ದುಡಿಸುತ್ತಿದ್ದೇವೆ
ದುಡಿಸುತ್ತಿದ್ದೇವೆ
ಬಸವಣ್ಣ ನಿನ್ನನ್ನು
ಕಳೆದವು ಎಂಟು ಶತಕಗಳು
ನಿನ್ನ ಜಯಂತಿಯ ದಿನ
ನಿನ್ನ ತೊಟ್ಟಿಲಲ್ಲಿ ಹಾಕಿ
ಜೋಗುಳ ಹಾಡಿ
ಆರತಿಯ ತಟ್ಟೆಯಲಿ
ಭಿಕ್ಷೆ ಎತ್ತುತ್ತೇವೆ
ನಿನ್ನ ಕಂಚಿನ ಪುತ್ಥಳಿ
ಕಟ್ಟಡ ಖರ್ಚಿಗೆ
ಸರಕಾರಕ್ಕೆ ಅರ್ಜಿ ಹಾಕುತ್ತೇವೆ
ನಿನಗೂ ಕಾವಿ ತೊಡಿಸಿ
ಸಂಪ್ರದಾಯದಂತೆ ನಿನಗೆ
ದೀಕ್ಷೆ ಕೊಡುತ್ತೇವೆ
ಮಠ ಮಂಟಪದಲ್ಲಿನಿನ್ನ
ವಚನಗಳ ಚಿಂತನೆ ಮಾಡುತ್ತಾ
ಲೇಖನ ಭಾಷಣ ಪುಸ್ತಕಗಳನ್ನು
ಬರೆದಿದ್ದೇವೆ
ನುಡಿಯಲ್ಲಿ ನಾವೆಲ್ಲರೂ
ಎಚ್ಚರಗೊಂಡಿದ್ದೇವೆ
ನಡೆಯಲ್ಲಿ ಎಡುವುತ್ತ
ಮಾತೆ ಸ್ವಾಮಿ ಅಕ್ಕನವರ
ಮಾತಿನಂತೆ ಗೊತ್ತಿದ್ದೂ
ಮುಗ್ಗರಿಸುತ್ತೇವೆ.
ನಮಗಿಲ್ಲ ಬಸವಣ್ಣ ನಿನ್ನ
ವಚನ ತತ್ವ ಚಿಂತನ
ನಾವು ಬದುಕಬೇಕು
ನಿನ್ನ ದುಡಿಮೆಯಲ್ಲಿ ತಂದೆ
ಬದುಕುತ್ತೇವೆ ಬಸವಣ್ಣ
ನಿನ್ನ ಮತ್ತೆ ಮತ್ತೆ ದುಡಿಸುತ್ತ
ಮಾತುಗಳ ಅಬ್ಬರ
ಮೌನಕ್ಕೆ ಜಾರಿದ ಅಣ್ಣ ಬಸವಣ್ಣ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