ಸಂನ್ಯಾಸಿಯೊಬ್ಬನ ವಿಶಿಷ್ಠ ಹಾದಿ

ಸಂನ್ಯಾಸಿಯೊಬ್ಬನ ವಿಶಿಷ್ಠ ಹಾದಿ

ವಿವೇಕಾನಂದರು ಆರಿಸಿಕೊಂಡ ಸಂನ್ಯಾಸದ ಹಾದಿ ಹೊಸದೇನೂ ಆಗಿರಲಿಲ್ಲ. ಅವರಿಗಿಂತ ಮುಂಚೆ ಈ ದೇಶದಲ್ಲಿ ಲಕ್ಷಾಂತರ ಜನ ಸಂನ್ಯಾಸತ್ವ ಸ್ವೀಕರಿಸಿದ್ದಾರೆ. ಇವರು ಉಪನ್ಯಾಸ ಮಾಡಿದ ರಾಜಯೋಗ, ಜ್ಞಾನಯೋಗ, ಕರ್ಮಯೋಗ ಕುರಿತು ಸಾಕಷ್ಟು ಜನ ಇವರಿಗಿಂತಲೂ ಮಾರ್ಮಿಕವಾಗಿ ಹೇಳಿದ್ದಾರೆ. ಆದರೆ ಇವರ ವೈಶಿಷ್ಠ್ಯವೇನು? ಇವರೇಕೆ ಎಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ? ಭಾರತದ ಇತಿಹಾಸದಲ್ಲಿ ಇವರಿಗೇಕೆ ವಿಶೇಷ ಸ್ಥಾನಮಾನ? ಇಂದಿಗೂ ವಿದ್ಯಾರ್ಥಿ ಯುವಜನರ ಆಕರ್ಷಣೆಯ ಕೇಂದ್ರ ಬಿಂದುವಿನಂತೆ ಯಾಕೆ ಕಾಣುತ್ತಾರೆ?

ಹೌದು, ಇಲ್ಲಿಯೇ ವಿವೇಕಾನಂದರು ಎಲ್ಲಾ ಸಂನ್ಯಾಸಿ ಮತ್ತು ದಾರ್ಶನಿಕರಿಗಿಂತ ಭಿನ್ನವಾಗಿ ಕಾಣುತ್ತಾರೆ. ಎಲ್ಲಾ ಸಂನ್ಯಾಸಿಗಳು ಮೊದಲು ತಮ್ಮ ಮುಕ್ತಿಗೋಸ್ಕರ ಪರಿತಪಿಸುತ್ತಾರೆ. ಆದರೆ ವಿವೇಕಾನಂದರು ಈ ದೇಶದ ಪ್ರತಿಯೊಬ್ಬ ಜನರ ಸಂಕಷ್ಟದ ವಿಮುಕ್ತಿಗೋಸ್ಕರ ಚಿಂತಿಸಿದರು ಮತ್ತು ಪ್ರಯತ್ನಿಸಿದರು. ವಿವೇಕಾನಂದರು ಜನರ ಕಿತ್ತು ತಿನ್ನುವ ಬಡತನ, ರಾಜಧರ್ಮದ ಹೆಸರಿನಲ್ಲಿ ಜನಗಳ ಮೇಲಿನ ದೌರ್ಜನ್ಯವನ್ನು ಮತ್ತು ಗುಲಾಮೀ ಭಾರತದ ದಯನೀಯ ಸ್ಥಿತಿ ನೋಡುತ್ತಾ ಬೆಳೆದವರು. ಆದ್ದರಿಂದಲೇ ‘ಧೀನ ದೇವೋಭವ, ದರಿದ್ರ ದೇವೋಭವ’ ಎನ್ನುತ್ತಾ ನಿಮ್ಮ ಸುತ್ತಲಿನ ಬಡ ಜನರನ್ನು ದೇವರಂತೆ ಕಂಡು ಅವರ ಸೇವೆ ಮಾಡುತ್ತಾ ಬಡವರ ಏಳ್ಗೆಗೆ ಪರಿಶ್ರಮಿಸುವಂತೆ ಪ್ರತಿಪಾದಿಸಿದರು. ‘ಹಸಿದವನಿಗೆ ಅನ್ನ ನೀಡಬೇಕೆ ಹೊರತು ವೇದಾಂತವನ್ನಲ್ಲ’ ಎಂದು ಸಾರಿದರು.

