ಹೀಗೊಬ್ಬ ಆರೋಗ್ಯ ಸಹಾಯಕನ ಹೋರಾಟದ ವೃತ್ತಾಂತ

ಹೀಗೊಬ್ಬ ಆರೋಗ್ಯ ಸಹಾಯಕನ ಹೋರಾಟದ ವೃತ್ತಾಂತ

ಕಲಬುರ್ಗಿಯ ಕಾಂ. ಮಾರುತಿ ತುಕಾರಾಂ ಮಾನ್ಪಡೆ ತೀರಿಹೋಗಿ ಒಂದು (೨೦.೧೦.೨೦೨೦) ವರ್ಷ ಕಳೆಯಿತು. ಆತನ ಸಾವು ಅಸಲೀ ಹೋರಾಟಗಾರನ ಕಣ್ಮರೆ ಮಾತ್ರವಲ್ಲ, ಅದು ದಮನಿತರ ಧ್ವನಿಯ ಕಣ್ಮರೆ. ನಮ್ಮಿಬ್ಬರದು ಅಜಮಾಸು ಮೂರೂವರೆ ದಶಕಗಳ ಗೆಳೆತನ. ನಿಸರ್ಗ ಸುಬಗದಂತಹ ನಮ್ಮ ಜವಾರಿ ಗೆಣೆತನಕ್ಕೆ ಯಾವತ್ತೂ ಐಬು ಬರುವ ಪ್ರಸಂಗಗಳೇ ಬರಲಿಲ್ಲ. ಮಾನ್ಪಡೆ ಗುಣವಂತ ಗೆಣೆಕಾರನಾಗಿದ್ದ. ಮುಖದಲ್ಲಿ ಸದಾ ಮುಗುಳು ಮಲ್ಲಿಗೆಯ ಮಂದಹಾಸ. ಅವನ ಸ್ನೇಹಶೀಲ ತಿತೀಕ್ಷೆಯೆದುರು ನನ್ನ ನಿರ್ಲಿಪ್ತತೆ ಸೋಲುತ್ತಿತ್ತು. ಎಂಬತ್ತರ ದಶಕದಲ್ಲಿ ನಾವಿಬ್ಬರೂ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಿಗಳು. ಅವನು ಎಡ ಮತ್ತು ಪ್ರಜಾಸತ್ತಾತ್ಮಕ ರಾಜಕಾರಣಕ್ಕೆ ಸಕ್ರಿಯವಾಗಿ ಧುಮುಕಿದ ಮೇಲೆ ನಮ್ಮ ಸ್ನೇಹದ ಸಾತತ್ಯಕ್ಕೆ ತುಸು ವ್ಯತ್ಯಯ ಉಂಟಾದುದುಂಟು. ಇಷ್ಟೇ ಇನ್ನೇನಿಲ್ಲ, ಇಬ್ಬರ ಫೀಲ್ಡ್ ಬದಲಾಯಿತಷ್ಟೇ.

ಅವು ಎಂಬತ್ತರ ದಶಕದ ದಿನಮಾನಗಳು. ಡಾವಣಗೇರಿಯಲ್ಲಿ ಜರುಗಿದ ನಮ್ಮ ಕೇಡರಿನ ‘ಆರೋಗ್ಯ ಕಾರ್ಯಕರ್ತರ ಸಮ್ಮೇಳನದ’ ಮೂಲಕ ನಮ್ಮಿಬ್ಬರ ಮಿತ್ರತ್ವ ಬೆಸಗೊಂಡದ್ದು. ರಾಜ್ಯದ ಮೂಲೆ ಮೂಲೆಗಳಿಂದ ಮಹಿಳೆ ಮತ್ತು ಪುರುಷ ಆರೋಗ್ಯ ಕಾರ್ಯಕರ್ತರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹಳ್ಳಿಗಾಡುಗಳ ಜನಾರೋಗ್ಯ ಸೇವೆಯಲ್ಲಿ ದುಡಿಯುತ್ತಿದ್ದ ಮಹಿಳೆಯರದು ಆಗ ಶೋಚನೀಯ ಸ್ಥಿತಿ. ರಾಜ್ಯಮಟ್ಟದ ಆ ಸಮಾವೇಶದಲ್ಲಿ ರಾಜ್ಯದ ನಾಲ್ಕು ವಿಭಾಗಗಳಿಂದ ಒಬ್ಬೊಬ್ಬರಿಗೆ ಮಾತ್ರ ವಿಚಾರ ಮಂಡಿಸುವ ಅವಕಾಶವಿತ್ತು. ಬೆಂಗಳೂರು ವಿಭಾಗದಿಂದ ನನಗೆ, ಕಲಬುರ್ಗಿ ವಿಭಾಗದಿಂದ ಮಾ.ತು. ಮಾನ್ಪಡೆಗೆ ಮಾತಾಡುವ ಅವಕಾಶ.

