ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ಚುನಾವಣೆ!ಹೊಸ     ಮುಖಗಳ ಪೈಪೋಟಿ..!!

ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ಚುನಾವಣೆ!ಹೊಸ     ಮುಖಗಳ ಪೈಪೋಟಿ..!!

ಕೊಪ್ಪಳ–ರಾಯಚೂರು ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಿಂದ ಹಿಂದೊಮ್ಮೆ ಬಿಜೆಪಿ ಜಯ ಸಾಧಿಸಿದ್ದು ಹೊರತುಪಡಿಸಿದರೆ, ಕಾಂಗ್ರೆಸ್‌ ಪಕ್ಷವೇ ಇದನ್ನು ತನ್ನ ಭದ್ರಕೋಟೆ ಮಾಡಿಕೊಂಡಿದೆ. ಈ ಸಲವೂ ಎರಡೂ ಪಕ್ಷಗಳ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ.

ಮತದಾರರು ಪಕ್ಷ ಅಥವಾ ಅಭ್ಯರ್ಥಿಗೆ ಒಲವು ತೋರಿ ಮತ ಕೊಡುತ್ತಾರೆ ಎಂಬ ವಾತಾವರಣ ಕಾಣುತ್ತಿಲ್ಲ. ಸ್ಥಳೀಯ ಸಂಸ್ಥೆಗಳಿಗೆ ಪಕ್ಷದ ಚಿಹ್ನೆಯಿಂದ ಆಯ್ಕೆಯಾದವರನ್ನು ಮನವೊಲಿಸಿ ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಎದುರಾಗಿದೆ.

‘ವಿಧಾನ ಪರಿಷತ್‌ ಚುನಾವಣೆಯಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಸದಸ್ಯ ಸುಮ್ಮನೇ ಮತ ಹಾಕುವುದಿಲ್ಲ. ಸದಸ್ಯರು  ತಮ್ಮ ಒಂದು ಮತಕ್ಕೆ ಎಷ್ಟು ಹಣ ಸಿಗುತ್ತದೆ ಎಂಬ ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಚುನಾವಣೆಯ ಗೆಲುವು ಹಣದಿಂದ ನಿರ್ಧಾರವಾಗುತ್ತದೆ’ ಎಂಬ ಮಾತುಗಳೂ ಜೋರಾಗಿ ಕೇಳಿಬರುತ್ತಿವೆಯೂ.

‘ಹಣವೊಂದೇ ಮಾನದಂಡ ವಾಗದು. ಸಮಸ್ಯೆಗಳಿಗೆ ಯಾರು, ಹೇಗೆ ಸ್ಪಂದಿಸುವರು ಎಂಬುದನ್ನೂ ಮತದಾರರು ನೋಡುತ್ತಾರೆ. ವಿಧಾನ ಪರಿಷತ್ತಿಗೆ ಆಯ್ಕೆಯಾದವರು, ಮತ್ತೆ ಮತ್ತೇ ಮತದಾರರ ಎದುರು ಬರುವುದಿಲ್ಲ. ಈಗಲೇ ಅಭ್ಯರ್ಥಿಗಳು ತಮ್ಮೆಲ್ಲ ಶಕ್ತಿ, ಸಾಮರ್ಥ್ಯ ಪ್ರದರ್ಶಿಸಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಹೇಳುತ್ತಾರೆ.

ಪ್ರತಿಸ್ಪರ್ಧಿಗಳಿಬ್ಬರೂ ಕೋಟ್ಯಾಧೀಶರು

ಕೊಪ್ಪಳ–ರಾಯಚೂರು ಎರಡೂ ಜಿಲ್ಲೆಗಳ ವ್ಯಾಪ್ತಿಯ ವಿಧಾನ ಪರಿಷತ್‌ ಕ್ಷೇತ್ರಕ್ಕೆ ನಾಲ್ವರು ಆಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಮತ್ತು ಬಿಜೆಪಿ ಅಭ್ಯರ್ಥಿ ವಿಶ್ವನಾಥ.ಎ.ಬನಹಟ್ಟಿ ಅವರ ಮಧ್ಯೆ ನೇರ ಹಣಾಹಣಿ ಇದೆ. ಆಸ್ತಿ ವಿವರದ ಪ್ರಕಾರ, ಇಬ್ಬರೂ ಕೋಟ್ಯಧೀಶರು. ಜನಹಿತ ಪಾರ್ಟಿ ಅಭ್ಯರ್ಥಿ ತಿರುಪತಿ ನರಸಪ್ಪ ಮತ್ತು ಪಕ್ಷೇತರ ಅಭ್ಯರ್ಥಿ ನರೇಂದ್ರ ಆರ್ಯರೂ ಕಣದಲ್ಲಿದ್ದಾರೆ. ಆದರೆ ಇವರು ಆಟಕುಂಟು ಲೆಕ್ಕಕ್ಕಿಲ್ಲದವರು.!

