ಮಗನೊಂದಿಗಿನ ಪಯಣ

ವಾಸ್ತವದ ಒಡಲು
ಮನ ಬಸಿರಾದಾಗ

ಮಗನೊಂದಿಗಿನ ಪಯಣ

ಮಗನೊಂದಿಗೆ ಲಾಂಗ್ ಡ್ರೈವ್. ಕಾರು ಓಡುತ್ತಿತ್ತು. ನಸುಕಿನ ನಸು ಬೆಳಕು ತುಸು ತುಸುವಾಗಿ ಹರಿದು ಪಸರಿಸುವ ತವಕದಲ್ಲಿತ್ತು. ಸೂರ್ಯನ ಸುಳಿವು ಎಲ್ಲೂ ಕಾಣುತ್ತಿರಲಿಲ್ಲ. ಅದಕ್ಕಿಂತ ಮುಂಚಿನ ಸಮಯ. ಎಲ್ಲೆಡೆ ತನ್ನ ಪ್ರಭೆ ಹೊರ ಸೂಸಲು ಯತ್ನಿಸುತ್ತಿರುವ ಮುಂಜಾವು. ಬೆಳಕೂ ಅಲ್ಲದ ಕತ್ತಲೂ ಅಲ್ಲದ, ಆಹ್ಲಾದಕರ ಮಬ್ಬಿನಲಿ ಮನಸಿಗೆ ಗುಂಗು ಹಿಡಿದ ಅನುಭವ. ಇಕ್ಕೆಲದಲಿ ಗಿಡ, ಗಂಟೆಗಳು ಹಿಂದಕ್ಕೆ ಓಡುತ್ತಿದ್ದವು. ಊರು ಬಂದಾಗ ಬಾಗಿಲು ಮುಚ್ಚಿದ ಮನೆಗಳು, ಅಂಗಡಿಗಳು, ಕಾಣುತ್ತಿದ್ದವು. ಮತ್ತೆ ನಿರ್ಜನ ಬಯಲು ಪ್ರದೇಶ ಎದುರಾಗುತ್ತಿತ್ತು.

ಅಷ್ಟರಲ್ಲಿ ಬ್ರಿಡ್ಜ್ ಕಂಡಿತು, ಹಾಗೆಯೆ ನೀರೂ ಕಂಡಿತು.
‘ಕಂದಾ, ಅಲ್ಲಿ ನೀರು ಕಾಣ್ತಿದೆ ನೋಡು’.
ನಾನು ಐವತ್ತು ದಾಟಿದವಳು ಚಿಕ್ಕ ಮಗುವಿನಂತೆ ಹೇಳಿದೆ.
ಇಪ್ಪತ್ತೈದು ವರ್ಷದ ಮಗ ಕಾರ್ ಡ್ರೈವ್ ಮಾಡುತ್ತಿದ್ದ.
‘ಹೂಂ’ ಅವನ ಮುಗುಳ್ನಗೆಯ ಉತ್ತರ.
ವಯಸ್ಸಾಗ್ತಾ ಆಗ್ತಾ ನಾನೂ ಮಕ್ಕಳಂತೆ ಆಗಿರುವೆನೊ ಏನೊ? ಮನಸಿಗೆ ಒಂದು ಕ್ಷಣ ಹಾಗೆನಿಸಿ ಮುಗುಳ್ನಕ್ಕು ಕಿಟಕಿಯಿಂದಾಚೆ ನೋಡ ತೊಡಗಿದೆ.

ನಾವು ತಲುಪಬೇಕಾದ ಸ್ಥಳಕ್ಕೆ ಬಂದಿದ್ದೆವು. ಎತ್ತರದ ಪ್ರದೇಶದಲ್ಲಿ ಪಾರ್ಕಿಂಗ್ ಕಂಡಿತು. ಮಗ ಕೂಡಲೆ ಬ್ರೇಕ್ ಹಾಕಿದನು. ಗಕ್ ಎನ್ನುವ ವಿಚಿತ್ರ ಶಬ್ದದೊಂದಿಗೆ ಕಾರ್ ನಿಂತಿತು.

