ಬಸವತತ್ವದ ಸಾಕ್ಷಿಪ್ರಜ್ಞೆ ಡಾ.ಬಸವಯ್ಯ ಸಸಿಮಠ

ಬಸವತತ್ವದ ಸಾಕ್ಷಿಪ್ರಜ್ಞೆ ಡಾ.ಬಸವಯ್ಯ ಸಸಿಮಠ

ಕೊಪ್ಪಳ ನಾಡಿನ ಬಸವತತ್ತ್ವದ ಸಾಕ್ಷಿಪ್ರಜ್ಞೆಯಾಗಿದ್ದ ಡಾಕ್ಟರ್ ಬಸವಯ್ಯ ಸಸಿಮಠರವರು ನಾಲ್ಕಾರು ತಿಂಗಳ ಹಿಂದೆ ಯಾವುದೊ ಸಭೆಯಲ್ಲಿ ಬೆಟ್ಟಿಯಾದಾಗ ಬಹಳ ಆತ್ಮೀಯತೆಯಿಂದ ಮಾತನಾಡಿಸಿ ಕುಶಲೋಪರಿಯನ್ನು ವಿಚಾರಿಸಿ ಬೆನ್ನುತಟ್ಟಿದ್ದರು.ಆ ಸಂದರ್ಭದಲ್ಲಿ ನಾನು ಶಶಿಮಠರವರೇ ನಿಮ್ಮ ಜೊತೆ ನಾಲ್ಕಾರು ತಾಸು ಮಾತನಾಡಬೇಕಾಗಿದೆ ಎಂದು ಹೇಳಿದಾಗ ಯಾವ ವಿಷಯಕ್ಕೆ ಎಂದು ಕೇಳಿದರು. ಕೊಪ್ಪಳದ ವೈದ್ಯಕೀಯ ಕ್ಷೇತ್ರದ ಇತಿಹಾಸದ ಬಗ್ಗೆ ಬರೆಯಬೇಕೆಂದು ಮಾಡಿದ್ದೇನೆ ಆ ದಿಸೆಯಲ್ಲಿ ನಿಮ್ಮಿಂದ ಮಾಹಿತಿ ಪಡೆದುಕೊಳ್ಳಲು ಬರುತ್ತೇನೆ ಎಂದು ಹೇಳಿದಾಗ ಆಯಿತು ಸಮಯ ಮಾಡಿಕೊಂಡು ಬನ್ನಿ ಎಂದು ಹೇಳಿದ್ದರು.ನಾನು ಇಂದು ಹೋದರಾಯಿತು, ನಾಳೆ ಹೋದರಾಯಿತು ಎಂದು ಕೊಳ್ಳುತ್ತಿದ್ದಾಗಲೇ ಇಂದು ಬಸವಯ್ಯ ಸಸಿಮಠರವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ ಎಂದು ದೂರವಾಣಿಯ ಮೂಲಕ ಶಿವಕುಮಾರ ಕುಕನೂರು ತಿಳಿಸಿದಾಗ ಏನು ಹೇಳಬೇಕೋ ತಿಳಿಯುತ್ತಲೇ ಇಲ್ಲ.

