ನಾವು – ನಮ್ಮವರು
–ವಿಜಯಕುಮಾರ ಕಮ್ಮಾರ
16 ನೇ ವರ್ಷಕ್ಕೆ ಮದುವೆಯಾಗಿ, ಇಬ್ಬರು ಮಕ್ಕಳ ತಾಯಿಯಾದ ನಂತರ ಪುನಃ ಓದುವ ಹಂಬಲದೊಂದಿಗೆ, ಎಲ್ಲರ ವಿರೋಧದ ನಡುವೆಯೂ PUC ಮಾಡಿ, ನಂತರ B.A. ಮತ್ತು M.A. ಮಾಡಿ, ತದನಂತರ ಸಂಶೋಧನೆ ಮಾಡಿ Ph D ಪದವಿಯನ್ನೂ ಸಹ ಪಡೆದು, ಕಾಲೇಜಿನಲ್ಲಿ ಉಪನ್ಯಾಸಕಿಯಾದ ಸಂಘರ್ಷಪೂರ್ಣ ಕಥೆ ಕೇಳಿದರೆ ಯಾವುದೋ ಅನಂತನಾಗ ಮತ್ತು ಲಕ್ಷ್ಮಿ ಅಭಿನಯಿಸಿದ ಕೌಟುಂಬಿಕ ಚಲನಚಿತ್ರದಂತೆ ಭಾಸವಾಗುತ್ತದಲ್ಲವೇ. ? ಇಲ್ಲ, ಇದು ನಿಜ ಜೀವನದ ಸಾಹಸಪೂರ್ಣ ಕಥೆಯ ನೈಜ ನಿರೂಪಣೆ.
ಇಂದಿನ ಕಥೆಯ ನಾಯಕಿ ಹಾಗೂ ಇಂದಿನ ವಿಶೇಷ ಅತಿಥಿ ಸಾಹಸೀ ಸೃಜನಶೀಲ ಸಂಶೋಧನಾತ್ಮಕ ಬರಹಗಾರರಾದ ರಾಯಚೂರಿನ ಡಾ. ಸರ್ವಮಂಗಳಾ ಸಕ್ರಿಯವರು.
ಡಾ. ಸರ್ವಮಂಗಳಾ ಸಕ್ರಿಯವರ ತಾಯಿ ಶ್ರೀಮತಿ ಶಿವಮ್ಮನವರು, ಸ್ವಾತಂತ್ರ್ಯ ಹೋರಾಟಗಾರರೂ ಜೊತೆಗೆ ಕವಿಗಳೂ ಆಗಿದ್ದ ಆದೋನಿ ಎಲೆ ಬಸಪ್ಪನವರ ಮಗಳು. ಮಹಿಳೆಯರಿಗೆ ವಿದ್ಯಾಭ್ಯಾಸ ಕನಸಾಗಿದ್ದಂಥ ಕಾಲಘಟ್ಟದಲ್ಲಿ ಆರನೇ ತರಗತಿಯವರೆಗೂ ಓದಿದ್ದ ಶ್ರೀಮತಿ ಶಿವಮ್ಮನವರಿಗೆ ಗಳಗನಾಥ, ಅ.ನ.ಕೃ, ತ ರಾ ಸು, ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿಗಳನ್ನು ಓದುವ ಹವ್ಯಾಸವಿತ್ತು. ಅಜ್ಜನ ಮತ್ತು ತಾಯಿಯ ಓದುವ ಹವ್ಯಾಸ ಡಾ. ಸರ್ವಮಂಗಳಾ ಸಕ್ರಿಯವರಲ್ಲಿ ಗಾಢವಾದ ಪರಿಣಾಮ ಬೀರಿದ್ದನ್ನು ಅವರ ಬರಹಗಳಲ್ಲಿ ಕಾಣಬಹುದು.
