“ಮುತ್ತಿನ ತೆನೆಯ ಮುತ್ತುಗಳು…”
ಮುತ್ತಿನ ತೆನೆ
ಅಂಕಣ ಬರಹ
ಲೇಖಕರು :ಎ ಎಸ್. ಮಕಾನದಾರ
ನಿರಂತರ ಪ್ರಕಾಶನ
ಎಂ ಆರ್ ಅತ್ತಾರ ಬಿಲ್ಡಿಂಗ್
ಅಮರೇಶ್ವರ ನಗರ 5ನೇ ಕ್ರಾಸ್ ಗದಗ 582103
99164 80291
ಪುಟ ಸಂಖ್ಯೆ :224
ಬೆಲೆ ರೂ :250/-
“ಬರೆಯುವುದು ಎಂದರೆ ಅರ್ಧ ಏಕಾಂತ ಮತ್ತು ಅರ್ಧ ಲೋಕಾಂತದ ಸಂಗತಿಯೂ ಹೌದು”
-ಅಲ್ತೂಸರ್
ಮನುಷ್ಯನ ಚಾರಿತ್ರಿಕ ಬೆಳವಣಿಗೆ ರೋಚಕತೆಯನ್ನು ಹೊಂದಿದೆ. ಆರಂಭದಲ್ಲಿ ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಆಂಗಿಕ ಅಭಿನಯಕ್ಕೆ ಮೊರೆ ಹೋಗಿ, ನಂತರ ಭಾಷೆ ಕಲಿತು ; ಕ್ರಮೇಣವಾಗಿ ಲಿಪಿಯ ಮಾಯಾಜಾಲವನ್ನು ಸುಸೂತ್ರವಾಗಿ ಬಳಸಿಕೊಳ್ಳಲು ಆರಂಭಿಸಿರುವುದನ್ನು ಇಂದು ಹಿಂತಿರುಗಿ ನೋಡಿದರೆ ಪವಾಡ ಸದೃಶವೆನಿಸದೆ ಇರದು!.
ಈ ದಿಸೆಯಲ್ಲಿ ಯೋಚಿಸಿದರೆ ‘ಬರಹ’ ಎನ್ನುವುದು ಲೋಕಾಂತದಿ ಏಕಾಂತ ಬಯಸುವ ತಪಸ್ಸು, ಅದೊಂದು ಭಾವನೆಗಳ ಭಾವಯಾನ. ‘ಯಾನ’ ಎಂಬ ಭಾವ ಮೂಡಿದಾಗಲೆ ಒಂದು ನಿರ್ದಿಷ್ಟ ತಾಣ ನಮ್ಮ ಸ್ಮೃತಿ ಪಟಲದ ಮೇಲೆ ಹಾದು ಹೋಗುತ್ತದೆ. ಈ ನೆಲೆಯಲ್ಲಿ ಬರಹಗಳ ಗೊಂಚಲೆಂದರೆ ಅದು ‘ಸಾಹಿತ್ಯ’. ಈ ಗೊಂಚಲನ್ನು ಬಿಡಿಸಲು ಪ್ರಯತ್ನಿಸಿದಾಗಲೆ ಬರಹದ ಹಲವು ಸ್ವರೂಪಗಳು ನಮ್ಮ ಕಣ್ಣಮುಂದೆ ಮೂರ್ತ ರೂಪ ಪಡೆದು, ಸೃಜನಶೀಲ ಮತ್ತು ಸೃಜನೇತರ ಮಾರ್ಗಗಳಾಗಿ ಕವಲೊಡೆಯುತ್ತವೆ.
ಈ ಮಾರ್ಗಗಳು ಸಹೃದಯ ಓದುಗರ ಜ್ಞಾನದ ತೃಷೆಯನ್ನು ಪೂರೈಸುತ್ತ, ಹೃದಯಕ್ಕೆ ಮುದ ನೀಡುತ್ತವೆ.
