ವಚನಗಳಲ್ಲಿ ನೈತಿಕತೆ

ವಚನಗಳಲ್ಲಿ ನೈತಿಕತೆ

ನೈತಿಕತೆಯು ಮಾನವನ ನಡವಳಿಕೆ ಮತ್ತು ಒಳ್ಳೆಯದು, ಕೆಟ್ಟದು, ಕರ್ತವ್ಯ, ಸಂತೋಷ ಮತ್ತು ಸಾಮಾನ್ಯ ಕಲ್ಯಾಣದ ಕಲ್ಪನೆಗಳೊಂದಿಗೆ ಅದರ ಸಂಬಂಧವನ್ನು ಅಧ್ಯಯನ ಮಾಡುವ ತತ್ತ್ವಶಾಸ್ತ್ರದ ಒಂದು ವಿಭಾಗವಾಗಿದೆ. ನೈತಿಕತೆ ಶಬ್ದದ ಉತ್ಪತ್ತಿ ಲ್ಯಾಟಿನ್‌ ಮತ್ತು ಗ್ರೀಕ್‌ ಭಾಷೆಯಿಂದ ಆಗಿದೆ. Ethics (ಎಥಿಕ್ಸ್) ಎಂಬ ಪದವು ಲ್ಯಾಟಿನ್ ಭಾಷೆಯಿಂದ ಬಂದಿದೆ. Ethecous (ಎಥೆಕಸ್) ಇದು ಪ್ರಾಚೀನ ಗ್ರೀಕ್ ಭಾಷೆಯಿಂದ ಬಂದಿದೆ. Ethos (ಎಥೋಸ್) ‘ಅಕ್ಷರ’ ಅಥವಾ ‘ಪಾತ್ರಕ್ಕೆ ಸೇರಿದ’ ಎನ್ನುವ ಅರ್ಥ ಕೊಡುವ ಶಬ್ದ.
ನೀತಿಶಾಸ್ತ್ರದ ಪಾತ್ರ ಸ್ವಾತಂತ್ರ್ಯ ಮತ್ತು ನ್ಯಾಯದ ಕಡೆಗೆ ಮಾನವ ನಡವಳಿಕೆಯನ್ನು ಮಾರ್ಗದರ್ಶಿಸುವ ನೈತಿಕತೆ, ಕರ್ತವ್ಯ ಮತ್ತು ಸದ್ಗುಣಗಳ ಆಚಾರಗಳನ್ನು ಒಂದು ಶಿಸ್ತಿನಿಂದ ವಿಶ್ಲೇಷಿಸುವ ಕೆಲಸವನ್ನು ಮಾಡುತ್ತದೆ.