ಡಾ. ಸರ್ವಮಂಗಳಾ ಸಕ್ರಿಯವರು 02-02-1960 ರಲ್ಲಿ “ಎಡೆದೊರೆ ನಾಡು” “ದೋ ಅಬ್” ಅಥವಾ “ಬಿಸಿಲು ನಾಡು” ಎಂದೇ ಪ್ರತೀತಿ ಪಡೆದ ಕಲ್ಯಾಣ ಕರ್ನಾಟಕದ ರಾಯಚೂರಿನಲ್ಲಿ ಜನಿಸಿದರು. ತಂದೆ ಆದೋನಿ ಎಲೆ ಈಶ್ವರಪ್ಪ ಮತ್ತು ತಾಯಿ ಆದೋನಿ ಎಲೆ ಶಿವಮ್ಮ. ನಾಲ್ಕು ಅಣ್ಣಂದಿರ, ಒಬ್ಬ ಅಕ್ಕನ ಮುದ್ದಿನ ತಂಗಿಯಾಗಿ ಮತ್ತು ಒಬ್ಬ ತಂಗಿಯ ಅಕ್ಕರೆಯ ಅಕ್ಕನಾಗಿ ತುಂಬು ಕುಟುಂಬದಲ್ಲಿ ಬೆಳೆದವರು ಡಾ. ಸರ್ವಮಂಗಳಾ ಸಕ್ರಿ.
ಪ್ರಾಥಮಿಕ ಶಿಕ್ಷಣವನ್ನು ರಾಯಚೂರಿನ ಮುನ್ನೂರುವಾಡಿ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಟ್ಯಾಗೋರ್ ಮೆಮೊರಿಯಲ್ ಗರ್ಲ್ಸ್ ಹೈಸ್ಕೂಲ್ ನಲ್ಲಿ ಪೂರೈಸಿದ ಡಾ, ಸರ್ವಮಂಗಳಾ ಸಕ್ರಿಯವರು 10 ನೇ ತರಗತಿಯ ನಂತರ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೆದಾರರಾಗಿದ್ದ ಲಿಂಗಸುಗೂರಿನ ಶ್ರೀ ಶೇಖರಪ್ಪ ಸಕ್ರಿಯವರೊಡನೆ ವಿವಾಹವಾಯಿತು.
ಡಾ. ಸರ್ವಮಂಗಳಾ ಸಕ್ರಿಯವರ ಸಂಘರ್ಷಪೂರ್ಣ ಸಾಹಸ ಗಾಥೆ ಶುರುವಾಗೋದೇ ಇಲ್ಲಿಂದ. 10 ವರ್ಷ ಗೃಹಿಣಿಯಾಗಿ ಇಬ್ಬರು ಮಕ್ಕಳು ಜನಿಸಿದ ನಂತರ ಪುನಃ ಓದುವ ಹಂಬಲ ಚಿಗುರೊಡೆಯಿತು. ಒಂದೇ ಸಾಲಿನ ಅತ್ಯಂತ ಸಂಘರ್ಷಪೂರ್ಣ ವಿದ್ಯಾಭ್ಯಾಸ ಅಂತ ಹೇಳೋದು ಸುಲಭ. ಆದರೆ ಹಾದಿ ಬಹಳ ಕಠಿಣ.
ರಾಯಚೂರಿನ ಸರ್ಕಾರೀ ಹೆಣ್ಣುಮಕ್ಕಳ ಶಾಲೆಯಲ್ಲಿ “ಟೇಲರಿಂಗ್ ಡಿಪ್ಲೋಮಾ” ಸೇರಿದ ಡಾ. ಸರ್ವಮಂಗಳಾ ಸಕ್ರಿಯವರಿಗೆ ಹಾರುವ ಹಕ್ಕಿಗೆ ಇಡೀ ಆಕಾಶವೇ ಸಿಕ್ಕಂತಾಗಿತ್ತು. ಓದುವ ಅದಮ್ಯ ಉತ್ಸಾಹವಿದ್ದ ಗೃಹಿಣಿಗೆ ಇದೇ ಯಶಸ್ಸಿನ ಸೋಪಾನವಾಯಿತೆಂದರೆ ತಪ್ಪಾಗಲಾರದು. ಇಲ್ಲಿ ಬಹು ಮುಖ್ಯವಾಗಿ ನಾವು ಗಮನಿಸಬೇಕಾದದ್ದು ಆಗ ಅವರ ಮೊದಲನೇ ಮಗ ಶೈಲೇಶ್ 7 ನೇ ತರಗತಿಯಲ್ಲಿ ಓದುತ್ತಿದ್ದ. ಯಶಸ್ವಿಯಾಗಿ ಟೇಲರಿಂಗ ಡಿಪ್ಲೋಮಾ ಮುಗಿಸಿದ ಡಾ. ಸರ್ವಮಂಗಳಾ ಸಕ್ರಿಯವರಿಗೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳಲಾಗಲಿಲ್ಲ. ಇಲ್ಲಿಯೇ ಮತ್ತೊಂದು ತಿರುವು ಕಾಣಿಸಿಕೊಂಡದ್ದು.
