ಜ್ಞಾನ ಜ್ಯೋತಿ ಶರಣೆ ನೀಲಾಂಬಿಕೆ

ಜ್ಞಾನ ಜ್ಯೋತಿ ಶರಣೆ ನೀಲಾಂಬಿಕೆ

ಹನ್ನೆರಡನೆಯ ಶತಮಾನದಲ್ಲಿ ಅನೇಕ ಶರಣರು ಸಾಧಕರು ತಮ್ಮ ಅನುಭಾವದಿಂದ ಕಲ್ಯಾಣ ಕ್ರಾಂತಿಗೆ ಕೊಡುಗೆಯಾದರೂ. ಅವರಲ್ಲಿ ಅತ್ಯಂತ ವಿಶಿಷ್ಟ ಪ್ರಮುಖ ಚಿಂತಕಿ ಅನುಭಾವಿ ದಿಟ್ಟ ನಿಲುವಿನ ಶರಣೆ ನೀಲಲೋಚನೆ ಅಥವಾ ನೀಲಾಂಬಿಕೆ ಮತ್ತು ನೀಲಮ್ಮ ಎಂದು ಕರೆಯಲ್ಪಟ್ಟವಳು.

ನೀಲಮ್ಮ ಬಸವಣ್ಣನವರ ಎರಡನೆಯ ಹೆಂಡತಿ. ಮೊದಲನೆಯವಳು ಸಹೋದರ ಮಾವ ಬಲದೇವನ ಮಗಳು. ನೀಲಾಂಬಿಕೆ ನೀಲಲೋಚನೆ ನೀಲಮ್ಮ ಮಾಯಾದೇವಿ ಎಂತೆಲ್ಲ ಹೆಸರಿರುವ ನೀಲಮ್ಮನ ಅಪ್ಪ ಅಮ್ಮ ಇವರ ಬಗ್ಗೆ ಸಾಕಷ್ಟು ಗೊಂದಲಗಳು ಇವೆ .ಹರಿಹರ ಬಸವಣ್ಣನವರ ಮತ್ತು ಭೀಮ ಕವಿಗಳು ಮಡದಿ ನೀಲಾಂಬಿಕೆಯನ್ನು ಮಾಯಿದೇವಿ ಎಂದು ಕರೆದಿದ್ದಾರೆ. ಅಲ್ಲದೆ ಹರಿಹರನು ಸಿದ್ಧರಸ ಮಂತ್ರಿಗಳ ಆಸ್ತಿಗೆ ಬಸವಣ್ಣನೇ ವಾರಸುದಾರನಾದನು ಎಂದು ಹೇಳಿದ್ದಾನೆ.ಲಕ್ಕಣ್ಣ ದಂಡೇಶನು ನೀಲಮ್ಮ ಬಿಜ್ಜಳನ ತಂಗಿ ಎಂದು ಹೇಳಿದ್ದಾನೆ.ಬಿಜ್ಜಳನ ತಾಯಿ ಸತ್ತ ಮೇಲೆ ಬಿಜ್ಜಳ ಮತ್ತು ಆತನ ತಮ್ಮ ಕರ್ಣ ದೇವನು ಸಿದ್ಧರಸ ಮತ್ತು ಪದ್ಮಗಂಧಿಯವರ ಮನೆಯಲ್ಲಿ ಬೆಳೆದರು ಎನ್ನುವ ಐತಿಹಾಸಿಕ ಸಂಗತಿಗಳಿವೆ ಹೀಗಾಗಿ ನೀಲಮ್ಮ ಬಿಜ್ಜಳನ ಸಾಕು ತಂಗಿ ಎಂದು ಗೊತ್ತಾಗುತ್ತದೆ.
ಬ್ರಾಹ್ಮಣ ಕುಟುಂಬದ ಗಂಗಾಂಬಿಕೆಗಿಂತ ಜೈನ ಧರ್ಮದ ನೀಲಾಂಬಿಕೆಯ ವಚನ ರಚನಾ ಶೈಲಿ ಅನುಭಾವ ಅರ್ಥಪೂರ್ಣ ಮತ್ತು ಪ್ರಭಾವಿಶಾಲಿಯಾಗಿವೇ.
ಗಂಗಾಂಬಿಕೆಗೆ ಸಿದ್ಧರಸರೆಂಬ ಹಾಗು ನೀಲಾಂಬಿಕೆಗೆ ಬಾಲಸಂಗಯ್ಯನಿದನೆಂದು ತಿಳಿದು ಬರುತ್ತದೆ.
ಗಂಗಾಂಬಿಕೆಯ ಮಗ ಬಾಲ್ಯದಲ್ಲಿಯೇ ತೀರಿಕೊಂಡಾದ್ದು ತಿಳಿದು ಬರುತ್ತದೆ. ಅಂತೆಯೇ ಗಂಗಾಂಬಿಕೆಗೆ ಸಂತೈಸುತ್ತ ಬಸವಣ್ಣನವರು ಅವಳ ಕಂದ ಬಾಲ ಸಂಗಾ ನಿನ್ನ ಕಂದ ಚೆನ್ನಲಿಂಗವೆಂದಿದ್ದಾರೆ.
ನೀಲಾಂಬಿಕೆಯು ಬಸವಣ್ಣನವರ ಎರಡನೆಯ ಧರ್ಮ ಪತ್ನಿ ಹಾಗು ವಿಚಾರ ಕ್ರಾಂತಿಯಲ್ಲಿ ಸಹಧರ್ಮಿಣಿ . ಗಂಗಾಂಬಿಕೆಯ ಆಶ್ರಯದಲ್ಲಿ ಬಾಲ ಸಂಗಯ್ಯ ಬೆಳೆಯುತ್ತಾ ಅವಳನ್ನೇ ಹೆಚ್ಚು ಅವಲಂಬಿಸುತ್ತಾನೆ. ನೀಲಾಂಬಿಕೆ ಮಹಾ ಮನೆಯ ಎಲ್ಲ ವ್ಯವಹಾರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವವಳಾಗಿರುತ್ತಾಳೆ .