ಧಾರ್ಮಿಕ ನೀತಿಶಾಸ್ತ್ರ:
ಆಧ್ಯಾತ್ಮಿಕ ಸದ್ಗುಣಗಳು ಮತ್ತು ಅತೀಂದ್ರಿಯ ಪರಿಕಲ್ಪನೆಗಳ ಆಧಾರದ ಮೇಲೆ ಮಾನವ ನಡವಳಿಕೆಯನ್ನು ಆದೇಶಿಸುವ ತತ್ವಗಳು, ಅಂದರೆ ಅತ್ಯುನ್ನತ, ಒಳ್ಳೆಯದು, ಸತ್ಯ, ಆತ್ಮ, ನ್ಯಾಯ, ಆದಿ ಸ್ವರೂಪದ ಕ್ರಮ, ಪ್ರೀತಿ, ಇತ್ಯಾದಿ. ಇದು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಭಿನ್ನವಾಗಿದೆ.
ನೀತಿಶಾಸ್ತ್ರದ ಪೂರ್ವವರ್ತಿಗಳು ಪ್ರಾಚೀನ ಗ್ರೀಸ್ ಗೆ ಹಿಂತಿರುಗುತ್ತವೆ. “ಸಾಕ್ರಟೀಸ್” ನನ್ನು ನೀತಿಶಾಸ್ತ್ರದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ, ಏಕೆಂದರೆ ಅವರ ಎಲ್ಲಾ ಆಲೋಚನೆಗಳು ಒಳ್ಳೆಯದನ್ನು ಕಲ್ಪಿಸುತ್ತವೆ. ಪ್ಲೇಟೋ ತನ್ನ ಕೆಲಸದ ಉತ್ತಮ ಭಾಗವನ್ನು ಗುಡ್, ಟ್ರುತ್ ಮತ್ತು ರಿಪಬ್ಲಿಕ್‌ ನಲ್ಲಿನ ತನ್ನ ಪಾತ್ರಕ್ಕೆ ಅರ್ಪಿಸಿದ್ದಾನೆ.
ಅದೇನೇ ಇದ್ದರೂ, ಅರಿಸ್ಟಾಟಲ್ ನೈತಿಕತೆಯ ಸರಿಯಾದ ಸ್ಥಾಪಕ. ಒಂದು ಶಿಸ್ತಿನಂತೆ ನೀತಿಶಾಸ್ತ್ರವು ಅವರ ಕೆಲಸದಿಂದ ಹುಟ್ಟಿತು. ನಿಕಮಾಕೊಗೆ ನೈತಿಕತೆ, ಅಲ್ಲಿ ಲೇಖಕನು ಮೊದಲ ಬಾರಿಗೆ ಸಾಮಾಜಿಕ ಮತ್ತು ವೈಯಕ್ತಿಕ ನೀತಿಗಳ ನಡುವಿನ ಸಂಬಂಧವನ್ನು ವ್ಯವಸ್ಥಿತಗೊಳಿಸುತ್ತಾನೆ. ಸರಕುಗಳು ಮತ್ತು ಸಿದ್ಧಾಂತ ಮತ್ತು ಅಭ್ಯಾಸ. ಅಂತೆಯೇ, ಇದು ಸದ್ಗುಣಗಳನ್ನು ಬೌದ್ಧಿಕ ಮತ್ತು ನೈತಿಕ ಎಂದು ವರ್ಗೀಕರಿಸುತ್ತದೆ.
ನೈತಿಕತೆ ಮತ್ತು ನಡವಳಿಕೆಯ ನಡುವಿನ ಸಂಬಂಧವೆಂದರೆ ಮನುಷ್ಯನ ನಡವಳಿಕೆಯನ್ನು ಮಾರ್ಗದರ್ಶನ ಮಾಡುವ ಅಡಿಪಾಯವನ್ನು ನಿರ್ಮಿಸುವುದು, ಅವನ ಪಾತ್ರ, ಪರಹಿತ ಚಿಂತನೆ ಮತ್ತು ಸದ್ಗುಣಗಳನ್ನು ನಿರ್ಧರಿಸುವುದು ಮತ್ತು ಸಮಾಜದಲ್ಲಿ ವರ್ತಿಸಲು ಉತ್ತಮ ಮಾರ್ಗವನ್ನು ಕಲಿಸುವುದು ಎರಡೂ ಜವಾಬ್ದಾರಿಯಾಗಿದೆ.
ನೈತಿಕ ನಿಯಮಗಳನ್ನು ತರ್ಕಬದ್ಧ, ಆಧಾರವಾಗಿರುವ, ವೈಜ್ಞಾನಿಕ ಮತ್ತು ಸೈದ್ಧಾಂತಿಕ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುವಾಗ ಮಾನವ ನಡವಳಿಕೆಯನ್ನು ನಿಯಂತ್ರಿಸಬೇಕಾದ ತತ್ವಗಳನ್ನು ನೈತಿಕತೆಯು ಅಧ್ಯಯನ ಮಾಡುತ್ತದೆ.