ಡಾಕ್ಟರ್ ಬಸವಯ್ಯ ಸಸಿಮಠರವರು ತಮ್ಮ ಬಸವಪ್ರಜ್ಞೆಯ ಮೂಲಕ ಕೊಪ್ಪಳದ ಕೀರ್ತಿಯನ್ನು ನಾಡಿನಲ್ಲೆಲ್ಲ ಹರಡಿದ ಹಠಯೋಗಿ.ಸುಮಾರು ಎಂಟು ದಶಕಗಳ ಹಿಂದೆ ಕೊಪ್ಪಳ ನಾಡು ಹೈದರಾಬಾದನ ನಿಜಾಮರ ಆಳ್ವಿಕೆಗೆ ಒಳಪಟ್ಟಿತ್ತು. ಶಾಲೆ ಕಾಲೇಜುಗಳ ಮುಖವನ್ನೇ ಕಾಣದ ನಾಡಾಗಿದ್ದ ಕೊಪ್ಪಳದ ಗಾವಟಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡು ಮುಲ್ಕಿ ಪರೀಕ್ಷೆ ಪಾಸಾಗಿ ಕೊಪ್ಪಳ ಗವಿಮಠದ ಲಿಂಗೈಕ್ಯ ಪರಮಪೂಜ್ಯ ಮರಿಶಾಂತವೀರ ಮಹಾಸ್ವಾಮಿಗಳವರ ಬಳಿ ಆಯುರ್ವೇದ ವೈದ್ಯಕೀಯ ಶಾಸ್ತ್ರವನ್ನು ಶ್ರದ್ಧೆಯಿಂದ ಕಲಿತು ಹಳ್ಳಿಯ ಕಡೆ ತಮ್ಮ ನಡೆಯನ್ನು ಸಾಗಿಸಿ ಹಳ್ಳಿಗುಡಿಯನ್ನು ಸೇರಿ ತಮ್ಮ ವೈದ್ಯಕೀಯ ವೃತ್ತಿ ಜೀವನವನ್ನು ಪ್ರಾರಂಭಿಸಿದರು.

ಲಿಂಗೈಕ್ಯ ಮರಿಶಾಂತವೀರ ಮಹಾಸ್ವಾಮಿಗಳವರು ಪ್ರಖಾಂಡ ಆಯುರ್ವೇದ ಪಂಡಿತರಾಗಿದ್ದರು ಹಾಗೂ ಶಿಕ್ಷಣ ಪ್ರೇಮಿಗಳಾಗಿದ್ದರು.ಅಂದು ಇಡೀ ಕೊಪ್ಪಳ ನಾಡು ಅನ್ನ, ಅಕ್ಷರ ಭರದಿಂದ ಬಡತನದಲ್ಲಿ ತೊಳಲಾಡುತ್ತಿತ್ತು.ಹಾಗೂ ಅನೇಕ ಸಾಂಕ್ರಾಮಿಕ ರೋಗ ರುಜಿನಗಳು ಜನರನ್ನು ಕಾಡುತ್ತಿದ್ದವು.ಜನರ ಆರೋಗ್ಯ ರಕ್ಷಣೆ ಮಾಡುವ ವೈದ್ಯರೇ ಈ ಭಾಗದಲ್ಲಿ ಇರಲಿಲ್ಲ. ಇಂತಹ ಸಂದರ್ಭದಲ್ಲಿ ಈ ನಾಡಿಗೆ ಬೆಳಕಾಗಿ ಬಂದವರು ಪರಮಪೂಜ್ಯ ಲಿಂಗೈಕ್ಯ ಮರಿಶಾಂತವೀರ ಮಹಾಸ್ವಾಮಿಗಳವರು.ಶ್ರೀ ಮಠದಲ್ಲಿ ಉಚಿತ ಪ್ರಸಾದ ಹಾಗೂ ವಸತಿ ನಿಲಯವನ್ನು ತೆರೆದು ಬಡ ಮಕ್ಕಳನ್ನು ತಮ್ಮ ಬಳಿ ಇಟ್ಟುಕೊಂಡು ಅವರ ಮಸ್ತಕದಲ್ಲಿ ಅಕ್ಷರದ ಬೀಜವನ್ನು ಬಿತ್ತಲು ಪ್ರಾರಂಭಿಸಿದರು.ಗ್ರಹಣಾಶಕ್ತಿಯಲ್ಲಿ ಚುರುಕಾಗಿದ್ದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಆಯುರ್ವೇದ ವೈದ್ಯಕೀಯ ಚಿಕಿತ್ಸೆಯನ್ನು ಕಲಿಸಿ ಹಳ್ಳಿಯ ಬಡ ರೋಗಿಗಳ ಚಿಕಿತ್ಸೆಗಾಗಿ ನೂರಾರು ಸಂಖ್ಯೆಯಲ್ಲಿ ವೈದ್ಯರನ್ನು ತಯಾರು ಮಾಡಿ ಕಳಿಸಿದರು.

