ವಚನ ಗಾಯನ ಒಂದು ವಿವೇಚನೆ

ವಚನ ಗಾಯನ ಒಂದು ವಿವೇಚನೆ

ಶರಣ ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿ ದಂತೆ ಅನೇಕ ಸಂಘ ಸಂಸ್ಥೆಗಳು ಮಠ ಮಾನ್ಯಗಳು,
ವಿಶ್ವವಿದ್ಯಾಲಯಗಳು,  ಶರಣ ಸಾಹಿತ್ಯ ಪರಿಷತ್ತು, ಬಸವ
ಸಮಿತಿ , ಕನ್ನಡ ಸಾಹಿತ್ಯ ಪರಿಷತ್ತುು,  ಅಕಾಡೆಮಿ ಅಲ್ಲದೇ
ಅನೇಕ ವಿದ್ವಾಂಸರು ಜಿಜ್ಞಾಸುಗಳು ಹೀಗೆ ಎಲ್ಲರೂ ಅನೇಕ ಪ್ರಕಾರದ ಮೌಲಿಕ ಕೃತಿಗಳನ್ನು ಪ್ರಕಟಿಸುತ್ತಲೇ ಇದ್ದಾರೆ.

ಶರಣ ಸಾಹಿತ್ಯದ ವಿವಿಧ ಆಯಾಮಗಳ ಕುರಿತಾಗಿ ಗಂಭೀರ ಚರ್ಚೆ ವ್ಯಾಖ್ಯಾನ ಹಾಗೂ ವಿಚಾರ ಸಂಕಿರಣಗಳಂತಹ ಸಭೆ ಸಮಾರಂಭಗಳು ನಿರಂತರ ನಡೆಯುತ್ತಲೇ ಇವೆ. ಇತ್ತೀಚೆಗಂತೂ ಡಿಜಿಟಲ್ ಮಾಧ್ಯಮದ ಮುಖಾಂತರ ಈ ತರಹದ ಚಟುವಟಿಕೆಗಳಿಗೆ ಸಮೃದ್ಧ ಅವಕಾಶವುಂಟಾಗಿದೆ. ಆಳಕ್ಕೆ ಅಗೆದಷ್ಟೂ ಸ್ರೋತಗಳು ಹೆಚ್ಚುತ್ತಲೇ ಇವೆ. ಶರಣ ಸಾಹಿತ್ಯ ಕುರಿತು ನಡೆದಿರುವಷ್ಟು ಪ್ರಮಾಣದಲ್ಲಿ ಚಿಂತನೆ ವಿಶ್ಲೇಷಣೆ ವಿಮರ್ಶೆ ಚರ್ಚೆ ಹಾಗೂ ವ್ಯಾಖ್ಯಾನಗಳು ಇನ್ನುಳಿದ ಸಾಹಿತ್ಯ ಪ್ರಕಾರಗಳಲ್ಲಿ ನಡೆದಿಲ್ಲವೆಂದೇ ಹೇಳಬಹುದು.

ವಚನಕಾರರು ತಮ್ಮ ಅಂತರಂಗದಲ್ಲಿ ಉದ್ದೀಪನ
ಗೊಂಡ ಭಾವನೆಗಳನ್ನು ಅಭಿವ್ಯಕ್ತಿಸಲು ಸಾಹಿತ್ಯಿಕವಾಗಿ
ಹಾಗೂ ಸಂಗೀತಾತ್ಮಕವಾಗಿಯೂ ( ಸ್ವರವಚನಗಳಲ್ಲಿ )
ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಅನುಸರಿಸಿದ್ದಾರೆ.
ಹೆಚ್ಚಿನ ವಚನಗಳಲ್ಲಿ ಹಲವು ರೀತಿಯ ಶಬ್ದ ಚಿತ್ರಗಳು
ಪ್ರತಿಮೆಗಳು ಅಲಂಕಾರಗಳು ರೂಪಕಗಳು ಹುದುಗಿವೆ.
ಇವೆಲ್ಲವುಗಳೂ ವಚನಗಳ ವಿಶಿಷ್ಟ ಭಾಷೆಗೆ ವ್ಯಂಜಕ
ಶಕ್ತಿಯನ್ನು ನೀಡಿವೆ. ಈ ವ್ಯಂಜಕ ಶಕ್ತಿಯ ಔಚಿತ್ಯಪೂರ್ಣ
ಅಭಿವ್ಯಕ್ತಿಯೇ ಭಾವ ! ಭಾವದಿಂದಲೇ ರಸಾಭಿವ್ಯಕ್ತಿ . ಈ
ರಸಾನುಭೂತಿಯಿಂದಲೇ ಆನಂದ. ವಚನಗಳಲ್ಲಿರುವ
ಭಾವ ನಾವೀನ್ಯತೆ ರಸಾಭಿವ್ಯಕ್ತಿಯ ಸುಪ್ತ ಶಕ್ತಿ ಹಾಗೂ
ಶಬ್ದಗಳಲ್ಲಿ ಅಡಗಿರುವ ಧ್ವನಿ ಪ್ರಚುರತೆಗಳನ್ನು ಕ್ಷಮತೆ
ಯಿಂದ ವ್ಯಕ್ತಪಡಿಸಲು ಕಂಠ ಶುದ್ಧಿ ಅದರ ನಮ್ಯ ಕೋಮಲ ತಾಂತವ ಹಾಗೂ ಸ್ಥಿತಿಸ್ಥಾಪಕ ಗುಣಗಳು ಸ್ವರ
ಅಕ್ಷರ ಹಾಗೂ ಶಬ್ದಗಳ ಸರಿಯಾದ ಉಚ್ಚರಣಾ ಕ್ರಮ
ಮೊದಲಾದವುಗಳು ಭಾವ ರಾಸಾಭಿವ್ಯಕ್ತಿಗಳ ಜೀವಾಳ
ವಾಗಿರುವ ಸೂಕ್ತ ಲಯದೊಡನೆ ಪ್ರಜ್ಞಾಪೂರ್ವಕವಾಗಿ
ಮೇಳೈಕೆಗೊಂಡ ವಚನ ಗಾಯನದಲ್ಲಿ ಪ್ರಾಣ ಶಕ್ತಿಯ
ಸಂಚಲನವುಂಟಾಗಿ ಆ ಗಾಯನವು ಕೇವಲ ಇಂದ್ರಿಯ
ಗ್ರಾಹಿಯಾಗದೇ ಆತ್ಮಗ್ರಾಹಿಯಾಗುವದು.

