ಸೃಜನಶೀಲತೆ ಎಂದರೆ ತಿಕ್ಕಲುತನ ಅಲ್ಲ

ಸೃಜನಶೀಲತೆ ಎಂದರೆ ತಿಕ್ಕಲುತನ ಅಲ್ಲ

ಇದೊಂದು ವಿಚಿತ್ರ ಸಮಸ್ಯೆ, ಆಗಾಗ ಕೇಳಿ ಬರುವ ಮಹಾರೋಗ. ‘ಅವನು ತುಂಬಾ ಪ್ರತಿಭಾವಂತ ಆದರೆ ಒಂದು ತರಹ ಮೂಡಿ, ಮನಸು ಮಾಡಬೇಕು ಅಷ್ಟೇ’ ಹೀಗೆ ಇತ್ಯಾದಿ ಮಾತುಗಳು ಕೇಳಿ ಬರುತ್ತವೆ‌. ಈ ಹಿನ್ನೆಲೆಯಲ್ಲಿ ವ್ಯಕ್ತಿಯ ಮೂರು ಮುಖಗಳನ್ನು ಕಾಣುತ್ತೇವೆ; ವೈಯಕ್ತಿಕ, ವೃತ್ತಿ ಮತ್ತು ಸಾರ್ವಜನಿಕ. ‌ಆದರೆ ನಮಗೆ ಬೇಕಾಗುವುದು ಅವರ ವೃತ್ತಿ ಬದುಕೇ ಹೊರತಾಗಿ ವೈಯಕ್ತಿಕ ಬದುಕು ಅಲ್ಲ.

ಆದರೆ ಒಬ್ಬ ವ್ಯಕ್ತಿ ಸಾರ್ವಜನಿಕವಾಗಿ ತುಂಬಾ ಪ್ರಸಿದ್ಧನಾದ ಮೇಲೆ ಎಲ್ಲವೂ ಕೌಂಟ್ ಆಗುತ್ತದೆ. ‘ಅವರು ನಿನ್ನೆ ಇಂತಹ ಹೋಟೆಲ್ಲಿನಲ್ಲಿ ಊಟ ಮಾಡಿದರಂತೆ, ಅವರು ಮಗುವನ್ನು ಎತ್ತಿಕೊಂಡು ಮುದ್ದಾಡಿದರಂತೆ, ಮಾರು ವೇಷದಲ್ಲಿ ಗೆಳೆಯರ ಜೊತೆಗೆ ಸುತ್ತಾಡಿದರಂತೆ, ತಾವೇ ಡ್ರೈವ್ ಮಾಡಿಕೊಂಡು ಹೋದರಂತೆ, ಜೋರಾಗಿ ಸೀನಿ ಬಿಟ್ಟರಂತೆ…’ ಹೀಗೆ ಅಂತೆ,ಕಂತೆಗಳ ಸುದ್ದಿಗಳು ಸೆಲೆಬ್ರಿಟಿಗಳ ಸುತ್ತ ದಿನಕ್ಕೊಂದರಂತೆ ಹುಟ್ಟಿಕೊಳ್ಳುವುದು ಈಗಂತೂ ತುಂಬಾ ಸಾಮಾನ್ಯ. ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣದ ಪ್ರಭಾವ ಹೆಚ್ಚಾದಂತೆ ‘ನೆಟ್ಟಿಗರು’ ಎಂಬ ಹೊಸ ಬಗೆಯ, ಆಧುನಿಕ ವಿಮರ್ಶಕರ ಗುಂಪೊಂದು ಹುಟ್ಟಿಕೊಂಡಿದೆ. ‘ತುಂಡು ಬಟ್ಟೆ ಹಾಕಿದ ನಟಿಯ ವಿರುದ್ಧ ನೆಟ್ಟಿಗರ ಆಕ್ರೋಶ’ ಎಂಬ ಸುದ್ದಿಗಳು ಹರಡಿದಾಗ, ಯಾಕೋ ಇದೊಂದು ವಿಚಿತ್ರ ಹೊಸ ಕಾಯಿಲೆ ಎನಿಸಲಾರಂಭಿಸಿದೆ.

