ನೆನಪು ಉಳಿಸಿ ಹೋದ ಸಂತ
ದಶಕಗಳ ಹಿಂದೆ
ಅನ್ಯರು ಭೂತಕಾಲವನ್ನು ಇಣುತ್ತಿದ್ದಾಗ
ಒಬ್ಬ ಸಂತ ಭವಿಷ್ಯವನ್ನು ದಿಟ್ಟಿಸುತ್ತಿದ್ದ… ಅಸಾಧ್ಯವೆನಿಸುವ ಪರಿಸರದಲ್ಲಿ
ಅವಕಾಶಗಳನ್ನು ಅನ್ವೇಷಿಸಿದ..
ಹೊರಟುನಿಂತ ಸೃಷ್ಟಿಗಳ ಪಯಣಕ್ಕೆ
ಸಮಾಜದ ಅವಶ್ಯಕತೆಗಳ ಪೂರೈಸಲು ಮನುಕುಲದ ಕಾಳಜಿ ವಹಿಸಲು…
ಒಬ್ಬ ಸಾಧಕನ ಛಲ, ದೂರದೃಷ್ಟಿ
ಲಕ್ಷಾಂತರ ಜನರ ಬದುಕು ರೂಪಿಸಿತು
ನೂರಾರು ಸಂಸ್ಥೆಗಳು ಸೃಷ್ಟಿಯಾದವು
ಸಮಾಜ ಸದೃಢ ವಾಯಿತು
ಸುತ್ತಮುತ್ತಲಿನ ಜೀವಗಳು ಪಾವನವಾದವು
ಇದು ಅಪರಿಮಿತ…
ಕರ್ನಾಟಕದ ಪ್ರಮುಖ ವೀರಶೈವ ಲಿಂಗಾಯತ ಮಠಗಳಲ್ಲಿ ಒಂದಾದ ಬಳ್ಳಾರಿ ಹೊಸಪೇಟೆ ಹಂಪಿ ಭಾಗದ ಜಗದ್ಗುರು ಕೊಟ್ಟೂರುಸ್ವಾಮಿ ಸಂಸ್ಥಾನ ಮಠಕ್ಕೆ ಆರು ಶತಮಾನಗಳ ಭವ್ಯ ಇತಿಹಾಸವಿದೆ. ಈ ಮಠದ ಮೂಲಪುರುಷರು ಶ್ರೀ ಕಪ್ಪಿನ ಚನ್ನಬಸವ ಮಹಾಸ್ವಾಮಿಗಳು. ಪೂಜ್ಯರು ಸ್ಥಾಪಿಸಿದ ಶ್ರೀಮಠವು ಶತ ಶತಮಾನಗಳಿಂದ ಶೃದ್ಧಾ ಗೌರವದ ಸಂಕೇತವಾಗಿ, ಬೆಳಗಿನೊಳಗಣ ಬೆಳಗಾಗಿ ಜನಮನದ ಭಕ್ತಿ ಕೇಂದ್ರವಾಗಿ, ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ಭಾಗದ ವೀರಶೈವ ಲಿಂಗಾಯತ ಧರ್ಮ ಪರಂಪರೆಯನ್ನು ಉಳಿಸಿ ಬೆಳೆಸಿದ ಕೀರ್ತಿಗೆ ಪಾತ್ರವಾಗಿದೆ. ಆ ಕಾಲಕ್ಕೆ ನೂರಾರು ಶಾಖಾಮಠಗಳನ್ನು ಹೊಂದಿದ್ದ ಶ್ರೀಮಠ ಕಾಲಾಂತರದಲ್ಲಿ ಶಿಥಿಲತೆಗೊಳಗಾಗಿ ಮಠದ ಆಸ್ತಿ ಪರಭಾರೆಯಾಗಿ ಸಾಲ ಸೋಲಗಳಲ್ಲಿ ಸಿಲುಕಿತ್ತು. ಸಮಾಜೋಧಾರ್ಮಿಕ ಚಟುವಟಿಕೆಗಳು ನಿಂತು ಹೋಗಿದ್ದವು.