ರಾಯಚೂರಿನ ಬಿ.ಅರ್.ಬಿ ಕಾಲೇಜಿನಲ್ಲಿ ಗ್ರಂಥಪಾಲಕರಾಗಿದ್ದ ಇವರ ಅಣ್ಣನ ಪ್ರೋತ್ಸಾಹದಿಂದ ರಾಯಚೂರಿನ L.V.D. ಮಹಾವಿದ್ಯಾಲಯದಲ್ಲಿ B A ಗೆ ಸೇರುತ್ತಾರೆ. ಮನೆಯಲ್ಲಿ ಎಲ್ಲರನ್ನೂ ಸಂತೈಸಿ BA ಗೆ ಸೇರುವಷ್ಟರಲ್ಲಿ ಸಾಕಷ್ಟು ಬೆವರು ಸುರಿಸುತ್ತಾರೆ. ನಿಮಗೆ ಆಶ್ಚರ್ಯ ಆಗಬಹುದು. ಮಗ ಮತ್ತು ತಾಯಿ ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಲು ಪ್ರಾರಂಭಿಸುತ್ತಾರೆ. ಮಗ PUC ಓದುತ್ತಿದ್ದರೆ ತಾಯಿ BA ಓದುತ್ತಾರೆ. ಇದೇ L.V.D. ಮಹಾವಿದ್ಯಾಲಯದಲ್ಲಿ.
ಗುಲ್ಬರ್ಗಾ ವಿಶ್ವ ವಿದ್ಯಾಲಯದವರು PG Center ಪ್ರಾರಂಭ ಮಾಡತಾರೆ. ಇದರ ಅನುಕೂಲತೆಯನ್ನು ಪಡೆದ ಡಾ. ಸರ್ವಮಂಗಳಾ ಸಕ್ರಿಯವರು MA ಪದವಿಯನ್ನೂ ಸಹ ಪೂರೈಸುತ್ತಾರೆ. ಮುಂದೆ TSS ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಆಯ್ಕೆಯಾಗುತ್ತಾರೆ.
ಇಷ್ಟಕ್ಕೆ ನಿಲ್ಲದ ಇವರ ಅಭಿಯಾನ Ph D ಪದವಿಯನ್ನೂ ಪಡೆಯುವವರೆಗೆ ಮುಂದುವರೆಯುತ್ತದೆ. ಆಶ್ಚರ್ಯದ ಸಂಗತಿ Ph D ಪದವಿಗೆ ಸೇರಿದಾಗ ಇವರು ಅಜ್ಜಿಯಾಗಿದ್ದರು, ಮೊದಲನೇ ಮೊಮ್ಮಗುವಿನ ಜನನವಾಗಿತ್ತು.