ನೆಟ್ಟಿಗರು, ಫ್ಯಾನುಗಳು, ಅಭಿಮಾನಿಗಳ ಅಂಧಕಾರ ಹೆಚ್ಚಾಗಿದೆ. ಇದರಿಂದ ಪ್ರತಿಭಾವಂತ, ಸೃಜನಶೀಲ ಕಲಾವಿದರ, ಸೆಲೆಬ್ರಿಟಿಗಳ ಮನಸ್ಥಿತಿ ಕೆಟ್ಟು, ಅವರು ಹುಚ್ಚರಂತೆ ವರ್ತಿಸಲಾರಂಭಿಸಿದ್ದಾರೆ.

ಸೋಷಿಯಲ್ ಮೀಡಿಯಾ ಬರೋದಕ್ಕೆ ಮೊದಲು, ಕೆಲವು ಪತ್ರಿಕೆಗಳಲ್ಲಿ ಬರುವ ಗಾಸಿಪ್ ಸುದ್ದಿಗಳಿಗೆ ಇಷ್ಟೊಂದು ರೆಕ್ಕೆ,ಪುಕ್ಕ ಇರುತ್ತಿರಲಿಲ್ಲ. ಆಗಿನ ಸೆಲೆಬ್ರಿಟಿಗಳ ಅನೇಕ ಗುಟ್ಟುಗಳು ಬೇಗನೇ ರಟ್ಟಾಗುತ್ತಿರಲಿಲ್ಲ. ಅವರ ಪಿತ್ತ ಕೂಡ ನೆತ್ತಿಗೇರುತ್ತಿರಲಿಲ್ಲ.‌

ಆದರೆ ಈಗ ಹಣ, ಜನಪ್ರಿಯತೆಯ ಜೊತೆಗೆ ಅಹಂಕಾರ ಸೇರಿಕೊಂಡು ಸೃಜನಶೀಲ ಕಲಾವಿದರು ವಿನಾಶದ ಹಾದಿ ತುಳಿಯುತ್ತಿದ್ದಾರೆ‌. ತಮ್ಮ ಪ್ರಸಿದ್ಧಿಯ ಪ್ರಭಾವವನ್ನು ಅನೇಕ ಕೆಟ್ಟ ಕೆಲಸಗಳಿಗೆ ಬಳಸಿಕೊಂಡು ತಮ್ಮ ಗೌರವ ತಾವೇ ಹಾಳು ಮಾಡಿಕೊಳ್ಳುತ್ತಾರೆ. ‘ಕೆಲವು ದೊಡ್ಡವರ ಸಣ್ಣತನ ಮತ್ತು ಸಣ್ಣವರ ದೊಡ್ಡತನ’ ಕಂಡಾಗ ಇದೆಂತಹ ವಿಪರ್ಯಾಸ‌ ಎನಿಸಿಬಿಡುತ್ತದೆ.‌
ಹಿಂದೆ ಅನೇಕ ಕಲಾವಿದರು ವೈಯಕ್ತಿಕ ಬದುಕಿನ ಸರಳತೆಯಿಂದಾಗಿ ನಮಗೆಲ್ಲ ಆದರ್ಶಪ್ರಾಯರಾಗಿದ್ದರು. ಈಗ ಕಾಲ ಬದಲಾಗಿಲ್ಲ, ಸೃಜನಶೀಲ ಮನಸುಗಳ ಮನೋಧರ್ಮ ಹಾಳಾಗಿದೆ. ಅದಕ್ಕೆ ವಿಚಿತ್ರ, ವಿಕಾರ ಮನೋರೋಗಿಗಳಂತೆ ವರ್ತಿಸಿ, ಆರಾಧಿಸುವ ನೆಟ್ಟಿಗ ಮಹಾಶಯರೇ ಕಾರಣ!