ಇಂಥ ಮುಳ್ಳಿನ ಹಾಸಿಗೆಯ ಸಂದಿಗ್ಧ ಪರಿಸ್ಥಿತಿಯಲ್ಲಿ ಮಠದ ದುಸ್ಥಿತಿ ಗೊತ್ತಿದ್ದೂ, ೧೯೭೨ ರಲ್ಲಿ ೧೯ನೇ ಪೀಠಾಧಿಪತಿಯಾಗಿ ಜಗದ್ಗುರು ಸಂಗನಬಸವ ಸ್ವಾಮಿಗಳು ಜವಾಬ್ದಾರಿ ವಹಿಸಿಕೊಂಡರು. ‘ಕೊಟ್ಟ ಕುದುರೆಯನೇರಲರಿಯದವ ವೀರನೂ ಅಲ್ಲ; ಶೂರನು ಅಲ್ಲ’ ಎಂಬ ಅಲ್ಲಮಪ್ರಭುಗಳ ನುಡಿಯಂತೆ ನಡೆದರು. ಮಠದ ಸ್ವರೂಪವೇ ಬದಲಾಗತೊಡಗಿತು. ಅಪಾರ ಕರ್ತೃತ್ವ ಶಕ್ತಿ, ಕಾಯಕನಿಷ್ಠೆ, ಸೇವಾಮನೋಭಾವ, ಚಾಣಾಕ್ಷತನ, ನಿಷ್ಠುರತೆ, ಪ್ರಾಮಾಣಿಕತೆಗಳಿಂದ ಕಂಕಣಬದ್ಧರಾಗಿ ಮಠದ ಎಲ್ಲಾ ಸಮಸ್ಯೆಗಳನ್ನು ಒಂದು ಆಹ್ವಾನವೆಂಬಂತೆ ಸ್ವೀಕರಿಸಿ ಅನುನಯ, ಸಂಧಾನ ತಿಳುವಳಿಕೆಗಳ ಮೂಲಕ ಮಠವನ್ನು ಸುಸ್ಥಿತಿಗೆ ತರುವ ಸತ್ಕಾರ್ಯಕ್ಕೆ ಕೈಹಾಕಿ ಯಶಸ್ಸಿನ ಹಾದಿಯಲ್ಲಿ ಮುನ್ನಡೆದರು. ಮಠಗಳಿಗೆ, ಸಂಸ್ಥೆಗಳಿಗೆ ಭೌತಿಕವಾಗಿ ಭದ್ರ ಬುನಾದಿ ಹಾಕಿದರು. ಎಲ್ಲಾ ಕಡೆಗೂ ಸ್ವಂತ ಕಟ್ಟಡಗಳು ತಲೆ ಎತ್ತುವಂತೆ ಮಾಡಿದರು. ಬಳ್ಳಾರಿಯ ಹಾನಗಲ್ಲ ಕುಮಾರೇಶ್ವರ ಸಭಾಭವನ ಕಲ್ಯಾಣ ಮಂಟಪವನ್ನು ಆಧುನಿಕ ಸಮಾಜ ಅಪೇಕ್ಷಿಸುವ ರೀತಿಯಲ್ಲಿ ಸುಸಜ್ಜಿತವಾಗಿ, ವ್ಯವಸ್ಥಿತವಾಗಿ, ಭವ್ಯವಾಗಿ ಕಟ್ಟಿಸಿದರು. ಮಠಗಳ ಜೀರ್ಣೋದ್ಧಾರ ಮಾಡಿದರು. ಪರಭಾರೆಯಾಗಿದ್ದ ಮಠದ ಆಸ್ತಿಯನ್ನು ಮರಳಿಪಡೆಯಲು ಹಗಲಿರುಳು ಶ್ರಮಿಸಿದರು. ಜವಾಬ್ದಾರಿಯ ನೊಗಕ್ಕೆ ಹೆಗಲುಕೊಟ್ಟು, ಮಠವನ್ನು ಕ್ಷಿಪ್ರಗತಿಯಲ್ಲಿ, ಪ್ರಗತಿಪಥದಲ್ಲಿ ಮುನ್ನಡೆಸಿದರು.