ಈ ರೀತಿ ತಯಾರಾದ ವೈದ್ಯರುಗಳಲ್ಲಿ ಡಾಕ್ಟರ್ ಬಸವಯ್ಯ ಸಸಿಮಠ ಒಬ್ಬರು.ವೈದ್ಯಕೀಯ ಚಿಕಿತ್ಸೆಯನ್ನು ಕಲಿತ ನಂತರ ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡದ್ದು ಈಗಿನ ಗದಗ ಜಿಲ್ಲೆಯ ಹಳ್ಳಿಗುಡಿ ಗ್ರಾಮವನ್ನು.ಸುಮಾರು ಮೂರು ದಶಕಗಳ ಕಾಲ ಹಳ್ಳಿಗುಡಿಯ ಬಡ ರೋಗಿಗಳಿಗೆ ಚಿಕಿತ್ಸೆಯನ್ನು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.ಅಂದು ಬಸ್ ಸಂಚಾರ ವ್ಯವಸ್ಥೆ ಇರದಿದ್ದ ಆ ದಿನಗಳಲ್ಲಿ ತಮ್ಮ ವೈದ್ಯಕೀಯ ಬಾಕ್ಸ್ ಅನ್ನು ಹೊತ್ತುಕೊಂಡು ಕಾಲ್ನಡಿಗೆಯಿಂದಲೇ ಹಳ್ಳಿಗುಡಿಯ ಸುತ್ತಮುತ್ತಲೂ ಇರುವ ಬಡ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಾ ಅಲ್ಲಿನ ಜನತೆಯ ಪಾಲಿಗೆ ಸಾಕ್ಷಾತ್ ಧನ್ವಂತರಿಯಾಗಿದ್ದವರು.

ಇದಿಷ್ಟೇ ಆಗಿದ್ದರೆ ಎಲ್ಲರಂತೆ ಇವರೂ ಒಬ್ಬರು ಬಿಡು ಎಂದು ಹೇಳಬಹುದಾಗಿತ್ತು.ಆದರೆ ತಮ್ಮ ವೈದ್ಯಕೀಯ ಚಿಕಿತ್ಸೆಯ ಜೊತೆ ಜೊತೆಗೆ ಸಾಮಾನ್ಯ ಜನತೆಯ ಮಸ್ತಕದಲ್ಲಿ ಬಸವ ಸಂದೇಶವನ್ನು ತುಂಬುತ್ತಾ ಬಸವ ತತ್ತ್ವವನ್ನು ಪ್ರಚಾರ ಮಾಡಿದ ಸಂತರು.ಬಸವಣ್ಣನನ್ನು ಎತ್ತಾಗಿ ಪೂಜಿಸುತ್ತಿದ್ದ ಆ ಕಾಲದಲ್ಲಿಯೇ ಈ ಬಸವ ಎತ್ತಲ್ಲ ಬದಲಾಗಿ ತುಳಿತಕ್ಕೊಳಗಾದವರನ್ನ ಅಸ್ಪೃಶ್ಯರನ್ನ ಮೇಲೆತ್ತಿ ನಿಲ್ಲಿಸುವ ಶರಣ ಎಂದು ದಿಟ್ಟತನದಿಂದ ಪ್ರಚಾರ ಮಾಡಿದವರು.ಎತ್ತಾಗಿ ಪೂಜಿಸುವ ನಂದಿಯೇ ಬೇರೆ, ಮಹಾತ್ಮ ಬಸವೇಶ್ವರ ಸಮಾನತೆಯ ಹರಿಕಾರ, ಸಮಾಜೋದ್ಧಾರಕ ಎಂದು ಜನ ಸಾಮಾನ್ಯ ಅನಕ್ಷರಸ್ಥ ಜನತೆಯನ್ನು ಎಚ್ಚರಿಸಿದವರು.