ಇತ್ತೀಚಿನ ಅದ್ಭುತ ಚಿತ್ರ ಬಿಡಿಸುತ್ತಿದ್ದ ಕಲಾವಿದರೊಬ್ಬರ ಮನಸ್ಥಿತಿ ಕುರಿತು ಗೆಳೆಯರೊಬ್ಬರು ವರ್ಣಿಸುತ್ತಿದ್ದರು.
‘ಅವನು ಅದ್ಭುತ ಪ್ರತಿಭಾವಂತ ಸರ್, ಅವನಷ್ಟು ಸುಂದರವಾಗಿ ಚಿತ್ರ ಬಿಡಿಸುವವರು ಇಲ್ಲವೇ ಇಲ್ಲ’ ಎಂದರು.
ಸರಿ ಮುಂದೇನು?
‘ಸರ್ ಆದರೆ ಅವನು ತುಂಬಾ ಮೂಡಿ, ಸರಿಯಾದ ಟೈಮಿಗೆ ಕೈ ಕೊಟ್ಟು ಬಿಡುತ್ತಾನೆ, ಅವನು ಕೊಟ್ಟಾಗ ತೆಗೆದುಕೊಳ್ಳಬೇಕು, ಕೇಳಿದಷ್ಟು ಹಣ ಕೊಡಬೇಕು.’
‘ಆಯ್ತು ಕೊಡಬಹುದು’ ಎಂದಾಗ ಅವನ ಗುಣಗಾನ ಮುಗಿಯಲಿಲ್ಲ.
‘ಅವನ ಜೊತೆಗೆ ರಾತ್ರಿ ಮಾತಾಡಬೇಡಿ ಸರ್, ಅವನು ಫುಲ್ ಆಗಿರುತ್ತಾನೆ, ಮುಂಜಾನೆ ಬೇಗ ಮಾತಾಡಬೇಡಿ ಇನ್ನೂ ಮಲಗಿರುತ್ತಾನೆ, ಪದೇ, ಪದೇ ಫೋನ್ ಕೂಡ ಮಾಡಬೇಡಿ.’
‘ಅಷ್ಟೇ ಅಲ್ಲ ಅವರಿಗೆ ಯಾರಾದರೂ ಹೆಣ್ಣು ಮಕ್ಕಳು ಕೆಲಸ ಕೊಟ್ಟರೆ, ಅವರಿಗೆ ರಾತ್ರಿ ಕುಡಿದು ಫೋನ್ ಮಾಡಿ, ಕೆಟ್ಟದಾಗಿ ಮಾತನಾಡುವ ಚಾಳಿ ಇದೆ, ಆದರೆ ಅದು ಹಗಲು ಹೊತ್ತಿನಲ್ಲಿ ನೆನಪು ಇರುವುದಿಲ್ಲ ಪಾಪ!? ತಾನು ಮಾಡಿದ್ದನ್ನು ಮರೆತುಬಿಡುವ ವಿಚಿತ್ರ ಖಯಾಲಿಯೂ ಇದೆ. ಇಂತಹ ಕೆಲವು ವೀಕ್‌ನೆಸ್ ಬಿಟ್ಟರೆ ಅವನೊಬ್ಬ ಅದ್ಭುತ ಕಲಾವಿದ ಸರ್’ ಎಂದು ಮಾತು ಮುಗಿಸಿದಾಗ ಸುಸ್ತಾಗಿ ಹೋದೆ.

ಇವೆಲ್ಲ ಕೆಲವೇ ಕೆಲವು ವಿಕ್‌ನೆಸ್ಸುಗಳಾ?, ಇವುಗಳನ್ನು ಸಹಿಸಿಕೊಂಡು, ಅವರ ಬಳಿ ದುಡ್ಡು ಕೊಟ್ಟು ಕೆಲಸ ಮಾಡಿಸಿಕೊಳ್ಳುವವರು ಅನುಭವಿಸುವ ಅಗತ್ಯ ಇದೆಯಾ?
ಸೃಜನಶೀಲತೆ, ಪ್ರತಿಭೆ ಎಂಬುದು ವ್ಯಕ್ತಿಯ ವೃತ್ತಿ ಕೌಶಲ್ಯತೆ, ಅದನ್ನು ವೈಯಕ್ತಿಕ ವರ್ತನೆಯಲ್ಲಿ ಕಾಪಾಡಿಕೊಳ್ಳುವ ಬದ್ಧತೆ ಕೂಡ ಅಷ್ಟೇ ಮುಖ್ಯ.