ಪಂ ಮಲ್ಲಿಕಾರ್ಜುನ ಮನಸೂರ ಪಂ ಸಿದ್ಧರಾಮ
ಜಂಬಲದಿನ್ನಿ ಪಂ ಬಸವರಾಜ ರಾಜಗುರುಗಳು ಶರಣರ
ವಚನಗಳನ್ನು ಕೂಲಂಕಷವಾಗಿ ಅಭ್ಯಸಿಸಿ ಸಾಹಿತಿ ಹಾಗೂ ವಿದ್ವಾಂಸರೊಡನೆ ಚರ್ಚಿಸಿ ಹಲವಾರು ಬಾರಿ ರಾಗ ಸಂಯೋಜಿಸಿ ಅವುಗಳಿಗೆ ಸೂಕ್ತ ಸ್ವರೂಪ ಕೊಟ್ಟು ಮನದುಂಬಿ ಹಾಡಿದರು. ಅವರ ರಾಗ ಸಂಯೋಜನೆ ಗಳಲ್ಲಿ ಅನ್ಯ ಸಂಗೀತ ಶೈಲಿಯ ಪ್ರಭಾವವು ಕಂಡು ಬರುವದಿಲ್ಲ.

ಪಂ ಮಲ್ಲಿಕಾರ್ಜುನ ಮನಸೂರ ರವರು ವಚನಗಳಿಗೆ ರಾಗ ಸಂಯೋಜಿಸಲು ಹಿಂದಿನ ಪ್ರಬಂಧ ನಿಬಂಧ ಛಂದ ಮಾತ್ರಿಕಾ ಪ್ರಮಾತ್ರಿಕಾಗಳಂತಹ ಗಾಯನ ಶೈಲಿಗಳನ್ನು ಅಭ್ಯಸಿಸಿ ಅವುಗಳಲ್ಲಿರುವ ಹಲವಾರು ಅಂಶಗಳನ್ನು ವಚನಗಳ ರಾಗ ಸಂಯೋಜನೆಯಲ್ಲಿ ಸೂಕ್ತ ವಾಗಿ ಅಳವಡಿಸುವ ವಿಚಾರಗಳನ್ನು ಅನಕೃ, ಬಸವನಾಳ ಹಾಗೂ ಮುರುಘಾ ಮಠದ ಶ್ರೀ ಮೃತ್ಯುಂಜಯಪ್ಪಗಳವರಂತಹ ವಿದ್ವಾಂಸರೊಡನೆ ಚರ್ಚಿಸಿ ಸಂಯೋಜಿಸಿ ಹಲವಾರು ದಿನ ಹಾಡಿ ರೂಢಿ ಮಾಡಿಕೊಂಡು ಅವರೆಲ್ಲರಿಗೂ ಹಾಡಿ ತೋರಿಸಿ ಹಲ ಕೆಲವು ಪರಿಷ್ಕರಣೆ ಹಾಗೂ ಆವಿಷ್ಕಾರಗಳೊಂದಿಗೆ ಕೊನೆಯ ರೂಪ ಕೊಟ್ಟು ಮತ್ತೆ ಹಲವಾರು ಬಾರಿ ಹಾಡಿ ರೂಢಿ ಮಾಡಿಕೊಂಡು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಹಾಡಿದರೆಂದೇ ಅವರ ವಚನ ಗಾಯನಕ್ಕೆ ಒಂದು ಅನನ್ಯತೆ ನಿರ್ಮಾಣವಾಗಿದೆ.

ವಚನ ಗಾಯನವೆಂದರೆ ಅವರ ಶೈಲಿ ! ಅವರ ಶೈಲಿಯೇ ವಚನ ಗಾಯನ !! ಅವರು ವಚನ ಸ್ವರವಚನ ತತ್ವಪದ ಭಾವಗೀತೆ ರಗಳೆ ಸುಪ್ರಭಾತ ಹೀಗೆ ಶರಣ ಸಾಹಿತ್ಯದ ಎಲ್ಲ ಪ್ರಕಾರಗಳನ್ನೂ ಹಾಡಿದರು.

ಭಾಷೆ ವೇಷ ಭೂಷಣ ತಿಂಡಿ ತಿನಿಸು ಆಹಾರಪದ್ಧತಿ
ಕಸಬುಗಾರಿಕೆ ಹೀಗೆ ಒಟ್ಟು ಬದುಕಿನಲ್ಲಿ ಶರಣ ಸಮುದಾ ಯಕ್ಕೆ ತನ್ನದೇ ಆದ ಒಂದು ವಿಶೇಷ ಸಾಂಸ್ಕೃತಿಕ ಶೈಲಿ ಇದೆ. ಪ್ರತಿಯೊಂದು ಸಮುದಾಯದ ಸಂಸ್ಕೃತಿಗೂ ತನ್ನ
ದೇ ಆದ ಒಂದು ದೃಷ್ಟಿ ಕಿಂಡಿ ಇರುವದು. ಆ ಕಿಂಡಿಯ ಮೂಲಕ ಈ ವಿಶ್ವ ಸಂವೇದನೆಯನ್ನೇ ಅದು ತನ್ನಲ್ಲಿ ಅರಗಿಸಿಕೊಂಡು ಆ ಸಂವೇದನೆಗೆ ತನ್ನದೇ ಆದ ಒಂದು ವಿಶೇಷ ಸ್ವರೂಪವನ್ನು ನೀಡುತ್ತದೆ.