ಕಣ್ಣೆದುರಿಗೆ ವಿಶಾಲ ಗುಡ್ಡ, ಅದರ ಮೇಲೆ ಕೋಟೆಯ ಪಳೆಯುಳಿಕೆ ಕಾಣಿಸಿತು. ಈಗ ಅಲ್ಲೇ ಮೇಲೆ ಹತ್ತಿ ಹೋಗಬೇಕೆಂದು ಮಗ ಹೇಳಿದ. ಚಾರಣದ ಆರಂಭ. ಮುಂದೆ ಹೋದಂತೆ ಮೆಟ್ಟಿಲುಗಳ ಸಾಲು ಕಂಡವು. ಒಂದೊಂದೇ ಹೆಜ್ಜೆ ನಮ್ಮನ್ನು ಮೇಲಕೆ ಕರೆದುಕೊಂಡು ಹೋಯಿತು. ಮಗನಿಗೆ ಆತಂಕ ಆಗುತ್ತಿರುವುದು ತಿಳಿಯಿತು. ಅರಾಮಾಗಿ ಹತ್ತ ಬಲ್ಲೆ ಎನ್ನುವ ಆಶ್ವಾಸನೆ ಕೊಟ್ಟೆ. ಮಧ್ಯೆ ಮಧ್ಯೆ ‘ನೀರು ಬೇಕಾ?’ ಎಂದು ಕೇಳುತ್ತಿದ್ದ. ನನ್ನ ಉಸಿರಾಟದ ವೇಗವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಅವನ ಮನಸ್ಥಿತಿಯನ್ನು ಅರಿಯುತ್ತ, ಸ್ಪಂದಿಸುತ್ತ ಮೇಲೆ… ಮೇಲೆ… ಹತ್ತುತ್ತಲೇ ಸಾಗಿದೆವು.

‘ಅಮ್ಮಾ ನಿಲ್ಲು!!!’ ನನ್ನ ಎರಡೂ ಭುಜ ಹಿಡಿದು ಮಗ ನಿಲ್ಲಿಸಿದ. ಪ್ರಶ್ನಾರ್ಥಕವಾಗಿ ನಿಂತೆ. ನಿಧಾನಕೆ ತಿರುಗುವಂತೆ ಹೇಳಿದ. ಹಿಂತಿರುಗಿ ನೋಡುತ್ತೇನೆ…
ಆಶ್ಚರ್ಯ!!! ಏನು ಹೇಳಲಿ? ಅಬ್ಬಾ!!!
ಮನಸು ಆರ್ದ್ರಗೊಂಡಿತು. ಆಳಲಿಲ್ಲ ಅಷ್ಟೆ.
ಅದು… ಅದು… ಹೇಗೆ ವರ್ಣಿಸೋದು?
ಮಗ ಮನಸನ್ನು ಮೂಕಗೊಳಿಸಿದ್ದ.
ಕಣ್ಣೆದುರಿಗೆ ವಿಶಾಲ ಸಮುದ್ರ!
ಮೂರು ದಿಕ್ಕಿನಲ್ಲೂ ನೀರೇ ನೀರು!
ಒಂದರ ಮೇಲೊಂದರಂತೆ ಅಲೆಗಳ ನಿರಂತರ ಹೊರಳಾಟ!
ಇನ್ನೊಂದು ದಿಕ್ಕಿನಲ್ಲಿ ಗಿಡ ಗಂಟೆ, ಅಲ್ಲೊಂದು ಇಲ್ಲೊಂದು ಬಿಲ್ಡಿಂಗ್. ವಿಶ್ವ ಸುಂದರಿಯರು ಗೆದ್ದಾಗ ಹೇಗೆ ಮಾಡುತ್ತಾರೋ ಹಾಗೆ ಮಾಡಿದೆ. ಅಂಗೈಯಿಂದ ಬಾಯಿ ಮುಚ್ಚಿಕೊಂಡೆ. ಆಗ ಮಗನ ಮುಖದಲ್ಲಿ ಸಂತೃಪ್ತ ಭಾವ.