ಅಂದು ನಾವಿಬ್ಬರೂ ಮಂಡಿಸಿದ ವಿಚಾರಗಳಲ್ಲಿ ಸಾಮ್ಯತೆ ಮತ್ತು ಸಾಧ್ಯತೆಯ ಹೋರಾಟದ ಕ್ಷಿತಿಜ ವಿಸ್ತೃತಗೊಳಿಸಬಲ್ಲ ಗಟ್ಟಿ ನಿಲುವುಗಳಿದ್ದವು. ಅದರಿಂದಾಗಿ ಅವು ದುಡಿಯುವ ವರ್ಗದ ನಿಕಟ ಪ್ರೀತಿ ಗಳಿಸಿದವು. ಆಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಾಸಕರಾದ ಕಾಂ. ಪಂಪಾಪತಿ ಹಾಗೂ ಕೆ. ಮಲ್ಲಪ್ಪ ಅವರ ಒಳಮನಸಿಗೂ ನಮ್ಮಿಬ್ಬರ ಚಿಂತನೆಗಳು ಹಿಡಿಸಿದವು. ಸರಕಾರಿ ನೌಕರರ ಸಂಘಟನೆಗಳು ಟ್ರೇಡ್ ಯುನಿಯನ್ ಮಾದರಿಯಲ್ಲಿ ರೂಪುಗೊಂಡಾಗ ಯಶಸ್ಸು ಗಳಿಸಬಲ್ಲವೆಂಬ ನಮ್ಮಿಬ್ಬರ ಮನೋಧರ್ಮವೇ ನಮ್ಮ ಗೆಳೆತನದ ಗಟ್ಟಿತನಕ್ಕೆ ಮುಖ್ಯಕಾರಣವಾಗಿತ್ತು.

ಅದಾದ ಕೆಲವೇ ವರ್ಷಗಳ ಬಳಿಕ ಪ್ರಾಯಶಃ ೧೯೮೬ ರಲ್ಲಿ ಆತ ಸರಕಾರಿ ನೌಕರಿಗೆ ರಾಜೀನಾಮೆ ನೀಡಿದ. ತದನಂತರದಲ್ಲಿ ಜರುಗಿದ ಕಲಬುರ್ಗಿ ಜಿಲ್ಲಾ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ. ಭಾರತ ಕಮ್ಯುನಿಸ್ಟ್ ಪಕ್ಷದ (CPIM) ಅಭ್ಯರ್ಥಿಯಾಗಿ ಅತ್ಯಧಿಕ ಮತಗಳಿಸಿ ‘ಚಿಂಚನಸೂರು’ ಜಿಲ್ಲಾ ಪರಿಷತ್ ಕ್ಷೇತ್ರದಿಂದ ಗೆದ್ದುಬಂದ. ಇಡೀ ರಾಜ್ಯದಲ್ಲೇ ಅವರ ಪಕ್ಷದ ಏಕಮೇವಾದ್ವಿತೀಯ ಗೆಲುವಿನಂತಿತ್ತು.

ಅಂದು ಕಲಬುರ್ಗಿ ಜಿಲ್ಲಾ ಪರಿಷತ್ತಿನಲ್ಲಿ ಜನತಾಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಸಮಬಲ ಗಳಿಸಿದ್ದವು. ಆಗ ಮಾರುತಿ ಯಾರಿಗೆ ಸಪೋರ್ಟ್ ಮಾಡ್ತಾರೋ ಕಲಬುರ್ಗಿ ಜಿಲ್ಲಾಪರಿಷತ್ತಿನಲ್ಲಿ ಅವರ ಸರ್ಕಾರ ರಚನೆಯ ಅನಿವಾರ್ಯ ಸ್ಥಿತಿ. ಅವತ್ತಲ್ಲ ಯಾವತ್ತೂ ಮಾನ್ಪಡೆ ತನ್ನ ರಾಜಕೀಯ ಶಕ್ತಿ ಮಾರಿಕೊಳ್ಳಲಿಲ್ಲ. ಮಾನ್ಪಡೆಯ ಬೆಂಬಲದಿಂದ ಕಲಬುರ್ಗಿ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಕಾಂಗ್ರೆಸ್ಸೇತರ ಜಿಲ್ಲಾ ಪರಿಷತ್ತಿನ ಸರ್ಕಾರ ರಚನೆಯಾಯಿತು. ಗ್ರಾಮೀಣ ಅಭಿವೃದ್ಧಿ ಸಚಿವ ಅಬ್ದುಲ್ ನಜೀರಸಾಬ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಸಮಕ್ಷಮ ಏರ್ಪಟ್ಟ ಅನುಸಂಧಾನವದು.