ಒಂದು ಕಾಲದಲ್ಲಿ ಪತ್ರಿಕೆಗಳು ಕೇವಲ ‘ವರದಿ’ಗೆ ಮಾತ್ರ ಸೀಮಿತವಾಗಿದ್ದವು. ಆದರೆ,ಇಂದು ಹಾಗಲ್ಲ, ಬೌದ್ಧಿಕ ವಿಕಾಸದ ಜೊತೆ ಜೊತೆಗೆ ಮನೋರಂಜನೆಯ ತಾಣವೂ ಆಗುತ್ತ, ಅಸಂಖ್ಯಾತ ಬರಹಗಾರರಿಗೆ ಬರೆಯಲು ಸಶಕ್ತವಾದ ಒಂದು ವೇದಿಕೆಯನ್ನೂ ಒದಗಿಸಿ ಕೊಡುತ್ತಿವೆ. ಇಂತಹ ವೇದಿಕೆಗಳು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳಲು ಅನುವು ಮಾಡಿಕೊಡುತ್ತಿವೆ. ಇಂದು ‘ಅಂಕಣ ಬರಹ’ ಎನ್ನುವುದು ಆಲದ ಮರದಂತೆ ಬೆಳೆದು, ಪುಸ್ತಕಗಳ ರೂಪ ಪಡೆದು ; ಸಂಶೋಧನಾ ಮಹಾಪ್ರಬಂಧಕ್ಕೂ ಜೋಗುಳ ಹಾಡುತ್ತಿದೆ. ಈ ಕಾರಣಕ್ಕಾಗಿಯೇ ‘ಅಂಕಣ ಬರಹ’ದ ಆಗಸವು ಹಲವು ಪ್ರಕಾಶಮಾನ ತಾರೆಗಳಿಂದ ಕಂಗೊಳಿಸುತ್ತಿದೆ. ಅಂತಹ ತಾರೆಗಳಲ್ಲಿ ಹಿರಿಯರಾದ ಶ್ರೀ ಎ.ಎಸ್. ಮಕಾನದಾರ ಅವರೂ ಒಬ್ಬರೆಂದು ಹೇಳಲು ಖುಷಿಯೆನಿಸುತ್ತದೆ.
ಮಕಾನದಾರ ಅವರು ಸರಕಾರದ ಭಾಗವಾಗಿ ಅಂದರೆ ವೃತ್ತಿಯಿಂದ ನ್ಯಾಯಾಂಗ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒತ್ತಡಗಳ ಕಪಿಮುಷ್ಠಿಯಲ್ಲಿ ಬದುಕುತಿದ್ದರೂ ಸಾಹಿತ್ಯ ಕೃಷಿಯನ್ನು ಮಾಡಿದ್ದಾರೆ, ಮಾಡುತ್ತಿದ್ದಾರೆ. ವರ್ತಮಾನದ ತಲ್ಲಣಗಳಿಗೆ ಸಾಕ್ಷಿಯಾಗುತ್ತ ಬರಹದ ಬಾಂಧವ್ಯವನ್ನು ಬೆಸೆದಿದ್ದಾರೆ. ಇವರು ತಮ್ಮ ‘ನಿರಂತರ’ ಪ್ರಕಾಶನದಿಂದ ನಿರಂತರವಾಗಿ ಅಕ್ಷರದಮ್ಮನ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಹಲವು ಪ್ರತಿಭೆಗಳ ಬಾಳಿಗೆ ಜ್ಯೋತಿಯಾಗಿ ಬೆಳಕು ನೀಡಿದ್ದಾರೆ. ಇನ್ನೂ ಇವರು ಕಾಯಕ ಮಾಡುತ್ತಿರುವ ನ್ಯಾಯಾಂಗ ಇಲಾಖೆಯ ಮುಖವಾಣಿ ‘ಸಂಬಂಧ’ ಮಾಸ ಪತ್ರಿಕೆಯನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ ಹಾಗೂ ಅಭಿನಂದನೀಯ. ಈ ಪತ್ರಿಕೆ ಕೇವಲ ಇಲಾಖೆಯ ಮಾಹಿತಿಗೆ ಸೀಮಿತವಾಗಿರದೆ ಹಲವು ಆಯಾಮಗಳ, ವೈವಿಧ್ಯಮಯ ಲೇಖನಗಳನ್ನು ಪ್ರಕಟಿಸುತ್ತಿದೆ.