ನಾರ್ತ್ ಗೋವಾದ ಬರ್ದೇಜ್‌ನಲ್ಲಿದ್ದ ಫೋರ್ಟ್ ಮೇಲೆ ನಿಂತಿದ್ದೆವು. ತಾಯಿ ಮಗ ಇಬ್ಬರೂ ಸಮುದ್ರ ತೀರದ ಸೂರ್ಯೋದಯವನ್ನು ಎತ್ತರದಲ್ಲಿದ್ದ ‘ಛಪೋರಾ ಫೋರ್ಟ್‌’ನಿಂದ ವೀಕ್ಷಿಸಿದೆವು. ಕಣ್ಣಿಗೆ ಆನಂದ, ಮನಸಿಗೆ ಮುದ. ಇಡೀ ದೇಹಕ್ಕೆ ಉತ್ಸಾಹ, ಉಲ್ಲಾಸ, ಎಲ್ಲವೂ ಏಕಕಾಲಕ್ಕೆ ಆದ ಅನುಭವ. ಪ್ರಕೃತಿಯ ಮಡಿಲಲ್ಲಿ ಎಲ್ಲಿಲ್ಲದ ನೆಮ್ಮದಿಯ ಕಾಣುತ್ತ ಮೌನವಾಗಿ ಕೆಲ ಸಮಯ ಕುಳಿತೆವು. ಕೆಳಗೆ ಹರಿಯುತ್ತಿರುವ ಛಪೋರಾ ನದಿ, ಸಾಗರ ಸೇರುವ ಸಡಗರದಲ್ಲಿತ್ತು. ನಾವಿಬ್ಬರು ಸೆಲ್ಫಿಯಲಿ!

ಮನಸು ತೃಪ್ತಿಯಾಗುವಷ್ಟರಲ್ಲಿ ಸೂರ್ಯ ಚುರುಕಾಗ ತೊಡಗಿದ. ನಿಧಾನಕೆ ಬಿಸಿಲೇರುತ್ತಿತ್ತು. ಕೆಳಗಿಳಿಯುವಂತೆ ಮಗ ಸೂಚಿಸಿದ.

ಅಲ್ಲೇ ಇದ್ದ ಚಿಕ್ಕ ಹೋಟೆಲ್‌‌ನಲ್ಲಿ “ಒಂದು ಕಪ್ ಸ್ಟ್ರಾಂಗ್ ಸಕ್ಕರೆ ಇಲ್ಲದ ಕಾಫಿ, ಮ್ಯಾರಿ ಬಿಸ್ಕೆಟ್ಸ್” ಕೊಡಿಸಿದ. ಅವನಿಗೆ ಅದರ ಅಭ್ಯಾಸವಿರಲಿಲ್ಲ. ಆದರೆ ಬೆಳಗಿನ ನನ್ನ ಅಗತ್ಯವನ್ನು ಅರಿತು ಕೊಡಿಸಿದಾಗ ಮತ್ತೆ ಮನಸು ಭಾವುಕವಾಯಿತು. ಮೂಕಳಾಗಿ ಕಾಫಿ ಸವಿದೆ.

ಅಲ್ಲಿಂದ ಮತ್ತೆ ಕಾರಿನಲ್ಲಿ ಹೊರಟೆವು. ಅನೇಕ ಬೀಚ್‌ಗಳನ್ನು ವೀಕ್ಷಿಸಿದೆವು, ಬೋಟಿಂಗ್ ಮಾಡಿದೆವು, ಪ್ಯಾರಾ ಗ್ಲೈಡಿಂಗ್ ಹಾರಾಟದ ಥ್ರಿಲ್ ಅನುಭವಿಸಿದೆವು. ಒಂದು ದಿನ ಅತ್ಯಂತ ಹೆಚ್ಚು ಸವಲತ್ತಿರುವ, ವೈಭವ ಪೂರಿತ ‘ಜೆನ್ಸ್ ರೆಸಾರ್ಟ್‌’ನಲ್ಲಿ ತಂಗಿದೆವು.