ನೈತಿಕತೆ
• ನೈತಿಕ ಮೌಲ್ಯಗಳು
• ನೈತಿಕತೆಯ ವಿಧಗಳು

ನೈತಿಕ:
ನೈತಿಕ ಪದವು Morelis (ಮೊರೆಲಿಸ್) ಎನ್ನುವ ಲ್ಯಾಟಿನ್ ಶಬ್ದದಿಂದ ಬಂದಿದೆ, ಇದರರ್ಥ “Customs” ಗೆ ಸಂಬಂಧಿಸಿದೆ. ಆದ್ದರಿಂದ ನೈತಿಕತೆಯು ಅಭ್ಯಾಸದ ಮೇಲೆ, ಮೌಲ್ಯಗಳು ಮತ್ತು ತತ್ವಗಳ ವ್ಯವಸ್ಥೆಯಿಂದ ಹುಟ್ಟಿದ ನಡವಳಿಕೆಯ ಅಭಿವ್ಯಕ್ತಿಗಳ ಮೇಲೆ ಕೇಂದ್ರೀಕರಿಸುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ನೈತಿಕತೆಯು ದೈನಂದಿನ ಜೀವನದಲ್ಲಿ ಅನ್ವಯವಾಗುವ ನಿಯಮಗಳ ಗುಂಪಾಗಿದೆ ಮತ್ತು ಇದನ್ನು ಎಲ್ಲಾ ನಾಗರಿಕರು ನಿರಂತರವಾಗಿ ಬಳಸುತ್ತಾರೆ.
ವ್ಯಕ್ತಿಯ ಮತ್ತು ಸಮಾಜದ ಕಲ್ಯಾಣವನ್ನು ಲಕ್ಷಿಸಿ ನೀತಿ ಶಾಸ್ತ್ರವು, ನಿಯಮಗಳನ್ನು ನಿರ್ಭಂಧಗಳನ್ನು ವಿಧಿ ನಿಷೆಧಗಳನ್ನು ನಿರ್ಧರಿಸುವದು, ಯಾವುದೇ ವ್ಯಕ್ತಿಗೆ ಅಥವಾ ಸಮಾಜಕ್ಕೆ ನೈತಿಕ ಆಚರಣೆಯೆಂಬುದು, ಉನ್ನತ ನಿಲುವನ್ನು ತಂದುಕೊಡುವಂತಹದ್ದು. ನಾವು ನಮ್ಮ ಜೀವನದಲ್ಲಿ ಬರುವ ಪ್ರತಿಯೊಂದನ್ನು ಸದುಪಯೋಗ ಪಡಿಸಿಕೊಂಡು ನಮ್ಮ ಐಹಿಕ ಮತ್ತು ಪಾರಮಾರ್ಥಿಕ ಹಿತವನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಸಹ ನಮಗೆ ನೀತಿಯೇ ಹೇಳುವದು. ಅದೇ ಪ್ರಕಾರ ನಮಗೆ ಯಾವ ಮೂಕ ಪ್ರಾಣಿಗಳ ಸಂಬಂಧವು ಬರುವದೋ ಅವುಗಳೊಡನೆ ದಯಾಭಾವ ಮತ್ತು ಅಹಿಂಸಾ ಪ್ರವೃತ್ತಿಯಿಂದಲೂ ಹೇಗೆ ನಡೆಯಬೇಕು ಹಾಗೂ ಅವುಗಳಿಂದ ನಮ್ಮ ಹಿತವನ್ನು ಹೇಗೆ ಮಾಡಿಕೊಳ್ಳಬೇಕು ಇದನ್ನು ಸಹ ನಮಗೆ ನೀತಿ ಶಾಸ್ತ್ರವೇ ಹೇಳುತ್ತದೆ. ಬಾಹ್ಯ ಮತ್ತು ಆಂತರಿಕ ಹಿತವನ್ನು ಸಾಧಿಸಲು ಯಾವ ಆಚರಣೆಯು ಅವಶ್ಯವೊ, ಅದನ್ನು ವಿಧಿಸುವ ಶಾಸ್ತ್ರವೇ ನೀತಿ ಶಾಸ್ತ್ರ. ಒಟ್ಟಾರೆ ಒಬ್ಬರು ಇನ್ನೊಬ್ಬರೊಂದಿಗೆ ಪರಸ್ಪರ ಹಿತವಾಗುವಂತೆ ನಡೆಯುವುದೇ ನೀತಿ ಸಮ್ಮತವು.