ಮಹಾ ಮನೆಯ ದಾಸೋಹ ಪ್ರಸಾದ ಸಿದ್ಧ ಪಡಿಸುವುದು ಜಂಗಮರ ಸೇವೆ ಒಟ್ಟಾರೆ ಬಸವಣ್ಣನವರಕಾರ್ಯದಲ್ಲಿ ತುಂಬಾ ತೊಡಗಿಸಿಕೊಂಡ ಶ್ರೇಷ್ಠ ಮಹಿಳೆ.
ಬಸವಣ್ಣನವರು ಕೂಡ ಪೃಥ್ವಿದಗ್ಗಳೇ ಚೆಲುವೆ ನೀಲಲೋಚನೆ ಎಂದಿದ್ದಾರೆ. ಬಸವಣ್ಣನವರ ಜೀವನದಲ್ಲಿ ನೀಲಾಂಬಿಕೆಯ ಪಾತ್ರ ಬಹು ದೊಡ್ಡದು .
ಬಸವಣ್ಣನವರ ಹೆಜ್ಜೆ ಹೆಜ್ಜೆಯಲ್ಲಿ ನೀಲಮ್ಮ ಜವಾಬ್ದಾರಿಯುತವಾಗಿ ತನ್ನ ಕಾರ್ಯ ನಿರ್ವಹಿಸಿದ್ದಾಳೆ.
ವರ್ಣ ಸಂಕರದಿಂದ ಕಲ್ಯಾಣದ ಐಕ್ಯತೆಗೆ ಧಕ್ಕೆ ಬರ ಹತ್ತಿತು . ಅತ್ತ ಬಸವಣ್ಣ ಕಲ್ಯಾಣ ತೊರೆದು ಕೂಡಲ ಸಂಗಮಕ್ಕೆ ಪಯಣ ಬೆಳೆಸಿದರು.
ಮುಂದೆ ಕೆಲ ದಿನಗಳಲ್ಲಿ ಅಸ್ಥಿರತೆ ಅರಾಜಕತೆ ನಡೆಯ ಹತ್ತಿತು . ಬಸವಣ್ಣನವರು ಹಡಪದ ಅಪ್ಪಣನವರ ಮೂಲಕ ನೀಲಮ್ಮಳನ್ನು ಕರೆದುಕೊಂಡು ಬರಲು ಆಜ್ಞಾಪಿಸುತ್ತಾರೆ.ಆಗ ನೀಲಮ್ಮ ಬಸವಣ್ಣನಂತಹ ಮಹಾ ಘನ ಮಹಿಮ ತನ್ನನ್ನು ಕೊನೆಗಳಿಗೆಯಲ್ಲಿ ಕೂಡಲ ಸಂಗಮಕ್ಕೆ ಕರೆ ಹೇಳಿದರೆ ಎಂದು ಅವರನ್ನೇ ಪ್ರಶ್ನಿಸಿದ್ದಾಳೆ.?
ನೀಲಾಂಬಿಕೆಯು ಸಂಗಯ್ಯ ಎಂಬ ಅಂಕಿತದಲ್ಲಿ ಸುಮಾರು 288 ವಚನಗಳನ್ನು ರಚಿಸಿದ್ದಾಳೆ .ಬಸವಣ್ಣನವರ ಅನುಭವದಿಂದ ವಿವರವ ಕಂಡು ವಿಚಾರ ಪತ್ನಿಯಾದೆನು ಎಂದು ಹೇಳಿಕೊಂಡಿದ್ದಾಳೆ.ಅನುಭಾವದ ಎತ್ತರ ಮತ್ತು ಅಭಿವ್ಯಕ್ತಿಯ ಬಿತ್ತರವನ್ನು ಏಕಕಾಲಕ್ಕೆ ವ್ಯಕ್ತಗೊಳಿಸುವ ಕಾವ್ಯ ಕೌಶಲ್ಯ ಅನುಪಮವಾದದ್ದು. “ಮಾತಿನ ಹಂಗೇಕೆ ಮಾನವೇಕಾಂತದಲ್ಲಿ ನಿಂದಬಳಿಕ “ ಎಂದೆನ್ನುವ ನೀಲಮ್ಮನ ವಚನದಲ್ಲಿ ಬಸವಣ್ಣನವರ ಸ್ತುತಿ ವರ್ಣನೆ ಮತ್ತು ಅವರ ಅಗಲುವಿಕೆಯ ನೋವು ಕಳವಳ ವ್ಯಕ್ತ ಪಡಿಸಿದ್ದಾಳೆ.