ಕೆಲವರು ಹೆಜ್ಜೆ ಇಡುತ್ತಾರೆ; ಕೆಲವರು ದಾಪುಗಾಲಿಡುತ್ತಾರೆ. ಶ್ರೀಗಳು ಎರಡನೇ ವರ್ಗಕ್ಕೆ ಸೇರಿದವರು. ಪ್ರಬುದ್ಧತೆ, ನ್ಯಾಯ ನಿಷ್ಠುರತೆ, ಮಾತಿಗಿಂತ ಕೃತಿಗೆ ಮಹತ್ವ ಕೊಡುವ ಕಾರ್ಯಶೀಲತೆ ಅವರದು. ಅವರ ಪ್ರತಿಯೊಂದು ಯೋಜನೆಯ ಹಿಂದೆ ಒಂದಷ್ಟು ಒಳ್ಳೆಯ ಆಲೋಚನೆ, ಸಮ್ಯಕ್ ದೃಷ್ಟಿ, ಸಮಾಜದ ಹಿತ ಚಿಂತನೆ ಎದ್ದುಕಾಣುತ್ತದೆ. ತಮ್ಮ ಕರ್ತೃತ್ವ ಶಕ್ತಿ, ಸಂಘಟನಾ ಶಕ್ತಿ ಮತ್ತು ಸಂಯೋಜಕ ಶಕ್ತಿಗಳೆಂಬ ಶಕ್ತಿತ್ರಯಗಳ ಬಲದಿಂದ ಶ್ರೀಮಠದ ಇತಿಹಾಸದಲ್ಲಿ ದಾಖಲಾಗುವಂತಹ ಹೊಸ ಹೊಸ ಆಯಾಮಗಳ, ಅವಕಾಶಗಳ ಬಾಗಿಲು ತೆರೆದರು.
ಜೋಳಿಗೆ ಖಾಲಿಯಾದರೂ ಛಲಬಿಡದೆ, ಭಕ್ತರ ನೆರವಿನೊಡನೆ, ತಮ್ಮ ಕ್ರಿಯಾಶೀಲತೆಯ ಧೀಶಕ್ತಿ ಯೊಡನೆ ಆಧ್ಯಾತ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ, ಜ್ಞಾನಾನ್ನ ದಾಸೋಹ ಕಾರ್ಯಗಳ ಹೊಣೆಹೊತ್ತರು. ಅಲ್ಲಮಪ್ರಭುಗಳು ಹೇಳಿದ ಹಾಗೆ ‘ಹರಿವ ನದಿಗೆ ಮೈಯೆಲ್ಲ ಕಾಲು’ ಎನ್ನುವಂತೆ ಹರಿವ ಹೆದ್ದೊರೆಯಾಗಿ ಸಮಾಜದ ಏಳಿಗೆಗಾಗಿ, ಸ್ವಾಸ್ಥಕ್ಕಾಗಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಉಚಿತ ವಿವಾಹಗಳು, ಗ್ರಾಮೀಣ ಪ್ರದೇಶಗಳ ಬಡ ಮಕ್ಕಳ ದತ್ತು, ಗಡಿನಾಡಿನ ಬಡ ಮಕ್ಕಳ ಉಚಿತ ವಸತಿಯುತ ಶಾಲೆ, ಹತ್ತಾರು ಪ್ರಸಾದನಿಲಯಗಳು,
40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ ಶಿಕ್ಷಣ, ಮಠಗಳಲ್ಲಿ ನಿಯಮಿತವಾಗಿ ಶಿವಾನುಭವಗೋಷ್ಠಿ ಗಳು, ವಿಚಾರಸಂಕಿರಣಗಳು, ಹತ್ತಾರು ಸಲ ಬಸವ ಪುರಾಣ ಪ್ರವಚನ, ಬರಗಾಲ ನೆರೆಹಾವಳಿ ಸಂದರ್ಭಗಳಲ್ಲಿ ಗಂಜಿ ಕೇಂದ್ರಗಳು, ಪರಿಸರ, ಸಾವಯವ ಕೃಷಿ, ನೀರಿನ ಸದ್ಭಳಕೆ ಕುರಿತು ಗೋಷ್ಠಿಗಳು, ಆರೋಗ್ಯ ಶಿಬಿರಗಳು,
