ಪುಸ್ತಕ ಪರಿಚಯ
ಕೃತಿ ಹೆಸರು………ಸುಡುವ ತಂಗಾಳಿ,..ಗಜಲ್ ಗಳು
ಲೇಖಕರು….ಮಹಾದೇವ ಎಸ್ ಪಾಟೀಲ
ಪ್ರಕಾಶಕರು…..ಕಂಠಿಬಸವ ಪ್ರಕಾಶನ ಭೂಪೂರ(ರಾಂಪೂರ)
ತಾ. ಲಿಂಗಸೂಗೂರು ಜಿಲ್ಲಾ ರಾಯಚೂರು
ಮೊ.೮೬೬೦೪೫೪೧೫೮
ಮುದ್ರಣ…..೨೦೨೨
ವೈಶಾಖದ ಕಡು ಬಿಸಿಲಲಿ ಮೈ ತುಂಬ ಹೂ ಅರಳಿಸಿ ದಾರಿ ಹೋಗಕರಿಗೆ ತಂಪು ಕಂಪು ನೀಡುವ ಗುಲ್ ಮೊಹರ್ ಗಿಡದಂತೆ ಮಹಾದೇವ ಪಾಟೀಲ ಅವರು ಬಿಸಿಲು ನಾಡಿನ ರಾಯಚೂರು ಜಿಲ್ಲೆಯಲ್ಲಿ ಹಗಲು ರಾತ್ರಿ ದೇಶ ಸೇವೆ ಮಾಡುತ್ತಾ ಸಾಮಾನ್ಯರಿಗೆ ರಕ್ಷಣೆ ಮಾಡುತ್ತಾ ಕಾನೂನು ರಕ್ಷಣೆ ಮಾಡುತ್ತಾ ಆರಕ್ಷಕರಾಗಿ ತಮ್ಮ ತನುವನ್ನು ಬಿಸಿಲಿಗೆ ಒಡ್ಡಿ ಸುಟ್ಟುಕೊಳ್ಳುತ್ತಾ ನಮ್ಮ ಮನಗಳಿಗೆ ತಂಗಾಳಿ ನೀಡಿ ಮುದ ಕೊಡುವ ಗಜಲ್ ಗಳನ್ನು ಸುಡುವ ತಂಗಾಳಿ ಸಂಕಲನದಲ್ಲಿ ಬುತ್ತಿ ಕಟ್ಟಿ ಕೊಟ್ಟಿದ್ದಾರೆ.
ಮಹಾದೇವ ಪಾಟೀಲ ಅವರು ಈಗಾಗಲೇ “ಬಿಸಿಲು ಬಿದ್ದ ರಾತ್ರಿ” ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿ ಉತ್ತಮು ಗಜಲ್ ಕಾರರೆಂದು ನಂಬಿಕೆ ಹುಟ್ಟಿಸಿದ್ದಾರೆ.ಈಗ ಅವರ ಎರಡನೇ ಗಜಲ್ ಸಂಕಲನ ” ಸುಡುವ ತಂಗಾಳಿ”ಯನ್ನು ನಮಗೆಲ್ಲಾ ಓದಲು ಕೊಟ್ಟಿದ್ದಾರೆ. ಈ ಸಂಕಲನದಲ್ಲಿ ಒಟ್ಟುೃ೬೫ ವಿವಿಧ ವಿಷಯದ ಗಜಲ್ ಗಳಿದ್ದು ಪ್ರೀತಿ,ಪ್ರೇಮ,ವಿರಹ,ಹಸಿವು,ಬಡತನ ,ರೈತರ ಗೋಳು,ಧರ್ಮಗಳ ತಿಕ್ಕಾಟ,ತತ್ವ ಪದಗಳ ಸಾರ,ಶರಣರ ಬದುಕು,ಸಂತರವಾಣಿ,ಅನ್ಯಾಯವನ್ನು ಪ್ರತಿಭಟಿಸುವ ,ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಶೀತಲವಾದ ಪ್ರತಿಭಟನೆಯನ್ನು ಸಾರಿದ್ದಾರೆ.ಹೀಗೆ ಎಲ್ಲಾ ವಿಷಯಗಳ ಬಗ್ಗೆ ಸುಂದರವಾದ ಮನ ಮುಟ್ಟುವ ಹೃದಯ ತಟ್ಟುವ ವಂತಹ ಗಜಲ್ ಗಳನ್ನು ರಚಿಸಿದ್ದಾರೆ