ಸಂನ್ಯಾಸಿಗಳು ಇರುವುದು ಸಮಾಜ ಸೇವೆ ಮಾಡಲಿಕ್ಕೆ ಹೊರತು ಕೇವಲ ಆಶ್ರಮಗಳಲ್ಲಿ ಕುಳಿತು ಮಂತ್ರ ಪಠಣ ಮಾಡುವುದಕ್ಕಲ್ಲ ಎಂದರು. ತಮ್ಮ ಸೋದರ ಸಂನ್ಯಾಸಿಗಳನ್ನು ಪ್ರವಾಹ ಪೀಡಿತ, ಬರಗಾಲ ಪೀಡಿತ ಜನರ ಸೇವೆಮಾಡಲು ಉತ್ತೇಜಿಸಿದರು. ದೇಶದ ಜನ ಪರತಂತ್ರದ ದಾಸ್ಯದಲ್ಲಿ ಅಸಹಾಯಕರಾಗಿ ನರಳುತ್ತಿದ್ದಾಗ ಸ್ವಾತಂತ್ರ್ಯದ ಕಿಚ್ಚು ಹಚ್ಚಿದರು, ದೇಶಕ್ಕಿಗ ಪುರುಷ ಸಿಂಹಗಳು ಬೇಕೆಂದು ಘರ್ಜಿಸಿ ದೇಶದ ಜನರಲ್ಲಿನ ದೇಶ ಪ್ರೇಮ ಬಡಿದೆಬ್ಬಿಸಿದರು. ಇದರಿಂದಾಗಿಯೇ ಅವರನ್ನು ‘ರಾಷ್ಟ್ರ ಭಕ್ತಿಯ ಪಿತಾಮಹ’ ಎಂದು ಕರೆಯಲಾಯಿತು. ಇದಕ್ಕಿಂತ ಮುಖ್ಯವಾಗಿ ಹಿಂದು ಧರ್ಮದಲ್ಲಿನ ಮೂಢನಂಬಿಕೆಗಳು, ಅಶ್ಪೃಶ್ಯತೆ, ಕೊಳಕು ಪದ್ದತಿಗಳು ಅವರನ್ನು ಹೆಚ್ಚು ಕಾಡಿದವು. ಆದ್ದರಿಂದಲೇ ದೇವರು, ಧರ್ಮ, ಪರಲೋಕ, ಮುಕ್ತಿ ಪರವಾಗಿದ್ದ ಹಿಂದೂ ಧರ್ಮವನ್ನು ಜೀವ ಪರ ಮತ್ತು ಮನುಷ್ಯಪರವಾಗಿಸಲು ಸೆಣಸಿದರು. ಹಳ್ಳಿ, ಕೊಳೆಗೇರಿಗಳಲ್ಲಿನ ಜನರ ಜೀವನದ ಸಂಕಷ್ಠಗಳನ್ನು ನಿವಾರಿಸಲು ಆಸ್ಪತ್ರೆ, ಶಿಕ್ಷಣ ಸೌಲಭ್ಯ ಕಲ್ಪಿಸಲು ಶ್ರಮಿಸಿದರು. ‘ಸೈನಿಕರಂಥ ಸಂನ್ಯಾಸಿಗಳನ್ನು ಸಿದ್ದಪಡಿಸಿದರು, ಅವರ ಮುಕ್ತಿಗಾಗಿಯಲ್ಲ; ಜನರನ್ನು ಸಮಸ್ಯೆಗಳಿಂದ ಮುಕ್ತಮಾಡಲು.’ ಆದರಿಂದು ವಿವೇಕಾನಂದರ ಆಶ್ರಮಗಳೇನಾಗಿವೆ? ಅದು ಬೇರೆಯ ವಿಚಾರ ಬಿಡಿ.