ಬಸವಣ್ಣನವರು ಕಲ್ಯಾಣ ತೊರೆದದ್ದು ನೀಲಮ್ಮಳು ಐಕ್ಯವಾಗಿದ್ದು
ಹರಳಯ್ಯನವರ ಮಗ ಶೀಲವಂತನಿಗೂ ಬ್ರಾಹ್ಮಣರ ಮಧುವರಸರ ಲಾವಣ್ಯಳಿಗೂ ಮದುವೆ ಏರ್ಪಟ್ಟಾಗ ಆದ ಜಾತಿ ಸಂಕರವು ಕಲ್ಯಾಣದಲ್ಲಿ ತಲ್ಲಣವನ್ನು ಹುಟ್ಟು ಹಾಕಿತು . ನಾರಾಯಣ ಕ್ರಮಿತ ಮತ್ತು ವಿಷ್ಣು ಭಟ್ಟರ ಕಪಟತನದಿಂದ ಬಸವಣ್ಣನವರಿಗೆ ಕಲ್ಯಾಣದಿಂದ ಗಡಿಪಾರು ಮಾಡುವ ಘೋರ ಶಿಕ್ಷೆಗೆ ಆದೇಶಿಸಲಾಗುವುದು . ಹಡಪದ ಅಪ್ಪಣ್ಣನವರ ಜೊತೆಗೆ ಕೂಡಲ ಸಂಗಮಕ್ಕೆ ಪ್ರಯಾಣ ಬೆಳೆಸಿದ ಬಸವಣ್ಣನವರು ಅತ್ಯಂತ ನೋವಿನಿಂದ ತಾನು ಮಾಡಿದ
ಕ್ರಾಂತಿಯ ಕಲ್ಯಾಣವು ತನ್ನ ಕಣ್ಣ ಮುಂದೆಯೇ ಹಾಳಾಗುತ್ತಿರುವುದನ್ನು ನೋಡಿ ಮುಮ್ಮಲ ಮರಗಿದರು..
ಕೂಡಲ ಸಂಗಮದಲ್ಲೊಮ್ಮೆ ಬಸವಣ್ಣನವರು ಹಡಪದ ಅಪ್ಪಣ್ಣವರನ್ನು ಕರೆದು ತಮ್ಮ ವಿಚಾರ ಪತ್ನಿ ನೀಲಮ್ಮಳನ್ನು ಕರೆಹೇಳುತ್ತಾರೆ .
ಕಲ್ಯಾಣಕ್ಕೆ ಬಂದ ಹಡಪದ ಅಪ್ಪಣ್ಣನವರು ನೀಲಮ್ಮನವರಿಗೆ ಬಸವಣ್ಣನವರ ಇಂಗಿತವನ್ನು ವ್ಯಕ್ತ ಪಡಿಸುತ್ತಾರೆ .
ಆಗ ನೀಲಮ್ಮಳು