ಒಂದು ಸಂಸ್ಕೃತಿಯ ಕಿಂಡಿಯ ಮೂಲಕ ಕಾಣುವ ಲೋಕವು ಇನ್ನೊಂದು ಸಂಸ್ಕೃಯ ಕಿಂಡಿಯ ಮೂಲಕ ಕಾಣುವ ಲೋಕಕ್ಕಿಂತ ಭಿನ್ನವಾಗಿರುವದು. ಈ ಹಿನ್ನೆಲೆಯಲ್ಲಿ ಶರಣ ಸಂಸ್ಕೃತಿ ಯ ಜೀವಾಳವಾದ ವಚನಗಳನ್ನು ಸಂಗೀತಕ್ಕೆ ಅಳವಡಿ ಸುವಾಗ ಭಿನ್ನತೆಯೊಡನೆ ಅನನ್ಯತೆಯೂ ಬೇಕೆಂಬ ಹಿರಿ
ದಾದ ಉದ್ದೇಶದಿಂದ ಅದಕ್ಕೊಂದು ಪ್ರತ್ಯೇಕ ಶೈಲಿಯ
ಪೃಷ್ಠ ಭೂಮಿಕೆಯನ್ನು ರೂಪಿಸಿ ಆ ಪುಣ್ಯವಂತರು ವಚನ ಗಾಯನ ಪರಂಪರೆಯನ್ನು ನಮಗೆ ಒಂದು ಅಪರೂಪದ ಬಳುವಳಿಯನ್ನಾಗಿ ಕೊಟ್ಟು ಹೋಗಿದ್ದಾರೆ.

ಅವರ ನಂತರ ಪಂ ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ
ಪಂ ಸಂಗಮೇಶ್ವರ ಗುರವ ಪಂ ಅರ್ಜುನಸಾ ನಾಕೋಡ
ಪಂ ಚಂದ್ರಶೇಖರ ಪುರಾಣಿಕಮಠ ರಂತಹ ಹಿರಿಯ ಕಲಾ
ವಿದರು ಅದೇ ದಾರಿಯನ್ನು ತುಳಿದು ವಚನ ಗಾಯನ ಕ್ಷೇ
ತ್ರಕ್ಕೆ ತಮ್ಮಯೋಗದಾನ ನೀಡಿದರು.ಇಂದಿಗೂ ಪಂ ಸೋ
ಮನಾಥ ಮರಡೂರ ಪಂ ರಾಜಶೇಖರ ಮನಸೂರ
ವಿದುಷಿ ಶ್ರೀಮತಿ ನೀಲಾ ಎಂ ಕೊಡ್ಲಿ ಪಂ ವೆಂಕಟೀಶ್
ಕುಮಾರ ಡಿ ಕುಮಾರದಾಸ ಹಾಗೂ ಪಂ ಬಸವರಾಜ
ರಾಜಗುರುಗಳ ಅನೇಕ ಹಿರಿಯ ಶಿಷ್ಯರು ತಮ್ಮ ಗುರು ಗಳ ವಚನ ಗಾಯನ ಪರಂಪರೆಯ ದಾರಿಯಲ್ಲೇ ಸಾಗಿದ್ದಾರೆ.

ವಚನ ಗಾಯನವು ಈ ವರೆಗೂ ನಡೆದು ಬಂದ
ದಾರಿಯುದ್ದಕ್ಕೂ ತನ್ನ ಪರಂಪರೆಯ ಜೊತೆ ಇತ್ತೀಚೆಗಿನ ಹಲವು ವರ್ಷಗಳಲ್ಲಿ ಸೂಕ್ಷ್ಮ ರೀತಿಯಲ್ಲಿ ತನ್ನ ದಿಶೆಗಳನ್ನು
ಬದಲಾಯಿಸಿಕೊಳ್ಳುತ್ತಾ ಬಂದಿದೆ.

ಅದರಲ್ಲೂ ತೀರಾ ಇತ್ತೀಚೆಗೆ ( ಸಂಸ್ಕೃತಿ ಪರಂಪರೆ ಹಾಗೂ ಅಭಿಜಾತತೆ ಗಳಲ್ಲಿ ಶೃದ್ಧೆ ನಂಬಿಕೆಗಳನ್ನಿಟ್ಟು ಹಾಡುವ ಬೆರಳೆಣಿಕೆಯಷ್ಟು ಕಲಾವಿದರ ಹೊರತಾಗಿ ಇನ್ನುಳಿದ ಬಹಳಷ್ಟು ಕಲಾವಿದರಿಂದ ) ವಚನ ಗಾಯನಕ್ಕೆ ಸಲ್ಲಬೇಕಾದ ನ್ಯಾಯವು ದೊರೆಯುತ್ತಿಲ್ಲ.