ಈ ಸಂಕಲನಕ್ಕೆ ಶ್ರೇಷ್ಠ ವಿಮರ್ಶಕರು, ಗಜಲ್ ಕಾರರು,ಆದ ಅಬ್ದುಲ್ ಹೈ ತೋರಣಗಲ್ಲು ಇವರು ಮೌಲ್ಯವಿತವಾದ ಮುನ್ನುಡಿ ಬರೆದು ಕೃತಿಯ ಮೌಲ್ಯ ಹೆಚ್ಚಿಸಿದ್ದಾರೆ.ಶ್ರೇಷ್ಠ ಗಜಲ್ ಕಾರರು ಹಾಗೂಗಜಲ್ ಸಂಶೋಧನಾ ಕಾರರಾದ(ಪಿ ಹೆಚ್ಚ್ ಡಿ ಮಾಡುವ ) ಪ್ರೇಮಾ ಹೂಗಾರ ಬೀದರ ಇವರು ಬೆನ್ನುಡಿ ಬರೆದು ಬೆನ್ನು ತಟ್ಟಿದ್ದಾರೆ.ಉತ್ತಮ ಕಲಾಕಾರರಾದ ಹಾದಿಮನಿ ಟಿ.ಫ್.ಅವರು ಸಂಕಲನಕ್ಕೆ ವಿಶಿಷ್ಟವಾದ ಆಕರ್ಷಕವಾದ ಮುಖ ಚಿತ್ರ ಚಿತ್ರಿಸಿ ಕೃತಿಯ ಅಂದವನ್ನು ಹೆಚ್ಚಿಸಿದ್ದಾರೆ.ಮಹಾದೇವ ಪಾಟೀಲ ಅವರ ಇಲಾಖೆಯ ಅನೇಕ ಮೇಲಾಧಿಕಾರಿಗಳು ಸಂಕಲನದ ಬಗ್ಗೆ ಮೆಚ್ಚಿಗೆಯನ್ನು ಬರೆದಿದ್ದಾರೆ.
ಸಂಕಲನದಲ್ಲಿ ನನಗೆ ಮೆಚ್ಚಿಗೆ ಯಾದ ಗಜಲ್ ಗಳ ಕೆಲವು ಮಿಸ್ರಾಗಳು
ನೀನು ತಪ್ಪಿಲ್ಲದೆ ಯಾರೊಂದಿಗೂ ರಾಜಿಯಾಗ ಬೇಡ
ಮೇಣದ ಬತ್ತಿಯಂತೆ ಯಾರ ಮಾತಿಗೂ ಕರಗಬೇಡ (ಗಜಲ್ ೪)
ಎಷ್ಟೋಸಾರೆ ನಾವು ಸಮಾಜದಲ್ಲಿ ನಾವು ಮಾಡದಿರುವ ತಪ್ಪುಗಳನ್ನು ಕೆಲವರ ಒತ್ತಾಯಕ್ಕೆ ಒಪ್ಪಿಕೊಂಡು ಶಿಕ್ಷೆಯನ್ನು ಅನುಭವಿಸುತ್ತೇವೆ.ಅದನ್ನು ಕವಿ ಇಲ್ಲಿ ಎಚ್ಚರಿಸುತ್ತಾರೆ.ನಾವು ಮಾಡದ ತಪ್ಪನ್ನು ಯಾವದೇಕಾರಣಕ್ಕೆ ಒಪ್ಪಬೇಡ ,ದಾರಿತಪ್ಪಿಸುವ ಜನ ಸಮಾಜದಲ್ಲಿ ಬಹಳ ಇದ್ದಾರೆ,ಜನರ ಮಾತಿಗೆ ಮರುಳಾಗಬೇಡವೆಂದು ಉತ್ತಮ ರೂಪಕಗಳೊಂದಿಗೆ ಎಚ್ಚರಿಸಿದ್ದಾರೆ.