ಶರಣರು ನೈತಿಕ ಸಮಾಜವನ್ನು ನಿರ್ಮಿಸಲು ಬಯಸಿದರು:
ಯಾವುದೇ ವ್ಯಕ್ತಿ ಅಥವಾ ಸಮಾಜ ಪ್ರಗತಿ ಹೊಂದಬೇಕಾದರೆ ಶಾಂತಿ ಸುವ್ಯವಸ್ಥೆ, ಸ್ವಾಸ್ಥ್ಯ ಇವು ತುಂಬಾ ಅವಶ್ಯ. ಅವುಗಳಿಗೆ ನೀತಿ ನಿಯಮಗಳು ನಿರ್ಭಂಧಗಳು ಇಲ್ಲದಿದ್ದರೆ, ಮನುಷ್ಯನಲ್ಲಿಯ ಪಾಶಾವೀ ಪ್ರವೃತ್ತಿಗಳು ಪ್ರಬಲವಾಗಿ ಸಾಮಾಜಿಕ ಅವ್ಯವಸ್ಥೆ ಉಂಟಾಗುವದು. ಇಂದ್ರೀಯ ಪ್ರವೃತ್ತಿಗಳು, ವಿಷಯವಾಸನೆಗಳು, ಅರಿಷಡ್ವರ್ಗಗಳು ಅನೀತಿ ಮಾರ್ಗದೆಡೆ ಎಳೆಯುವವು. ಮಾನವೀಯ ಮೌಲ್ಯಗಳು ಸದ್ಗುಣ ಸದಾಚಾರಗಳು, ವ್ಯಕ್ತಿಯನ್ನು ಪ್ರಾಣಿವರ್ಗದಿಂದ ಬೇರ್ಪಡಿಸಿ, ಉತ್ತಮ ಮಾನವನನ್ನಾಗಿ ಮಾಡುವದು. ದೈವತ್ವದೆಡೆಗೆ ಕೊಂಡೊಯಗಯುವದು.
ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ಪ್ರತಿಯೊಂದು ಧರ್ಮದಲ್ಲಿಯೂ ನೀತಿಸಾರವೇ ಅಡಗಿದೆ. ಒಂದೊಂದು ಧರ್ಮ ಒಂದೊಂದು ಅಂಶಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ಉದಾ: ಹಿಂದೂ ಧರ್ಮ ಶಾಂತಿ ಮತ್ತು ಸತ್ಯಕ್ಕೆ ಹೆಚ್ಚನ ಮಹತ್ವ ನೀಡಿದರೆ, ಜೈನ ಧರ್ಮ ಅಹಿಂಸೆಗೆ ಹೆಚ್ಚಿನ ಮಹತ್ವ ನೀಡುತ್ತದೆ.
ಬಸವಾದಿ ಶರಣರು ನೀತಿ ನಿಯಮಕ್ಕೆ ಬದ್ಧರಾದವರು. ಸತ್ಯ ಮತ್ತು ನ್ಯಾಯ ಮಾರ್ಗದಲ್ಲಿ ನಡೆದವರು. ಎಲ್ಲ ಅನೀತಿಗಳ ಬೀಜ ಅಹಂಕಾರ ಮತ್ತು ಆಸೆ. ಇವು ನಷ್ಟವಾದಲ್ಲಿ ಅನೀತಿಯೂ ನಷ್ಟವಾಗುತ್ತದೆ.

ಭಕ್ತ ಶಾಂತನಾಗಿರಬೇಕು.
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು
ಭೂತಹಿತವಹ ವಚನವ ನುಡಿಯಬೇಕು
ಲಿಂಗಜಂಗಮದಲ್ಲಿ ಕುಂದುನಿಂದೆಗಳಿಲ್ಲದಿರಬೇಕು
ಸಕಲಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು
ತನುಮನಧನವ ಗುರುಲಿಂಗಜಂಗಮಕ್ಕೆ ಸವೆಸಲೇಬೇಕು
ಅಪಾತ್ರದಾನವ ಮಾಡಲಾಗದು
ಸಕಲೇಂದ್ರಿಯಂಗಳ ತನ್ನ ವಶವ ಮಾಡಬೇಕು
ಇದೇ ಮೊದಲಲ್ಲಿ ದೇಹ ಶೌಚ ನೋಡಾ
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಇದೇ ಸಾಧನ ಕೂಡಲಚೆನ್ನಸಂಗಮದೇವಾ
(ಸಮಗ್ರ ವಚನ ಸಂಪುಟ-೧ ಪುಟ-302, ವಚನ ಸಂಖ್ಯೆ-65)

ಸುಖ ಶಾಂತಿಯ ನೈತಿಕ ಜೀವನಕ್ಕೆ ಬೇಕಾದ ಮಾರ್ಗದರ್ಶನವಾಗುವ ಸರಳ ಸುಂದರ ವಚನವಿದು. ಕ್ರಿಯಾಜ್ಞಾನಿ ಚನ್ನಬಸವನ್ನನವರ ನೀತಿಯ ಪಾಠವಿದು. ಸಾಧನೆಯ ಮೂಲ ಬೇರು ಶಾಂತಿ. ಮೂಲತಃ ಭಕ್ತನ ಮನಸ್ಸು ಶಾಂತವಾಗಿದ್ದಾಗ ಮಾತ್ರ ಸತ್ಯದ ದಾರಿ ಅರಿವಾಗುತ್ತದೆ. ಆಗ ಯಾರ ಕುಂದುಕೊರತೆಗಳನ್ನು ಅರಸದೆ ತನ್ನ ತಾನರಿಯುವ ಮಾರ್ಗವನ್ನು ಅರಿಯುತ್ತಾನೆ. ಸಾಧನೆಯ ಶಿಖರವೇರುತ್ತಾನೆ.