ಶರಣ ಸಂಸ್ಕೃತಿಯ ಜಾಯಮಾನಕ್ಕೆ ವ್ಯತಿರಿಕ್ತವಾದ ರೀತಿಯಲ್ಲಿ ವಿವಿಧ ಅನ್ಯ ಸಂಗೀತ ಶೈಲಿಗಳತ್ತ ವಾಲುತ್ತ ವಚನ ಗಾಯನವು ತನ್ನತನದ ಪರಂಪರೆಯಿಂದ ವಿಚಲನೆಗೊಳ್ಳುತ್ತಾ ಇದೆ. ಒಂದು ಸಂಸ್ಕೃತಿಯ ಸಂಪ್ರದಾಯವುಳ್ಳ ಗಾಯನಕ್ಕೆ ಬೇರೊಂದು ಸಂಸ್ಕೃತಿ ಯ ಗಾಯನದ ಸ್ಪರ್ಶ ಕೊಡುವದೆಂದರೇನು ? ವಿಕೃತಿ ಯನ್ನು ಅಪ್ಪಿಕೊಂಡಂತಲ್ಲವೆ? ಪ್ರತಿಯೊಂದು ಸಂಗೀತ
ಪದ್ಧತಿಯೂ ಸಾಮಾಜಿಕವಾಗಿ ಸ್ವೀಕೃತಗೊಂಡ ಒಂದು
ಶೈಲಿಯನ್ನು ಹೊಂದಿರುತ್ತದೆ. ಒಳ್ಳೆಯ ಸಂಸ್ಕಾರದಡಿಯ ಲ್ಲಿ ಅಭ್ಯಸಿಸಿದ ಕಲಾವಿದರು ಮಾತ್ರ ಆ ಸಂಪ್ರದಾಯ ಶೈಲಿ ಹಾಗೂ ಗುಣಗಳಿಗೆ ತಗುಲಿಕೊಂಡಿರುತ್ತಾರೆ. ಒಂದು ಗಾಯನ ಪರಂಪರೆಯು ತನ್ನ ಸಂಸ್ಕೃತಿಯ ವಿಶಿಷ್ಟಅರ್ಥದೊಡನೆ ಹಲವಾರು ಸಂಕೀರ್ಣ ವಿಚಾರಗಳನ್ನು
ಹೊತ್ತೊಯ್ದು ತನ್ನ ನಂತರದ ತಲೆಮಾರಿಗೆ ವರ್ಗಾಯಿಸಿ
ವಂಶವಾಹಿನಿಯಂತೆ ಕೆಲಸ ನಿರ್ವಹಿಸುತ್ತಾ ಇರುತ್ತದೆ.
ಒಂದು ಸಮುದಾಯದ ಸಂಸ್ಕೃತಿಯ ಪದ್ಧತಿಯಲ್ಲಿ
ಹುಟ್ಟಿಕೊಂಡ ಸಂಗೀತವನ್ನು ಬೇರೊಂದು ಸಂಸ್ಕೃತಿಯ
ಸಂಗೀತ ಪದ್ಧತಿಯಲ್ಲಿ ಅಥವಾ ಅದರ ಸ್ಪರ್ಶ ಕೊಟ್ಟು ಸಂಯೋಜಿಸಿ ಪ್ರದರ್ಶಿಸುವ ಸಂದರ್ಭಗಳಲ್ಲಿ ಮೊದಲಿನ
ಸಂಸ್ಕೃತಿಯ ಸಂಯೋಜನೆಯನ್ನು ಅಪೇಕ್ಷಿತ ಬೇರೆ
ಸಂಸ್ಕೃತಿಗೆ ನೇರವಾಗಿ ವರ್ಗಾಯಿಸದೇ ರೂಪಾಂತರದ ಮೊರೆ ಹೋಗಬೇಕಾಗುತ್ತದೆ. ಇಲ್ಲಿ ಭಾಷಾ ಧ್ವನಿಯ ಸಮಸ್ಯೆ ಉದ್ಭವಿಸುತ್ತದೆ ಅದನ್ನು ಸಮರ್ಪಕವಾಗಿ
ನಿಭಾಯಿಸಿಕೊಂಡಾಗ ಮಾತ್ರ ಆ ಎರಡೂ ಸಂಸ್ಕೃತಿಗ ಳನ್ನು ಶ್ರೀಮಂತಗೊಳಿಸಬಹುದು. ಇಲ್ಲಿ ಸಂಯೋಜಕನು
ಆ ಎರಡೂ ಸಂಗೀತ ಶೈಗಳನ್ನೂ ಕೂಲಂಕಷವಾಗಿ ಅಭ್ಯಸಿಸಿ ಅವುಗಳ ಆಳಗಲಗಳನ್ನು ತಿಳಿದಿರಬೇಕಾಗು ತ್ತದೆ. ಜೊತೆಗೆ ಒಂದು ಶೈಲಿಯ ಸಂಗೀತವನ್ನುಇನ್ನೊಂದು
ಶೈಲಿಗೆ ರೂಪಾಂತರಿಸುವ ಉದ್ದೇಶ ಮತ್ತು ಅದರಿಂದ ಮುಂದೆ ಉಂಟಾಗುವ ಪರಿಣಾಮಗಳ ಕುರಿತು ಎಚ್ಚರ
ವಹಿಸಬೇಕಾಗುತ್ತದೆ. ರೂಪಾಂತರಗೊಂಡ ಸಂಗೀತವು
ಯಾವ ಸ್ವರೂಪ ಪಡೆಯುವದೆಂಬುದರ ಅರಿವೂ ಇರ
ಬೇಕಾದದ್ದು ಅವಶ್ಯಕ. ಏಕೆಂದರೆ ಇಲ್ಲಿ ಸಂಗೀತಾತ್ಮಕ
ಅರ್ಥದ ಸಂವಹನೆಯು ಮಹತ್ವದ ಪಾತ್ರ ವಹಿಸುತ್ತದೆ.
ಇಲ್ಲದೇ ಹೋದರೆ ಅದು ಕ್ರಾಸ್ ಕಲ್ಚರ ( ಮಿಶ್ರ ತಳಿಯ )
ಸಂಗೀತವಾಗುತ್ತದೆ ! ಭಾಷೆ ಮತ್ತು ಸಂಗೀತ ಇವು ಮಾನ
ವೀಯ ಸಾಂಸ್ಕೃತಿಕ ಸಂಬಂಧಗಳಲ್ಲಿ ಶೃದ್ಧೆ ಮತ್ತು ನಂಬಿ ಕೆಗಳನ್ನು ಪುನಸ್ಥಾಪಿಸುವವು. ಆದ್ದರಿಂದ ಈ ವಿಷಯವು
ಬಲು ಸೂಕ್ಷ್ಮ ತರವಾಗಿದೆ.

