ಮೊನ್ನೆಯ ಕಲಬುರ್ಗಿ ಭೇಟಿ ಮತ್ತಿತರೆ ಕನವರಿಕೆಗಳು…

ಮೊನ್ನೆಯ ಕಲಬುರ್ಗಿ ಭೇಟಿ ಮತ್ತಿತರೆ ಕನವರಿಕೆಗಳು…

ಅಷ್ಟಕ್ಕೂ ಕೆಂಪು ಬಸ್ಸಿನ ಪ್ರಯಾಣ ಮರೆತು ಎರಡು ವರ್ಷಗಳೇ ಕಳೆದವು. ನನಗೆ ಕೆಂಪುಬಸ್ಸಿನ ಪ್ರಯಾಣ ಕೊಟ್ಟಷ್ಟು ಖುಷಿ ಹೈಟೆಕ್ ಕಾರುಗಳು ಕೂಡಾ ಕೊಡುವುದಿಲ್ಲ. ದೂರದ ಊರುಗಳಿಗೆ ಇತ್ತೀಚಿಗೆ ಕಾರು ಪ್ರಯಾಣವೇ ರೂಢಿಯಾಗಿದೆ. ಆದರೆ ಬಸ್ಸು ಕಾರುಗಳಿಗಿಂತ ನನಗೆ ಹೀರೋ ಹೊಂಡಾ ಎಂಬ ನನ್ನ ಕಪ್ಪುಕುದುರೆ ಪ್ರಯಾಣವೆಂದರೆ ಬಲು ಮೋಜು. ಶಿಶುನಾಳ ಶರೀಫರ ಎಂಥಾ ಮೋಜಿನ ಕುದುರೆ ಅನುಭಾವ ಪದದ ಪಯಣದಂತೆ ಅದರ ಬಿಸುಪು. ಬಿಸಿ ಆರಿಸಿ ಕುಡಿದ ಹಾಲಿನ ಸವಿರುಚಿಯ ಸೊಗಸು. ಆದರೆ ಕಪ್ಪು ಕುದುರೆಯ ಪ್ರಯಾಣ ನನಗೀಗ ದುಃಸಾಧ್ಯದ ಸಂಗತಿ.

ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಕಲಬುರ್ಗಿಯ ಸೋದರಿಯರ ಆಮಂತ್ರಣದ ಮೇರೆಗೆ ಕಲಬುರ್ಗಿ ಕಾರ್ಯಕ್ರಮಕ್ಕೆ ಕಾರಿನಲ್ಲೇ ಹೋಗಿಬಂದೆ. ಕೆಂಪು ಬಸ್ಸಿನ ಪ್ರಯಾಣದ ಖುಷಿಯ ಕದರು ಅದಕ್ಕಿರಲಿಲ್ಲವಾದರೂ ಕಾರ್ಯಕ್ರಮ ಮಾತ್ರ ಕಂಡಾಪಟಿ ಖುಷಿ ಕೊಟ್ಟಿತು. ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಹೆಸರಿನ ಪ್ರಶಸ್ತಿ ಪುರಸ್ಕಾರ ಅಕ್ಷರಶಃ ಖುಷಿಯ ವಿಷಯ. ಅದಕ್ಕೆಂದೇ ಅತಿಥಿಯಾಗಲು ಒಪ್ಪಿಕೊಂಡೆ. ಅರವತ್ತಾರನೇ ಕನ್ನಡ ರಾಜ್ಯೋತ್ಸವದ ಸಂಭ್ರಮಕ್ಕಾಗಿ ಏರ್ಪಡಿಸಿದ ವಿಶಿಷ್ಟ ಸಮಾರಂಭ ಅದಾಗಿತ್ತು. ದೂರದ ಬೆಳಗಾವಿ, ಬಾಗಲಕೋಟ, ವಿಜಯಪುರ, ಡಾವಣಗೇರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಬಂದಿಳಿದ ನೂರಾರು ಮಂದಿ ಸಾಧಕರು.

