ಕಳ್ಳಿ ಮಠದ ಕರುಳು ಐಕ್ಯವಾದ ಕ್ಷಣ

ಕಳ್ಳಿ ಮಠದ ಕರುಳು ಐಕ್ಯವಾದ ಕ್ಷಣ

ಭಕ್ತಾದಿಗಳ ಮನದಾಸೆಯಂತೆ ಗುರುಗಳ ಅಂತ್ಯಕ್ರಿಯೆಯ ವಿಧಿವಿಧಾನಗಳ ಸಿದ್ಧತೆ ನಡೆದಿತ್ತು. ಅಂತಿಮ ಕ್ಷಣದ ದುಃಖವು ಭಜನೆ, ಢೋಲು, ಚಳ್ಳಮ್‌ಗಳ ಭಾವೋದ್ವೇಗದ ನಾದದಲ್ಲಿ ಅಡಗಲು ಯತ್ನಿಸಿದಂತಿತ್ತು. ಹೂವಿನ ಹಾರಗಳ ರಾಶಿ, ಬಿಡಿ ಹೂವು, ಪತ್ರೆ, ವಿಭೂತಿಗಳ ಘಮಲು ಮಠದ ತುಂಬೆಲ್ಲಾ ಅಡರಿಕೊಂಡಿತ್ತು. ಆ ಕ್ಷಣದಲ್ಲಿ ಮಾನವ ಸಾಕ್ಷಾತ್ ದೇವನಾದ ಪರಿ ಕಂಡು ಮೈ ರೋಮಾಂಚನ!

ಶರಣರು ಹೇಳಿದ, ‘ಮರಣವೇ ಮಹಾನವಮಿ’ ಮಾತಿಗೆ ಈ ಸಂದರ್ಭ ಸಾಕ್ಷಿ. ಅಸಂಖ್ಯಾತ ಜನಸ್ತೋಮ, ಅನೇಕ ಮಠದ ಗುರುಗಳು, ಸುತ್ತಮುತ್ತಲಿನ ಊರುಗಳಿಂದ ಭಕ್ತಾದಿಗಳು, ಹೀಗೆ ಕಿಕ್ಕರಿದು ಜನ ಸೇರಿತ್ತು. ಗುರುಗಳ ಅಂತಿಮ ದರ್ಶನಕ್ಕಾಗಿ ಎಲ್ಲಾ ಹಂಗು ಹರಿದು ಮುನ್ನುಗ್ಗುತ್ತಿದ್ದರು. ಕೇವಲ ತಮ್ಮೂರ ಗುರುಗಳ ಮುಖವನ್ನು ನೋಡಿ ಕಣ್ಣಲ್ಲಿ ತುಂಬಿಕೊಳ್ಳಬೇಕೆಂಬ ಭಾವನಾತ್ಮಕವಾದ ಕೊನೆಯಾಸೆ.

ಕಲಬುರಗಿ ಜಿಲ್ಲೆಯ ಮಹಾಗಾಂವದಲ್ಲಿರುವ ಕಳ್ಳಿ ಮಠದ ಗುರುಲಿಂಗ ಶಿವಾಚಾರ್ಯರು ನಮ್ಮನ್ನಗಲಿದ್ದಾರೆ. ಈ ಸುದ್ದಿ ತಿಳಿದಾಗಿನಿಂದ ವಿಚಿತ್ರ ವೇದನೆ ಕಾಡಿತು. ಈ ಜಗ ತೊರೆದು ಸಾಗಲು ಒಂದು ನಿಮಿತ್ತ ಬೇಕು.