ಮಾನ್ಪಡೆ ಸೈದ್ಧಾಂತಿಕವಾಗಿ ಜನತಾಪಕ್ಷಕ್ಕೆ ತನ್ನ ಬೆಂಬಲ ಕೊಟ್ಟುದುದು ಆಗ ರಾಜ್ಯಮಟ್ಟದ ಮಹತ್ವದ ಸುದ್ದಿಯಾಗಿತ್ತು. ಅಕ್ಷರಶಃ ಮಾನ್ಪಡೆ ಬೆಂಬಲದ ಕಲಬುರ್ಗಿ ಜಿಲ್ಲಾ ಪರಿಷತ್ತಿನ ಸರಕಾರ ಅದಾಗಿತ್ತು. ಅದೊಂದು ಐತಿಹಾಸಿಕ ಘಟನೆ.

ಸೈದ್ಧಾಂತಿಕ ನಿಲುವು ಅವನ ಸಾವಿನ ಕಡೇ ಕ್ಷಣದವರೆಗೂ ಬಂದೋಬಸ್ತಾಗಿತ್ತು. ಮನೋಭ್ರಷ್ಟತೆಯೂ ತನ್ನಬಳಿ ಸುಳಿಯದಂತೆ ಬಾಳಿ ಬದುಕಿದ. ಕಡೆಗೆ ಪ್ರಾಣವನ್ನೇ ಬಿಟ್ಟ, ಆದರೆ ತನ್ನ ಗಟ್ಟಿ ನಿಲುವು ಬಿಡಲಿಲ್ಲ. ಕೆಲವು ಕಸುಬುದಾರ ನಕಲಿ ಹೋರಾಟಗಾರರಿಗೆ ಆತನ ಅಪ್ಪಟ ಜನಪರ ನಿಲುವುಗಳಿಂದ ಇರುಸು ಮುರುಸಾಗುತ್ತಿತ್ತು. ಅಂತೆಯೇ ಕೆಲವು ಸೋಕಾಲ್ಡ್ ಹೋರಾಟಗಾರರು ಮಾನ್ಪಡೆಯನ್ನು ಸೇರುತ್ತಿರಲಿಲ್ಲ. ಅಂತಹ ತೋರಾಟಗಾರರ ಅಸಹಿಷ್ಣು, ಅಸೂಯಾಪರತೆ ಕುರಿತು ಮಾನ್ಪಡೆ ಅನೇಕ ಬಾರಿ ನನ್ನ ಬಳಿ ಹೇಳಿಕೊಳ್ಳುತ್ತಿದ್ದ. ಆತ ಕಸುವಿನ ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ.

ಕಲಬುರ್ಗಿ ಜಿಲ್ಲೆಯ ಕಮಲಾಪುರ ಹತ್ತಿರದ ಅಂಬಲಗಿ ಎಂಬ ಹಳ್ಳಿಯ ಬುಟ್ಟಿ ಹೆಣೆಯುವ ಕೊರವರ ಕುಟುಂಬದಲ್ಲಿ ಮಾರುತಿ ಮಾನ್ಪಡೆ ಹುಟ್ಟಿದ್ದು. ಜಾತಿ ಕಾರಣಕ್ಕಾಗಿ ಹತ್ತು ಹಲವು ಅಪಮಾನಗಳನ್ನು ಅನುಭವಿಸಿದ. ಅದೇ ಕಾರಣಕ್ಕಾಗಿ ಹೋರಾಟದ ಬದುಕು ಅವನಲ್ಲಿ ಬಸಿರೊಡೆಯಿತು. ಅದು ಜೀವನದುದ್ದಕ್ಕೂ ಮಾತ್ರವಲ್ಲ ಜೀವದುಸಿರಿನ ಕಟ್ಟಕಡೇ ಗಳಿಗೆವರೆಗೂ ಜೀವಂತವಾಗಿತ್ತು. ಹೋರಾಟದೊಂದಿಗೆ ಮಡಿದುಹೋದ.

