-ಡಾ. ಸರ್ವಮಂಗಳ ಸಕ್ರಿ,ಉಪನ್ಯಾಸಕರು, ರಾಯಚೂರು.
ಭಕ್ತಿಯೆಂಬ ಪೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ, ಲಿಂಗವೆಂಬ
ಎಲೆಯಾಯಿತ್ತು. ಲಿಂಗವೆಂಬ ಎಲೆಯ
ಮೆಲೆ ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಯಿತ್ತು, ನಿಷ್ಪತ್ತಿಯೆಂಬ
ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲಸಂಗಮದೇವ ತನಗೆ ಬೇಕೆಂದು
ಎತ್ತಿಕೊಂಡ
ಬಸವಣ್ಣನ ಈ ವಚನದ ವಿಸ್ತಾರತೆಯನ್ನು ಶರಣ ಧರ್ಮದ ನೆಲೆಯಲ್ಲಿ ಕಾಣುವ ಗುರುವಿನ ಮೂಲಕ ಲಿಂಗವನ್ನು ಅರ್ಥೈಸುವ ಕವಿ ಪ್ರತಿಭೆಯ ವಿಶೇಷತೆಯಲ್ಲಿ ಎಂದು ಸ್ಪಷ್ಟಪಡಿಸುವುದಾಗಿದೆ.
ಭಕ್ತಿ ಎಂದರೆ ದೇವರ ಜೊತೆಗೆ ಉಂಟಾಗುವ ಜ್ಞಾನ ಪೂರ್ವಕವಾದ ಪ್ರೇಮ, ಸ್ನೇಹ ಇವು ಪಾರಮಾರ್ಥಿಕ ಪಯಣದಲ್ಲಿ ಕಾಣುವ ಆಕರ್ಷಕವಾದ ಗುಣಗಳು. ಭಕ್ತ ತಾನೇ ಲಿಂಗವಾಗುವ ಲಿಂಗ ತತ್ವವನ್ನು ಅಳವಡಿಸಿಕೊಂಡು ಗುರುವಿನ ಮೂಲಕ ಅರಿವು ಕಾಣುವ ಹಂಬಲ ಹೊಂದಿರುವವನು ಅಂಗಗುಣಗಳು ಅಳಿದು ಲಿಂಗ ಗುಣಗಳಾಗುವ ವ್ಯಾಪಕವಾದ ಹಂತ. ಇಲ್ಲಿ ಅರಿವೆಂಬ ಗುರುವು ಲಿಂಗವಾಗಿಹನು. ಪಂಚೇಂದ್ರಿಯದ ಮೂಲಕ ಸಮಷ್ಟಿಯನ್ನು ಗ್ರಹಿಸುವ ಅರಿವಿನ ಅನುಸಂಧಾನ. ಅದುವೇ ಲಿಂಗ. “ಸಾಕಾರವಿಡಿದು ನಿರಾಕಾರಕ್ಕೇರುವ ಸಮನ್ವಯ ಮಾರ್ಗ”. ಗುರು ಕೊಟ್ಟ ಇಷ್ಟಲಿಂಗೋಪಾಸನೆಯಲ್ಲಿ ವ್ಯಕ್ತವಾಗುತ್ತದೆ. ಇಷ್ಟಲಿಂಗ ಸಾಕಾರವೂ ಅಲ್ಲ, ನಿರಾಕಾರವೂ ಅಲ್ಲ “ನಿರಾಕಾರವೆಂಬೆನೆ ಸಾಕಾರವಾಗಿದೆ ಸಾಕಾರವೆಂಬೆನೆ ನಿರಾಕಾರವಾಗಿದೆ”. ಅಂತರಂಗದಲ್ಲಿದ್ದ ನಿರಾಕಾರ ಲಿಂಗವನ್ನು ಗುರು ಸಾಕಾರ ಲಿಂಗವ ಮಾಡಿ ಶಿಷ್ಯನ ಕರಸ್ಥಲಕ್ಕೆ ಕೊಟ್ಟಿದ್ದಾನೆ. ನೋಟ ಸಾಕಾರವಾಗಿದ್ದರೂ ಅದರ ಮೂಲ ಇರುವುದು ನಿರಾಕಾರದ ಬಯಲಿನಲ್ಲಿ ಬಯಲಾಗಿದೆ “ಭಕ್ತಿಯೆಂಬ ಪೃಥ್ವಿಯ ಮೇಲೆ” ಇಡೀ ಬ್ರಹ್ಮಾಂಡವನ್ನು ಲಿಂಗ ರೂಪದಲ್ಲಿ ಕಂಡವರು ಶರಣರು. ಹೀಗಾಗಿ ಪೃಥ್ವಿ ದೃಢತ್ವದ ಶಕ್ತಿ, ಲಿಂಗ ಸಂಕೇತ. ಲಿಂಗ ಸ್ಥಳದಲ್ಲಿ ಮನುಷ್ಯ ಶಾಂತವಾಗಿರುವುದರಿಂದ, ಲಿಂಗವೇ ಪ್ರಾಣ, ಪ್ರಾಣವೇ ಲಿಂಗವಾಗಿರುತ್ತದೆ. ಪ್ರಾಣಲಿಂಗವನ್ನು ಉಪಾಸನೆ ಮಾಡುವುದರ ಫಲವಾಗಿ ಮನಸ್ಸು ಮನೋಲಯವಾಗುತ್ತದೆ. ಸ್ಥೂಲ ತನು ಇಷ್ಟಲಿಂಗದಲ್ಲಿ ಸೂಕ್ಷ್ಮತನು ಪ್ರಾಣಲಿಂಗದಲ್ಲಿ, ಕಾರಣ ತನು ಭಾವಲಿಂಗದಲ್ಲಿ ಕಾಣುತ್ತದೆ.