ಮಕರ ಸಂಕ್ರಾಂತಿ ಹಬ್ಬದಂದು ಶಹಬಾದ ತಾಲೂಕಿನ ಹೊನಗುಂಟಾ ಗ್ರಾಮದ ಭೀಮ, ಕಾಗಿಣಾ ನದಿಯ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಗುರುಗಳು ಹೋಗಿದ್ದರು. ಆದರೆ ಅವರು ಉಸಿರು ಕಳೆದುಕೊಂಡೇ ಹೊರ ಬಂದಿದ್ದರು. ಪುಣ್ಯ ಸ್ನಾನ ಮಾಡಲು ಹೋದವರಿಗೆ ಪುಣ್ಯದ ಸಾವು ಲಭಿಸಿತ್ತು. ನೋವು ಯಾತನೆ ಇಲ್ಲದ, ನರಳಿ ನಪ್ಪಳಿಯದೆ ಈ ಶರೀರ ತೊರೆದು ಜಲದಲ್ಲೇ ಐಕ್ಯರಾಗಿದ್ದರು.

ಗುರುಲಿಂಗ ಶಿವಾಚಾರ್ಯ ಗುರುಗಳಿಗೆ ಕೇವಲ ಐವತ್ತೆಂಟು ವಯಸ್ಸು. ಈ ಅನಿರೀಕ್ಷಿತ ಸಾವಿಗೆ ಹೃದಯಘಾತವೇ ಕಾರಣವಾದುದು ವಿಷಾದಕರ. ಇಡೀ ಮಹಾಗಾಂವ ಜನತೆಯ ಜೀವ ಚೈತನ್ಯವಾಗಿ, ಊರ ಮಧ್ಯದ ವಿಶಾಲ ಕಳ್ಳಿ ಮಠದಲ್ಲಿ ವಾಸವಾಗಿದ್ದರು. ಉನ್ನತ ವ್ಯಾಸಂಗ ಮಾಡಿದ್ದ ಅವರು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಸಾಹಿತ್ಯಿಕ ಸೇವೆ ಸಲ್ಲಿಸುತ್ತ ಬಂದಿದ್ದರು. ಇತ್ತೀಚೆಗೆ ಎರಡು ದಶಕಗಳಿಂದ ಮಠದ ಅಭಿವೃದ್ಧಿಯಲ್ಲಿ ಗಮನಾರ್ಹ ಮುಂದುವರಿಕೆ ಕಂಡು ಬಂದಿತ್ತು.

ಮಠ ಕೇವಲ ಮಠವಾಗಬಾರದು ಶಿಕ್ಷಣ ನೀಡುವ ಸಂಸ್ಥೆಯಾಗ ಬೇಕೆಂದು ಕನಸು ಕಂಡವರು. ಅಂತೆಯೆ ಮಠದ ಆವರಣದಲ್ಲಿದ್ದ ದೇವಾಲಯದೊಂದಿಗೆ ಶಾಲೆಯನ್ನೂ ತೆರೆದು ಜ್ಞಾನ ದಾಸೋಹಿ.

ಮಹಿಳೆಯರು, ಮಕ್ಕಳಿಗಾಗಿ ಮಿಡಿಯುತ್ತ ಓದು ಬರಹ ಸಣ್ಣ ಪ್ರಮಾಣದಲ್ಲಿ ಆರಂಭಿಸಿ, ಇಂದು ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಎದ್ದು ನಿಲ್ಲುವಂತೆ ಮಾಡಿದ್ದಾರೆ. ಎನೂ ಇಲ್ಲದ ಮಠದಲ್ಲಿ ಸಮೃದ್ಧಿಯಾಗುವಂತೆ ಶ್ರಮಿಸಿದವರು ಗುರುಲಿಂಗ ಶಿವಾಚಾರ್ಯ ಗುರುಗಳು.

ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಬೇರೆ ಬೇರೆ ಊರಿನ ಅತಿಥಿಗಳನ್ನು ಕರೆಯಿಸಿ ಉಪನ್ಯಾಸ ನೀಡಿಸಿ, ಸತ್ಕರಿಸಿ ಕಳುಹಿಸುತ್ತಿದ್ದರು. ತಮ್ಮ ಮಠದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿ ಎನ್ನುವ ಹಂಬಲ ವ್ಯಕ್ತಪಡಿಸಿದ್ದರು. ಅದೆಷ್ಟೊ ಕನಸುಗಳ ಹೊತ್ತಿದ್ದರೂ, ಸಮಯ ಸಾಲದೆ ಹಾಗೇ ಹೋಗಿ ಬಿಟ್ಟರು. ಸಮಾಜಕ್ಕಾಗಿಯೇ ತಮ್ಮನ್ನು ತಾವು ಮುಡಿಪಾಗಿಟ್ಟ ವ್ಯಕ್ತಿಗೆ ಇಷ್ಟು ಬೇಗ ಸಾವು! ಛ… ಎಲ್ಲರೂ ಹಳಹಳಿಸುವವರೆ…