ಅನಕ್ಷರಸ್ಥರಾದ ತುಕಾರಾಮ ರತ್ನಾಬಾಯಿ ಮಾರುತಿಯ ಅಪ್ಪ ಅವ್ವ. ಅವರು ಅಕ್ಷರಶಃ ಅಂತಃಕರಣದ ಬಾಳು ಬದುಕಿದ ಹಿರಿಯ ಜೀವಗಳು. ಆ ಜೀವಗಳಿಗೆ ಮಗನ ಸಾವು ಸಹಿಸಿಕೊಳ್ಳುವುದು ವರ್ಷ ಕಳೆದರೂ ಸಾಧ್ಯವಾಗಿಲ್ಲ. ಮಾರುತಿ ತೀರಿಹೋದ ಆರುತಿಂಗಳಲ್ಲೇ ಆತನ ತಮ್ಮ ಅಂಬಾರಾಯ ತೀರಿಹೋದ. ಹೆತ್ತ ಕರುಳುಗಳಿಗೆ ತಮ್ಮ ಮಕ್ಕಳ ಹೆಣ ನೋಡುವ, ಮಕ್ಕಳ ಹೆಣಕ್ಕೆ ಮಣ್ಣು ಹಾಕುವ ಇಂತಹ ಅಸಹನೀಯ ಸಂಕಟ ಇವರಿಗಲ್ಲ ಯಾರಿಗೂ ಬರಬಾರದು. ಮುಪ್ಪಿನ ಕಣ್ಣೀರು ಬತ್ತಿಹೋಗಿವೆ. ಒಂದು ವರುಷ ಪೂರ್ತಿ ದುಃಖದ ಮಡುವಲ್ಲೇ ಮುಳುಗಿ ಹೋಗಿದ್ದಾರೆ.

ಬಾಲ್ಯದಲ್ಲೇ ಊಳಿಗಮಾನ್ಯ ವ್ಯವಸ್ಥೆಯ ದವಡೆಗೆ ಸಿಲುಕಿ ನಲುಗಿದ ಮಾರುತಿ ಮಾನ್ಪಡೆ ಅಂತಹ ವ್ಯವಸ್ಥೆ ವಿರುದ್ದದ ಪ್ರತಿಭಟನೆಯ ಚಳವಳಿ ರೂಪಿಸುವಲ್ಲಿ ಜಟ್ಟಿಯಂತೆ ಗಟ್ಟಿಗೊಂಡಿದ್ದ. ಇದನ್ನು ಮನಗಂಡ ಕೆಲವು ಜಾತಿಪ್ರಣೀತ ತೋರಿಕೆಯ ಪ್ರಗತಿಪರರಿಗೆ ಅವನಲ್ಲಿನ ದೌರ್ಬಲ್ಯ ತಲಾಷ್ ಮಾಡುವ ಒಳಹೇತು. ಮೇಲ್ವರ್ಗದ ಮಡಿಮನಸುಗಳ ಸುಳಿಮಡುವಿನಲ್ಲಿ ಸಿಲುಕಿ ನಲುಗಿದ್ದ. ಅದೇ ಮನಸುಗಳ ಚುನಾವಣೆಗಳೆಂಬ ಒಳಹುನ್ನಾರಗಳು ಮಾರುತಿಯನ್ನು ಶಾಸಕ, ಸಂಸದ ಆಗದ ಹಾಗೆ ನೋಡಿಕೊಳ್ಳುತ್ತಿದ್ದುದು ಕುಟಿಲ ಕುತಂತ್ರವೆನ್ನದೇ ಅನ್ಯದಾರಿ ಇಲ್ಲ. ಆತ ಒಂದೇಒಂದು ಅವಧಿಗೆ ಶಾಸಕನಾಗಿದ್ದರೆ ಸಾಕಿತ್ತು. ಅದರ ಪ್ರಜಾಸತ್ತಾತ್ಮಕ ಸಾಧ್ಯತೆ, ಸಾರ್ಥಕ್ಯ ಬದುಕಿ ತೋರಿಸುತ್ತಿದ್ದ. ಶಾಸಕತ್ವ ಅಂದರೆ ಹೀಗಿರಬೇಕೆಂದು ಅದನ್ನೊಂದು ರೋಲ್ ಮಾಡೆಲ್ ಮಾಡುತ್ತಿದ್ದ.