ಗುರುವಿನ ಬೀಜ ಮಂತ್ರದಿಂದ ಲಿಂಗವನ್ನು ಧರಿಸಿದ ಭಕ್ತ ತಾರತಮ್ಯ ಭಾವನೆಯನ್ನು ಸುಟ್ಟುಹಾಕಲು ಗುರು ಕಾರಣಕರ್ತನು. ಸೂಕ್ಷ್ಮ ಶರೀರದಲ್ಲಿ ಲೀನವಾಗುವ ಹಂತವೇ ಪ್ರಾಣಲಿಂಗ. ಅಂಗವೆನಿಸುವ ಜೀವ ಲಿಂಗವೆನಿಸುವ ಭಾವಲಿಂಗ ಅರಿವು ಗುರುವಾಗಿ “ಅರಿವಿನ ಬೀಜ ಬಿದ್ದಲ್ಲಿ ಲಿಂಗವೆಂಬ ಎಲೆಯು ವಿಕಾಸವಾಗುತ್ತದೆ”. ಭಕ್ತಿಯ ಬೆಳವಣಿಗೆಯಲ್ಲಿ ಎಲೆ ಲಿಂಗವಾಗಿ ಭಕ್ತಿಯ ಬೇರು ಕಾಣಿಸಿಕೊಳ್ಳುತ್ತದೆ.
ಗುರು ಕೊಟ್ಟ ಜ್ಞಾನವನ್ನು ಲಿಂಗಾತ್ಮದಲ್ಲಿ ಮನಸ್ಸನ್ನು ಕೇಂದ್ರೀಕರಿಸುವುದು. ಲಿಂಗಾನುಭೂತಿಯಾಗಬೇಕಾದರೆ, ನಾನು ಎಂಬ ಅಹಂಕಾರವನ್ನು ಸುಟ್ಟುಕೊಂಡು ಜ್ಞಾನಾನುಸಂಧಾನವನ್ನು ಪಡೆಯಬೇಕು. ಆಗ ವಿಚಾರವೆಂಬ ಹೂವು ಅರಳುವುದು. ಆಗ ಆಚಾರವು ಕಾಯಾಗಿ ಪರಿವರ್ತನೆಗೊಳ್ಳುತ್ತದೆ. ಗುರು ಶಿಷ್ಯರ ನೈತಿಕಾಚರಣೆ ಆಧ್ಯಾತ್ಮ ಸಾದನೆಗೆ ಲಿಂಗಾನುಸಂಧಾನ ಕಾರಣ. ನಿಷ್ಪತ್ತಿ ಎಂಬ ಹಣ್ಣು ಪ್ರತಿಮೆ ಮಾರ್ಗದ ಬೆಳಕು. ಅಂಗಲಿಂಗದ ಜ್ಞಾನವನ್ನು ಗುರುವಿನ ಮೂಲಕ ಪ್ರಕೃತಿಗೆ ಹೋಲಿಸಿ ಹೇಳುವ ಸೂಕ್ಷ್ಮ ಸಂವೇದತ್ವ ಬಸವಣ್ಣನದು
—————————————————————————ಆತ್ಮೀಯ ಓದುಗರೇ,
e-ಸುದ್ದಿ ಅಂತರಜಾಲ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ, ಸುದ್ದಿಗಳ ಕುರಿತು ನೀವು ನಿಮ್ಮ ಅಭಿಪ್ರಾಯವನ್ನು ಕೆಳಗಡೆ ಇರುವ ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು.
ಸುದ್ದಿಗಳನ್ನು ತಕ್ಷಣ ನೋಡಲು ಬೆಲ್ ಬಟನ್ ಒತ್ತಿ.
-ಸಂಪಾದಕ