ಉದ್ಯಮಿ ವಿಶ್ವನಾಥ ಬನಹಟ್ಟಿ ಅವರು ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರ ಸೂಚಿತ ಅಭ್ಯರ್ಥಿ ಎಂಬುದು ಸ್ಪಷ್ಟ. ‘ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆಯದ ವ್ಯಕ್ತಿಗೆ ಟಿಕೆಟ್‌ ನೀಡಲಾಗಿದೆ’ ಎಂಬ ಚರ್ಚೆಯೂ ಬಿಜೆಪಿ ನಾಯಕರಲ್ಲಿ ನಡೆದಿದೆ.

ಕಾಂಗ್ರೆಸ್‌ ಅಭ್ಯರ್ಥಿ ಶರಣಗೌಡ ಬಯ್ಯಾಪುರ ಅವರು, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಸಹೋದರನ ಪುತ್ರ. ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಅವರಿಗೆ ರಾಜಕೀಯ ಅನುಭವ ಇದೆ.

ಎರಡೂ ಜಿಲ್ಲೆಗಳ 12 ಶಾಸಕರ ಪೈಕಿ ಐವರು ಶಾಸಕರು ಹಾಗೂ ಇಬ್ಬರು ಸಂಸದರು ಬಿಜೆಪಿಯಿಂದ ಆಯ್ಕೆಯಾದವರು. ಐವರು ಶಾಸಕರು ಕಾಂಗ್ರೆಸ್‌ನವರು. ಇಬ್ಬರು ಜೆಡಿಎಸ್‌ ಶಾಸಕರಿದ್ದು, ಇವರು ಯಾರನ್ನು ಬೆಂಬಲಿಸುತ್ತಾರೆ ಎಂಬುದೇ ನಿಗೂಢ.

ಸ್ಪರ್ಧೆಗೆ ನಿರಾಕರಣೆಯೂ-

ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಸವರಾಜ ಪಾಟೀಲ ಇಟಗಿ ಅವರು ಮತ್ತೆ ಸ್ಪರ್ಧಿಸಲು ನಿರಾಕರಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಪರ ಈಗ ಪ್ರಚಾರ ನಡೆಸಿದ್ದಾರೆ. ‘ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಸಾಕಷ್ಟು ಅನುದಾನ ಬರುವುದಿಲ್ಲ. ವಿಧಾನ ಪರಿಷತ್‌ ಸದಸ್ಯನಾಗಿ ಸಮಸ್ಯೆಗಳಿಗೆ ಸ್ಪಂದಿಸದೇ ಇರಲು ನನ್ನಿಂದ ಆಗುವುದಿಲ್ಲ. ಹೀಗಾಗಿ ಟಿಕೆಟ್‌ ಬೇಡ ಎಂದು ವರಿಷ್ಠರಿಗೆ ಮೊದಲೇ ತಿಳಿಸಿದ್ದೆ’ ಎಂದು ಅವರು ನಮ್ಮ ಸುದ್ದಿಜಾಲಕ್ಕೆ ಪ್ರತಿಕ್ರಿಯಿಸಿದರು.

ಕ್ಷೇತ್ರದಲ್ಲಿ ಹಣ ಬಲ ಮತ್ತು ಜನ ಬಲ ದ ಅಗ್ನಿ ಪರೀಕ್ಷೆ ನಡೆದಿರುವದು ಸುಳ್ಳಲ್ಲ. ಈ ಸಲ ಚುನಾವಣೆಯಲ್ಲಿ ಅನಗತ್ಯವಾಗಿ ಜಾತಿಯ ಕಮಟು ವಾಸನೆಯ ದುರ್ಘಂಧ ಹರಡತೊಡಗಿದೆ. ಈ ದುರ್ಘಂಧವನ್ನು ರಾಜಕೀಯ ಮುಂಚುಣಿ ನಾಯಕರೇ ಹರಡಿಸುತ್ತಿದ್ದಾರೆ.

ಸ್ಥಳಿಯ ಸಂಸ್ಥೆಗಳ ಮತದಾರರ ಆಶೀರ್ವಾದ ಯಾರಿಗೆ ಇದೆ ಎಂದು ಕಾದು ನೋಡಬೇಕು.

# ಕೆ.ಶಿವು.ಲಕ್ಕಣ್ಣವರ

Don`t copy text!