ಮಾರುತಿ ಮಾನಪಡೆಯ ಅಗಲಿಕೆ ಅಪ್ಪಟ ರೈತ ಹೋರಾಟಗಾರನ ಕಣ್ಮರೆಯೂ ಆಗಿದೆ. ಪ್ರಾಂತ ರೈತ ಸಂಘಟನೆಯ ಚುಕ್ಕಾಣಿ ಹಿಡಿದಿದ್ದ ಮಾನ್ಪಡೆ ದಿಲ್ಲಿಯ ಕೆಂಪುಕೋಟೆಗೂ ಹಸಿರು ಮತ್ತು ಕೆಂಪು ಶಾಲುಗಳ ಶಾಖದ ಪ್ರಖರತೆ ಮುಟ್ಟಿಸಿದ್ದರು. ಕರ್ನಾಟಕ ಪ್ರಾಂತ ರೈತಸಂಘದ ಸಹಸ್ರಾರು ರೈತರನ್ನು ದಿಲ್ಲಿಗೆ ಕರೆದೊಯ್ದು ಪ್ರತಿಭಟಿಸಿದ ಕೀರ್ತಿ ಕಾಮ್ರೆಡ್ ಮಾನಪಡೆಗೆ ಸಲ್ಲುತ್ತದೆ. ಇವತ್ತು ತೊಗರಿ ಬೆಳೆಗಾರರಿಗೆ ಬೆಂಬಲ ಬೆಲೆ ಮತ್ತು ಕಲಬುರ್ಗಿಗೆ ತೊಗರಿ ಅಭಿವೃದ್ಧಿ ಮಂಡಳಿ ದೊರಕಿರುವುದರ ಹಿಂದೆ ಮಾರುತಿಯ ಕಠಿಣ ಶ್ರಮದ ಸೂಕ್ಷ್ಮತೆಯ ಬೆವರ ಹನಿಗಳಿವೆ.

ಗ್ರಾಮ ಸಮುದಾಯದ ಆರೋಗ್ಯ ಸಹಾಯಕರ ಸಂಘಟನೆಗಳು ಮಾರುತಿಯ ಅಪಾರ ಜ್ಞಾನಶಕ್ತಿ ಬಳಸಿಕೊಳ್ಳುವ ಯೋಚನೆ ಮಾಡದಷ್ಟು ವಿಘಟನೆಯ ದಡ್ಡುಗಟ್ಟಿ ಹೋಗಿದ್ದವು. ಆರೋಗ್ಯ ಸಹಾಯಕರ ಸಂಘಟನೆಗಳು ಹೋರಾಟದ ವಾತ್ಸಲ್ಯ ಮತ್ತು ಕಸುವು ಕಳಕೊಂಡಿದ್ದವು. ಆದರೆ ಅದೇ ಗ್ರಾಮೀಣ ವ್ಯವಸ್ಥೆಯ ಗ್ರಾಮ ಪಂಚಾಯತ್ ನೌಕರರು, ಬಾಲವಾಡಿ, ಅಂಗನವಾಡಿ ನೌಕರರು, ನೀರು ಸರಬರಾಜು ಮತ್ತಿತರೆ ನೌಕರ ಸಂಘಟನೆಗಳು ಮಾನ್ಪಡೆಯ ಸಾಮರ್ಥ್ಯದ ಸದುಪಯೋಗ ಪಡೆದುಕೊಂಡವು. ಕೃಷಿ, ಕೃಷಿಕ, ಕೂಲಿ, ಕಾರ್ಮಿಕ, ಮಹಿಳೆ… ಒಟ್ಟಾರೆ ಶ್ರಮಿಕ ಸಂಸ್ಕೃತಿ ಕುರಿತು ಮಾನ್ಪಡೆಗೆ ಆಳದ ಒಳನೋಟಗಳಿದ್ದವು.