ಕಳೆದ 2014ರಿಂದ ಈ ಪತ್ರಿಕೆ “ಹೆಕ್ಕಿ ತೆಗೆದ ಮುತ್ತುಗಳು” ಅಂಕಣವನ್ನು ಆರಂಭಿಸಿದಾಗ ಶ್ರೀಯುತರು ಅಪರಿಮಿತ ಶ್ರಮ ಹಾಕಿ ಜ್ಞಾನದ ಜೋಳಿಗೆ ಹೊತ್ತು ಫಕೀರರಂತೆ, ಜಂಗಮರಂತೆ ಊರೂರು ಅಂದರೆ ಕರುನಾಡಿನಾದ್ಯಂತ ಅಲೆಯುತ್ತ, ತಮ್ಮ ನ್ಯಾಯಾಂಗ ಇಲಾಖೆಯಲ್ಲಿ ದುಡಿಯುತ್ತಿರುವ ರಾಜ್ಯದ ಪ್ರತಿಯೊಂದು ಜಿಲ್ಲೆಯ ಎಲೆಮರೆ ಕಾಯಿಯಂತಿರುವ ಸಾಧಕರ ಪರಿಚಯವನ್ನು ತುಂಬಾ ಪ್ರೀತಿ, ಅಭಿಮಾನದಿಂದ ಅಕ್ಷರ ರೂಪಕ್ಕೆ ಇಳಿಸಿದ್ದಾರೆ. ರಾಜ್ಯದ ಭಾಗಶಃ ಎಲ್ಲ ನ್ಯಾಯಾಲಯಗಳ ಪ್ರತಿಭಾವಂತ ಸಹೋದ್ಯೋಗಿ ಬಾಂಧವರ ಮತ್ತು ಅವರ ಕುಟುಂಬದ ಸದಸ್ಯರ ಸಾಧನೆಯ ಮೇಲೆ ಬೆಳಕು ಚೆಲ್ಲಿದ್ದಾರೆ. ಇಲಾಖೆಯ ನೌಕರರ ಅಂತರಂಗದ ಅಸ್ಮಿತೆಯನ್ನು ಶೋಧಿಸಿ ಆಪ್ತ ಸಮಾಲೋಚನೆಯಂತೆ ಗೌರವಿಸಿದ್ದಾರೆ. ಇಲ್ಲಿಯ ಹಲವರು ಉನ್ನತ ಮಟ್ಟದ ಸಾಧನೆಯನ್ನು ಮಾಡಿ ರಾಜ್ಯ-ರಾಷ್ಟ್ರ-ಅಂತರರಾಷ್ಟ್ರೀಯ ಸ್ಥರದಲ್ಲಿ ತಮ್ಮ ಸಾಧನೆಯ ಮುಖಾಂತರ ಗುರುತಿಸಿಕೊಂಡಿರುವುದನ್ನು ತಮ್ಮ ಲೇಖನಗಳಲ್ಲಿ ದಾಖಲಿಸಿದ್ದಾರೆ. ಸಾಧಕರು ನಮ್ಮ ಮನೆಯ ಮತ್ತು ಮನದ ಒಳಗೆ ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ್ದಾರೆ.ಪ್ರತಿಭೆಎಂಬುದು ಕಲ್ಲಿನಲ್ಲಿ ರೂಪಿತವಾದ ಕಲ್ಲಿನಲ್ಲಿ ಶಿಲೆ. ಅದು ನಮ್ಮ ಅರಿವಿಗೆ ಬರಬೇಕಾದರೆ ಆ ಕಲ್ಲುಗಳ ಅಂತರದ ಕದವನ್ನು ತಟ್ಟಬೇಕಾಗುತ್ತದೆ. ಈ ಕಾರ್ಯವನ್ನು ಅಂಕಣ ಕಾರ ಮಕಾನದಾರ ಅವರು ನಿಭಾಯಿಸಿದ ರೀತಿ ಅನುಪಮ. ಕಪ್ಪೆ ಚಿಪ್ಪಿನಲ್ಲಿ ಹೂತಿರುವ ಮುತ್ತುಗಳನ್ನು ಶೋಧಿಸಿ ಅಂಕಣಗಳನ್ನು ಬರೆದಿದ್ದಾರೆ. ಆ ಎಲ್ಲ ಅಂಕಣಗಳ ಸುಂದರ ಮೊತ್ತವೆ ಈ “ಮುತ್ತಿನ ತೆನೆ” ಎನ್ನುವ ಸಾಧಕರ ಸರಮಾಲೆ!!
