“ಕಂಬನಿ “
(ಕತೆ)
ಅಂದು ರಾತ್ರಿ, ಸುಮಾರು ಹತ್ತು ಗಂಟೆಯ ಸಮಯ ಆ ಒಂದು ಬೃಹತ ಪಟ್ಟಣದ ಹಿರಿದಾದ ರಸ್ತೆಯಲ್ಲಿ ನಮ್ಮ ವಾಹನ ಸಾಗುತ್ತಿರುವಾಗ, ರಸ್ತೆಯ ಪಕ್ಕದಲ್ಲಿ ಸುಂದರವಾದ ಯುವತಿಯೋರ್ವಳು ಅರೆನಗ್ನ ವಸ್ತ್ರದಿ ನಾಲ್ಕು ಜನ ದಾಂಡಿಗರೊಂದಿಗೆ ಮಾತಿನ ಚಕಮಕಿ ಗೋಚರಿಸಿ ವಾಹನ ಪಕ್ಕಕೆ ಹಾಕಿ, ಇಲ್ಲೇನು ನಡೆಯುತ್ತಿದೆ ಅಂತ ವಿಚಾರಿಸಲು ಹೋದ ನನಗೆ ಆಗಿದ್ದು ಆಘಾತ! ಏಕೆಂದ್ರೆ ಅಲ್ಲಿ ನಡೆಯುತ್ತಿದ್ದದು ಮೈ ಮಾರಾಟದ ವ್ಯವಹಾರ. ನೋಡಲು ಸುಸಂಸ್ಕೃತ ಮನೆತನದ ತರುಣಿಯಂತೆ ಕಾಣುತ್ತಾಳೆ, ಇವಳೇಕೆ ಇಂತಾ ಕೀಳು ಕೃತ್ಯಕ್ಕೆ ಇಳಿದಿದ್ದಾಳೆಂದು ಮನಸ್ಸು ಮರುಗಿ, ಏನಮ್ಮ ಹೆಣ್ಣು ಕುಲಕ್ಕೆ ಶೀಲವೇ ಪರಮ ಪವಿತ್ರವಾದದ್ದು ನೀನು ಅದನ್ನೆ ಮಾರಾಟದ ವಸ್ತುವಾಗಿ ಮಾಡಿಕೊಂಡಿರುವೆಯಲ್ಲ ನಿನಗೆ ಅಸಹ್ಯವಾಗುವದಿಲ್ಲವೇ ? ಅಂತ ಕೇಳಿದಾಗ, ಅದಕ್ಕೆ ಪ್ರತಿಯಾಗಿ ಅವಳಿಂದ ನನಗೆ ಸಿಕ್ಕಿದ್ದು ಅವಾಚ್ಯಾ ಶಬ್ದಗಳ ಉಡೂಗರೇ, ಅಷ್ಟರಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಆಗಮಿಸಿ (ಪೊಲೀಸ್ ಬರುತ್ತಿದ್ದಂತೆ ಈಕೆಯ ಜೊತೆಯಿದ್ದ ದಾಂಡಿಗರು. ನಾಪತ್ತೆಯಾದ್ರು )ಅವಳಿಗೆ ಕೀಳು ಭೈಗುಳಗಳ ಮಳೆಗರೆದು ಠಾಣೆಗೆ ಕರೆದುಕೊಂಡು ಹೋಗಲು ಸಿದ್ದರಾದರು, ಆದ್ರೆ ನನ್ನ ವಿನಂತಿಯ ಮೇರೆಗೆ ಅವಳನ್ನು ಬಿಟ್ಟು, ನನಗಿಷ್ಟು ಉಗಿದು ಅಲ್ಲಿಂದ ತೆರಳಿದರು, ಹಿಂದಿರುಗಿ ನೋಡುವಷ್ಟಲ್ಲಿ ಆಕೆ ನನ್ನ ವಾಹನದಲ್ಲಿ ಕುಳಿತು ತಾನು ಹೇಳಿದ ಸ್ಥಳಕ್ಕೆ ತೆರಳಲು ಆದೇಶಿಸುತ್ತಾಳೆ, ಸರಿಯಂದು ನಾನು ಅವಳು ಹೇಳಿದ ಮಾರ್ಗದಿ ವಾಹನ ಚಲಾಯಿಸುತ್ತಾ ನಡೆದೆ, ಸ್ವಲ್ಪ ದೂರ ಬರುತ್ತಿದ್ದಂತೆ “ನಿಲ್ಲಿಸಿ ” ಅಂತ ಕಿರುಚಿದಳು ಆ ಪ್ರದೇಶ ಭೀಕರ ಅವ್ಯವಸ್ಥೆಗಳ ಕೊಳಚೆ ಪ್ರದೇಶವಾಗಿತ್ತು ವಾಹನ ನಿಲ್ಲಿಸುತ್ತಿದ್ದಂತೆ ನನ್ನ ಕೈ ಹಿಡಿದು ದರದರನೆ ಎಳೆದುಕೊಂಡು ತನ್ನ ಮನೆಗೆ ಕರೆ ತಂದು, ಬಿಕ್ಕಿ ಬಿಕ್ಕಿ ಅಳುತ್ತಾ ಒಂದು ಮೂಲೆಯಲ್ಲಿ ಕುಳಿತಳು, ಅದು ಮನೆಯಲ್ಲ ಅಲ್ಲಿಯ ಸ್ಥಿತಿ ನರಕ ಸಾದೃಶ್ಯವಾಗಿತ್ತು, ಕಣ್ಣುಕಾಣಿಸದ ಅಜ್ಜ -ಅಜ್ಜಿ, ಕೈ -ಕಾಲು ಸ್ವಾದೀನ ಕಳೆದುಕೊಂಡಿರುವ ಅವಳ ತಂದೆ -ತಾಯಿ, ಮೂಗ ಮತ್ತು ಬಹು ಅಂಗಾಂಗ ವೈಫಲ್ಯದ ಅಕ್ಕಾ -ತಂಗಿಯರು, ಇದೆಲ್ಲರ ಮದ್ಯ, ಯಾರೋ ನಿಷ್ಕರುಣಿ ಕ್ರೂರ ವ್ಯಕ್ತಿಗಳ ತೀಟೆಗೆ ಬಲಿಯಾಗಿ ಇವರಿಗೆ ಜನ್ಮಿಸಿರುವ ಪುಟ್ಟ ಕಂದಮ್ಮಗಳ ಹಸಿವಿನ ಆರ್ತನಾದ, ಇದನ್ನು ಕಂಡು ನನ್ನ ಕಂಗಳಿಂದ ಹರಿದ ಕಂಬನಿ ಧಾರೆ ನನ್ನರವಿಗೆ ಬಂದಿರಲಿಲ್ಲ, ಹೇ ವಿಧಿಯೆ ನೀನೆಷ್ಟು ಕ್ರೂರಿಯೆಂದು ಒಳಮನಸ್ಸು ಭೈಯುತ್ತಿತ್ತು, ಆ ಕ್ಷಣದಿ ಅವಳು ಎದ್ದು ರಭಸದಿ ನನ್ನ ಹತ್ತಿರ ಬಂದು “ಈಗ ಹೇಳ್ರಿ ನಾನ್ಹೇಗೆ ಬಾಳಬೇಕೆಂದು “ನೊಂದ ಜೀವಿ ಕೇಳಿದ ಈ ಸಮಾಜದ ಅನಿಷ್ಟ, ಅರಿಷ್ಟ, ಕನಿಷ್ಠ ವ್ಯವಸ್ಥೆಯ ಪ್ರಶ್ನೆಗಳಿಗೆ ನನ್ನಲ್ಲಿ ಉತ್ತರ ರೂಪದಿ ಇದ್ದದ್ದು ಕಂಬನಿ ಮಾತ್ರ….
–ಮಲ್ಲಿಕಾರ್ಜುನ ಎಸ್ ಆಲಮೇಲ,
ಅಧ್ಯಕ್ಷರು :ಕ ಸಾ ಪ ತಾಲೂಕು ಘಟಕ ಯಡ್ರಾಮಿ. ಜಿಲ್ಲಾ ಕಲಬುರಗಿ.
9740499814