲಾಕಿ (ಪ್ಲೇಗ್) ಬಂದು ಮನೆ ಮಠಗಳಿಗೂ ಬಾಗಿಲಿಟ್ಟಿತ್ತು. ಆಕೆಗೆ ಅಂತಹ ಪಾರಮ್ಯದ ದುರಿತಕಾಲಗಳ ದ್ಯಾಸವಿರುತಿತ್ತು. ಅವಳ ಅಂತಃಕರಣ ಅಂತಹದಕ್ಕೇ ಹೆಚ್ಚು ಮಿಡಿಯುತ್ತಿತ್ತು.

ಆಗ ಎತ್ತಿನ ಗಾಡಿಗಳಲ್ಲಿ ಹೆಣಗಳನ್ನು ತಗೊಂಡ್ಹೋಗಿ ಒಂದೇಒಂದು ದೊಡ್ಡ ಗೋರಿ ತೋಡಿ ಸಾಮೂಹಿಕ ದಫನ್ ಮಾಡುವುದನ್ನು ಹೇಳುತ್ತಿದ್ದಳು. ಅದೇ ಮುಜೇತಿ ತಮ್ಮ ಲಗ್ನವಾದುದನ್ನು ಸಹಿತ ಹೇಳಲು ಮರೀತಿರಲಿಲ್ಲ. ತನ್ನನ್ನು ಹೆತ್ತತಾಯಿ ಸಾವಂತ್ರೀ, ತನ್ನಪ್ಪ ಜಾಲಿಬೆಂಚಿಯ ಸಾಹೇಬಗೌಡರ ಬದುಕಿನ ಕಾಲಮಾನಗಳನ್ನು ಕೂಡ ಅವ್ವ ಹಾಗೆ ತಳಕು ಹಾಕಿ ಹೇಳುತ್ತಿದ್ದಳು. ರಜಾಕಾರರ ಸಪಾಟಿಯಷ್ಟೊತ್ತಿಗೆ ತನ್ನರ್ಧ ಆಯುಷ್ಯೇ ಕಳೆದಿತ್ತು. ಹೀಗೆ ಹುಟ್ಟು, ವಯಸ್ಸಿನ ಸಂಗತಿಗಳನ್ನು ಸಂದರ್ಭೋಚಿತವಾಗಿ ಗುರುತಿಸುತ್ತಿದ್ದಳು.

ಆದರೆ ಸಣ್ಣಾಂವಿದ್ದಾಗಿಂದಲೂ ನನಗೆ ಗಾಂಧೀ ಜಯಂತಿಯ ಪರಿಚಯವಿತ್ತು. ವರ್ಷ ವರ್ಷವೂ ಆಚರಿಸುವ, ಮಿಗಿಲಾಗಿ ಆದಿನ ನಮ್ಮ ಸಾಲಿಯ ಸೂಟಿಯ ಖುಷಿಯ ವಿಷಯ. ಹೀಗಾಗಿ ಅದರ ಪಕ್ಕಾ ಪರಿಚಯ. *ಅಂದಹಾಗೆ ನನ್ನ ಹಡೆದವ್ವ ಹೇಳಿದಂತೆ ಅಕ್ಟೋಬರ್ ಎರಡು, ನಾನು ಹುಟ್ಟಿದ ದಿನ*. ಅದು ಹಡೆದವ್ವ ಕೊಟ್ಟ ಬರ್ಥ್ ಸರ್ಟಿಫಿಕೆಟ್.

ಅದೇನು ಆದಿನ ನನಗೆ ಹಬ್ಬದ ದಿನವಾಗಿ ಯಾವತ್ತೂ ಅನಿಸಿಲ್ಲ. ಯಾಕೆಂದರೆ ಕೇಕ್ ಕಟ್ ಮಾಡಿ ಹ್ಯಾಪಿ ಬರ್ತಡೇ ಅಂತ ಹುಟ್ಟುಹಬ್ಬ ಆಚರಣೆ ಮಾಡುವ ಪರಿಪಾಟ ಮೊದಲಿಂದಲೂ ನನಗಿಲ್ಲ. ಅಂದಹಾಗೆ ಅರವತ್ತಾರರ ಏರು ಹರೆಯಕ್ಕೆ ಕಾಲಿಟ್ಟ ಖುಷಿಯಲ್ಲಿದ್ದೇನೆ.

ಮಲ್ಲಿಕಾರ್ಜುನ ಕಡಕೋಳ
93410 10712

Don`t copy text!