ಬಹುಮುಖ ವ್ಯಕ್ತಿತ್ವದ ಮಕಾನದಾರ ಅವರಿಂದ ರಚಿಸಲ್ಪಟ್ಟ ‘ಮುತ್ತಿನ ತೆನೆ’ ಎನ್ನುವ ಹೊತ್ತಿಗೆ ಕಛೇರಿಯ ಕಡತಗಳೊಂದಿಗೆ ಜೀವನ ಸಾಗಿಸುತ್ತ, ಕಾಯಕದ ಒತ್ತಡದಲ್ಲಿ ಸಿಲುಕಿ, ಸಮಾಜದ ಬಾಯಿಗೆ ಆಹಾರವಾಗಿ, ಬಸವಳಿದು-ಬೆಂದು-ನೊಂದು, ಅಂಟಿಕೊಂಡ ಜಡತ್ವವನ್ನು ಕಿತ್ತೆಸೆದು ಫೀನಿಕ್ಸ್ ಹಕ್ಕಿಯಂತೆ ಹಾರಿದ ಮತ್ತು ಸಾಧನೆಯ ಪಥದಲ್ಲಿ ಎದುರಾದ ತೊಡಕುಗಳನ್ನು ನಿವಾರಿಸಿ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವವನ್ನು ರೂಪಿಸಿಕೊಂಡ ವ್ಯಕ್ತಿ-ವಿಶೇಷಗಳ ಮಾಲಿಕೆಯಾಗಿದೆ. ಇಲ್ಲಿಯ 45 ಲೇಖನಗಳಲ್ಲಿ ನಲವತ್ತೈದು ವ್ಯಕ್ತಿಗಳ ಸಾಧನೆಯ ಕಿರುನೋಟವಿದೆ. ಕಲೆ, ಸಾಹಿತ್ಯ, ಸಂಗೀತ, ನೃತ್ಯ, ನಾಟಕ, ರಂಗಭೂಮಿ, ಯಕ್ಷಗಾನ, ಸಂಶೋಧನೆ, ಇತಿಹಾಸ, ಗಣಿತ, ಕ್ರೀಡೆ, ಚಾರಣ, ಯೋಗ.. ಮುಂತಾದ ಕ್ಷೇತ್ರಗಳಲ್ಲಿ ಸದ್ದು ಗದ್ದಲವಿಲ್ಲದೆ ಸಾಧನೆಯ ಶಿಖರವನ್ನು ಏರಿದ ಮನಸುಗಳನ್ನು ಮಕಾನದಾರಅವರು ಸಹೃದಯ ಓದುಗರಿಗೆ ತುಂಬಾ ಆಪ್ತವೆನಿಸುವಂತೆ ಪರಿಚಯಿಸಿದ್ದಾರೆ. ಅಂಗವೈಕಲ್ಯ ಎನ್ನುವುದು ತಾವು ಹಿಡಿದ ಕಾರ್ಯವನ್ನು ಮುಗಿಸಲು, ಸಂತೃಪ್ತಿಯ ಬದುಕನ್ನು ಸಾಗಿಸಲು ಯಾವುದೇ ಅಡ್ಡಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಹಲವು ಪ್ರತಿಭೆಗಳ ಜೀವನ ವೈಖರಿಯಿಂದ ದಾಖಲಿಸುತ್ತ, ವ್ಯಕ್ತಿತ್ವ ವಿಕಸನದ ನೆಲೆಯಲ್ಲಿ ಲೇಖನಗಳನ್ನು ಪ್ರಸ್ತುತಪಡಿಸಿರುವುದು ಈ ಕೃತಿಯ ವಿಶೇಷವೆನಿಸುತ್ತದೆ.