ಅವರೊಂದಿಗೆ ಅವರ ಅಭಿಮಾನಿ ಬಂಧು ಭಗಿನಿಯರು. ಅಂತೆಯೇ ಅಂದು ಕಲಬುರಗಿಯ ಎಸ್. ಎಂ. ಪಂಡಿತ ರಂಗಮಂದಿರ ತುಂಬಿ ತುಳುಕಿತ್ತು. ಅಕ್ಷರಗಳ ತಾಯಿ ಸಾವಿತ್ರಿಬಾಯಿ ಫುಲೆ ಹೆಸರಿನ ಕಾರ್ಯಕ್ರಮಕ್ಕೆ ಸಹಜವಾಗಿ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿದ್ದರು. ಸಾಂಸ್ಕೃತಿಕ ಕ್ಷೇತ್ರದ ವಿವಿಧ ವಲಯಗಳ ಸಾಧಕ ಸಾಧಕಿಯರನ್ನು ಗುರುತಿಸಿ ನೀಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ.

ಸಮಾರಂಭದ ಮತ್ತೆರಡು ವಿಶೇಷತೆಗಳೆಂದರೆ ತೊಂಬತ್ತರ ಏರು ಹರೆಯದ ಹಿರಿಯ ಚೇತನ, ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶ್ರೀ ಎ.ಕೆ. ರಾಮೇಶ್ವರರ ಜೀವಮಾನದ ಸಾಧನೆಗೆ ಸಂದ ಗೌರವದ ಗರಿ. ಮತ್ತೊಂದು ವಿಶೇಷವೆಂದರೆ ರಾಜ್ಯ ಸರ್ಕಾರ ಕೊಡಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ. ಸರಸ್ವತಿ ಚಿಮ್ಮಲಗಿ ಅವರಿಗೆ ಗ್ರಂಥಗಳ ತುಲಾಭಾರ. ನನ್ನ ತಿಳಿವಳಿಕೆ ಪ್ರಕಾರ ಅದು ಹೊಚ್ಚ ಹೊಸ ಬಗೆಯ ತುಲಾಭಾರ. ಕವಯಿತ್ರಿ ಸರಸ್ವತಿ ಅವರ ಸಮತೂಕದ ಪುಸ್ತಕ ಸರಸ್ವತಿಯ ವಿನೂತನ ತುಲಾಭಾರ. ಕಿಕ್ಕಿರಿದ ಸಭಾಂಗಣದ ತುಂಬೆಲ್ಲ ರೋಮಾಂಚನದ ಚಪ್ಪಳಿಗೆಗಳ ಸುರಿಮಳೆ.

ಸಮಾರಂಭದಲ್ಲಿ ಅಜಮಾಸು ಅರವತ್ತು ಮಂದಿ ಸಾಹಿತಿ, ಕಲಾವಿದರಿಗೆ ಯುಗದರ್ಶಿನಿ, ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪುರಸ್ಕಾರಗಳ ಮಹಾಪೂರವೇ ಉಕ್ಕಿ ಹರಿದಿತ್ತು. ಮುಖ್ಯವಾಗಿ ಇಬ್ಬರು ಹಿರಿಯ ಸಾಹಿತಿಗಳ ಕುರಿತು ಇಲ್ಲಿ ಉಲ್ಲೇಖಿಸುವ ಅಗತ್ಯವಿದೆ.