ಜಗವೆಲ್ಲಾ ಮಲಗಿದಾಗ ಎದ್ದು ಗಸ್ತುತಿರುಗುವವರು ನಾವು
ಮಂದಿರ ಮಸೀದಿ ಚರ್ಚಗಳ ಪಹರೆ ಮಾಡುವವರುಂನಾವು (ಗಜಲ್ ೧೩)
ದೇಶ ರಕ್ಷಣೆಗಾಗಿ ಜನರ ಹಿತಕ್ಕಾಗಿ ಹಗಲಿರುಳು ಕರ್ತವ್ಯ ಮಾಡುವ ಸೈನಿಕ ಮತ್ತು ಪೋಲೀಸ್ ಇವರ ಕರ್ತವ್ಯ ಬಗ್ಗೆ ಮತ್ತು ಸಮಾಜದಲ್ಲಿ ಶಾಂತಿ,ಸಂಯಮತೆ,ಕಾಪಾಡುತ್ತಾ ಭ್ರಾತೃತ್ವವನ್ನು ಬೆಳೆಸುವವರು ನಾವು ಎಂದು ಸುಂದರವಾಗಿ ಗಜಲ್ ದಲ್ಲಿ ಮನದ ಭಾವನೆಗಳನ್ನು ತೋರಿಸಿದ್ದಾರೆ .
ನೆನಪು ಜಿನುಗುವ ಮಳೆಯಾಗಿ ಸುರಿಯುತಿದೆ
ಮನದ ಬಿಸುಪು ಅಲೆ ಅಲೆಯಾಗಿ ತೇಲುತಿದೆ..(ಗಜಲ್೨೩)
ಇದು ಒಂದು ಪ್ರೀತಿಯನ್ನು ನಿವೇದಿಸಿ ಕೊಳ್ಳುವ ಗಜಲ್ ಆಗಿದೆ ,ಪ್ರಿಯತಮೆಯ ನೆನಪು ಸೋನೆಮಳೆಯಾಗಿ ಹೃದಯದಲ್ಲಿ ಜಿನುಗುತ್ತಾ ಸಂತಸವನ್ನು ಕೊಡುತ್ತದೆಂದು,ಪ್ರೀತಿ ಎಂಬುವುದು ಒಂದು ಗುಪ್ತಗಾಮಿನಿಯಾಗಿ ಒಡಲಲಿ ಹರಿಯುತ್ತದೆ ಬದುಕನು ದಡದ ಕಡೆ ಮೌನವಾಗಿ ಸಾಗುತ್ತದೆಂದು ನಿನ್ನ ಪ್ರೀತಿಯನ್ನು ದಿನವೂ ಧ್ಯಾನಿಸುತ್ತೇನೆ ಬಾನಲ್ಲಿ ಮೂಡಿದ ನಕ್ಷತ್ರಗಳು ನಿನ್ನ ಹೆಸರು ಹೇಳುತ್ತಾನ ಮಿನುಗುತ್ತವೆಂದು ಕವಿ ಇಲ್ಲಿ ಪ್ರೇಮ ಭಾವ ಕಡಲಲಿ ತೇಲುತ್ತಾ ಸಾಗುತ್ತಾನೆ.
ನಾನು ಇಡೀ ಬದುಕನು ಕಳೆದೆ ನಿನ್ನದೆ ಗುಂಗಿನಲಿ
ಲೋಕದ ಮಾತು ತೊರೆದು ತಿರುಗಿದೆ ನಿನ್ನದೆ ಗುಂಗಿನಲಿ
( ಗಜಲ್೩೩)
ಪ್ರೀತಿಯ ಗುಂಗಿನಲಿ ಪ್ರೇಮಿಗಳು ಏನೆಲ್ಲಾ ಕಳೆದು ಕೊಳ್ಳಬಹುದು ಮತ್ತು ಯಾವರೀತಿಯಾಗಿ ಬದುಕ ಬಹುದು, ಜಗದ ಯಾವ ಕಟ್ಟುಪಾಡುಗಳು ಪ್ರೇಮಿಗಳನ್ನು ಬಂಧಿಸುವುದಾಗುವುದಿಲ್ಲ ಎಂದು ಆ ಪ್ರೀತಿಯ ಗುಂಗು ಒಮ್ಮೆ ಕವಿಯಾಗಿಸಿದರೆ ಇನ್ನೊಮ್ಮೆ ವಿರಹಿಯಾಗಿ ಹುಚ್ಚನಾಗಿ ತಿರುಗುತ್ತಾ ಕೊನೆಗೆ ಚರಮಗೀತೆ ಹಾಡುತ್ತಾ ಬಾಳು ಕೊನೆಗೊಳ್ಳಿಸಿ ಕೊಳ್ಳುತ್ತಾನೆನೆಂದು ಈ ಗಜಲ್ ದಲ್ಲಿ ಕವಿ ಸುಂದರವಾದಗಿ ಹಿಡಿದಿಟ್ಟಿದ್ದಾರೆ.