ನೋಡು ನೋಡು ನೋಡು ನೋಡು ಲಿಂಗವೇ
ನೋಡು ಬಸವಯ್ಯನವರು ಮಾಡುವಾಟವ
ಸಂಗಮಕ್ಕೆ ಬಸವಯ್ಯನವರು ನಮ್ಮನು ಬರ ಹೇಳಿದರಂತೆ.
ಅಲ್ಲಿರುವ ಸಂಗಯ್ಯ ಇಲ್ಲಿಲ್ಲವೇ ?

ಎಂತಹ ದಿಟ್ಟತನವನ್ನು ನೀಲಮ್ಮ ವ್ಯಕ್ತ ಪಡಿಸುತ್ತಾಳೆ .ಅಲ್ಲಿ ಇಲ್ಲಿ ಎಂಬ ಉಭಯ ಭಾವವು ಶರಣರಿಗೆ ಸಲ್ಲದು ಎನ್ನುವ ಆತಂಕವನ್ನು ಹೊರ ಹಾಕುತ್ತಾಳೆ.
ಅದೇ ರೀತಿ ನೀಲಮ್ಮಳು ಈ ವಚನದಲ್ಲಿ ಹೀಗೆ ಹೇಳಿದ್ದಾಳೆ.

ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ?
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ?
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ?
ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ ಬಳಿಕ
ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?

ತಾನು ಯಾರನ್ನಾದರೂ ಸೇರುವೆನೆಂದು ಚಿಂತಿಸುವರೇ ,ತಾನು ಯಾರನ್ನಾದರೂ ಹೊಂದುವನೇ ಎಂದು ಬಸವಣ್ಣನವರು ಅನುಮಾನ ಪಡುವರೇ ? ಯಾರಾದರೂ ಆಶ್ರಯದಲ್ಲಿ ಬಂಧನದಲ್ಲಿ ಇರುವೆನೆಂಬ ಪ್ರಲಾಪವು ಬಸವಣ್ಣನವರಿಗಿದೆಯಾ ?ಬಸವಣ್ಣನವರ ರೂಪವು ತನ್ನ ಕರಸ್ಥಲದಲ್ಲಿರಲು ಕೂಡಲ ಸಂಗಯ್ಯನ ಹಂಗೇಕೆ ಎಂದು ಪ್ರಶ್ನಿಸಿದ್ದಾಳೆ .

ತಾನು ಬಿಜ್ಜಳನ ಕುಟುಂಬದವಳು ಎಂದು ಸೂಕ್ತವಾಗಿ ಹೇಳುತ್ತಾ

ನಾಡನಾಳಹೋದರೆ,
ಆ ನಾಡು ಆಳುವ ಒಡೆಯಂಗೆ ನಾಡೆ ಹಗೆಯಾಯಿತ್ತು.
ಹಗೆಯಳಿದು ನಿಸ್ಸಂಗವಾಯಿತ್ತು.
ನಿಸ್ಸಂಗ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ನಾನು.

ಬಿಜ್ಜಳನ ಸಾಕು ತಂಗಿಯಾದ ನೀಲಮ್ಮಳು ನಾಡನ್ನು ಆಳ ಹೋದರೆ ಅದು ,ಆ ನಾಡಿನ ಕೋಪಕ್ಕೆ ಕೆಂಗೆಣ್ಣಿಗೆ ಗುರಿಯಾಗಿ ನಾಡು ಹಾಳಾಯಿತ್ತು ಎಂದು ಬಿಜ್ಜಳನ ವೈಫಲ್ಯವನ್ನು ಎತ್ತಿ ತೋರುತ್ತಾಳೆ .ಹಗೆಯು ಅಳಿದು ನಿಸಂಗವಾಯಿತ್ತು ,ಮುಂದೆ ನಿಸಂಗವೇ ವೇದ್ಯವಾಗಿ ಸಂಗಯ್ಯನಲ್ಲಿ ಮುಕ್ತಳಾದೆನು ಎಂದು ಹೇಳಿದ್ದಾಳೆ.