ಎ.ಕೆ. ರಾಮೇಶ್ವರ, ಅಂದರೆ ಅಗಸರ ಕೃಷ್ಣಪ್ಪ ರಾಮೇಶ್ವರ. ಅವರು ಕವಿ ಹೃದಯದ ಸಭ್ಯತೆಯೇ ಮೈವೆತ್ತ ಜವಾರಿ ಸಾಹಿತಿ. ಮಕ್ಕಳ ಸಾಹಿತ್ಯದಲ್ಲಿ ಅಪಾರ ಕೃಷಿ ಗೈದವರು. ಕಳೆದ ಎಪ್ಪತ್ತು ವರ್ಷಗಳಿಂದ ಕಲಬುರಗಿ ಜಿಲ್ಲೆಯ ಪೌರತ್ವ ಪಡೆದವರು. ಕಲಬುರ್ಗಿ ಜಿಲ್ಲೆಯ ಕಡೇಹಳ್ಳಿ ಕೇಸಿರಾಜನ ಜಾಡ ಕೊಂಡಗೂಳಿಯಲ್ಲಿ ಕನ್ನಡ ಸಾಲಿ ಮಾಸ್ತರನಾಗಿ ಮಾಸಿಕ ಮುವತ್ತು ರುಪಾಯಿ ಪಗಾರಕ್ಕೆ (ನಿವೃತ್ತಿ ಹೊಂದಿದಾಗ ಮೂರು ಸಾವಿರ) ೧೯೫೩ ರಲ್ಲೇ ಕೆಲಸಕ್ಕೆ ಸೇರಿ ಆಗಿನಿಂದಲೇ ಇದೇ ಜಿಲ್ಲೆಯವರೇ ಆಗಿದ್ದಾರೆ. ಮೂಲತಃ ಅವರು ವಿಜಯಪುರ ಸನಿಹದ ಸಾರವಾಡದವರು. ಆ ಊರು ಕನ್ನಡ ಸಾಲಿಮಾಸ್ತರರ ಆಡುಂಬೊಲ. ಮನೆಗೋರ್ವರಂತೆ ಸಹಸ್ರಾರು ಸಾಲಿ ಮಾಸ್ತರರ ಊರು ಸಾರವಾಡ.

ಕೊಂಡಗೂಳಿಯಿಂದ ತಿಂಗಳಿಗೊಮ್ಮೆ ಪಗಾರಕ್ಕೆಂದು ಯಡ್ರಾಮಿಗೆ ನಾಲ್ಕು ಹರದಾರಿ ನಡಕೊಂಡು ಕಡಕೋಳದ ಮೂಲಕವೇ ಹೋಗಬೇಕು. ಹಾಗೆ ಹೋಗುವಾಗ ಕಡಕೋಳದ ಮಡಿವಾಳಪ್ಪನ ಮಠದಲ್ಲಿ ರಾಮೇಶ್ವರ ತಾಸೊಪ್ಪತ್ತು ತಂಗಬೇಕಿತ್ತು. ಮರಳಿ ಬರುವಾಗ ರಾತ್ರಿ ವಸ್ತಿ ಮಠದಲ್ಲೇ. ಅಲ್ಲಿನ ದಾಸೋಹದಲ್ಲಿ ಕಜ್ಜಬಜ್ಜಿ, ರೊಟ್ಟಿ ಕಾರಬ್ಯಾಳಿಯ ಭೋಜನ. ಹಾಗೆ ತಂಗುವ ಅವಧಿಯಲ್ಲಿ ಅವರು ಮಾಡಿದ ಮಹತ್ತರ ಕಾರ್ಯವೆಂದರೆ ಗೌಡಪ್ಪ ಸಾಧು ಭಾವತುಂಬಿ ಸೊಗಸಾಗಿ ಹಾಡುತ್ತಿದ್ದ ಮಡಿವಾಳಪ್ಪನವರ ತತ್ವಪದಗಳನ್ನು ಸೀಸದ ಕಡ್ಡಿಯಿಂದ ಬರೆದಿಡುವುದು. ಅದು ಕೇವಲ ತತ್ವಪದಗಳ ಸಂಗ್ರಹವಾಗಿರದೇ ಅನುಭಾವದ ಅನುಸಂಧಾನವಾಗಿತ್ತು. ಅಷ್ಟಕ್ಕೂ ಗೌಡಪ್ಪ ಸಾಧುಗಳ ಸ್ವರಧ್ಯಾನ ಕ್ರಿಯೆಗೆ ರಾಮೇಶ್ವರ ಮಾರು ಹೋಗಿದ್ದರು. ಹಾಗೆ
ತಿಂಗಳುಗಟ್ಟಲೇ ಬರೆದಿಡುವುದು ಮಾಸ್ತರಗೆ ರೂಢಿಯಾಗಿತ್ತು.