ಪಾನನಿಷೇಧ, ಕೃಷಿ ಸಂರಕ್ಷಣೆ, ಗೋಶಾಲೆ, ಗ್ರಾಮೀಣಾಭಿವೃದ್ಧಿ, ಜಾತ್ರೆ-ಉತ್ಸವಗಳು, ರಕ್ತದಾನ ಶಿಬಿರಗಳು, ಹಂಪಿಯ ಪಾವಿತ್ರತೆ ಸಂರಕ್ಷಣೆಯ ಕುರಿತು 101 ಮಹಾಸ್ವಾಮಿಗಳೊಂದಿಗೆ ಪಾದಯಾತ್ರೆ, ನೂರಾರು ಗ್ರಂಥಗಳ ಪ್ರಕಟಣೆ, ಸಾವಿರಾರು ಜನ ಕಲಾವಿದರಿಗೆ, ಸಾಧಕರಿಗೆ, ಸಮಾಜ ಸೇವಕರಿಗೆ ಸನ್ಮಾನ, ಮಠಗಳ ಜೀರ್ಣೋದ್ಧಾರ, ಲಕ್ಷಾಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಈ ಎಲ್ಲಾ ಸಂದರ್ಭಗಳಲ್ಲೂ ನೆರೆದ ಎಲ್ಲ ಭಕ್ತರಿಗೂ ಬಸವ ಪ್ರಸಾದ, ನೆತ್ತಿಗೆ ಜ್ಞಾನದ ಬೆಳಕು. ಇದಲ್ಲದೆ ಒಂದು ವರ್ಷ ಕಾಲ ನಿರಂತರ ಹಾನಗಲ್ಲ ಕುಮಾರ ಜ್ಯೋತಿ ರಥಯಾತ್ರೆ ಮತ್ತು ಸಾವಿರ ೧೯೮೭ರಿಂದ ಹಾಲಕೆರೆ ಅನ್ನದಾನೇಶ್ವರ ಮಠದ ನೇತೃತ್ವ ಅಲ್ಲಿನ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹಾಗೂ ಬಾದಾಮಿಯ ಕಾರಣಿಕ ಯುಗಪುರುಷ ಪೂಜ್ಯಶ್ರೀ ಹಾನಗಲ್ ಕುಮಾರಸ್ವಾಮಿಗಳಿಂದ ಸುಸ್ಥಾಪಿತವಾದ ಶಿವಯೋಗ ಮಂದಿರದ ಅಧ್ಯಕ್ಷತೆಯ ಜವಾಬ್ದಾರಿ ಹೊತ್ತುಕೊಂಡು ೨೦೧೦ರಲ್ಲಿ ಚಾರಿತ್ರಿಕ ಎನಿಸುವಂತೆ ಅಭೂತಪೂರ್ವವಾಗಿ ಅದರ ಶತಮಾನೋತ್ಸವವನ್ನು ಆಚರಿಸಿದರು. ಹೀಗೆಯೇ ಸಾಗುತ್ತದೆ ಅವರ ಸಾಧನೆಯ, ಕಾಯಕದ ಹಾಗೂ ಬಿಡುವಿಲ್ಲದ ಪರಿಶ್ರಮದಿಂದ ಕೈಗೊಂಡಿರುವ ರಾಷ್ಟ್ರೀಯ ಸೇವೆಯ ಹೆಜ್ಜೆಯ ಗುರುತುಗಳು.