*ಇಪ್ಪತ್ತನೆಯ ಶತಮಾನದ ಕರ್ನಾಟಕದಲ್ಲಿ ಬಸವ ತತ್ತ್ವವನ್ನು ಈ ನೆಲದ ಆಳದಲ್ಲಿ ಭದ್ರವಾಗಿ ಬೇರೂರಿಸಿದ ಬಸವ ಪ್ರಚಾರಕರಾದ ಪೂಜ್ಯ ಲಿಂಗಾನಂದ ಸ್ವಾಮಿಜಿಯವರಿಂದ ಪ್ರೇರಣೆಯನ್ನು ಪಡೆದು ಬಸವ ತತ್ತ್ವವನ್ನು ಅಭ್ಯಾಸಮಾಡಿ ಅರಗಿಸಿಕೊಂಡು ಶರಣಪಥದಲ್ಲಿ ಸಾಗುವಂತೆ ಸಾವಿರಾರು ಯುವಕರನ್ನು ಬೆಳೆಸಿದ ಕೀರ್ತಿ ಡಾಕ್ಟರ್ ಬಸಯ್ಯ ಸಸಿಮಠರವರಿಗೆ ಸಲ್ಲುತ್ತದೆ.

ತೊಂಭತ್ತರ ದಶಕದ ಕೊಪ್ಪಳ ನಾಡಿನಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿಯವರಿಂದ ಪ್ರೇರಣೆ ಯನ್ನು ಪಡೆದುಕೊಂಡು ರಾಷ್ಟ್ರೀಯ ಬಸವ ದಳದ ಶಾಖೆಯನ್ನು ಸ್ಥಾಪಿಸಲು ಹೊರಟಾಗ ಅನೇಕ ಹಿರಿಯರು *ರಾಷ್ಟ್ರೀಯ ಬಸವ ದಳದ ಶಾಖೆಯನ್ನು ಸ್ಥಾಪಿಸುವುದು ಬೇಡ ಬೇಕಾದರೆ ವೀರಶೈವ ದಳವನ್ನು ಸ್ಥಾಪಿಸಿ* ಎಂದು ಒತ್ತಾಯ ಮಾಡಿದ್ದರು.ಆದರೆ ಇದಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಲಿಂಗೈಕ್ಯ ಬಸವರಾಜ ಬನ್ನಿಕೊಪ್ಪ ಹಾಗೂ ಅನೇಕ ಯುವಕರನ್ನು ಜೊತೆಗೂಡಿಸಿಕೊಂಡು ರಾಷ್ಟ್ರೀಯ ಬಸವ ದಳದ ಶಾಖೆಯನ್ನು ಪ್ರಾರಂಭಿಸಿ ಬಸವತತ್ತ್ವದ ಪ್ರಚಾರವನ್ನು ದಿಟ್ಟವಾಗಿ ಪ್ರಾರಂಭಿಸಿದ ಗಣಾಚಾರಿಯೂ ಹೌದು.ಅದೇ ಸಂದರ್ಭದಲ್ಲಿ ಪೂಜ್ಯ ಲಿಂಗಾನಂದ ಸ್ವಾಮೀಜಿಯವರನ್ನು ಕೊಪ್ಪಳಕ್ಕೆ ಕರೆತಂದು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹದಿನೈದು ದಿನಗಳ ಕಾಲ ಬಸವ ತತ್ತ್ವದ ಪ್ರವಚನವನ್ನು ಏರ್ಪಡಿಸಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದರು.

