ಅನಾಥರ ಮಾಯಿ

ಅನಾಥರ ಮಾಯಿ

ಕಾರ್ತಿಕದ ಕತ್ತಲಲಿ
ಬಸವಣ್ಣ ಬಂದ
ಆಕಾಶ ದೀಪದಂತೆ ;
ಅನಾಥರ ಬಾಳಿನಲಿ
ಬಂದೆ *ಸಿಂಧು ಮಾಯಿ*
ಭರವಸೆಯ ಜ್ಯೋತಿಯಂತೆ..

ಹೆತ್ತವರ ಪಾಲಿಗೆ
ಹೊರೆಯಾದವಳು
ಪತಿಯ ಮನೆಯಿಂದ
ಹೊರದೂಡಿದವಳು
ಮಕ್ಕಳ ಪ್ರೀತಿಗೆ
ನೊಂದು ಬೆಂದವಳು..

ಛಲ ಹೊಂದಿ ಮನದಿ
ಸಾಗಿದಳು ಮುಂದೆ
ಬಿಸುಟ ಮಕ್ಕಳಿಗೆ ತಾಯಿಯಾಗಿ
ಭಿಕ್ಷೆಯನು ಬೇಡಿ
ಸಲುಹಿದಳು ಮಾತೆ
ತನ್ನ ನಂಬಿದ ಮುಗ್ಧ ಮಕ್ಕಳಿಗಾಗಿ..

ನಿಷ್ಕಾಮ ಸೇವೆಯ
ಫಲವಂದು ಕೈಗೂಡಿ
ಜಗವೇ ತಿರುಗಿ ನೋಡುವಂತೆ..!
ಮಾಯಿಯ ಆಸರೆಯು
ಆಲದ ಮರದಂತೆ
ಭಧ್ರತೆಯ ವಿಶ್ವಾಸ ನೀಡಿತಂತೆ..!

ಮಾಗಿದ ಹಣ್ಣೊಂದು
ದೇವನ ಚರಣದಲಿ
ಕಳಚಿ ಬೀಳುವಂತಾಯ್ತೇ..
ಸಾರ್ಥಕ ಬದುಕಿನ
ನಿಸ್ವಾರ್ಥ ಜೀವಿಯು
ವಿಶ್ರಾಂತಿ ಪಡೆಯಲು ಹಂಬಲಿಸಿತೇ..?

ನಿನ್ನ ನೆನಪಿನಲಿಂದು
ಮುಂದೆ ಸಾಗುವೆವು
ನೀ ತೋರಿದಾ ಬೆಳಕಿನೆಡೆಗೆ..
ಮತ್ತೊಮ್ಮೆ ಹುಟ್ಟಿ ಬಾ
ನಮ್ಮ ಮಾಯಿ ನೀನು
ಕಾಯುವೆವು ನಮ್ಮ ಉಸಿರಿರುವವರೆಗೆ…

ರಚನೆ: ಹಮೀದಾಬೇಗಂ ದೇಸಾಯಿ ಸಂಕೇಶ್ವರ 

Don`t copy text!