ಇಂದು ವಚನಗಳ ಭಾಷೆ ಮತ್ತು ಅವುಗಳ ಅಭಿ ವ್ಯಕ್ತಿಯ ಕುರಿತು ಕಲಾತ್ಮಕ ಶೃದ್ಧೆಯೇ ಕಡಿಮೆಯಾಗುತ್ತಿ ದ್ದು ಧ್ವನಿಯ ಮೂಲಕ ಭಾವಾಭಿವ್ಯಕ್ತಿಯ ಮಾತು ಒತ್ತ ಟ್ಟಿಗಿರಲಿ , ತಪ್ಪಿಲ್ಲದೇ ಓದುವದೇ ಒಂದು ದೊಡ್ಡ ಸಾಧನೆ
ಎಂಬಂತಹ ವಾತಾವರಣ ನಿರ್ಮಾಣವಾಗಿದೆ.ಯತಿಸ್ಥಾನ
ಗಳನ್ನು ಗುರುತಿಸುವಿಕೆ ಸಂಗೀತ ಶಾಸ್ತ್ರದ ಸರಿಯಾದ
ತಿಳಿವಳಿಕೆ ವಾದ್ಯವ್ಯಾಕರಣ ರಾಗ ಪರಿಕಲ್ಪನೆ ಅಕ್ಷರ ಸೂಕ್ಷ್ಮಗಳಂತಹ ಸಂಗತಿಗಳಿಲ್ಲದೆಯೂ ಸಂಗೀತ ನಿರ್ದೇ
ಶನ ಮಾಡಬಹುದೆಂಬ ಸಧ್ಯದ ಪರಿಸ್ಥಿತಿಯು ನಿಜವಾಗಿ
ಯೂ ಆತಂಕಕಾರಿಯಾದುದು. ಮನಸ್ಸಿನಲ್ಲಿ ಹಲ – ಕೆಲ ವು ಸ್ವರ ಲಹರಿಗಳಿದ್ದ ಮಾತ್ರಕ್ಕೆ ಒಳ್ಳೆಯ ಸಂಯೋಜಕ
ನಾಗಲು ಸಾಧ್ಯವಾಗದು. ವಚನ ಗಾಯನದಲ್ಲಿ ಇಂದು
ಪರಂಪರೆಗಿಂತಲೂ ಟ್ರೆಂಡ್ ಕಡೆಗೆ ಹೆಚ್ಚಿನ ಆಸಕ್ತಿ ಬೆಳೆ
ಯುತ್ತಿದೆ.

ಅರ್ಥ ಭಾವ ಗೇಯ ಬಂಧ ಮುಂತಾದವುಗಳ ಮೂಲಕ ವಚನಗಳ ಆಶಯವು ಸಾರ್ಥಕಗೊಳ್ಳಬೇಕಾ ದರೆ ಸಂಗೀತವು ಸಾಹಿತ್ಯಕ್ಕೆ ಪೂರಕ ಪೋಷಕ ಪ್ರೇರಕ
ಹಾಗೂ ಸಾಧಕವೂ ಆಗಬೇಕು. ಶರಣರ ವಚನಗಳನ್ನು
ರಾಗ ಸಂಯೋಜಿಸಿ ಹಾಡುವದೆಂದರೆ ಅದು ಮೋಜಿನ ಮಾತಲ್ಲ ! ವಚನಗಳನ್ನು ಅಭ್ಯಸಿಸಿ ಅರ್ಥಮಾಡಿಕೊ ಳ್ಳುತ್ತ ಆಳಕ್ಕೆ ಇಳಿದಷ್ಟು ರಾಗ ಸಂಯೋಜನೆಯ ಹಾಗೂ
ಹಾಡುಗಾರಿಕೆಯ ಹೊಣೆಗಾರಿಕೆ ಸ್ಪಷ್ಟವಾಗುತ್ತದೆ. ಪ್ರತಿ ಯೊಂದು ಕಲಾ ಕ್ಷೇತ್ರವೂ ತನ್ನ ಕಲಾ ಪದ್ಧತಿಯ ಲಕ್ಷಣ
ಗಳಿಗನುಸಾರವಾಗಿ ತನ್ನ ಅಭಿರುಚಿಯ ಆವರಣವೊಂದ ನ್ನು ನಿರ್ಮಿಸಿಕೊಳ್ಳುತ್ತದೆ. ಅದರ ಕಕ್ಷೆಯ ಸಮೀಪದಲ್ಲಿ ರುವ ಅಭಿವ್ಯಕ್ತಿಯನ್ನು ಮಾತ್ರ ಅದು ಬಲು ಪ್ರೀತಿಯಿಂದ
ಅಪ್ಪಿಕೊಳ್ಳುತ್ತದೆ. ಇತ್ತೀಚೆಗೆ ಈ ವಚನ ಗಾಯನ ಕ್ಷೇತ್ರಕ್ಕೆ
ಅಭಿರುಚಿಯ ಆವರಣ ಇದೆಯೋ ಇಲ್ಲವೋ ಎಂಬುದೇ
ಸಂಶಯಾಸ್ಪದವಾಗಿ ಬಿಟ್ಟಿದೆ. ವಚನ ಗಾಯನಕಲೆ ಮತ್ತು
ಕೇಳುಗರು ತಮ್ಮ ಸಂಸ್ಕೃತಿ ಪರಂಪರೆ ಹಾಗೂ ಸಮಕಾ ಲೀನತೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಗೊಂದಲದಲ್ಲಿ
ಇರುವಂತೆ ತೋರುತ್ತಿದೆ. ಅಥವಾ ಈ ಸಂಗತಿಗಳತ್ತ ಅವ
ರು ತಮ್ಮ ಗಮನವನ್ನೇ ಹರಿಸಿರಲಿಕ್ಕಿಲ್ಲವೆ ?