ಮೂರು ದಶಕಗಳ ಹಿಂದೆ ಭೀಮರಾಯನ ಗುಡಿ ಬಳಿ ರೈತರ ಹೋರಾಟದಲ್ಲಿ ಪಾಲ್ಗೊಂಡಾಗ ಪೋಲೀಸರ ಲಾಠಿ ಏಟು ತಿಂದ ಮಾರುತಿಯ ಕಾಲಿನ ಪೆಟ್ಟು ಸಾಯುವತನಕ ಇತ್ತು. ಅಂದಿನ ಕರಾಳ ಘಟನೆ ಕಣ್ಣಾರೆ ಕಂಡ ಸುಭಾಷ್ ಹೊಸಮನಿಯಂತಹ ಅನೇಕ ಸಂಗಾತಿಗಳು ದಂತಕತೆಗಳಂತೆ ಹೋರಾಟದ ನೂರಾರು ಘಟನೆಗಳನ್ನು ಒಡಲಾಳದ ಕಡಲೊಳಗೆ ತುಂಬಿ ಕೊಂಡಿದ್ದಾರೆ. ಮಾನ್ಪಡೆ ಆ ಮೂಲಕ ತಮ್ಮೊಳಗೆ ಬದುಕಿದ್ದಾನೆಂದು ಅಂತರಂಗ ಶುದ್ದಿಯಿಂದ ಹೇಳುತ್ತಾರೆ.

ಜಗತ್ತಿನ ತುಂಬೆಲ್ಲಾ ಕೊರೊನಾದಂತಹ ಮಾರಣಾಂತಿಕ ಚಂಡಮಾರುತವೇ ಬೀಸಿದ ದುರಿತಕಾಲದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉದ್ದೇಶ ಪೂರ್ವಕವಾಗಿ ಹೇರಿದ ಎ.ಪಿ.ಎಂ.ಸಿ. ಕಾಯಿದೆ, ಭೂಸುಧಾರಣೆ ಹಾಗೂ ದುಡಿಯುವ ವರ್ಗದ ರೈತವಿರೋಧಿ ಕಾನೂನುಗಳು ಮಾನ್ಪಡೆಯನ್ನು ಬಲಿ ಪಡೆದವು. ಈ ಎಲ್ಲ ಜನವಿರೋಧಿ ಕಾನೂನುಗಳನ್ನು ವಿರೋಧಿಸಿ ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಹಮ್ಮಿಕೊಂಡ ಬೃಹತ್ ಪ್ರಮಾಣದ ಪ್ರತಿಭಟನಾ ಸಂಯುಕ್ತ ರ್ಯಾಲಿಯಲ್ಲಿ ಮಾನ್ಪಡೆ ಮುಂಚೂಣಿ ನಾಯಕತ್ವ ವಹಿಸಿದ್ದ. ಆತ ಸಕ್ರಿಯವಾಗಿ ಭಾಗವಹಿಸಿದಾಗಲೇ ಪ್ರಾಯಶಃ ಜಪ್ಪಿಸಿಕೊಂಡಂತೆ ಕುಂತಿದ್ದ ಕರಾಳ ಕೊರೊನಾ ವೈರಾಣು ಮಾರುತಿಯ ಗಂಟಲು ಸೇರಿದೆ. ಹೋರಾಟದ ಭರದಲ್ಲಿ ದೇಹಾರೋಗ್ಯದ ಕಡೆ ಮಾರುತಿ ಗಮನ ಹರಿಸುವುದನ್ನು ಮರೆತಿರುವುದು ಸಹಜ.

ಜನರ ಸಾವಿನ ಸಂಕಟದ ಕಾಲದಲ್ಲಿ ಸರಕಾರ ಅಂತಹ ರೈತವಿರೋಧಿ ಕ್ರೂರ ಕಾನೂನುಗಳನ್ನು ತರುವ ಉದ್ದೇಶ ಅಪ್ಪಟ ಪ್ರತಿಭಟನಾ ಶಕ್ತಿಗಳನ್ನು ಜಾಣತನದಿಂದ ಕೊಲ್ಲುವುದಕ್ಕಾಗಿಯೇ.? ಯಾಕೆಂದರೆ ಜನಪರ ಹೋರಾಟಕ್ಕೆ ಪರ್ಯಾಯ ಹೆಸರೇ ಕಾಮ್ರೆಡ್ ಮಾರುತಿ ಮಾನ್ಪಡೆ. ಕೊಲೆಗಡುಕ ಕೊರೊನಾ ಮರೆತು, ಮಾರುತಿಯಂಥವರು ಪ್ರತಿಭಟನೆಯ ಚಂಡಮಾರುತವಾಗಿ ಭಾಗವಹಿಸುತ್ತಾರೆಂಬುದು ಲೋಕಕ್ಕೆಲ್ಲ ಗೊತ್ತಿರುವ ಸತ್ಯ.

