ಹುಚ್ಚು ತೋಳ ದಾಳಿ: ತೊಳ ಕೊಂದ ಗ್ರಾಮಸ್ಥರು

ಮಸ್ಕಿ :ತಾಲೂಕಿನ ಹಿಲಾಲಪೂರ ಗ್ರಾಮದಲ್ಲಿ ಬುಧವಾರ ಹುಚ್ಚು ಹಿಡಿದ ತೋಳವೊಂದು ಜನರ ಮೇಲೆ ದಾಳಿ ಮಾಡಿದ್ದು, ಐದು ಜನರಿಗೆ ಗಾಯಗಳಾಗಿವೆ. ಶಿವಪ್ಪ ಬಸ್ಸಪ್ಪ, ಅಭಿಷೇಕ, ಸಮರ್ಥ, ಮೀನಾಕ್ಷಿ, ರಡ್ಡೆಪ್ಪ ಈ ಐದು ಜನರು ತೋಳದ ದಾಳಿಗೆ ಒಳಗಾಗಿದ್ದಾರೆ.
60 ವರ್ಷದ ಶಿವಪ್ಪ, 7 ವರ್ಷದ ಅಭಿಷೇಕ ಇಬ್ಬರು ಗಂಭೀರ ಗಾಯಗೊಂಡಿದ್ದು ಮಸ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ಧಾರೆ. ಉಳಿದ ಗಾಯಾಳುಗಳು ಲಿಂಗಸುಗೂರು ಸÀರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗ್ಗೆಯಿಂದ ಹುಡುಕಾಟ: ತಾಲೂಕಿನ ಹರ್ವಾಪೂರ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ತೋಳ ಬೆಂಚಮರಡಿ, ಹಿಲಾಲಪೂರ, ಚಿಲ್ಕರಾಗಿ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಓಡಾಡಿತ್ತು. ಗಾಬರಿ ಬಿದ್ದ ಜನರು ಹುಚ್ಚು ತೋಳದ ಬೆನ್ನು ಹತ್ತಿದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿ ಕಾರ್ಯಚರಣೆ ನಡೆಸಿದ್ದರು.
ಆದರೆ ಮಧ್ಯಾಹ್ನದ ವೇಳೆ ಇಲಾಲಪೂರದಲ್ಲಿ ಪ್ರತ್ಯಕ್ಷವಾಗಿದ್ದ ತೋಳ ಜನರ ಗುಂಪಿನಲ್ಲಿ ದಾಳಿ ಮಾಡಿ ಐದು ಜನರಿಗೆ ಕಡಿದು ಗಾಯಗೊಳಿಸಿದೆ. ಬಳಿಕ ಜನರ ಗೌಜು-ಗದ್ದಲಕ್ಕೆ ಹೆದರಿ ಬೆಂಚಮರಡಿ ಕಡೆ ಸಾಗಿತ್ತು. ಅಲ್ಲಿನ ಜನ ಹುಚ್ಚು ತೋಳದ ಸುದ್ದಿ ತಿಳಿದು ಜನರ ಮೇಲೆ ದಾಳಿ ಮಾಡಲು ಯತ್ನಿಸಿದ ವೇಳೆ ಕಟ್ಟಿಗೆಯಿಂದ ಬಡಿದು ಸಾಯಿಸಿದ್ದಾರೆ. ಸ್ಥಳಕ್ಕೆ ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದರು.


ಎರಡನೇ ಬಾರಿ ದಾಳಿ: ಈ ಭಾಗದಲ್ಲಿ ಹುಚ್ಚು ತೋಳದ ಹಾವಳಿ ಹೆಚ್ಚಾಗಿದೆ. ಈ ಹಿಂದೆಯೂ ತೋಳವೊಂದು ನಾನಾ ಗ್ರಾಮಗಳಿಗೆ ನುಗ್ಗಿ ಹಲವು ಜನರಿಗೆ ಕಚ್ಚಿ ಗಾಯಗೊಳಿಸಿತ್ತು. ಇದರಿಂದ ಚಿಲ್ಕರಾಗಿ ಗ್ರಾಮದಲ್ಲಿ ಅಮರಪ್ಪ ಎನ್ನುವವರು ಹುಚ್ಚು ತೋಳ ಕಡಿತದಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದರು. ಇರಕಲ್ ಗ್ರಾಮದಲ್ಲಿ ಜನರ ಮೇಲೆ ದಾಳಿ ಮಾಡಿದ ವೇಳೆ ಬಡೆದು ಸಾಯಿಸಲಾಗಿತ್ತು. ಈಗ ಮತ್ತೆ ಅಂತಹದ್ದೆ ಘಟನೆ ಮರುಕಳಿಸಿದೆ.

Don`t copy text!