ಒಮ್ಮೆ ಮಧ್ಯಾನ ಸೌತ್ ಥಾಲಿ ಊಟ ಮಾಡುವ ಆಸೆಯಾಗಿದೆ ಎಂದು ಮಗನಿಗೆ ತಿಳಿಸಿದೆ. ಪಾಪ ಮಗ ಗೋವಾದಲ್ಲಿ ಉಡುಪಿ ಹೋಟೆಲ್ ಹುಡುಕುವಂತಾಯಿತು. ಮೊಬೈಲ್‌ನಲ್ಲಿ ಮ್ಯಾಪ್ ನೋಡುತ್ತ ಸರ್ಚ್ ಮಾಡಿದ. ಗೋವಾದಲ್ಲಿ ಸೌತ್ ಥಾಲಿ ನೆನಪಿಸಿಕೊಂಡರೆ ಬಡಪಾಯಿ ಮಗ ಏನು ಮಾಡಬೇಕು? ಸಿಕ್ಕಾಗ ಥೇಟ್ ಆರ್ಕಿಮಿಡಿಸ್‌ನಂತೆ ‘ಸಿಕ್ಕಿತು ಸಿಕ್ಕಿತು’ ಕೂಗಿದ. ಇಬ್ಬರಿಗೂ ನಗು ತಡೆಯಲಾಗಲಿಲ್ಲ.

ಆಧುನಿಕ ಉಡುಪಿನಲ್ಲಿ ಮಗನೊಂದಿಗೆ ಕೈ ಕೈ ಹಿಡಿದುಕೊಂಡು ಹೊರಟಿದ್ದರೆ, ಜನ ನಿಂತು ನೋಡುತ್ತಿತ್ತು. ಅಕ್ಕಪಕ್ಕದವರಿಗೆ ಕರೆದು ತೋರಿಸಿತು. ಗೋವಾಗೆ ಯುವ ಜೋಡಿಗಳು, ನವ ದಂಪತಿಗಳು ಹೋಗುವುದೇ ಹೆಚ್ಚು. ಪರಿವಾರ ಸಮೇತವೂ ಹೋಗುತ್ತಾರೆ. ಆದರೆ ತಾಯಿ ಮಗನ ಜೋಡಿ ಅಪರೂಪ ಎನಿಸಿ, ವಿಶೇಷ ಆಸಕ್ತಿಯಿಂದ ಗಮನಿಸಿದರು.

‘ಪ್ರಯಾಣ’ ಅನ್ನೋದು ಮನಸಿಗೆ ಇಷ್ಟವಾದರೆ, ಹಿಡಿಸಿದರೆ, ಥ್ರಿಲ್ ಕೊಡುತ್ತದೆ. ಅದೊಂದು ರೋಮಾಂಚನವೇ ಸರಿ! ಇಲ್ಲವಾದರೆ ಅತ್ಯಂತ ಭಾರವಾದ ಕೆಲಸ. ಊಟ, ತಿಂಡಿ, ತಿನಿಸಿಗಾಗಿ ಅನೇಕರು ಹಿಂಸೆ ಅನುಭವಿಸುವುದೂ ಇದೆ. ಆದರೆ ನನಗೆ ಯಾವತ್ತಿಗೂ ಪ್ರಯಾಣವೆಂದರೆ ಪ್ರೀತಿಯ ಸಮಯ! ಐ ಲೌ ಟ್ರಾವೆಲ್ಲಿಂಗ್! ಇದು ಮಗನೊಂದಿಗೆ ಗೋವಾಗೆ ಹೋಗಿ ಬಂದದ್ದೊಂದು ಸುಧೀರ್ಘ ಪಯಣ.