ಅವರ Ph D ಪದವಿಯ ಸಂಶೋಧನಾ ಮಹಾಪ್ರಬಂಧ “ರಾಯಚೂರು ಜಿಲ್ಲೆಯ ತತ್ವಪದಕಾರರು.” ತತ್ವ ಪದಕಾರರ ಲಿಖಿತ ಸಾಹಿತ್ಯ ಅತ್ಯಂತ ಕಡಿಮೆ ಇರುವದರಿಂದ ಈ ವಿಷಯವೇ ಒಂದು challenging subject. ತತ್ವ ಪದಕಾರರ ಸಾಹಿತ್ಯವನ್ನು ಹುಡುಕುವದೇ ಒಂದು ದೊಡ್ಡ ಸಾಹಸ. ಇಂಥ ಸಾಹಸಕ್ಕೆ ಕೈ ಹಾಕಿ ಸಂಶೋಧನಾ ಪ್ರಭಂಧವನ್ನುವನ್ನು ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ ಡಾ. ಸರ್ವಮಂಗಳಾ ಸಕ್ರಿಯವರು. ಇನ್ನು ಇವರ ಲೇಖನಗಳು ಹಲವಾರು. ಅದರಲ್ಲೂ ವಚನ ಸಾಹಿತ್ಯದಲ್ಲಿ ಅವರು ಬರೆದ ಅಷ್ಟಾವರಣದ ಲೇಖನಗಳು, ವಚನ ಸಾಹಿತ್ಯ ಚಿಂತನೆಯ ಲೇಖನಗಳು ಹೊಸ ಚಿಂತನೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿವೆ.
ಅರಿವಿನ ಜ್ಯೋತಿಯಲ್ಲಿ ಪ್ರಕಟವಾದ ಅವರ ಲೇಖನ “ಭಾಷೆ ಮತ್ತು ಸಂವಹನ” ಇಂಗ್ಲೀಷಿನಲ್ಲಿ ಹೇಳಬೇಕಾದರೆ Linguistics & Communication ಒಂದು ಉತ್ತಮ ಲೇಖನ. ಬಿಸಿಲು ನಾಡು ರಾಯಚೂರಿನ ಸಾಹಿತ್ಯ ಮತ್ತು ಸಂಸ್ಕೃತಿಗೆ ಬೆಳಕು ಚೆಲ್ಲುವ ಪುಸ್ತಕ “ಬಿಸಿಲು ಚೆಲ್ಲಿದ ಬೆಳಕು” ದಲ್ಲಿ ಅವರ ಲೇಖನ ರಾಯಚೂರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಲೋಕವನ್ನು ಪರಿಚಯಿಸುತ್ತದೆ.
ರಾಜ್ಯ ಮತ್ತು ಅಖಿಲ ಭಾರತ ವಿಚಾರ ವೇದಿಕೆಗಳಲ್ಲಿ 10 ಕ್ಕೂ ಹೆಚ್ಚು ಪ್ರಬಂದ ಗಳ ಮಂಡನೆ. ೨೫ ಕ್ಕೂ ಹೆಚ್ಚು ಬಿಡಿ ಬರಹಗಳು ಮತ್ತು ಬಹಳಷ್ಟು ಸಂಶೋಧನಾ ತ್ಮಕ ಲೇಖನಗಳು ಪ್ರಕಟವಾಗಿವೆ. ಶರಣ ಸಾಹಿತ್ಯಪರಿಷತ್ತಿನಲ್ಲಿ 12 ಕ್ಕೂ ಹೆಚ್ವು ಪ್ರಬಂಧಗಳ ಮಂಡನೆ ಮಾದಿದ್ದಾರೆ.
ಸಧ್ಯ L.V.D ಪದವಿ ಕಾಲೇಜ್ ನ S.R.P.S. PU ಕಾಲೇಜ ದಲ್ಲಿ ಉಪನ್ಯಾಸ ವೃತ್ತಿ ಮುಂದುವರೆಸಿರುವ ಇವರು ಶರಣ ಸಿದ್ಧಾಂತ ಮತ್ತು ಬಸವಾದಿ ಶರಣರ ವಿಷಯದಲ್ಲಿ ಅಪಾರ ಜ್ಞಾನ ಸಂಪಾದಿಸಿರುವ ಅಕ್ಕ ಡಾ. ಸರ್ವಮಂಗಳಾ ಸಕ್ರಿಯವರು ಮಹಿಳೆಯರಿಗೆ ಮಾದರಿಯಾಗಿ ನಿಲ್ಲುವ ವ್ಯಕ್ತಿತ್ವದವರು.