ಕೊನೆಕಾಲದಲ್ಲಿ ಬಸವಣ್ಣನವರನ್ನು ಭೇಟಿಯಾಗಿ ಅವರ ಮುಂದಿನ ಗೊತ್ತು ಗುರಿಗಳನ್ನು ಅರಿತು ಅದರಂತೆ ಸಮಾಜ ಕಟ್ಟುವ ಕೆಲಸಕ್ಕೆ ಬದ್ಧಳಾಗಬೇಕೆಂದು
ನೀಲಮ್ಮಳು ಹಿರಿಯ ಶರಣ ಹಡಪದ ಅಪ್ಪನವರ ಜೊತೆಗೆ ಕೂಡಲ ಸಂಗಮಕ್ಕೆ ಪಯಣ ಬೆಳೆಸುತ್ತಾಳೆ. ಆದರೆ ರಕ್ಕಸ ತಂಗಡಗಿ ಮುಟ್ಟು ವಷ್ಟರಲ್ಲಿ ಅಪ್ಪ ಬಸವಣ್ಣನವರು ಸಂಗಮದಲ್ಲಿ ಐಕ್ಯವಾದ ಸುದ್ಧಿ ಬರ ಸಿಡಿಲಿನಂತೆ ಅಪ್ಪಳಿಸಿತು .ನೀಲಮ್ಮಳಿಗೆ ಅಗಾಧ ನೋವು ಕಳವಳ ಆತಂಕವಾಗುತ್ತದೆ.

ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು.
ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು. ನಮ್ಮ ಸಂಗಯ್ಯನಲ್ಲಿ
ಬಸವಯ್ಯನೈಕ್ಯ ಬಯಲಿಲ್ಲದ ಬಯಲು.

ಸ್ತ್ರೀ ಕುಲೋದ್ಧಾರಕ ಬಸವಣ್ಣನವರು ಐಕ್ಯವಾದ ಸುದ್ಧಿಯನು ನೀಲಮ್ಮಳು ತನ್ನ ವಚನದಲ್ಲಿ ನೋವು ವ್ಯಕ್ತ ಪಡಿಸುತ್ತಾಳೆ.
ನಾಡಿನ ಅಕ್ಕ ತಂಗಿಯರ ಹೆಣ್ಣುಗಳಿರಾ ನೋಡ ಬನ್ನಿ ಅಕ್ಕನರಸ ಅಂದರೆ ಗಂಗಾಂಬಿಕೆಯ ಒಡೆಯ ಬಸವಣ್ಣನವರು ಬಯಲ ಕಂಡು ಬಟ್ಟ ಬಯಲಾದನು .ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಣ್ಣನು .ನಮ್ಮ ಸಂಗಯ್ಯನಲ್ಲಿ ಬಸವಣ್ಣನವರ ಐಕ್ಯವು ಬಯಲಿಲ್ಲದ ಬಯಲು ಎಂದು ತನ್ನ ಅಳಲು ನೋವು ಮತ್ತು ಅಷ್ಟೇ ಆಧ್ಯಾತ್ಮಿಕ ಪ್ರಭುದ್ಧತೆ ವ್ಯಕ್ತ ಪಡಿಸುತ್ತಾ ಬಯಲಿಲ್ಲದ ಬಯಲು ಎಂದಿರುವುದು ಅವಳ ಸ್ಥಿತ ಪ್ರಜ್ಞೆಗೆ ಸಾಕ್ಷಿಯಾಗುತ್ತದೆ.