ವಚನಗಳನ್ನು ಅರ್ಥೈಸಿಕೊಂಡು ರಾಗ ಸಂಯೋಜಿ
ಸುವಲ್ಲಿ ಯತಿಸ್ಥಾನಗಳು ಪ್ರಮುಖ ಪಾತ್ರ ವಹಿಸುವವು.
ಪ್ರತಿಯೊಂದು ಪದದಲ್ಲಿಯ ಸ್ವರ ವ್ಯಂಜನ ಅನುಸ್ವರ ಅನುನಾಸಿಕ ವಿಸರ್ಗ ಸಂಧ್ಯಕ್ಷರ ಸಂಯುಕ್ತಾಕ್ಷರ ಗುಣಿ ತಾಕ್ಷರ ಅಲ್ಪಪ್ರಾಣ ಮಹಾಪ್ರಾಣ ( ಇದರ ಆಘಾತದ
ತೀಕ್ಷ್ಣತೆ ) ಹೃಸ್ವ ದೀರ್ಘ ಅವಧಾರಣ ಹಾಗೂ ಒತ್ತಕ್ಷರ
ಗಳ ಉಚ್ಚರಣೆಗಳಲ್ಲಿ ತೊಡಗುವ ಧ್ವನಿಯ ಕಾಲಾವಧಿ ಗಳ ಪ್ರಜ್ಞೆಯೊಡನೆ ಪ್ರತಿ ಅಕ್ಷರಕ್ಕೂ ನ್ಯಾಯ ದೊರೆತಾಗ
ಮಾತ್ರ ಆ ಪದವು ಸರಿಯಾದ ಶಬ್ದದೊಂದಿಗೆ ಧ್ವನಿಪೂ
ರ್ಣಗೊಂಡು ಅರ್ಥವೂ ಸರಿಯಾಗಿ ವ್ಯಕ್ತಗೊಳ್ಳುವದು.
ಇಲ್ಲಿ ಶಾಬ್ದಿಕ ಧ್ವನಿ ಅಥವಾ ಸ್ವನ ( ಶಬ್ದದ ಕೊನೆಯ ಅಕ್ಷರದ ಧ್ವನಿ ಪ್ರವಾಹ )ವೂ ಸಂಗೀತಾತ್ಮಕ ಅಭಿವ್ಯಕ್ತಿ
ಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಈ ಎಲ್ಲ ಸಂಗತಿಗ ಳೂ ವಚನಗಳ ಭಾಷಾ ಘಟಕಗಳ ಅರ್ಥ ನಿರ್ಧಾರಕ್ಕೆ
ಮುಖ್ಯ ಕಾರಣವಾಗುತ್ತವೆ. ವಚನ ಗಾಯನದಲ್ಲಿ ಸಾಹಿ ತ್ಯ ಹಾಗೂ ಸಂಗೀತ ಇವೆರಡೂ ಪರಸ್ಪರ ಪೂರಕವಾದ
ವುಗಳು. ಒಂದು ಕಲೆಯು ತಾನು ಬೆಳೆಯುವಾಗ ತನಗೆ
ಪೂರಕವಾದ ಇನ್ನೊಂದು ಮಾಧ್ಯಮವನ್ನು ಉಪೇಕ್ಷಿಸಿ
ದರೆ ಅದು ಆ ಕಲೆಯ ಅಭಿವ್ಯಕ್ತಿಗೆ ಕುತ್ತಾಗಿ ಪರಿಣಮಿ
ಸುತ್ತದೆ. ಸರಿಯಾದ ಸ್ವರೋಚ್ಚಾರ ( ಸಂಗೀತ ಸ್ವರ )
ಅಕ್ಷರೋಚ್ಚಾರ ಶಬ್ದಗಳ ಉಚ್ಚಾರಗಳೊಡನೆ ಧ್ವನಿಯ
ಏರಿಳಿತಗಳ ಸುಂದರ ಆಲಾಪಗಳ ಜೊತೆಗೆ ಪದಗಳನ್ನು
ವೈವಿಧ್ಯಮಯ ಸ್ವರ ಸಂಗತಿಗಳೊಂದಿಗೆ ಹೆಕ್ಕಿ ಹೊಸೆದು
ನಾದಿ ನೀವಿ ಅವುಗಳ ಲಾಲಿತ್ಯವನ್ನು ಪುನರಾವರ್ತನೆ ಗಳೊಂದಿಗೆ ಬಣ್ಣಿಸುವ ಕಲಾವಿದನ ಭಾವಪೂರ್ಣ
ಮಧುರ ಗಾಯನದ ಮುಂದೆ ವಚನಕಾರನಾಗಲಿ ವಚನ
ವಾಗಲಿ ಕೇವಲ ನಿಮಿತ್ತ !

ಇಂದು ವಚನ ಗಾಯನ ಕಲೆಗೆ ತಂತ್ರಜ್ಞಾನದ
(ಇಲೆಕ್ಟ್ರಾನಿಕ್ ವಾದ್ಯೋಪಕರಣಗಳ ) ಅನುಚಿತ ಅನ್ವ
ಯಿಕೆಯು ಸಾಗರದ ಅಲೆಗಳಂತೆ ಅಬ್ಬರದಿಂದ ಅಪ್ಪಳಿ
ಸುತ್ತಿದೆ. ವಾಣಿಜ್ಯ ಧ್ವನಿಮುದ್ರಣ ಸಂಸ್ಥೆಗಳಡಿಯಲ್ಲಿ
ಆಧುನಿಕ ಉಪಕರಣಗಳ ಬಳಕೆಯಲ್ಲಿಯೇ ವಚನ
ಗಾಯನವು ಬೃಹತ್ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಲಿದೆ.
ಅದರ ಅಬ್ಬರಕ್ಕೆ ಸಿಲುಕಿ ಸಹೃದಯ ಕೇಳುಗರು ತಮ್ಮ
ಕೇಳ್ಮೆಯ ಆಯ್ಕೆಯನ್ನೂ ಸಮಾಧಾನದಿಂದ ಮಾಡಿಕೊ ಳ್ಳಲಾರದ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ. ಭಾರತೀಯ
ಸಂಗೀತ ಪರಂಪರೆಯಲ್ಲಿ ಗಾಯಕನ ಧ್ವನಿ ಮುನ್ನೆಲೆಯ
ಲ್ಲಾದರೆ ಅದನ್ನನುಸರಿಸಿಕೊಂಡು ವಾದ್ಯಗಳು ನುಡಿಯ
ಬೇಕು. ವಾದ್ಯಗಳನ್ನೂ ವಾದಕರೇ ನುಡಿಸಬೇಕಲ್ಲವೆ ?
ನಮ್ಮ ಧ್ವನಿಯನ್ನೇ ಸರಿಯಾಗಿ ಬಳಸಲಾರದ ಮನಸ್ಥಿತಿ
ಯಲ್ಲಿ ಒಂದು ಉಪಕರಣದ ವಾದನಕ್ಕೆ ನಾವು ಸಮರ್ಥ ರೆ ? ನುಡಿತ ಆರಂಭವಾಗುವದು ನಮ್ಮೊಳಗಿಂದಲೇ
ಅಲ್ಲವೆ ? ( ಪರಾ ಪಶ್ಯಂತೀ ಮಧ್ಯಮಾ ವೈಖರೀ ……. )
ಆಂತರ್ಯದ ಅಭಿವ್ಯಕ್ತಿಯೊಂದಿಗಿನ ಧ್ವನಿಯು ಬಾಹ್ಯ
ಉಪಕರಣಗಳ ಸಹಯೋಗದೊಂದಿಗೆ ಪ್ರವಹಿಸುತ್ತಿರು
ವಾಗ ಆ ಬಾಹ್ಯ ಉಪಕರಣಗಳು ಹೆಚ್ಚು ಅಬ್ಬರಿಸಿದರೆ
ಆ ಗಾಯನ ಕಲೆಯು ಇಂದ್ರಿಯಗೋಚರವಾಗಿ ಹೆಚ್ಚು
ಮೂರ್ತವಾಗುತ್ತದೆ. ಅಮೂರ್ತತೆ ನಶಿಸುತ್ತದೆ. ತತ್ಪರಿ
ಣಾಮವಾಗಿ ಆ ಕಲೆಯು ಕೆಳ ಸ್ತರಕ್ಕಿಳಿಯುತ್ತದೆ.