ಅಂದಿನಿಂದ ಪ್ರಾರಂಭವಾದ ಇವರ ಶರಣತತ್ತ್ವದ ಆಂದೋಲನ ಸುಮಾರು ಮೂರು ದಶಕಗಳ ಕಾಲ ಉಸಿರು ನಿಲ್ಲುವವರೆಗೂ ದಣಿವರಿಯದೆ ದುಡಿದವರು. ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ನಂತರ ಅವರ ಕನಸುಗಳನ್ನು ನನಸು ಮಾಡಲು ಪೂಜ್ಯ ಮಾತೆ ಮಹಾದೇವಿಯರ ಜೊತೆಗೂಡಿಕೊಂಡು ಹಲವಾರು ದಶಕ ಕಾರ್ಯನಿರ್ವಹಿಸಿದರು.ಮುಂದೆ ಪೂಜ್ಯ ಮಾತೆ ಮಹಾದೇವಿಯವರ ಜೊತೆಗೆ ವಚನಾಂಕಿತದ ವಿಷಯದಲ್ಲಿ ಭಿನ್ನಾಭಿಪ್ರಾಯ ತಳೆದು ಅವರ ಸಾಂಗತ್ಯವನ್ನು ಕಡಿಮೆ ಮಾಡಿಕೊಂಡರೂ ಸಹ ಬಸವತತ್ವ ಪ್ರಚಾರದ ಕಾರ್ಯವನ್ನು ನಿಲ್ಲಿಸದೆ ವಿಶ್ವಗುರು ಬಸವೇಶ್ವರ ಟ್ರಸ್ಟನ್ನು ಸ್ಥಾಪಿಸಿಕೊಂಡು ಕಾರ್ಯೋನ್ಮುಖರಾದರು.

ತಮ್ಮ ದುಡಿಮೆಯ ಸ್ವಂತ ಹಣದಿಂದ ಕೊಪ್ಪಳದ ಕಿನ್ನಾಳ ರಸ್ತೆಯಲ್ಲಿ ಜಾಗೆಯನ್ನು ಖರೀದಿಸಿ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಗುರುಬಸವ ಮಹಾಮನೆಯನ್ನು ನಿರ್ಮಾಣ ಮಾಡಿ, ವಿಶ್ವಗುರು ಬಸವೇಶ್ವರ ಟ್ರಸ್ಟ್ ನ ಮೂಲಕ ಶರಣತತ್ತ್ವದ ಪ್ರಚಾರ ಕಾರ್ಯವನ್ನು ಮುಂದುವರೆಸಿ ಸಾವಿರಾರು ಸಂಖ್ಯೆಯಲ್ಲಿ ಯುವಕ ಯುವತಿಯರನ್ನು ಬಸವಾನುಯಾಯಿಗಳನ್ನಾಗಿ ತಯಾರು ಮಾಡಿದ ಸಾಧಕರು.ಇವರ ಬಸವತತ್ತ್ವದ ಕಾರ್ಯವನ್ನು ನೋಡಿ ಲಿಂಗೈಕ್ಯ ಯಜಮಾನ್ ಅಗಡಿ ಸಂಗಣ್ಣನವರು ಇವರ ಅಭಿಮಾನಿಗಳಾಗಿದ್ದರು.ಬಸವ ಜಯಂತಿಯನ್ನು ನಂದಿಯ ಜಯಂತಿಯನ್ನಾಗಿ ಆಚರಿಸದೆ,ಬಸವೇಶ್ವರರ ಭಾವಚಿತ್ರದ ಮೆರವಣಿಗೆಯೊಂದಿಗೆ ಸಭೆ ಸಮಾರಂಭಗಳನ್ನು ಏರ್ಪಡಿಸಿ ನಾಡಿನ ಹೆಸರಾಂತ ವೈಚಾರಿಕರನ್ನ ಬರಮಾಡಿಕೊಂಡು ಬಸವತತ್ತ್ವದ ಸಂದೇಶಗಳನ್ನು ಜನರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಲು ಲಿಂಗೈಕ್ಯ ವೀರಬಸಪ್ಪ ಬಳ್ಳೊಳ್ಳಿ, ಲಿಂಗೈಕ್ಯ ಶಿವಪ್ಪ ಹೆಬ್ಬಾಳ ಮುಂತಾದ ಹಿರಿಯರಿಗೆ ಪ್ರೇರಣೆಯನ್ನು ನೀಡಿದವರು ಬಸಯ್ಯ ಸಸಿಮಠರು.