ಸಾಮಾನ್ಯವಾಗಿ ವ್ಯಕ್ತಿಗಳು ತಮ್ಮ ವೃತ್ತಿಯ ಜೊತೆಗೆ ಯಾವುದಾದರೊಂದು ಹವ್ಯಾಸವನ್ನು ಹೊಂದಿರುತ್ತಾರೆ. ಹವ್ಯಾಸಗಳು ವೈಯಕ್ತಿಕ ನೆಲೆಯಲ್ಲಿ ಉದಯಿಸಿ ಸಾರ್ವಜನಿಕವಾಗಿ ಫಲ ನೀಡುವ, ನೀಡಿದ ಬಗೆಯನ್ನು ಇಲ್ಲಿ ಮಕಾನದಾರ ಅವರು ಸಾಹಿತ್ಯದ ಚೌಕಟ್ಟಿನಲ್ಲಿ ಉಣಬಡಿಸಿದ್ದಾರೆ. ವೃತ್ತಿ ಮತ್ತು ಪ್ರವೃತ್ತಿಯನ್ನು ಏಕಕಾಲದಲ್ಲಿ ಯಾವುದಕ್ಕೂ ಚ್ಯುತಿ ಬಾರದಂತೆ ಮುನ್ನಡೆಸಿಕೊಂಡು ಹೋಗುವುದು ಸುಲಭದ ಮಾತಲ್ಲ. ಸಮಯದೊಂದಿಗೆ ಹೆಜ್ಜೆ ಹಾಕುತ್ತ, ಬಾಳಿನ ತಿರುವಿನಲ್ಲಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡ ಸಾಧಕರ ಪರಿಚಯದೊಂದಿಗೆ ನಮ್ಮ ಯುವಜನತೆಗೆ ಅನನ್ಯವಾದ ಸಂದೇಶವೊಂದನ್ನು ನೀಡುವಲ್ಲಿ ಶ್ರೀಯುತರು ಯಶಸ್ವಿಯಾಗಿದ್ದಾರೆ. ಈ ದಿಸೆಯಲ್ಲಿ ಇದೊಂದು ‘ವ್ಯಕ್ತಿತ್ವಾವಾದಿ’ ಕೃತಿಯಾಗಿದ್ದು, ಅಂತರ್ಭಾವ ಮುದ್ರವಾದವನ್ನು ಸಾರಸ್ವತ ಲೋಕಕ್ಕೆ ಸಾರುತ್ತಿದೆ.
ಸನ್ನಿವೇಶ ಮತ್ತು ಬರಹಗಳಿಗೆ ಒಂದು ಸಂಕೀರ್ಣವಾದ ಸಂಬಂಧವಿದೆ. ಅದನ್ನು ಬರೆಯುವುದು ಸಮಾಜಕ್ಕಾಗಿ. ‘ಬೀಗಿದರೆ ಬೇಗೆ, ಬಾಗಿದರೆ ಭಾಗ್ಯ’ ಎನ್ನುವ ಸಂತನ ಮನೋಧರ್ಮ ಇಲ್ಲಿಯ ವ್ಯಕ್ತಿಗಳಲ್ಲಿ ಇರುವುದನ್ನು ಲೇಖಕರು ಸೂಕ್ಷ್ಮವಾಗಿ ಗಮನಿಸಿ, ತಮ್ಮದೇ ಶೈಲಿಯಲ್ಲಿ ಪ್ರಚುರಪಡಿಸಿದ್ದಾರೆ. ಇಲ್ಲಿಯ ಲೇಖನಗಳ ನಿರೂಪಣೆ ತುಂಬಾ ಸರಳ ಹಾಗೂ ಸಶಕ್ತವಾಗಿ ಮೂಡಿಬಂದಿದೆ. ಸಾಧಕರ ಬಾಲ್ಯ, ಶಿಕ್ಷಣ, ವೃತ್ತಿಯ ಏರಿಳಿತದೊಂದಿಗೆ ಅವರು ಸಾಧಿಸಿದ ಸಾಧನೆಯನ್ನು ಕ್ರಮಬದ್ಧವಾಗಿ ದಾಖಲಿಸಿದ್ದಾರೆ. ಆ ಸಾಧಕರೊಂದಿಗಿನ ತಮ್ಮ ಪರಿಚಯದ ಹಿನ್ನೆಲೆಯನ್ನು ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಊರು-ಕೇರಿಗಳ ಸ್ಥೂಲ ಪರಿಚಯವನ್ನೂ ಸಾಂದರ್ಭಿಕವಾಗಿ ನೀಡಿದ್ದಾರೆ. ‘ನಾವು ಮಾಡುವ ಕೆಲಸ ನಮ್ಮ ಬಗ್ಗೆ ಮಾತನಾಡಬೇಕು’ ಎಂಬ ಸೂಕ್ತಿಯ ನೃತ್ಯ ಕೃತಿಯುದ್ದಕ್ಕೂ ಪಸರಿಸಿದೆ. “ನ್ಯಾಯಾಂಗದ ಮನಸುತ : ಅರುಣಕುಮಾರ ನರಗುಂದ” ಲೇಖನದಲ್ಲಿ ಕವಿ ಅರುಣಕುಮಾರ ಅವರು ಕವನ ಬರೆಯಲು ಕವಿಗೆ ಭಾವನೆ ಕಾಣಬೇಕು, ಕಂಡದ್ದನ್ನು ಕಟ್ಟಬೇಕು ; ಕಟ್ಟಿದ್ದನ್ನು ಪ್ರಜ್ಞೆಯಿಂದ ಹೊರ ತರಬೇಕು ಎಂದು ಹೇಳಿರುವುದರ ಉಲ್ಲೇಖ ಓದುಗರಿಗೆ ಮಾರ್ಗದರ್ಶನ ನೀಡುವಂತಿದೆ! ಇನ್ನೂ ಪ್ರತಿ ಲೇಖನವನ್ನು ಕಟ್ಟಿಕೊಡುವ ಪರಿ ಸಹೃದಯ ರಸಿಕರ ಮನಸೂರೆಗೊಳ್ಳುವಂತಿದೆ. “ಸೂಕ್ಷ್ಮ ಸಂವೇದನೆಯ ಕವಿ : ಬಿ. ಶ್ರೀನಿವಾಸ”, “ಹೂಬಳ್ಳಿಯ ಬಹುಮುಖ ಪ್ರತಿಭೆ : ಲಕ್ಷ್ಮೀಶ ಮೂಗನೂರ”, “ನ್ಯಾಯಾಂಗದ ಐಸಿರಿ : ಸಲ್ಮಾಬಾನು ಮುಲ್ಲಾನವರ”, “ನ್ಯಾಯಾಲಯದ ಹಾಡು ಹಕ್ಕಿ : ಶಹನಾಜ್ ಆಯ್. ತೆಗ್ಗಿನಮನಿ”, “ಕಲಬುರಗಿಯ ಕೋಗಿಲೆ : ಸುಧಾ ಮದನಕರ”, “ನಾಟಕ ಕಲಾವಿದ, ಸಾಹಿತಿ : ದಿನೇಶ್ ರಡ್ಡಿ ಕರಿರಡ್ಡೇರ”, “ಯಕ್ಷಲೋಕದ ನಕ್ಷತ್ರ : ವಾಣಿ ಬಾಲಚಂದ್ರ”, “ನಾಟ್ಯ ಮಯೂರಿ : ಆರ್. ವಿಭಾವರಿ”, “ಅಂಗವೈಕಲ್ಯ ಮೆಟ್ಪಿ ನಿಂತ ಸಿಹಿಮೊಗೆಯ : ಪ್ರಪುಲ ಚಂದ್ರ”, “ಸೂಪರ್ ಟ್ಯಾಲೆಂಟ್ : ಡಾ. ವೈದ್ಯತಿ”, “ಲಕ್ಷವರ್ಷ ಕ್ಯಾಲೆಂಡರ್ ನ ಅಧಿಪತಿ : ನ್ಯಾಯಾಂಗದ ಶ್ರೀಪತಿ”…. ಮುಂತಾದ ಲೇಖನಗಳು ತುಂಬಾ ಇಂಪ್ರೆಸ್ಸಿವ್ ಆಗಿ ಮೂಡಿಬಂದಿವೆ. ಎಲ್ಲ ವಯೋಮಾನದ ಸಾಧಕರನ್ನು ಓದುಗರೊಂದಿಗೆ ಮುಖಾಮುಖಿಯಾಗಿಸುವ ಯತ್ನ ಮಾಡಿ, ಪ್ರತಿ ಲೇಖನದ ಕೊನೆಯಲ್ಲಿ ಆಯಾ ವ್ಯಕ್ತಿಗಳ ವಿಳಾಸವನ್ನು ನೀಡಿರುವುದು ಲೇಖಕರಲ್ಲಿಯ ಸಂಶೋಧಕನ ಕುರುಹಾಗಿದೆ.