ಕೆಲವೊಮ್ಮೆ ದೌತಿಗುಳ್ಳಿಯ ಮಸಿಯಲ್ಲಿ ಅದ್ದಿ ಟಾಕಿನಿಂದ ಬರೆದಿಡುತ್ತಿದ್ದರು. ಹಾಗೆ ಬರೆದಿಟ್ಟ ಇನ್ನೂರಾ ಹದಿನಾರು ಪದಗಳ ಪುಸ್ತಕವೇ “ಕೈವಲ್ಯ ವಾಕ್ಯಾಮೃತ” ಹೆಸರಿನ ಪುಸ್ತಕ. ಅನಕ್ಷರಸ್ಥ ಗೌಡಪ್ಪ ಸಾಧುಗಳ ಹಾಡಿಗೆ ಲಿಪಿಕಾರನಾದವರು ಎ.ಕೆ. ರಾಮೇಶ್ವರ. ಯಾದಗಿರಿಯ ಶಂಕರಾನಂದ ಮುದ್ರಣಾಲಯದಲ್ಲಿ ಕೇವಲ ಮುನ್ನೂರು ರುಪಾಯಿಗಳ ವೆಚ್ಚದಲ್ಲಿ (ಗೌಡಪ್ಪ ಸಾಧು ಹಂತೇಕ ಇದ್ದುದೇ ಅಷ್ಟೇ ಹಣ) ಪಂಡಿತ ಗುರುಸಿದ್ಧಶಾಸ್ತ್ರಿ ಮುನ್ನುಡಿ ಬರೆದು ಮುದ್ರಿಸಿ ಕೊಡುತ್ತಾರೆ. ಇದೆಲ್ಲ ರಾಮೇಶ್ವರ ಮಾಸ್ತರರ ನೆನಪಿನ ಬುತ್ತಿಯ ಎಪ್ಪತ್ತು ವರ್ಷಗಳ ಹಿಂದಿನ ಐತಿಹ್ಯದಂತಹ ಕಥನ.

ಅವರ ನೆನಪಿನ ಬುತ್ತಿಯ ವಿಸ್ತಾರ ಅನೇಕ ಅನನ್ಯತೆಗಳ ಹಾಸು. ತನ್ನ ವಿದ್ಯಾಗುರು ಶಂ.ಗು.ಬಿರಾದಾರ ಕುರಿತು ಬಾಯ್ತುಂಬಾ ಗೌರವದ ನುಡಿಗಡಣ. ಆ ಕಾಲದ ‘ಕತೆಗಾರ’ ಎಂಬ ನಿಯತಕಾಲಿಕಕ್ಕೆ ಗುರುಗಳ ಮಾರ್ಗದರ್ಶನದ ಮೇರೆಗೆ ರಾಮೇಶ್ವರ ‘ಖಾತೀಜಾಬಿ’ ಹೆಸರಿನ ಮುಸ್ಲಿಂ ರಾಣಿಯ ಬದುಕಿನ ಸುತ್ತ ಹೆಣೆದ ಕತೆ ಬರೆಯುತ್ತಾರೆ. ಅದು ಸೇರಿದಂತೆ ಬಡತನ ಮತ್ತು ಜಾತಿ ಕಾರಣಕ್ಕಾಗಿ ಅನುಭವಿಸಿದ ಹತ್ತು ಹಲವು ನೋವು ನಲಿವಿನ ಘಟನೆಗಳು ಹೂಬಾಹೂಬಾ ಕಣ್ಮುಂದೆ ಘಟಿಸಿದಂತೆ ಅವರು ಹೇಳುವುದನ್ನು ಕೇಳುವುದೇ ಅಮೋಘ. ಸಂತೃಪ್ತಿ ಎಂಬ ಆತ್ಮಕಥನ ಸೇರಿದಂತೆ ಎಪ್ಪತ್ತೈದು ಕೃತಿಗಳು ಪ್ರಕಟ. ಅದರಲ್ಲಿ ಅರ್ಧದಷ್ಟು ಮಕ್ಕಳ ಸಾಹಿತ್ಯ ಕೃತಿಗಳು. ೧೯೭೪ ರಲ್ಲಿ ಐಬಿಎಚ್ ಪ್ರಕಾಶನದ ಇವರ “ಕಡಕೋಳ ಮಡಿವಾಳಪ್ಪ” ಕೃತಿಗೆ ರಾಷ್ಟ್ರೀಯ ಪಠ್ಯಪುಸ್ತಕ ಮಂಡಳಿ ಪ್ರಶಸ್ತಿ ದೊರಕಿದೆ. ೧೯೮೬ ರಲ್ಲಿ ಆದರ್ಶ ಶಿಕ್ಷಕ ರಾಷ್ಟ್ರೀಯ ಪ್ರಶಸ್ತಿ. ಫ.ಗು. ಹಳಕಟ್ಟಿ, ಕಯ್ಯಾರ ಕಿಞಣ್ಣ ರೈ, ದ.ರಾ. ಬೇಂದ್ರೆ ಅವರಂತಹ ಹಿರಿಯ ಸಾಹಿತಿಗಳ ಅಪಾರ ಮೆಚ್ಚುಗೆ ಪಡೆದವರು.
* * * * *