ಸುಮಾರು ಎರಡು ದಶಕಗಳಿಂದ ಕೊಪ್ಪಳದಲ್ಲಿ ವೈಚಾರಿಕ ಹಾಗೂ ಅರ್ಥಪೂರ್ಣವಾದ ರೀತಿಯಲ್ಲಿ ಜರುಗುತ್ತಿರುವ ಬಸವ ಜಯಂತಿಯ ಕಾರ್ಯಕ್ರಮ ಇಡೀ ರಾಜ್ಯದ ಗಮನ ಸೆಳೆಯುತ್ತ ನಡೆದಿದೆ.ಇದೆಲ್ಲದರ ಕೀರ್ತಿ ಡಾಕ್ಟರ್ ಬಸಯ್ಯ ಸಸಿಮಠರಿಗೆ ಸಲ್ಲುತ್ತದೆ.ಜಾತಿಯಿಂದ ಜಂಗಮರಾಗಿದ್ದರೂ ಸಹ ಪಂಚಾಂಗ ಹೇಳಿದವರಲ್ಲ,ಹೋಮ-ಹವನ, ಪಾದಪೂಜೆಗಳಿಗೆ ಪ್ರೇರಣೆಯನ್ನೂ ನೀಡಿದವರಲ್ಲ.ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿದು ನೂರಾರು ಜನ ಕೆಳವರ್ಗದವರಿಗೆ ಲಿಂಗ ದೀಕ್ಷೆಯನ್ನು ನೀಡಿ ಬಸವ ಮಾರ್ಗದಲ್ಲಿ ಸಾಗುವಂತೆ ಮಾಡಿದ ಚರ ಜಂಗಮರಾಗಿದ್ದರು.ತಮ್ಮ ಮನೆಯನ್ನೆ ಮಹಾಮನೆಯನ್ನಾಗಿಸಿದ್ದ ಬಸವ ಪ್ರೇಮಿ.ವಚನ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡಿ ಕೇಳುಗರಿಗೆ ಮನಮುಟ್ಟುವಂತೆ ಹೇಳುವ ಕಲೆ ಇವರಿಗೆ ಕರಗತವಾಗಿತ್ತು.ದೇವರ ಮನೆಯ ಜಗುಲಿಯ ಮೇಲೆ ಬಸವಣ್ಣನ ಭಾವಚಿತ್ರ, ವಚನಗಳ ಕಟ್ಟು ನಿತ್ಯ ಪೂಜೆಗೊಳ್ಳುತ್ತಿವೆ.ತಮ್ಮ ಮನೆಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ಶುಭ ಕಾರ್ಯಗಳೆಲ್ಲ ಬಸವತತ್ತ್ವದ ಪ್ರಕಾರವೇ ನಡೆಯುವಂತೆ ನೋಡಿಕೊಳ್ಳುತ್ತಿದ್ದರು.ಬಸವ ತತ್ತ್ವವನ್ನು ಬಾಯಿಯಿಂದ ಹೇಳದೆ ಅದರಂತೆ ನಡೆದುಕೊಳ್ಳುವ ಸಾಧಕರಾಗಿದ್ದವರು.

ಡಾಕ್ಟರ್ ಬಸಯ್ಯ ಸಸಿಮಠರವರ ಸಾಧನೆಯ ಹಾದಿಯಲ್ಲಿ ಪಂಪಾಪತಿ ಹೊನ್ನಳ್ಳಿ,ಲಿಂ.ಬಸವರಾಜ ಬನ್ನಿಕೊಪ್ಪ, ಬಸವರಾಜಪ್ಪ ಇಂಜಿನಿಯರ್, ನೀಲಕಂಠಪ್ಪ, ವೀರಣ್ಣ ಕೊರ್ಲಹಳ್ಳಿ, ವಿಶ್ವನಾಥ ನಿಲೋಗಲ್,ಗವಿಸಿದ್ದಪ್ಪ ಪಲ್ಲೇದ,ಕುಣಕೇರಿಯ ಡಾಕ್ಟರ್ ಬಸನಗೌಡ ಪಾಟೀಲ, ಹನುಮೇಶ ಕಲ್ಮಂಗಿ,ಶಿವಬಸಯ್ಯ ವೀರಾಪೂರ, ಶಿವಕುಮಾರ ಕುಕನೂರ, ಮಹೇಶ (ಬಾಬು) ಬೆಳವಣಿಕಿ, ಗಾಳೆಪ್ಪ ಕಡೇಮನಿ ಮುಂತಾದವರು ಕಟ್ಟಾ ಸಂಗಾತಿಗಳಾಗಿದ್ದರು.