ಸ್ವಾಮಿವಿವೇಕಾನಂದರನ್ನು ನಮ್ಮ ದೇಶದ ಜನ ಎಲ್ಲಿಗೆ ಇಳಿಸಿದ್ದಾರೆಂದರೆ ಅವರ ಸೂಕ್ತಿಗಳನ್ನು ಭಾಷಣ, ಪ್ರವಚನಗಳಲ್ಲಿ ಹೇಳಿ ಚಪ್ಪಾಳೆ ಗಿಟ್ಟಿಸಲು. ಇಲ್ಲವೇ ‘ಏಳಿ ಎದ್ದೇಳಿ. ಗುರಿ ಮುಟ್ಟುವವರೆಗೂ ನಿಲ್ಲದಿರಿ’ ಎಂಬ ನುಡಿಯನ್ನು ಓದುವ ಕೊಠಡಿಯಲ್ಲಿ ಹಾಕಿಕೊಂಡು, ತಮ್ಮ ಸ್ವಾರ್ಥ ಸಾದನೆಯ ಗುರಿ ತಲುಪವವರೆಗೆ ನಿಲ್ಲದಿರಿ ಎಂದು ಅರ್ಥೈಸಿಕೊಳ್ಳುವುದು. ಹೇ ಭಾರತವಾಸಿಗಳೇ, ‘ಗುರಿ ಮುಟ್ಟುವವರೆಗೂ ನಿಲ್ಲದಿರಿ ಎಂದು ಅವರು ಹೇಳಿದ್ದು; ಈ ದೇಶವನ್ನು, ಮನುಕುಲವನ್ನು ಉನ್ನೂತೋನ್ನತ ಮಟ್ಟಕ್ಕೆ ಕೊಂಡೋಯ್ಯುವವರೆಗೂ ನಿಲ್ಲದಿರಿ ಎಂದು, ಹೊರತು ನಿಮ್ಮ ಸ್ವಾರ್ಥ ಸಾಧನೆ ಸಿದ್ದಿಸುವವರೆಗೆ ನಿಲ್ಲದಿರಿ ಎಂದಲ್ಲ.!!’

ಈ ಜಗತ್ತಿನಲ್ಲಿ ಹಿಂದೂ ಧರ್ಮ ಎಷ್ಟು ಸತ್ಯ ಮತ್ತು ಪವಿತ್ರವೋ ಬೇರೆ ಧರ್ಮಗಳೂ ಕೂಡಾ ಅಷ್ಟೇ ಸತ್ಯ ಮತ್ತು ಪವಿತ್ರ ಎಂದು ಹೇಳಿದ್ದಾರೆ. ಆದರೆ ಧರ್ಮದ ಅಮಲು ನೆತ್ತಿಗೇರಿಸಿಕೊಂಡು, ವಿವೇಕಾನಂದರು ಪ್ರತಿಪಾದಿಸಿದ ನಿಜವಾದ ಧರ್ಮದಿಂದ ಬಹೂದೂರ ಸಾಗಿದ ಲಕ್ಷಾಂತರ ಕ್ರೀಮಿ ಕೀಟಗಳಿಂದು ಭಾರತ ದೇಶದ ಜನರ ನೆಮ್ಮದಿಯನ್ನು ಕೆಡಿಸಿವೆ. ವಿವೇಕಾನಂದರು ಕೇವಲ ಹಿಂದೂ ಧರ್ಮದಲ್ಲಿನ ಕಲ್ಮಶಗಳನ್ನು ಮಾತ್ರ ಕಾಣಲಿಲ್ಲ. ಇತರ ಧರ್ಮಗಳಲ್ಲಿನ ಕಲ್ಮಶಗಳನ್ನು ಗ್ರಹಿಸಿದ್ದರು. ಇತಿಹಾಸದಲ್ಲಿ ಧರ್ಮದ ಹೆಸರಿನಲ್ಲಿ ಇಡೀ ವಿಶ್ವದಾದ್ಯಂತ ಹರಿದ ರಕ್ತದ ಕೋಡಿ ಅವರನ್ನು ನಿದ್ರಾಹೀನರನ್ನಾಗಿಸಿತ್ತು. ಎಲ್ಲ ಧರ್ಮಗಳ ಸಾರ ಒಂದೇ ‘ಮನುಷ್ಯನನ್ನು ಅಮೃತ ಪುತ್ರರನ್ನಾಗಿಸುವುದು’ ಅಂದರೆ ಎಲ್ಲ ಸ್ವಾರ್ಥ, ದುರಾಸೆ, ಮತಾಂಧತೆ, ಕೆಟ್ಟ ಆಲೋಚನೆಗಳಿಂದ ಮುಕ್ತಕೊಳಿಸಿ ಶ್ರೇಷ್ಠ ಬದುಕನ್ನು ಕಟ್ಟಿಕೊಳ್ಳುವುದು ಎಂದು ಹೇಳಿದರು. ಈ ಸಂದೇಶ ಸಾರಲೆಂದೆ ಅವರು ವಿಶ್ವ ಧರ್ಮಸಮ್ಮೇಳನದಲ್ಲಿ ಭಾಗಿಯಾಗಲು ಹೊರಟರು.