ಒಂದು ಕೃತಿಯ ರಚನೆಯಲ್ಲಿ ಭಾಷೆ ಮತ್ತು ತಂತ್ರ ಮುಖ್ಯವಾಗುತ್ತದೆ. ಅಪಾರವಾದ ಓದಿನ ಜ್ಞಾನ, ಬದುಕು ಕಲಿಸಿದ ಅನುಭವದ ಭಂಡಾರವನ್ನು ಹೊತ್ತ ಮಕಾನದಾರಅವರ ಮಾತು ಒಮ್ಮೊಮ್ಮೆ ಸರಳವಾಗಿ, ಮತ್ತೊಮ್ಮೆ ಸೂತ್ರಬದ್ಧವಾಗಿ ; ಮಗದೊಮ್ಮೆ ಶಬ್ದ ಮುಗ್ಧವಾಗುತ್ತದೆ. ಹತ್ತು ದಿಕ್ಕಿನಿಂದ ಹರಿದು ಬಂದ ಅನುಭವವನ್ನು ಪ್ರಮಾಣಿಕತೆಯ ಕಾಲುವೆಯ ಮುಖಾಂತರ ಹರಿಸಿದ್ದಾರೆ. ಬದುಕಿನ ಒಳ-ಹೊರಗನ್ನು ಸೂಕ್ಷ್ಮವಾಗಿ ಅವಲೋಕಿಸಿ, ಅನನ್ಯ ಕ್ಷಣಗಳನ್ನು ಅನುಭವಿಸಿ, ತಮ್ಮ ಸಂವೇದನೆಯನ್ನು ತೀಕ್ಷ್ಣಗೊಳಿಸಿಕೊಂಡು ತಮ್ಮ ಅಭಿವ್ಯಕ್ತಿಯನ್ನು ಅನುಭವಕ್ಕೆ ಒಗ್ಗಿಸಿಕೊಂಡಿದ್ದಾರೆ. ಇಲ್ಲಿಯ ಭಾಷೆ ಕಾವ್ಯಮಯವಾಗಿದ್ದು, ಮೃದು, ಕೋಮಲ ಪದಗಳಿಂದ ರೂಪುಗೊಂಡಿದೆ. ರಮ್ಯದ ಛಾಯೆ ಹೊತ್ತ ‘ಭಾವೋದ್ವೀಪನ ಭಾಷೆ’ ಇದೆ. ಭಾಷೆಯ ಮೊನಚು, ಸೂಕ್ಷ್ಮತೆ, ಅಂತಃಸತ್ವ, ಧ್ವನಿಶಕ್ತಿ ಎಲ್ಲವನೂ ಇಲ್ಲಿ ಕಾಣಬಹುದು. ಈ ಹಿನ್ನೆಲೆಯಲ್ಲಿ ಆಂಗ್ಲ ಕವಿ ವರ್ಡ್ಸ್ ವರ್ಥ್ ನ “All good poetry is a spontaneous overflow of powerful feelings” ವ್ಯಾಖ್ಯಾನ ಸಮಯೋಚಿತವೆನಿಸುತ್ತದೆ. ಕತ್ತಲೆಯಲ್ಲಿ ಮಿಂಚು ಮಿಂಚಿದಾಗ ವಸ್ತುಗಳು ಹೇಗೆ ಒಂದು ಕ್ಷಣ ಕಂಡು ಮಾಯವಾಗುತ್ತವೆಯೋ ಹಾಗೆ ಪ್ರತಿಭೆಯ ಮಿಂಚು ಮಿಂಚಿದಾಗ ಅಂತಃಚಕ್ಷುವಿನ ಪಟಲದ ಮೇಲೆ ಮೂಡಿದ ವಸ್ತುಗಳ ಚಿತ್ರವನ್ನು ಪ್ರಮಾಣಿಕವಾಗಿ ಬರೆಯುವ ‘ಭಾವಮುದ್ರಾವಾದಿ’ ಸಿದ್ಧಾಂತವನ್ನು ಈ ಕೃತಿಯು ಅರುಹುತ್ತಿದೆ. ಮಕಾನದಾರ ಅವರು ವೈಯಕ್ತಿಕ ದೃಷ್ಟಿಯಿಂದ ಕಂಡದ್ದನ್ನು ವಸ್ತುನಿಷ್ಠ ದೃಷ್ಟಿಯಿಂದ ಚಿತ್ರಿಸಿದ್ದಾರೆ. ಮನುಷ್ಯನ ಅಂತರಂಗ ಸಂಗತಿಗಳು ಅವನ ಬಹಿರಂಗ ಸಂಗತಿಗಳಷ್ಟೇ ಮಹತ್ವವಾದವು ಎಂಬುದನ್ನು ಇಲ್ಲಿಯ ಲೇಖನಗಳು ಸಾರುತ್ತಿವೆ. ನವ್ಯ ಸಾಹಿತ್ಯದಲ್ಲಿ ನಡೆದ ವೈಯಕ್ತಿಕ ಮೌಲ್ಯಗಳ ಶೋಧನೆಯನ್ನು ‘ ಮುತ್ತಿನ ತೆನೆ’ ಯ ಆಳದಲ್ಲಿದೆ! ಅನುಭವ ನಿರೂಪಣೆಯಲ್ಲಿಯ ಪ್ರಮಾಣಿಕತೆ ಇಲ್ಲಿದೆ. ಈ ಎಲ್ಲ ಅಂಶಗಳಿಂದ ‘ಮುತ್ತಿನ ತೆನೆ’ ಸಾಹಿತ್ಯದ ಮುತ್ತಾಗಿ ಕಂಗೊಳಿಸುತ್ತಿದೆ. ಶ್ರೀಎ.ಎಸ್. ಮಕಾನದಾರ ಅವರಿಂದ ನಮ್ಮ ವಾಙ್ಮಯಲೋಕ ಮತ್ತಷ್ಟು ಸಿರಿತನದಿಂದ ಕಂಗೊಳಿಸಲಿ ಎಂದು ಶುಭ ಕೋರುತ್ತೇನೆ.
“ಮನುಷ್ಯರ ಸಾಮಾಜಿಕ ಜೀವನವನ್ನು ಅವರ ಪ್ರಜ್ಞೆ ನಿಯಂತ್ರಿಸುವುದಿಲ್ಲ ; ಬದಲಾಗಿ ಸಾಮಾಜಿಕ ಜೀವನವೇ ಅವರ ಪ್ರಜ್ಞೆಯನ್ನು ನಿಯಂತ್ರಿಸುತ್ತದೆ.”
-ಕಾರ್ಲ್ ಮಾರ್ಕ್ಸ್
-ಡಾ. ಮಲ್ಲಿನಾಥ ಎಸ್. ತಳವಾರ
ಕನ್ನಡ ಪ್ರಾಧ್ಯಾಪಕರು,
ನೂತನ ಪದವಿ ಮಹಾವಿದ್ಯಾಲಯ,
ಕಲಬುರಗಿ ೫೮೫ ೧೦೩
# ೯೯೮೬೩ ೫೩೨೮೮