ಬದುಕಿರುವ ತನಕ ಯಾರಿಗೂ ಹೊರೆಯಾಗ ಬೇಡ
ತೀರಿ ಹೋದ ಮೇಲೆ ಯಾರಿಗೂ ಖೇದ ತರಬೇಡ (ಗಜಲ್೪೦)
ಈ ಗಜಲ್ ದಲ್ಲಿ ಬದುಕಿನ ನಶ್ವರವನ್ನು ತೋರಿಸುವ ಮತ್ತು ತತ್ವಪದದಂತೆ ಬದುಕುನ ರೀತಿ ನೀತಿಗಳನ್ನು ಹೇಳುತ್ತಾ ಜೀವಿ ಬದುವುದಕ್ಕಾಗಿ ಬಾಳಿನ ಗುಟ್ಟು ಅರಿತು ಬೆರೆತು ಬಾಳ ಬೇಕು ಬೇರೆಯವರ ಬಾಯಿಗೆ ಆಹಾರವಾಗದಿರೆಂದು ಜಗದ ಜನರ ಮುಂದೆ ಬೆತ್ತಲಾಗಿ ನಿಲ್ಲ ಬೇಡ ವೆಂದು ಹೇಳುತ್ತಾ ಆಧ್ಯಾತ್ಮಿಕ ನೆಲೆಯಲ್ಲಿ ಗಜಲ್ ಕಟ್ಟಿತ್ತಾರೆ.
ಅರಿವಿನ ಬಟ್ಟಲು ತುಂಬಿರ ಬೇಕು ಗುರುವಿನ ದರ್ಶನ ಮಾಡಲು
ಜ್ಞಾನ ದಾಹವು ಇರಬೇಕು ಗುರುವಿನ ದರ್ಶನ ಮಾಡಲು
ಗುರುವಿನ ಗುಲಾಮನಾಗುವ ತನಕ ಮುಕ್ತಿ ದೊರೆಯದಣ್ಣ ಎಂಬ ತತ್ವ ಪದದಂತೆ ಈ ಗಜಲ್ ದಲ್ಲಿ ಗುರುವಿನ ದರ್ಶನ ಮಾಡಲು ನಮ್ಮ ಅರಿವಿನ ಬಟ್ಟಲು ತುಂಬಿರಬೇಕು ,ಜ್ಞಾನದ ದಾಹವು ಇರಬೇಕು ಅಂದರೆ ನಮ್ಮ ಬದುಕು ಹಸನಾಗುತ್ತದೆ ,ಮತ್ತು ಬಾಳಿನಲ್ಲಿ ಗುರಿ ಇರಬೇಕೆಂದು ಏಕಲವ್ಯನ ಗುರು ಭಕ್ತಿಯನ್ನು ಪ್ರಸ್ತಾಪಿಸುತ್ತಾರೆ ಕವಿ ಈ ಗಜಲ್ ದಲ್ಲಿ.
ಮನ ಮೋಹಕ ನೋಟದಿ ಹೃದಯ ಕದಿಯದಿರು ಪ್ಪಿಯೆ
ನಯನಗಳಲಿ ಮಾತುಗಳಾಡಿ ಮನವ ತಣಿಸದಿರು ಪ್ರಿಯೆ
ಪ್ರಿಯಕರ ತನ್ನ ಪ್ರಿಯತಮೆಗೆ ಹಾವಭಾವ ಮೋಹಕ ನೋಟ,ಅಂಗಾಂಗಳ ಭಾವ ಭಂಗಿ ಪ್ರದರ್ಶನದಿಂದ ನನ್ನ ಮನ ಘಾಸಿ ಗೊಳಿಸದಿರು,ನಾನು ಸನ್ಯಾಸಿಯಾಗ ಬಯಸಿದ್ದೆ ವ್ಯಾಮೋಹ ಕಡಲಲಿ ನೂಕಿ ಕೊಲ್ಲದಿರು ಪ್ರೇಮ ನಶೆಯಲಿ ವಿರಹ ಗೀತೆ ಬರೆಯದಿರೆಂದು ತನ್ನ ಪ್ರಿಯೆತಮೆಗೆ ಸುಂದರವಾದ ರೂಪಕಗಳಿಂದ ಹೇಳುತ್ತಾರೆ.