ಇತ್ತೀಚೆಗೆ ಶರಣ ಸಂಸ್ಕೃತಿಯ ಸಮಾಜದಲ್ಲಿ
ಹುಟ್ಟಿಕೊಂಡ ಹಲವು ಹತ್ತುಸಂದಿಗ್ಧಗಳ ನಡುವೆ ವಚನ
ಗಾಯನವು ಹಲವಾರು ಬಗೆಯ ಕ್ಷಿಪ್ರ ಆಯಾಮಗಳನ್ನು
ಪಡೆಯುತ್ತಿದೆ. ಜೊತೆಗೆ ರಾಜಕಾರಣ ಹಾಗೂ ಧರ್ಮದ
ವೇಷವನ್ನೂ ತೊಡುತ್ತಿದೆ. ದುರುಪಯೋಗಕ್ಕೂ ಬಲಿಯಾ
ಗುತ್ತಿದೆ. ಯಾವುದನ್ನೂ ಅರ್ಥೈಸಲು ಅರ್ಥ ತಪ್ಪುವ ಸಾಧ್ಯತೆಯೇ ಅಧಿಕವಾಗುತ್ತಿದೆ. ಏನಕೇನ ಪ್ರಕಾರೇಣ…
……….. ಎಂಬಂತೆ ಕಲೆಯು ಉತ್ತ್ಪ್ರೇಕ್ಷೆಯ ಅತಿರೇಕ ದಿಂದ ವೈಭವೀಕರಣಗೊಳ್ಳುತ್ತಿದೆ. ಜೊತೆಗೆ ಆ ಅತಿರೇಕ ವು ಸಹೃದಯರಿಗೆ ವ್ಯಂಗ್ಯೋ ಕ್ತಿಯಂತೆ ಎನಿಸುತ್ತಿದೆ.
ಇದರಿಂದಾಗಿ ಕಲೆಯ ಇನ್ನಿತರ ಮುಖಗಳು ಮರೆಯಾಗು ತ್ತಿವೆ. ಹೀಗೆ ಕಾಲ ಕಾರಣ ತರ್ಕದಲ್ಲಿ ವೈಭವೀಕರಣದ
ಭರಭರಾಟೆಯು ಆತಂಕಕಾರಿಯಾದುದು. ಈ ಎಲ್ಲ ವಿಚಾರಗಳ ಜೊತೆಗೆ ಜನಪ್ರಿಯತೆಯು ಒಂದೆಡೆಯಾದರೆ
ಅಭಿಜಾತತೆ ಪರಂಪರೆ ಸಹೃದಯ ಪ್ರೀತಿ ಇವುಗಳು
ಇನ್ನೊಂದೆಡೆಗೆ , ಇವುಗಳ ನಡುವೆ ವ್ಯತ್ಯಾಸವಿದ್ದೇ ಇದೆ
ಯಲ್ಲವೆ ? ಸಹೃದಯ ಕೇಳುಗರ ಅಭಿರುಚಿಯಲ್ಲಿರು ವದು ಭಾವ ವ್ಯಾಪಾರ , ಆದರೆ ಜನಪ್ರಿಯತೆಯ ಮನ
ಸ್ಥಿತಿಯಲ್ಲಿರುವದು ವ್ಯಾಪಾರೀ ಭಾವ …… ! ನಾವು ನಮ್ಮ ಅಭಿರುಚಿಯೊಂದಿಗೆ ಗಾಯನ ಕಲೆಗೆ ಎಷ್ಟು ಸಮೀಪದಲ್ಲಿದ್ದೇವೆ ಹಾಗೂ ತೀರಾ ಇತ್ತೀಚೆಗಿನ ವಚನ
ಗಾಯನ ಕಲೆಯು ಅಭಿಜಾತತೆಗೆ ಎಷ್ಟು ಸಮೀಪವಾಗು ತ್ತಿದೆ ಎಂಬ ಸಾಪೇಕ್ಷ ಸತ್ಯದಲ್ಲಿ ಭಾವ ವ್ಯಾಪಾರ ಮತ್ತು
ವ್ಯಾಪಾರೀ ಭಾವಗಳನ್ನು ಸಹೃದಯ ಕಲಾಪ್ರಿಯರು
ನಿರ್ಧರಿಸಬಹುದಲ್ಲವೆ? ಇಂದಿನ ಕೇಳುಗರಲ್ಲಿ ಇಂತಹ
ಗೊಂದಲಮಯ ವಾತಾವರಣ ನಿರ್ಮಾಣವಾದ ದ್ದಂತೂ ನಿಜವೆಂಬುದನ್ನು ಅಲ್ಲಾಗಳೆಯಲಾಗದು.