ಮಗ ಹಿಂದೆ ತಾನು ನೋಡಿದ ಸ್ಥಳವನ್ನು ‘ನಮ್ಮವ್ವನೂ’ ನೋಡಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ಗೋವಾಗೆ ಟಿಕೆಟ್ಸ್ ಬುಕ್ ಮಾಡಿಸಿದ್ದ. ನಾನು ನೀರು ಕಂಡ ಕೂಡಲೆ ಮಕ್ಕಳಂತೆ ಕೂಗಿದ್ದೆ. ಅವನು ಅಂದುಕೊಂಡ ಸಮುದ್ರವನ್ನು ತೋರಿಸಿ ಸರ್‌ಪ್ರೈಜ್ ನೀಡಬೇಕೆಂದಿದ್ದ. ಅದಕ್ಕೇನೂ ತೊಂದರೆ ಆಗಲಿಲ್ಲ. ನನಗೆ ತಿಳಿಯುತ್ತದೊ ಎನ್ನುವ ಆತಂಕ ಮಗನಿಗಿತ್ತು. ಪ್ರಕೃತಿ ಪ್ರೀತಿಸುವ ನನಗೆ ನಿಜಕ್ಕೂ ಸಮುದ್ರ ನೋಡಿದಾಗ ಸರ್‌‌ಪ್ರೈಜ್ ಆಯಿತು.

ಇಂತಹ ಮಕ್ಕಳು ಸಿಗುವುದು ಅಪರೂಪ. ಹಿಂದೆ ನಮ್ಮವ್ವ ಹೇಳುತ್ತಿದ್ದ ಮಾತು ನೆನಪಾಗುತ್ತಿದೆ, ‘ಮಕ್ಕಳು ಎಲ್ಲರಿಗೂ ಇರ್ತಾರ ಆದ್ರ ಕಾಳಜಿ ಮಾಡೊ ಮಕ್ಕಳು ಕೆಲವರಿಗೆ ಮಾತ್ರ ಇರ್ತ್ತಾರೆ.’ ಅವ್ವ ಹೇಳಿದ ಮಾತು ಸತ್ಯ ಇರಬಹುದು. ಆದರೆ ತಾಯಿಯಾದವಳು ಯಾವತ್ತು ಎಲ್ಲಾ ಮಕ್ಕಳಿಗೂ ಒಂದೇ ಭಾವನೆಯಿಂದ ಪ್ರೀತಿ ಹಂಚುತ್ತಾಳೆ.

ಭಾರತ ದೇಶದಲ್ಲಿ ವಿವಾಹ ಒಂದು ಸಂಸ್ಥೆಯಾಗಿ, ಇಲ್ಲಿ ಅನೇಕ ತಾಯಂದಿರು ತಮ್ಮ ಕನಸುಗಳನ್ನು ಹೊಸಕಿ ಹಾಕಿ, ಕುಟುಂಬದ ಶ್ರೇಯಸ್ಸಿಗಾಗಿ, ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ಸುಪ್ತ ಮನಸಿನ ಬಯಕೆಗಳನ್ನು ಅಲ್ಲೇ ಅದುಮಿಟ್ಟು, ಭಾವನೆಗಳಡಿ ಸಮಾಧಿಯಾಗಿಸಿದ್ದಾರೆ. ಅರ್ಥ ಮಾಡಿಕೊಳ್ಳುವ ಮಕ್ಕಳು ಅದನ್ನೆಲ್ಲಾ ಅರಿತು, ಜೀವನ ಸುಂದರವಾಗಿಸಿದರೆ, ಅತೃಪ್ತಿ ಅಳಿಸಿ, ಪ್ರತಿಯೊಬ್ಬರೂ ಸಂತೃಪ್ತವಾಗಿ ಜೀವನ ಸಾಗಿಸಬಹುದು ಅಲ್ಲವೆ?

ಸಿಕಾ

Don`t copy text!