ಅಡ್ಡದೊಡ್ಡ ನಾನಲ್ಲಯ್ಯಾ, ದೊಡ್ಡ ಬಸಿರು ಎನಗಿಲ್ಲಯ್ಯಾ
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯಾ
ಹಡೆದುಂಬ ಸೂಳೆಯಂತೆ ಧನವುಳ್ಳವರನರಸಿ ಅರಸಿ
ಭೋಧಿಸಲು ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯಾ
ದೊಡ್ಡತನವೆನಗಿಲ್ಲವಯ್ಯಾ ಅಂಜುವೆನಂಜುವೆ ನಿಮ್ಮ ಪ್ರಮಥರಿಗೆ
ಅನಾಥ ನಾನಯ್ಯಾ ಕೂಡಲಸಂಗಮದೇವಾ
(ಸಮಗ್ರ ವಚನ ಸಂಪುಟ-೧ ಪುಟ-41, ವಚನ ಸಂಖ್ಯೆ-413)

ಮಾವಿನ ಕಾಯೊಳಗೆ ಒಂದು ಎಕ್ಕೆಯ ಕಾಯಿ ನಾನಯ್ಯಾ
ಆನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯಾ
(ಸಮಗ್ರ ವಚನ ಸಂಪುಟ-೧ ಪುಟ-35, ವಚನ ಸಂಖ್ಯೆ-333)

ಅಹಂಕಾರ ನಮ್ಮನ್ನು ನೈತಿಕತೆಯಿಂದ ದೂರ ಸರಿಸುತ್ತದೆ. ಬಸವಾದಿ ಶರಣರು ಕಿಂಕರತ್ವದಿಂದಲೇ ಶರಣತ್ವವನ್ನು ಪಡೆದವರು. ಚಿಕ್ಕವರಲ್ಲಿ ಚಿಕ್ಕವರಾಗಿ ಚೊಕ್ಕ ಸಮಾಜ ನಿರ್ಮಾಣಕ್ಕೆ ಅಣಿಯಾದವರು. ಕುಲ ಸೀಮೆಯನರಸದೇ ಬೀಗಿ ಬೆಳೆದ ಬಾಳೆಯ ಗೊನೆ ಬಾಗಿದಂತೆ ನೀತಿ ನಿಯಮಕ್ಕೆ ಬಾಗಿ ನಡೆದವರು.

ಜೋಳವಾಳಿಯಾನಲ್ಲ ವೇಳೆಯಾಳಿಯವ ನಾನಯ್ಯಾ
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ
ಕೇಳು ಕೂಡಲಸಂಗಮದೇವಾ ಮರಣವೇ ಮಹಾನವಮಿ
(ಸಮಗ್ರ ವಚನ ಸಂಪುಟ-೧ ಪುಟ-64, ವಚನ ಸಂಖ್ಯೆ-699)

ಸತ್ಯ ಶುದ್ಧ ಕಾಯಕದಿಂದ, ನಿತ್ಯ ಸತ್ಯ ಶಾಶ್ವತವಾದದ್ದನ್ನು ಅರಿತು, ಯಾರ ಹಂಗು ಇರದೇ ಶರಣ ಮಾರ್ಗದಲ್ಲಿ ಚರಿಸಿದವರು, ಬಂದದ್ದನ್ನು ಎದುರಿಸಿ ಮುನ್ನಡೆದವರು ನಮ್ಮ ಬಸವಾದಿ ಶರಣರು.

ಕಾಯದ ಕಳವಳಕ್ಕಂಜಿ ‘ಕಾಯಯ್ಯಾ’ ಎನ್ನೆನು
ಜೀವನೋಪಾಯಕ್ಕಂಜಿ ‘ಈಯಯ್ಯಾ’ ಎನ್ನೆನು
‘ಯದ್ ಭಾವಂ ತದ್ ಭವತಿ’ ಉರಿಬರಲಿ ಸಿರಿಬರಲಿ
ಬೇಕು ಬೇಡೆನ್ನೆನಯ್ಯಾ
ಆ ನಿಮ್ಮ ಹಾರೆನು ಮಾನವರ ಬೇಡೆನು
ಆಣೆ ನಿಮ್ಮಾಣೆ ಕೂಡಲಸಂಗಮದೇವಾ
(ಸಮಗ್ರ ವಚನ ಸಂಪುಟ-೧ ಪುಟ-64, ವಚನ ಸಂಖ್ಯೆ-696)

ಉರಿ ಬರಲಿ, ಸಿರಿ ಬರಲಿ, ನೀತಿ ನಿಯಮವನ್ನು ದಾಟಿ ನಡೆದವರಲ್ಲ ನಮ್ಮ ಶರಣರು. ಸತ್ಯದ ದಾರಿಯಿಂದ ಎಂದೂ ಹಿಂದೆ ಸರಿದವರಲ್ಲ.

ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯ
ಕೊಲುವೆನೆಂಬ ಭಾಷೆ ದೇವನದು ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವಾ
(ಸಮಗ್ರ ವಚನ ಸಂಪುಟ-೧ ಪುಟ-62, ವಚನ ಸಂಖ್ಯೆ-678)

ದೇವನನ್ನೇ ಗೆಲ್ಲುತ್ತೆನೆಂಬ ಸತ್ಯದ ಆಯುಧವನ್ನು ಧರಿಸಿದವರು.

ನ್ಯಾಯ ನಿಷ್ಠುರಿ ದಾಕ್ಷಿಣ್ಯಪರ ನಾನಲ್ಲ
ಲೋಕವಿರೋಧಿ: ಶರಣನಾರಿಗಂಜುವನಲ್ಲ
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪನಾಗಿ
(ಸಮಗ್ರ ವಚನ ಸಂಪುಟ-೧ ಪುಟ-68, ವಚನ ಸಂಖ್ಯೆ-754)

ನೈತಿಕ ಮಾರ್ಗಕ್ಕೆ ಅತ್ಯುತ್ತಮ ಉದಾಹರಣೆ ಈ ವಚನ. ಸತ್ಯ ನ್ಯಾಯ ಮಾರ್ಗದಲ್ಲಿ ನಡೆಯುವವರು ಆರಿಗೂ ಅಂಜುವ ಅವಶ್ಯಕತೆಯಿಲ್ಲ. ನ್ಯಾಯ, ನೀತಿ ಇವು ಬದುಕಿನಲ್ಲಿ ಧೈರ್ಯವನ್ನು ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತವೆ.

ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ
ವಿಶ್ವಾಸವೆಂಬ ಬತ್ತ ಬಲಿದು ಉಂಡು
ಸುಖಿಯಾಗಿರಬೇಕೆಂದ ಕಾಮ ಭೀಮ ಜೀವಧನದೊಡೆಯ
(ಸಮಗ್ರ ವಚನ ಸಂಪುಟ-೧ ಪುಟ-1166, ವಚನ ಸಂಖ್ಯೆ-1727)

ಅಂಗ ಲಿಂಗವನ್ನೇ ಒಂದಾಗಿಸಿ ಚಂದದ ಬದುಕು ಸಾಗಿಸಿದವರು ನಮ್ಮ ಶರಣರು.

ಬಸವಾದಿ ಶರಣರು ಎಂದು ಯಾರಿಗೂ ಅಂಜದೆ, ಸತ್ಯ ಶುದ್ಧ ಕಾಯಕದ ಮೂಲಕ ನ್ಯಾಯ ನಿಷ್ಠೆಯಿಂದ ಜಗಕೆ ಮಾದರಿಯಾಗುವಂತೆ ಬದುಕಿ ತೋರಿದವರು. ವೈಚಾರಿಕ ಮತ್ತು ನೈತಿಕ ತಳಹದಿಯ ಮೇಲೆ ಸುಂದರ, ಸುಭದ್ರ, ಸಮಾನತೆಯ ಸಮಾಜವನ್ನು ನಿರ್ಮಿಸಿಕೊಟ್ಟರು.

ಸವಿತಾ ಮಾಟೂರು ಇಲಕಲ್ಲ

Don`t copy text!