ನಾನಾರ ಹೆಸರ ಕುರುಹಿಡಲಯ್ಯಾ ಬಸವಾ ?
ನಾನಾರ ರೂಪ ನಿಜವಿಡಲಯ್ಯಾ ಬಸವಾ ?
ನಾನಾರ ಮಾತ ನೆಲೆಗೊಳಿಸಲಯ್ಯಾ ಬಸವಾ ?
ನಾನಾರ ಮನವನಂಗೈಸಲಯ್ಯಾ ಬಸವಾ ?
ಎನ್ನ ಸುಖಾಕಾರಮೂರ್ತಿ ಬಸವನಡಗಿದಬಳಿಕ ಎನಗೆ ಹೆಸರಿಲ್ಲ.
ರೂಪು ನಿರೂಪವಾಯಿತ್ತಯ್ಯಾ ಸಂಗಯ್ಯಾ, ಬಸವನಡಗಿದ ಬಳಿಕಬಸವಣ್ಣನವರು ಐಕ್ಯವಾದ ಬಳಿಕ ತಾನು ಯಾರ ಹೆಸರನ್ನು ಕೂಗಿ ಕರೆಯಲಿ , ಬಸವಣ್ಣನವರಿಲ್ಲದ ಬದುಕಿನಲ್ಲಿ ಯಾರ ಭಾವ ರೂಪವನ್ನು ನಿಜ ಮಾಡಲಿ ,ಬಸವಣ್ಣನಿಲ್ಲದ ಜೀವನದಲ್ಲಿ ತಾನು ಯಾರ ಮಾತನ್ನು ನೆಲೆಗೊಳಿಸಲು ಸಾಧ್ಯವು ? ಬಸವಣ್ಣನವರೇ ತನ್ನ ಸರ್ವಸ್ವವಾದ ಕಾರಣ ತಾನು ಯಾರ ಮನವನ್ನು ಅಂಗೈಸಲಿ ಎಂದು ಕಳವಳ ವ್ಯಕ್ತ ಪಡಿಸುತ್ತಾ ತನ್ನ ಸಾಕಾರಮೂರ್ತಿ ಸುಖ ದುಃಖ ಹಂಚಿಕೊಂಡ ಮಹಾ ಮಣಿಹನಿಲ್ಲದ ಬಳಿಕ ತನಗೆ ಹೆಸರಿಲ್ಲ ತನ್ನ ರೂಪು ನಿರೂಪವಾಯಿತ್ತು ಸಂಗಯ ಬಸವನದಾಗಿದೆ ಬಳಿಕ ಎಂದಿದ್ದಾಳೆ ನಿಲಮ್ಮೆ. ಸಹಜವಾದ ನೋವು ಇಲ್ಲಿ ವ್ಯಕ್ತವಾಗುತ್ತದೆ.

ಪರಿವರ್ತನೆಯ ಹರಿಕಾರ ಬಸವಣ್ಣ ಕೂಡಲ ಸಂಗಮದಲ್ಲಿ ಐಕ್ಯವಾದ ನೋವನ್ನು ನೀಲಮ್ಮ ತನ್ನ ಇನ್ನೊಂದು ವಚನದಲ್ಲಿ ಅತ್ಯಂತ ಅರ್ಥಬದ್ಧವಾಗಿ ಮಾರ್ಮಿಕವಾಗಿ ನಿರೂಪಿಸಿದ್ದಾಳೆ.

ಬಸವನರಿವು ನಿರಾಧಾರವಾಗಿತ್ತು
ಬಸವನ ಮಾಟ ನಿರ್ಮಾಟವಾಗಿತ್ತು
ಬಸವನ ಭಕ್ತಿ ಬಯಲನೆ ಕೂಡಿ ನಿರ್ವಯಲಾಯಿತ್ತು
ಬಸವಾ ಬಸವಾ ಬಸವಾ ಎಂಬ ಶಬ್ದವಡಗಿ
ನಿಶಬ್ದವಾಯ್ತ್ತಯ್ಯ ಸಂಗಯ್ಯಾ.