‘ಇದೇ ಗುಡಿಯಲ್ಲಿ ಉಸಿರಿಲ್ಲದ ನನ್ನ ಕೂಸಿಗೆ ಉಸಿರು ಕೊಟ್ಟ ಭಗವಂತ, ತನ್ನ ಕೂಸಿಗೆ ಯಾಕೆ ಉಸಿರು ಕೊಡಲಿಲ್ಲ?’ ಎಂದು ಮಹಿಳೆಯೊಬ್ಬಳ ಅಸಹಾಯಕ ಅಳುವು ಕರುಳು ಚುರುಕ್ ಎನ್ನಿಸಿತು. ‘ಗುರುಗಳು ಭಾಳ ಛಲೋ ಇದ್ದರು, ಭಾಳ ಶಾಂತ ಇದ್ದರು, ಸಿಟ್ಟಂಬದೇ ಇದ್ದಿಲ್ಲ, ಕಾಳಜಿ ಕಕ್ಕಲಾತಿ ಮನ್ಷಾ.’ ಅಲ್ಲೇ ನೆರೆದ ಜನ ಹೇಳುತ್ತಿದ್ದ ಮಾತುಗಳು ಮತ್ತೆ ಮತ್ತೆ ಕಿವಿ ಮೇಲೆ ಬೀಳುತ್ತಿದ್ದವು.

ಹೀಗೆ ಗುರುಗಳು ಇದ್ದಷ್ಟು ದಿವಸವೂ ತಮಗಿಂತ ಹೆಚ್ಚು ಸಮಾಜಕ್ಕಾಗಿಯೇ ಚಿಂತಿಸಿದವರು, ದುಡಿದವರು, ಶ್ರಮಿಸಿದವರು. ತಮ್ಮ ಆಪ್ತ ಅನುಯಾಯಿಗಳೊಂದಿಗೆ ನಿರಂತರ ಸಮಾಲೋಚಿಸಿ, ತಮ್ಮನ್ನು ತಾವು ಅದರಲ್ಲೇ ತೊಡಗಿಸಿಕೊಂಡು, ಊರ ಪ್ರಗತಿಗಾಗಿ ರೂಪುರೇಶೆ ಹಾಕಿಕೊಳ್ಳುತ್ತಿದ್ದರು. ಅವರ ಬದುಕಿನ ಕೊನೆಯ ದಿನದವರೆಗೂ ಅದೇ ಜವಾಬ್ದಾರಿಯಿಂದ ನಡೆದುಕೊಂಡಿದ್ದನ್ನು ಭಕ್ತರು ಸ್ಮರಿಸಿಕೊಂಡು ದುಃಖಿಸುತ್ತಿದ್ದರು.

ಅವರು ಬರೆದ ಕಡೆಯ ಬರಹ ಇದೀಗ ಮೊಬೈಲ್‌ನಲ್ಲಿ ವೈರಲ್ ಆಗುತ್ತಿದೆ. ಕೊನೆಯುಸಿರಿಗಿಂತ ಕೆಲವೇ ತಾಸು ಮೊದಲಿನ ರಚನೆ_
ಭವದ ಬಾಧೆ ತೊಡೆವ ಶಕ್ತಿ ನಿಮಗಲ್ಲದೆ
ಮತ್ತಾರಿಗಿಹುದು ಹೇಳು ಗುರುದೇವ ||ಪಲ್ಲವಿ||