ಸನ್ಯಾಸಿ ಧರ್ಮ ಕ್ರಿಯಾ ಮುಖವಾದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಶ್ರೀಗಳು ಒಂದು ಜ್ವಲಂತ ಉದಾಹರಣೆ. ಧಾರ್ಮಿಕ ಸಂಸ್ಥೆಗಳ
ನೇತೃತ್ವವಹಿಸಿಯೂ, ಪ್ರಗತಿಪರ ವಿಚಾರಗಳಿಗೆ ಆರೋಗ್ಯಕರ ಸಮಾಜ ನಿರ್ಮಾಣಕ್ಕೋಸ್ಕರ ಸಮಾಜಮುಖಿಯಾದ ಶ್ರೀ ಸಂಗನಬಸವ ಮಹಾಸ್ವಾಮಿಗಳವರ ವ್ಯಕ್ತಿತ್ವ, ವ್ಯಷ್ಟಿಯಿಂದ ಸಮಷ್ಟಿಗೆ ವಿಸ್ತರಿಸಿದ್ದಕ್ಕೆ ಶರಣ ಸಿದ್ಧಾಂತಗಳ ಅನುಷ್ಠಾನವೇ ಪ್ರಮುಖ ಕಾರಣ. ವ್ಯಕ್ತಿ ಮತ್ತು ಸಮಾಜಗಳೊಂದಿಗೆ ಒಂದು ಪ್ರಜ್ಞಾಪೂರ್ವಕ ಸಂಬಂಧವನ್ನು ಉಂಟು ಮಾಡುವ ಕಾಯಕ ಸಿದ್ಧಾಂತ, ದಾಸೋಹ ನೀತಿ, ಜಂಗಮ ತತ್ವಗಳು ಮಹಾಸ್ವಾಮಿಗಳಿಗೆ ಆದರ್ಶವಾಗಿವೆ. ಪರಂಪರೆಯನ್ನು ಹಸನುಗೊಳಿಸಿ ಆಧುನಿಕತೆಯನ್ನು ಹಿತವಾಗಿಸಿ ‘ಹರಿವ ನದಿಗೆ ಮೈಯೆಲ್ಲ ಕಾಲು’ ಎಂಬ ವಚನದ ಆಶಯಕ್ಕೆ ಸ್ಪಂದಿಸಿರುವ ಶ್ರೀಗಳು ಒಬ್ಬ ಪ್ರಜ್ಞಾವಂತ ಮಠಾಧಿಪತಿಯ ಮೂಲಭೂತ ಕರ್ತವ್ಯವನ್ನು ಪಾಲಿಸಿದ್ದಾರೆ.
