ಗಾಂಧಿ ತಾತ
ಈತ ನೋಡು ಗಾಂಧಿ ತಾತ
ದೇಶಕಾಗೇ ಹುಟ್ಟಿದಾತ
ಕಷ್ಟಪಟ್ಟು ಓದಿ-ಬರೆದು
ದೊಡ್ಡ ಹೆಸರು ಗಳಿಸಿದಾತ.
ಬ್ಯಾರಿಷ್ಟರ್ ಪದವಿ ಪಡೆದು
ವಕೀಲನಾಗಿ ದುಡಿದಾತ
ಕರಿಯ ಬಿಳಿಯ ಎಂಬ ಹಗೆಯ
ನ್ಯಾಯಕಾಗಿ ಸೆಣಸಿದಾತ.
ನಮ್ಮ ದೇಶ ನೂರಾರು ವರುಷ
ಕಂಪನಿಯವರ ಕೈವಶ
ದುಡಿವ ರೈತ,ಆಳುವ ಅರಸ
ಎಲ್ಲರಿಗೂ ಬಹುದೊಡ್ಡ ಪಾಶ.
ಕೆಂಪು ಮುಖದ ಇಂಗ್ಲೀಷರು
ಹೇಳಿದಂತೆ ನಾವು ಕೇಳ್ವುದೆಂಥ ಸಂಕಟ
ಇದಕೆ ತಿಳಿಸಿಕೊಡುವರಾರು
ಪರಿಹಾರದ ತಕ್ಕ ಪಾಠ.
ಆಗ ಬಂದ ಗಾಂಧಿ ತಾತ
ಸ್ವಾತಂತ್ರ್ಯಕೆ ಹೋರಾಡುತ
ಕೊಲ್ಲಬೇಡಿ,ಹುಸಿಯಬೇಡಿ
ಎಂಬ ಮಂತ್ರ ಸಾರುತ.
ನಡೆದಾಡಿದ ಎಡೆಬಿಡದೆ
ದೇಶವೆಲ್ಲ ಸುತ್ತುತ
ಮೈಗೆ ಬರೀ ಪಂಚೆ ಉಟ್ಟು
ಕಾಲಲ್ಲಿ ಹರಿದ ಜೋಡು ಮೆಟ್ಟು
ಕೋಲು ಹಿಡಿದು ನಡೆಯುತ
ಚಳುವಳಿಯ ಸಾರುತ.
ಸತ್ಯ- ನ್ಯಾಯ ಈತನ ಕಣ್ಣು
ಕೇಳೇ ಇಲ್ಲ ಹೊನ್ನು ಮಣ್ಣು
ಸದಾ ಈತಗೆ ನೋಯಿಸುತಿತ್ತು
ನಮ್ಮ ಗುಲಾಮತನದ ಹುಣ್ಣು.
ಸರಕಾರಕೆ ಹೇಳೇ ಹೇಳಿದ
ಇಲ್ಲಿಂದ ತೊಲಗಿರೆಂದು
ನಮ್ಮವರಿಗೆ ಕರೆ ಕೊಟ್ಟ
ಮಾಡು ಇಲ್ಲವೆ ಮಡಿಯಿರೆಂದು.
ಎಷ್ಟು ಸಾರಿ ಜೈಲು ಪಾಲು
ಆದರೂ ಇಲ್ಲ ಮನಕೆ ನೋವು
ತೊಟ್ಟ ಹಟಕೆ ಬಿಟ್ಟು ಹೋಯಿತು
ಇಂಗ್ಲೀಷಿನ ಸರಕಾರವು.
ಶಾಂತಿ ಧೂತ ನಮ್ಮ ತಾತ
ನಮ್ಮ ಬಾವುಟ ಹಾರಿಸಿದಾತ
ನಮ್ಮ ಕೈಗೆ ದೇಶ ಕೊಟ್ಟು
‘ಮಹಾತ್ಮ ಗಾಂಧಿ’ ಎನಿಸಿದಾತ.
-ಕೆ.ಶಶಿಕಾಂತ ಲಿಂಗಸೂಗೂರ