 


ಕಲಬುರಗಿಯೆಂಬ ಸಂಘರ್ಷಮಯ ಬದುಕಿನ ಹೋರಾಟದ ರತ್ನಗರ್ಭದಲ್ಲಿ ರೂಪುಗೊಂಡ ಹೆಣ್ಣುಮಗಳು‌ ಡಾ. ಸರಸ್ವತಿ ಚಿಮ್ಮಲಗಿ. ತನ್ನ ಬದುಕಿನ ಅರ್ಧ ಶತಮಾನವನ್ನು ‌ಕಲಬುರಗಿಯ ನೆಲದಲ್ಲೇ ಬಾಳಿ ಬದುಕಿದವರು. ಕನ್ನಡ ಸಾಲಿ ಶಿಕ್ಷಕಿಯಿಂದ ಸುರುವಾಗಿ ಕಾಲೇಜು ಪ್ರಾಧ್ಯಾಪಕಿವರೆಗೆ ಸಾಗಿಬಂದ ಅವರದು ವರ್ಣಮಯ ಬದುಕಿನ ಯಾನ. ಕಲಬುರಗಿ ನೆಲದ ಸಾಹಿತ್ಯ, ಶಿಕ್ಷಣ, ರಂಗಭೂಮಿ, ಒಟ್ಟಾರೆ ಸಾಂಸ್ಕೃತಿಕ ಅಂತಃಕರಣದ ಕಲರವಕ್ಕೆ ಅರ್ಪಿಸಿಕೊಂಡವರು. ನಲವತ್ತು ಸಾಹಿತ್ಯ ಕೃತಿಗಳ ರಚಯಿತೃ. ಒಂದೆರಡು ಕೃತಿಗಳು ವಿಶ್ವವಿದ್ಯಾಲಯದ ಪಠ್ಯಗಳು. ಹತ್ತಾರು ರೇಡಿಯೋ ನಾಟಕಗಳು ಸೇರಿದಂತೆ ಪ್ರೊಸಿನಿಯಂ ಥಿಯೇಟರ್ ಕಲಾವಿದೆ.