ಶ್ರೀ ಸಿದ್ದಯ್ಯ ಪುರಾಣಿಕರು ಒಂದೆಡೆ ಹೇಳುವಂತೆ, ಈ ಸರ್ವಾಂಗಲಿಂಗಿಯಲ್ಲಿ ಯಾವುದನ್ನು ಮೆಚ್ಚುವುದು? ಯಾವುದನ್ನು ಬಿಡುವುದು?.. ನಿಶ್ಚಿತ ಜ್ಞಾನವನ್ನೇ! ನಿರ್ಮಲ ಕ್ರಿಯೆಯನ್ನೇ! ಉಜ್ವಲ ವೈರಾಗ್ಯವನ್ನೇ!ಬಹುಭಾಷಾ ಪಾರಂಗತಿಯನ್ನೇ! ಪವಿತ್ರ ಜೀವನವನ್ನೇ! ಸಕಲ ಜೀವರಾಶಿಗಳನ್ನೂ ತನ್ನ ತೆಕ್ಕೆಯಲ್ಲಿ ಒಳಗೊಳ್ಳುವ ಅಪಾರ ಅನುಕಂಪವನ್ನೇ! ಶಿಕ್ಷಣ ಸಂಸ್ಥೆಗಳ ಸ್ಥಾಪನೆಯನ್ನೇ! ವೈಜ್ಞಾನಿಕ ದೃಷ್ಟಿಯನ್ನೇ! ಆಧ್ಯಾತ್ಮಿಕ ಔನ್ಯತ್ಯವನ್ನೇ! ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆಗಳನ್ನೇ! ಕವಿ ಕಲಾವಿದರಿಗೆ ನಿರಂತರ ನೀಡುತ್ತಿರುವ ಆಶ್ರಯವನ್ನೇ! ಸಾಹಿತ್ಯ-ಸಂಸ್ಕೃತಿಗಳ ಪೋಷಣೆಯನ್ನೇ! ಸಂಘಟನಾ ಶಕ್ತಿಯನ್ನೇ! ನಿರಂತರ ಕ್ರಿಯಾಶೀಲತೆಯನ್ನೇ! ಎಂಥ ವಿಘ್ನಗಳು ಎದುರಾದರೂ ಬಿಡದ ಛಲವಂತಿಕೆಯನ್ನೇ! ಮಠಗಳ ಉಸ್ತುವಾರಿ, ದಾಸೋಹ, ವಿದ್ಯಾರ್ಥಿನಿಲಯ, ಶಾಲಾ-ಕಾಲೇಜುಗಳ ಜಟಿಲ ಸಮಸ್ಯೆ ಎಲ್ಲವುಗಳನ್ನು ಲೀಲಾಜಾಲವಾಗಿ, ವಿಶ್ವಾಸದಿಂದ ಪರಿಹರಿಸುವ ಜಾಣ್ಮೆಯನ್ನೇ! ಸರ್ವಕಾರ್ಯಗಳಲ್ಲೂ ಒಡಮೂಡುವ ಕಾಯಕನಿಷ್ಠೆಯನ್ನೇ! ಯೋಚಿಸಿದಷ್ಟು ಅಪಾರವಾಗಿ ತೋರುವ ಈ ಕಾಯಕ,ಆಧ್ಯಾತ್ಮ ಸೂರ್ಯನ ಅಗಾಧವಾದ ಅವರ್ಣನೀಯವಾದ ವ್ಯಕ್ತಿತ್ವದ, ಕಾರ್ಯತತ್ಪರತೆಯ ಎಲ್ಲಾ ಅಂಶಗಳನ್ನು ಗುರುತಿಸಿ ಅವುಗಳ ಒಟ್ಟು ಬೆಲೆಯನ್ನು ಕಟ್ಟಬಲ್ಲ ವರಾರು?.. ಅವರ ಸೇವಾ ಕ್ಷೇತ್ರದ ವಿವರಗಳನ್ನೆಲ್ಲ ಪುಟಗಳಲ್ಲಿ ಹಿಡಿಯುವುದೆಂದರೆ ಕೊಡದಲ್ಲಿ ಸಾಗರವನ್ನು ಹಿಡಿದಿಡಲು ಮಾಡುವಂತಹ ಪ್ರಯತ್ನವಾಗುತ್ತದೆ. ಆದರೆ ಜನತೆಯ, ಭಕ್ತರ ಹೃದಯ ಪುಟಗಳಲ್ಲಿ ಸದಾಕಾಲವೂ ಅಚ್ಚಳಿಯದೇ ಉಳಿಯುವುದಂತೂ ಸತ್ಯ. ಹೀಗಾಗಿ ಇವರೊಬ್ಬ ಜೀವಂತ ದಂತಕತೆ, ಕಾಯಕಯೋಗಿ, ಕರ್ಮಯೋಗಿ, ಯುಗಪುರುಷ, ಈ ಕಾಲಘಟ್ಟ ಕಂಡ ವಿಸ್ಮಯ ಹಾಗೂ ಸದಾಕಾಲಕ್ಕೂ ನೆನಪಲ್ಲಿ ಉಳಿಯುವ ಸಂತ.