ವಿವೇಕಾನಂದರು ಅಂದು ಮಾಡಿದ ಅಮೋಘ ಭಾಷಣವನ್ನು ಒಮ್ಮೆ ಎಲ್ಲರೂ ಓದಲೇಬೇಕು. ಆದರೆ ಅವರ ಅನುಯಾಯಿಗಳೆಂದುಕೊಂಡವರು ಮೊದಲು ಓದಬೇಕು ಮತ್ತು ಅನುಸರಿಸಬೇಕು ಆಗ ಮಾತ್ರವೇ ವಿವೇಕಾನಂದರ ಅನುಯಾಯಿಗಳೆಂದು ಹೇಳಿಕೊಳ್ಳಲು ಅರ್ಹತೆ ಸಿಗುತ್ತದೆ.

*ಆ ಮರೆಯಲಾಗದ ಚಿಕ್ಯಾಗೋ ಭಾಷಣದ ಕೊನೆಯ ಕೆಲ ಸಾಲುಗಳು ಹೀಗಿವೆ. ಮತಾಂಧತೆ, ದ್ವೇಷ, ಧರ್ಮಾಂಧತೆಗಳು ಈ ಸುಂದರ ಜಗತ್ತನ್ನು ಆಕ್ರಮಿಸಿಕೊಂಡಿವೆ. ಇವುಗಳು ಇಡೀ ಭೂಮಿಯನ್ನು ಪದೇ ಪದೇ ಮನುಷ್ಯನ ರಕ್ತದಿಂದ ತೋಯಿಸಿವೆ. ನಾಗರಿಕತೆಗಳನ್ನು ನಾಶಮಾಡಿವೆ. ಕೆಲ ದೇಶಗಳನ್ನೇ ಹೇಳ ಹೆಸರಿಲ್ಲದಂತೆಯೂ ಮಾಡಿವೆ. ಒಂದು ವೇಳೆ ಇಂತ ಘನಘೋರ ದೆವ್ವಗಳು ಇರದಿದ್ದರೆ ಈ ಜಗತ್ತು ಇಂದು ಇರುವುದಕ್ಕಿಂತಲೂ ಅದೇಷ್ಟೋ ಪಾಲು ಉತ್ತಮವಾಗಿರುತ್ತಿತ್ತು. ನನಗೆ ಭರವಸೆ ಇದೆ, ಅವರ ಸಮಯ ಕೂಡಿ ಬಂದಿದೆ. ಸರ್ವಧರ್ಮಸಮ್ಮೇಳನದಲ್ಲಿಂದು ಬೆಳಿಗ್ಗೆ ಬಾರಿಸಿದ ಗಂಟೆಯು ಧರ್ಮಾಂಧರ ಪಾಲಿಗೆ ಮರಣಗಂಟೆಯಾಗಲಿ.! ಮನುಷ್ಯ ಮನುಷ್ಯರ ಮದ್ಯದ ಭಾವನೆಗಳನ್ನು ಬೆಸೆಯೋಣ.!! ಎಂದು ಸಾರಿಹೇಳಿದರು. ಒಂದುವೇಳೆ ಭಾರತ ಏನಾದರೂ ವಿಶ್ವಗುರುವಾಗಬೇಕಿದ್ದರೆ ವಿವೇಕಾನಂದರ ಇಂತಹ ಚಿಂತನೆಗಳ ಮೇಲೆ. ಈ ಮಾತನ್ನು ರಾಜಕೀಯ ಮಾಡುವ ಸರಕಾರ ಮತ್ತು ಪಕ್ಷಗಳು ಮರೆತರೂ ಕೂಡಾ ಈ ದೇಶದಲ್ಲಿ ಬದುಕು ಕಟ್ಟಿಕೊಳ್ಳ ಹೊರಟ ಸಾಮಾನ್ಯ ಜನರು ಮಾತ್ರ ಮರೆಯಬಾರದು.

Don`t copy text!