ಸೊಲ್ಲಾಪುರದ ದವಾಖಾನೆಯಲ್ಲಿ ಕೊರೊನಾಕ್ಕೆ ಮಾನ್ಪಡೆ ಬಲಿಯಾದ. ಅವನ ಪಾರ್ಥಿವ ಶರೀರ ಹುಟ್ಟೂರಿಗೆ ತರುವುದು ಬಹಳೇ ಜಟಿಲವಾಯಿತು. ಜನನಾಯಕ ಮಾನ್ಪಡೆಗೆ ಅಂತಿಮ ನಮನ ಸಲ್ಲಿಸಲು ಚಂಡ ಕೊರೊನಾದ ಪ್ರಚಂಡ ಭಯವನ್ನು ಬದಿಗೊತ್ತಿ ಜನರು ಸಾಗರದಂತೆ ಬಂದರು. ಗಂಡು – ಹೆಣ್ಣು, ಮಕ್ಕಳು, ಮುದುಕರೆಲ್ಲ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಂಬಲಗಿ ಗ್ರಾಮಕ್ಕೆ ಸಾಲುಗಟ್ಟಿದರು. ಅವರೆಲ್ಲ ಕಣ್ಣೀರು ಸುರಿಸಿದ್ದನ್ನು ಗಮನಿಸಿದರೆ ಕಾಮ್ರೆಡ್ ಮಾನ್ಪಡೆಯ ಜೀವಪರ ಮತ್ತು ಜನಪರ ಕಾಳಜಿ ಎಂಥವರಿಗೂ ಅರ್ಥವಾಗುತ್ತದೆ.

ಮಾಜಿ ಮುಖ್ಯಮಂತ್ರಿಗಳಾದ ಜೆ. ಎಚ್. ಪಟೇಲ್, ಕುಮಾರಸ್ವಾಮಿ, ಸಿದ್ಧರಾಮಯ್ಯ ಇವರೆಲ್ಲ ಮಾರುತಿಯ ಜನಮುಖಿ ಹೋರಾಟದ ಬದ್ಧತೆಯನ್ನು ಗುರುತಿಸಿ ಅವನನ್ನು ಪ್ರೀತಿಯಿಂದ ಕಾಣುತ್ತಿದ್ದರು.‌ ಅವನ ಹೋರಾಟದ ನೈಜ ಕಾಳಜಿ ಕಂಡಿದ್ದ ಕೆಲವು ಮಂದಿ ಐ.ಎ.ಎಸ್. ಅಧಿಕಾರಿಗಳು ಮಾರುತಿ ತೀರಿದಾಗ ಕಣ್ಣೀರು ಸುರಿಸಿದರು. ಅಷ್ಟೇ ಯಾಕೆ ಬಿ.ಜೆ.ಪಿ. ಸರಕಾರದ ಅಂದಿನ ಸಚಿವ ಸುರೇಶ ಕುಮಾರ್, ಮಾರುತಿಯ ಮರಣದ ವಾರ್ತೆ ಕೇಳಿ ‘ಪ್ರಬುದ್ಧ ಹೋರಾಟದ ಚಿಂತಕ ಮಿತ್ರನನ್ನು ಕಳೆದುಕೊಂಡಿದ್ದೇವೆಂದು’ ಭಾವ ಪರವಶರಾಗಿದ್ದರು.

ಹೌದು ಕನ್ನಡ ನಾಡಿನಲ್ಲಿ ದುಡಿಯುವ ವರ್ಗದ ಅಸಲಿ ಹೋರಾಟಗಳು ಜೀವಂತ ಇರುವವರೆಗೂ ಅಂತಹ ಹೋರಾಟದ ಶ್ವಾಸಕೋಶಗಳಲ್ಲಿ ಮಾರುತಿ ಮಾನ್ಪಡೆ ನಿರಂತರ ಉಸಿರಾಗಿರುತ್ತಾನೆ.
ಹೋಗಿ ಬಾ ಗೆಳೆಯ ಬಹದ್ದೂರ. ಹೋರಾಟವೇ ಬದುಕಿದ ಸರದಾರ.

ಮಲ್ಲಿಕಾರ್ಜುನ ಕಡಕೋಳ
9341010712

Don`t copy text!