ನಾನು ನನ್ನದೆಂಬ ಮಮಕಾರ ಮೆರೆಯುತಿದೆ
ನೀನು ನಿನ್ನದೆಂಬ ರೆವೇಂಕಾರ ಮೆರೆಯುತಿದೆ
ಓಂಕಾರ ರೂಪಿ ನಿನ್ನ ನಾಮ ಮುಳುಗುತಿದೆ
ಶಿವಶಿವ ಶಿವಶಿವ ಶಿವಶಿವ ||೧||

ಅನ್ಯಾಯಕೆ ನ್ಯಾಯವು ನಲುಗಿ ಹೋಗುತಿದೆ
ಅಧರ್ಮಕ್ಕೆ ಧರ್ಮವು ಧೃತಿಗೆಡುತಿದೆ
ಧರ್ಮಕರ್ಮ ನೀರಿನಲ್ಲಿ ಕೊಚ್ಚಿಹೋಗುತಿದೆ
ಶಿವಶಿವ ಶಿವಶಿವ ಶಿವಶಿವ ||೨||

ಸೇವೆಯಿರದೆ ಸ್ವಾರ್ಥ ಮೆರೆದು
ಪ್ರೇಮವಿರದೆ ಕ್ಲೇಶಕೆರೆದು
ಗುರುಭಕ್ತಿಯಿರದೆ ಧನದಾಹ ಹೆಚ್ಚುತಿದೆ
ಶಿವಶಿವ ಶಿವಶಿವ ಶಿವಶಿವ ||೩||

ಕಾಲಘಟ್ಟ ಹೀಗಿರೆ ಜಗವೆಲ್ಲ ನಲುಗುತಿರೆ
ಜಗದೊಡೆಯ ಸುಮ್ಮನಿರೆ
ಎಲ್ಲೆಲ್ಲೂ ಅಲ್ಲೋಲಕಲ್ಲೋಲ ಹಾಹಾಕಾರ
ಶಿವಶಿವ ಶಿವಶಿವ ಶಿವಶಿವ ||೪||

ನಿನ್ನ ನಂಬಿದ ಭಕ್ತರೆಷ್ಟೊ
ಭವದ ಬಾಧೆಗಳ ತೊರೆಯುತಿರೆ
ಭವದಂಗಳ ಶಿವನಂಗಳ ಅನುಮಾನವಿಲ್ಲ
ಶಿವಶಿವ ಶಿವಶಿವ ಶಿವಶಿವ ||೫||

‘ಹೋದವ್ರು ಹೋಗ್ತಾರಾ, ಇದ್ದವ್ರು ಇರ‌್ತಾರ, ಆದ್ರ ಬಂದು ಹೋಗಾ ಈ ಸಂತ್ಯಾಗ ನಾವೇಸು ದಿನದವ್ರು? ಖರೆ ಹೇಳ್ತೀನಿ, ಗುರ್‌ಗಳಿಗ್ ಕರಕೊಂಡ್ ಹೋಗಾ ಶಿವ ನನಗಾರೆ ಕರ‌್ಕೊಳದಿತ್ತು.’ ದೇಹ ಹಣ್ಣಣ್ಣಾದವನ ಮಾತು ಕೇಳಿ ಮೈ ಜುಮ್ಮೆಂದಿತು. ‘ಹೋಗ್ಲಿ ಬಿಡು ಮುತ್ಯಾ, ಸಾವಿಲ್ಲದ ಮನೆಯೂ ಇಲ್ಲ; ಮಠವೂ ಇಲ್ಲ!!!’ ಎಂದು ಸಮಾಧಾನ ಹೇಳುವ ಮನಸ್ಸಾದರೂ ಗಂಟಲು ಬಿಗಿದುಕೊಂಡಿತ್ತು. ಮೂಕ ಸಾಕ್ಣಿಯಾಗಿ ಗುರುಗಳ ಅಂತಿಮ ದರ್ಶನ ಪಡೆದೆವು. ಹಿಂದಿರುಗುವಾಗ ‘ಶರಣರ ಇರವನ್ನು ಮರಣದಲಿ ಕಾಣಿರೊ’ ಮಾತು ಸತ್ಯ ಎನಿಸಿತು.

ಸಿಕಾ

Don`t copy text!