ಗದುಗಿನ ಲಿಂಗೈಕ್ಯ ಪೂಜ್ಯ ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಇಳಕಲ್ಲಿನ ಲಿಂಗೈಕ್ಯ ಪೂಜ್ಯ ಮಹಾಂತಪ್ಪನವರು,ಭಾಲ್ಕಿಯ ಪೂಜ್ಯ ಬಸವಲಿಂಗ ಪಟ್ಟದದೇವರು,ಗದಗದ ಈಗಿನ ಪೂಜ್ಯ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು,ಇಳಕಲ್ಲಿನ ಪೂಜ್ಯ ಗುರುಮಹಾಂತ ಸ್ವಾಮಿಗಳು,ಚಿತ್ರದುರ್ಗದ ಪೂಜ್ಯ ಮುರುಘಾ ಶರಣರು,ಮುಂಡರಗಿ ಹಾಗೂ ಬೈಲೂರು ನಿಷ್ಕಲ ಮಂಟಪದ ಪೂಜ್ಯ ನಿಜಗುಣಾನಂದ ಮಹಾಸ್ವಾಮಿಗಳು,ಶಿರೂರಿನ ಸತ್ತಿ ಶ್ರೀಗಳು,ಮನಗುಂಡಿಯ ಪೂಜ್ಯರು,ಲಿಂಗೈಕ್ಯ ಈಶ್ವರ ಮಂಟೂರರವರು,ಲಿಂಗೈಕ್ಯ ಡಾ.ಎಂ.ಎಂ. ಕಲಬುರ್ಗಿ ಮುಂತಾದವರಿಗೆ ಡಾಕ್ಟರ್ ಬಸಯ್ಯ ಸಸಿಮಠ ಅವರ ಬಗ್ಗೆ ಅಪಾರವಾದ ಗೌರವ ಭಾವನೆಯಿತ್ತು.ಹಾಗೂ ಡಾಕ್ಟರ್ ಬಸಯ್ಯ ಸಸಿಮಠರವರೊಂದಿಗೆ ಹಲವಾರು ವಿಚಾರಗಳನ್ನು ಆತ್ಮೀಯವಾಗಿ ಚರ್ಚಿಸುತ್ತಿದ್ದರು.ಈ ನಾಡಿನ ಬಸವಾನುಯಾಯಿಗಳಲ್ಲಿ ಡಾಕ್ಟರ್ ಬಸಯ್ಯ ಸಸಿಮಠರವರಿಗೊಂದು ವಿಶೇಷ ಸ್ಥಾನ ಮಾನ ಗೌರವವಿದೆ ಎನ್ನುವುದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ.

ಡಾಕ್ಟರ್ ಬಸಯ್ಯ ಸಸಿಮಠರವರಿಗೆ ಗವೀಶ ಮತ್ತು ರಾಜೇಶ ಇಬ್ಬರು ಗಂಡು ಮಕ್ಕಳು ಇವರು ಸಹ ತಮ್ಮ ತಂದೆಯಂತೆ ಕಾಯಕ ಮತ್ತು ದಾಸೋಹದ ಬಸವ ಮಾರ್ಗದಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯ.ನಿಜಾರ್ಥದಲ್ಲಿ ಜಂಗಮರಾಗಿದ್ದ ಡಾಕ್ಟರ್ ಬಸಯ್ಯ ಸಸಿಮಠರವರ ಆತ್ಮಕ್ಕೆ ಮಹಾತ್ಮ ಬಸವೇಶ್ವರ ಶಾಂತಿಯನ್ನು ಕರುಣಿಸಲಿ.ಅವರ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ, ಅಭಿಮಾನಿಗಳಿಗೆ, ಹಿತೈಶಿಗಳಿಗೆ ಕರುಣಿಸಲಿ..

. –ಗವಿಸಿದ್ದಪ್ಪ ವೀ. ಕೊಪ್ಪಳ

Don`t copy text!