ಆಹಾ ಎಂಬುದು ಆವೇಶಭಕ್ತಿ !
ಆನಂದಿಸಿ ಕಣ್ಣ ಮುಚ್ಚಿ ಆಹಾ ಎಂಬುದು ಆವೇಶಭಕ್ತಿ.
ತಲೆದೂಗಿ ಝಂಪಿಸಿ ಅಂತಃಕರಣ ಕದಡಿ ಆನಂದಿಸುವದು ಭಾವಭಕ್ತಿ ಬಿಂಬಿಸುವದಕ್ಕೆ ಪ್ರತಿರೂಪಿಲ್ಲದೆ ಆನಂದ ಅಶ್ರುಗಳು ನಿಂದು ಮುತ್ತಿನೊಳಗಣ ಅಪ್ಪುವಿನಂತೆ ಹೆಪ್ಪಳಿಯದೆ ನಿಂದುದು ಜ್ಞಾನಭಕ್ತಿ
ಇಂತೀ ತುರೀಯಾತುರೀಯವು ಏಕಚಿತ್ತವೆಂಬುದು ನಿಹಿತವಾದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ.
– ಮೊಳಿಗೆ ಮಾರಯ್ಯ
ಭಕ್ತಿಗಳಲ್ಲಿ ಅನೇಕ ವಿಧ. ಭಕ್ತರಲ್ಲಿ ಅನೇಕ ವಿಧವಾದ ಭಕ್ತರುಂಟು. ಒಬ್ಬಬ್ಬರದು ಒಂದೊಂದು ಭಾವ. ಯಾವ ಭಕ್ತರಲ್ಲಿ ಯಾವ ಉಂಟು ಮಾಡುತ್ತದೆ ಎಂಬುದನ್ನು ಶರಣರಾದ ಮೋಳಿಗೆ ಮಾರಯ್ಯನವರು ಈ ವಚನದಲ್ಲಿ ವಿಶ್ಲೇಷಿಸಿದ್ದಾರೆ.
ಆನಂದಿಸಿ ಕಣ್ಣ ಮುಚ್ಚಿ ಆಹಾ ಎಂಬುದು ಆವೇಶಭಕ್ತಿ
ಭಾವ ತೀವ್ರತೆಗೆ ಒಳಗಾಗುವನು ಮೊದಲನೇ ಭಕ್ತ. ದೇವರು ದೈವ ಕುರಿತ ದೃಶ್ಯ, ಧ್ವನಿ, ಹಾಡು, ಮಾತು ಕೇಳಿದಾಗ ಆನಂದವು ಅಂತರಂಗದಿಂದ ಚಿಮ್ಮುತ್ತದೆ. ಆಗ ಆ ಭಕ್ತ ಅನುಭಿಸುತ್ತ ಕಣ್ಣು ಮುಚ್ಚಿ ಆಹಾ! ಎಂಬ ಮಾತು ಹೊರಹಾಕುತ್ತಾನೆ. ಇದುವೆ ಆವೇಶಭಕ್ತಿ. ಭಕ್ತನು ಭಾವದ ತೀವ್ರತೆಯನ್ನು ತಡೆದುಕೊಳ್ಳದೆ ಭಾವನೆಗಳನ್ನು ನುಡಿಯ ಮೂಲಕ ಹೊರ ಹಾಕುತ್ತಾನೆ. ಇದುವೆ ಆವೇಶಭಕ್ತಿ.
ತಲೆದೂಗಿ ಝಂಪಿಸಿ ಅಂತಃಕರಣ ಕದಡಿ ಆನಂದಿಸುವುದು ಭಾವಭಕ್ತಿ. ಬಿಂಬಿಸುವುದಕ್ಕೆ ಪ್ರತಿರೂಪಿಲ್ಲದೆ, ಆನಂದ ಆಶ್ರುಗಳ ನಿಂದು, ಮುತ್ತಿನೊಳಗಣ ಅಪ್ಪುವಿನಂತೆ ಹೆಪ್ಪಳಿಯದೆ ನಿಂದುದು ಜ್ಞಾನಭಕ್ತಿ
ಭಕ್ತನು ತನಗಾದ ಆತ್ಮಾನಂದವನ್ನು ಒಳಗೊಳಗೆಯೆ ಅನುಭವಿಸುತ್ತ, ತನ್ನ ತಲೆ ಮಾತ್ರ ತೂಗುತ್ತಾ, ಅಲಿಗಾಡಿಸುತ್ತ, ಅಂತಃಕರಣ ಗಳು ಕದಡಿ ಆನಂದಿಸುವುದೆ ಭಾವಭಕ್ತಿ. ಭಾವದೊಳಗೆಯೆ ಅನುಭವಿಸುತ್ತ ಹೊರಗೆ ನುಡಿಯದೆ ತಲೆ ಮಾತ್ರ ಅಲುಗಾಡಿಸುತ್ತ ಹೃದಯದಲ್ಲಿ ಆನಂದಿಸುವುದೆ ಭಾವಭಕ್ತಿ. ಇವನೇ ಭಾವಭಕ್ತ. ದೈವಸ್ವರೂಪ ಕಂಡು ಕೇಳಿದಾಗ ತಾನು ಬೇರೆ ಆಗದೆ ತನ್ನೊಳಗೆ ತಾನೆಯಾಗಿದ್ದು ಕಂಗಳಲ್ಲಿ ಆನಂದದ ಆಶ್ರುಗಳು ನಿಂದು ತುಳಕದೆ, ಮುತ್ತಿನೊಳಗಣ ನೀರಿನಂತೆ ಅಲುಗಾಡದೆ ಇದ್ದಾಗ ಅದು ಜ್ಞಾನಭಕ್ತಿ. ಅವನೇ ಜ್ಞಾನಭಕ್ತ. ಜ್ಞಾನಭಕ್ತಿ ಯು ಸ್ಥಿರವಾಗಿ ನಿಲ್ಲುತ್ತದೆ. ತುಳಕದು
ಇಂತಿ ತುರೀಯಾತುರೀಯವು ಏಕಚಿತ್ತವೆಂಬುದು ನಿಹಿತವಾದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ
ಜ್ಞಾನಭಕ್ತಿ ಸಾಧಕನು ತನ್ನ ಸಾಧನೆಯಲ್ಲಿ ಮುಂದುವರಿಯುತ್ತ ಹೆಚ್ಚಿನ ಸ್ಥಿತಿಯನ್ನು ತಲುಪುತ್ತಾನೆ. ತುರೀಯ ತುರೀಯಸ್ಥಿತಿಯನ್ನು ತಲುಪಿದಾಗ ಅಲ್ಲಿ ಯಾವ ಸ್ಥಲವು ಇರದು. ಅದು ಸ್ಥಲಲೇಪಸ್ಥಿತಿ. ಅದು ತಾನೇ ತಾನಾಗಿ ನಿಂತಿರುವ ಸ್ಥಿತಿ. ಎನ್ನುತ್ತಾರೆ ಶರಣ ಮೋಳಿಗೆ ಮಾರಯ್ಯನವರು.
🙏🙏🙏
–ವೀರೇಶ ಸೌದ್ರಿ ಮಸ್ಕಿ