ಅದರಲ್ಲೂ ಚಂದ್ರಶೇಖರ ಕಂಬಾರರ ಕೆಲವು ಮಹತ್ವದ ನಾಟಕಗಳ ಮಹತ್ತರ ಪಾತ್ರಗಳಲ್ಲಿ ಅಭಿನಯಿಸಿದ ಅವಕಾಶಗಳು ಅವರನ್ನು ಹುಡುಕಿ ಬಂದಿವೆ. ಮಹಿಳೆಯರು ಸಾಹಿತ್ಯದಲ್ಲಿ ಉತ್ಕೃಷ್ಟ ಕೃಷಿ ಮಾಡಿದ್ದಕ್ಕಾಗಿ ಸರಕಾರ ನೀಡುವ ಹೈಯೆಸ್ಟ್ ಅವಾರ್ಡ್ “ದಾನ ಚಿಂತಾಮಣಿ ಅತ್ತಿಮಬ್ಬೆ” ಪ್ರಶಸ್ತಿಗೆ ಭಾಜನರು. ಇಂತಹ ಅಪರೂಪದ ವ್ಯಕ್ತಿತ್ವವುಳ್ಳ ಸರಸ್ವತಿಯ ಗ್ರಂಥ ತುಲಾಭಾರ ಅರವತ್ತಾರನೇ ಕನ್ನಡ ರಾಜ್ಯೋತ್ಸವ ಆಚರಣೆಗೆ ಅನುರೂಪದ ಮೆರಗು ತಂದಿತ್ತು. ಕನ್ನಡ ಸಾಹಿತ್ಯ ಪರಿಷತ್ತೆಂಬ ಬೆಂಗಳೂರಿನ ಸರಸ್ವತಿ ಮಂದಿರದಲ್ಲಿ ಸರಸ್ವತಿ ಇರುವಂತಾಗಲಿ. ಈ ಇಬ್ಬರೂ ಹಿರಿಯರು ಕಲಬುರ್ಗಿ ಸಾಹಿತ್ಯಲೋಕ ನಿರ್ಮಾಣದ ಅವಿನಾಭಾವ ಅಧ್ವರ್ಯುಗಳು. ರಾಮೇಶ್ವರ ಅವರು ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗುವ ಎಲ್ಲ ಅರ್ಹತೆ ಉಳ್ಳವರು. ಅಚ್ಚರಿಯೆಂದರೆ ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ಇಬ್ಬರನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿಸುವಲ್ಲಿಯೂ ಕುರುಡಾಗಿದೆ.

ಕಲಬುರ್ಗಿಯ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಹಿರಿಯ ಲೇಖಕಿ ಬಿ. ಟಿ.‌ ಲಲಿತಾನಾಯಕ ಆಗಮಿಸಿದ್ದರು. ಎಂದಿನಂತೆ ಅವರ ಪ್ರಗತಿಪರ ಆಶಯದ ಮಾತುಗಳು ಉಮೇದು ಹುಟ್ಟಿಸಿದವು. ಕಾರ್ಯಕ್ರಮ ಮುಗಿಯುತ್ತಿದ್ದಂತೆ “ಕರ್ನಾಟಕ ಸಂಧ್ಯಾಕಾಲ” ನನಗಾಗಿ ಕಾಯುತ್ತಿತ್ತು. ದೂರದ ದಾವಣಗೆರೆಯಲ್ಲೇ ಕುಂತು ಪ್ರತೀ ಶುಕ್ರವಾರ “ಮುಖಾಬಿಲೆ” ಅಂಕಣ ಬರೆಯುವ ನಾನು ಪ್ರತ್ಯಕ್ಷವಾಗಿ ಸಂಧ್ಯಾಕಾಲದ ಸುದ್ದಿಮನೆ, ಮತ್ತದರ ಸಮಗ್ರ ಕುಟುಂಬ ನೋಡುವ, ಆತಿಥ್ಯ ಸ್ವೀಕರಿಸುವ ಅವಕಾಶ. ಸಂಪಾದಕ ಶಿವಲಿಂಗಪ್ಪ ದೊಡ್ಡಮನಿ ಅವರ ಸಂಧ್ಯಾಕಾಲ ಸಂಪಾದಕೀಯದ ಆಪ್ತೇಷ್ಟರ ಕುರಿತು ಇನ್ನೊಮ್ಮೆ ಬರೆಯುವೆ.


ಮಲ್ಲಿಕಾರ್ಜುನ ಕಡಕೋಳ
9341010712

Don`t copy text!