ಬಯಲ ಸೀಮೆಯ ಜನರ ಎದೆಯಲಿ ಸುಡುವ ಕನಸು ಗಳಿವೆ
ಬಡತನದ ಬವಣೆಯಲಿ ಬೆಂದು ಬದುಕುವ. ಮನಸುಗಳಿವೆ (ಗಜಲ್ ೫೪)
ಈ ಗಜಲ್ ದಲ್ಲಿ ಕವಿಯು ಬಯಲು ಸೀಮೆಯ ಬಡ ಮತ್ತು ಶ್ರಮಜೀವಿಗಳ ಬದುಕಿನ ಬವಣೆಯನ್ನು ಸುಂದರವಾಗಿ ಹೇಳುತ್ತಾ ಹೊರಟಿದ್ದಾರೆ.ದೇಶ ಸ್ವತಂತ್ರವಾಗಿ ೭೫ ವರ್ಷ ಗತಿಸಿದರೂ ಇಲ್ಲಿಯ ಜನ ಜೀವನದಲ್ಲಿ ಯಾವ ವ್ಯತ್ಯಾಸ ವಾಗಿಲ್ಲ ಬಡವ ಬಡವನಾಗಿ ಉಳಿದಿದ್ದಾನೆಂದು ಗಾಂಧೀಜಿಯವರು ಕಂಡ ರಾಮ ರಾಜ್ಯ ದ ಕನಸು ನನನಸಾಗದೆ ಬಿಕ್ಕುತ್ತಿದೆ ,ಶತಮಾನದಿಂದ ಬಡವನಿಗೆ ಸುಖಗಳೇ ದೊರಕದೆ ಶಾಪವಾಗಿವೆಂದು ಗಜಲ್ ದಲ್ಲಿ ಬಿತ್ತರಿಸಿದ್ದಾರೆ.ಈ ಗಜಲ್ ಸ್ವಲ್ಪ ವಾಚ್ಯವಾದರು ಸಮಾಜಿಕ ಕಳಕಳಿಂದ ಕೂಡಿದೆ.
ಮಹಾದೇವ ಪಾಟೀಲ ಅವರ ಎರಡನೇ ಗಜಲ್ ಸಂಕಲನ *ಸುಡುವ ತಂಗಾಳಿ* ಕೃತಿಯಲ್ಲಿ ಅನೇಕ ಗಜಲ್ ಗಳು ಪ್ರೇಮಲೋಕದಲ್ಲಿ ತೇಲಾಡಿಸುತ್ತಾ ಬೆಳದಿಂಗಳ ತಂಪನ್ನು ಮನಕೆ ನೀಡುತ .ಜೊತೆಗೆ ಸಮಾಜದ ಕುಂದುಕೊರತೆಗಳನ್ನು ತಿದ್ದಲು ಹಚ್ಚುತ್ತವೆ.ವಿರಹದಲ್ಲಿ ಮನ ಕಾಡುತ್ತವೆ.ಶರಣ ,ಸಂತರ, ತತ್ವಗಳಲ್ಲಿ ಮೀಯಿಸುತ್ತವೆ,ಏಕಾಂತದಲ್ಲಿ ಗುನ್ ಗುನಾಯಿಸುವಂತೆ ಮಾಡುತ್ತವೆ. ಓದುಗರನ್ನು ನಿರಾಶೆಗೊಳಿಸದೆ ಓದಿಸಿಕೊಂಡು ಹೋಗುತ್ತಾ ಗಜಲ್ ಲೋಕದಲ್ಲಿ ತೇಲಾಡಿಸುತ್ತವೆ.
ಮಹಾದೇವ ಪಾಟೀಲ ಅವರು ಇನ್ನೂ ಉತ್ತಮವಾದ ಗಜಲ್ ಸಂಕಲನಗಳನ್ನು ಕನ್ನಡ ಗಜಲ್ ಸಾಹಿತ್ಯ ಲೋಕಕ್ಕೆ ಅಪಿ೯ಸಲೆಂದು ಹಾರೈಸುತ್ತಾ ನನ್ನ ಬರಹಕ್ಕೆ ವಿರಾಯ ಕೊಡುವೆ.
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ
ಮೊ.೮೪೦೮೮ ೫೪೧೦೮