ಕಲೆಯ ತಾತ್ವಿಕತೆ ಇರುವದು ಆಹತದಿಂದ ಅನಾ ಹತದೆಡೆಗೆ ಸಾಗಬೇಕೆಂಬಲ್ಲಿ. ಅಂದರೆ ಲೌಕಿಕದಿಂದ ಅಲೌ
ಕಿಕ ಅನುಭೂತಿಯೆಡೆಗೆ. ಇಂದಿನ ಪರಿಸ್ಥಿತಿಯಲ್ಲಿ ವಚನ
ಗಾಯನ ಕಲೆಯು ಇದರ ವಿರುದ್ಧ ದಿಶೆಯಲ್ಲಿ ಅಂದರೆ
ಸಂಕೀರ್ಣತೆಯಿಂದ ಸರಳತೆಯೆಡೆಗೆ , ಶಾಸ್ತ್ರೀಯತೆ ಯಿಂದ ಲಘುತ್ವದೆಡೆಗೆ , ಪ್ರೌಢಿಮೆಯಿಂದ ಜನಪ್ರಿಯತೆ
ಯೆಡೆಗೆ ಸಾಗುತ್ತಲಿದೆ ಆದರೆ ಅಂತಃಕರಣದ ಸೂಕ್ಷ್ಮ
ಕೇಳುಗರು ಲಘುತ್ವದಿಂದ ಅದರ ಗಹನತೆಯೆಡೆಗೆ ಮುಖ
ಮಾಡಿರುತ್ತಾರೆ. ಈ ವಿಪರ್ಯಾಸ ಮತ್ತು ಇಂತಹ ದ್ವಂದ್ವ
ಗಳನ್ನು ಸರಳವಾಗಿಸಿಕೊಳ್ಳುವ ಸಂಗತಿಯು ವರ್ತಮಾನ
ದಲ್ಲಿ ಕಲೆ ಕಲಾವಿದ ಮತ್ತು ಕೇಳುಗ ಈ ಮೂವರಿಗೂ
ಸವಾಲಿನ ಸಂಗತಿಯೇ ಹೌದು.

ಈ ಹಿನ್ನೆಲೆಯಲ್ಲಿ ವಚನ ಗಾಯನವು ಈ ವರೆಗೂ
ಸಾಗಿಬಂದ ದಾರಿಯ ಕುರಿತು ಅವಲೋಕನಾತ್ಮಕವಾಗಿ
ಪರಂಪರೆ ಬಳುವಳಿ ಹಾಗೂ ಇಂದಿನ ಅದರ ಸ್ವರೂಪ
ಹಾಗೂ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದಾಗ ವರ್ತಮಾನ ದಲ್ಲಿ ವಚನ ಸಾಹಿತ್ಯಕ್ಕೆ ಸಂಗೀತದ ಉಚಿತ – ಅನುಚಿತ
ಬಳಕೆ ಶಬ್ದಗಳ ಉಚ್ಚರಣೆ ಸ್ಪಷ್ಟತೆ ರಾಗ ಸಂಯೋಜನೆ
ಗಾಯನದ ಪ್ರಸ್ತುತಿ ವಾದ್ಯಗಳ ಬಳಕೆ ಅವುಗಳ ಸಾಧಕ ಬಾಧಕಗಳು ಮೊದಲಾದ ವಿಷಯಗಳ ಕುರಿತು ವಿಶೇಷ
ದೃಷ್ಟಿಗಳೊಂದಿಗೆ ವಿಸ್ತೃತ ಅಧ್ಯಯನ ಚಿಂತನ ಗಂಭೀರ
ಚರ್ಚೆ ವಿಚಾರ ಸಂಕಿರಣ ಹಾಗೂ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸುವ ಆಸಕ್ತ ಸಂಘ ಸಂಸ್ಥೆಗಳ ಅಗತ್ಯತೆ ಇದೆ.
ರಸಿಕರು ಕಲಾಭಿಮಾನಿಗಳು ಶರಣ ಸಂಸ್ಕೃತಿಯ ಉದ್ಧಾರದಲ್ಲಿ ನಿಜವಾದ ಶೃದ್ಧೆ ಭಕ್ತಿ ಹಾಗೂ ಕಳಕಳಿಯು ಳ್ಳ ಮಹನೀಯರು ಈ ದಿಶೆಯಲ್ಲಿ ಗಮನಹರಿಸುವರೆ?

ಶರಣ ಸಂಸ್ಕೃತಿಯ ಘಮಲಿನೊಂದಿಗೆ ವಿಸ್ತೃತ
ಶಾಸ್ತ್ರೀಯತೆಯನ್ನುಹೊಂದಿದ ವಚನ ಗಾಯನ ಕಲೆಯು
ನಮ್ಮ ಹಿರಿಯ ತಲೆಮಾರಿನ ಪುಣ್ಯವಂತರಿಂದ ಪ್ರಾರಂಭ
ಗೊಂಡು ನಂತರದ ಬಹಳಷ್ಟು ಕಲಾವಿದರ ನಿರಂತರ ಪರಿಶ್ರಮದಿಂದ ಈ ವರೆಗೂ ಅಬಾಧಿತವಾಗಿ ಬದುಕಿ ಕೊಂಡು ನಮಗೆ ಬಳುವಳಿಯಾಗಿ ಬಂದಿದೆ. ಆದರೆ ಇಂದು ಹಲವು ರೀತಿಯ ಭರಭರಾಟೆಗಳ ಬಿರುಗಾಳಿಗೆ
ಸಿಲುಕಿ ಶರಣ ಸಂಸ್ಕೃತಿಗೆ ತುರಾಯಿಯಂತೆ ಬಳುವಳಿ ಯಾಗಿ ಬಂದ ಅಪರೂಪದ ಕಲಾಪ್ರಕಾರವೊಂದು ತನ್ನ
ಶಾಸ್ತ್ರೀಯತೆಯ ಗುಣ ವಿಶೇಷತೆಗಳನ್ನು ಕಳೆದುಕೊಂಡು
ಸೊರಗಿ ಸಣಕಲಾಗಿ ತನ್ನ ಶತಮಾನೋತ್ಸವದ ಹೆಬ್ಬಾಗಿ ಲಿನ ಅಂಗಳದಲ್ಲಿ ಮಜ್ಜೆ ಮಾಂಸಳಿಲ್ಲದೆಯೇ ಕೇವಲ ಎಲುಬಿನ ಹಂದರದಂತಾಗಿ ವಿಕೃತ ರೂಪ ಹೊತ್ತು ನಿಲ್ಲಬಹುದಲ್ಲವೆ ?

ವಿಜಯಕುಮಾರ ತೇಲಿ.
ಬೆಳಗಾವಿ

Don`t copy text!