ಹೀಗೆ ತಮ್ಮ ಇಡೀ ಜೀವನವನ್ನೇ ಸಮಾಜದ ಸೇವಾಕಾರ್ಯಗಳಿಗೆ ಸಮರ್ಪಿಸಿಕೊಂಡ ಶ್ರೀ ಸಂಗನಬಸವ ಸ್ವಾಮಿಗಳು ಕರ್ನಾಟಕ ಕಂಡ ಮಹಾನ್ ದಾರ್ಶನಿಕರು. ಅಕ್ಷರದಿಂದ ಅಜ್ಞಾನ, ಅನ್ನದಿಂದ ಹಸಿವು ಕಳೆದ ಪ್ರಾತಃಸ್ಮರಣೀಯರು. ತಮ್ಮ ನಿಷ್ಕಾಮ ಸೇವೆಯ ಮೂಲಕ ಇಳಿವಯಸ್ಸಿನಲ್ಲೂ ಸತ್ಕಾರ್ಯಗಳ ಅನುಷ್ಠಾನದಲ್ಲಿ ತೊಡಗಿಸಿಕೊಂಡ ಶ್ರೀಗಳು ಲೋಕೋಪಕಾರಕ್ಕಾಗಿಯೇ ಜನ್ಮ ತಳೆದವರು.
ದಿನದ ಮೂರು ಹೊತ್ತು, ಇಷ್ಟಲಿಂಗದ ಪೂಜೆಯಿಂದ ಗಳಿಸಿದ ಆಧ್ಯಾತ್ಮಿಕ ಶಕ್ತಿಯನ್ನೆಲ್ಲ ಲೋಕ ಸೇವೆಗಾಗಿಯೇ ಧಾರೆಯೆರೆದವರು, ನಡೆದಾಡುವ ಚರಿತ್ರೆಯಾದವರು, ದೇವರಾದವರು. ಅವರ ಜೀವನವೇ ಒಂದು ಆದರ್ಶ, ಅನನ್ಯ, ಅನುಕರಣೀಯ. ಇಡೀ ಸಮಾಜವೇ ಹೆಮ್ಮೆಪಡುವಂತೆ ಹಲವಾರು ಮಠಗಳಿಗೆ, ಸಂಸ್ಥೆಗಳಿಗೆ ಜೀವನಾಡಿಯಾಗಿ ಸಾವಿರಾರು ಜನರ ಬದುಕನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ನೈತಿಕವಾಗಿ ಸಂಪನ್ನಗೊಳಿಸಿದ ಶ್ರೀ ಸಂಗನಬಸವ ಸ್ವಾಮಿಗಳು ಇಂದು ಆ ಅಪರಿಮಿತದಲ್ಲಿ ಒಂದಾಗಿದ್ದಾರೆ. ಸಾವಿರಾರು ಜೀವಗಳಿಗೆ ಅನ್ನ ಅಕ್ಷರ ನೀಡಿದ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಸಮಾಜೋಧಾರ್ಮಿಕ ಆಶಯ ಎಲ್ಲರ ಉಸಿರಾಗಲಿ ಎಂದು ಪ್ರಾರ್ಥಿಸುತ್ತೇನೆ.
-ಡಾ. ತಿಮ್ಮನಗೌಡ ಅಂಗಡಿ
ಪ್ರಾಧ್ಯಾಪಕರು
ರಾವ್ ಬಹದ್ದೂರ್ ವೈ ಮಹಾಬಲೇಶ್ವರಪ್ಪ ತಾಂತ್ರಿಕ ಮಹಾವಿದ್ಯಾಲಯ, ಬಳ್ಳಾರಿ