ಬಸವಣ್ಣನವರು ಅನುಭಾವದ ನೆಲೆಯಲ್ಲಿ ನೀಡಿದ ಕಾಯಕ ದಾಸೋಹದ ಸಿದ್ಧಾಂತಗಳು ಅವರು ನೀಡಿದ ಅರಿವು ನಿರಾಧಾರವಾಯಿತ್ತು. ಶೂನ್ಯ ಭಾವ ಆವರಿಸಿತ್ತು.
ಬಸವಣ್ಣನವರು ಕಲ್ಯಾಣವನ್ನು ಒಂದು ಸಮತೆಯ ಸುಂದರ ಮಾಟವನ್ನಾಗಿ ಮಾಡಿದ್ದರು. ಬಸವಣ್ಣನವರಿಲ್ಲದ ಕಾರಣ ಆ ಸುಂದರ ಮಾಟವು ನಿರ್ಮಾಟವಾಗಿತ್ತು. ಮಹಾ ಮನೆ ಹಾಳಾಯಿತ್ತು ಅನುಭವ ಮಂಟಪವು ಬೆಂಕಿಗೆ ಗುರಿಯಾಗಿತ್ತು ಎಂದು ಸೂಕ್ಷ್ಮವಾಗಿ ಹೇಳುತ್ತಾಳೆ.ಬಸವಣ್ಣನವರು ಭಕ್ತಿ ಮಾರ್ಗದಲ್ಲಿ ಧರ್ಮವನ್ನು ಕಟ್ಟಿ ಬಯಲು ಶೂನ್ಯ ಮಹಾಬೆಳಗು ಚಿದ್ಬೆಳಕು ಎಂಬರ್ಥದಲ್ಲಿ ನಿರೂಪಿಸಿ ಸಾಧಿಸಿದವರು. ಅವರಿಲ್ಲದ ಕಾರಣ ಬಸವಣ್ಣನವರ ಭಕ್ತಿ ಬಯಲೊಳಗೆ ಕೂಡಿ ನಿರ್ವಯಲಾಯಿತ್ತು . ಧರ್ಮದ ಧ್ಯೇಯ ಉದ್ಧೇಶಗಳು ಸಮತೆಯ ಪರಿಕಲ್ಪನೆ ಹಾಳಾದವೇ ಎಂದು ಆತಂಕವನ್ನು ವ್ಯಕ್ತ ಪಡಿಸುತ್ತಾಳೆ ನೀಲಮ್ಮಳು.
ಕಲ್ಯಾಣದ ತುಂಬೆಲ್ಲ ಬಸವಾ ಬಸವಾ ಬಸವಾ ಎಂಬ ಶಬ್ದವು ಅಧಿಕವಾಗಿತ್ತು ಬಸವಾಕ್ಷರಗಳೆ ಮಂತ್ರವಾಗಿತ್ತು . ಇಂತಹ ಬಸವಾ ಬಸವಾ ಎಂಬ ಶಬ್ದವು ಅಡಗಿ
ನಿಶಬ್ದವಾಯಿತ್ತು ಸಂಗಯ್ಯಾ ಎಂದು ಸಾಂದರ್ಭಿಕವಾಗಿ ತನ್ನ ಅಳಲನ್ನು ತೋಡಿಕೊಂಡ ನೀಲಮ್ಮಳಿಗೆ ಬಸವಣ್ಣನವರೇ ಕರಸ್ಥಲದ ಲಿಂಗವಾಗಿದ್ದರು.
ಬಸವಣ್ಣನವರಿಲ್ಲದ ಬದುಕು ತನಗೂ ಬೇಡವೆಂದು ತೀರ್ಮಾನಿಸಿ ನದಿಯ ಆಚೆಗೆ ಬಸವಣ್ಣನವರು ಐಕ್ಯವಾದರೆ .ನೀಲಮ್ಮಳು ಹಡಪದ ಅಪ್ಪನವರ ಜೊತೆ
ನದಿಯ ಈಚೆಗೆ ಇಂದಿನ ಮುದ್ದೇಬಿಹಾಳ ತಾಲೂಕಿನ ತಾಳಿಕೋಟೆ ಬಳಿಯಿರುವ ರಕ್ಕಸ ತಂಗಡಗಿಯಲ್ಲಿ ಐಕ್ಯವಾದಳು .
ಮಹಾ ನಿಲುವಿನ ದಿಟ್ಟ ಶರಣೆ ಕಲ್ಯಾಣದ ಕ್ರಾಂತಿಯಲ್ಲಿ ಅಚ್ಚು ಹಾಕಿದ ಹೆಸರು ,ಮಹಿಳೆಯರಿಗೆ ಸ್ತ್ರೀಯರಿಗೆ ಅಬಲೆಯರಿಗೆ ಸ್ಫೂರ್ತಿ ಚೇತನವಾದ ಸಾಕ್ಷಿ ಪ್ರಜ್ಞೆಯಾಗಿದ್ದ್ದಾಳೆ ನೀಲಮ್ಮ.
ರಕ್ಕಸ ತಂಗಡಗಿಯಲ್ಲಿ ಅವಳ ಗದ್ದುಗೆಯಿದೆ .ನೀಲಮ್ಮಳ ಗದ್ದುಗೆ ಅವಳ ಜಂಗಮ ಜ್ಯೋತಿಗೆ ಅರಿವಿನ ಸಾಕಾರಕ್ಕೆ ಹಚ್ಚಿದ ಅಮರ ಜ್ಯೋತಿಯಾಗಿದೆ.

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!