ಪ್ರತಿಯೊಬ್ಬ ವ್ಯಕ್ತಿ ತನ್ನ ವೃತ್ತಿ ಬದುಕಿನಲ್ಲಿ ಸಫಲನಾಗಬೇಕಾದರೆ, ಸಮಯ ಪ್ರಜ್ಞೆಯ ಜೊತೆಗೆ, ವ್ಯಕ್ತಿಗಳ ಮಹತ್ವವನ್ನು ಅರ್ಥ ಮಾಡಿಕೊಳ್ಳಬೇಕು. ಇತರರ ಬಗ್ಗೆ ಪ್ರೀತಿ, ಮಹಿಳೆಯರ ಮೇಲೆ ಗೌರವ ಇರದೇ ಹೋದರೆ ಏ‌ನು ಪ್ರಯೋಜನ? ಅನಗತ್ಯ ಕಿರಿಕಿರಿ ಅನುಭವಿಸಿ, ಇವರ ಪ್ರತಿಭೆಗೆ ಜೋತು ಬಿದ್ದು ಶೋಷಣೆಗೆ ಒಳಗಾಗುವ ಅಗತ್ಯವಾದರು ಏನಿದೆ?

ಅನೇಕ ದೊಡ್ಡವರು ತಮ್ಮ ಅಧಿಕಾರ ಬಲದಿಂದ ಇತರರನ್ನು ಬಳಕೆ ಮಾಡಿಕೊಳ್ಳುತ್ತಾರೆ ಎಂದು ಗೊತ್ತಿದ್ದೂ, ಹೆಸರು, ಹಣ, ಮನ್ನಣೆ ಗಳಿಸುವ ಹುಚ್ಚು ಹೆಚ್ಚಾದವರು ಇಂತಹ ವ್ಯಕ್ತಿಗಳ ತೆವಲಿಗೆ ಬಲಿಯಾಗುವುದೂ ಕೂಡ ಒಂದು ದೌರ್ಬಲ್ಯ. ಗೊತ್ತಿರುವ ಅಪಾಯಗಳ ಸುಳಿಗೆ ಸಿಕ್ಕು, ‘ಅಯ್ಯೋ ನಾನು ಮೋಸ ಹೋದೆ’ ಎಂದು ಅತ್ತರೆ ಯಾರೂ ರಮಿಸುವುದಿಲ್ಲ.
ಸೃಜನಶೀಲತೆ ಇದ್ದವರು ತಿಕ್ಕಲಾಗಿ, ಐಲಾಗಿ ನಡದುಕೊಂಡರೆ ಸಹಿಸಿಕೊಳ್ಳುವ ಅಗತ್ಯ, ಅನಿವಾರ್ಯತೆ ಇಲ್ಲ.

ಯಾರೂ ಪರಿಪೂರ್ಣರಲ್ಲ ಆದರೆ ಕನಿಷ್ಠ ವೃತ್ತಿಪರತೆ ಮತ್ತು ಬದ್ಧತೆಯನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು. ನಮ್ಮ ನಮ್ಮ ದೌರ್ಬಲ್ಯಗಳನ್ನು, ಸಾರ್ವಜನಿಕ ಮುಜುಗರ ತಪ್ಪಿಸಿಕೊಳ್ಳುವ ಕಾರಣದಿಂದ ಹತ್ತಿಕ್ಕಿಕೊಂಡು, ಎಚ್ಚರದ ಹೆಜ್ಜೆ ಹಾಕಬೇಕು. ದೌರ್ಬಲ್ಯಗಳು ನಮ್ಮನ್ನು ಬೇಕಾದರೆ ಹಾಳು ಮಾಡಲಿ,ಲ ಆದರೆ ಇತರರ ಬದುಕಿಗೆ ಮುಳುವಾಗಬಾರದು. ‘ಪ್ರತಿಭೆ’ ನಿಸರ್ಗ ನಮಗೆ ಕೊಟ್ಟ ಬಹುದೊಡ್ಡ ಕಾಣಿಕೆ, ಅದನ್ನು ಕೆಡದಂತೆ ಕಾಪಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಏನೂ ಉಳಿಯುವುದಿಲ್ಲ.

-ಪ್ರೊ.ಸಿದ್ದು ಯಾಪಲಪರವಿ, ಕಾರಟಗಿ.

Don`t copy text!